ಪದ್ಯ ೪೫: ಕೃಷ್ಣನಲ್ಲಿ ಅರ್ಜುನನು ಯಾವ ಪ್ರಶ್ನೆಯನ್ನು ಕೇಳಿದನು?

ಧಾತುಗೆಟ್ಟನು ಭೀಮ ಮುಸುಕಿತು
ಭೀತಿ ನಮ್ಮೆಲ್ಲರನು ದೈವ
ವ್ರಾತವಾತನ ಕೊಂಡು ಕೊನರಿತು ಹೊಯ್ದು ಹೂಮಳೆಯ
ಪಾತಕಕೆ ಪಡವಾಗದಮಲ
ಖ್ಯಾತಿ ನೋಯದೆ ವಿಜಯಸಿರಿ ರಾ
ಗಾತಿಯದಲಿ ನಮ್ಮ ರಮಿಸುವ ದೆಸೆಯ ಬೆಸಸೆಂದ (ಗದಾ ಪರ್ವ, ೭ ಸಂಧಿ, ೪೫ ಪದ್ಯ)

ತಾತ್ಪರ್ಯ:
ಅರ್ಜುನನು ಕೃಷ್ಣನೊಂದಿಗೆ ಮಾತನಾಡುತ್ತಾ, ಭೀಮನು ಬಲುಗುಂದಿ ಮೂರ್ಛಿತನಾಗಿದ್ದಾನೆ. ನಾವು ಭೀತರಾಗಿದ್ದೇವೆ. ದೇವತೆಗಳು ಹೂಮಳೆಗರೆದು ವೈರಿಯನ್ನು ಸಂಭಾವಿಸಿತು. ನಾವು ಪಾಪಕ್ಕೀಡಾಗದಿರುವೆವೇ? ನಮ್ಮ ಕೀರ್ತಿಗೆ ಭಂಗಬಾರದೇ? ವಿಜಯಲಕ್ಷ್ಮಿಯು ನಮ್ಮನ್ನು ವರಿಸುವ ಬಗೆಯೇನು ಎಂದು ಪ್ರಶ್ನಿಸಿದನು.

ಅರ್ಥ:
ಧಾತು: ತೇಜಸ್ಸು; ಕೆಟ್ಟು: ಹಾಳಾಗು; ಮುಸುಕು: ಮಂಕಾಗು, ಹೊದಿಕೆ; ಭೀತಿ: ಭಯ; ದೈವ: ದೇವತೆ, ಅಮರರು, ಭಗವಂತ; ವ್ರಾತ: ಗುಂಪು; ಕೊಂಡು: ಹೊಗಳು; ಕೊನರು: ಏಳಿಗೆಯಾಗು; ಹೊಯ್ದು: ಹೊಡೆ; ಹೂಮಳೆ: ಪುಷ್ಪವೃಷ್ಟಿ; ಪಾತಕ: ಪಾಪಿ, ದುಷ್ಟ; ಅಮಳ: ನಿರ್ಮಲ; ಖ್ಯಾತಿ: ಪ್ರಸಿದ್ಧ; ನೋವು: ಬೇನೆ, ಶೂಲೆ; ವಿಜಯ: ಗೆಲುವು; ಸಿರಿ: ಐಶ್ವರ್ಯ; ರಾಗ: ಪ್ರೀತಿ, ಮೋಹ, ಸಂತಸ; ರಮಿಸು: ಪ್ರೀತಿಸು; ದೆಸೆ: ದಿಕ್ಕು; ಬೆಸಸು: ಹೇಳು, ಆಜ್ಞಾಪಿಸು;

ಪದವಿಂಗಡಣೆ:
ಧಾತುಗೆಟ್ಟನು+ ಭೀಮ +ಮುಸುಕಿತು
ಭೀತಿ ನಮ್ಮೆಲ್ಲರನು+ ದೈವ
ವ್ರಾತವಾತನ +ಕೊಂಡು +ಕೊನರಿತು +ಹೊಯ್ದು +ಹೂಮಳೆಯ
ಪಾತಕಕೆ +ಪಡವಾಗದ್+ ಅಮಲ
ಖ್ಯಾತಿ+ ನೋಯದೆ +ವಿಜಯಸಿರಿ +ರಾ
ಗಾತಿಯದಲಿ +ನಮ್ಮ+ ರಮಿಸುವ +ದೆಸೆಯ +ಬೆಸಸೆಂದ

ಅಚ್ಚರಿ:
(೧) ಜೋಡಿ ಪದಗಳು – ಕೊಂಡು ಕೊನರಿತು; ಹೊಯ್ದು ಹೂಮಳೆಯ
(೨) ಗೆಲ್ಲುವ ಬಗೆಯನ್ನು ಕೇಳುವ ಪರಿ – ವಿಜಯಸಿರಿ ರಾಗಾತಿಯದಲಿ ನಮ್ಮ ರಮಿಸುವ ದೆಸೆಯ ಬೆಸಸೆಂದ

ಪದ್ಯ ೩೩: ದುರ್ಯೋಧನನು ತನಗೇನು ಬೇಕು ಎಂದು ಹೇಳಿದನು?

ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ (ಗದಾ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಸಂಜಯ, ನನ್ನ ಕೋಪ ಮಾಸಿಲ್ಲ, ಮನಸ್ಸಿನ ಧೈರ್ಯದ ಶಕ್ತಿ ಸಾಮರ್ಥ್ಯಗಳು ಮಾಸಿಲ್ಲ. ನಾಚಿಕೆಪಡುವ ಇಲ್ಲವೇ ಇಲ್ಲ. ಯುಧಿಷ್ಠಿರಾದಿ ಪಾಂಡವರಲ್ಲಿ ವಿರೋಧ ಹೋಗಿಲ್ಲ. ನೀನೇಕೆ ಸುಮ್ಮನೆ ಅಳುತ್ತಿರುವೆ? ಕೌರವನು ಶತ್ರುಗಳನ್ನು ಅಲುಗಾಡಿಸಿ ಕೊಲ್ಲಬಲ್ಲನು ಎಂಬ ಕೀರ್ತಿ ನನಗೆ ಬೇಕು. ಬೇರೆಯ ರಾಜ್ಯವನ್ನು ನಾನೊಲ್ಲೆ ಎಂದನು.

ಅರ್ಥ:
ಖಾತಿ: ಕೋಪ, ಕ್ರೋಧ; ಕಂದು: ಮಸಕಾಗು; ಮನ: ಮನಸ್ಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಧಾತು: ತೇಜಸ್ಸು; ಲಜ್ಜೆ: ನಾಚಿಕೆ, ಸಿಗ್ಗು; ಅಭಿಮತ: ಅಭಿಪ್ರಾಯ; ಜಾತಿ: ಕುಲ; ಕೆಡು: ಇಲ್ಲವಾಗು, ಸೋಲು; ವಿರೋಧ: ತಡೆ, ಅಡ್ಡಿ, ವೈರತ್ವ; ಬಿಡು: ತೊರೆ, ತ್ಯಜಿಸು; ಆದಿ: ಮುಂತಾದ; ಪ್ರಳಾಪ: ಪ್ರಲಾಪ, ದುಃಖ; ವಿಧೂತ: ಅಲುಗಾಡುವ, ಅಲ್ಲಾಡುವ; ರಿಪು: ವೈರಿ; ಖ್ಯಾತಿ: ಪ್ರಸಿದ್ಧಿ, ಹೆಸರುವಾಸಿ; ಬೇರೆ: ಅನ್ಯ;

ಪದವಿಂಗಡಣೆ:
ಖಾತಿ +ಕಂದದು +ಮನದ +ಧೈರ್ಯದ
ಧಾತು +ಕುಂದದು +ಲಜ್ಜೆ+ಅಭಿಮತ
ಜಾತಿಗೆಡದು+ ವಿರೋಧ +ಬಿಡದು +ಯುಧಿಷ್ಠಿರಾದ್ಯರಲಿ
ಏತಕಿದು +ನಿನ್ನೀ +ಪ್ರಳಾಪ +ವಿ
ಧೂತರಿಪು +ಕುರುರಾಯನ್+ಎಂಬೀ
ಖ್ಯಾತಿಯಲ್ಲದೆ +ಬೇರೆ +ರಾಜ್ಯವನ್ನೊಲ್ಲೆ +ನಾನೆಂದ

ಅಚ್ಚರಿ:
(೧) ದುರ್ಯೋಧನನ ವೀರನುಡಿ – ಕುರುರಾಯನೆಂಬೀ ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ

ಪದ್ಯ ೧೩: ಅಶ್ವತ್ಥಾಮನು ಯಾವ ಮಂತ್ರವನ್ನು ಜಪಿಸಿದನು?

ಧಾತುಗೆಟ್ಟುದು ದೊದ್ದೆಯೆಂದೇ
ಭೂತಳಾಧಿಪ ಬಗೆಯದಿರು ತೆಗೆ
ಮಾತು ಹುಸಿ ಮರಳಿದರು ನಿನ್ನಯ ಪಟ್ಟದಾನೆಗಳು
ಭೀತಿಗೊಂಡನು ದ್ರೋಣ ಸೋಲಕೆ
ಕೇತುವಾದನು ಶಲ್ಯನಪಜಯ
ಮಾತೃಕಾಕ್ಷರನಾದನಶ್ವತ್ಥಾಮನಿಂದಿನಲಿ (ದ್ರೋಣ ಪರ್ವ, ೧೬ ಸಂಧಿ, ೧೩ ಪದ್ಯ)

ತಾತ್ಪರ್ಯ:
ಶತ್ರುವು ಬರಿಯ ದೊಂಬಿಮಾಡಿ ಅರಿಚಿಕೊಳ್ಳುವನೆಂದುಕೊಳ್ಳಬೇಡ ರಾಜನೇ. ನಿನ್ನ ಪಟ್ಟದಾನೆಗಳ ಪ್ರತಿಜ್ಞೆ ಹುಸಿಯಾಗಿ ಅವರೆಲ್ಲ ಸೋತು ಬಂದರು. ದ್ರೋಣನು ಭಯಗೊಂಡನು. ಶಲ್ಯನು ಸೋಲಿನ ಧ್ವಜವನ್ನೇರಿಸಿದನು. ಅಶ್ವತ್ಥಾಮನು ಅಪಜಯದ ಬೀಜಮಂತ್ರವನ್ನು ಜಪಿಸಿದನು.

