ಪದ್ಯ ೧೩: ಭೀಮನು ಯಾರ ಮಕುಟವನ್ನು ಒದೆದನು?

ಹಳುವದಲಿ ನಾನಾ ಪ್ರಕಾರದ
ಲಳಲಿಸಿದ ಫಲಭೋಗವನು ನೀ
ತಲೆಯಲೇ ಧರಿಸೆನುತ ವಾಮಾಂಘ್ರಿಯಲಿ ಮಕುಟವನು
ಇಳುಹಿದನು ಗೌರ್ಗೌವೆನುತ ಬಿಡ
ದುಲಿದೆಲಾ ಎನುತೊದೆದು ಮಕುಟವ
ಕಳಚಿದನು ಕೀಲಣದ ಮಣಿಗಳು ಕೆದರೆ ದೆಸೆದೆಸೆಗೆ (ಗದಾ ಪರ್ವ, ೮ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕಾಡಿನಲ್ಲಿ ನಮ್ಮನ್ನು ಹಲವು ರೀತಿಯಿಂದ ದುಃಖಪಡಿಸಿದ ಫಲವನ್ನು ತಲೆಯಲ್ಲಿಯೇ ಧರಿಸು ಎನ್ನುತ್ತಾ ಎಡಗಾಲಿನಿಂದ ಮಕುಟವನ್ನು ಕೆಳಕ್ಕೊದೆದು, ನಮ್ಮನ್ನು ನೋಡಿ ಗೌರ್ಗೌ ಎಂದು ಕೂಗಿದೆಯಲ್ಲಾ ಎನ್ನುತ್ತಾ ಮಕುಟವನ್ನು ಒದೆಯಲು ಅದರಲ್ಲಿ ಜೋಡಿಸಿದ್ದ ಮಣಿಗಳು ಸುತ್ತಲೂ ಹಾರಿದವು.

ಅರ್ಥ:
ಹಳುವ: ಕಾಡು; ನಾನಾ: ಹಲವಾರು; ಪ್ರಕಾರ: ರೀತಿ; ಅಳಲು: ದುಃಖಿಸು; ಫಲ: ಪರಿಣಾಮ; ಭೋಗ: ಸುಖವನ್ನು ಅನುಭವಿಸುವುದು; ತಲೆ: ಶಿರ; ಧರಿಸು: ಹಿಡಿ, ತೆಗೆದುಕೊಳ್ಳು; ವಾಮ: ಎಡಭಾಗ; ಅಂಘ್ರಿ: ಪಾದ; ಮಕುಟ: ಕಿರೀಟ; ಇಳುಹು: ಕೆಳಗೆ ಜಾರು; ಗೌರ್ಗೌ: ಶಬ್ದವನ್ನು ವರ್ಣಿಸುವ ಪರಿ; ಬಿಡು: ತೊರೆ; ಉಲಿ: ಕೂಗು; ಒದೆ:ತುಳಿ, ಮೆಟ್ಟು; ಕಳಚು: ಬೇರ್ಪಡಿಸು, ಬೇರೆಮಾಡು; ಕೀಲು: ಅಗುಳಿ, ಬೆಣೆ; ಮಣಿ: ಬೆಲೆಬಾಳುವ ಹರಳು; ಕೆದರು: ಹರಡು; ದೆಸೆ: ದಿಕ್ಕು;

ಪದವಿಂಗಡಣೆ:
ಹಳುವದಲಿ +ನಾನಾ +ಪ್ರಕಾರದಲ್
ಅಳಲಿಸಿದ +ಫಲಭೋಗವನು +ನೀ
ತಲೆಯಲೇ +ಧರಿಸೆನುತ +ವಾಮಾಂಘ್ರಿಯಲಿ +ಮಕುಟವನು
ಇಳುಹಿದನು +ಗೌರ್ಗೌವೆನುತ +ಬಿಡದ್
ಉಲಿದೆಲಾ +ಎನುತೊದೆದು+ ಮಕುಟವ
ಕಳಚಿದನು +ಕೀಲಣದ +ಮಣಿಗಳು +ಕೆದರೆ+ ದೆಸೆದೆಸೆಗೆ

ಅಚ್ಚರಿ:
(೧) ಶಬ್ದವನ್ನು ವರ್ಣಿಸುವ ಪರಿ – ಗೌರ್ಗೌ

ಪದ್ಯ ೩: ಅರ್ಜುನನು ತನ್ನ ಆಯುಧಗಳನ್ನು ಯಾವಾಗ ಪೂಜಿಸಿದನು?

