ಪದ್ಯ ೩: ಧೃತರಾಷ್ಟ್ರನೇಕೆ ಭೂಮಿಯ ಮೇಲೆ ಬಿದ್ದನು?

ಬೇಯದೆನ್ನೆದೆ ಶೋಕವಹ್ನಿಯ
ಬಾಯಲಕಟಾ ಕರ್ಣ ಕೌರವ
ರಾಯನಳಿವಿನಲುಳಿವ ಪುತ್ರ ದ್ರೋಹಿಯಾರಿನ್ನು
ಸಾಯಿಸುವ ಸಾವಂಜಿತೆನಗೆ ಚಿ
ರಾಯು ತೊಡರಿಕ್ಕಿದೆನು ಮಾರ್ಕಂ
ಡೇಯ ಮುನಿಗೆಂದರಸ ಧೊಪ್ಪನೆ ಕೆಡೆದನವನಿಯಲಿ (ಶಲ್ಯ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಶೋಕಾಗ್ನಿಯಿಂದ ನನ್ನೆದೆ ಬೆಂದುಹೋಗಲೇ ಇಲ್ಲ. ಅಯ್ಯೋ ಕೌರವನ ಮರಣವಾದ ಮೇಲೆ ಉಳಿದ ಪುತ್ರದ್ರೋಹಿ ಯಾರು? ನಾನಲ್ಲವೇ? ಕೊಲ್ಲುವ ಸಾವು ನನಗೆ ಹೆದರಿ ಸುಮ್ಮನಾಯಿತೇ? ಮಾರ್ಕಂಡೇಯ ಮುನಿ ಜೊತೆಗೆ ಪಂಥಕಟ್ಟಿ ಅವನಿಗಿಂತ ಹೆಚ್ಚು ದಿನ ಬದುಕುವೆನೋ ಏನೋ ಎನ್ನುತ್ತಾ ಧೃತರಾಷ್ಟ್ರನು ಧೊಪ್ಪನೆ ಭೂಮಿಯ ಮೇಲೆ ಬಿದ್ದನು.

ಅರ್ಥ:
ಬೇಯು: ಸುಡು, ದಹಿಸು; ಸಂಕಟಕ್ಕೊಳಗಾಗು; ಎದೆ: ವಕ್ಷಸ್ಥಳ, ಹೃದಯ; ಶೋಕ: ದುಃಖ; ವಹ್ನಿ: ಬೆಂಕಿ; ಅಕಟಾ: ಅಯ್ಯೋ; ರಾಯ: ರಾಜ; ಅಳಿ: ನಾಶ; ಉಳಿವ: ಮಿಕ್ಕ; ಪುತ್ರ: ಸುತ; ದ್ರೋಹಿ: ಮೋಸಗಾರ, ಪಾಪಿ; ಸಾಯಿಸು: ಸಂಹರಿಸು; ಸಾವು: ಮರಣ; ಅಂಜು: ಹೆದರು; ಚಿರಾಯು: ಸಾವಿಲ್ಲದ; ತೊಡರು: ಸಂಕೋಲೆ, ಸರಪಳಿ; ಮುನಿ: ಋಷಿ; ಅರಸ: ರಾಜ; ಧೊಪ್ಪನೆ: ಕೂಡಲೆ, ಒಮ್ಮೆಲೆ; ಕೆಡೆ: ಕುಸಿ; ಅವನಿ: ಭೂಮಿ;

ಪದವಿಂಗಡಣೆ:
ಬೇಯದ್+ಎನ್ನೆದೆ +ಶೋಕ+ವಹ್ನಿಯ
ಬಾಯಲ್+ಅಕಟಾ +ಕರ್ಣ +ಕೌರವ
ರಾಯನ್+ಅಳಿವಿನಲ್+ಉಳಿವ +ಪುತ್ರ +ದ್ರೋಹಿಯಾರಿನ್ನು
ಸಾಯಿಸುವ +ಸಾವ್+ಅಂಜಿತ್+ಎನಗೆ +ಚಿ
ರಾಯು +ತೊಡರಿಕ್ಕಿದೆನು+ ಮಾರ್ಕಂ
ಡೇಯ +ಮುನಿಗೆಂದ್+ಅರಸ +ಧೊಪ್ಪನೆ +ಕೆಡೆದನ್+ಅವನಿಯಲಿ

ಅಚ್ಚರಿ:
(೧) ದುಃಖದ ತೀವ್ರತೆಯನ್ನು ವಿವರಿಸುವ ಪರಿ – ಸಾಯಿಸುವ ಸಾವಂಜಿತೆನಗೆ

ಪದ್ಯ ೪೩: ಭೀಮನ ಪರಾಕ್ರಮದ ಮಾತುಗಳು ಹೇಗಿದ್ದವು?

