ಪದ್ಯ ೧೨: ವ್ಯಾಸರೇಕೆ ದುರ್ಯೋಧನನು ಧೃತರಾಷ್ಟ್ರನ ಶತ್ರುವೆಂದು ಹೇಳಿದರು?

ಬಹು ವಿಪತ್ತಿನ ಶರಕೆ ಜೋಡೆಂ
ದಿಹುದಲಾ ಸುವಿವೇಕಗತಿ ನಿ
ರ್ದಹಿಸದೇ ಶೋಕಾಗ್ನಿ ಧರ್ಮದ್ರುಮದ ಬೇರುಗಳ
ಅಹಿತರೇ ಜನಿಸಿದಡೆ ಸುತರೆನ
ಬಹುದೆ ದುರ್ಯೋಧನನು ಹಗೆ ನಿನ
ಗಿಹಪರದ ಸುಖಗತಿಗೆ ಸಾಧನ ಧರ್ಮಸುತನೆಂದ (ಗದಾ ಪರ್ವ, ೧೧ ಸಂಧಿ, ೧೨ ಪದ್ಯ)

ತಾತ್ಪರ್ಯ:
ವ್ಯಾಸರು ತಮ್ಮ ನುಡಿಯನ್ನು ಮುಂದುವರಿಸುತ್ತಾ, ವಿಪತ್ತೆಂಬ ಬಾನಕ್ಕೆ ವಿವೇಕವೆನ್ನುವುದೇ ರಕ್ಶಣೆಯ ಕವಚ. ಶೋಕಾಗ್ನಿಗೆ ತುತ್ತಾದರೆ ಧರ್ಮವೆಮ್ಬ ವೃಕ್ಷದ ಬೇರುಗಳೂ ಉರಿದು ಹೋಗುತ್ತವೆ. ಶತ್ರುಗಳೇ ಸಮ್ತಾನವಾದರೆ ಅವರನ್ನು ಮಕ್ಕಳೆನ್ನಬಹುದೇ? ದುರ್ಯೋಧನನು ನಿನ್ನ ಶತ್ರು. ಈ ಲೋಕ ಪರಲೋಕಗಲ ಸುಖಕ್ಕೆ ಯುಧಿಷ್ಠಿರನೇ ಸಾಧನ ಎಂದು ಬೋಧಿಸಿದರು.

ಅರ್ಥ:
ಬಹು: ಬಹಳ; ವಿಪತ್ತು: ತೊಂದರೆ; ಶರ: ಬಾಣ; ಜೋಡು: ಜೊತೆ; ವಿವೇಕ: ಯುಕ್ತಾಯುಕ್ತ ವಿಚಾರ, ವಿವೇಚನೆ; ಗತಿ: ವೇಗ; ದಹಿಸು: ಸುಡು; ಶೋಕ: ದುಃಖ; ಅಗ್ನಿ: ಬೆಂಕಿ; ದ್ರುಮ: ಮರ, ವೃಕ್ಷ; ಬೇರು: ಬುಡ; ಅಹಿತ: ಶತ್ರು; ಜನಿಸು: ಹುಟ್ಟು; ಸುತ: ಮಕ್ಕಳು; ಹಗೆ: ವೈರಿ; ಇಹಪರ: ಈ ಲೋಕ ಮತ್ತು ಪರಲೋಕ; ಸುಖ: ಸಂತಸ, ನೆಮ್ಮದಿ; ಗತಿ: ಗಮನ, ಸಂಚಾರ; ಸಾಧನ: ಕಾರಣ, ಹೇತು, ನಿಮಿತ್ತ; ಸುತ: ಮಗ;

ಪದವಿಂಗಡಣೆ:
ಬಹು +ವಿಪತ್ತಿನ+ ಶರಕೆ+ ಜೋಡೆಂದ್
ಇಹುದಲಾ +ಸುವಿವೇಕಗತಿ +ನಿ
ರ್ದಹಿಸದೇ +ಶೋಕಾಗ್ನಿ +ಧರ್ಮದ್ರುಮದ +ಬೇರುಗಳ
ಅಹಿತರೇ +ಜನಿಸಿದಡೆ +ಸುತರ್+ಎನ
ಬಹುದೆ +ದುರ್ಯೋಧನನು +ಹಗೆ +ನಿನಗ್
ಇಹಪರದ +ಸುಖಗತಿಗೆ +ಸಾಧನ +ಧರ್ಮಸುತನೆಂದ

ಅಚ್ಚರಿ:
(೧) ಲೋಕ ನೀತಿ – ಅಹಿತರೇ ಜನಿಸಿದಡೆ ಸುತರೆನಬಹುದೆ
(೨) ಯುಧಿಷ್ಠಿರನನ್ನು ಹೊಗಳುವ ಪರಿ – ನಿನಗಿಹಪರದ ಸುಖಗತಿಗೆ ಸಾಧನ ಧರ್ಮಸುತ
(೩) ರೂಪಕದ ಪ್ರಯೋಗ – ವಿಪತ್ತಿನ ಶರಕೆ ಜೋಡೆಂದಿಹುದಲಾ ಸುವಿವೇಕಗತಿ

ಪದ್ಯ ೬೧: ಯುದ್ಧದ ತೀವ್ರತೆ ಹೇಗಿತ್ತು?

