ಪದ್ಯ ೫: ಕೃಷ್ಣನೇಕೆ ಪಾಂಡವರ ಕಡೆ ನಿಂತನು?

ಅವರು ಸುಚರಿತರೆಂದಲೇ ಮಾ
ಧವನು ನೆರೆ ಮರುಳಾದನವರಿಗೆ
ಶಿವನು ಮೆಚ್ಚಿದು ಶರವನಿತ್ತನು ನರನ ಪತಿಕರಿಸಿ
ಭುವನವೆರಡಾದಲ್ಲಿ ಸಾಧುಗ
ಳವರ ದೆಸೆ ದುಸ್ಸಾಧುಗಳು ನಿ
ನ್ನವರ ದೆಸೆಯಾಯ್ತನರ್ಜುನನ ಸೂತಜನ ಸಮರದಲಿ (ಗದಾ ಪರ್ವ, ೧೧ ಸಂಧಿ, ೫ ಪದ್ಯ)

ತಾತ್ಪರ್ಯ:
ಅವರು ಸುಚರಿತರೆಂದೇ ಶ್ರೀಕೃಷ್ಣನು ಅವರಿಗೆ ಮರುಳಾದನು. ಶಿವನು ಅರ್ಜುನನಿಗೆ ಮೆಚ್ಚಿ ಪಾಶುಪತಾಸ್ತ್ರವನ್ನು ನೀಡಿದನು. ಕರ್ಣಾರ್ಜುನರ ಯುದ್ಧದಲ್ಲಿ ಲೋಕವು ಎರಡು ಪಕ್ಷವಾದಾಗ ಸಾಧುಗಳು ಪಾಂಡವರ ಕಡೆಗೂ, ದುಷ್ಟರು ನಿನ್ನ ಕಡೆಗೂ ಬೆಂಬಲಕ್ಕೆ ನಿಂತರಲ್ಲವೇ ಎಂದು ವೇದವ್ಯಾಸರು ಕೇಳಿದರು.

ಅರ್ಥ:
ಸುಚರಿತ: ಒಳ್ಳೆಯ ಚರಿತ್ರೆ ಉಳ್ಳವರು; ಮಾಧವ: ಕೃಷ್ಣ; ನೆರೆ: ಗುಂಪು; ಮರುಳು: ಪ್ರೀತಿ, ಮೋಹ; ಶಿವ: ಶಂಕರ; ಮೆಚ್ಚು: ಒಲುಮೆ, ಪ್ರೀತಿ; ಶರ: ಬಾಣ; ನರ: ಮನುಷ್ಯ; ಪತಿಕರಿಸು: ಅನುಗ್ರಹಿಸು; ಭುವನ: ಭೂಮಿ; ಸಾಧು: ಶುದ್ಧವಾದುದು; ದೆಸೆ: ದಿಕ್ಕು; ದುಸ್ಸಾಧು: ಕೆಟ್ಟವರು, ದುಷ್ಟ; ಸೂತಜ: ಕರ್ಣ; ಸಮರ: ಯುದ್ಧ;

ಪದವಿಂಗಡಣೆ:
ಅವರು +ಸುಚರಿತರ್+ಎಂದಲೇ +ಮಾ
ಧವನು +ನೆರೆ +ಮರುಳಾದನ್+ಅವರಿಗೆ
ಶಿವನು +ಮೆಚ್ಚಿದು +ಶರವನಿತ್ತನು+ ನರನ +ಪತಿಕರಿಸಿ
ಭುವನವ್+ಎರಡಾದಲ್ಲಿ+ ಸಾಧುಗಳ್
ಅವರ +ದೆಸೆ +ದುಸ್ಸಾಧುಗಳು +ನಿ
ನ್ನವರ +ದೆಸೆಯಾಯ್ತನ್+ ಅರ್ಜುನನ +ಸೂತಜನ +ಸಮರದಲಿ

ಅಚ್ಚರಿ:
(೧) ಕೃಷ್ಣನು ಪಾಂಡವರ ಕಡೆಯಿದ್ದ ಕಾರಣ – ಅವರು ಸುಚರಿತರೆಂದಲೇ ಮಾಧವನು ನೆರೆ ಮರುಳಾದನವರಿಗೆ
(೨) ಕರ್ಣನನ್ನು ಸೂತಜ ಎಂದು ಕರೆದಿರುವುದು

ಪದ್ಯ ೨೭: ರಾತ್ರಿಯ ಯುದ್ಧ ಹೇಗೆ ಕಂಡಿತು?