ಒಡನೆ ಗಜರವ ವಾದ್ಯದಲಿ ಕೆಂ
ಪಡರಿದೋಗರಸಹಿತ ಭೂತಕೆ
ಬಡಿಸಿದರು ಮಾಂತ್ರಿಕರು ಬಲಿಗೆದರಿದರು ದೆಸೆದೆಸೆಗೆ
ತೊಡವು ವಸನಾದಿಗಳಲೊಪ್ಪಂ
ಬಡುವ ಬಲಿಯನು ಹರಿಯೊಳರ್ಪಿಸಿ
ನಡುವಿರುಳು ಕಲಿಪಾರ್ಥನರ್ಚಿಸಿದನು ನಿಜಾಯುಧವ (ದ್ರೋಣ ಪರ್ವ, ೯ ಸಂಧಿ, ೩ ಪದ್ಯ)

ತಾತ್ಪರ್ಯ:
ವಾದ್ಯಗಳು ಮೊಳಗುತ್ತಿರಲು, ಕೆಂಪು ಬಣ್ಣದ ಅನ್ನದಿಂದ ಮಾಂತ್ರಿಕರು ಭೂತಗಳಿಗೆ ದಿಗ್ಬಲೆಯನ್ನು ಕೊಟ್ಟರು. ಆಹಾರ ವಸ್ತ್ರಗಳಿಂದ ಕೂಡಿದ ಬಲಿಯನ್ನು ಶ್ರೀಕೃಷ್ಣನಿಗರ್ಪಿಸಿ ನಡುರಾತ್ರಿಯಲ್ಲಿ ಅರ್ಜುನನು ತನ್ನ ಆಯುಧಗಳನ್ನು ಪೂಜಿಸಿದನು.

ಅರ್ಥ:
ಒಡನೆ: ಕೂಡಲೆ; ಗಜ: ಆನೆ, ದೊಡ್ಡ; ರವ: ಧ್ವನಿ; ವಾದ್ಯ: ಸಂಗೀತದ ಸಾಧನ; ಕೆಂಪು: ರಕ್ತವರ್ಣ; ಓಗರ: ಊಟ; ಸಹಿತ: ಜೊತೆ; ಭೂತ: ದೆವ್ವ; ಬಡಿಸು: ಉಣಬಡಿಸು; ಮಾಂತ್ರಿಕ: ಮಾಟಮಾಡುವವ; ಬಲಿ: ಕಾಣಿಕೆ; ಕೆದರು: ಹರಡು; ದೆಸೆ: ದಿಕ್ಕು; ತೊಡವು: ಆಭರಣ, ತೊಡಿಗೆ; ವಸನ: ದೇಹ; ವಸ್ತ್ರ, ಉಡುಗೆ; ಒಪ್ಪು: ಸಮ್ಮತಿಸು; ಹರಿ: ವಿಷ್ಣು; ಅರ್ಪಿಸು: ನೀಡು; ನಡುವಿರುಳು: ನಡುರಾತ್ರಿ; ಕಲಿ: ಶೂರ; ಅರ್ಚಿಸು: ಪೂಜಿಸು; ಆಯುಧ: ಶಸ್ತ್ರ;

ಪದವಿಂಗಡಣೆ:
ಒಡನೆ +ಗಜರವ +ವಾದ್ಯದಲಿ +ಕೆಂಪ್
ಅಡರಿದ್+ಓಗರ+ಸಹಿತ +ಭೂತಕೆ
ಬಡಿಸಿದರು +ಮಾಂತ್ರಿಕರು +ಬಲಿಗೆದರಿದರು +ದೆಸೆದೆಸೆಗೆ
ತೊಡವು +ವಸನಾದಿಗಳಲ್+ಒಪ್ಪಂ
ಬಡುವ +ಬಲಿಯನು +ಹರಿಯೊಳ್+ಅರ್ಪಿಸಿ
ನಡುವಿರುಳು +ಕಲಿ+ಪಾರ್ಥನ್+ಅರ್ಚಿಸಿದನು +ನಿಜಾಯುಧವ

ಅಚ್ಚರಿ:
(೧) ದೊಡ್ಡ ಶಬ್ದ ಎಂದು ಹೇಳಲು – ಗಜರವ ಪದದ ಬಳಕೆ

ಪದ್ಯ ೪೪: ಕೌರವ ಪಾಳೆಯ ಸ್ಥಿತಿ ಏನಾಯಿತು?