ಸೆಳೆದು ಹೊಯ್ದಾಡಿದುದು ಚಾತು
ರ್ಬಲ ಛಡಾಳಿಸಿ ವಿವಿಧ ಶಸ್ತ್ರಾ
ವಳಿಯ ಧಾರಾಸಾರದಲಿ ಹೊನಲೆದ್ದುದರುಣಜಲ
ಉಳಿದರಿಬ್ಬರು ದೊರೆಗಳೆನೆ ಮು
ಮ್ಮುಳಿತವಾದುದು ಸೇನೆ ನೃಪತಿಯ
ಹಳಚಿದನು ಮಾದ್ರೇಶನಾವೆಡೆ ಧರ್ಮಸುತನೆನುತ (ಶಲ್ಯ ಪರ್ವ, ೨ ಸಂಧಿ, ೬೧ ಪದ್ಯ)

ತಾತ್ಪರ್ಯ:
ಚತುರಂಗ ಸೈನ್ಯವು ಆಯುಧಗಳನ್ನೆಳೆದು ವೀರಾವೇಶದಿಂದ ಹೋರಾಡಲು, ರಕ್ತದ ತೊರೆ ಹರಿಯಿತು. ಧರ್ಮಜ ಶಲ್ಯರನ್ನು ಬಿಟ್ಟು ಉಳಿದ ಸೈನ್ಯವು ಇಲ್ಲವಾಗಲು, ಶಲ್ಯನು ಧರ್ಮಜನನ್ನು ಹುಡುಕುತ್ತಾ ಹೋದನು.

ಅರ್ಥ:
ಸೆಳೆ: ಎಳೆತ; ಹೊಯ್ದಾಡು: ಹೋರಾಡು; ಚಾತುರ್ಬಲ: ಚತುರಂಗ ಸೈನ್ಯ; ಛಡಾಳಿಸು: ಹೆಚ್ಚಾಗು; ವಿವಿಧ: ಹಲವಾರು; ಶಸ್ತ್ರ: ಆಯುಧ; ಆವಳಿ: ಸಾಲು; ಧಾರಾಸಾರ: ಒಂದೇ ಸಮನಾಗಿ ಸುರಿವ ಮಳೆ; ಹೊನಲು: ಪ್ರವಾಹ, ನೀರೋಟ; ಅರುಣಜಲ: ಕೆಂಪಾದ ನೀರು (ರಕ್ತ); ಉಳಿದ: ಮಿಕ್ಕ; ದೊರೆ: ರಾಜ; ಮುಮ್ಮುಳಿತವಾಗು: ರೂಪಗೆಟ್ಟು ನಾಶವಾಗು; ನೃಪತಿ: ರಾಜ; ಹಳಚು: ತಾಗು, ಬಡಿ; ಮಾದ್ರೇಶ: ಶಲ್ಯ; ಸುತ: ಮಗ;

ಪದವಿಂಗಡಣೆ:
ಸೆಳೆದು +ಹೊಯ್ದಾಡಿದುದು +ಚಾತು
ರ್ಬಲ +ಛಡಾಳಿಸಿ +ವಿವಿಧ +ಶಸ್ತ್ರಾ
ವಳಿಯ +ಧಾರಾಸಾರದಲಿ +ಹೊನಲೆದ್ದುದ್+ಅರುಣಜಲ
ಉಳಿದರಿಬ್ಬರು +ದೊರೆಗಳ್+ಎನೆ +ಮು
ಮ್ಮುಳಿತವಾದುದು +ಸೇನೆ +ನೃಪತಿಯ
ಹಳಚಿದನು +ಮಾದ್ರೇಶನಾವೆಡೆ +ಧರ್ಮಸುತನೆನುತ

ಅಚ್ಚರಿ:
(೧) ಯುದ್ಧದ ತೀವ್ರತೆ – ವಿವಿಧ ಶಸ್ತ್ರಾವಳಿಯ ಧಾರಾಸಾರದಲಿ ಹೊನಲೆದ್ದುದರುಣಜಲ

ಪದ್ಯ ೪೬: ಶಲ್ಯನು ಧರ್ಮಜನಿಗೆ ಏನು ಹೇಳಿದ?

ಮುರಿದುದೈ ಚತುರಂಗಬಲ ನಿ
ನ್ನಿರಿತವಾವೆಡೆ ಧರ್ಮಸುತ ಕೈ
ಮರೆದಲಾ ಕಲಿಭೀಮಪಾರ್ಥರ ಬಿಂಕ ಬೀತುದಲಾ
ಮೆರೆಯಿ ಮದವನು ಮಾವತನವದು
ಹೊರಗಿರಲಿ ಸಹದೇವ ನಕುಲರ
ನರಿಯಬಹುದಿನ್ನೆನುತ ಹೊಕ್ಕನು ಶಲ್ಯ ಪರಬಲವ (ಶಲ್ಯ ಪರ್ವ, ೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧರ್ಮಜ, ನಿನ್ನ ಚತುರಂಗ ಬಲವು ಮುರಿದು ಹೋಯಿತು. ಇನ್ನು ನಿನ್ನ ಇರಿತದ ಚಾತುರ್ಯವೆಲ್ಲಿದೆ ತೋರಿಸು? ಭೀಮಾರ್ಜುನರ ಬಿಂಕ ಹಾರಿಹೋಯಿತು. ವೀರರೆಂಬ ಮದವನ್ನು ಬಿಟ್ಟು ಬಿಡು. ಸಹದೇವ ನಕುಲರು ನನ್ನ ಸೋದರವಾಮತ