ಜಡಿವ ಖಡುಗದ ಕಿಡಿಗಳಲಿ ಬೇ
ಗಡೆಯನಾಂತುದು ಮಕುಟಬದ್ಧರ
ಮುಡಿಯ ರತ್ನ ಪ್ರಭೆಗಳಲಿ ಜರ್ಝರಿತ ತನುವಾಯ್ತು
ಗಡಣದಂಬಿನ ಮಸೆಯ ಬೆಳಗಿನೊ
ಳಡಸಿದಾಕ್ಷಣ ಮತ್ತೆ ನಿಮಿಷಕೆ
ಹೊಡಕರಿಸಿ ಹಬ್ಬಿದುದು ಮಬ್ಬಿನ ದಾಳಿ ದೆಸೆದೆಸೆಗೆ (ದ್ರೋಣ ಪರ್ವ, ೧೫ ಸಂಧಿ, ೨೭ ಪದ್ಯ)

ತಾತ್ಪರ್ಯ:
ಜಡಿದ ಖಡ್ಗಗಳ ಕಿಡಿಗಳು ಕತ್ತಲಿನಲ್ಲಿ ರಂಧ್ರವನ್ನು ಕೊರೆದವು. ರಾಜರ ಕಿರೀಟ ಪ್ರಭೆಗಳಿಂದ ಕತ್ತಲು ಜರ್ಝರಿತವಾಯಿತು. ಬಾಣಗಳ ತುದಿಯ ಕಿಡಿಗಳಿಂದ ಹೊರಟ ಬೆಳಕನ್ನು ಆ ನಿಮಿಷಕ್ಕೆ ಕತ್ತಲು ಆವರಿಸಿತು. ಕತ್ತಲಿನ ದಾಳಿ ದಿಕ್ಕು ದಿಕ್ಕಿನಲ್ಲೂ ಹಬ್ಬಿತು.

ಅರ್ಥ:
ಜಡಿ: ಗದರಿಸು, ಬೆದರಿಸು; ಖಡುಗ: ಕತ್ತಿ; ಕಿಡಿ: ಬೆಂಕಿ; ಬೇಗಡೆ: ಮಿಂಚುವ ಬಣ್ಣ; ಮಕುಟ: ಕಿರೀಟ; ಬದ್ಧ: ಕಟ್ಟಿದ, ಬಿಗಿದ; ಮುಡಿ: ಶಿರ; ರತ್ನ: ಬೆಲೆಬಾಳುವ ಹರಳು; ಪ್ರಭೆ: ಕಾಂತಿ; ಜರ್ಝರಿತ: ಭಗ್ನ; ತನು: ದೇಹ; ಗಡಣ: ಕೂಡಿಸುವಿಕೆ; ಅಂಬು: ಬಾಣ; ಮಸೆ: ಹರಿತವಾದುದು; ಬೆಳಗು: ದಿನ; ಅಡಸು: ಆಕ್ರಮಿಸು, ಮುತ್ತು; ಕ್ಷಣ: ಹೊತ್ತು; ನಿಮಿಷ: ಕಾಲ; ಹೊಡಕರಿಸು: ಕಾಣಿಸು; ಹಬ್ಬು: ಹರಡು; ಮಬ್ಬು: ನಸುಗತ್ತಲೆ, ಮಸುಕು; ದಾಳಿ: ಲಗ್ಗೆ, ಆಕ್ರಮಣ; ದೆಸೆ: ದಿಕ್ಕು;

