ಪದ್ಯ ೭: ವ್ಯಾಸರು ಕೌರವನ ಬಗ್ಗೆ ಏನೆಂದು ನುಡಿದರು?

ಧರ್ಮವೆಲ್ಲಿಹುದಲ್ಲಿ ಜಯ ಸ
ತ್ಕರ್ಮವೆಲ್ಲಿಹುದಲ್ಲಿ ಸಿರಿ ಸ
ದ್ಧರ್ಮಸಂರಕ್ಷಕರು ಹರಿ ಧೂರ್ಜಟಿ ಪಿತಾಮಹರು
ಧರ್ಮದೂರನು ನಿನ್ನವನು ಸ
ತ್ಕರ್ಮಬಾಹಿರನಾತ್ಮರಚಿತ ವಿ
ಕರ್ಮದೋಷದಲಳಿದನಿನ್ನೇನೆಂದನಾ ಮುನಿಪ (ಗದಾ ಪರ್ವ, ೧೧ ಸಂಧಿ, ೭ ಪದ್ಯ)

ತಾತ್ಪರ್ಯ:
ವ್ಯಾಸ ಮುನಿಗಳು ತಮ್ಮ ಮಾತುಗಳನ್ನು ಮುಂದುವರೆಸುತ್ತಾ, ಎಲ್ಲಿ ಧರ್ಮವಿದೆಯೋ ಅಲ್ಲಿ ಜಯವಿರುತ್ತದೆ. ಎಲ್ಲಿ ಸತ್ಕರ್ಮವಿದೆಯೋ ಅಲ್ಲಿ ಸಂಪತ್ತಿರುತ್ತದೆ. ಆ ಧರ್ಮದ ಸಂರಕ್ಷರು ಹರಿಹರಬ್ರಹ್ಮರು. ನಿನ್ನ ಮಗನು ಧರ್ಮದೂರ, ಸತ್ಕರ್ಮಬಾಹಿರ, ತಾನು ಮಾಡಿದ ವಿಕಾರ ಕರ್ಮದ ದೋಷದಿಂದ ಹತನಾದನು. ಇನ್ನೇನು ಹೇಳಲಿ ಎಂದು ವ್ಯಾಸರು ನುಡಿದರು.

ಅರ್ಥ:
ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಜಯ: ಗೆಲುವು; ಸತ್ಕರ್ಮ: ಒಳ್ಳೆಯ ಕೆಲಸ; ಸಿರಿ: ಐಶ್ವರ್ಯ; ಸಂರಕ್ಷಕ: ರಕ್ಷಣೆ ಮಾಡುವವ; ಪಿತಾಮಹ: ತಾತ, ಬ್ರಹ್ಮ; ಧೂರ್ಜಟಿ: ಶಿವ; ದೂರ: ಬಹಳ ಅಂತರ, ಹತ್ತಿರವಲ್ಲದುದು; ಬಾಹಿರ: ಹೊರಗಿನವ; ವಿಕರ್ಮ: ಕೆಟ್ಟ ಕೆಲಸ; ದೋಷ: ತಪ್ಪು; ಅಳಿ: ನಾಶ; ಮುನಿ: ಋಷಿ;

ಪದವಿಂಗಡಣೆ:
ಧರ್ಮವೆಲ್ಲಿಹುದಲ್ಲಿ +ಜಯ +ಸ
ತ್ಕರ್ಮವೆಲ್ಲಿಹುದಲ್ಲಿ+ ಸಿರಿ +ಸ
ದ್ಧರ್ಮ+ಸಂರಕ್ಷಕರು +ಹರಿ +ಧೂರ್ಜಟಿ +ಪಿತಾಮಹರು
ಧರ್ಮದೂರನು +ನಿನ್ನವನು +ಸ
ತ್ಕರ್ಮ+ಬಾಹಿರನ್+ಆತ್ಮರಚಿತ+ ವಿ
ಕರ್ಮ+ದೋಷದಲ್+ಅಳಿದನ್+ಇನ್ನೇನೆಂದನಾ +ಮುನಿಪ

ಅಚ್ಚರಿ:
(೧) ಹಿತ ನುಡಿ – ಧರ್ಮವೆಲ್ಲಿಹುದಲ್ಲಿ ಜಯ, ಸತ್ಕರ್ಮವೆಲ್ಲಿಹುದಲ್ಲಿ ಸಿರಿ
(೨) ಕೌರವನ ನಡತೆಯನ್ನು ಹೇಳುವ ಪರಿ – ಧರ್ಮದೂರನು ನಿನ್ನವನು
(೩) ಧರ್ಮ, ಸದ್ಧರ್ಮ, ಸತ್ಕರ್ಮ, ವಿಕರ್ಮ – ಪ್ರಾಸ ಪದಗಳು
(೪) ಧರ್ಮ, ಸತ್ಕರ್ಮ – ೧, ೪ ಸಾಲಿನ ಮೊದಲ ಮತ್ತು ಕೊನೆ ಪದ

ಪದ್ಯ ೨೫: ಅಶ್ವತ್ಥಾಮನು ಹೇಗೆ ತೋರಿದನು?