ಅರ್ಥ:
ಮುರಿ: ಸೀಳು; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಇರಿತ: ತಿವಿ, ಚುಚ್ಚು; ಸುತ: ಮಗ; ಕೈ: ಹಸ್ತ; ಮರೆ: ನೆನಪಿನಿಂದ ದೂರ ಸರಿ; ಕಲಿ: ಶೂರ; ಬಿಂಕ: ಗರ್ವ, ಜಂಬ; ಬೀತುದು: ಮುಗಿಯಿತು, ಕ್ಷಯವಾಯಿತು; ಮೆರೆ: ಹೊಳೆ; ಮದ: ಗರ್ವ; ಮಾವ: ತಾಯಿಯ ತಮ್ಮ; ಹೊರಗೆ: ಆಚೆ; ಅರಿ: ತಿಳಿ; ಹೊಕ್ಕು: ಸೇರು; ಪರಬಲ: ವೈರಿ ಸೈನ್ಯ;

ಪದವಿಂಗಡಣೆ:
ಮುರಿದುದೈ+ ಚತುರಂಗ+ಬಲ +ನಿನ್
ಇರಿತವಾವೆಡೆ+ ಧರ್ಮಸುತ +ಕೈ
ಮರೆದಲಾ +ಕಲಿ+ಭೀಮ+ಪಾರ್ಥರ +ಬಿಂಕ +ಬೀತುದಲಾ
ಮೆರೆಯಿ +ಮದವನು +ಮಾವತನವದು
ಹೊರಗಿರಲಿ +ಸಹದೇವ +ನಕುಲರನ್
ಅರಿಯಬಹುದಿನ್ನೆನುತ +ಹೊಕ್ಕನು +ಶಲ್ಯ +ಪರಬಲವ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮೆರೆಯಿ ಮದವನು ಮಾವತನವದು

ಪದ್ಯ ೩೦: ಶಲ್ಯನು ಧರ್ಮಜನ ಮೇಲೆ ಬಿಟ್ಟ ಬಾಣಗಳು ಏನಾದವು?

ಹಳಚಿದನು ದಳಪತಿಯನವನಿಪ
ತಿಲಕನೆಚ್ಚನು ನೂರು ಶರದಲಿ
ಕಳಚಿ ಕಯ್ಯೊಡನೆಚ್ಚು ಬೇಗಡೆಗಳೆದನವನಿಪನ
ಅಳುಕಲರಿವುದೆ ಸಿಡಿಲ ಹೊಯ್ಲಲಿ
ಕುಲಕುಧರವೀ ಧರ್ಮಸುತನ
ಗ್ಗಳಿಕೆಗುಪ್ಪಾರತಿಗಳಾದುವು ಶಲ್ಯನಂಬುಗಳು (ಶಲ್ಯ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ಧರ್ಮಜನು ಶಲ್ಯನ ಮೇಲೆ ನೂರು ಬಾಣಗಳನನ್ನು ಬಿಡಲು, ಶಲ್ಯನು ಅವನ್ನು ಕತ್ತರಿಸಿ ಅರಸನ ಮೇಲೆ ಬಾಣಗಳನ್ನು ಬಿಟ್ಟನು. ಸಿಡಿಲಿಗೆ ಕುಲಪರ್ವತವು ಅಳುಕುವುದೇ ಧರ್ಮಜನ ಪರಾಕ್ರಮಕ್ಕೆ ಎತ್ತಿದ ಉಪ್ಪಾರತಿಗಳಂತೆ ಶಲ್ಯನ ಬಾಣಗಳು ನಿಷ್ಫಲವಾದವು.

ಅರ್ಥ:
ಹಳಚು: ತಾಗು, ಬಡಿ; ದಳಪತಿ: ಸೇನಾಧಿಪತಿ; ಅವನಿಪ: ರಾಜ; ತಿಲಕ: ಶ್ರೇಷ್ಠ; ಎಚ್ಚು: ಬಾಣ ಪ್ರಯೋಗ ಮಾಡು; ನೂರು: ಶತ; ಶರ: ಬಾಣ; ಕಳಚು: ಬೇರ್ಪಡಿಸು, ಬೇರೆಮಾಡು; ಕೈ: ಹಸ್ತ; ಒಡ್ಡು: ನೀಡು; ಬೇಗಡೆ: ಹೊಳಪಿನ ತಗಡು; ಅಳುಕು: ಹೆದರು; ಅರಿ: ತಿಳಿ; ಸಿಡಿಲು: ಅಶನಿ; ಹೊಯ್ಲು: ಹೊಡೆ; ಕುಲಕುಧರ: ಕುಲಪರ್ವತ; ಸುತ: ಮಗ; ಅಗ್ಗಳಿಕೆ: ಶ್ರೇಷ್ಠ; ಉಪ್ಪಾರತಿ: ಉಪ್ಪನ್ನು ನಿವಾಳಿಸಿ ದೃಷ್ಟಿ ತೆಗೆಯುವುದು; ಅಂಬು: ಬಾಣ;

