ಪದ್ಯ ೨೬: ಜೀವಾತ್ಮ ಹೋದಮೇಲೆ ಏನೆಂದು ಸಂಭೋದಿಸುತ್ತಾರೆ?

ಅರಸನೊಡೆಯನು ದಂಡನಾಥನು
ಗುರುಹಿರಿಯನುತ್ತಮನು ದೈವಾ
ಪರನು ಸಾಹಿತ್ಯನು ಸದಸ್ಯನು ಸತ್ಪುರುಷನೆಂದು
ಪರಿಪರಿಯ ಗುಣನಾಮದೊಳಹಂ
ಕರಿಸುವರು ಜೀವಾತ್ಮ ತೊಲಗಿದೊ
ಡಿರದೆ ಹೆಣನೆಂದೆಂಬರೈ ಭೂಪಾಲ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ನಾನು ರಾಜ, ಯಜಮಾನ, ಸೇನಾಧಿಪತಿ, ಆಚಾರ್ಯ, ದೊಡ್ಡವ, ಶ್ರೇಷ್ಠನು, ದೇವತ ಆರಾಧಕನು, ಸಾಹಿತಿಯು, ಸದಸ್ಯನು, ಒಳ್ಳೆಯ ಮನುಷ್ಯನು, ಹೀಗೆ ಹಲವಾರು ನಾಮಾವಳಿಯನ್ನು ಅಲಂಕರಿಸಿ ಅಹಂಕಾರದಿಂದ ಮೆರೆಯುತ್ತಿರುವ ದೇಹವು, ಅದರೊಳಗಿರುವ ಜೀವಾತ್ಮವು ಹೋದಮೇಲೆ ಹೆಣವೆಂಬ ಒಂದೇ ಪದದಿಂದ ಕರೆಯುತ್ತಾರೆ ಎಂದು ಸನತ್ಸುಜಾತರು ಜೀವಿತದ ಅರೆಕ್ಷಣದ ಬದುಕಿನ ಸತ್ಯವನ್ನು ಹೇಳಿದರು.

ಅರ್ಥ:
ಅರಸ: ರಾಜ; ಒಡೆಯ: ಯಜಮಾನ; ದಂಡನಾಥ: ಸೇನಾಧಿಪತಿ; ಗುರು: ಆಚಾರ್ಯ; ಹಿರಿಯ: ದೊಡ್ಡವ; ಉತ್ತಮ: ಶ್ರೇಷ್ಠ; ದೈವಾಪರ: ದೇವರಲ್ಲಿ ನಂಬಿಕೆಯಿರುವವ; ಸಾಹಿತಿ: ಸಾಹಿತ್ಯಕೃಷಿ ಮಾದುವವ; ಸದಸ್ಯ: ಸಂಘ, ಸಮಿತಿ ಘಟಕಗಳಲ್ಲಿ ಸಂಬಂಧವನ್ನು ಹೊಂದಿರುವವನು; ಸತ್ಪುರುಷ: ಒಳ್ಳೆಯ ಮನುಷ್ಯ; ಪರಿಪರಿ: ಹಲವಾರು; ಗುಣ: ನಡತೆ, ಸ್ವಭಾವ; ನಾಮ: ಹೆಸರು; ಅಹಂಕರಿಸು: ನಾನು ಎಂಬುದನ್ನು ಮೆರೆಸು, ಗರ್ವ; ಜೀವಾತ್ಮ: ಜೀವಿಗಳಲ್ಲೆಲ್ಲ ಇರುವ ಆತ್ಮ; ತೊಲಗು: ಹೊರಹೋಗು, ತ್ಯಜಿಸು; ಹೆಣ: ಜೀವವಿಲ್ಲದ, ಚರ; ಭೂಪಾಲ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಅರಸನ್+ಒಡೆಯನು +ದಂಡನಾಥನು
ಗುರು+ಹಿರಿಯನ್+ಉತ್ತಮನು +ದೈವಾ
ಪರನು +ಸಾಹಿತ್ಯನು+ ಸದಸ್ಯನು+ ಸತ್ಪುರುಷನೆಂದು
ಪರಿಪರಿಯ +ಗುಣನಾಮದೊಳ್+ಅಹಂ
ಕರಿಸುವರು +ಜೀವಾತ್ಮ +ತೊಲಗಿದೊಡ್
ಇರದೆ +ಹೆಣನೆಂದ್+ಎಂಬರೈ +ಭೂಪಾಲ +ಕೇಳೆಂದ

ಅಚ್ಚರಿ:
(೧) ೧೦ ರೀತಿಯ ಗುಣವಾಚಕಗಳನ್ನು ದೇಹಕ್ಕೆ ಹೇಳುವ ಪರಿಯನ್ನು ತೋರಿಸುವ ಪದ್ಯ
(೨) ‘ಸ’ ಕಾರದ ತ್ರಿವಳಿ ಪದ – ಸಾಹಿತ್ಯನು ಸದಸ್ಯನು ಸತ್ಪುರುಷನೆಂದು;