ಪದ್ಯ ೩೦: ವೀರಸ್ವರ್ಗವು ಹೇಗೆ ಬರುತ್ತದೆ?

ಉಗಿದು ಬಿಲ್ಲಿನ ತಿರುವ ಕೊರಳಲಿ
ಬಿಗಿಯೆ ಭಯದಲಿ ದ್ರುಪದಸುತ ಬೆರ
ಳುಗಳ ಬಾಯಲಿ ಬೇಡಿಕೊಂಡನು ದ್ರೋಣನಂದನನ
ಉಗಿದಡಾಯ್ದದಲೆನ್ನ ಶಿರವನು
ತೆಗೆದು ಕಳೆಯೈ ಶಸ್ತ್ರಘಾತದಿ
ನುಗುಳಿಸಸುವನು ತನಗೆ ವೀರಸ್ವರ್ಗವಹುದೆಂದ (ಗದಾ ಪರ್ವ, ೯ ಸಂಧಿ, ೩೦ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ತನ್ನ ಬಿಲ್ಲನ್ನು ತೆಗೆದು, ಅದರ ಹೆದೆಯನ್ನು ಧೃಷ್ಟದ್ಯುಮ್ನನ ಕೊರಳಿಗೆ ಬಿಗಿದನು. ಭಯಗೊಂಡ ಧೃಷ್ಟದ್ಯುಮ್ನನು ಬಾಯಲ್ಲಿ ಬೆರಳಿಟ್ಟುಕೊಂಡು ಅಶ್ವತ್ಥಾಮನಲ್ಲಿ ಬೇಡಿದನು, “ಕತ್ತಿಯನ್ನು ಹಿರಿದು ಕೊರಳನ್ನು ಕೊಯ್ದು ನನ್ನ ಶಿರವನ್ನು ತೆಗೆ, ಹಾಗಾದರೆ ನನಗೆ ವೀರಸ್ವರ್ಗ ದೊರೆಯುತ್ತದೆ” ಎಂದನು.

ಅರ್ಥ:
ಉಗಿ: ಹೊರಹಾಕು; ಬಿಲ್ಲು: ಚಾಪ; ತಿರುವು: ತಿರುಗಿಸು; ಕೊರಳು: ಗಂಟಲು; ಬಿಗಿ: ಭದ್ರವಾಗಿರುವುದು; ಭಯ: ಹೆದರು; ಸುತ: ಮಗ; ಬೆರಳು: ಅಂಗುಲಿ; ಬೇಡು: ಯಾಚಿಸು; ನಂದನ: ಮಗ; ಶಿರ: ತಲೆ; ತೆಗೆ: ಹೊರತರು; ಕಳೆ: ಬೀಡು, ತೊರೆ; ಶಸ್ತ್ರ: ಆಯುಧ; ಘಾತ: ಪೆಟ್ಟು; ಉಗುಳು: ಉಗಿ, ಹೊರಹಾಕು; ಅಸು: ಪ್ರಾಣ; ಸ್ವರ್ಗ: ನಾಕ;

ಪದವಿಂಗಡಣೆ:
ಉಗಿದು +ಬಿಲ್ಲಿನ +ತಿರುವ +ಕೊರಳಲಿ
ಬಿಗಿಯೆ +ಭಯದಲಿ +ದ್ರುಪದಸುತ +ಬೆರ
ಳುಗಳ +ಬಾಯಲಿ +ಬೇಡಿಕೊಂಡನು +ದ್ರೋಣ+ನಂದನನ
ಉಗಿದಡ್+ಆಯ್ದದಲ್+ಎನ್ನ+ ಶಿರವನು
ತೆಗೆದು +ಕಳೆಯೈ +ಶಸ್ತ್ರ+ಘಾತದಿನ್
ಉಗುಳಿಸ್+ಅಸುವನು +ತನಗೆ +ವೀರಸ್ವರ್ಗವ್+ಅಹುದೆಂದ

ಅಚ್ಚರಿ:
(೧) ಉಗಿ, ಬಿಗಿ – ಪ್ರಾಸ ಪದಗಳು
(೨) ಸುತ, ನಂದನ – ಸಮಾನಾರ್ಥಕ ಪದ
(೩) ಪ್ರಾಣ ತೆಗೆ ಎಂದು ಹೇಳುವ ಪರಿ – ಶಸ್ತ್ರಘಾತದಿ ನುಗುಳಿಸಸುವನು

ಪದ್ಯ ೩೫: ಕೌರವನನ್ನು ಕಂಡ ಪಾಂಡವರ ಸ್ಥಿತಿ ಹೇಗಾಯಿತು?