ಪದವಿಂಗಡಣೆ:
ಹಳಚಿದನು +ದಳಪತಿಯನ್+ಅವನಿಪ
ತಿಲಕನ್+ಎಚ್ಚನು +ನೂರು +ಶರದಲಿ
ಕಳಚಿ +ಕಯ್ಯೊಡನ್+ಎಚ್ಚು +ಬೇಗಡೆಗಳೆದನ್+ಅವನಿಪನ
ಅಳುಕಲ್+ಅರಿವುದೆ +ಸಿಡಿಲ +ಹೊಯ್ಲಲಿ
ಕುಲಕುಧರವೀ +ಧರ್ಮಸುತನ್
ಅಗ್ಗಳಿಕೆಗ್+ಉಪ್ಪಾರತಿಗಳಾದುವು +ಶಲ್ಯನ್+ಅಂಬುಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ -ಅಳುಕಲರಿವುದೆ ಸಿಡಿಲ ಹೊಯ್ಲಲಿ ಕುಲಕುಧರವೀ
(೨) ಅವನಿಪತಿಲಕ, ಧರ್ಮಸುತ – ಯುಧಿಷ್ಠಿರನನ್ನು ಕರೆದ ಪರಿ

ಪದ್ಯ ೨೮: ದ್ರೋಣನು ಭಟ್ಟರನ್ನು ಯಾರ ಪಾಳೆಯಕ್ಕೆ ಕಳುಹಿಸಿದನು?

ಮುಂದೆ ಶಕಟವ್ಯೂಹದಲಿ ನಡೆ
ತಂದು ನಿಮ್ದನು ದ್ರೋಣ ನಿಜಬಲ
ದಂದವನು ನೆರೆನೋಡಿ ನೋಡಿ ಕಿರೀಟವನು ತೂಗಿ
ಇಂದು ಗೆಲಿದರೆ ಧರ್ಮಸುತನವ
ರಿಂದುಕುಲದಗ್ಗಳರು ಬರಹೇ
ಳೆಂದು ಭಟ್ಟರನಟ್ಟಿದನು ಪಾಂಡವರ ಪಾಳಯಕೆ (ದ್ರೋಣ ಪರ್ವ, ೯ ಸಂಧಿ, ೨೮ ಪದ್ಯ)

ತಾತ್ಪರ್ಯ:
ತಾನು ರಚಿಸಿದ ಸೇನೆಯ ಸಂಕೀರ್ಣ ವ್ಯೂಹಗಳ ಮುಂಭಾಗದಲ್ಲಿದ್ದ ಶಕಟವ್ಯೂಹದ ಮುಂದೆ ಬಮ್ದು ಸೈನ್ಯದ ಅಂದವನ್ನು ನೋಡಿ ತೃಪ್ತನಾಗಿ ದ್ರೋಣನು ತಲೆದೂಗಿದನು. ಭಟ್ಟರನ್ನು ಕರೆದು, ಇಂದು ಯುದ್ಧದಲ್ಲಿ ಗೆದ್ದರೆ ಪಾಂಡವರೇ ಚಂದ್ರವಂಶದಲ್ಲಿ ಅಗ್ರಗಣ್ಯರು. ಯುದ್ಧಕ್ಕೆ ಬರಹೇಳಿ ಎಂದು ಪಾಂಡವರ ಪಾಳೆಯಕ್ಕೆ ಕಳಿಸಿದನು.

ಅರ್ಥ:
ಮುಂದೆ: ಎದುರು; ಶಕಟ: ರಥ, ಬಂಡಿ; ವ್ಯೂಹ: ಗುಂಪು; ನಡೆ: ಚಲಿಸು; ನಿಂದು: ಸ್ಥಿರವಾಗಿರು; ಬಲ: ಶಕ್ತಿ; ಅಂದ: ಸೊಗಸು; ನೆರೆ: ಗುಂಪು; ನೋಡು: ವೀಕ್ಷಿಸು; ಕಿರೀಟ: ಮುಕುಟ; ತೂಗು: ಅಲ್ಲಾಡಿಸು; ಗೆಲಿ: ಜಯಿಸು; ಸುತ: ಮಗ; ಇಂದು: ಚಂದ್ರ; ಕುಲ: ವಂಶ; ಅಗ್ಗಳ: ಶ್ರೇಷ್ಠ; ಬರಹೇಳು: ಕರೆ; ಭಟ್ಟ: ಸೈನಿಕ; ಅಟ್ಟು: ಧಾವಿಸು; ಪಾಳಯ: ಬಿಡಾರ;

ಪದವಿಂಗಡಣೆ:
ಮುಂದೆ +ಶಕಟವ್ಯೂಹದಲಿ +ನಡೆ
ತಂದು +ನಿಂದನು +ದ್ರೋಣ +ನಿಜಬಲದ್
ಅಂದವನು +ನೆರೆ+ನೋಡಿ +ನೋಡಿ +ಕಿರೀಟವನು +ತೂಗಿ
ಇಂದು +ಗೆಲಿದರೆ +ಧರ್ಮಸುತನ್+ಅವರ್
ಇಂದುಕುಲದ್+ಅಗ್ಗಳರು +ಬರಹೇ
ಳೆಂದು +ಭಟ್ಟರನ್+ಅಟ್ಟಿದನು +ಪಾಂಡವರ +ಪಾಳಯಕೆ

ಅಚ್ಚರಿ:
(೧) ತಂದು, ಇಂದು, ಎಂದು – ಪ್ರಾಸ ಪದಗಳು
(೨) ಇಂದು ಪದದ ಬಳಕೆ – ಇಂದು ಗೆಲಿದರೆ ಧರ್ಮಸುತನವರಿಂದುಕುಲದಗ್ಗಳರು

