ಪದ್ಯ ೫೪: ಭೀಮನ ಗದ್ದಲಕ್ಕೆ ಪಕ್ಷಿಗಳೇನು ಮಾಡಿದವು?

ಹಾರಿದವು ಹಂಸೆಗಳು ತುದಿಮರ
ಸೇರಿದವು ನವಿಲುಗಳು ತುಂಡವ
ನೂರಿ ನೀರೊಳು ಮುಳುಗಿ ಮರಳ್ದವು ಜಕ್ಕವಕ್ಕಿಗಳು
ಚೀರಿದವು ಕೊಳರ್ವಕ್ಕಿ ದಳದಲಿ
ಜಾರಿ ತಾವರೆಯೆಲೆಯ ಮರೆಗಳ
ಲಾರಡಿಗಳಡಗಿದವು ಕೋಳಾಹಳಕೆ ಪವನಜನ (ಅರಣ್ಯ ಪರ್ವ, ೧೧ ಸಂಧಿ, ೫೪ ಪದ್ಯ)

ತಾತ್ಪರ್ಯ:
ಭೀಮನ ಕೋಲಾಹಲಕ್ಕೆ ಹಂಸಗಳು ಹಾರಿ ಹೋದವು. ನವಿಲುಗಳು ಮರದ ತುದಿಗಳನ್ನು ಏರಿದವು. ಚಕ್ರವಾಕ ಪಕ್ಷಿಗಳು ಕೊಕ್ಕುಗಳನ್ನು ನೀರಲ್ಲಿ ಮೂರಿ ಮುಳುಗಿ ಏಳುತ್ತಿದ್ದವು. ಸರೋವರದ ಪಕ್ಷಿಗಳು ಚೀರಿದವು. ತಾವರೆಯೆಲೆಗಳ ಮರೆಯಲ್ಲಿ ದುಂಬಿಗಳು ಅಡಗಿದವು.

ಅರ್ಥ:
ಹಾರು: ಲಂಘಿಸು; ಹಂಸ: ಮರಾಲ; ತುದಿ: ಅಗ್ರಭಾಗ; ಮರ: ತರು; ಸೇರು: ತಲುಪು, ಮುಟ್ಟು; ನವಿಲು: ಮಯೂರ, ಶಿಖಿ; ತುಂಡ: ಮುಖ, ಆನನ; ಊರು: ನೆಲೆಸು; ನೀರು: ಜಲ; ಮುಳುಗು: ನೀರಿನಲ್ಲಿ ಮೀಯು; ಮರಳು: ಹಿಂದಿರುಗು; ಜಕ್ಕವಕ್ಕಿ: ಎಣೆವಕ್ಕಿ, ಚಕ್ರ ವಾಕ; ಚೀರು: ಜೋರಾಗಿ ಕೂಗು; ಕೊಳ: ಹೊಂಡ, ಸರೋವರ; ದಳ: ಗುಂಪು; ಜಾರು: ಕೆಳಗೆ ಬೀಳು; ತಾವರೆ: ಕಮಲ; ಎಲೆ: ಪರ್ಣ; ಮರೆ: ಗುಟ್ಟು, ರಹಸ್ಯ; ಆರಡಿ: ಆರು ಕಾಲುಗಳುಳ್ಳ ಕೀಟ, ದುಂಬಿ; ಅಡಗು: ಬಚ್ಚಿಟ್ಟುಕೊಳ್ಳು; ಕೋಳಾಹಲ: ಗದ್ದಲ; ಪವನಜ: ಭೀಮ;

ಪದವಿಂಗಡಣೆ:
ಹಾರಿದವು +ಹಂಸೆಗಳು +ತುದಿಮರ
ಸೇರಿದವು +ನವಿಲುಗಳು +ತುಂಡವನ್
ಊರಿ+ ನೀರೊಳು +ಮುಳುಗಿ +ಮರಳ್ದವು+ ಜಕ್ಕವಕ್ಕಿಗಳು
ಚೀರಿದವು +ಕೊಳರ್ವಕ್ಕಿ+ ದಳದಲಿ
ಜಾರಿ +ತಾವರೆ+ಎಲೆಯ +ಮರೆಗಳಲ್
ಆರಡಿಗಳ್+ಅಡಗಿದವು +ಕೋಳಾಹಳಕೆ +ಪವನಜನ

ಅಚ್ಚರಿ:
(೧) ದುಂಬಿಗಳನ್ನು ಚಿತ್ರಿಸಿದ ಪರಿ – ದಳದಲಿಜಾರಿ ತಾವರೆಯೆಲೆಯ ಮರೆಗಳ ಲಾರಡಿಗಳಡಗಿದವು

ಪದ್ಯ ೪: ಸರೋವರವು ಹೇಗೆ ಶೋಭಿಸುತ್ತಿತ್ತು?