ಪಾಳೆಯವು ಗಜಬಜಿಸೆ ತೊಳಲಿಕೆ
ಯಾಳು ನೆರೆದುದು ಕೋರಡಿಯ ಮುಳು
ವೇಲಿಗಾಂತರು ದೇಹ ಹರಿಸಿದರಖಿಳ ದೆಸೆದೆಸೆಗೆ
ಮೇಲುಗುದುರೆಗಳೊದಗಿದವು ಭೂ
ಪಾಲಕರು ತಲೆಗೆದರಿ ಹುಯ್ಯಲ
ನಾಲಿಸುತ ಹೊರವಂಟು ತಳಕೆಳಕಾಯ್ತು ನೃಪಕಟಕ (ದ್ರೋಣ ಪರ್ವ, ೮ ಸಂಧಿ, ೪೪ ಪದ್ಯ)

ತಾತ್ಪರ್ಯ:
ಪಾಳೆಯದಲ್ಲಿ ಭಾರಿ ಗಲಭೆಯಾಯಿತು, ನೊಮ್ದ ಯೋಧರು ಸೇರಿ, ಮುಳ್ಳು ಬೇಲಿಯ ಬಳಿ ರಕ್ಷಣೆಗೆ ನಿಂತರು. ವಿಷಯವನ್ನು ತಿಳಿಯಲು ಬೇಹುಗಾರರನ್ನು ದಿಕ್ಕು ದಿಕ್ಕಿಗೆ ಅಟ್ಟಿದರು. ಕುದುರೆಗಳು ಮುಂದೆ ಬಂದು ನಿಂತವು. ತಲೆಕೆದರಿದ ರಾಜರು ಈ ಸದ್ದನ್ನು ಕೇಳಿ ಬೀಡಿನಿಂದ ಹೊರಬಂದರು. ಕೌರವ ಪಾಳೆಯು ಅಸ್ತವ್ಯಸ್ತವಾಯಿತು.

ಅರ್ಥ:
ಪಾಳೆ: ಬಿಡಾರ; ಗಜಬಜ: ಗೊಂದಲ; ತೊಳಲು: ಬವಣೆ, ಸಂಕಟ; ಆಳು: ಯೋಧ; ನೆರೆ: ಗುಂಪು; ಕೋರಡಿ: ಸಾರವಿಲ್ಲದಿರುವಿಕೆ; ಮುಳುವೇಲಿ: ಮುಳ್ಳಿನ ಬೇಲಿ; ದೇಹ: ತನು; ಹರಿಸು: ಚೆಲ್ಲು; ಅಖಿಳ: ಎಲ್ಲಾ; ದೆಸೆ: ದಿಕ್ಕು; ಮೇಲು: ಮುಂದೆ; ಕುದುರೆ: ಅಶ್ವ; ಒದಗು: ಲಭ್ಯ, ದೊರೆತುದು; ಭೂಪಾಲಕ: ರಾಜ; ತಲೆ: ಶಿರ; ಕೆದರು: ಹರಡು; ಹುಯ್ಯಲು: ಪೆಟ್ಟು, ಹೊಡೆತ; ಆಲಿಸು: ಕೇಳು; ಹೊರವಂಟು: ತೆರಳು; ತಳಕೆಳ: ಮೇಲೆ ಕೆಳಗೆ; ನೃಪ: ರಾಜ; ಕಟಕ: ಸೈನ್ಯ, ಗುಂಪು;

ಪದವಿಂಗಡಣೆ:
ಪಾಳೆಯವು +ಗಜಬಜಿಸೆ +ತೊಳಲಿಕೆ
ಆಳು +ನೆರೆದುದು +ಕೋರಡಿಯ +ಮುಳು
ವೇಲಿಗಾಂತರು +ದೇಹ +ಹರಿಸಿದರ್+ಅಖಿಳ+ ದೆಸೆದೆಸೆಗೆ
ಮೇಲು+ಕುದುರೆಗಳ್+ಒದಗಿದವು +ಭೂ
ಪಾಲಕರು +ತಲೆಗೆದರಿ +ಹುಯ್ಯಲನ್
ಆಲಿಸುತ +ಹೊರವಂಟು +ತಳಕೆಳಕಾಯ್ತು+ ನೃಪ+ಕಟಕ

ಅಚ್ಚರಿ:
(೧) ಗಜಬಜಿಸೆ, ದೆಸೆದೆಸೆಗೆ, ತಳಕೆಳ – ಪದಗಳ ಬಳಕೆ

ಪದ್ಯ ೧೧: ಅಭಿಮನ್ಯುವಿನ ಮೇಲೆ ಹೇಗೆ ಆಕ್ರಮಣ ಮಾಡಲಾಯಿತು?