ಎನೆ ಪುರಾರಿಯ ಪದಯುಗಕೆ ಗುರು
ತನುಜ ಮೈಯಿಕ್ಕಿದನು ಬೀಳ್ಕೊಂ
ಡನು ತಿರೋಹಿತನಾದನೀಶ್ವರನೀತನನು ಕಳುಹಿ
ಧನುವ ಕೊಂಡನು ಧೂರ್ಜಟಿಯ ರೂ
ಹಿನ ಮಹಾರಥ ರಥವನೇರಿದ
ನನುವರದ ರೌರವನಂಘೈಸಿದನು ರಜನಿಯಲಿ (ಗದಾ ಪರ್ವ, ೯ ಸಂಧಿ, ೨೫ ಪದ್ಯ)

ತಾತ್ಪರ್ಯ:
ಶಿವನು ಅಶ್ವತ್ಥಾಮನಿಗೆ ಶತ್ರುಗಳನ್ನು ನಾಶಮಾಡಲು ಹೇಳಲು, ಅಶ್ವತ್ಥಾಮನು ಅವನ ಪಾದಗಳಿಗೆ ನಮಸ್ಕರಿಸಿ ಬೀಳ್ಕೊಡಲು, ಶಿವನು ಅದೃಶ್ಯನಾದನು. ಶಿವನನ್ನು ಹೋಲುವ ಮಹಾ ಪರಾಕ್ರಮಿಯಾದ ಅಶ್ವತ್ಥಾಮನು ರಾತ್ರಿಯ ಕೌರವ ಕಾಳಗವನ್ನು ಆರಂಭಿಸಿದನು.

ಅರ್ಥ:
ಪುರಾರಿ: ಶಿವ; ಪದ: ಚರಣ; ಪದಯುಗ: ಎರಡು ಪಾದಗಳಿಗೆ; ತನುಜ: ಮಗ; ಮೈಯಿಕ್ಕು: ನಮಸ್ಕರಿಸು; ಬೀಳ್ಕೊಂಡು: ತೆರಳು; ತಿರೋಹಿತ: ಮರೆಯಾದ, ಅಡಗಿಸಿದ; ಈಶ್ವರ: ಶಂಕರ; ಕಳುಹಿ: ಬೀಳ್ಕೊಡು; ಧನು: ಬಿಲ್ಲು; ಕೊಂಡನು: ಧರಿಸು; ಧೂರ್ಜಟಿ: ಶಿವ; ರೂಹಿನ: ರೂಪದ; ಮಹಾರಥ: ಪರಾಕ್ರಮಿ; ರಥ: ಬಂಡಿ; ಏರು: ಹತ್ತು; ಅನುವರ: ಯುದ್ಧ, ಕಾಳಗ; ರೌರವ: ಭಯಂಕರವಾದ; ಅಂಘೈಸು: ಜೊತೆಯಾಗು; ರಜನಿ: ರಾತ್ರಿ;

ಪದವಿಂಗಡಣೆ:
ಎನೆ +ಪುರಾರಿಯ +ಪದಯುಗಕೆ +ಗುರು
ತನುಜ +ಮೈಯಿಕ್ಕಿದನು +ಬೀಳ್ಕೊಂ
ಡನು +ತಿರೋಹಿತನಾದನ್+ಈಶ್ವರನ್+ಈತನನು +ಕಳುಹಿ
ಧನುವ +ಕೊಂಡನು +ಧೂರ್ಜಟಿಯ +ರೂ
ಹಿನ +ಮಹಾರಥ +ರಥವನ್+ಏರಿದನನ್
ಅನುವರದ +ರೌರವನ್+ಅಂಘೈಸಿದನು +ರಜನಿಯಲಿ

ಅಚ್ಚರಿ:
(೧) ನಮಸ್ಕರಿಸಿದನು ಎಂದು ಹೇಳಲು – ಮೈಯಿಕ್ಕಿದನು
(೨) ಪುರಾರಿ, ಈಶ್ವರ, ಧೂರ್ಜಟಿ – ಶಿವನನ್ನು ಕರೆದ ಪರಿ

ಪದ್ಯ ೫: ಅರ್ಜುನನು ಯಾರ ಶಿಷ್ಯನೆಂದು ಬೇಡನಿಗೆ ಹೇಳಿದನು?

