ಪದ್ಯ ೫೬: ಶಲ್ಯನು ಧರ್ಮಜನನ್ನು ಹೇಗೆ ಕೆಣಕಿದನು?

ಬರಿಯ ಬೊಬ್ಬಾಟವೊ ಶರಾವಳಿ
ಯಿರಿಗೆಲಸವೇನುಂಟೊ ಧರಣಿಯ
ಲೆರಕ ನಿಮ್ಮೈವರಿಗೆ ಗಡ ದ್ರೌಪದಿಗೆ ಸಮವಾಗಿ
ಹೊರಗು ಗಡ ಕುರುರಾಯನೀಗಳೊ
ಮರುದಿವಸವೋ ಸಿರಿಮುಡಿಗೆ ನೀ
ರೆರೆವ ಪಟ್ಟವದೆಂದು ನಿಮಗೆನುತೆಚ್ಚನಾ ಶಲ್ಯ (ಶಲ್ಯ ಪರ್ವ, ೨ ಸಂಧಿ, ೫೬ ಪದ್ಯ)

ತಾತ್ಪರ್ಯ:
ಬರೀ ಅಬ್ಬರಿಸುವೆಯೋ? ಬಾಣಗಳಿಂದ ಹೊಡೆಯುವುದು ಹೇಗೆಂಬ ಅರಿವಿದೆಯೋ? ನಿಮ್ಮೈವರಿಗೂ ದ್ರೌಪದಿಯು ಪತ್ನಿ, ಹಾಗೆಯೇ ಭೂಮಿಯು ಸಹ. ಕೌರವನಾದರೋ ಹೊರಗಿನವನು, ಅವನನ್ನು ಬಿಟ್ಟು, ಈ ಭೂಮಿಯ ಚಕ್ರಾಧಿಪತ್ಯದ ಅಭಿಷೇಕ ನೆನಗೆ ಎಂದಾಗುತ್ತದೆ ಎಂದು ಹೇಳುತ್ತ ಬಾಣಗಳನ್ನು ಬಿಟ್ಟನು.

ಅರ್ಥ:
ಬರಿ: ಕೇವಲ; ಬೊಬ್ಬಾಟ: ಆರ್ಭಟ, ಅಬ್ಬರ; ಶರಾವಳಿ: ಬಾಣಗಳ ಸಾಲು; ಕೆಲಸ: ಕಾರ್ಯ; ಧರಣಿ: ಭೂಮಿ; ಎರಕ: ಪ್ರೀತಿ, ಅನುರಾಗ; ಗಡ: ಅಲ್ಲವೆ; ಸಮ: ಸರಿಯಾದ; ಹೊರಗು: ಆಚೆಯವ; ರಾಯ: ರಾಜ; ಮುಡಿ: ತಲೆ; ಸಿರಿ: ಐಶ್ವರ್ಯ; ನೀರು: ಜಲ; ಎರೆವ: ಹಾಕುವ, ಸಲುಹು; ಪಟ್ಟ: ಅಧಿಕಾರ; ಎಚ್ಚು: ಬಾಣ ಪ್ರಯೋಗ ಮಾಡು;

ಪದವಿಂಗಡಣೆ:
ಬರಿಯ +ಬೊಬ್ಬಾಟವೊ +ಶರಾವಳಿ
ಯಿರಿ+ಕೆಲಸವೇನುಂಟೊ +ಧರಣಿಯಲ್
ಎರಕ +ನಿಮ್ಮೈವರಿಗೆ+ ಗಡ+ ದ್ರೌಪದಿಗೆ +ಸಮವಾಗಿ
ಹೊರಗು+ ಗಡ+ ಕುರುರಾಯನ್+ಈಗಳೊ
ಮರುದಿವಸವೋ +ಸಿರಿಮುಡಿಗೆ+ ನೀ
ರೆರೆವ+ ಪಟ್ಟವದೆಂದು +ನಿಮಗೆನುತ್+ಎಚ್ಚನಾ +ಶಲ್ಯ

ಅಚ್ಚರಿ:
(೧) ರಾಜ್ಯಾಭಿಷೇಕ ಎಂದು ಹೇಳುವ ಪರಿ – ಸಿರಿಮುಡಿಗೆ ನೀರೆರೆವ ಪಟ್ಟ
(೨) ಧರ್ಮಜನನ್ನು ಹಂಗಿಸುವ ಪರಿ – ಬರಿಯ ಬೊಬ್ಬಾಟವೊ ಶರಾವಳಿಯಿರಿಗೆಲಸವೇನುಂಟೊ

ಪದ್ಯ ೩೦: ಕೀಚಕನು ದ್ರೌಪದಿಯನ್ನು ಹೇಗೆ ಹೆದರಿಸಿದನು?