ತಿಳಿಗೊಳನ ಮಧ್ಯದಲಿ ಮೆರೆದಿಹ
ನಳಿನನೃಪನಿದಿರಿನಲಿ ಮಧುಪಾ
ವಳಿ ರವದ ಗಾಯಕರ ಪಿಕ ಪಾಠಕರ ನೃತ್ಯಗಳ
ಲಲಿತ ನವಿಲಿನ ವಾದ್ಯಗಳ ಘುಳು
ಘುಳಿಪ ಕೊಳರ್ವಕ್ಕಿಗಳ ಲಕ್ಷ್ಮೀ
ಲಲನೆಯರಮನೆಯೆನಲು ಮೆರೆದುದು ಭೂಪಕೇಳೆಂದ (ಅರಣ್ಯ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ತಿಳಿನೀರಿನ ಸರೋವರದ ಮಧ್ಯದಲ್ಲಿ ಕಮಲವೆಂಬ ರಾಜನೆದುರಿನಲ್ಲಿ ದುಂಬಿಗಳೆಂಬ ಗಾಯಕರು, ಕೋಗಿಲೆಗಳೆಂಬ ಸ್ತುತಿಪಾಠಕರ ನೃತ್ಯ, ನವಿಲಿನ ವಾದ್ಯ ಕೊಳದ ಹಕ್ಕಿಗಳ ಘುಳುಘುಳುವೆಂಬ ಶಬ್ದದವೆಲ್ಲವೂ ರಂಜಿಸುತ್ತಿರಲು ಸರೋವರವು ಲಕ್ಷ್ಮೀದೇವಿಯ ಅರಮನೆಯಂತೆ ಶೋಭಿಸುತ್ತಿತ್ತು.

ಅರ್ಥ:
ತಿಳಿ: ಸ್ವಚ್ಛ, ನಿರ್ಮಲ; ಕೊಳ: ಸರೋವರ; ಮಧ್ಯ: ನಡುವೆ; ಮೆರೆ: ಹೊಳೆ, ಪ್ರಕಾಶಿಸು; ನಳಿನ: ಕಮಲ; ನೃಪ: ರಾಜ; ಇದಿರು: ಎದುರು; ಮಧುಪಾವಳಿ: ದುಂಬಿಗಳ ಗುಂಪು; ಮಧು: ಜೇನು; ರವ: ಶಬ್ದ; ಗಾಯಕ: ಸಂಗೀತಗಾರ; ಪಿಕ: ಕೋಗಿಲೆ; ಪಾಠಕ: ಹೊಗಳುಭಟ್ಟ; ನೃತ್ಯ: ನಾಟ್ಯ, ನರ್ತನ; ಲಲಿತ: ಸುಂದರ; ನವಿಲು: ಮಯೂರ; ವಾದ್ಯ: ಸಂಗೀತದ ಸಾಧನ; ಘುಳು: ಶಬ್ದವನ್ನು ವಿವರಿಸುವ ಪದ; ಹಕ್ಕಿ: ಪಕ್ಷಿ; ಲಲನೆ: ಹೆಣ್ಣು; ಅರಮನೆ: ರಾಜರ ವಾಸಸ್ಥಾನ; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತಿಳಿ+ಕೊಳನ +ಮಧ್ಯದಲಿ +ಮೆರೆದಿಹ
ನಳಿನ+ನೃಪನ್+ಇದಿರಿನಲಿ +ಮಧುಪಾ
ವಳಿ+ ರವದ +ಗಾಯಕರ+ ಪಿಕ +ಪಾಠಕರ +ನೃತ್ಯಗಳ
ಲಲಿತ +ನವಿಲಿನ +ವಾದ್ಯಗಳ +ಘುಳು
ಘುಳಿಪ +ಕೊಳರ್ವಕ್ಕಿಗಳ +ಲಕ್ಷ್ಮೀ
ಲಲನೆಯರ್+ಅಮನೆ+ಎನಲು+ ಮೆರೆದುದು +ಭೂಪಕೇಳೆಂದ

ಅಚ್ಚರಿ:
(೧) ಸರೋವರವನ್ನು ಲಕ್ಷ್ಮೀದೇವಿಯ ಅರಮನೆಯಂತ ಚಿತ್ರಿಸುವ ಕವಿಯ ಕಲ್ಪನೆ

ಪದ್ಯ ೧೮: ಮಾರ್ಗಮಧ್ಯೆ ಅರ್ಜುನನು ಏನನ್ನು ಕಂಡನು?

