ಪದ್ಯ ೫೨: ಯಾವುದು ಶ್ರೇಷ್ಠವಾದ ಧರ್ಮ?

ಹರಿಯೆ ಚಿತ್ತಯಿಸೈಯಹಿಂಸಾ
ಪರಮಧರ್ಮವು ಎಂಬ ವಾಕ್ಯದ
ಸರಣಿ ಸಾರೋದ್ಧಾರವಲ್ಲಾ ಸಕಲದರುಶನಕೆ
ನೆರವಿಯಿನಿಬರ ತನ್ನವರ ಕೊರ
ಳರಿತದಲಿ ಕೊಕ್ಕರಿಸದಿರ್ದಡೆ
ನರಕದೊಳು ನೂರೊಂದು ಕುಲ ಮುಳುಗಾಡದಿರದೆಂದ (ಭೀಷ್ಮ ಪರ್ವ, ೩ ಸಂಧಿ, ೫೨ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನೇ ಕೇಳು, ಅಹಿಂಸೆಯೇ ಅತಿ ಶ್ರೇಷ್ಠವಾದ ಧರ್ಮ ಎಂಬುದು ಹಿಂದಿನಿಂದಲೂ ಎಲ್ಲ ದರ್ಶನಗಳ ಸಾರವಾಗಿದೆ. ತನ್ನವರನ್ನೂ, ಸಕಲ ಸೈನ್ಯವನ್ನೂ ಸಂಹರಿಸಿದರೆ ನೂರೊಂದು ಕುಲಗಳು ನರಕದಲ್ಲಿ ಮುಳುಗುವುದಿಲ್ಲವೇ ಎಂದು ಅರ್ಜುನನು ಪ್ರಶ್ನಿಸಿದನು.

ಅರ್ಥ:
ಹರಿ: ಕೃಷ್ಣ; ಚಿತ್ತಯಿಸು: ಗಮನವಿಟ್ಟು ಕೇಳು; ಅಹಿಂಸೆ: ನೋವಿಲ್ಲದ; ಪರಮ: ಶ್ರೇಷ್ಠ; ಧರ್ಮ: ನಡತೆ; ವಾಕ್ಯ: ನುಡಿ; ಸರಣಿ: ಹಾದಿ; ಸಾರ: ಸತ್ವ; ಉದ್ಧಾರ: ಮೇಲಕ್ಕೆ ಎತ್ತುವುದು; ಸಕಲ: ಎಲ್ಲಾ; ದರುಶನ: ಅವಲೋಕನ; ನೆರವಿ: ಗುಂಪು; ಇನಿಬರು: ಇಷ್ಟು ಜನ; ಕೊರಳು: ಗಂಟಲು;ಆರಿ: ಕತ್ತರಿಸು; ಕೊಕ್ಕರಿಸು: ಅಸಹ್ಯಪಡು; ನರಕ: ಅಧೋಲೋಕ; ಕುಲ: ವಂಶ; ಮುಳುಗು: ಮರೆಯಾಗು;

ಪದವಿಂಗಡಣೆ:
ಹರಿಯೆ +ಚಿತ್ತಯಿಸೈ+ಅಹಿಂಸಾ
ಪರಮಧರ್ಮವು +ಎಂಬ +ವಾಕ್ಯದ
ಸರಣಿ +ಸಾರ+ಉದ್ಧಾರವಲ್ಲಾ +ಸಕಲ+ದರುಶನಕೆ
ನೆರವಿ+ಇನಿಬರ+ ತನ್ನವರ+ ಕೊರಳ್
ಅರಿತದಲಿ +ಕೊಕ್ಕರಿಸದಿರ್ದಡೆ
ನರಕದೊಳು +ನೂರೊಂದು +ಕುಲ +ಮುಳುಗಾಡದಿರದೆಂದ

ಅಚ್ಚರಿ:
(೧) ಎಲ್ಲಾ ದರ್ಶನದ ಸಾರ: ಅಹಿಂಸಾ ಪರಮಧರ್ಮವು

ಪದ್ಯ ೩೩: ಅರ್ಜುನನು ಬಿಲ್ಲನ್ನು ಏಕೆ ಕೆಳಗಿಳಿಸಿದನು?

ಎಡಹಿದರೆ ರುಜೆಯಾಗಿಯಾಪ
ತ್ತಡಸಿದರೆ ಮೇಣಾವ ತೆರದಿಂ
ದೊಡಲುವಿಡಿದರೆ ಮರಣ ತಪ್ಪದು ಸುರರಿಗೊಳಗಾಗಿ
ಕೆಡುವ ಕಾಯವ ನಚ್ಚಿ ಬಂಧುಗ
ಳೊಡನೆ ವೈರವ ಮಸೆದು ನರಕಕೆ
ಕೆಡೆವೆನೇ ತಾನೆನುತ ರಥದೊಳು ಬಿಲ್ಲನಿಳುಹಿದನು (ಭೀಷ್ಮ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಡವಿಬಿದ್ದು ಕಾಯಿಲೆಯಾಗಿ ಆಪತ್ತು ಸಂಭವಿಸಿದಾಗ ಅವುಗಳಿಂದ ಉಳಿದುಕೊಂಡು ಈ ದೇಹದಲ್ಲಿಯೇ ಇದ್ದರೂ ಯಾವುದೋ ಒಂದು ರೀತಿಯಿಂದ ಮನುಷ್ಯರೂ, ದೇವತೆಗಳೂ ಸಾಯಲೇಬೇಕು, ಇಂತಹ ದೇಹವನ್ನು ನಚ್ಚಿಕೊಂಡು ಬಂಧು ವೈರದಿಂದ ಯುದ್ಧಮಾಡಿ ನಾನು ನರಕಕ್ಕೆ ಬೀಳಲಾರೆ ಎಂದು ಅರ್ಜುನನು ಬಿಲ್ಲು ಬಾಣಗಳನ್ನು ರಥದಲ್ಲಿಟ್ಟನು.

