ಪದ್ಯ ೨೩: ವೇದವ್ಯಾಸರು ಯಾರಲ್ಲಿ ಜನಿಸಿದರು?

ಬಳಿಕ ಮತ್ಸ್ಯದ ಬಸುರಲುದಿಸಿದ
ನಳಿನ ಲೋಚನೆ ಮತ್ಸ್ಯಗಂಧಿನಿ
ಬೆಳೆವುತಿರ್ದಳು ಸಂಗವಾಯ್ತು ಪರಾಶರವ್ರತಿಯ
ಬಳಿಕ ಯೋಜನಗಂಧಿಯಲ್ಲಿಂ
ದಿಳಿದನಭ್ರಶ್ಯಾಮನುರು ಪಿಂ
ಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ (ಆದಿ ಪರ್ವ, ೨ ಸಂಧಿ, ೨೩ ಪದ್ಯ)

ತಾತ್ಪರ್ಯ:
ಮತ್ಸ್ಯದ ಗರ್ಭದಿಂದುದಿಸಿದ ಮತ್ಸ್ಯಗಂಧಿಯು ತರುಣಿಯಾಗಲು ಒಮ್ಮೆ ಪರಾಶರಮಹರ್ಷಿಯು ಅವಳಲ್ಲಿ ಆಕರ್ಷಿತಗೊಂಡನು. ಅವರಿಬ್ಬರ ಮಗನಾಗಿ, ಶ್ಯಾಮವರ್ಣದವನೂ, ಪಿಂಗಳ ಜಟೆಯನ್ನುಳ್ಳ ವೇದವ್ಯಾಸರು ಜನಿಸಿದರು.

ಅರ್ಥ:
ಬಳಿಕ: ನಂತರ; ಮತ್ಸ್ಯ: ಮೀನು; ಬಸುರು: ಹೊಟ್ಟೆ; ಉದಿಸು: ಹುಟ್ಟು; ನಳಿನ: ಕಮಲ; ಲೊಚನ: ಕಣ್ಣು; ಬೆಳೆ: ವೃದ್ಧಿಸು; ಸಂಗ: ಜೋಡಿ; ವ್ರತಿ: ಯೋಗಿ, ತಪಸ್ವಿ; ಇಳಿ: ಕೆಳಕ್ಕೆ ಬಾ; ಅಭ್ರ:ಮೋಡ; ಶ್ಯಾಮ: ಕಪ್ಪು ಬಣ್ಣ; ಉರು: ಹೆಚ್ಚು; ಪಿಂಗಳ: ಕಂದು ಬಣ್ಣದ; ಜಟಾ: ಜಟೆ; ಬದ್ಧ: ಕಟ್ಟಿದ, ಬಿಗಿದ; ಮುನಿ: ಋಷಿ;

ಪದವಿಂಗಡಣೆ:
ಬಳಿಕ +ಮತ್ಸ್ಯದ+ ಬಸುರಲ್+ಉದಿಸಿದ
ನಳಿನ +ಲೋಚನೆ +ಮತ್ಸ್ಯಗಂಧಿನಿ
ಬೆಳೆವುತಿರ್ದಳು +ಸಂಗವಾಯ್ತು +ಪರಾಶರವ್ರತಿಯ
ಬಳಿಕ +ಯೋಜನಗಂಧಿಯಲ್ಲಿಂದ್
ಇಳಿದನ್+ಅಭ್ರ+ಶ್ಯಾಮನ್+ಉರು +ಪಿಂ
ಗಳ +ಜಟಾ+ಪರಿಬದ್ಧ+ ವೇದವ್ಯಾಸ +ಮುನಿರಾಯ

ಅಚ್ಚರಿ:
(೧) ವೇದವ್ಯಾಸರನ್ನು ವರ್ಣಿಸಿದ ಪರಿ – ಅಭ್ರಶ್ಯಾಮನುರು ಪಿಂಗಳ ಜಟಾಪರಿಬದ್ಧ ವೇದವ್ಯಾಸ ಮುನಿರಾಯ

ಪದ್ಯ ೧೫: ಜಕ್ಕವಕ್ಕಿಗಳೇಕೆ ಮರುಗುತಿರ್ದವು?