ಪದ್ಯ ೩೯: ಯಕ್ಷ ಧರ್ಮಜನ ಸಂವಾದ – ೩

ನಯವಿದನೆ ಕೇಳಾವನೈ ಕ್ಷ
ತ್ರಿಯನು ವಿಪ್ರರೊಳಾವನೈ ಶ್ರೋ
ತ್ರಿಯನು ಸುಜನರೊಳಾವನೈ ಮಹಪುರುಷನೆಂಬುವನು
ನಿಯತಧೀರನದಾರು ದೇವ
ಪ್ರಿಯನದಾವನು ಕಠಿಣಕಷ್ಟಾ
ಶ್ರಯನದಾವನು ಧರ್ಮಸುತ ಹೇಳೆಂದನಾ ಖಚರ (ಅರಣ್ಯ ಪರ್ವ, ೨೬ ಸಂಧಿ, ೩೯ ಪದ್ಯ)

ತಾತ್ಪರ್ಯ:
ರಾಜನೀತಿಯನ್ನು ಬಲ್ಲವನೇ ಹೇಳು, ಕ್ಷತ್ರಿಯನು ಯಾರು? ಬ್ರಾಹಣರಲ್ಲಿ ಶ್ರೋತ್ರಿಯನಾರು? ಸಜ್ಜನರಲ್ಲಿ ಮಹಾಪುರುಷನಾರು? ಧೀರನು ಯಾರು? ದೇವತೆಗಳಿಗೆ ಪ್ರಿಯನಾದವನಾರು ಎಂದು ಕೇಳಿದನು.

ಅರ್ಥ:
ನಯ: ನುಣುಪು, ಮೃದುತ್ವ, ಅಂದ; ಕೇಳು: ಆಲಿಸು; ಕ್ಷತ್ರಿಯ: ನಾಲ್ಕು ವರ್ಣಗಳಲ್ಲಿ ಒಂದು; ವಿಪ್ರ: ಬ್ರಾಹ್ಮಣ; ಶ್ರೋತ್ರಿ: ಬ್ರಾಹ್ಮಣ; ಸುಜನ: ಒಳ್ಳೆಯ ವ್ಯಕ್ತಿ; ಮಹಪುರುಷ: ಶ್ರೇಷ್ಠ; ನಿಯತ: ನಿಶ್ಚಿತವಾದುದು; ಧೀರ: ಪರಾಕ್ರಮಿ; ದೇವ: ದೇವತೆ, ಸುರರು; ಪ್ರಿಯ: ಹಿತವಾದುದು; ಕಠಿಣ: ಬಿರುಸು, ಕಷ್ಟಕರವಾದ; ಆಶ್ರಯ: ಆಸರೆ, ಅವಲಂಬನ; ಹೇಳು: ತಿಳಿಸು; ಖಚರ: ಯಕ್ಷ, ಗಂಧರ್ವ;

ಪದವಿಂಗಡಣೆ:
ನಯವಿದನೆ+ ಕೇಳ್+ಆವನೈ +ಕ್ಷ
ತ್ರಿಯನು +ವಿಪ್ರರೊಳ್+ಆವನೈ+ ಶ್ರೋ
ತ್ರಿಯನು +ಸುಜನರೊಳ್+ಆವನೈ +ಮಹಪುರುಷನ್+ಎಂಬುವನು
ನಿಯತ+ಧೀರನದ್+ಆರು +ದೇವ
ಪ್ರಿಯನದ್+ಆವನು +ಕಠಿಣ+ಕಷ್ಟಾ
ಶ್ರಯನದ್+ಆವನು +ಧರ್ಮಸುತ +ಹೇಳೆಂದನಾ +ಖಚರ

ಅಚ್ಚರಿ:
(೧) ಕ್ಷತ್ರಿಯ, ಶ್ರೋತ್ರಿಯ – ಪ್ರಾಸ ಪದಗಳ ಬಳಕೆ

ಪದ್ಯ ೩೩: ಆಗಸವಾಣಿಯು ಯಾರೆಂದು ಪರಿಚಯಿಸಿಕೊಂಡಿತು?

ಬಿಸುಟನುದಕವನಾ ನುಡಿಯನಾ
ಲಿಸಿದ ನಾರೈ ನೀನು ನಿನಗಾ
ಗಸದಲಿರವೇನಸುರನೋ ಕಿನ್ನರನೊ ನಿರ್ಜರನೊ
ಉಸುರೆನಲು ತಾಂ ಯಕ್ಷನೀಸಾ
ರಸವು ನನ್ನದು ನಿನ್ನ ತಮ್ಮದಿ
ರಸುವನೆಳೆದವ ನಾನು ಕೇಳೈ ಧರ್ಮಸುತಯೆಂದ (ಅರಣ್ಯ ಪರ್ವ, ೨೬ ಸಂಧಿ, ೩೩ ಪದ್ಯ)

ತಾತ್ಪರ್ಯ:
ಧರ್ಮಜನು ಆಗಸವಾಣಿಯನ್ನು ಕೇಳಿದ ಮೇಲೆ ತನ್ನ ಕೈಯಲ್ಲಿದ್ದ ನೀರನ್ನು ಚೆಲ್ಲಿದನು, ಆಗಸದ ಮಾತಿಗೆ ಉತ್ತರಿಸುತ್ತಾ, ನೀನು ಯಾರು? ಆಕಾಶದಲ್ಲೇಕಿರುವೆ? ನೀನು ರಾಕ್ಷಸನೋ, ಕಿನ್ನರನೋ, ದೇವತೆಯೋ ಹೇಳೆ ಎಂದು ಕೇಳಲು, ಆಗಸ ವಾಣಿಯು, ನಾನು ಯಕ್ಷ, ಈ ಸರೋವರ ನನ್ನದು, ನಿನ್ನ ತಮ್ಮಂದಿರ ಪ್ರಾಣವನ್ನು ತೆಗೆದವನು ನಾನೇ ಎಂದು ಉತ್ತರಿಸಿತು.