ಅರ್ಥ:
ಧಾತು: ಮೂಲವಸ್ತು; ಕೆಟ್ಟು: ಹಾಳು; ದೊದ್ದೆ: ಗುಂಪು, ಸಮೂಹ; ಭೂತಳಾಧಿಪ: ರಾಜ; ಬಗೆ: ತಿಳಿ; ತೆಗೆ: ಹೊರತರು; ಮಾತು: ವಾಣಿ; ಹುಸಿ: ಸುಳ್ಳು; ಮರಳು: ಹಿಂದಿರುಗು; ಪಟ್ಟ: ಶ್ರೇಷ್ಠ, ಅಧಿಕಾರ; ಆನೆ: ಗಜ; ಭೀತಿ: ಭಯ; ಸೋಲು: ಪರಾಭವ; ಕೇತು: ಬಾವುಟ; ಅಪಜಯ: ಸೋಲು; ಮಾತೃ: ಮಾತೆ; ಅಕ್ಷರ: ಬರೆಹ, ಮಂತ್ರ; ಮಾತೃಕಾಕ್ಷರ: ಮಂತ್ರಬೀಜಾಕ್ಷರ;

ಪದವಿಂಗಡಣೆ:
ಧಾತುಗೆಟ್ಟುದು +ದೊದ್ದೆಯೆಂದೇ
ಭೂತಳಾಧಿಪ +ಬಗೆಯದಿರು +ತೆಗೆ
ಮಾತು +ಹುಸಿ +ಮರಳಿದರು +ನಿನ್ನಯ +ಪಟ್ಟದಾನೆಗಳು
ಭೀತಿಗೊಂಡನು +ದ್ರೋಣ +ಸೋಲಕೆ
ಕೇತುವಾದನು +ಶಲ್ಯನ್+ಅಪಜಯ
ಮಾತೃಕಾಕ್ಷರನಾದನ್+ಅಶ್ವತ್ಥಾಮನ್+ಇಂದಿನಲಿ

ಅಚ್ಚರಿ:
(೧) ಪರಾಕ್ರಮಿಗಳನ್ನು ಕರೆದ ಪರಿ – ಪಟ್ಟದಾನೆ
(೨) ಸೋಲು, ಅಪಜಯ – ಸಮಾನಾರ್ಥಕ ಪದಗಳು

ಪದ್ಯ ೪: ಆಪ್ತಲೋಚನ ಸಭೆಯಲ್ಲಿ ಯಾವ ವಿಷಯವನ್ನು ಹೇಳಲಾಯಿತು?

ಭೂರಿ ನೆರೆದುದು ನಾಡಗಾವಳಿ
ಭಾರ ಧೃಷ್ಟದ್ಯುಮ್ನನದು ಗಡ
ಜಾರದೇವನ ಜೋಕೆಮಂದಿಯ ಕಾಹುಕಟ್ಟುಗಡ
ಧಾರುಣಿಯಲಂಪಟರು ಕದನವ
ಹಾರಿ ಬಂದರು ಗಡ ಕೃತಾಂತನ
ಭೂರಿ ಭೂತದ ಧಾತುವಾಯಿತು ಲೇಸುಲೇಸೆಂದ (ಭೀಷ್ಮ ಪರ್ವ, ೧ ಸಂಧಿ, ೪ ಪದ್ಯ)

ತಾತ್ಪರ್ಯ:
ಜನಗಳ ಭಾರಿ ಗುಂಪು ಅಲ್ಲಿ ಸೇರಿದೆ, ಅವರ ಯಜಮಾನಿಕೆ ದೃಷ್ಟದ್ಯುಮ್ನನದಮ್ತೆ, ಆ ಜಾರನು ಅವರನ್ನು ಕಾಪಾಡುತ್ತಾನಮ್ತೆ, ಭೂಮಿಯ ಮೇಲಿನ ಆಸೆಯಿಂದ ಯುದ್ಧವನ್ನು ಬಯಸಿ ಬಂದಿದ್ದಾರಂತೆ, ಯಮನ ಭೂತಗಳಿಗೆ ಬಲ ಬಂದಿದೆ, ಬಹಳ ಒಳಿತಾಯಿತು ಎಂದು ದುರ್ಯೋಧನನ ಪರಿಮಿತ ಅಲ್ಲಿ ನೆರೆದಿದ್ದ ಆಪ್ತ ಜನರಿಗೆ ಪಾಂಡವರ ಗುಂಪಿನಲ್ಲಿ ಮಾತನಾಡಿಕೊಳ್ಳುತ್ತಿದ್ದ ವಿಷಯವನ್ನು ತಿಳಿಸಿತು.

ಅರ್ಥ:
ಭೂರಿ: ಹೆಚ್ಚು, ಅಧಿಕ; ನೆರೆ: ಸೇರು, ಜೊತೆಗೂಡು; ನಾಡಗವಾಳಿ: ನಾಡ ಜನರ ಗುಂಪು; ಭಾರ: ಹೊರೆ, ತೂಕ; ಜಾರ: ಪರಸ್ತ್ರೀಮೋಹಕ; ಗಡ: ಅಲ್ಲವೆ; ಜೋಕೆ:ಎಚ್ಚರಿಕೆ, ಜಾಗರೂಕತೆ, ಸೊಗಸು; ಮಂದಿ: ಜನರು; ಕಾಹು: ಸಂರಕ್ಷಣೆ; ಧಾರುಣಿ: ಭೂಮಿ; ಲಂಪಟ: ವಿಷಯಾಸಕ್ತ, ಕಾಮುಕ; ಕದನ: ಯುದ್ಧ; ಹಾರು: ಲಂಘಿಸು, ಬಯಸು; ಕೃತಾಂತ: ಯಮ; ಭೂತ: ದೆವ್ವ, ಪಿಶಾಚಿ; ಧಾತು: ಶಕ್ತಿ, ಸಾಮರ್ಥ್ಯ, ದೇಹದಲ್ಲಿರುವ ರಸ, ರಕ್ತ, ಮಾಂಸ, ಮೇಧಸ್ಸು, ಅಸ್ತಿ, ಮಜ್ಜೆ, ಶುಕ್ಲ ಎಂಬ ಏಳು ಧಾತುಗಳು; ಲೇಸು: ಒಳಿತು;