ಬೀಳುಕೊಂಡರ್ಜುನನು ಲಕ್ಷ್ಮೀ
ಲೋಲನಲ್ಲಿಗೆ ಬರುತ ಕಂಡನು
ಲೀಲೆಯಲಿ ನರ್ತಿಸುವ ನವಿಲನು ಬಲದೊಳಡಹಾಯ್ದು
ಮೇಲೆ ಹಂಗನ ಬಲನ ಹರಿಣೀ
ಜಾಲದೆಡನನು ತಿದ್ದುವಳಿಯ ವಿ
ಶಾಲ ಶಕುನವನಾಲಿಸುತ ಹರುಷದಲಿ ನಡೆತಂದ (ಉದ್ಯೋಗ ಪರ್ವ, ೧ ಸಂಧಿ, ೧೮ ಪದ್ಯ)

ತಾತ್ಪರ್ಯ:
ಅರ್ಜುನನು ಧರ್ಮಜನ ಆಜ್ಞೆಯಮೇರೆಗೆ ಕೃಷ್ಣನನ್ನು ನೋಡಲು ದ್ವಾರಕೆಗೆ ಹೊರಟನು. ದಾರಿಯಲ್ಲಿ ಅವನು ನೃತ್ಯಮಾಡುವ ನವಿಲುಗಳು, ಶುಭಸೂಚಕವಾದ ಪಕ್ಷಿ, ಬಲದ ಹಂಗ, ಎಡದ ಜಿಂಕೆಗಳು ದಾರಿಯನ್ನು ತಿದ್ದಿಕೊಟ್ಟವು, ಇಂತಹ ಶುಭಶಕುನಗಳನ್ನು ಕಂಡು ಅರ್ಜುನನು ಹರ್ಷದಿಂದ ಪ್ರಯಾಣ ಮಾಡಿದನು.

ಅರ್ಥ:
ಬೀಳುಕೊಂಡು: ಪ್ರಯಾಣವನ್ನು ಶುರುಮಾಡು, ಹೊರಡು; ಲೋಲ:ಪ್ರೀತಿಯುಳ್ಳವನು; ಬರುತ: ಆಗಮಿಸುತ್ತಾ; ಕಂಡು: ನೋಡು; ಲೀಲೆ:ಆನಂದ, ಸಂತೋಷ; ನರ್ತಿಸು: ಕುಣಿಯುವ; ನವಿಲು: ಮಯೂರ; ಬಲ: ದಕ್ಷಿಣ ಪಾರ್ಶ್ವ; ಹಾಯ್ದು: ತೆರಳು, ಹೋಗು; ಹರಿಣಿ: ಜಿಂಕೆ; ವಿಶಾಲ:ದೊಡ್ಡದು, ಹಿರಿದು; ಜಾಲ: ಗುಂಪು, ಸಮೂಹ; ಶಕುನ:ಶುಭಾಶುಭಗಳನ್ನು ಸೂಚಿಸುವ ನಿಮಿತ್ತ; ಆಲಿಸು: ಕೇಳುತ್ತಾ; ಹರುಷ: ಸಂತೋಷ;

ಪದವಿಂಗಡಣೆ:
ಬೀಳುಕೊಂಡ್+ಅರ್ಜುನನು +ಲಕ್ಷ್ಮೀ
ಲೋಲನ್+ಅಲ್ಲಿಗೆ+ ಬರುತ +ಕಂಡನು
ಲೀಲೆಯಲಿ +ನರ್ತಿಸುವ +ನವಿಲನು +ಬಲದೊಳ್+ಅಡಹಾಯ್ದು
ಮೇಲೆ +ಹಂಗನ+ ಬಲನ +ಹರಿಣೀ
ಜಾಲದ್+ಎಡನನು +ತಿದ್ದುವಳಿಯ +ವಿ
ಶಾಲ +ಶಕುನವನ್+ಆಲಿಸುತ +ಹರುಷದಲಿ+ ನಡೆತಂದ

ಅಚ್ಚರಿ:
(೧) ಕೃಷ್ಣನನ್ನು ಲಕ್ಷ್ಮೀಲೋಲ ಎಂದು ಕರೆದಿರುವುದು
(೨) ಹಂಗನ ಬಲ, ಹರಣೀಜಾಲದ ಎಡ – ಬಲ ಎಡ ಪದಗಳ ಬಳಕೆ