ಕಟಕಿಯೇಕೆ ಪುಳಿಂದ ನಾವು
ಬ್ಬಟೆಯ ತಪಸಿಗಳೆಂಬುದಿದು ಪರಿ
ಸ್ಫುಟವಲೇ ತಪ್ಪೇನು ನಿನ್ನೊಡನೆಂದು ಫಲವೇನು
ಜಟೆ ಮೃಗಾಜಿನ ಭಸ್ಮದೊಡನು
ತ್ಕಟದ ಧನುಶರ ಖಡ್ಗದಲಿ ಧೂ
ರ್ಜಟಿಯಿಹನು ನಾವವರ ಶಿಷ್ಯರು ಶಬರ ಕೇಳೆಂದ (ಅರಣ್ಯ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಎಲವೋ ಶಬರ ಕೇಳು, ಚುಚ್ಚುಮಾತುಗಳನ್ನೇಕೆ ನುಡಿಯುವೇ? ನಾನು ಉತ್ತಮ ತಪಸ್ವಿಯೆಂಬುದು ಅತಿ ಸ್ಪಷ್ಟವಾಗಿದೆಯಲ್ಲವೇ? ಜಟೆ, ಕೃಷ್ಣಾಜಿನ, ಭಸ್ಮಗಳೊಡನೆ ಬಿಲ್ಲು ಬಾಣ, ಖಡ್ಗಗಳನ್ನು ಧರಿಸಿದ ಶಿವನಿದ್ದಾನೆ, ನಾನು ಅವರ ಶಿಷ್ಯ ಎಂದು ಅರ್ಜುನನು ಹೇಳಿದನು.

ಅರ್ಥ:
ಕಟಕಿ:ವ್ಯಂಗ್ಯ, ಚುಚ್ಚು ಮಾತು; ಪುಳಿಂದ: ಬೇಡ; ಉಬ್ಬಟೆ: ಅತಿಶಯ, ಹಿರಿಮೆ; ತಪಸಿ: ಋಷಿ; ಸ್ಫುಟ: ಅರಳಿದುದು, ವಿಕಸಿತವಾದುದು; ತಪ್ಪು: ಸರಿಯಲ್ಲದ; ಒಡನೆ: ಜೊತೆ; ಫಲ: ಪ್ರಯೋಜನ; ಜಟೆ: ಕೂದಲು; ಮೃಗಾಜಿನ: ಜಿಂಕೆಯ ಚರ್ಮ; ಭಸ್ಮ: ವಿಭೂತಿ; ಉತ್ಕಟ: ಆಧಿಕ್ಯ, ಪ್ರಾಬಲ್ಯ; ಧನು: ಧನಸ್ಸು; ಶರ: ಬಾಣ; ಖಡ್ಗ: ಕತ್ತಿ; ಧೂರ್ಜಟಿ: ಶಿವ; ಶಿಷ್ಯ: ವಿದ್ಯಾರ್ಥಿ; ಶಬರ: ಬೇಟೆಗಾರ; ಕೇಳು: ಆಲಿಸು;

ಪದವಿಂಗಡಣೆ:
ಕಟಕಿಯೇಕೆ +ಪುಳಿಂದ +ನಾವ್
ಉಬ್ಬಟೆಯ +ತಪಸಿಗಳ್+ಎಂಬುದ್+ಇದು +ಪರಿ
ಸ್ಫುಟವಲೇ +ತಪ್ಪೇನು +ನಿನ್ನೊಡನೆಂದು +ಫಲವೇನು
ಜಟೆ +ಮೃಗಾಜಿನ +ಭಸ್ಮದೊಡನ್
ಉತ್ಕಟದ +ಧನುಶರ +ಖಡ್ಗದಲಿ +ಧೂ
ರ್ಜಟಿಯಿಹನು +ನಾವ್+ಅವರ +ಶಿಷ್ಯರು +ಶಬರ+ ಕೇಳೆಂದ

ಅಚ್ಚರಿ:
(೧) ಪುಳಿಂದ, ಶಬರ – ಸಮನಾರ್ಥಕ ಪದ
(೨) ಶಿವನನ್ನು ವರ್ಣಿಸುವ ಪರಿ – ಜಟೆ ಮೃಗಾಜಿನ ಭಸ್ಮದೊಡನುತ್ಕಟದ ಧನುಶರ ಖಡ್ಗದಲಿ ಧೂ
ರ್ಜಟಿಯಿಹನು

ಪದ್ಯ ೪೫: ಶಿಶುಪಾಲನು ಭೀಷ್ಮರನ್ನು ಹೇಗೆ ಪ್ರಶ್ನಿಸಿದನು?