ದ್ರೌಪದಿಗೆ ಖಳ ನುಡಿದನೆನ್ನಾ
ಟೋಪವನು ನೀನರಿಯೆ ಬಡವರ
ಕೋಪವೌಡಿಗೆ ಮೃತ್ಯು ನಿನ್ನವರೇನನೇಗುವರು
ಆಪೆನವರಂತಿರಲಿ ನೀನೆನ
ಗೋಪಳಾದರೆ ಸಾಕು ಮಲೆತಡೆಯಾ
ಪಿನಾಕಿಗೆ ತೆರಳುವೆನೆ ಬಳಿಕಲ್ಲಿ ನೋಡೆಂದ (ವಿರಾಟ ಪರ್ವ, ೨ ಸಂಧಿ, ೩೦ ಪದ್ಯ)

ತಾತ್ಪರ್ಯ:
ದ್ರೌಪದಿಯ ಮಾತಿಗೆ ಉತ್ತರವನ್ನು ನೀಡುತ್ತಾ ಕೀಚಕನು, ನನ್ನ ಪರಾಕ್ರಮವನ್ನು ನೀನು ತಿಳಿದಿಲ್ಲ. ಬಡವರ ಸಿಟ್ಟು ದವಡೆಗೆ ಮೂಲ ಎಂದು ಕೇಳಿರುವೆ ತಾನೆ? ನಿನ್ನ ಪತಿಗಳು ಏನು ಮಾಡಲು ಸಾಧ್ಯ, ಅವರನ್ನು ನಾನು ಎದುರಿಸಬಲ್ಲೆ, ನೀನು ನನಗೊಲಿದರೆ ಸಾಕು, ಶಿವನೇ ಬಂದರೂ ನಾನು ಹಿಂಜರಿಯುವುದಿಲ್ಲ ಎಂದನು.

ಅರ್ಥ:
ಖಳ: ದುಷ್ಟ; ನುಡಿ: ಮಾತು; ಆಟೋಪ: ದರ್ಪ, ಆವೇಶ; ಅರಿ: ತಿಳಿ; ಬಡವ: ನಿರ್ಗತಿಕ; ಕೋಪ: ಖತಿ; ಔಡು: ಹಲ್ಲಿನಿಂದ ಕಚ್ಚು, ಕೆಳತುಟಿ; ಮೃತ್ಯು: ಸಾವು; ಏಗು: ಮಾಡು; ಓಪು: ಪ್ರೀತಿ, ಸ್ನೇಹ; ಸಾಕು: ಅಗತ್ಯ ಪೂರೈಸು; ಮಲೆತ: ಕೊಬ್ಬಿದ; ಅಡೆ: ಒದಗು, ಮುಚ್ಚಿಹೋಗಿರು; ಪಿನಾಕಿ: ಶಿವ; ತೆರಳು: ಹೋಗು; ಬಳಿಕ: ನಂತರ; ನೋಡು: ವೀಕ್ಷಿಸು; ಆಪು: ಶಕ್ತಿ, ಬಲ, ಸಾಮರ್ಥ್ಯ;

ಪದವಿಂಗಡಣೆ:
ದ್ರೌಪದಿಗೆ +ಖಳ+ ನುಡಿದನ್+ಎನ
ಆಟೋಪವನು +ನೀನರಿಯೆ +ಬಡವರ
ಕೋಪವ್+ಔಡಿಗೆ+ ಮೃತ್ಯು +ನಿನ್ನವರ್+ಏನನ್+ಏಗುವರು
ಆಪೆನ್+ಅವರಂತಿರಲಿ+ ನೀನ್+ಎನಗ್
ಓಪಳಾದರೆ +ಸಾಕು +ಮಲೆತಡೆ+ಆ+
ಪಿನಾಕಿಗೆ +ತೆರಳುವೆನೆ +ಬಳಿಕಲ್ಲಿ +ನೋಡೆಂದ

ಅಚ್ಚರಿ:
(೧) ಗಾದೆಯ ಬಳಕೆ – ಬಡವರ ಕೋಪವೌಡಿಗೆ ಮೃತ್ಯು

ಪದ್ಯ ೨೯: ಕೃಷ್ಣನ ಬೀಳ್ಕೊಡುಗೆ ಹೇಗಿತ್ತು?

ಮರೆಯಲಿಹ ಕಾಲದಲಿ ಬಲಿದೆ
ಚ್ಚರದಿಹುದು ಬೇಕಾದರೆಮಗೆ
ಚ್ಚರಿಸಿ ಕಾರ್ಯಸ್ಥಿತಿಯ ನಿಶ್ಚೈಸುವುದು ನಮ್ಮೊಳಗೆ
ಅರಿದಿಹುದು ನೀವೆಂದು ರಾಯನಿ
ಗರುಹಿ ಭೀಮಾದಿಗಳಿಗುಚಿತವ
ನೆರೆನುಡಿದು ದ್ರೌಪದಿಯ ಮನ್ನಿಸಿ ಮರಳಿದನು ಪುರಕೆ (ಅರಣ್ಯ ಪರ್ವ, ೧೬ ಸಂಧಿ, ೨೯ ಪದ್ಯ)

ತಾತ್ಪರ್ಯ:
ಕೃಷ್ಣನು ಪಾಂಡವರಿಗೆ ಹಿತವಚನವನ್ನು ಹೇಳುತ್ತಾ, ಬರಲಿರುವ ಕಾಲದಲ್ಲಿ ಅತಿಶಯವಾದ ಎಚ್ಚರದಿಂದಿರಬೇಕು, ಅಗತ್ಯಬಿದ್ದರೆ ನಮಗೆ ತಿಳಿಸಿ ಏನು ಮಾಡಬೇಕೆಂದು ನಿಶ್ಚಯಿಸಿರಿ, ಇದನ್ನು ನೀವು ಸದಾ ನೆನಪಿನಲ್ಲಿಡಬೇಕು, ಎಂದು ಶ್ರೀಕೃಷ್ಣನು ಧರ್ಮಜನಿಗೆ ತಿಳಿಸಿ, ಭೀಮಾದಿಗಳಿಗೆ ಉಚಿತವಾದ ಮಾತುಗಳನ್ನಾಡಿ, ದ್ರೌಪದಿಯನ್ನು ಅನುಗ್ರಹಿಸಿ ದ್ವಾರಕೆಗೆ ತೆರಳಿದನು.