ಪದವಿಂಗಡಣೆ:
ಭೂರಿ +ನೆರೆದುದು +ನಾಡಗಾವಳಿ
ಭಾರ +ಧೃಷ್ಟದ್ಯುಮ್ನನದು +ಗಡ
ಜಾರದೇವನ+ ಜೋಕೆ+ಮಂದಿಯ+ ಕಾಹು+ಕಟ್ಟು+ಗಡ
ಧಾರುಣಿಯ+ಲಂಪಟರು +ಕದನವ
ಹಾರಿ +ಬಂದರು +ಗಡ+ ಕೃತಾಂತನ
ಭೂರಿ +ಭೂತದ +ಧಾತುವಾಯಿತು+ ಲೇಸುಲೇಸೆಂದ

ಅಚ್ಚರಿ:
(೧) ಗಡ ಪದದ ಬಳಕೆ – ೩ ಬಾರಿ
(೨) ದೃಷ್ಟದ್ಯುಮ್ನನನ್ನು ಜಾರದೇವ ಎಂದು ಕರೆದುದು
(೩) ಇವರೆಲ್ಲರೂ ಸಾಯುವರು ಎಂದು ಹೇಳುವ ಪರಿ – ಕೃತಾಂತನ ಭೂರಿ ಭೂತದ ಧಾತುವಾಯಿತು

ಪದ್ಯ ೬: ಯಾವ ಗ್ರಹಗಳು ಕರ್ಣನ ಜೊತೆ ನಿಂತರು?

ವಿವಿಧ ರತ್ನಾವಳಿ ಮಹಾನಿಧಿ
ಯವರ ದೆಸೆ ರಜತಾದಿ ಲೋಹ
ಪ್ರವರ ಧಾತುಗಳಿತ್ತಲತ್ತಲು ನಿಮ್ಮ ಥಟ್ಟಿನಲಿ
ರವಿ ಶನೈಶ್ಚರ ರಾಹು ಬುಧ ಭಾ
ರ್ಗವರು ಕರ್ಣನ ದೆಸೆಯಲಾ ಮಿ
ಕ್ಕವರು ಪಾರ್ಥನ ದೆಸೆಯಲಾಯಿತು ರಾಯ ಕೇಳೆಂದ (ಕರ್ಣ ಪರ್ವ, ೨೨ ಸಂಧಿ, ೬ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರನೇ, ಹಲವಾರು ಬಗೆಯ ರತ್ನಗಳು, ಶ್ರೇಷ್ಠವಾದ ಸಂಪತ್ತು, ಅರ್ಜುನನ ಕಡೆ ಸೇರಿದರೆ, ಬೆಳ್ಳಿಯೇ ಮೊದಲಾದ ಲೋಹಗಳು ಕರ್ಣನ ಕಡೆ ಸೇರಿದರು. ರವಿ, ಶನಿ, ರಾಹು, ಬುಧ, ಶುಕ್ರಗಳು ಕರ್ಣನ ಬಳಿ ನಿಂತರೆ, ಉಳಿದ ಗ್ರಹಗಳು ಅರ್ಜನನ ಜೊತೆ ನಿಂತರು ಎಂದು ಸಂಜಯನು ತಿಳಿಸಿದನು.

ಅರ್ಥ:
ವಿವಿಧ: ಹಲವಾರು; ರತ್ನ: ಬೆಲೆಬಾಳುವ ಮಣಿ, ವಜ್ರ, ಮಾಣಿಕ್ಯ; ಆವಳಿ: ಸಾಲು; ಮಹಾ: ಶ್ರೇಷ್ಠ; ನಿಧಿ: ಸಂಪತ್ತು; ದೆಸೆ: ಕಡೆ, ದಿಕ್ಕು; ರಜತ: ಬೆಳ್ಳಿ; ಆದಿ: ಮುಂತಾದ; ಲೋಹ: ಖನಿಜ; ಪ್ರವರ: ಪ್ರಧಾನ; ಧಾತು: ಮೂಲವಸ್ತು; ಥಟ್ಟು: ಪಕ್ಕ, ಕಡೆ; ರವಿ: ಭಾನು; ಶನೈಶ್ಚರ: ಶನಿಗ್ರಹ; ಭಾರ್ಗವ: ಶುಕ್ರ; ಮಿಕ್ಕ: ಉಳಿದ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ವಿವಿಧ +ರತ್ನಾವಳಿ +ಮಹಾ+ನಿಧಿ
ಅವರ+ ದೆಸೆ +ರಜತ+ಆದಿ+ ಲೋಹ
ಪ್ರವರ+ ಧಾತುಗಳ್+ಇತ್ತಲ್+ಅತ್ತಲು +ನಿಮ್ಮ +ಥಟ್ಟಿನಲಿ
ರವಿ +ಶನೈಶ್ಚರ+ ರಾಹು +ಬುಧ +ಭಾ
ರ್ಗವರು +ಕರ್ಣನ +ದೆಸೆಯಲ್+ಆ+ ಮಿ
ಕ್ಕವರು +ಪಾರ್ಥನ+ ದೆಸೆಯಲಾಯಿತು+ ರಾಯ +ಕೇಳೆಂದ

ಅಚ್ಚರಿ:
(೧) ಗ್ರಹಗಳ ಹೆಸರಿಸಿದ ೪ನೇ ಸಾಲು

ಪದ್ಯ ೩೨: ಭೀಮನು ದುಶ್ಯಾಸನನಿಗೆ ಏನು ಹೇಳಿದ?