ಅರ್ಥ:
ಎಡಹು: ಎಡವು; ರುಜೆ: ಖಾಯಿಲೆ, ರೋಗ; ಆಪತ್ತು: ಅಪಾಯ, ತೊಂದರೆ; ಮೇಣ್: ಇನ್ನು, ಮತ್ತು, ಹಾಗೂ; ಒಡಲು: ದೇಹ; ಮರಣ: ಸಾವು; ಸುರರು: ದೇವ; ಕೆಡುವು: ಹಾಳು; ಕಾಯ: ದೇಹ; ನಚ್ಚು: ನಂಬಿಕೆ, ವಿಶ್ವಾಸ; ಬಂಧುಗಳು: ಸಂಬಂಧಿಕರು; ವೈರ: ಹಗೆತನ; ಮಸೆ: ಹರಿತವಾದುದು; ನರಕ: ಅಧೋಲೋಕ; ಕೆಡೆ: ಬೀಳು, ಕುಸಿ; ರಥ: ಬಂಡಿ; ಬಿಲ್ಲು: ಚಾಪ; ಇಳುಹಿದನು: ಕಳಚು;

ಪದವಿಂಗಡಣೆ:
ಎಡಹಿದರೆ +ರುಜೆಯಾಗಿ+ಆಪ
ತ್ತಡಸಿದರೆ +ಮೇಣ್+ಆವ +ತೆರದಿಂದ್
ಒಡಲು+ವಿಡಿದರೆ +ಮರಣ+ ತಪ್ಪದು +ಸುರರಿಗ್+ಒಳಗಾಗಿ
ಕೆಡುವ +ಕಾಯವ +ನಚ್ಚಿ +ಬಂಧುಗಳ್
ಒಡನೆ +ವೈರವ +ಮಸೆದು +ನರಕಕೆ
ಕೆಡೆವೆನೇ +ತಾನೆನುತ +ರಥದೊಳು +ಬಿಲ್ಲನ್+ಇಳುಹಿದನು

ಅಚ್ಚರಿ:
(೧) ಅರ್ಜುನನ ಅನಿಶ್ಚಿತತೆ: ಕೆಡುವ ಕಾಯವ ನಚ್ಚಿ ಬಂಧುಗಳೊಡನೆ ವೈರವ ಮಸೆದು ನರಕಕೆ ಕೆಡೆವೆನೇ

ಪದ್ಯ ೫೯: ಕೃಷ್ಣನು ಯಾವ ರಾಕ್ಷಸರನ್ನು ಸಂಹರಿಸಿದನು?

ಮುರನ ನರಕನ ಹಂಸಡಿಬಿಕರ
ವರಸೃಗಾಲದ ದಂತವಕ್ತ್ರನ
ದುರುಳ ಪೌಂಡ್ರಕ ಪಂಚಜನ ಕುಂಭನ ನಿಕುಂಭಕನ
ಅರಿ ಹಯಗ್ರೀವಕನ ಸಾಲ್ವನ
ನೊರಸಿದನಲಾ ನಿನ್ನ ಪಾಡಿನ
ದುರುಳರೇ ದೈತ್ಯೇಂದ್ರರೀತನ ಕೆಣಕಿದವರೆಂದ (ಸಭಾ ಪರ್ವ, ೧೦ ಸಂಧಿ, ೫೯ ಪದ್ಯ)

ತಾತ್ಪರ್ಯ:
ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ ಮೊದಲಾದ ದುಷ್ಟ ದೈತ್ಯರನ್ನು ಯುದ್ಧದಲ್ಲಿ ಸಂಹರಿಸಿದನು. ಅವರಿಗೆ ನೀನು ಯಾವ ರೀತಿಯಲ್ಲೂ ಸಮನಲ್ಲ. ಇವನನ್ನು ಹಿಂದೆ ಕೆಣಕಿದವರು ನಿನಗಿಂತ ಬಲಶಾಲಿಗಳೆಂದು ಭೀಷ್ಮರು ಹೇಳಿದರು.