ದೇಹ ಕೀರ್ತಿಗಳೊಳಗೆ ನಿಲುವುದು
ದೇಹವೋ ಕೀರ್ತಿಯೊ ಮುರಾಂತಕ
ಬೇಹುದನು ಬೆಸಸಿದಡೆ ಮಾಡೆನು ಬಲ್ಲಿರೆನ್ನನುವ
ಗಾಹುಗತಕದಲುಳಿವ ಧರ್ಮ
ದ್ರೋಹಿ ತಾನಲ್ಲಿನ್ನು ನೋಡಾ
ಸಾಹಸವನೆನುತಿತ್ತ ಮುರಿದನು ಸರಳ ಸಮ್ಮುಖಕೆ (ದ್ರೋಣ ಪರ್ವ, ೧೯ ಸಂಧಿ, ೪೩ ಪದ್ಯ)

ತಾತ್ಪರ್ಯ:
ಭೀಮನು ನುಡಿಯುತ್ತಾ, ದೇಹ ಕೀರ್ತಿಗಳಲ್ಲಿ ನಿಲ್ಲುವುದು ದೇಹವೋ ಕೀರ್ತಿಯೋ? ನಿನಗ ಬೇಕಾದುದನ್ನು ಹೇಳಿಕೊಂಡರೆ ನಾನು ಕೇಳುವವನಲ್ಲ. ನನ್ನ ರೀತಿ ನಿಮಗೆ ಗೊತ್ತಿದೆ, ಮೋಸದಿಂದ ಬದುಕಲು ಬಯಸುವ ಧರ್ಮದ್ರೋಹಿ ನಾನಲ್ಲ. ನನ್ನ ಸಾಹಸವನ್ನು ನೋಡು ಎಂದು ಭೀಮನು ಅಸ್ತ್ರವನ್ನಿದಿರಿಸಿದನು.

ಅರ್ಥ:
ದೇಹ: ಒಡಲು, ಶರೀರ; ಕೀರ್ತಿ: ಯಶಸ್ಸು; ನಿಲುವು: ನಿಂತುಕೊಳ್ಳು; ಮುರಾಂತಕ: ಕೃಷ್ಣ; ಬೇಹುದು: ಬೇಕಾದುದು; ಬೆಸಸು: ಹೇಳು, ಆಜ್ಞಾಪಿಸು; ಬಲ್ಲಿರಿ: ತಿಳಿದ; ಗಾಹು: ಮೋಸ; ಉಳಿವ: ಮಿಕ್ಕ; ಧರ್ಮ: ಧಾರಣೆ ಮಾಡಿದುದು; ದ್ರೋಹ: ಮೋಸ; ಸಾಹಸ: ಪರಾಕ್ರಮ; ಮುರಿ: ಸೀಳು; ಸರಳ: ಬಾಣ; ಸಮ್ಮುಖ: ಎದುರು; ಅನುವು: ರೀತಿ;

ಪದವಿಂಗಡಣೆ:
ದೇಹ +ಕೀರ್ತಿಗಳೊಳಗೆ +ನಿಲುವುದು
ದೇಹವೋ +ಕೀರ್ತಿಯೊ +ಮುರಾಂತಕ
ಬೇಹುದನು+ ಬೆಸಸಿದಡೆ+ ಮಾಡೆನು +ಬಲ್ಲಿರ್+ಎನ್ನ್+ಅನುವ
ಗಾಹುಗತಕದಲ್+ಉಳಿವ +ಧರ್ಮ
ದ್ರೋಹಿ +ತಾನಲ್ಲ್+ಇನ್ನು +ನೋಡಾ
ಸಾಹಸವನ್+ಎನುತ್+ಇತ್ತ +ಮುರಿದನು +ಸರಳ +ಸಮ್ಮುಖಕೆ

ಅಚ್ಚರಿ:
(೧) ಭೀಮನ ಸಾಹಸದ ನುಡಿ – ದೇಹ ಕೀರ್ತಿಗಳೊಳಗೆ ನಿಲುವುದು ದೇಹವೋ ಕೀರ್ತಿಯೊ

ಪದ್ಯ ೪೬: ಕೌರವರು ಏಕೆ ಅಳುಕಿದರು?