ಅರ್ಥ:
ಮರೆ: ನೆನಪಿನಿಂದ ದೂರವಾಗು; ಕಾಲ: ಸಮಯ; ಬಲಿದು: ಗಟ್ಟಿಯಾಗು; ಎಚ್ಚರ: ಹುಷಾರು, ಜೋಪಾನ; ಇಹುದು: ಇರುವುದು; ಎಚ್ಚರಿಸು: ಮೇಲೇಳು; ಕಾರ್ಯ: ಕೆಲಸ; ಸ್ಥಿತಿ: ಹದ, ಅವಸ್ಥೆ; ನಿಶ್ಚೈಸು: ನಿರ್ಧರಿಸು; ಅರಿ: ತಿಳಿ; ರಾಯ: ರಾಜ; ಅರುಹು: ಹೇಳು; ಆದಿ: ಮುಂತಾದ; ಉಚಿತ: ಸರಿಯಾದ; ಎರೆ: ಸುರಿ; ನುಡಿ: ವಚನ, ಮಾತು; ಮನ್ನಿಸು: ಅನುಗ್ರಹಿಸು; ಮರಳು: ಹಿಂದಿರುಗು; ಪುರ: ಊರು;

ಪದವಿಂಗಡಣೆ:
ಮರೆಯಲಿಹ +ಕಾಲದಲಿ +ಬಲಿದ್
ಎಚ್ಚರದ್+ಇಹುದು +ಬೇಕಾದರ್+ಎಮಗ್
ಎಚ್ಚರಿಸಿ +ಕಾರ್ಯ+ಸ್ಥಿತಿಯ +ನಿಶ್ಚೈಸುವುದು +ನಮ್ಮೊಳಗೆ
ಅರಿದಿಹುದು+ ನೀವೆಂದು +ರಾಯನಿಗ್
ಅರುಹಿ +ಭೀಮಾದಿಗಳಿಗ್+ಉಚಿತವ
ನೆರೆನುಡಿದು +ದ್ರೌಪದಿಯ +ಮನ್ನಿಸಿ +ಮರಳಿದನು +ಪುರಕೆ

ಅಚ್ಚರಿ:
(೧) ಕೃಷ್ಣನ ಸ್ವಯಂ ಸ್ನೇಹದ ಹಸ್ತವನ್ನು ನೀಡುವ ಪರಿ – ಬೇಕಾದರೆಮಗೆ
ಚ್ಚರಿಸಿ ಕಾರ್ಯಸ್ಥಿತಿಯ ನಿಶ್ಚೈಸುವುದು ನಮ್ಮೊಳಗೆ

ಪದ್ಯ ೨೫: ದ್ರೌಪದಿಯು ಶ್ರೀಕೃಷ್ಣನಿಗೆ ಯಾವ ಪ್ರಶ್ನೆ ಕೇಳಿದಳು?

ಮುಂದಲೆಯ ಹಿಡಿದೆಳೆದು ಸಭೆಯಲಿ
ತಂದು ಸೀರೆಯ ಸುಲಿದಡವದಿರ
ಮುಂದೆ ಮೌನದೊಳಿದ್ದರಲ್ಲದೆ ಪತಿಗಳುಸುರಿದಿರೆ
ಅಂದು ನೀ ಹಿಂದಿಕ್ಕಿಕೊಂಡುದ
ನಿಂದು ಮರೆದೈ ಸಂಧಿಗೋಸುಗ
ಮುಂದುವರಿದೈ ಕೃಷ್ಣಯೆಂದಳು ದ್ರೌಪದೀ ದೇವಿ (ಉದ್ಯೋಗ ಪರ್ವ, ೬ ಸಂಧಿ, ೨೫ ಪದ್ಯ)

ತಾತ್ಪರ್ಯ:
ಅಂದು ರಾಜಸಭೆಯಲ್ಲಿ ನನ್ನ ತಲೆಯ ಜುಟ್ಟನ್ನು ಹಿಡಿದು ಎಳೆತಂದು ಉಟ್ಟ ಸೀರೆಯನ್ನು ಸೆಳೆವಾಗ ತಲೆತಗ್ಗಿಸಿ ಸುಮ್ಮನಿದ್ದರು ಅವರೇನಾದರು ಅಂದು ಮಾತನಾಡಿದರೇ? ಆ ಘೋರ ಪ್ರಸಂಗದಲ್ಲಿ ನೀನು ನನ್ನನ್ನು ಸಂರಕ್ಷಿಸಿದವನು ಅದನ್ನು ಇಂದು ನೀನು ಮರೆತು ಸಂಧಿಗೆ ಮುಂದುವರಿದಿರುವೆಯಾ ಎಂದು ದ್ರೌಪದಿಯು ಶ್ರೀಕೃಷ್ಣನತ್ತ ನೋಡಿದಳು.