ಅರ್ಥ:
ದುರುಳ: ದುಷ್ಟ; ಅರಿ: ವೈರಿ; ಒರಸು: ಸಾರಿಸು, ನಾಶಮಾಡು, ಅಳಿಸು; ಪಾಡು: ಸ್ಥಿತಿ, ಅವಸ್ಥೆ; ದೈತ್ಯ: ರಾಕ್ಷಸ; ಕೆಣಕು: ರೇಗಿಸು;

ಪದವಿಂಗಡಣೆ:
ಮುರನ+ ನರಕನ+ ಹಂಸ+ಡಿಬಿಕರ
ವರಸೃಗಾಲದ +ದಂತವಕ್ತ್ರನ
ದುರುಳ +ಪೌಂಡ್ರಕ +ಪಂಚಜನ +ಕುಂಭನ +ನಿಕುಂಭಕನ
ಅರಿ +ಹಯಗ್ರೀವಕನ +ಸಾಲ್ವನನ್
ಒರಸಿದನಲಾ +ನಿನ್ನ +ಪಾಡಿನ
ದುರುಳರೇ +ದೈತ್ಯೇಂದ್ರರ್+ಈತನ +ಕೆಣಕಿದವರೆಂದ

ಅಚ್ಚರಿ:
(೧) ರಾಕ್ಷಸರ ಹೆಸರು – ಮುರ, ನರಕ, ಹಂಸ, ಡಿಬಿಕ, ಸೃಗಾಲ, ದಂತವಕ್ತ್ರ, ಪೌಂಡ್ರಕ, ಪಂಚಜನ, ಕುಂಭ, ನಿಕುಂಭ, ಹಯಗ್ರೀವ, ಸಾಲ್ವ

ಪದ್ಯ ೪: ಪರಿವಾರದವರು ಸಂಕಟಪಡಲು ಕಾರಣವೇನು?

ಬಯ್ವ ಹೆಂಡಿರ ಚಿಂತೆಯಿಲ್ಲದೆ
ಹೊಯ್ವ ಕೀರ್ತಿಯ ಹಂಬಲಿಲ್ಲದೆ
ಒಯ್ವ ನರಕದ ನೆನಹದಿಲ್ಲದೆ ಪತಿಯ ಸಮಯದಲಿ
ಕಾಯ್ವರಾವಲ್ಲೆಂದು ಕೆಲದಲಿ
ಬಯ್ವರಿಗೆ ಮೈಗೊಟ್ಟು ಬದುಕುವ
ದೈವದೂರರು ನಾವೆನುತ ಮರುಗಿತ್ತು ಪರಿವಾರ (ಕರ್ಣ ಪರ್ವ, ೧೩ ಸಂಧಿ, ೪ ಪದ್ಯ)

ತಾತ್ಪರ್ಯ:
ಹೆಂಡತಿಯರು ಬಯ್ಯುತ್ತಾರೆೆಂಬ ಚಿಂತೆಯಿಲ್ಲದೆ, ಚೆಲ್ಲಿ ಹಾಳಾದ ಕೀರ್ತಿ ಬೇಕೆಂಬ ಹಂಬಲಿಲ್ಲದೆ, ನರಕಕ್ಕೆ ಹೋದೇವೆಂಬ ಭೀತಿಯಿಲ್ಲದೆ, ಆಪತ್ಕಾಲದಲ್ಲಿ ಒಡೆಯನನ್ನು ಕಾವುವವರು ನೀವಲ್ಲ ಎಂಬ ಬೈಗುಳನ್ನು ಲೆಕ್ಕಿಸದೆ ನಾಚಿಕೆಗೆಟ್ಟು ಬದುಕುವ ದೇವರಿಂದ ದೂರವಾದ ಪಾಪಿಗಳಾದೆವಲ್ಲಾ ಎಂದು ಪರಿವಾರದವರು ಮರುಗಿದರು.

ಅರ್ಥ:
ಬಯ್ವ: ಜರಿ; ಹೆಂಡಿರ: ಮಡದಿ; ಚಿಂತೆ: ಯೋಚನೆ; ಹೊಯ್ವ: ಹೊಡೆ; ಕೀರ್ತಿ: ಖ್ಯಾತಿ; ಹಂಬಲ: ಆಸೆ; ಒಯ್ವ: ಹೋಗು; ನರಕ: ಪಾತಾಳಲೋಕ; ನೆನಹು: ನೆನಪು; ಪತಿ: ಒಡೆಯ; ಸಮಯ: ಕಾಲ; ಕಾಯ್ವ: ಕಾಪಾಡು, ರಕ್ಷಿಸು; ಕೆಲ: ಪಕ್ಕ; ಬಯ್ವ: ಜರಿ; ಮೈಗೊಟ್ಟು: ನಾಚಿಕೆ ಯಿಲ್ಲದೆ; ಬದುಕು: ಜೀವಿಸು; ದೈವದೂರ: ದೇವರಿಗೆ ದೂರನಾದವ, ಪಾಪಿ; ಮರುಗು: ಸಂಕಟ; ಪರಿವಾರ: ಸುತ್ತಲಿನವರು, ಪರಿಜನ;

ಪದವಿಂಗಡಣೆ:
ಬಯ್ವ +ಹೆಂಡಿರ +ಚಿಂತೆಯಿಲ್ಲದೆ
ಹೊಯ್ವ +ಕೀರ್ತಿಯ +ಹಂಬಲಿಲ್ಲದೆ
ಒಯ್ವ +ನರಕದ+ ನೆನಹದಿಲ್ಲದೆ+ ಪತಿಯ +ಸಮಯದಲಿ
ಕಾಯ್ವರಾವಲ್ಲೆಂದು +ಕೆಲದಲಿ
ಬಯ್ವರಿಗೆ+ ಮೈಗೊಟ್ಟು +ಬದುಕುವ
ದೈವದೂರರು+ ನಾವೆನುತ+ ಮರುಗಿತ್ತು +ಪರಿವಾರ

ಅಚ್ಚರಿ:
(೧) ಲಜ್ಜೆಯಿಲ್ಲದೆ ಎಂದು ಹೇಳಲು – ಬಯ್ವರಿಗೆ ಮೈಗೊಟ್ಟು ಬದುಕುವ ದೈವದೂರರು

ಪದ್ಯ ೧೦೬: ದಾರಿದ್ರ್ಯವು ಹೇಗೆ ನಮ್ಮನ್ನು ಹಿಂಬಾಲಿಸುತ್ತದೆ?