ದ್ರೋಹಿ ಸಿಲುಕಿದನೆನುತೆ ಜೀವ
ಗ್ರಾಹವೋ ಸಾಹಸ ವಿಚಾರಿಸು
ಬೇಹವರನೆನುತೊರಲಿ ಧೃಷ್ಟದ್ಯುಮ್ನನಿದಿರಾಗೆ
ಸಾಹಸಿಕರಳುಕಿದರು ಕೌರವ
ಮೋಹರದ ಮೊನೆಯಾಳುಗಳು ಸ
ನ್ನಾಹದಲಿ ಪಡಿತಳಿಸಿ ಕರ್ಣ ಕೃಪಾದಿ ನಾಯಕರು (ದ್ರೋಣ ಪರ್ವ, ೧೮ ಸಂಧಿ, ೪೬ ಪದ್ಯ)

ತಾತ್ಪರ್ಯ:
ಧೃಷ್ಟದ್ಯುಮ್ನನು ನುಡಿಯುತ್ತಾ, ದ್ರೋಹಿಯಾದ ದ್ರೋಣನು ಸಿಕ್ಕಿಹಾಕಿಕೊಂಡ, ಜೀವವನ್ನು ತೆಗೆಯಬೇಕೋ ಹೇಗೆ, ಅವನ ಆಪ್ತರನ್ನು ವಿಚಾರಿಸು, ಎನ್ನುತ್ತಾ ಇದಿರಾದನು. ಕೌರವ ಸೇನೆಯ ವೀರರಾದ ಕರ್ಣ ಕೃಪ ಮೊದಲಾದವರು ಪಾಂಡವ ಸೇನೆಗಿದಿರಾಗಲು ಸಜ್ಜಾದರೂ ದ್ರೋಣನು ಸಿಲುಕುವನೆಂಬ ಅಳುಕು ಅವರಲ್ಲಿತ್ತು.

ಅರ್ಥ:
ದ್ರೋಹ: ವಿಶ್ವಾಸಘಾತ, ವಂಚನೆ; ಸಿಲುಕು: ಬಂಧನಕ್ಕೊಳಗಾಗು; ಜೀವ: ಪ್ರಾಣ; ಗ್ರಾಹ: ಹಿಡಿಯುವುದು; ಸಾಹಸ: ಪರಾಕ್ರಮ; ವಿಚಾರಿಸು: ಪರ್ಯಾಲೋಚನೆ; ಬೇಹು: ಗೂಢಚರ್ಯೆ; ಒರಲು: ಅರಚು, ಕೂಗಿಕೊಳ್ಳು; ಇದಿರು: ಎದುರು; ಸಾಹಸಿ: ಪರಾಕ್ರಮಿ; ಅಳುಕು: ಹೆದರು; ಮೋಹರ: ಯುದ್ಧ; ಮೊನೆ: ತುದಿ, ಕೊನೆ, ಹರಿತ; ಆಳು: ಸೇವಕ; ಸನ್ನಾಹ: ಬಂಧನ; ನಾಯಕ: ಒಡೆಯ;

ಪದವಿಂಗಡಣೆ:
ದ್ರೋಹಿ+ ಸಿಲುಕಿದನ್+ಎನುತೆ +ಜೀವ
ಗ್ರಾಹವೋ +ಸಾಹಸ +ವಿಚಾರಿಸು
ಬೇಹವರನ್+ಎನುತ್+ಒರಲಿ +ಧೃಷ್ಟದ್ಯುಮ್ನನ್+ಇದಿರಾಗೆ
ಸಾಹಸಿಕರ್+ಅಳುಕಿದರು +ಕೌರವ
ಮೋಹರದ +ಮೊನೆ+ಆಳುಗಳು +ಸ
ನ್ನಾಹದಲಿ +ಪಡಿತಳಿಸಿ +ಕರ್ಣ +ಕೃಪಾದಿ +ನಾಯಕರು

ಅಚ್ಚರಿ:
(೧) ದ್ರೋಣನನ್ನು ದ್ರೋಹಿ ಎಂದು ಧೃಷ್ಟದ್ಯುಮ್ನ ಕರೆದಿರುವುದು

ಪದ್ಯ ೪೧: ಭೂಮಿಯಲ್ಲೇ ನರಕದ ಕಲ್ಪನೆ ಯಾವಾಗವಾಗುತ್ತದೆ?