ಮನದ ಕೆಚ್ಚುಳ್ಳದಟನಹೆ ಮಾ
ತಿನ ಸಘಾಡಿಕೆ ಲೇಸು ಪಾರ್ಥನ
ತನಯನಲ್ಲಾ ಪೂತು ಪಾಯಿಕು ಎನುತ ಷಡುರಥರು
ತನತನಗೆ ಕೆಂಗೋಲಿನಲಿ ಮು
ಮ್ಮೊನೆಯ ಬೋಳೆಯ ಸರಳಿನಲಿ ಸಾ
ಧನ ಸಮಗ್ರರು ಶಿಶುವನೆಚ್ಚರು ದೆಸೆದೆಸೆಗೆ ಕವಿದು (ದ್ರೋಣ ಪರ್ವ, ೬ ಸಂಧಿ, ೧೧ ಪದ್ಯ)

ತಾತ್ಪರ್ಯ:
ನಿನ್ನ ಮನಸ್ಸಿನಲ್ಲಿ ಕೆಚ್ಚಿದೆ, ನೀನು ದರ್ಪಿಷ್ಠ, ನೀನು ಅರ್ಜುನನ ಪುತ್ರನಲ್ಲವೇ? ಮಾತನ್ನು ಸೊಗಸಾಗಿ ಆಡುತ್ತೀ, ಭಲೇ ಎಂದು ಆ ಆರು ಮಹಾರಥಿಕರು ಚೂಪಾದ ಬಾಣಗಳಿಂದ ಅಭಿಮನ್ಯುವಿನ ಮೇಲೆ ಎಲ್ಲಾ ದಿಕ್ಕುಗಳಿಂದಲೂ ಬಾಣಗಳನ್ನು ಬಿಟ್ಟರು.

ಅರ್ಥ:
ಮನ: ಮನಸ್ಸು; ಕೆಚ್ಚು: ಧೈರ್ಯ, ಸಾಹಸ; ಅದಟ: ಶೂರ, ಪರಾಕ್ರಮಿ; ಮಾತು: ವಾಣಿ; ಸಘಾಡ: ರಭಸ,ವೇಗ; ಲೇಸು: ಒಳಿತು; ತನಯ: ಮಗ; ಪೂತು: ಭಲೇ; ಪಾಯಕು: ಭಲೇ; ರಥ: ಬಂಡಿ; ಕೆಂಗೋಲು: ಚೂಪಾದ ಬಾಣ; ಮುಮ್ಮೊನೆ: ಮುಂಬದಿ, ಮುಂಭಾಗ; ಬೋಳೆ: ಒಂದು ಬಗೆಯ ಹರಿತವಾದ ಬಾಣ; ಸರಳು: ಬಾಣ; ಸಾಧನ: ಉಪಕರಣ; ಸಮಗ್ರ: ಎಲ್ಲಾ; ಶಿಶು: ಚಿಕ್ಕವ; ಎಚ್ಚು: ಬಾಣ ಪ್ರಯೋಗ ಮಾಡು; ದೆಸೆ: ದಿಕ್ಕು; ಕವಿ: ಆವರಿಸು;

ಪದವಿಂಗಡಣೆ:
ಮನದ+ ಕೆಚ್ಚುಳ್+ಅದಟನ್+ಅಹೆ+ ಮಾ
ತಿನ +ಸಘಾಡಿಕೆ+ ಲೇಸು +ಪಾರ್ಥನ
ತನಯನಲ್ಲಾ +ಪೂತು +ಪಾಯಿಕು +ಎನುತ +ಷಡುರಥರು
ತನತನಗೆ +ಕೆಂಗೋಲಿನಲಿ +ಮು
ಮ್ಮೊನೆಯ +ಬೋಳೆಯ +ಸರಳಿನಲಿ+ ಸಾ
ಧನ+ ಸಮಗ್ರರು +ಶಿಶುವನ್+ಎಚ್ಚರು +ದೆಸೆದೆಸೆಗೆ+ ಕವಿದು

ಅಚ್ಚರಿ:
(೧) ಅಭಿಮನ್ಯುವನ್ನು ಹೊಗಳುವ ಪರಿ – ಮನದ ಕೆಚ್ಚುಳ್ಳದಟನಹೆ ಮಾತಿನ ಸಘಾಡಿಕೆ ಲೇಸು

ಪದ್ಯ ೨೯: ದೇವತೆಗಳ ವಿಮಾನಗಳೇಕೆ ದಿಕ್ಕು ದಿಕ್ಕಿಗೆ ಓಡಿದವು?