ಪದವಿಂಗಡಣೆ:
ಜಡಿವ +ಖಡುಗದ +ಕಿಡಿಗಳಲಿ +ಬೇ
ಗಡೆಯನಾಂತುದು +ಮಕುಟ+ಬದ್ಧರ
ಮುಡಿಯ +ರತ್ನ +ಪ್ರಭೆಗಳಲಿ +ಜರ್ಝರಿತ +ತನುವಾಯ್ತು
ಗಡಣದ್+ಅಂಬಿನ +ಮಸೆಯ +ಬೆಳಗಿನೊಳ್
ಅಡಸಿದ್+ಆ+ ಕ್ಷಣ +ಮತ್ತೆ +ನಿಮಿಷಕೆ
ಹೊಡಕರಿಸಿ +ಹಬ್ಬಿದುದು +ಮಬ್ಬಿನ +ದಾಳಿ +ದೆಸೆದೆಸೆಗೆ

ಅಚ್ಚರಿ:
(೧) ರೂಪಕದ ಪ್ರಯೋಗ – ಜಡಿವ ಖಡುಗದ ಕಿಡಿಗಳಲಿ ಬೇಗಡೆಯನಾಂತುದು
(೨) ಕಿಡಿ, ಪ್ರಭೆ, ಬೆಳಗು – ಸಾಮ್ಯಾರ್ಥ ಪದ
(೩) ಕತ್ತಲನ್ನು ವಿವರಿಸುವ ಪರಿ – ನಿಮಿಷಕೆ ಹೊಡಕರಿಸಿ ಹಬ್ಬಿದುದು ಮಬ್ಬಿನ ದಾಳಿ ದೆಸೆದೆಸೆಗೆ

ಪದ್ಯ ೨೪: ಭೀಮ ಕರ್ಣರ ಯುದ್ಧವು ಹೇಗಿತ್ತು?

ಎಸಲು ಭೀಮನ ಬಾಣವನು ಖಂ
ಡಿಸಿದ ಮೂರಂಬಿನಲಿ ರವಿಸುತ
ನಸಮ ಸಾಹಸಿಯೆಚ್ಚಡೆಚ್ಚನು ಭೀಮ ಮರುಗಣೆಯ
ನಿಶಿತ ಶರವನು ಹತ್ತುಶರದಲಿ
ಕುಸುರಿದರಿದನು ಕರ್ಣನಿಬ್ಬರ
ದೆಸೆಗೆ ದೇವಾನೀಕ ಮೆಚ್ಚಿತು ಭೂಪ ಕೇಳೆಂದ (ದ್ರೋಣ ಪರ್ವ, ೧೩ ಸಂಧಿ, ೨೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಕರ್ಣನು ಭೀಮನ ಬಾಣಗಳನ್ನು ಕತ್ತರಿಸಿ ಮೂರು ಬಾಣಗಳನ್ನು ಭೀಮನ ಮೇಲೆ ಬಿಡಲು ಭೀಮನು ಅದಕ್ಕೆ ಪ್ರತಿಯಾಗಿ ಬಾಣಗಳನ್ನು ಬಿಟ್ಟನು. ಕರ್ಣನು ಹತ್ತು ಬಾಣಗಳಿಂದ ಭೀಮನ ಬಾಣಗಲನ್ನು ಕಡಿದನು. ದೇವತೆಗಳು ಇವರಿಬ್ಬರ ಸಾಹಸವನ್ನು ಮೆಚ್ಚಿದರು.