ಪಾತಕನು ಪತಿತನು ಕೃತಘ್ನನು
ಘಾತುಕನು ದುರ್ಮತಿ ದುರಾತ್ಮನು
ಭೀತಕನು ದೂಷಕನು ದುರ್ಜನನ ಪ್ರಯೋಜಕನು
ನೀತಿಹೀನನು ಜಾತಿಧರ್ಮಸ
ಮೇತ ದೈವದ್ರೋಹಿಯೆನಲದು
ಭೂತಳದೊಳೇ ನರಕ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ನರಕದ ಪರಿಕಲ್ಪನೆಯನ್ನು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು. ಯಾರು ಭೂಮಿಯಲ್ಲಿ ನಿಂದಿಸುತ್ತಾ, ಇವನು ಪಾಪಿ, ಈತ ನೀಚ, ತನ್ನ ಕರ್ಮಗಳಿಂದ ಕೆಳಗೆಬಿದ್ದವ, ಈತ ತನಗೆ ಮಾಡಿದ ಉಪಕಾರವನ್ನು ಮರೆತವ, ಈತನು ಪರರನ್ನು ಮರ್ದಿಸುವವನು, ದುರ್ಬುದ್ಧಿಯುಳ್ಳವ, ಈತ ಕೆಟ್ಟ ಮನಸ್ಸುಳ್ಳವನು, ದುರಾತ್ಮ, ಈತ ಭೀತಿಯನ್ನು ಹುಟ್ಟಿಸುವವನು, ನಿಂದಕ, ದುಷ್ಟ, ಅಪ್ರಯೋಜಕ, ನೀತಿಗೆಟ್ಟವನು, ಜಾತಿ, ಧರ್ಮ ದೈವಗಳಿಗೆ ದ್ರೋಹ ಬಗೆಯುವವನು ಎಂದು ಜನರು ಯಾರನ್ನಾದರೂ ನಿಂದಿಸಿದರೆ ಅದು ಭೂಮಿಯಲ್ಲಿ ನರಕವನ್ನು ಸೃಷ್ಟಿಸಿದಂತೆ ಎಂದು ಮುನಿಗಳು ಉಪದೇಶಿಸಿದರು.

ಅರ್ಥ:
ಪಾತಕ: ಪಾಪಿ, ದೋಷ; ಪತಿತ:ನೀಚ, ದುಷ್ಟ; ಕೃತಘ್ನ:ಉಪಕಾರವನ್ನು ಮರೆಯುವವನು; ಘಾತುಕ: ನೀಚ, ಕೊಲೆಗೆಡುಕ; ದುರ್ಮತಿ: ಕೆಟ್ಟಬುದ್ಧಿಯುಳ್ಳವ; ದುರಾತ್ಮ: ಕೆಟ್ಟ ಮನಸ್ಸುಳ್ಳವನು, ದುಷ್ಟ; ಭೀತಕ: ಭಯ, ಹೆದರಿಕೆಯನ್ನು ಮೂಡಿಸುವವ; ದೂಷಕ: ನಿಂದಕ; ದುರ್ಜನ: ಕೆಟ್ಟ ಜನ, ದುಷ್ಟ; ಪ್ರಯೋಜಕ: ಉಪಯೋಗ; ನೀತಿ: ಒಳ್ಳೆಯ ನಡತೆ; ನೀತಿಹೀನನು: ಕೆಟ್ಟನಡತೆಯುಳ್ಳವನು; ಜಾತಿ: ಕುಲ; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಸಮೇತ: ಜೊತೆ; ದೈವ: ದೇವರು; ದ್ರೋಹಿ:ಕೇಡನ್ನು ಬಗೆಯುವವನು, ವಂಚಕ; ಭೂತಳ: ಭೂಮಿ; ನರಕ: ಅಧೋಲೋಕ; ಚಿತ್ತೈಸು: ಗಮನವಿಟ್ಟು ಕೇಳು; ಮುನಿ: ಋಷಿ;

ಪದವಿಂಗಡಣೆ:
ಪಾತಕನು +ಪತಿತನು +ಕೃತಘ್ನನು
ಘಾತುಕನು +ದುರ್ಮತಿ +ದುರಾತ್ಮನು
ಭೀತಕನು +ದೂಷಕನು +ದುರ್ಜನನ್+ಅಪ್ರಯೋಜಕನು
ನೀತಿಹೀನನು +ಜಾತಿ+ಧರ್ಮ+ಸ
ಮೇತ +ದೈವ+ದ್ರೋಹಿಯೆನಲ್+ಅದು
ಭೂತಳದೊಳೇ +ನರಕ+ ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಪಾತಕ, ಪತಿತ – ‘ಪ’ಕಾರದ ಜೋಡಿ ಪದಗಳು
(೨) ‘ದು’ಕಾರದ ಪದಗಳ ಬಳಕೆ – ದುರ್ಮತಿ, ದುರಾತ್ಮ, ದೂಷಕ, ದುರ್ಜನ, ದ್ರೋಹಿ

ಪದ್ಯ ೩೫: ವ್ಯವಹಾರದಲ್ಲಿ ರಾಜರ ನಡತೆಯ ಲಕ್ಷಣವೇನು?