ಗರುವನಲ್ಲಾ ಕೌರವೇಶ್ವರ
ನರಸಲಾ ಬಾಹ್ಲಿಕನು ರಾಯರ
ಗುರುವಲಾ ಕೊಂಡಾಡಲಾಗದೆ ಚಾಪ ಧೂರ್ಜಟಿಯ
ಗುರುಸುತನು ಸಾಮಾನ್ಯನೇ ಸಂ
ಗರ ಭಯಂಕರನಲ್ಲವೇ ವಿ
ಸ್ತರಿಸಲಾಗದೆ ನಿನ್ನ ಕೃಷ್ಣನ ಹವಣೆಯಿವರೆಂದ (ಸಭಾ ಪರ್ವ, ೧೧ ಸಂಧಿ, ೪೫ ಪದ್ಯ)

ತಾತ್ಪರ್ಯ:
ದುರ್ಯೋಧನನು ಘನತೆಯುಳ್ಳವನಲ್ಲವೇ? ಬಾಹ್ಲಿಕನು ರಾಜನಲ್ಲವೇ? ದ್ರೋಣನು ಎಲ್ಲ ರಾಜರ ಗುರುವಲ್ಲವೇ? ಅವನನ್ನೇಕೆ ನೀನು ಹೊಗಳಬಾರದು? ಯುದ್ಧದಲ್ಲಿ ಭಯಂಕರನಾದ ಅಶ್ವತ್ಥಾಮನು ಸಾಮಾನ್ಯನೇ? ಕೃಷ್ಣನು ಇವರಿಗೆ ಸರಿಸಮಾನನೇ? ಎಂದು ಶಿಶುಪಾಲನು ಭೀಷ್ಮರನ್ನು ಪ್ರಶ್ನಿಸಿದನು.

ಅರ್ಥ:
ಗರುವ: ಹಿರಿಯ, ಶ್ರೇಷ್ಠ; ಕೌರವೇಶ್ವರ: ಕೌರವರ ರಾಯ (ದುರ್ಯೋಧನ); ಅರಸ: ರಾಜ; ರಾಯ: ರಾಜ; ಕೊಂಡಾಡು: ಹೊಗಳು; ಚಾಪ: ಬಿಲ್ಲು; ಧೂರ್ಜಟಿ: ಶಿವ; ಗುರುಸುತ: ಅಶ್ವತ್ಥಾಮ; ಸಾಮಾನ್ಯ: ಸಾರ್ವತ್ರಿಕವಾದ; ಸಂಗರ: ಯುದ್ಧ, ಕಾಳಗ; ಭಯಂಕರ: ಭೀಕರ; ವಿಸ್ತರ: ವಿಶಾಲ, ವಿಸ್ತಾರ; ಹವಣ: ಮಿತಿ, ಅಳತೆ;

ಪದವಿಂಗಡಣೆ:
ಗರುವನಲ್ಲಾ +ಕೌರವೇಶ್ವರನ್
ಅರಸಲಾ +ಬಾಹ್ಲಿಕನು +ರಾಯರ
ಗುರುವಲಾ +ಕೊಂಡಾಡಲಾಗದೆ +ಚಾಪ +ಧೂರ್ಜಟಿಯ
ಗುರುಸುತನು +ಸಾಮಾನ್ಯನೇ +ಸಂ
ಗರ +ಭಯಂಕರನಲ್ಲವೇ +ವಿ
ಸ್ತರಿಸಲಾಗದೆ +ನಿನ್ನ+ ಕೃಷ್ಣನ +ಹವಣೆಯಿವರೆಂದ

ಅಚ್ಚರಿ:
(೧) ದ್ರೋಣರನ್ನು ಚಾಪ ಧೂರ್ಜಟಿ ಎಂದು ಕರೆದಿರುವುದು
(೨) ಅರಸ, ರಾಯ – ಸಮನಾರ್ಥಕ ಪದ

ಪದ್ಯ ೧೬: ಗಾಂಡಿವದ ಶಬ್ದವು ಹೇಗಿತ್ತು?