ಅರಳಿತರಸನ ವದನ ಭೀಮನ
ಹರುಷವುಕ್ಕಿತು ಪಾರ್ಥನುಬ್ಬಿದ
ನುರುಮುದದಿನುರೆ ನಕುಲನುಬ್ಬರಿಸಿದನು ಸಹದೇವ
ಹರಕೆಯಲಿ ದೈವಂಗಳಿತ್ತವು
ವರವನೆಂದರು ದ್ರೌಪದೀಸುತ
ರುರು ಶಿಖಂಡಿ ದ್ರುಪದಸುತ ಸಾತ್ಯಕಿಗಳೊಲವಿನಲಿ (ಗದಾ ಪರ್ವ, ೫ ಸಂಧಿ, ೩೫ ಪದ್ಯ)

ತಾತ್ಪರ್ಯ:
ದುರ್ಯೋಧನನನ್ನು ಕಂಡು ಧರ್ಮಜನ ಮುಖವರಳಿತು, ಭೀಮನಿಗೆ ಹರ್ಷವುಕ್ಕಿತು, ಅರ್ಜುನ, ನಕುಲ, ಸಹದೇವರು ಅತೀವ ಸಂತಸಗೊಂಡರು. ಉಪಪಾಂಡವರು, ಧೃಷ್ಟದ್ಯುಮ್ನ, ಶಿಖಂಡಿ, ಸಾತ್ಯಕಿಗಳು ಹರಕೆ ಕಟ್ಟಿಕೋಂಡಕ್ಕೆ ದೇವತೆಗಳು ವರವನ್ನು ಕೊಟ್ಟರು ಎಂದುಕೊಂಡರು.

ಅರ್ಥ:
ಅರಳು: ವಿಕಸಿಸು; ಅರಸ: ರಾಜ; ವದನ: ಮುಖ; ಹರುಷ: ಸಮ್ತಸ; ಉಕ್ಕು: ಹೆಚ್ಚಾಗು; ಉಬ್ಬು: ಹಿಗ್ಗು; ಉರು: ಎದೆ; ಮುದ: ಸಂತಸ; ಉಬ್ಬರಿಸು: ಉತ್ಸಾಹಿತನಾಗು; ಹರಕೆ: ಮೀಸಲು, ಮುಡಿಪು, ಸಂಕಲ್ಪ; ದೈವ: ಭಗವಂತ; ವರ: ಆಶೀರ್ವಾದ; ಸುತ: ಮಗ; ಒಲವು: ಪ್ರೀತಿ; ಉರೆ: ಅತಿಶಯವಾಗಿ; ಉರು: ವಿಶೇಷವಾದ;

ಪದವಿಂಗಡಣೆ:
ಅರಳಿತ್+ಅರಸನ+ ವದನ+ ಭೀಮನ
ಹರುಷವ್+ಉಕ್ಕಿತು +ಪಾರ್ಥನ್+ಉಬ್ಬಿದನ್
ಉರು+ಮುದದಿನ್+ಉರೆ+ ನಕುಲನ್+ಉಬ್ಬರಿಸಿದನು+ ಸಹದೇವ
ಹರಕೆಯಲಿ +ದೈವಂಗಳ್+ಇತ್ತವು
ವರವನೆಂದರು +ದ್ರೌಪದೀಸುತರ್
ಉರು +ಶಿಖಂಡಿ +ದ್ರುಪದಸುತ +ಸಾತ್ಯಕಿಗಳ್+ಒಲವಿನಲಿ

ಅಚ್ಚರಿ:
(೧) ಉಬ್ಬು, ಉರು, ಉರೆ, ಉಬ್ಬರಿಸು – ಪದಗಳ ಬಳಕೆ
(೨) ಸಂತೋಷಗೊಂಡನು ಎಂದು ಹೇಳಲು – ಅರಳಿತರಸನ ವದನ

ಪದ್ಯ ೩೧: ಅರ್ಜುನನು ಸೇನಾಧಿಪತಿಗೆ ಯಾರ ಹೆಸರನ್ನು ಸೂಚಿಸಿದನು?