ಅರ್ಥ:
ಬಿಸುಟು: ಹೊರಹಾಕು; ನುಡಿ: ಮಾತು; ಆಲಿಸು: ಕೇಳು; ಆಗಸ: ಅಭ್ರ; ಅಸುರ: ರಾಕ್ಷಸ; ಕಿನ್ನರ: ದೇವತೆಗಳ ಒಂದು ವರ್ಗ; ನಿರ್ಜರ: ದೇವತೆ; ಉಸುರು: ಹೇಳು; ಸಾರಸ: ಸರೋವರ; ಅಸು: ಪ್ರಾಣ; ಎಳೆ: ತನ್ನ ಕಡೆಗೆ ಸೆಳೆದುಕೊ; ಕೇಳು: ಆಲಿಸು; ಸುತ: ಪುತ್ರ;

ಪದವಿಂಗಡಣೆ:
ಬಿಸುಟನ್+ಉದಕವನ್+ಆ+ ನುಡಿಯನ್
ಆಲಿಸಿದನ್ + ಆರೈ +ನೀನು+ ನಿನಗ್
ಆಗಸದಲ್+ಇರವ್+ಏನ್+ಅಸುರನೋ +ಕಿನ್ನರನೊ+ ನಿರ್ಜರನೊ
ಉಸುರೆನಲು+ ತಾಂ +ಯಕ್ಷನ್+ಈ+ಸಾ
ರಸವು +ನನ್ನದು +ನಿನ್ನ +ತಮ್ಮದಿರ್
ಅಸುವನ್+ಎಳೆದವ+ ನಾನು +ಕೇಳೈ +ಧರ್ಮಸುತಯೆಂದ

ಅಚ್ಚರಿ:
(೧) ಹೇಳು ಎನಲು ಉಸುರು ಪದದ ಬಳಕೆ
(೨) ನೊ ಪದದ ಬಳಕೆ – ಅಸುರನೊ, ಕಿನ್ನರನೊ, ನಿರ್ಜರನೊ

ಪದ್ಯ ೨೭: ಕೊನೆಯದಾಗಿ ಕೊಳದ ಬಳಿಗೆ ಯಾರು ಬಂದರು?

ದಡದಡಿಸಿ ಕೊಳನಿಂದ ಹೊರಗಡಿ
ಯಿಡುತ ಬಳಲಿದನನಿಲಸುತನವ
ರೊಡನೆ ಮೈಯಿಕ್ಕಿದನು ಕಳಚಿದ ನೀಲಗಿರಿಯಂತೆ
ಅಡಿಗೆಡೆದನಾ ಭೀಮನಿತ್ತಲು
ಕಡುನಿರೋಧವ ಹಿಡಿದು ತಾನೇ
ನಡೆದು ಬಂದನು ಧರ್ಮಸುತನಾ ಕೊಳನ ಪಥವಿಡಿದು (ಅರಣ್ಯ ಪರ್ವ, ೨೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ನೀರನ್ನು ಕುಡಿದ ಭೀಮನು ಕೊಳದಿಂದ ಹೊರಗೆ ಬಂದು ದಡಕ್ಕೆ ಹತ್ತುತ್ತಾ, ಬಳಲಿ ಅರ್ಜುನ ನಕುಲ ಸಹದೇವರೊಡನೆ ದೊಡ್ಡ ಬೆಟ್ಟದಂತೆ ನೆಲಕ್ಕೆ ಬಿದ್ದನು. ಇತ್ತ ಬಹಳ ದುಃಖಿತನಾಗಿ ಧರ್ಮಜನು ತಾನೆ ಕೊಳದ ಬಳಿಗೆ ನಡೆದುಕೊಂಡು ಬಂದನು.

ಅರ್ಥ:
ದಡ: ಬೇಗನೆ, ಜೋರಾಗಿ; ಕೊಳ: ಸರೋವರ; ಹೊರಗೆ: ಆಚೆ; ಬಳಲು: ಆಯಾಸ; ಅನಿಲಸುತ: ವಾಯುಪುತ್ರ; ಒಡನೆ: ಜೊತೆ; ಮೈಯಿಕ್ಕು: ಕೆಳಕ್ಕೆ ಬೀಳು; ಕಳಚು: ಬೇರ್ಪಡಿಸು, ಬೇರೆಮಾಡು; ನೀಲಗಿರಿ: ದೊಡ್ಡ ಬೆಟ್ಟ; ಅಡಿ: ಹೆಜ್ಜೆ; ಕೆಡಹು: ಬೀಳು, ಕುಸಿ; ಕಡು: ಬಹಳ; ನಿರೋಧ: ನಿರಾಶೆ, ವ್ಯಥೆ; ಹಿಡಿ: ಗ್ರಹಿಸು; ನಡೆ: ಚಲಿಸು; ಬಂದು: ಆಗಮಿಸು; ಸುತ: ಮಗ; ಕೊಳ: ಸರೋವರ; ಪಥ: ದಾರಿ;