ಅರ್ಥ:
ಎಸಲು: ಬಾಣ ಪ್ರಯೋಗ ಮಾಡು; ಬಾಣ: ಅಂಬು; ಖಂಡಿಸು: ತುಂಡರಿಸು; ಅಂಬು: ಬಾಣ; ರವಿಸುತ: ಕರ್ಣ; ರವಿ: ಭಾನು; ಸುತ: ಪುತ್ರ; ಅಸಮ: ಅಸದೃಶವಾದ; ಸಾಹಸಿ: ಪರಾಕ್ರಮಿ; ಎಚ್ಚು: ಬಾಣ ಪ್ರಯೋಗ ಮಾಡು; ಮರು: ಪ್ರತಿಯಾದ; ಕಣೆ: ಬಾಣ; ನಿಶಿತ: ಹರಿತವಾದುದು; ಶರ: ಬಾಣ; ಕುಸುರಿ: ಸೂಕ್ಷ್ಮವಾದ ಮತ್ತು ನಾಜೂ ಕಾದ ಕೆಲಸ; ಅರಿ: ಸೀಳು; ದೆಸೆ: ದಿಕ್ಕು; ದೇವ: ಅಮರ; ಅನೀಕ: ಗುಂಪು; ಮೆಚ್ಚು: ಹೊಗಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಎಸಲು +ಭೀಮನ +ಬಾಣವನು +ಖಂ
ಡಿಸಿದ +ಮೂರಂಬಿನಲಿ +ರವಿಸುತನ್
ಅಸಮ +ಸಾಹಸಿ+ಎಚ್ಚಡ್+ಎಚ್ಚನು +ಭೀಮ +ಮರು+ಕಣೆಯ
ನಿಶಿತ +ಶರವನು +ಹತ್ತು+ಶರದಲಿ
ಕುಸುರಿದ್+ಅರಿದನು +ಕರ್ಣನ್+ಇಬ್ಬರ
ದೆಸೆಗೆ +ದೇವಾನೀಕ +ಮೆಚ್ಚಿತು +ಭೂಪ +ಕೇಳೆಂದ

ಅಚ್ಚರಿ:
(೧) ಅಂಬು, ಶರ, ಕಣೆ, ಬಾಣ – ಸಮಾನಾರ್ಥಕ ಪದಗಳು

ಪದ್ಯ ೯: ಅರ್ಜುನನು ಕೃಷ್ಣನಲ್ಲಿ ಏನೆಂದು ಪ್ರಾರ್ಥಿಸಿದನು?

ದೆಸೆದೆಸೆಯ ನೋಡಿದರೆ ಕತ್ತಲೆ
ಮಸಗುವುದು ಪರಿತಾಪ ತನುವನು
ಮುಸುಕುವುದು ಮನ ಮರುಗುವುದು ಕಳವಳಿಸುವುದು ಧೈರ್ಯ
ಮಸೆದ ಸರಳೊಡಲೊಳಗೆ ಮುರಿದವೊ
ಲುಸುರಿಗುಬ್ಬಸವಾಯ್ತು ಬಲ್ಲಡೆ
ಬೆಸಸು ಮುರಹರ ಹಿರಿದು ಬಳಲಿಸಬೇಡ ಹೇಳೆಂದ (ದ್ರೋಣ ಪರ್ವ, ೮ ಸಂಧಿ, ೯ ಪದ್ಯ)

ತಾತ್ಪರ್ಯ:
ದಿಕ್ಕು ದಿಕ್ಕಿನಲ್ಲೂ ಕತ್ತಲೆ ಕವಿದಿದೆ, ಪರಿತಾಪವು ದೇಹವನ್ನು ಆವರಿಸಿದೆ, ಮನಸ್ಸು ಮರುಗಿದೆ, ಧೈರ್ಯವು ಕಳವಳಿಸುತ್ತಿದೆ, ಚೂಪಾದ ಬಾಣವು ಮೈಯಲ್ಲಿ ಮುರಿದಂತಾಗಿ ಉಸಿರಾಟವು ಕಷ್ಟಕರವಾಗುತ್ತಿದೆ, ಕೃಷ್ಣಾ ನನ್ನನ್ನು ಆಯಾಸಗೊಳಿಸಬೇಡ, ನಿನಗೆ ತಿಳಿದಿದ್ದರೆ ಹೇಳು ಎಂದು ಅರ್ಜುನನು ದೈನ್ಯದಿಂದ ಪ್ರಾರ್ಥಿಸಿದನು.