ಅರಸ ಕೇಳೈ ಧೂರ್ಜಟಿಯ ಡಾ
ವರದ ಡಮರಧ್ವನಿಯೊ ವಿಲಯದ
ಬರಸಿಡಿಲ ಬೊಬ್ಬಾಟವೋ ಕಲ್ಪಾಂತಸಾಗರದ
ತೆರೆಗಳಬ್ಬರವೋ ಧನಂಜಯ
ಕರನಿಹಿತಗಾಂಡಿವದ ಮೌರ್ವೀ
ಸ್ಪುರಿತ ಕಳಕಳವೊದೆದುದಬುಜಭವಾಂಡಮಂಡಲವ (ಕರ್ಣ ಪರ್ವ, ೨೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಆಲಿಸು ಶಿವನ ಡಮರುಗದ ಭಯಂಕರ ಧ್ವನಿಯೋ, ಪ್ರಳಯಕಾಲದ ಬರಸಿಡಿಲಿನ ಆರ್ಭಟವೋ, ಕಲ್ಪಾಂತದ ಸಾಗರದ ತೆರೆಗಳ ಘೋಷವೋ ಎಂಬಂತೆ ಅರ್ಜುನನ ಕೈಯಲ್ಲಿದ್ದ ಗಾಂಡಿವದ ಹೆದೆಯ ಸದ್ದು ಬ್ರಹ್ಮಾಂಡವನ್ನು ತುಂಬಿತು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಧೂರ್ಜಟಿ: ಶಿವ; ಡಾವರ: ಪ್ರತಾಪ, ಶಕ್ತಿ; ಡಮರು: ಒಂದು ಬಗೆಯ ಚರ್ಮವಾದ್ಯ; ಧ್ವನಿ: ಶಬ್ದ, ನಿನಾದ; ವಿಲಯ: ನಾಶ, ಪ್ರಳಯ; ಬರಸಿಡಿಲು: ಅನಿರೀಕ್ಷಿತವಾದ ಆಘಾತ; ಬೊಬ್ಬಾಟ: ಕೂಗಾಟ, ಚೀರಾಟ; ಕಲ್ಪಾಂತ: ಯುಗಾಂತ್ಯದ ಕಾಲ; ಸಾಗರ: ಸಮುದ್ರ; ತೆರೆ: ಅಲೆ; ಅಬ್ಬರ: ಆರ್ಭಟ; ಕರ: ಕೈ; ನಿಹಿತ: ಹಿಡಿದ; ಮೌರ್ವೀ: ಹೆದೆ; ಸ್ಫುರಿತ: ಒಪ್ಪುವ, ಹೊಳೆವ; ಕಳಕಳ:ವ್ಯಥೆ, ಉದ್ವಿಗ್ನತೆ; ಅಬುಜ: ಬ್ರಹ್ಮ; ಅಬುಜಭವಾಂಡ: ಬ್ರಹ್ಮಾಂಡ; ಮಂಡಲ: ನಾಡಿನ ಒಂದು ಭಾಗ, ವರ್ತುಲಾಕಾರ;

ಪದವಿಂಗಡಣೆ:
ಅರಸ+ ಕೇಳೈ +ಧೂರ್ಜಟಿಯ +ಡಾ
ವರದ+ ಡಮರ+ಧ್ವನಿಯೊ +ವಿಲಯದ
ಬರಸಿಡಿಲ+ ಬೊಬ್ಬಾಟವೋ +ಕಲ್ಪಾಂತ+ಸಾಗರದ
ತೆರೆಗಳ್+ಅಬ್ಬರವೋ +ಧನಂಜಯ
ಕರನಿಹಿತ+ಗಾಂಡಿವದ +ಮೌರ್ವೀ
ಸ್ಪುರಿತ +ಕಳಕಳವ್+ಒದೆದುದ್+ಅಬುಜಭವಾಂಡ+ಮಂಡಲವ

ಅಚ್ಚರಿ:
(೧) ಉಪಮಾನದ ಪ್ರಯೋಗ – ಧೂರ್ಜಟಿಯ ಡಾವರದ ಡಮರಧ್ವನಿಯೊ; ವಿಲಯದ
ಬರಸಿಡಿಲ ಬೊಬ್ಬಾಟವೋ; ಕಲ್ಪಾಂತಸಾಗರದ ತೆರೆಗಳಬ್ಬರವೋ

ಪದ್ಯ ೧೬: ದೇವರ ನಿಕರಕ್ಕೆ ಶಿವನು ಏನು ಪ್ರಶ್ನಿಸಿದನು?