ದಾನವಿರಹಿತರಾಗಿ ಜನಿಸಿದ
ಮಾನವರು ದಾರಿದ್ರರದರಿಂ
ಹೀನ ಸುಕೃತಿಗಳಾಗಿಯದರಿಂ ಘೋರತರ ನರಕ
ಆ ನರಕದಿಂ ಮರಳಿ ಪಾತಕ
ಯೋನಿ ಮರಳಿ ದರಿದ್ರವದು ತಾ
ನೇನಮಾಡಿಯು ಬೆನ್ನ ಬಿಡದವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ಹಿಂದಿನ ಜನ್ಮದಲ್ಲಿ ದಾನಮಾಡದಿರುವವರು ದರಿದ್ರರಾಗಿ ಜನ್ಮತಾಳುತ್ತಾರೆ. ದರಿದ್ರರಾಗಿ ಹುಟ್ಟಿದುದರಿಂದ ಅವರಿಗೆ ಒಳ್ಳೆಯ ಕಾರ್ಯಗಳನ್ನು ಮಾಡಲು ಅವಕಾಶ ದೊರೆಯುವುದಿಲ್ಲ, ಪುನಃ ನರಕಕ್ಕೆ ಹೋಗುತ್ತಾರೆ ನರಕದಿಂದ ಮತ್ತೆ ಪಾಪಯೋನಿಯಲ್ಲಿ ಜನಿಸಿ ಮತ್ತೆ ದರಿದ್ರರಾಗುತ್ತಾರೆ. ಹೀಗೆ ದಾರಿದ್ರ್ಯವು ಏನು ಮಾಡಿದರೂ ಬೆನ್ನು ಬಿಡುವುದಿಲ್ಲ ಎಂದು ಸನತ್ಸುಜಾತರು ದಾನದ ಮಹಿಮೆಯನ್ನು ವಿವರಿಸಿದರು.

ಅರ್ಥ:
ದಾನ: ನೀಡು, ಚತುರೋಪಾಯದಲ್ಲೊಂದು; ವಿರಹಿ: ವಿಯೋಗಿ; ಜನಿಸು: ಹುಟ್ಟು; ಮಾನವ: ಮನುಷ್ಯ; ದಾರಿದ್ರ: ಬಡವ, ಧನಹೀನ; ಹೀನ: ಕೆಟ್ಟದು; ಸುಕೃತಿ: ಒಳ್ಳೆಯ ಕೆಲಸ; ಘೋರ: ಉಗ್ರ, ಭಯಂಕರ; ನರಕ: ಅಧೋಲೋಕ; ಮರಳು: ಹಿಂತಿರುಗು; ಪಾತಕ: ಪಾಪ; ಯೋನಿ: ಗರ್ಭಕೋಶ; ದರಿದ್ರ: ದೀನ, ಬಡವ; ಬೆನ್ನು: ಹಿಂಬಾಗ; ಬಿಡು: ತೊರೆ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದಾನ+ವಿರಹಿತರಾಗಿ+ ಜನಿಸಿದ
ಮಾನವರು+ ದಾರಿದ್ರರ್+ಅದರಿಂ
ಹೀನ +ಸುಕೃತಿಗಳಾಗಿ+ಅದರಿಂ +ಘೋರತರ +ನರಕ
ಆ +ನರಕದಿಂ +ಮರಳಿ +ಪಾತಕ
ಯೋನಿ +ಮರಳಿ+ ದರಿದ್ರವದು+ ತಾನ್
ಏನ+ಮಾಡಿಯು +ಬೆನ್ನ +ಬಿಡದ್+ಅವನೀಶ +ಕೇಳೆಂದ

ಅಚ್ಚರಿ:
(೧) ದಾನ, ಹೀನ – ಪ್ರಾಸ ಪದ
(೨) ಅದರಿಂ, ಮರಳಿ – ೨ ಬಾರಿ ಪ್ರಯೋಗ

ಪದ್ಯ ೯೪: ಸ್ವರ್ಗ ನರಕಕ್ಕೆ ಯಾವುದು ಕಾರಣ?