ಖೂಳರೊಡನೆ ವಿನೋದ ಭಂಡರೊ
ಳಾಳಿ ಸ್ವಾಮಿ ದ್ರೋಹರೊಡನೆ ಸ
ಮೇಳ ನಂಬುಗೆ ಡಂಭರೊಡನೆ ವಿಕಾರಿಯೊಡನಾಟ
ಸೂಳೆಯರು ಸಮಜೀವಿಗಳು ಕುಲ
ಬಾಲಕಿಯರೋಗಡಿಕೆಯವರು ನೃ
ಪಾಲಜನಕಿದು ಸಹಜ ನಿನ್ನಂತಸ್ಥವೇನೆಂದ (ಸಭಾ ಪರ್ವ, ೧ ಸಂಧಿ, ೩೫ ಪದ್ಯ)

ತಾತ್ಪರ್ಯ:
ನೀಚರೊಡನೆ ವಿನೋದ, ನಾಚಿಕೆಗೆಟ್ಟಾವರೊಡನೆ ಪ್ರೀತಿ, ಸ್ವಾಮಿದ್ರೋಹಿಗಳೊಡನೆ ಹೊಂದಾಣಿಕೆ, ಡಂಭಾಚಾರಿಗಳಲ್ಲಿ ನಂಬಿಕೆ, ದುರ್ನಡತೆಯವರ ಸ್ನೇಹ, ವೇಶ್ಯೆಯರು ಸರಿಸಮಾನರು, ಕುಲಸ್ತ್ರೀಯರಾದ ಪತ್ನಿಯರನ್ನು ಕಂಡರೆ ಓಕರಿಕೆ, ಇದು ರಾಜರ ಸಹಜ ಗುಣ, ಇದರಲ್ಲಿ ನೀನು ಹೇಗೆ ನಡೆಯುವೆ? ಎಂದು ನಾರದರು ಯುಧಿಷ್ಠಿರನನ್ನು ಪ್ರಶ್ನಿಸಿದರು.

ಅರ್ಥ:
ಖೂಳ: ದುಷ್ಟ; ವಿನೋದ: ಸಂತೋಷ; ಭಂಡ: ಲಜ್ಜೆಗೇಡಿ; ಆಳಿ: ಬಯಕೆ, ಉಪೇಕ್ಷೆ; ಸ್ವಾಮಿ: ಒಡೆಯ; ದ್ರೋಹ: ಮೋಸ; ಸಮೇಳ: ಹೊಂದಾಣಿಕೆ; ಡಂಭ: ಮೋಸ, ವಂಚನೆ, ಬೂಟಾಟಿಕೆ; ನಂಬುಗೆ: ವಿಶ್ವಾಸ, ಶ್ರದ್ಧೆ; ವಿಕಾರಿ: ದುರ್ನಡತೆ; ಒಡನಾಟ: ಸ್ನೇಹ; ಸೂಳೆ: ವೇಶ್ಯ; ಸಮಜೀವಿ: ಸರಿಸಮಾನ; ಕುಲಬಾಲಕಿ: ಕುಲಸ್ತ್ರೀ; ಓಗಡಿಕೆ: ವಾಂತಿ, ಜುಗುಪ್ಸೆ; ನೃಪಾಲ: ರಾಜ; ಸಹಜ: ಸಾಮಾನ್ಯ; ಅಂತಸ್ಥ: ಒಳಮನಸ್ಸು;

ಪದವಿಂಗಡಣೆ:
ಖೂಳರೊಡನೆ +ವಿನೋದ +ಭಂಡರೊಳ್
ಆಳಿ +ಸ್ವಾಮಿ +ದ್ರೋಹರೊಡನೆ +ಸ
ಮೇಳ +ನಂಬುಗೆ +ಡಂಭರೊಡನೆ+ ವಿಕಾರಿಯೊಡನಾಟ
ಸೂಳೆಯರು +ಸಮಜೀವಿಗಳು +ಕುಲ
ಬಾಲಕಿಯರ್+ಓಗಡಿಕೆಯವರು+ ನೃ
ಪಾಲ+ಜನಕಿದು+ ಸಹಜ+ ನಿನ್+ಅಂತಸ್ಥವೇನೆಂದ

ಅಚ್ಚರಿ:
(೧) ದುಷ್ಟ ಮನುಷ್ಯರ ಪರಿಚಯ: ಖೂಳ, ಭಂಡ, ದ್ರೋಹಿ, ಡಂಭ, ವಿಕಾರಿ, ಸೂಳೆ