ಎಲವೊ ಕೌರವ ಸಹಿತ ಕಮಠನ
ಕೆಳಗೆ ಧ್ರುವನಿಂ ಮೇಲೆ ಹೊಕ್ಕರೆ
ಕೊಲುವೆನಲ್ಲದೆ ಬಿಡುವೆನೇ ಫಡ ನಿಲ್ಲುನಿಲ್ಲೆನುತ
ತುಳುಕಿದನು ಕೆಂಗೋಲನಿನ ಮಂ
ಡಲಕೆ ದಿಗ್ಭ್ರಮೆಯಾಯ್ತು ನಭದಲಿ
ಸುಳಿವ ಸುರರ ವಿಮಾನತತಿ ಚೆಲ್ಲಿದವು ದೆಸೆದೆಸೆಗೆ (ಅರಣ್ಯ ಪರ್ವ, ೨೧ ಸಂಧಿ, ೨೯ ಪದ್ಯ)

ತಾತ್ಪರ್ಯ:
ಎಲವೋ ಚಿತ್ರಸೇನ, ಕೌರವನ ಸಮೇತ ಆಮೆಯ ಕೆಳಗೆ ಹೊಕ್ಕರೂ, ಧ್ರುವಮಂಡಲದ ಮೇಲೆ ಹೋದರೂ ನಾನು ಬಿಡುವುದಿಲ್ಲ. ನಿಲ್ಲು ನಿಲ್ಲು ಎನ್ನುತ್ತಾ ಅರ್ಜುನನು ಕೆಂಪಾದ ಬಾಣಗಳನ್ನು ಬಿಡಲು, ಸೂರ್ಯಮಂಡಲಕ್ಕೆ ದಿಗ್ಭ್ರಮೆಯಾಯಿತು. ದೇವತೆಗಳ ವಿಮಾನಗಳು ದಿಕ್ಕು ದಿಕ್ಕಿಗೆ ಓಡಿದವು.

ಅರ್ಥ:
ಸಹಿತ: ಜೊತೆ; ಕಮಠ: ಆಮೆ, ಕೂರ್ಮ; ಕೆಳಗೆ: ಅಡಿ; ಧುರ್ವ: ನಕ್ಷತ್ರದ ಹೆಸರು; ಮೇಲೆ: ಎತ್ತರ; ಹೊಕ್ಕು: ಸೇರು; ಕೊಲು: ಸಾಯಿಸು; ಫಡ: ತಿರಸ್ಕಾರದ ಮಾತು; ನಿಲ್ಲು: ತಡೆ; ತುಳುಕು: ಉಕ್ಕುವಿಕೆ; ಕೆಂಗೋಲು: ಕೆಂಪಾದ ಬಾಣ; ಇನ: ಸೂರ್ಯ; ಮಂಡಲ: ನಾಡಿನ ಒಂದು ಭಾಗ; ದಿಗ್ಭ್ರಮೆ: ಗಾಬರಿ, ಕಳವಳ; ನಭ: ಆಗಸ; ಸುಳಿ: ಆವರಿಸು, ಮುತ್ತು; ಸುರ: ದೇವತೆ; ವಿಮಾನ: ಆಗಸದಲ್ಲಿ ಹಾರುವ ವಾಹನ; ತತಿ: ಗುಂಪು; ಚೆಲ್ಲು: ಹರಡು; ದೆಸೆ: ದಿಕ್ಕು;

ಪದವಿಂಗಡಣೆ:
ಎಲವೊ +ಕೌರವ+ ಸಹಿತ +ಕಮಠನ
ಕೆಳಗೆ +ಧ್ರುವನಿಂ +ಮೇಲೆ +ಹೊಕ್ಕರೆ
ಕೊಲುವೆನಲ್ಲದೆ +ಬಿಡುವೆನೇ+ ಫಡ+ ನಿಲ್ಲು+ನಿಲ್ಲೆನುತ
ತುಳುಕಿದನು +ಕೆಂಗೋಲನ್+ಇನ +ಮಂ
ಡಲಕೆ+ ದಿಗ್ಭ್ರಮೆಯಾಯ್ತು +ನಭದಲಿ
ಸುಳಿವ +ಸುರರ+ ವಿಮಾನ+ತತಿ +ಚೆಲ್ಲಿದವು +ದೆಸೆದೆಸೆಗೆ

ಅಚ್ಚರಿ:
(೧) ಉಪಮಾನದ ಪ್ರಯೋಗ – ತುಳುಕಿದನು ಕೆಂಗೋಲನಿನ ಮಂಡಲಕೆ ದಿಗ್ಭ್ರಮೆಯಾಯ್ತು
(೨) ಮೇಲೆ ಕೆಳಗೆಯನ್ನು ಸೂಚಿಸಲು – ಕಮಠ, ಧ್ರುವ ಪದದ ಬಳಕೆ