ಅರ್ಥ:
ದೆಸೆ: ದಿಕ್ಕು; ನೋಡು: ವೀಕ್ಷಿಸು; ಕತ್ತಲೆ: ಅಂಧಕಾರ; ಮಸಗು: ಹರಡು; ಕೆರಳು; ತಿಕ್ಕು; ಪರಿತಾಪ: ದುಃಖ; ತನು: ದೇಹ; ಮುಸುಕು: ಹೊದಿಕೆ; ಮನ: ಮನಸ್ಸು; ಮರುಗು: ತಳಮಳ; ಕಳವಳ: ಗೊಂದಲ; ಧೈರ್ಯ: ಕೆಚ್ಚು, ದಿಟ್ಟತನ; ಮಸೆ: ಚೂಪು, ಹರಿತವಾದ; ಸರಳು: ಬಾಣ; ಒಡಲು: ದೇಹ; ಮುರಿ: ಸೀಳು; ಉಸುರು: ಪ್ರಾಣ, ಶ್ವಾಸ; ಉಬ್ಬಸ: ಮೇಲುಸಿರು, ಕಷ್ಟ; ಬಲ್ಲಡೆ: ತಿಳಿದ; ಬೆಸ: ಕೆಲಸ; ಮುರಹರ: ಕೃಷ್ಣ; ಬಳಲಿಸು: ಆಯಾಸ; ಹೇಳು: ತಿಳಿಸು;

ಪದವಿಂಗಡಣೆ:
ದೆಸೆದೆಸೆಯ +ನೋಡಿದರೆ +ಕತ್ತಲೆ
ಮಸಗುವುದು +ಪರಿತಾಪ +ತನುವನು
ಮುಸುಕುವುದು +ಮನ +ಮರುಗುವುದು +ಕಳವಳಿಸುವುದು +ಧೈರ್ಯ
ಮಸೆದ +ಸರಳ್+ಒಡಲೊಳಗೆ+ ಮುರಿದವೊಲ್
ಉಸುರಿಗ್+ಉಬ್ಬಸವಾಯ್ತು +ಬಲ್ಲಡೆ
ಬೆಸಸು +ಮುರಹರ +ಹಿರಿದು +ಬಳಲಿಸಬೇಡ +ಹೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ -ಮಸೆದ ಸರಳೊಡಲೊಳಗೆ ಮುರಿದವೊಲುಸುರಿಗುಬ್ಬಸವಾಯ್ತು
(೨) ಮ ಕಾರದ ತ್ರಿವಳಿ ಪದ – ಮುಸುಕುವುದು ಮನ ಮರುಗುವುದು

ಪದ್ಯ ೧೬: ಚಿತ್ರಸೇನನೇಕೆ ಚಿಂತಿಸಿದನು?

ಧನುವ ಕೊಂಡನು ತನ್ನ ತೂಕದ
ವಿನುತ ಭಟರೊಗ್ಗಾಯ್ತು ವಾದ್ಯ
ಧ್ವನಿಯ ಧಟ್ಟಣೆ ಧಾತುಗೆಡಿಸಿತು ಜಗದ ಜೋಡಿಗಳ
ಮನುಜರಿವದಿರ ಮುರಿದು ಬಹ ಭಟ
ರನಿಮಿಷರು ಬಯಲಾಯಿತಕಟಾ
ದನುಜರಿಪುಗಳ ದೆಸೆಗಳಳಿದವೆ ಶಿವ ಶಿವಾಯೆಂದ (ಅರಣ್ಯ ಪರ್ವ, ೨೦ ಸಂಧಿ, ೧೬ ಪದ್ಯ)

ತಾತ್ಪರ್ಯ:
ಚಿತ್ರಸೇನನು ಬಿಲ್ಲನ್ನು ಎತ್ತಿಕೊಂಡು ಹೊರಟನು. ಅವನಿಗೆ ಸರಿಸಮಾನರಾದ ಶಕ್ತಿಯುತ ಗಂಧರ್ವ ಸೈನಿಕರನ್ನು ಕರೆದುಕೊಂಡನು. ವಾದ್ಯ ಧ್ವನಿ ಲೋಕಗಳನ್ನು ನಡುಗಿಸಿತು. ಈ ಮನುಷ್ಯರನ್ನು ಸಂಹರಿಸಬಲ್ಲ ದೇವತೆಗಳು ಇವರಿಗೆ ಸೋತು ಬಂದರು, ಅಯ್ಯೋ ದೇವತೆಗಳ ಸ್ಥಿತಿ ಹೀನಾಯವಾಯಿತೇ ಶಿವ ಶಿವಾ ಎಂದು ಚಿತ್ರಸೇನನು ಚಿಂತಿಸಿದನು.