ಕರಣ ಮೂರರೊಳಿತ್ತ ವಸ್ತುವ
ನಿರಿಸಿಕೊಂಡರೆ ಮಾಸ ಮಾಸಾಂ
ತರದೊಳೊಂದಕೆ ನೂರು ಗುಣದಲಿ ಕೋಟಿ ಪರಿಯಂತ
ಹಿರಿದಹುದು ದಾನ ಪ್ರಶಂಸೆಯ
ನರಸಕೇಳೈ ಸ್ವರ್ಗ ನರಕವಿ
ದೆರಡಕೊಂದೇ ದಾನ ಕಾರಣವೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೯೪ ಪದ್ಯ)

ತಾತ್ಪರ್ಯ:
ತ್ರಿಕರಣ (ಕಾಯ, ವಾಕ್ಕು ಮತ್ತು ಮನಸ್ಸು) ಎಂಬ ಮೂರು ಅಂಗಗಳಿಂದ ಪೂರ್ವಕವಾಗಿ ಮಾದಿದ ದಾನ ವಸ್ತುವನ್ನು ಇಟ್ಟುಕೊಂಡರೆ, ಅದು ಕಾಲಾನುಕ್ರಮವಾಗಿ ಹೆಚ್ಚುತ್ತದೆ. ಕೊಟ್ಟು ಕೊಡದವನಿಗೆ ಪಾಪ ಘಟಿಸುತ್ತದೆ. ಸ್ವರ್ಗಕ್ಕೂ ನರಕಕ್ಕೂ ದಾನವೊಂದೇ ಕಾರಣ ಎಂದು ಸನತ್ಸುಜಾತರು ದಾನದ ಮಹಿಮೆಯನ್ನು ತಿಳಿಸಿದರು.

ಅರ್ಥ:
ಕರಣ: ಜ್ಞಾನೇಂದ್ರಿಯ; ಮೂರು: ತ್ರಿ, ತ್ರಯ; ವಸ್ತು: ಸಾಮಗ್ರಿ; ಇತ್ತ: ನೀಡಿದ; ಇರಿಸು: ಇಟ್ಟುಕೊಳ್ಳು; ಮಾಸ:ತಿಂಗಳು; ಅಂತರ: ದೂರ; ಒಂದು: ಏಕ; ನೂರು: ಶತ; ಗುಣ: ಲೆಕ್ಕ; ಪರಿಯಂತ: ವರೆಗೆ, ತನಕ; ಹಿರಿದು: ಹೆಚ್ಚು; ದಾನ: ಕೊಡುಗೆ; ಪ್ರಶಂಸೆ: ಹೊಗಳಿಕೆ; ಸ್ವರ್ಗ: ನಾಕ; ನರಕ: ಅಧೋಲೋಕ; ಎರಡು: ಉಭಯ; ಕಾರಣ: ನಿಮಿತ್ತ, ಹೇತು; ಮುನಿ: ಋಷಿ;

ಪದವಿಂಗಡಣೆ:
ಕರಣ +ಮೂರರೊಳ್+ಇತ್ತ +ವಸ್ತುವನ್
ಇರಿಸಿಕೊಂಡರೆ+ ಮಾಸ +ಮಾಸಾಂ
ತರದೊಳ್+ಒಂದಕೆ +ನೂರು +ಗುಣದಲಿ +ಕೋಟಿ +ಪರಿಯಂತ
ಹಿರಿದಹುದು +ದಾನ +ಪ್ರಶಂಸೆಯನ್
ಅರಸಕೇಳೈ +ಸ್ವರ್ಗ +ನರಕವಿದ್
ಎರಡಕ್+ಒಂದೇ +ದಾನ +ಕಾರಣವೆಂದನಾ +ಮುನಿಪ

ಅಚ್ಚರಿ:
(೧) ಸ್ವರ್ಗ, ನರಕ – ಜೋಡಿ ಪದ
(೨) ಧ್ಯೇಯ ವಾಕ್ಯ – ಸ್ವರ್ಗ ನರಕವಿದೆರಡಕೊಂದೇ ದಾನ ಕಾರಣ

ಪದ್ಯ ೮೭: ಅತಿಥಿ ಸತ್ಕಾರವನ್ನು ಮಾಡದಿದ್ದರೆ ಏನಾಗುತ್ತದೆ?

ಅತಿಥಿ ಪೂಜೆಯನುಳಿದ ಜೀವ
ನ್ಮೃತನ ಧರ್ಮಸ್ಥಿತಿಯನಪಹರಿ
ಸುತೆಬಹನದಲ್ಲದವನನಾ ನಿರ್ಯಾಣಕಾಲದೊಳು
ಗತಿಗೆಡಿಸಿ ಕೊಂಡೊಯ್ದು ವೈವ
ಸ್ವತನು ನಾಯಕ ನರಕದೊಳಗ
ದ್ದುತೆ ಬಹನು ಕುಲಕೋಟಿ ಸಹಿತವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮೭ ಪದ್ಯ)