ಪೂತು ಸುಭಟ ಸುಯೋಧನನ ಸಹ
ಜಾತನಲ್ಲಾ ಮತ್ತೆ ಕೆಲಬರಿ
ಗೀ ತವಕವೀ ಶೌರ್ಯವೀ ಬಲುಹೀಸು ದಿಟ್ಟತನ
ಸೋತುದುಂಟೇ ಹೊಳ್ಳುಮಾತಿನ
ಹೂತೊಡಬೆ ನಿನಗಿಲ್ಲ ಧೈರ್ಯದ
ಧಾತುವೊಳ್ಳಿತು ಕೊಳ್ಳೆನುತ ತೆಗೆದೆಚ್ಚನಾ ಭೀಮ (ಕರ್ಣ ಪರ್ವ, ೧೯ ಸಂಧಿ, ೩೨ ಪದ್ಯ)

ತಾತ್ಪರ್ಯ:
ಭೀಮನು ದುಶ್ಯಾಸನನನ್ನು ಕಂಡು, ಭಲೇ ವೀರ, ನೀನು ದುರ್ಯೋಧನನ ತಮ್ಮನಲ್ಲವೇ, ಬೇರೆಯವರಿಗೆ ಈ ತವಕ, ಶೌರ್ಯ, ಸತ್ವ, ದಿಟ್ಟತನ, ಇರುವುದುಂಟೇ? ಪೊಳ್ಳು ಮಾತಿನ ಹೂವಿನ ಅಲಂಕರ ನಿನಗಿಲ್ಲ. ಧೈರ್ಯದ ಬಲುಹು ಚೆನ್ನಾಗಿದೆ ಇದನ್ನು ತೆಗೆದುಕೋ ಎಂದು ಭೀಮನು ಬಾಣ ಪ್ರಯೋಗ ಮಾಡಿದನು.

ಅರ್ಥ:
ಪೂತು: ಭಲೇ; ಸುಭಟ: ವೀರ; ಸಹಜಾತ: ತಮ್ಮ; ಕೆಲಬರಿ: ಪಕ್ಕ, ಸುಮ್ಮನೆ; ತವಕ: ಕಾತುರ, ಕುತೂಹಲ; ಶೌರ್ಯ: ಸಾಹಸ, ಪರಾಕ್ರಮ; ಬಲುಹು: ಬಲ, ಶಕ್ತಿ; ಈಸು: ಈಪರಿ; ದಿಟ್ಟತನ: ಧೈರ್ಯ; ಸೋತು: ಸೋಲು, ಅಪಜಯ; ಹೊಳ್ಳು:ಹುರುಳಿಲ್ಲದುದು, ಜೊಳ್ಳು; ಮಾತು: ವಾಣಿ; ಹೂತೊಡಬೆ: ಹೂವಿನ ಅಲಂಕಾರ; ಧೈರ್ಯ: ಎದೆಗಾರಿಕೆ, ಕೆಚ್ಚು; ಧಾತು: ಮೂಲವಸ್ತು; ಕೊಳ್ಳು: ತೆಗೆದುಕೊ; ಎಚ್ಚು: ಬಾಣ ಪ್ರಯೋಗ;

ಪದವಿಂಗಡಣೆ:
ಪೂತು +ಸುಭಟ +ಸುಯೋಧನನ+ ಸಹ
ಜಾತನಲ್ಲಾ +ಮತ್ತೆ +ಕೆಲಬರಿಗ್
ಈ+ ತವಕವ್+ಈ+ ಶೌರ್ಯವ್+ಈ+ ಬಲುಹ್+ಈಸು +ದಿಟ್ಟತನ
ಸೋತುದುಂಟೇ +ಹೊಳ್ಳುಮಾತಿನ
ಹೂತೊಡಬೆ+ ನಿನಗಿಲ್ಲ+ ಧೈರ್ಯದ
ಧಾತುವೊಳ್ಳಿತು +ಕೊಳ್ಳೆನುತ+ ತೆಗೆದ್+ಎಚ್ಚನಾ +ಭೀಮ

ಅಚ್ಚರಿ:
(೧) ದುಶ್ಯಾಸನನನ್ನು ಹೊಗಳುವ ಪದಗಳು – ಹೊಳ್ಳುಮಾತಿನ ಹೂತೊಡಬೆ ನಿನಗಿಲ್ಲ

ಪದ್ಯ ೨೬: ಭೀಮಸೇನನು ಖಡ್ಗವನ್ನೇಕೆ ಧರಿಸಿದನು?