ನಡೆದು ರಥದಲಿ ವಾಮಚರಣವ
ನಿಡುತ ಧೂರ್ಜಟಿ ದೇವ ನಿಕರಕೆ
ನುಡಿದನಾವನನೀ ರಥಕೆ ಸಾರಥಿಯ ಮಾಡಿದಿರಿ
ಕಡೆಗೆ ಸಾರಥಿಯಿಲ್ಲದೀ ರಥ
ನಡೆವುದೇ ದಾನವರ ಥಟ್ಟಣೆ
ತೊಡೆವುದೇ ಲೆಸಾಯ್ತೆನುತ ನೋಡಿದನು ಸುರಪತಿಯ (ಕರ್ಣ ಪರ್ವ, ೭ ಸಂಧಿ, ೧೬ ಪದ್ಯ)

ತಾತ್ಪರ್ಯ:
ಶಿವನು ಈ ಮಹೋನ್ನತ ರಥದ ಬಳಿ ಸಾರಿ, ರಥದಲ್ಲಿ ತನ್ನ ಎಡಗಾಲನ್ನಿಡುತ್ತಾ, ದೇವತೆಗಳನ್ನು ನೋಡಿ, ಈ ರಥಕ್ಕೆ ಸಾರಥಿ ಯಾರು ಎಂದು ಪ್ರಶ್ನಿಸಿದನು. ಸಾರಥಿಯಿಲ್ಲದೆ ರಥ ನಡೆವುದೆಂತು? ರಾಕ್ಷಸರ ಸೈನ್ಯದ ಹೊಡೆತ ತಪ್ಪಲು ಸಾರಥಿಯಿಲ್ಲದೆ ಸಾಧ್ಯವೇ? ಎಂದು ಕೇಳುತ್ತಾ ಇಂದ್ರನನ್ನು ನೋಡಿದನು.

ಅರ್ಥ:
ನಡೆ: ಮುಂದೆಹೋಗಿ; ರಥ: ಬಂಡಿ, ತೇರು; ವಾಮ: ಎಡ; ಚರಣ: ಕಾಲು; ಧೂರ್ಜಟಿ: ಶಿವ; ದೇವ: ಸುರರು; ನಿಕರ: ಗುಂಪು; ನುಡಿ: ಮಾತಾಡು; ಆವನು: ಯಾರು; ಸಾರಥಿ: ರಥವನ್ನು ಓಡಿಸುವವ; ಕಡೆಗೆ: ಕೊನೆ; ನಡೆ: ಮುಂದೆ ಹೋಗು; ದಾನವ: ರಾಕ್ಷಸ; ಥಟ್ಟು: ಗುಂಪು, ಸಮೂಹ, ಸೈನ್ಯ; ಒಡೆ: ಸೀಳು; ಲೇಸು: ಒಳ್ಳೆಯ, ಸರಿ; ಸುರಪತಿ: ಇಂದ್ರ;

ಪದವಿಂಗಡಣೆ:
ನಡೆದು +ರಥದಲಿ +ವಾಮ+ಚರಣವ
ನಿಡುತ +ಧೂರ್ಜಟಿ +ದೇವ +ನಿಕರಕೆ
ನುಡಿದನ್+ಆವನನ್+ಈ+ ರಥಕೆ +ಸಾರಥಿಯ +ಮಾಡಿದಿರಿ
ಕಡೆಗೆ +ಸಾರಥಿಯಿಲ್ಲದ್+ಈ+ ರಥ
ನಡೆವುದೇ+ ದಾನವರ +ಥಟ್ಟಣೆ
ತೊಡೆವುದೇ +ಲೆಸಾಯ್ತೆನುತ+ ನೋಡಿದನು +ಸುರಪತಿಯ

ಅಚ್ಚರಿ:
(೧) ನಿಕರ, ಥಟ್ಟು – ಸಮನಾರ್ಥಕ ಪದ
(೨) ವ್ಯಂಗ್ಯವಾಗಿ ಹೇಳುವ ಪರಿ – ಲೆಸಾಯ್ತೆನುತ
(೩) ಶಿವನನ್ನು ಇಲ್ಲಿ ಧೂರ್ಜಟಿ ಎಂದು ಕರೆದಿರುವುದು