ತಾತ್ಪರ್ಯ:
ಅತಿಥಿಪೂಜೆಯನ್ನು ಮಾಡದಿರುವ ಜೀವನ್ಮೃತನ ಧರ್ಮವನ್ನು ಯಮನು ಅಪಹರಿಸುತ್ತಾ ಹೋಗುವುದಲ್ಲದೆ, ಅವನು ಮೃತನಾದ ಮೇಲೆ ಅವನ ಪರಲೋಕ ಗತಿಯನ್ನು ಕೆಡಿಸಿ ಮಹಾನರಕಗಳಲ್ಲಿ ಅವನ ಕುಲಕೋಟಿ ಸಹಿತ ಕೂಡಿ ಹಾಕುತ್ತಾನೆಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಅತಿಥಿ: ಆಮಂತ್ರಣವನ್ನು ಪಡೆದು ಯಾ ಪಡೆಯದೆ ಮನೆಗೆ ಬಂದ ವ್ಯಕ್ತಿ; ಪೂಜೆ: ಆತಿಥ್ಯ, ಅರ್ಚನೆ; ಉಳಿದ: ಮಿಕ್ಕ; ಜೀವನ್ಮೃತ: ಬದುಕಿದ್ದರೂ ಸತ್ತವನಂತೆ ನಿಶ್ಯಕ್ತನಾದವನು; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಸ್ಥಿತಿ: ಅವಸ್ಥೆ, ದೆಸೆ; ಅಪಹರಿಸು: ಕಿತ್ತುಕೊಳ್ಳು; ನಿರ್ಯಾಣ: ಹೊರಡುವುದು, ಹೊರ ಬೀಳುವುದು; ಕಾಲ: ಸಮಯ; ಗತಿ: ಗಮನ, ಸಂಚಾರ; ಗೆಡಿಸು: ತೊಂದರೆ ಒಡ್ಡು; ಕೊಂಡೊಯ್ದು: ತೆಗೆದುಕೊಂಡು ಹೋಗಿ; ವೈವಸ್ವತ: ಸೂರ‍್ಯಪುತ್ರ, ಶ್ರಾದ್ಧ ದೇವ; ನಾಯಕ: ಮುಂದಾಳು, ಮುಖಂಡ, ದೊರೆ; ನರಕ: ಅಧೋಲೋಕ; ಅದ್ದು: ಮುಳುಗಿಸು; ಕುಲಕೋಟಿ: ವಂವಾವಳಿ; ಸಹಿತ: ಜೊತೆ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅತಿಥಿ +ಪೂಜೆಯನ್+ಉಳಿದ +ಜೀವ
ನ್ಮೃತನ +ಧರ್ಮಸ್ಥಿತಿಯನ್+ಅಪಹರಿ
ಸುತೆ+ಬಹನದ್+ಅಲ್ಲದವನನಾ +ನಿರ್ಯಾಣ+ಕಾಲದೊಳು
ಗತಿಗೆಡಿಸಿ+ ಕೊಂಡೊಯ್ದು +ವೈವ
ಸ್ವತನು +ನಾಯಕ +ನರಕದೊಳಗ್
ಅದ್ದುತೆ +ಬಹನು +ಕುಲಕೋಟಿ +ಸಹಿತ್+ಅವನೀಶ +ಕೇಳೆಂದ

ಅಚ್ಚರಿ:
(೧) ಯಮನೆಂದು ಹೇಳಲು – ವೈವಸ್ವತ ನಾಯಕ
(೨) ಜೀವನ್ಮೃತ – ಪದದ ಬಳಕೆ

ಪದ್ಯ ೩೯: ಧೃತರಾಷ್ಟ್ರನು ಯಾವ ಪ್ರಶ್ನೆಯನ್ನು ಕೇಳಿದನು?

ಸ್ವರ್ಗವಾವುದು ನರಕವಾವುದು
ವಿಗ್ರಹದೊಳಹ ಸಿದ್ಧಿಯಾವುದ
ನುಗ್ರಹದೊಳೇನಹುದು ಪಾತ್ರಾಪಾತ್ರವೆಂದೇನು
ಉಗ್ರವಾವುದು ದೈವದೊಳಗೆ ಸ
ಮಗ್ರವಾವುದು ಧರ್ಮದೊಳಗ
ವ್ಯಗ್ರದಿಂದುಪದೇಶಿಸಲು ಬೇಕೆಂದನಾ ಭೂಪ (ಉದ್ಯೋಗ ಪರ್ವ, ೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಸ್ವರ್ಗವಾವುದು? ನರಕವಾವುದು? ಈ ದೇಹದಿಂದಾಗುವ ಸಿದ್ಧಿಯಾವುದು? ಅನುಗ್ರಹದಿಂದೇನಾಗುತ್ತದೆ? ಪಾತ್ರ ಅಪಾತ್ರಗಳಾವುವು? ದೈವದಲ್ಲಿ ಉಗ್ರವಾವುದು? ಧರ್ಮದಲ್ಲಿ ಸಮಗ್ರವಾವುದು? ಇವೆಲ್ಲವನ್ನು ನೀವು ಸಂತೋಷದಿಂದ ಉಪದೇಶಿಸಬೇಕೆಂದು ಧೃತರಾಷ್ಟ್ರನು ಸನತ್ಸುಜಾತರಲ್ಲಿ ಬಿನ್ನವಿಸಿದನು.