ಅರಸ ಕೇಳಾಶ್ಚರಿಯವನು ಟೆ
ಬ್ಬರಿಸುವನೆ ಕಲಿಭೀಮನುಬ್ಬಟೆ
ಯರಿಗಳಾಹವ ಧೀರರಾದರೆ ಧಾತುಗೆಡುವವನೆ
ಶರಧನುವ ಹಾಯ್ಕಿದನು ಧೊಪ್ಪನೆ
ಧರೆಗೆ ಧಮ್ಮಿಕ್ಕಿದನು ಖಡುಗವ
ತಿರುಹಿ ಬೆರಸಿದನಳವಿಯಲಿ ಕುರುಸೇನೆ ಕಳವಳಿಸೆ (ಕರ್ಣ ಪರ್ವ, ೧೨ ಸಂಧಿ, ೨೬ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರನೇ ಕೇಳು ಒಂದು ಅಶ್ಚರ್ಯದ ಸಂಗತಿಯ. ಭೀಮನು ಕರ್ಣನ ಬಿಟ್ಟ ಬಾಣಗಳಿಗೆ ಹೆದರಲಿಲ್ಲ, ಯುದ್ಧದಲ್ಲಿ ವೈರಿಯು ಧೀರನಾದರೆ ಇವನು ಶಕ್ತಿಗುಂದುವವನೇ? ಭೀಮನು ಯುದ್ಧರಂಗದಲ್ಲಿ ಬಿಲ್ಲು ಬಾಣಗಳನ್ನು ಕೆಳಗಿಟ್ಟು, ಧೊಪ್ಪನೆ ಭೂಮಿಗೆ ಧುಮುಕಿ ಖಡ್ಗವನ್ನೆಳೆದು ಕೊಂಡು ಅದನ್ನು ಬೀಸುತ್ತಾ ಮುನ್ನುಗ್ಗಿದನು. ಇದನ್ನು ನೋಡಿದ ಕುರುಸೇನೆಯು ಬೆದರಿತು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಆಶ್ಚರ್ಯ: ಕುತೂಹಲ; ಟೆಬ್ಬರ: ಹಿಂಸೆ, ಕಾಟ; ಕಲಿ: ಶೂರ; ಉಬ್ಬಟೆ: ಅತಿಶಯ, ಹಿರಿಮೆ; ಅರಿ: ವೈರಿ; ಆಹವ: ಯುದ್ಧ; ಧೀರ: ಶೂರ; ಧಾತು: ವೀರ್ಯ; ಶಕ್ತಿ; ಕೆಡು: ಹಾಳು; ಶರ: ಬಾಣ; ಧನು: ಬಿಲ್ಲು; ಹಾಯ್ಕು: ಇಡು, ಇರಿಸು; ಧೊಪ್ಪನೆ: ಒಮ್ಮೆಲೆ; ಖಡುಗ: ಕತ್ತಿ; ತಿರುಹು: ತಿರುಗಿಸು; ಬೆರಸು: ಸೇರು; ಅಳವಿ: ಯುದ್ಧ; ಕಳವಳ: ಚಿಂತೆ;

ಪದವಿಂಗಡಣೆ:
ಅರಸ +ಕೇಳ್+ಆಶ್ಚರಿಯವನು+ ಟೆ
ಬ್ಬರಿಸುವನೆ+ ಕಲಿಭೀಮನ್+ಉಬ್ಬಟೆ
ಅರಿಗಳ್+ಆಹವ +ಧೀರರಾದರೆ+ ಧಾತುಗೆಡುವವನೆ
ಶರಧನುವ+ ಹಾಯ್ಕಿದನು +ಧೊಪ್ಪನೆ
ಧರೆಗೆ+ ಧಮ್ಮಿಕ್ಕಿದನು+ ಖಡುಗವ
ತಿರುಹಿ +ಬೆರಸಿದನ್+ಅಳವಿಯಲಿ +ಕುರುಸೇನೆ +ಕಳವಳಿಸೆ

ಅಚ್ಚರಿ:
(೧) ಧ ಕಾರದ ಸಾಲು ಪದಗಳು – ಧೊಪ್ಪನೆ ಧರೆಗೆ ಧಮ್ಮಿಕ್ಕಿದನು; ಧೀರರಾದರೆ ಧಾತುಗೆಡುವವನೆ
(೨) ಭೀಮನ ಹಿರಿಮೆ – ಯರಿಗಳಾಹವ ಧೀರರಾದರೆ ಧಾತುಗೆಡುವವನೆ

ಪದ್ಯ ೩೪: ಏಳರ ಮಹತ್ವವನ್ನರಿತವರು ಹೇಗೆ ಮುಕ್ತಿಯನ್ನು ಪಡೆಯುತ್ತಾರೆ?

ಜಲಧಿ ಮಾತೃಕೆ ವಾರ ಕುಲಗಿರಿ
ಗಳು ವಿಭಕ್ತಿ ದ್ವೀಪದಂಗಾ
ವಳಿ ಮುನೀಶ್ವರರುಗಳ ಧಾತುಗಡಣದ ವೇದಿಗಳ
ತಿಳಿದು ಕಾಲದ ಗತಿಯ ಗಮಕಂ
ಗಳನರಿದು ನಡೆವವರುಗಳು ನಿ
ರ್ಮಳದಲೆಡಹದೆ ಬೆರೆಸಿಕೊಂಬರು ಮುಕ್ತಿ ಮಾರ್ಗವನು (ಉದ್ಯೋಗ ಪರ್ವ, ೪ ಸಂಧಿ, ೩೪ ಪದ್ಯ)