ಅರ್ಥ:
ಮುಂದಲೆ: ತಲೆಯ ಮುಂಭಾಗ; ಹಿಡಿ: ಗ್ರಹಿಸು, ಬಂಧನ; ಎಳೆ: ತನ್ನ ಕಡೆಗೆ ಸೆಳೆದುಕೊ; ಸಭೆ: ದರ್ಬಾರು, ಓಲಗ; ತಂದು: ಬರೆಮಾಡಿ; ಸೀರೆ: ಬಟ್ಟೆ; ಸುಲಿ: ಬಿಚ್ಚು; ಅವದಿರ: ಅವರ; ಮುಂದೆ: ಎದುರು; ಮೌನ: ಸುಮ್ಮನಿರುವಿಕೆ; ಪತಿ: ಗಂಡ; ಉಸುರು: ಮಾತನಾಡು; ಹಿಂದಿಕ್ಕು: ಸಂರಕ್ಷಿಸು; ನಿಂದು: ನಿಲ್ಲು; ಮರೆ: ನೆನಪಿನಿಂದ ದೂರ; ಸಂಧಿ: ಸಂಧಾನ; ಮುಂದುವರಿದೈ: ಮುನ್ನಡೆ;

ಪದವಿಂಗಡಣೆ:
ಮುಂದಲೆಯ+ ಹಿಡಿದೆಳೆದು +ಸಭೆಯಲಿ
ತಂದು +ಸೀರೆಯ +ಸುಲಿದಡ್+ಅವದಿರ
ಮುಂದೆ +ಮೌನದೊಳ್+ಇದ್ದರಲ್ಲದೆ +ಪತಿಗಳ್+ಉಸುರಿದಿರೆ
ಅಂದು +ನೀ +ಹಿಂದಿಕ್ಕಿ+ಕೊಂಡುದನ್
ಇಂದು +ಮರೆದೈ+ ಸಂಧಿ+ಗೋಸುಗ
ಮುಂದುವರಿದೈ+ ಕೃಷ್ಣ+ಯೆಂದಳು +ದ್ರೌಪದೀ +ದೇವಿ

ಅಚ್ಚರಿ:
(೧) ಅಂದು, ಇಂದು, ತಂದು, ಮುಂದು – ಪ್ರಾಸ ಪದಗಳು

ಪದ್ಯ ೭: ದುರ್ಯೋಧನನು ಕೀಚಕನು ಯಾರೆಂದು ಹೇಳಿದನು?

ಅವನಿಪತಿ ಮೂಗಿನಲಿ ಕರಪ
ಲ್ಲವವನಿಟ್ಟನು ತಲೆಯತೂಗಿದ
ನವಳು ದ್ರೌಪದಿ ಖಳನ ಕೊಂದವ ಭೀಮ ಗಂಧರ್ವ
ದಿವಿಜ ಸತಿಯೆತ್ತಲು ವಿರಾಟನ
ಭವನದೋಲಗವೆತ್ತಲದು ಪಾಂ
ಡವರ ಕೃತ್ರಿಮ ತಂತ್ರ ಮರೆಯಿರಿಗಾರರವರೆಂದ (ವಿರಾಟ ಪರ್ವ, ೫ ಸಂಧಿ, ೭ ಪದ್ಯ)

ತಾತ್ಪರ್ಯ:
ಕೌರವ ರಾಜನಾದ ದುರ್ಯೋಧನನು ಮೂಗಿನ ಮೇಲೆ ತನ್ನ ಮೃದುವಾದ ಹಸ್ತವನ್ನಿಟ್ಟು, ಯೋಚಿಸುತ್ತಾ, ತಲೆದೂಗಿ, ಆ ಗಂಧರ್ವ ಸ್ತೀಯಳ ವೇಷದಲ್ಲಿದ್ದವಳು ದ್ರೌಪದಿ, ಆ ಕೀಚಕನನ್ನು ಕೊಂದವನು ಭೀಮ. ಗಂಧರ್ವ ಸ್ತ್ರೀಯಳು ವಿರಾಟನ ಅಂತ:ಪುರದಲ್ಲಿ ಬಂದು ಓಲೈಸುತ್ತಾಳೆಯೇ? ಇದು ಪಾಂಡವರ ಕೃತ್ರಿಮದ ಕೆಲಸ. ಮರೆಯಿಂದ ಇರಿಯುವ ವಂಚಕರು ಅವರು ಎಂದು ಹೇಳಿದನು.

ಅರ್ಥ:
ಅವನಿ: ಭೂಮಿ; ಅವನಿಪತಿ: ರಾಜ; ಮೂಗು: ನಾಸಿಕ; ಕರ: ಕೈ; ಪಲ್ಲವ: ಚಿಗುರು; ಕರಪಲ್ಲವ: ಚಿಗುರಿನಂತೆ ಮೃದುವಾದ ಕೈ; ತಲೆ: ಶಿರ; ತೂಗು: ಅಲ್ಲಾಡಿಸು; ಖಳ: ದುಷ್ಟ; ಕೊಂದವ: ಸಾಯಿಸಿದ; ಗಂಧರ್ವ: ದೇವತೆಗಳ ಒಂದು ಗುಂಪು; ದಿವಿಜ: ದೇವತೆ; ಸತಿ: ಸ್ತ್ರೀ; ಭವನ: ಆಲಯ; ಓಲಗ: ದರ್ಬಾರು; ಕೃತ್ರಿಮ:ಕಪಟ; ತಂತ್ರ: ರೀತಿ; ಮರೆ: ಹಿಂದೆ, ಕಾಣಿಸದಹಾಗೆ; ಇರಿ: ತಿವಿ;