ದ್ರುಪದನಾಗಲಿಯೆಂದು ಕೆಲಬರು
ವಿಪುಳ ಬಲದ ವಿರಾಟನಾಗಲಿ
ನೃಪ ಶಿಖಂಡಿಯೆಯೆಂದು ಕೆಲಬರು ಭೀಮಸುತನೆಂದು
ಅಪರಿಮಿತ ಮತವಾಗೆ ಸಮರ
ವೃಷಗತಾರಿ ಸುರೇಂದ್ರ ಸುತನೀ
ದ್ರುಪದಸುತ ಸೇನಾಧಿಪತಿಯಹುದೆಮ್ಮ ಮತೆವೆಂದ (ಉದ್ಯೋಗ ಪರ್ವ, ೧೨ ಸಂಧಿ, ೩೧ ಪದ್ಯ)

ತಾತ್ಪರ್ಯ:
ದ್ರುಪದನೇ ಸೇನಾಧಿಪತಿಯಾಗಲಿ, ವಿರಾಟನೇ ಸೇನಾಪತಿಯಾಗಲಿ, ಶಿಖಂಡಿಯಾಗಲಿ, ಘಟೋತ್ಕಚನಾಗಲಿ ಎಂದು ಅನೇಕರು ಹಲವು ಮತಗಳನ್ನು ಹೇಳಲು, ಅರ್ಜುನನು ಧೃಷ್ಟದ್ಯುಮ್ನನು ಸೇನಾಪತಿಯಾಗಲಿ ಎಂದು ಅವನ ವಿಚಾರ ಹೇಳಿದ.

ಅರ್ಥ:
ಕೆಲಬರು: ಸ್ವಲ್ಪ, ಕೆಲವರು; ವಿಪುಳ: ಬಹಳ; ಬಲ: ಶಕ್ತಿ, ಸಾಮರ್ಥ್ಯ; ನೃಪ: ರಾಜ; ಸುತ: ಮಗ; ಅಪರಿಮಿತ: ಬಹಳ, ಅನಂತ; ಮತ: ವಿಚಾರ; ಸಮರ: ಯುದ್ಧ; ಸುರೇಂದ್ರ: ಇಂದ್ರ; ಸುತ: ಮಗ; ಸೇನಾಧಿಪತಿ: ದಂಡಾಧಿಕಾರಿ; ಅರಿ: ವೈರಿ;

ಪದವಿಂಗಡಣೆ:
ದ್ರುಪದನಾಗಲಿ+ಯೆಂದು+ ಕೆಲಬರು
ವಿಪುಳ+ ಬಲದ+ ವಿರಾಟನಾಗಲಿ
ನೃಪ +ಶಿಖಂಡಿಯೆ+ಯೆಂದು +ಕೆಲಬರು+ ಭೀಮಸುತನೆಂದು
ಅಪರಿಮಿತ +ಮತವಾಗೆ +ಸಮರ
ವೃಷಗತ+ಅರಿ+ ಸುರೇಂದ್ರ +ಸುತನ್+ಈ
ದ್ರುಪದಸುತ +ಸೇನಾಧಿಪತಿ+ಯಹುದೆಮ್ಮ+ ಮತೆವೆಂದ

ಅಚ್ಚರಿ:
(೧) ಸುತ – ೩ ಬಾರಿ ಪ್ರಯೋಗ ಭೀಮಸುತ, ಸುರೇಂದ್ರಸುತ, ದ್ರುಪದಸುತ
(೨) ದ್ರುಪದ – ೧, ೬ ಸಾಲಿನ ಮೊದಲ ಪದ