ತಾತ್ಪರ್ಯ:
ಏಳರ ಸಂಖ್ಯೇತವನ್ನು ಉಪಮಾನವನ್ನಾಗಿಸಿ ಮುಕ್ತಿಗೆ ದಾರಿಯನ್ನು ಸನತ್ಸುಜಾತರು ಸೂಚಿಸಿದ್ದಾರೆ. ಲವಣ, ಕಬ್ಬಿನಹಾಲು (ಇಕ್ಷು), ಸುರಾ, ಸರ್ಪಿ, ದಧಿ, ಕ್ಷೀರ, ನೀರು ಇವುಗಳಿರುವ ಏಳು ಸಮುದ್ರಗಳು; ಸಪ್ತ ಮಾತೃಕೆಯರಾದ ಬಾಹ್ಮಿ, ಮಾಹೇಶ್ವರಿ, ವಾರಾಹಿ, ವೈಷ್ಣವಿ, ಇಂದ್ರಾಣಿ, ಕೌಮಾರಿ, ಚಾಮುಂಡಾ; ಏಳು ವಾರಗಳಾದ ಭಾನು, ಸೋಮ, ಮಂಗಳ, ಬುಧ, ಗುರು, ಶುಕ್ರ, ಶನಿ; ಏಳು ಎತ್ತರದ ಪರ್ವತಗಳಾದ ಮಹೇಂದ್ರ, ಮಲಯ, ಸಹ್ಯ, ಶುಕ್ತಿಮತ್, ಋಕ್ಷ, ವಿಂಧ್ಯ, ಪಾರಿಯಾತ್ರ; ಸಪ್ತ ವಿಭಕ್ತಿಗಳು, ಸಪ್ತ ದ್ವೀಪಗಳಾದ ಜಂಬೂ, ಪ್ಲಕ್ಷ, ಶಾಲ್ಮಲಿ, ಕುಶ, ಕ್ರೌಂಚ, ಶಾಕ, ಪುಷ್ಕರ; ಸಪ್ತ ಋಷಿಗಳಾದ ಅತ್ರಿ, ವಸಿಷ್ಠ, ಕಾಶ್ಯಪ, ಗೌತಮ, ಭಾರದ್ವಾಜ, ವಿಶ್ವಾಮಿತ್ರ, ಜಮದಗ್ನಿ; ದೇಹದಲ್ಲಿನ ಏಳು ಧಾತುಗಳಾದ ರಸ, ರಕ್ತ, ಮಾಂಸ, ಮೇಧಸ್ಸು, ಮಜ್ಜೆ, ಅಸ್ಥಿ, ಶುಕ್ರ, ಇವುಗಳ ಕಾಲದ ನಡೆ ರೀತಿಗಳನ್ನು ತಿಳಿದು ಯಾರು ಬಾಳುವರೋ ಅವರು ಮುಕ್ತಿಯ ಮಾರ್ಗಾವನ್ನು ಸೇರುತ್ತಾರೆ ಎಂದು ತಿಳಿಸಿದರು.

ಅರ್ಥ:
ಜಲಧಿ: ಸಮುದ್ರ, ಸಾಗರ; ಮಾತೃಕೆ: ಮಾತೆ, ತಾಯಿ; ವಾರ: ದಿನ; ಗಿರಿ: ಬೆಟ್ಟ; ಕುಲಗಿರಿ: ಎತ್ತರದ ಪರ್ವತಗಳು; ವಿಭಕ್ತಿ:ವ್ಯಾಕರಣದಲ್ಲಿ ಪ್ರಕೃತಿಗೆ ಪ್ರತ್ಯಯವು ಸೇರಿ ಸಿದ್ಧಿಸುವ ಅನ್ವಯ, ಏಳು ಎಂಬ ಸಂಕೇತ ಪದ; ದ್ವೀಪ: ಸಮುದ್ರದಿಂದ ಆವರಿಸಿದ ಭೂಭಾಗ; ಮುನೀಶ್ವರ: ಋಷಿ; ಧಾತು: ಮೂಲವಸ್ತು; ವೇದಿ:ಪಂಡಿತ, ವಿದ್ವಾಂಸ; ತಿಳಿ: ಅರಿತು; ಕಾಲ: ಸಮಯ; ಗತಿ: ಹರಿವು, ವೇಗ; ಗಮಕ: ಕ್ರಮ, ಅಣಿ; ಅರಿ: ತಿಳಿ; ನಡೆ: ಹೆಜ್ಜೆ ಹಾಕು; ನಿರ್ಮಳ: ನೆಮ್ಮದಿ, ನಿರಾಳ; ಎಡಹದೆ: ಬೀಳದೆ, ಮುಗ್ಗರಿಸದೆ; ಬೆರಸು: ಸೇರಿಸು; ಮುಕ್ತಿ: ಮೋಕ್ಷ, ಕೈವಲ್ಯ; ಮಾರ್ಗ: ದಾರಿ;

ಪದವಿಂಗಡಣೆ:
ಜಲಧಿ +ಮಾತೃಕೆ +ವಾರ +ಕುಲಗಿರಿ
ಗಳು+ ವಿಭಕ್ತಿ +ದ್ವೀಪದಂಗಾ
ವಳಿ +ಮುನೀಶ್ವರರುಗಳ +ಧಾತುಗಡಣದ+ ವೇದಿಗಳ
ತಿಳಿದು +ಕಾಲದ +ಗತಿಯ +ಗಮಕಂ
ಗಳನರಿದು +ನಡೆವವರುಗಳು +ನಿ
ರ್ಮಳದಲ್+ಎಡಹದೆ +ಬೆರೆಸಿಕೊಂಬರು +ಮುಕ್ತಿ +ಮಾರ್ಗವನು

ಅಚ್ಚರಿ:
(೧) ೭ನ್ನು ಸೂಚಿಸುವ ಪದಗಳ ಬಳಕೆ – ಜಲಧಿ, ಮಾತೃಕೆ, ವಾರ, ಕುಲಗಿರಿ, ವಿಭಕ್ತಿ, ದ್ವೀಪ, ಮುನೀಶ್ವರ, ಧಾತು

ಪದ್ಯ ೩೨: ಯಾವ ರೀತಿ ಬಾಳುವುದು ಉತ್ತಮ ಮಾರ್ಗ?