ಪದವಿಂಗಡಣೆ:
ಅವನಿಪತಿ+ ಮೂಗಿನಲಿ+ ಕರ+ಪ
ಲ್ಲವವನ್+ಇಟ್ಟನು+ ತಲೆಯ+ತೂಗಿದನ್
ಅವಳು+ ದ್ರೌಪದಿ+ ಖಳನ +ಕೊಂದವ +ಭೀಮ +ಗಂಧರ್ವ
ದಿವಿಜ +ಸತಿಯೆತ್ತಲು +ವಿರಾಟನ
ಭವನದ್+ಓಲಗವ್+ಎತ್ತಲದು +ಪಾಂ
ಡವರ+ ಕೃತ್ರಿಮ +ತಂತ್ರ +ಮರೆ+ಯಿರಿಗಾರರ್+ಅವರೆಂದ

ಅಚ್ಚರಿ:
(೧) ಬೆರಳಿಟ್ಟನು ಎಂದು ಹೇಳಲು – ಕರಪಲ್ಲವನಿಟ್ಟನು

ಪದ್ಯ ೧೬: ಪತ್ರ ಓದಿದ ರಾಜರು ಏನೆಂದು ಯೋಚಿಸಿದರು?

ಮಾಡಿದರೆ ಶತಯಾಗವನು ಕೈ
ಗೂಡುವಳು ಶಚಿ ಮಖ ಸಹಸ್ರವ
ಮಾಡಿ ಮೇಣ್ಜನಿಸಿದೊಡೆ ಬಹಳೇ ದ್ರೌಪದಾದೇವಿ
ನೋಡುವೆವು ನಡೆ ಜನ್ಮ ಶತದಲಿ
ಕೂಡಿ ಕೊಬ್ಬಿದ ಪುಣ್ಯಫಲಕೈ
ಗೂಡುವುದೊ ತಪ್ಪೇನೆನುತ ನೆರೆದುದು ನೃಪಸ್ತೋಮ (ಆದಿ ಪರ್ವ, ೧೧ ಸಂಧಿ, ೧೬ ಪದ್ಯ)

ತಾತ್ಪರ್ಯ:
ಪತ್ರ ತಲುಪಿದ ನೃಪರು, ನೂರು ಅಶ್ವಮೇಧಯಾಗವನ್ನು ಮಾಡಿದರೆ ಇಂದ್ರ ಪದವಿ ದೊರಕಬಹುದು (ಶಚಿ – ಇಂದ್ರನ ಹೆಂಡತಿ)ಅಂತಹ ಸಹಸ್ರ ಯಾಗಗಳನ್ನು ಮಾಡಿದರೆ, ದ್ರೌಪದಿಯು ಸಿಕ್ಕಾಳೆ? ನಾವು ಹಿಂದಿನ ನೂರು ಜನ್ಮದಲ್ಲಿ ಮಾಡಿದ ಪುಣ್ಯವು ಈಗ ಫಲಿಸೀತು, ಸ್ವಯಂವರಕ್ಕೆ ಹೋಗಿ ನೋಡುವುದರಲ್ಲಿ ತಪ್ಪಿಲ್ಲ ಎಂದು ಕೊಂಡು ಪಾಂಚಾಲ ನಗರಕ್ಕೆ ಬಂದಿತು ರಾಜರ ದಂಡು.

ಅರ್ಥ:
ಮಾಡು: ನಿರ್ವಹಿಸು, ಕಾರ್ಯರೂಪಕ್ಕೆ ತರು; ಶತ: ನೂರು; ಯಾಗ: ಮಖ, ಯಜ್ನ; ಕೈಗೂಡು: ಫಲಿಸು; ಶಚಿ: ಇಂದ್ರಾಣಿ; ಮಖ: ಯಜ್ಞ; ಸಹಸ್ರ: ಸಾವಿರ; ಜನಿಸು: ಹುಟ್ಟು; ಬಹಳ: ಹೆಚ್ಚು, ಅಧಿಕ; ನಡೆ: ಮುನ್ನುಗ್ಗು, ಚಲಿಸು; ಜನ್ಮ: ಹುಟ್ಟು; ಕೂಡಿ: ಒಟ್ಟಾಗಿ; ಕೊಬ್ಬು: ಹೆಚ್ಚಾಗು, ಅಧಿಕ; ಪುಣ್ಯ: ಒಳ್ಳೆಯ; ಫಲ: ಲಾಭ, ಪ್ರಯೋಜನ; ತಪ್ಪು:ಅಪಚಾರ; ನೆರೆ: ಸೇರು, ಜೊತೆಗೂಡು, ಗುಂಪು; ಸ್ತೋಮ: ಗುಂಪು, ಸಮೂಹ; ನೃಪ: ರಾಜ;

ಪದವಿಂಗಡನೆ:
ಮಾಡಿದರೆ+ ಶತ+ಯಾಗವನು +ಕೈ
ಗೂಡುವಳು+ ಶಚಿ+ ಮಖ +ಸಹಸ್ರವ
ಮಾಡಿ +ಮೇಣ್+ಜನಿಸಿದೊಡೆ +ಬಹಳೇ +ದ್ರೌಪದಾ+ದೇವಿ
ನೋಡುವೆವು+ ನಡೆ+ ಜನ್ಮ+ ಶತದಲಿ
ಕೂಡಿ +ಕೊಬ್ಬಿದ +ಪುಣ್ಯ+ಫಲ+ಕೈ
ಗೂಡುವುದೊ +ತಪ್ಪೇನ್+ಎನುತ +ನೆರೆದುದು +ನೃಪಸ್ತೋಮ