ಅರ್ಥ:
ಸ್ವರ್ಗ: ನಾಕ, ದೇವಲೋಕ; ನರಕ: ಅಧೋಲೋಕ; ವಿಗ್ರಹ: ದೇಹ; ಸಿದ್ಧಿ:ಸಾಧನೆ; ಅನುಗ್ರಹ: ಕೃಪೆ, ದಯೆ; ಪಾತ್ರ: ಪಾತರದವ, ನಟನೆಯವ, ಯೋಗ್ಯತೆ; ಅಪಾತ್ರ: ಅಯೋಗ್ಯ; ಉಗ್ರ: ಪ್ರಚಂಡತೆ, ಕೋಪಿಷ್ಠ; ದೈವ: ದೇವತೆ; ಸಮಗ್ರ: ಸಂಪೂರ್ಣವಾದುದು; ಧರ್ಮ: ಧಾರಣೆ ಮಾಡುವುದು, ನಿಯಮ, ಆಚಾರ; ಅವ್ಯಗ್ರ: ಶಾಂತ; ಉಪದೇಶ: ಬೋಧಿಸುವುದು; ಭೂಪ: ರಾಜ;

ಪದವಿಂಗಡಣೆ:
ಸ್ವರ್ಗವಾವುದು +ನರಕವಾವುದು
ವಿಗ್ರಹದೊಳಹ+ ಸಿದ್ಧಿಯಾವುದ್
ಅನುಗ್ರಹದೊಳ್+ಏನಹುದು +ಪಾತ್ರ+ಅಪಾತ್ರವೆಂದೇನು
ಉಗ್ರವಾವುದು +ದೈವದೊಳಗೆ +ಸ
ಮಗ್ರವಾವುದು +ಧರ್ಮದೊಳಗ್
ಅವ್ಯಗ್ರದಿಂದ್+ಉಪದೇಶಿಸಲು+ ಬೇಕೆಂದನಾ +ಭೂಪ

ಅಚ್ಚರಿ:
(೧) ಸ್ವರ್ಗ, ನರಕ; ಪಾತ್ರ, ಅಪಾತ್ರ; ಉಗ್ರ, ಅವ್ಯಗ್ರ – ವಿರುದ್ಧ ಪದ
(೨) ಉಗ್ರ, ಸಮಗ್ರ, ಅವ್ಯಗ್ರ; ವಿಗ್ರಹ, ಅನುಗ್ರಹ – ಪ್ರಾಸ ಪದಗಳು

ಪದ್ಯ ೧೨೦: ಯಾರು ಎಪ್ಪತ್ತೇಳುಕೋಟಿ ನರಕದಲ್ಲಿ ಸೇರುತ್ತಾರೆ?

ಹರಿಭಕುತಿ ಲೋಲುಪನೆನಿಸಿ ಶಂ
ಕರನ ಬದ್ಧ ದ್ವೇಷಿಯಹ ಶಂ
ಕರನ ಭಕ್ತಿಯೊಳಧಿಕನಾಗಿಯು ವಿಷ್ಣುವಿನ ಮೇಲೆ
ಎರಕವಿಲ್ಲದ ಕರ್ಮಚಂಡಾ
ಲರುಗಳೆಪ್ಪತ್ತೇಳು ಕೋಟಿಯ
ನರಕದೊಳಗೋಲಾಡುತಿಹರೆಲೆ ರಾಯ ಕೇಳೆಂದ (ಉದ್ಯೋಗ ಪರ್ವ, ೩ ಸಂಧಿ, ೧೨೦ ಪದ್ಯ)

ತಾತ್ಪರ್ಯ:
ಶಿವ ಮತ್ತು ವಿಷ್ಣು ಇಬ್ಬರು ಒಂದೇ ಎಂದು ಹೇಳುವ ಪದ್ಯ. ವಿಷ್ಣುವಿನ ಭಕ್ತಿಯಲ್ಲೇ ಮಗ್ನನಾಗಿ ಶಿವನ ಬದ್ಧ ದ್ವೇಷಿಯಾದವನೂ, ಮಹಾಶಿವಭಕ್ತನಾಗಿ ವಿಷ್ಣುವಿನಲ್ಲಿ ಪ್ರೀತಿಯಿಲ್ಲದವನೂ ಕರ್ಮ ಚಂಡಾಲರೆನ್ನಿಸಿಕೊಂಡು ಎಪ್ಪತ್ತೇಳು ಕೋಟಿ ನರಕಗಳನ್ನು ಸೇರುತ್ತಾರೆ ಎಂದು ವಿದುರ ಹೇಳಿದ.

ಅರ್ಥ:
ಹರಿ: ವಿಷ್ಣು; ಭಕುತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಲೋಲುಪ:ಗುರುಹಿರಿಯರಲ್ಲಿ ತೋರುವ ನಿಷ್ಠೆ, ಆಸಕ್ತ; ಶಂಕರ: ಶಿವ; ಬದ್ಧ: ಕಡು; ದ್ವೇಷಿ: ವೈರಿ; ಅಧಿಕ: ಹೆಚ್ಚು; ಎರಕ: ಪ್ರೀತಿ, ಅನುರಾಗ; ಕರ್ಮ: ಕಾರ್ಯ; ಚಂಡಾಲ: ಕ್ರೂರ ಕೆಲಸ ಮಾಡುವವ; ನರಕ: ಅಧೋಲೋಕ; ಓಲಾಡು: ಹೊರಳಾಡು; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಹರಿ+ಭಕುತಿ +ಲೋಲುಪನೆನಿಸಿ +ಶಂ
ಕರನ +ಬದ್ಧ +ದ್ವೇಷಿಯಹ +ಶಂ
ಕರನ +ಭಕ್ತಿಯೊಳ್+ಅಧಿಕನಾಗಿಯು +ವಿಷ್ಣುವಿನ +ಮೇಲೆ
ಎರಕವಿಲ್ಲದ+ ಕರ್ಮ+ಚಂಡಾ
ಲರುಗಳ್+ಎಪ್ಪತ್ತೇಳು +ಕೋಟಿಯ
ನರಕದೊಳಗ್ +ಓಲಾಡುತಿಹರ್+ಎಲೆ +ರಾಯ +ಕೇಳೆಂದ