ನಳಿನದಳದೊಳಗಡಗಿದವು ನೈ
ದಿಲುಗಳಲಿ ತನಿ ಮೊರೆವ ತುಂಬಿಯ
ಕಳರವಕೆ ಬೆಚ್ಚಿದವು ಹೊಕ್ಕವು ಬಿಗಿದು ತಿಳಿಗೊಳನ
ಝಳಕೆ ಸೈರಿಸದೆಳಲತೆಯ ನೆಳ
ಲೊಳಗೆ ನಿಂದವು ಬೇಗೆ ಬಲುಹಿಂ
ದಳುಕಿ ಮಮ್ಮಲು ಮರುಗುತಿರ್ದವು ಜಕ್ಕವಕ್ಕಿಗಳು (ದ್ರೋಣ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಚಕ್ರವಾಕ ಪಕ್ಷಿಗಳು ತಾವರೆಯಲ್ಲಿ ಅಡಗಿ, ನೈದಿಲೆಯಲ್ಲಿ ಝೇಂಕರಿಸುವ ದುಂಬಿಗಳ ಸದ್ದನ್ನು ಕೇಳಿ ಬೆಚ್ಚಿದವು. ಬೆಳದಿಂಗಳ ಝಳವನ್ನು ಸೈರಿಸಲಾರದೆ ಎಳೆ ಬಳ್ಳಿಗಳ ನೆರಳಿನಲ್ಲಿ ನಿಂತು ತಾಪವನ್ನು ತಡೆಯಲಾರದೆ ಮಮ್ಮಲ ಮರುಗಿದವು.

ಅರ್ಥ:
ನಳಿನ: ಕಮಲ; ದಳ: ಎಲೆ, ರೇಕು, ಎಸಳು; ಅಡಗು: ಬಚ್ಚಿಟ್ಟುಕೊಳ್ಳು; ನೈದಿಲೆ: ಕುಮುದ; ತನಿ: ಚೆನ್ನಾಗಿ ಬೆಳೆದುದು; ಮೊರೆ: ಧ್ವನಿ ಮಾಡು, ಝೇಂಕರಿಸು; ತುಂಬಿ: ದುಂಬಿ, ಭ್ರಮರ; ಕಳರವ: ಮಧುರ ಧ್ವನಿ; ಬೆಚ್ಚು: ಭಯ, ಹೆದರಿಕೆ; ಹೊಕ್ಕು: ಸೇರು; ಬಗಿ: ಸೀಳುವಿಕೆ; ಕೊಳ: ನೀರಿನ ಹೊಂಡ, ಸರಸಿ; ಝಳ: ಕಾಂತಿ; ಸೈರಿಸು: ತಾಳು, ಸಹಿಸು; ಎಳೆ: ಚಿಕ್ಕದಾದ; ಲತೆ: ಬಳ್ಳಿ; ನೆಳಲು: ನೆರಳು; ನಿಂದವು: ನಿಲ್ಲು; ಬೇಗೆ: ಬೆಂಕಿ, ಕಿಚ್ಚು; ಬಲು: ಬಹಳ, ಹೆಚ್ಚು; ಅಳುಕು: ಹೆದರು; ಮರುಗು: ತಳಮಳ, ಸಂಕಟ; ಜಕ್ಕವಕ್ಕಿ: ಚಾತಕ ಪಕ್ಷಿ;

ಪದವಿಂಗಡಣೆ:
ನಳಿನ+ದಳದೊಳಗ್+ಅಡಗಿದವು +ನೈ
ದಿಲುಗಳಲಿ +ತನಿ +ಮೊರೆವ +ತುಂಬಿಯ
ಕಳರವಕೆ+ ಬೆಚ್ಚಿದವು +ಹೊಕ್ಕವು +ಬಿಗಿದು +ತಿಳಿ+ಕೊಳನ
ಝಳಕೆ +ಸೈರಿಸದ್+ಎಳಲತೆಯ +ನೆಳ
ಲೊಳಗೆ +ನಿಂದವು +ಬೇಗೆ +ಬಲುಹಿಂದ್
ಅಳುಕಿ +ಮಮ್ಮಲು +ಮರುಗುತಿರ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧)

ಪದ್ಯ ೬೦: ದ್ರೋಣರು ಮಕ್ಕಳನ್ನು ಏನು ಕೇಳಿದರು?