ಅರ್ಥ:
ಧನು: ಬಿಲ್ಲು; ಕೊಂಡನು: ತೆಗೆದುಕೊಳ್ಳು; ತೂಕ: ಭಾರ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ಭಟ: ಸೈನಿಕ; ಒಗ್ಗು:ಸಮೂಹ; ವಾದ್ಯ: ಸಂಗೀತದ ಸಾಧನ; ಧ್ವನಿ: ರವ, ಶಬ್ದ; ಧಟ್ಟಣೆ: ಸಾಂದ್ರತೆ, ಗುಂಪು; ಧಾತು: ಶಕ್ತಿ; ಕೆಡಿಸು: ಹಾಳುಮಾಡು; ಜಗ: ಪ್ರಪಂಚ; ಜೋಡಿ: ಜೊತೆ; ಮನುಜ: ಮಾನವ; ಇವದಿರ: ಎದುರು; ಮುರಿ: ಸೀಳು; ಬಹ: ತುಂಬ; ಭಟ: ಸೈನಿಕ; ಅನಿಮಿಷ: ದೇವತೆ; ಬಯಲಾಯಿತು: ವ್ಯರ್ಥವಾಗು; ಅಕಟಾ: ಅಯ್ಯೋ; ದನುಜ: ರಾಕ್ಷಸ; ರಿಪು: ವೈರಿ; ದೆಸೆ: ಸ್ಥಿತಿ; ಅಳಿ: ನಾಶ, ಸಾಮಾನ್ಯವಾದುದು;

ಪದವಿಂಗಡಣೆ:
ಧನುವ+ ಕೊಂಡನು +ತನ್ನ +ತೂಕದ
ವಿನುತ +ಭಟರ್+ಒಗ್ಗಾಯ್ತು +ವಾದ್ಯ
ಧ್ವನಿಯ +ಧಟ್ಟಣೆ +ಧಾತು+ಕೆಡಿಸಿತು +ಜಗದ+ ಜೋಡಿಗಳ
ಮನುಜರ್+ಇವದಿರ +ಮುರಿದು +ಬಹ +ಭಟರ್
ಅನಿಮಿಷರು +ಬಯಲಾಯಿತ್+ಅಕಟಾ
ದನುಜರಿಪುಗಳ+ ದೆಸೆಗಳ್+ಅಳಿದವೆ+ ಶಿವ+ ಶಿವಾಯೆಂದ

ಅಚ್ಚರಿ:
(೧) ಅನಿಷ, ದನುಜರಿಪು – ಸಮನಾರ್ಥಕ ಪದ
(೨) ದೇವತೆಗಳ ಸ್ಥಿತಿಯನ್ನು ಹೇಳುವ ಪರಿ – ಅನಿಮಿಷರು ಬಯಲಾಯಿತಕಟಾ ದನುಜರಿಪುಗಳ ದೆಸೆಗಳಳಿದವೆ ಶಿವ ಶಿವಾಯೆಂದ
(೩) ಧ ಕಾರದ ತ್ರಿವಳಿ ಪದ – ಧ್ವನಿಯ ಧಟ್ಟಣೆ ಧಾತುಗೆಡಿಸಿತು

ಪದ್ಯ ೧೧೨: ಯಾವರೀತಿ ಮಕ್ಕಳಿಂದ ಸಂಸಾರ ಶೋಭಿಸುತ್ತದೆ?