ಅಚ್ಚರಿ:
(೧) ಶಂ – ೧, ೨ ಸಾಲಿನ ಕೊನೆ ಪದ
(೨) ಕರನ – ೨, ೩ ಸಾಲಿನ ಮೊದಲ ಪದ
(೩) ಹರಿ, ವಿಷ್ಣು – ಸಮನಾರ್ಥಕ ಪದ
(೪) ಎರಕ, ನರಕ – ಪ್ರಾಸ ಪದಗಳ ಪ್ರಯೋಗ

ಪದ್ಯ ೪೨: ಯಾರ ಉಪಕಾರವನ್ನು ಮರೆಯಬಾರದು?

ಸಲಹಿದೊಡೆಯನ ದಿವ್ಯಮಂತ್ರವ
ಕಲಿಸಿದಾಚಾರಿಯನನನುವರ
ದೊಳಗೆ ತಲೆಗಾಯ್ದವನ ದುರ್ಭಿಕ್ಷದಲಿ ಸಲಹಿದನ
ಜಲದೊಳಾಳ್ದನ ನೆತ್ತಿದನನುರಿ
ಯೊಳಗೆ ಪರಿಹರಿಸಿದನ ಮರೆದವ
ರಿಳಿವರೈ ಕುಲಕೋಟಿ ಸಹಿತ ಮಹಾಂಧ ನರಕದೊಳು (ಉದ್ಯೋಗ ಪರ್ವ, ೩ ಸಂಧಿ, ೪೨ ಪದ್ಯ)

ತಾತ್ಪರ್ಯ:
ಸಲಹಿದ ಒಡೆಯನನ್ನು, ದಿವ್ಯ ಮಂತ್ರವನ್ನು ಹೇಳಿಕೊಟ್ಟ ಗುರುವನ್ನು, ಯುದ್ಧದಲ್ಲಿ ಪ್ರಾಣವನ್ನುಳಿಸಿದವನನ್ನು, ಕಷ್ಟಕಾಲದಲ್ಲಿ ಅನ್ನವನ್ನು ನೀಡಿ ಸಲಹಿದವನನ್ನು, ನೀರಿನಲ್ಲಿ ಮುಳುಗಿದಾಗ ರಕ್ಷಿಸಿದವನನ್ನು, ಬೆಂಕಿಯಿಂದ ಪಾರುಮಾಡಿದವನನ್ನು ಯಾರಾದರೂ ಮರೆತರೆ, ಅವರು ತಮ್ಮ ಕುಲಕೋಟಿಯೊಂದಿಗೆ ಮಹಾಂಧ ನರಕಕ್ಕೆ ಜಾರುತ್ತಾರೆ.

ಅರ್ಥ:
ಸಲಹು: ಕಾಪಾಡು; ಒಡೆಯ: ದೊರೆ, ಯಜಮಾನ; ದಿವ್ಯ: ಶ್ರೇಷ್ಠ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಕಲಿಸು: ಹೇಳಿಕೊಡು; ಆಚಾರಿ: ಗುರು; ಅನುವರ: ಯುದ್ಧ; ತಲೆ: ಶಿರ; ಕಾಯ್ದ: ಕಾಪಾಡಿದ; ದುರ್ಭಿಕ್ಷ: ಕಷ್ಟಕಾಲ; ಜಲ: ನೀರು; ಆಳ್ದ: ಕಾಪಾಡು; ನೆತ್ತಿ: ತಲೆಯ ಭಾಗ, ಹಾಕಿದ;ಉರಿ: ಬೆಂಕಿ; ಪರಿಹರಿಸು: ಕಾಪಾಡು; ಮರೆ: ನೆನಪಿನಿಂದ ದೂರವಿಡು; ಇಳಿ: ಜಾರು; ಕುಲ: ವಂಶ; ಸಹಿತ: ಜೊತೆ; ಅಂಧ: ಕತ್ತಲು;

ಪದವಿಂಗಡಣೆ:
ಸಲಹಿದ್+ಒಡೆಯನ +ದಿವ್ಯ+ಮಂತ್ರವ
ಕಲಿಸಿದ್+ಆಚಾರಿಯನನ್+ಅನುವರ
ದೊಳಗೆ +ತಲೆಗಾಯ್ದವನ +ದುರ್ಭಿಕ್ಷದಲಿ+ ಸಲಹಿದನ
ಜಲದೊಳ್+ಆಳ್ದನ +ನೆತ್ತಿದನನ್+ಉರಿ
ಯೊಳಗೆ+ ಪರಿಹರಿಸಿದನ+ ಮರೆದವರ್
ಇಳಿವರೈ +ಕುಲಕೋಟಿ +ಸಹಿತ +ಮಹಾಂಧ +ನರಕದೊಳು

ಅಚ್ಚರಿ:
(೧) ೬ ರೀತಿಯ ಸಹಾಯವನ್ನು ಮರೆಯಬಾರದೆಂದು ಹೇಳುವ ಪದ್ಯ