ಪದವಿಂಗಡಣೆ:
ದಡದಡಿಸಿ +ಕೊಳನಿಂದ +ಹೊರಗ್+ಅಡಿ
ಯಿಡುತ +ಬಳಲಿದನ್+ಅನಿಲಸುತನ್+ಅವ
ರೊಡನೆ +ಮೈಯಿಕ್ಕಿದನು +ಕಳಚಿದ +ನೀಲಗಿರಿಯಂತೆ
ಅಡಿಗೆಡೆದನಾ +ಭೀಮನ್+ಇತ್ತಲು
ಕಡುನಿರೋಧವ +ಹಿಡಿದು +ತಾನೇ
ನಡೆದು +ಬಂದನು +ಧರ್ಮಸುತನಾ +ಕೊಳನ +ಪಥವಿಡಿದು

ಅಚ್ಚರಿ:
(೧) ಉಪಮಾನದ ಪ್ರಯೋಗ – ಅನಿಲಸುತನವರೊಡನೆ ಮೈಯಿಕ್ಕಿದನು ಕಳಚಿದ ನೀಲಗಿರಿಯಂತೆ

ಪದ್ಯ ೯: ದ್ರೌಪದಿಯು ದುರ್ಯೋಧನನನ್ನು ಹೇಗೆ ಹಂಗಿಸಿದಳು?

ಈ ವಿಪತ್ತಿನ ನಿಮ್ಮಡಿಯ ಸಂ
ಭಾವಿಸುವರೆಮಗಾದ ವಸ್ತುಗ
ಳೀ ವಿಧಿಗಳೇಕೆಮ್ಮ ಬಾಳಿಕೆಯೆಂದು ದುಗುಡದಲಿ
ದೇವನಿರ್ಪನು ಧರ್ಮಸುತನಿ
ನ್ನಾವುದುಚಿತಾನುಚಿತವೆಂಬುದ
ಭಾವನವರೇ ಬಲ್ಲಿರೆಂದಳು ದ್ರೌಪದಾ ದೇವಿ (ಅರಣ್ಯ ಪರ್ವ, ೨೨ ಸಂಧಿ, ೯ ಪದ್ಯ)

ತಾತ್ಪರ್ಯ:
ಇಂತಹ ವಿಪತ್ತಿಗೆ ಸಿಕ್ಕಿರುವ ತಮ್ಮ ಪಾದಗಳಿಗೆ ಉಪಚರಿಸೋಣ ವೆಂದರೆ ನಮಗೆ ದೊರಕುವವು ಇಂತಹ ವಸ್ತುಗಳೇ, ಉಪಚರಿಸಲು ಸಾಧ್ಯವಾಗದಿರುವ ನಮ್ಮ ಜೀವನವನ್ನು ಸುಡಬೇಕು ಎಂದು ಧರ್ಮಜನು ದುಃಖಿಸುತ್ತಿದ್ದಾನೆ. ಯಾವುದು ಉಚಿತ ಯಾವುದು ಅನುಚಿತವೆಂಬುದನ್ನು ಭಾವನವರೇ, ನೀವೇ ಬಲ್ಲಿರಿ ಎಂದು ಹೇಳಿ ದ್ರೌಪದಿಯು ದುರ್ಯೋಧನನನ್ನು ಹಂಗಿಸಿದಳು.

ಅರ್ಥ:
ವಿಪತ್ತು: ತೊಂದರೆ; ಅಡಿ: ಪಾದ; ಸಂಭಾವಿಸು: ಉಂಟಾಗು; ವಸ್ತು: ಪದಾರ್ಥ, ದ್ರವ್ಯ; ವಿಧಿ: ನಿಯಮ; ಬಾಳಿಕೆ: ಜೀವನ; ದುಗುಡ: ದುಃಖ; ದೇವ: ಭಗವಂತ; ಸುತ: ಮಗ; ಉಚಿತ: ಸರಿಯಾದ; ಅನುಚಿತ: ಸರಿಯಲ್ಲದ; ಭಾವ: ಗಂಡನ ತಮ್ಮ; ಬಲ್ಲಿರಿ: ತಿಳಿದಿರುವಿರಿ;

ಪದವಿಂಗಡಣೆ:
ಈ +ವಿಪತ್ತಿನ +ನಿಮ್ಮಡಿಯ +ಸಂ
ಭಾವಿಸುವರ್+ಎಮಗಾದ +ವಸ್ತುಗಳ್
ಈ+ ವಿಧಿಗಳೇಕ್+ಎಮ್ಮ+ ಬಾಳಿಕೆಯೆಂದು +ದುಗುಡದಲಿ
ದೇವನಿರ್ಪನು +ಧರ್ಮಸುತನಿನ್
ಆವುದ್+ಉಚಿತ+ಅನುಚಿತವ್+ಎಂಬುದ
ಭಾವನವರೇ+ ಬಲ್ಲಿರೆಂದಳು +ದ್ರೌಪದಾ +ದೇವಿ

ಅಚ್ಚರಿ:
(೧) ಉಚಿತ, ಅನುಚಿತ – ವಿರುದ್ಧ ಪದಗಳು

ಪದ್ಯ ೫೫: ದ್ಯೂತದಲ್ಲಿ ಯಾರು ಗೆದ್ದರೆಂದು ಶಕುನಿ ಬೊಬ್ಬಿರಿದನು?