ಅಚ್ಚರಿ:
(೧) ಕೈ- ೧, ೫ ಸಾಲಿನ ಕೊನೆ ಪದ; ಗೂಡು – ೨, ೬ ಸಾಲಿನ ಮೊದಲ ಪದ
(೨) ಮಾಡಿ – ೧, ೩ ಸಾಲಿನ ಮೊದಲ ಪದ
(೩) ಕೂಡಿ, ಮಾಡಿ – ಪ್ರಾಸ ಪದಗಳು
(೪) ಮಖ, ಯಾಗ – ಸಮಾನಾರ್ಥಕ ಪದ
(೫) ಶತ – ೨ ಬಾರಿ ಪ್ರಯೋಗ (೧, ೪ ಸಾಲು), ಸಹಸ್ರ – ಸಂಖ್ಯಾಸೂಚಕ ಪದಗಳ ಬಳಕೆ
(೬) ೫, ೬ ಸಾಲಿನ ಮೊದಲೆರಡು ಪದ ಒಂದೇ ಅಕ್ಷರದ್ದು, ನೋಡುವೆವು ನಡೆ; ಕೂಡಿ ಕೊಬ್ಬಿದ

ಪದ್ಯ ೧೦: ದ್ರುಪದನು ಏತಕ್ಕಾಗಿ ದುಃಖಿಸುತ್ತಾನೆ?

ಈಕೆಗೆಣೆಯಹ ವರನನೀ ನರ
ಲೋಕದಲಿ ತಾ ಕಾಣೆನರ್ಜುನ
ನೀಕುಮಾರಿಯ ರಮಣನೆಂದೇ ಮನದ ಸಂಕಲ್ಪ
ಈಕೆಯಪದೆಸೆಯುದಯದಲಿ ಕುಂ
ತೀ ಕುಮಾರಕರನಲಮುಖದಲಿ
ನಾಕದಲಿ ನೆಲೆಗೊಂಡರೆಂದುಮ್ಮಳಿಸುವನು ದ್ರುಪದ (ಆದಿ ಪರ್ವ, ೧೧ ಸಂಧಿ, ೧೦ ಪದ್ಯ)

ತಾತ್ಪರ್ಯ:
ಇವಳಿಗೆ ಸರಿಸಮನಾದ ಅನುರೂಪನಾದ ವರನು ಈ ಭೂಮಂಡಲದಲ್ಲಿ ಕಾಣೆನು, ಅರ್ಜುನನೇ ಇವಳಿಗೆ ವರನೆಂದು ನನ್ನ ಮನದ ಸಂಕಲ್ಪ, ಇವಳಿಗೆ ಅಪದೆಸೆ ಶುರುವಾದ ಮೇಲೆ, ಪಾಂಡವರು ಸ್ವರ್ಗವಾಸಿಗಳಾದರು ಎಂದು ದುಃಖಿಸಿದನು ದ್ರುಪದ

ಅರ್ಥ:
ಎಣೆ: ಸಮ, ಸಾಟಿ; ವರ: ಶ್ರೇಷ್ಠ, ಹುಡುಗ; ನರ: ಮನುಷ್ಯ; ಲೋಕ: ಜಗತ್ತು; ಕಾಣೆ: ನೋಡೆನು; ರಮಣ: ಯಜಮಾನ, ಗಂಡ; ಸಂಕಲ್ಪ: ನಿರ್ಧಾರ, ನಿರ್ಣಯ; ಅಪದೆಸೆ: ಕೆಟ್ಟಕಾಲ, ದುರ್ದೆಶೆ; ಉದಯ: ಹುಟ್ಟು;ಕುಮಾರ: ಮಕ್ಕಳು; ಅನಲ: ಅಗ್ನಿ, ಬೆಂಕಿ;ಮುಖ: ವದನ; ನಾಕ: ಸ್ವರ್ಗ, ಆಕಾಶ;ನೆಲೆ:ವಾಸಸ್ಥಾನ; ಉಮ್ಮಳಿಸು: ದುಃಖ, ದುಗುಡ;

ಪದವಿಂಗಡನೆ:
ಈಕೆಗ್+ಎಣೆ+ಯಹ+ ವರನನ್+ಈ+ ನರ
ಲೋಕದಲಿ+ ತಾ +ಕಾಣೆನ್+ಅರ್ಜುನನ್
ಈ+ಕುಮಾರಿಯ+ ರಮಣನ್+ಎಂದೇ +ಮನದ+ ಸಂಕಲ್ಪ
ಈಕೆಯ್+ಅಪದೆಸೆ+ಉದಯದಲಿ +ಕುಂ
ತೀ +ಕುಮಾರಕರ+ಅನಲ+ಮುಖದಲಿ
ನಾಕ+ದಲಿ +ನೆಲೆಗೊಂಡರ್+ಎಂದ್+ಉಮ್ಮಳಿಸುವನು+ ದ್ರುಪದ