ಭೂತವರ್ಗ ಪ್ರಾಣವರ್ಗ ನಿ
ಪಾತವಧ್ವರ ಕೃತ್ಯಗಳ ಸಂ
ಜಾತ ಮುಖವಾದಾವರಣ ಸಂಗತಿಯ ಸೋಹೆಗಳ
ಧಾತು ಮೂಲಾದಿಗಳನರಿದು ಸು
ನೀತಿಯಲ್ಲಿಹಪರವ ಗೆಲುವುದು
ಭೂತಳದೊಳುತ್ತಮವಲೇ ಧೃತರಾಷ್ಟ್ರ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೩೨ ಪದ್ಯ)

ತಾತ್ಪರ್ಯ:
ಈ ಪದ್ಯದಲ್ಲಿ ಐದನ್ನು ಸೂಚಿಸುವ ವಸ್ತುಗಳ ತಿಳುವಳಿಕೆಯ ಬಗ್ಗೆ ತಿಳಿಸಿದ್ದಾರೆ. ಪಂಚಮಹಾಭೂತಗಳಾದ ಪೃಥ್ವಿ, ಅಪ್ಪು, ತೇಜಸ್ಸು, ವಾಯು, ಆಕಾಶ; ಪಂಚ ಪ್ರಾಣಗಳಾದ ಪ್ರಾಣ,ಅಪಾನ, ವ್ಯಾನ, ಉದಾನ, ಸಮಾನ; ಮನುಷ್ಯಯಜ್ಞ, ಬ್ರಹ್ಮಯಜ್ಞ, ಪಿತೃಯಜ್ಞ, ದೇವಯಜ್ಞ, ಭೂತಯಜ್ಞ ಎಂಬ ಐದು ಅಧ್ವರಗಳು; ಸೃಷ್ಟಿ, ಸ್ಥಿತಿ, ಲಯ, ನಿಗ್ರಹ, ಅನುಗ್ರಹ ಎಂಬ ಐದು ಕೃತ್ಯಗಳು; ಪಂಚ ಧಾತುಗಳಾದ ಶಬ್ದ, ಸ್ಪರ್ಶ, ರೂಪ, ರಸ, ಗಂಧ; ಇವನ್ನರಿತು ಒಳ್ಳೆಯ ಮಾರ್ಗವನ್ನನುಸರಿಸಿ ಬಾಳುವುದು ಉತ್ತಮ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ವರ್ಗ: ವಿಭಾಗ, ಗುಂಪು; ಭೂತ: ಐದು ಎಂಬ ಸಂಖ್ಯೆಯ ಸಂಕೇತ, ಮೂಲವಸ್ತು; ಪ್ರಾಣ: ಜೀವ; ನಿಪಾತ:ಕೆಳಕ್ಕೆ ಬೀಳುವುದು; ಅಧ್ವರ: ಯಜ್ಞ; ಕೃತ್ಯ: ಕಾರ್ಯ; ಸಂಜಾತ: ಹುಟ್ಟು; ಮುಖ: ಆನನ; ಆವರಣ: ಮುಸುಕು, ಹೊದಿಕೆ; ಸಂಗತಿ: ಸೇರುವಿಕೆ, ಸಹವಾಸ; ಸೋಹೆ: ಸುಳಿವು, ಸೂಚನೆ; ಧಾತು: ಮೂಲವಸ್ತು, ಖನಿಜ; ಮೂಲ: ಬುಡ; ಆದಿ: ಮುಂತಾದ; ಅರಿ: ತಿಳಿ; ಸುನೀತಿ: ಒಳ್ಳೆಯ ನಡತೆ; ಇಹಪರ: ಈ ಲೋಕ ಮತ್ತು ಪರಲೋಕ; ಗೆಲುವು: ಜಯ; ಭೂತಳ: ಭೂಮಿ; ಉತ್ತಮ: ಶ್ರೇಷ್ಠ; ಕೇಳು: ಆಲಿಸು;

ಪದವಿಂಗಡಣೆ:
ಭೂತವರ್ಗ +ಪ್ರಾಣವರ್ಗ +ನಿ
ಪಾತವ್+ಅಧ್ವರ +ಕೃತ್ಯಗಳ+ ಸಂ
ಜಾತ +ಮುಖವಾದ+ಆವರಣ +ಸಂಗತಿಯ +ಸೋಹೆಗಳ
ಧಾತು +ಮೂಲಾದಿಗಳನ್+ಅರಿದು +ಸು
ನೀತಿಯಲ್+ಇಹಪರವ+ ಗೆಲುವುದು
ಭೂತಳದೊಳ್+ಉತ್ತಮವಲೇ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಭೂತ, ಪ್ರಾಣ, ಅಧ್ವರ, ಕೃತ್ಯ, ಧಾತು ಇವುಗಳ ಪ್ರಭೇದವನ್ನು ತಿಳಿಸುವ ಪದ್ಯ