ದಾಯವೇ ಮಝ ಪೂತು ದುಗತಿಗೆ
ನಾಯಸವಲೇ ಚೌಕವೊಂದೇ
ಕಾಯಲಾಗದೆ ಹಾಯ್ಕು ಹಾಕೆಂದೊದರಿ ಗರ್ಜಿಸಿದ
ರಾಯ ಸೋತನು ಧರ್ಮಸುತ ಕುರು
ರಾಯ ಗೆಲಿದನು ಕಟ್ಟು ಗುಡಿಯನು
ರಾಯ ನೂರೊಳಗೆಂದು ಮಿಗೆ ಬೊಬ್ಬಿರ್ದನಾ ಶಕುನಿ (ಸಭಾ ಪರ್ವ, ೧೭ ಸಂಧಿ, ೫೫ ಪದ್ಯ)

ತಾತ್ಪರ್ಯ:
ಶಕುನಿಯು ಧರ್ಮರಾಯನಿಗೆ ಏನು ಲೆಕ್ಕ ಧರ್ಮಜ, ಭಲೇ ದುಗ ಬೇಕೊ, ಇತ್ತಿಗ ಬೇಕೋ, ಕೇಳಿದ ಗರವು ಆಯಾಸವಿಲ್ಲದೇ ಬೀಳುತ್ತದೆ, ದಾಳಗಳನ್ನು ಹಾಕು ಎಂದು ಶಕುನಿಯು ಗರ್ಜಿಸಿದನು. ಆಟವು ಮುಂದುವರೆಯಲು, ಧರ್ಮರಾಜನು ಸೋತ ದುರ್ಯೋಧನನು ಗೆದ್ದನು, ಹಸ್ತಿನಾಪುರದಲ್ಲಿ ವಿಜಯಧ್ವಜವನ್ನು ಏರಿಸಿ ಎಂದು ಶಕುನಿಯು ವಿಜಯೋತ್ಸಾಹದಿಂದ ಗರ್ಜಿಸಿದನು.

ಅರ್ಥ:
ದಾಯ: ಪಗಡೆಯಾಟದಲ್ಲಿ ಉರುಳಿಸುವ ಗರ; ಮಝ: ಕೊಂಡಾಟದ ಒಂದು ಮಾತು; ಪೂತು: ಭಲೆ; ದುಗ: ಎರಡು, ಪಗಟೆಯಾಟದ ಒಂದು ಗರ; ಆಯಾಸ: ಶ್ರಮವಿಲ್ಲದೆ; ಚೌಕ:ನಾಲ್ಕು; ಕಾಯ: ಪಗಡೆ ಆಟದ ಸಾಧನ; ಹಾಯ್ಕು: ಹೂಡು; ಹಾಕು: ಬೀಳಿಸು; ಒದರು: ಜೋರಾಗಿ ಹೇಳು; ಗರ್ಜಿಸು: ಆರ್ಭಟಿಸು; ರಾಯ: ರಾಜ; ಸೋಲು: ಪರಾಭವ; ಗೆಲಿದ: ಜಯಗಳಿಸಿದ; ಕಟ್ಟು: ಬಂಧಿಸು; ಗುಡಿ: ಧ್ವಜ, ಬಾವುಟ; ಊರು: ಪಟ್ಟಣ; ಮಿಗೆ: ಅಧಿಕ; ಬೊಬ್ಬಿರಿದ: ಗರ್ಜಿಸಿದ;

ಪದವಿಂಗಡಣೆ:
ದಾಯವೇ+ ಮಝ +ಪೂತು +ದುಗತಿಗೆನ್
ಆಯಸವಲೇ +ಚೌಕವೊಂದೇ
ಕಾಯಲ್+ಆಗದೆ +ಹಾಯ್ಕು +ಹಾಕೆಂದ್+ಒದರಿ +ಗರ್ಜಿಸಿದ
ರಾಯ +ಸೋತನು +ಧರ್ಮಸುತ +ಕುರು
ರಾಯ +ಗೆಲಿದನು+ ಕಟ್ಟು +ಗುಡಿಯನು
ರಾಯನ್+ಊರೊಳಗೆಂದು+ ಮಿಗೆ +ಬೊಬ್ಬಿರ್ದನಾ +ಶಕುನಿ

ಅಚ್ಚರಿ:
(೧) ರಾಯ – ೩-೬ ಸಾಲಿನ ಮೊದಲ ಪದ
(೨) ಸೋಲು, ಗೆಲುವು – ವಿರುದ್ಧ ಪದಗಳ ಬಳಕೆ
(೩) ಬೇಗ ಹೂಡು ಎಂದು ಹೇಳಲು – ಹಾಯ್ಕು ಹಾಕೆಂದೊದರಿ ಗರ್ಜಿಸು
(೪) ಜೋರಾಗಿ ಹೇಳುವುದನ್ನು ವಿವರಿಸುವ ಶಬ್ದಗಳು – ಒದರು, ಗರ್ಜಿಸು, ಬೊಬ್ಬಿರ್ದು