ಅಚ್ಚರಿ:
(೧) ಉದಯದಲಿ, ಮುಖದಲಿ, ನಾಕದಲಿ – ದಲಿ ಇಂದ ಕೊನೆಗೊಳ್ಳುವ ಪದಗಳು
(೨) ಈ ಸ್ವರಾಕ್ಷರದಿಂದ ೧,೩,೪ ಸಾಲಿನ ಮೊದಲ ಪದ
(೩) ದ್ರೌಪದಿಯ ದುರ್ದೆಶೆಗೂ, ಪಾಂಡವರು ಅರಗಿನ ಮನೆಯಲ್ಲಿ ಸಾವನಪ್ಪಿದಕ್ಕೂ, ಸಂಬಂಧ ಬೆಸೆಯುವ ಒಂದು ವಾಕ್ಯ ಕಾಣಬಹುದು
(೪) ಸ್ವರ್ಗಸ್ಥರಾದರೆಂದು ಹೇಳಲು- ನಾಕದಲಿ ನೆಲೆಗೊಂಡರು
(೫) ಅಗ್ನಿಯಲ್ಲಿ ಆಹುತಿಯಾದರೆಂದು ತಿಳಿಸಲು – ಅನಲ ಮುಖದಲಿ – ಅಗ್ನಿಯ ಮುಖದಲ್ಲಿ

ಪದ್ಯ ೭೩: ಮಗ ಮತ್ತು ಮಗಳನ್ನು ಹೇಗೆ ಬೆಳೆಸಬೇಕೆಂದು ದ್ರುಪದನು ಯೋಚಿಸಿದನು?

ದ್ರೋಣವಧೆಗೀ ಮಗನು ಪಾರ್ಥಗೆ
ರಾಣಿಯೀ ಮಗಳೆಂದು ದ್ರುಪದ
ಕ್ಶೋಣಿಪತಿ ಸಲಹಿದನು ಸುತರನು ಪಾನುರಾಗದಲಿ
ದ್ರೋನನೀತನ ಕರೆಸಿ ಶಸ್ತ್ರದ
ಜಾಣಿಕೆಯ ಕಲಿಸಿದನು ವಿಗಡರ
ಕಾಣೆನೀ ಕಲಶಜನ ಪರಿಯಲಿ ರಾಯ ಕೇಳೆಂದ (ಆದಿ ಪರ್ವ, ೭ ಸಂಧಿ, ೭೩ ಪದ್ಯ)

ತಾತ್ಪರ್ಯ:
ಮಗ ಮತ್ತು ಮಗಳ ಜನನದಿಂದ ದ್ರುಪದನು ಅತೀವ ಸಂತಸಗೊಂಡು, ದ್ರುಪದನನ್ನು ದ್ರೋಣನನ್ನು ಕೊಲ್ಲಲು, ಮತ್ತು ದ್ರೌಪದಿಯು ಅರ್ಜುನನ ಪತ್ನಿಯಾಗಲು ಯೋಚಿಸಿ ಪ್ರೀತಿಯಿಂದ ಬೆಳಸಿದನು. ದ್ರೋಣಾಚಾರ್ಯರು ದ್ರುಪದನನ್ನು ಕರೆಸಿ ಅವನಿಗೆ ಶಸ್ತ್ರವಿದ್ಯೆಯನ್ನು ಕಲಿಸಿದನು. ದ್ರೋಣನಂತರ ಮಹನೀಯರು ಯಾರೂ ಇಲ್ಲ.

ಅರ್ಥ:
ವಧೆ: ಕೊಲ್ಲು; ಮಗ: ಸುತ; ರಾಣಿ: ಅರಸಿ; ಮಗಳು: ಸುತೆ; ಸಲಹು: ರಕ್ಷಿಸು; ಅನುರಾಗ: ಪ್ರೀತಿ; ಶಸ್ತ್ರ: ಆಯುಧ; ಜಾಣಿಕೆ: ವಿದ್ಯೆ; ವಿಗಡ: ಶೌರ್ಯ, ಪರಾಕ್ರಮ;ಕಾಣೆ: ಸಿಗುವುದಿಲ್ಲ; ಕಲಶಜ: ದ್ರೋಣ; ಪರಿ: ಪರಿಹರಿಸು, ನಡೆ; ರಾಯ: ರಾಜ;

ಪದವಿಂಗಡನೆ:
ದ್ರೋಣ+ವಧೆ+ಗೀ +ಮಗನು +ಪಾರ್ಥಗೆ
ರಾಣಿ+ಯೀ +ಮಗಳ್+ಎಂದು +ದ್ರುಪದ್
ಅಕ್ಶೋಣಿಪತಿ +ಸಲಹಿದನು+ ಸುತರನು+ ಪಾ+ಅನುರಾಗದಲಿ
ದ್ರೋಣನ್+ಈತನ+ ಕರೆಸಿ+ ಶಸ್ತ್ರದ
ಜಾಣಿಕೆಯ+ ಕಲಿಸಿದನು +ವಿಗಡರ
ಕಾಣೆನ್+ಈ+ ಕಲಶಜನ +ಪರಿಯಲಿ +ರಾಯ +ಕೇಳೆಂದ

ಅಚ್ಚರಿ:
(೧) ಕಲಶಜ: ದ್ರೋಣನನ್ನು ಕರೆಯುವ ಪರಿ
(೨) ದ್ರೋಣ: ೧,೪ ಸಾಲಿನ ಮೊದಲ ಪದ

ಪದ್ಯ ೭೨: ದ್ರೌಪದಿಯ ಜನನ ಹೇಗಾಯ್ತು?