ದೆಸೆಗಳೇ ವಾಸಸ್ಸುರಾಜ್ಯ
ಪ್ರಸರಣವು ನಿರ್ಲಜ್ಜೆ ಜಟೆ ರಂ
ಜಿಸುವ ಧೂಳೀ ಧೂಸರದ ಗಂಗಾಧರನವೋಲು
ಎಸೆವ ಸುತರುಗಳಿಲ್ಲದಿರೆ ಶೋ
ಭಿಸುವುದೇ ಸಂಸಾರವೆಂಬುದು
ವಸುಧೆಯೊಳು ಪುಣ್ಯಾಧಿಕರುಗಳಿಗಲ್ಲದಿಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೧೧೨ ಪದ್ಯ)

ತಾತ್ಪರ್ಯ:
ದಿಕ್ಕುಗಳೇ ಬಟ್ಟೆಯನ್ನಾಗಿಸಿ, ಲಜ್ಜೆಯನ್ನೇ ಜಯಿಸಿದ ರಾಜ್ಯ, ಧೂಳೀ ಧೂಸರಿತವಾದ ಜಟೆಗಳನ್ನುಳ್ಳ ಪರಮ ಪಾವನ ಆನಂದಘನ ಸದಾಶಿವನಂತಹ ಮಕ್ಕಳುಗಳಿಲ್ಲದಿದ್ದರೆ ಸಂಸಾರವು ಶೋಭಿಸುತ್ತದೆಯೇ, ಭೂಮಿಯಲ್ಲಿ ಪುಣ್ಯಮಾಡಿದವರಿಗೆ ಮಾತ್ರ ಇದು ಲಭ್ಯವೆಂದು ಸನತ್ಸುಜಾತರು ಹೇಳಿದರು.

ಅರ್ಥ:
ದೆಸೆ: ದಿಕ್ಕು; ವಾಸ: ವಸ್ತ್ರ, ಬಟ್ಟೆ; ರಾಜ್ಯ: ದೇಶ; ಪ್ರಸರಣ: ಹರಡುವಿಕೆ, ಪ್ರಸಾರ; ನಿರ್ಲಜ್ಜೆ: ನಾಚಿಕೆಯಿಲ್ಲದಿರುವುದು; ಜಟೆ: ಜಡೆಗಟ್ಟಿದ ಕೂದಲು; ರಂಜಿಸು: ಹೊಳೆ, ಪ್ರಕಾಶಿಸು, ಶೋಭಿಸು; ಧೂಳಿ: ಧೂಳು; ಧೂಸುರ: ಕಂದು ಬಣ್ಣ; ಗಂಗಾಧರ: ಶಿವ; ಎಸೆ: ತೋರು; ಸುತರು: ಮಕ್ಕಳು; ಶೋಭಿಸು: ಪ್ರಕಾಶಿಸು; ಸಂಸಾರ: ಪರಿವಾರ, ಕುಟುಂಬ; ವಸುಧೆ: ಭೂಮಿ; ಪುಣ್ಯ: ಸದಾಚಾರ, ಪರೋಪಕಾರ; ಅಧಿಕ: ಹೆಚ್ಚು;

ಪದವಿಂಗಡಣೆ:
ದೆಸೆಗಳೇ +ವಾಸಸ್+ಸುರಾಜ್ಯ
ಪ್ರಸರಣವು+ ನಿರ್ಲಜ್ಜೆ +ಜಟೆ +ರಂ
ಜಿಸುವ +ಧೂಳೀ +ಧೂಸರದ +ಗಂಗಾಧರನವೋಲು
ಎಸೆವ +ಸುತರುಗಳಿಲ್ಲದಿರೆ +ಶೋ
ಭಿಸುವುದೇ +ಸಂಸಾರವೆಂಬುದು
ವಸುಧೆಯೊಳು +ಪುಣ್ಯಾಧಿಕರುಗಳಿಗ್+ಅಲ್ಲದಿಲ್ಲೆಂದ

ಅಚ್ಚರಿ:
(೧) ಧೂಳೀ ಧೂಸುರ – ಪದಪ್ರಯೋಗ
(೨) ರಂಜಿಸು, ಶೋಭಿಸು – ಸಮಾನಾರ್ಥಕ ಪದ