ಏನಿರೈ ಕುರುವಂಶನಳಿನೀ
ಭಾನುಗಳಿರ ವಿದಗ್ಧ ಜನ ಸುರ
ಧೇನುಗಳಿರಾವಿಂದು ನಿಮ್ಮಲಿ ದಕ್ಷಿಣಾರ್ಥಿಗಳು
ಏನನೀವಿರಿ ನಮಗೆ ಕೊಡೆ ಸಂ
ಪೂರ್ಣರೈ ಕೊಡಲಾಪ ಸತ್ವನಿ
ಧಾನವುಂಟೇ ಹೇಳಿಯೆಂದನು ದ್ರೋಣನನಿಬರಿಗೆ (ಆದಿ ಪರ್ವ, ೭ ಸಂಧಿ, ೬೦ ಪದ್ಯ)

ತಾತ್ಪರ್ಯ:
ಎಲೈ ಕುರುವಂಶ ಕಮಲಕ್ಕೆ ಸೂರ್ಯನಂತಿರುವವರೇ, ಪಂಡಿತರಿಗೆ ಕಾಮಧೇನುವಿನಂತಿರುವವರೇ, ಇಂದು ನಾವು ನಿಮ್ಮಲ್ಲಿ ನಮಗೆ ಗುರು ದಕ್ಷಿಣಯಾಗಿ ಏನನ್ನು ನೀಡುವಿರಿ ಎಂದು ಕೇಳಿದರು. ಕೊಡುವಷ್ಟು ಸಮರ್ಥರಾಗಿರುವಿರಾ, ಕೊಡಬಲ್ಲ ಸತ್ವವು ನಿಮಗಿದೆಯೇ ಹೇಳಿರಿ ಎಂದು ದ್ರೋಣನು ಅವರನ್ನು ಕೇಳಿದನು.

ಅರ್ಥ:
ವಂಶ: ಕುಲ; ನಳಿನಿ: ಕಮಲ; ಭಾನು: ಸೂರ್ಯ, ಆದಿತ್ಯ; ವಿದಗ್ಧ: ಪಂಡಿತ; ಸುರ:ಅಮರ, ದೇವತೆ; ಸುರಧೇನು: ಕಾಮಧೇನು; ದಕ್ಷಿಣೆ: ಸಂಭಾವನೆ, ಕಾಣಿಕೆ; ನಿಧಾನ: ಸಹನೆ, ನಿಧಿ, ತಾಳ್ಮೆ; ಹೇಳು: ತಿಳಿಸು, ನುಡಿ; ಕೊಡು: ನೀಡು, ಸಲ್ಲಿಸು;

ಪದವಿಂಗಡನೆ:
ಏನಿರೈ +ಕುರು+ವಂಶ+ನಳಿನೀ
ಭಾನು+ಗಳಿರ+ ವಿದಗ್ಧ +ಜನ +ಸುರ
ಧೇನು+ಗಳಿರಾವ್+ಇಂದು +ನಿಮ್ಮಲಿ +ದಕ್ಷಿಣಾರ್ಥಿಗಳು
ಏನನ್+ಈವಿರಿ+ ನಮಗೆ+ ಕೊಡೆ +ಸಂ
ಪೂರ್ಣರೈ +ಕೊಡಲಾಪ+ ಸತ್ವನಿ
ಧಾನವುಂಟೇ +ಹೇಳಿ+ಯೆಂದನು+ ದ್ರೋಣನನ್+ಇಬರಿಗೆ

ಅಚ್ಚರಿ:
(೧) ಮಕ್ಕಳನ್ನು ಹೊಗಳುವ ರೀತಿ: ನಳಿನೀಭಾನುಗಳಿರ; ವಿದಗ್ಧ ಜನ ಸುರಧೇನುಗಳಿರ;
(೨) ಅವರನ್ನು ಕೇಳುವ ರೀತಿ: ಸಂಪೂರ್ಣರೈ, ಸತ್ವನಿಧಾನವುಂಟೆ
(೩) ೨ ಸಾಲಿನ ಕೊನೆಪದ – ಸುರಧೇನು, ೫ ಸಾಲಿನ ಕೊನೆ ಪದ: ಸತ್ವನಿಧಾನ,(ಧೇನು, ಧಾನ)
(೪) ಏನಿರೈ, ಏನನೀವಿರಿ – ೧ ಮತ್ತು ೪ ಸಾಲಿನ ಮೊದಲ ಪದ