ವೇದಿ ಮಧ್ಯವನೊಡೆದು ಮೂಡಿದ
ಳಾದರಿಸೆ ಜನವಮಮ ಕಾಮನ
ಕೈದುವೋ ತ್ರೈಲೋಕ್ಯಮೋಹನಮಂತ್ರ ದೇವತೆಯೋ
ಕಾದುವರೆ ಕರೆ ಹರಿಹರ ಬ್ರ
ಹ್ಮಾದಿಗಳಿಗೊರೆಯೆಂಬ ಹೂಂಕೃತಿ
ಯಾದುದಾ ಕಾಮಂಗೆ ದ್ರುಪದಾತ್ಮಜೆಯ ಜನನದಲಿ (ಆದಿ ಪರ್ವ, ೭ ಸಂಧಿ, ೭೨ ಪದ್ಯ)

ತಾತ್ಪರ್ಯ:
ಯಾಗ ಕುಂಡದ ಮಧ್ಯದಿಂದ ಸುಂದರಿಯಾದ ಮಗಳು ಕಾಣಿಸಿಕೊಂಡಳು. ಅವಳನ್ನು ಜನರು ಆದರಿಸಿ, ಈಕೆ ಮನ್ಮಥನ ಆಯುಧವೋ, ಮೂರು ಲೋಕವನ್ನು ಮೋಹಿಸುವ ಮಂತ್ರದ ಅಧಿದೇವತೆಯೊ, ಎನ್ನುವಂತೆ ಸುಂದರಿಯಾಗಿದ್ದಳು. ಇವಳ ಜೊತೆ ಯಾರಾದರು ಕಾದಾಡುತ್ತಾರೆಯೆ, ಮೊದಲು ಕರಿ, ಹರಿ, ಹರ, ಬ್ರಹ್ಮಾದಿಗಳನ್ನು ಕರೆ ಎನ್ನುವ ಹೂಂಕರಿಸುವ ಬಲವು ಮನ್ಮಥನಿಗೆ ದ್ರುಪದನ ಮಗಳ ಜನನದಿಂದ ಬಂದಿತು.

ಅರ್ಥ:
ವೇದಿ: ಯಜ್ಞಮಾಡುವ ಸ್ಥಳ; ಮಧ್ಯ: ನಡು; ಒಡೆದು: ಬೇರೆಮಾಡು;ಮೂಡು: ತೋರು, ಅವತರಿಸು; ಆದರಿಸು: ಗೌರವಿಸು, ಪ್ರೀತಿಸು, ಸತ್ಕರಿಸು; ಕಾಮ: ಮನ್ಮಥ; ಕೈದು: ಆಯುಧ, ಶಸ್ತ್ರ; ತ್ರೈಲೋಕ: ಮೂರುಲೋಕ; ಮೋಹನ: ಆಕರ್ಶಿಸು; ಮಂತ್ರ: ಪವಿತ್ರವಾದ ಸ್ತುತಿ; ದೇವತೆ: ದೇವಿ, ಸುರ; ಕಾದು: ಜಗಳ; ಕರೆ: ಬರೆಮಾಡು; ಹರಿ: ಶಿವ; ಹರ: ವಿಷ್ಣು; ಬ್ರಹ್ಮ: ಅಜ; ಒರೆ: ಸಮಾನ, ಸಾಟಿ, ಹೇಳು, ನಿರೂಪಿಸು; ಹೂಂಕೃತಿ: ಹೂಂಕಾರ; ಆತ್ಮಜೆ: ಮಗಳು; ಜನನ: ಹುಟ್ಟು

ಪದವಿಂಗಡನೆ:
ವೇದಿ + ಮಧ್ಯವನ್+ಒಡೆದು +ಮೂಡಿದಳ್
ಆದರಿಸೆ+ ಜನವ+ಮಮ +ಕಾಮನ
ಕೈದುವೋ+ ತ್ರೈಲೋಕ್ಯ+ಮೋಹನ+ಮಂತ್ರ +ದೇವತೆಯೋ
ಕಾದುವರೆ+ ಕರೆ+ ಹರಿ+ಹರ+ ಬ್ರ
ಹ್ಮಾದಿಗಳಿಗ್+ಒರೆ+ಯೆಂಬ +ಹೂಂಕೃತಿ
ಯಾದುದ್+ಆ+ ಕಾಮಂಗೆ +ದ್ರುಪದ್+ಆತ್ಮಜೆಯ +ಜನನದಲಿ

ಅಚ್ಚರಿ:
(೧) ಕುಂಡ (೭೧ ಪದ್ಯ) ವೇದಿ (೭೨ ಪದ್ಯ) – ಯಜ್ಞ ಕುಂಡ ಎಂಬ ಅರ್ಥ ಕೊಡುವ ಪದ
(೨) ಉಪಮಾನಗಳ ಪ್ರಯೋಗ: ಕಾಮನ ಕೈದುವೋ, ತ್ರೈಲೋಕ್ಯಮೋಹನಮಂತ್ರ ದೇವತೆಯೊ;
(೩) ಕಾಮ – ೨, ೬ ಸಾಲಿನಲ್ಲಿ ಬಳಸಿರುವ ಪದ