ಪದ್ಯ ೩: ಕೃಷ್ಣನು ರಥವನ್ನು ಹೇಗೆ ಓಡಿಸಿದನು?

ಹಿಂಡೊಡೆದು ಮುಂಗುಡಿಯ ತಾ ಕಯಿ
ಕೊಂಡು ದೂವಾಳಿಯಲಿ ರಥವನು
ಮಂಡಳಿಸಿ ಕೆಲ್ಲಯಿಸಿ ಲುಳಿಯಲಿ ಲಲಿತಪೇರಯವ
ಚಂಡಗತಿಚಾಳನೆಯಲುಬ್ಬಟೆ
ಗೊಂಡಿಸದೆ ವೇಡೆಯವ ಕೊಳ್ಳದೆ
ಗಾಂಡಿವಿಯ ಕೈಮನದ ಲಾಗನು ಪಡೆದನಸುರಾರಿ (ಭೀಷ್ಮ ಪರ್ವ, ೩ ಸಂಧಿ, ೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ರಥವನ್ನು ಪಾಂಡವ ಸೈನ್ಯದ ಮುಂಭಾಗಕ್ಕೆ ನಡೆಸಿ ತಂದು ಸುತ್ತಲೂ ನೋಡಿ ರಥವನ್ನು ಸುತ್ತು ನಡೆಸಿ, ವೇಗದಿಂದ ಮನೋಹರವಾಗಿ ಮುಂದುವರಿಸಿ, ಕುದುರೆಗಳ ಗತಿಯನ್ನು ಒಂದು ಚೌಕಟ್ಟಿನಲ್ಲೇ ಉಳಿಸಿಕೊಂಡು ಬರಲು, ಅರ್ಜುನನು ಇದನ್ನು ಅನುಮೋದಿಸಿದನು.

ಅರ್ಥ:
ಹಿಂದೆ: ಹಿಂಭಾಗ; ಮುಂಗುಡಿ: ಮುಂಭಾಗ; ಕೆಲ್ಲಯಿಸು: ಬೆದರು, ತುಂಡಾಗು; ಲುಳಿ: ರಭಸ, ವೇಗ; ಲಲಿತ: ಸುಂದರ; ಚಂಡ: ತೀಕ್ಷ್ಣವಾದ; ಗತಿ: ವೇಗ; ಚಾಳನೆ: ಮುಂದೆ ಸಾಗುವುದು; ಉಬ್ಬಟೆ: ಅತಿಶಯ, ಹಿರಿಮೆ; ವೇಡೆ: ಆಕ್ರಮಣ; ಗಾಂಡಿವಿ: ಅರ್ಜುನ; ಲಾಗ: ತ್ವರೆ, ಶೀಘ್ರತೆ; ಪಡೆ: ತೆಗೆದುಕೊ: ಅಸುರಾರಿ: ಕೃಷ್ಣ;

ಪದವಿಂಗಡಣೆ:
ಹಿಂಡೊಡೆದು +ಮುಂಗುಡಿಯ+ ತಾ +ಕಯಿ
ಕೊಂಡು +ದೂವಾಳಿಯಲಿ +ರಥವನು
ಮಂಡಳಿಸಿ+ ಕೆಲ್ಲಯಿಸಿ+ ಲುಳಿಯಲಿ +ಲಲಿತ+ಪೇರಯವ
ಚಂಡ+ಗತಿ+ಚಾಳನೆಯಲ್+ಉಬ್ಬಟೆ
ಗೊಂಡಿಸದೆ+ ವೇಡೆಯವ +ಕೊಳ್ಳದೆ
ಗಾಂಡಿವಿಯ+ ಕೈಮನದ +ಲಾಗನು +ಪಡೆದನ್+ಅಸುರಾರಿ

ಅಚ್ಚರಿ:
(೧) ಅರ್ಜುನನು ಒಪ್ಪಿದನು ಎಂದು ಹೇಳಲು – ಗಾಂಡಿವಿಯ ಕೈಮನದ ಲಾಗನು ಪಡೆದನಸುರಾರಿ

ಪದ್ಯ ೭: ಊರ್ವಶಿಯ ಸುತ್ತಲೂ ಯಾರಿದ್ದರು?

ಹೆಗಲ ಹಡಪದ ಹಿಡಿದ ಮುಕುರಾ
ಳಿಗಳ ಚಿಮ್ಮುವ ಸೀಗುರಿಯ ಹಾ
ವುಗೆಯ ಹೇಮನಿಬಂಧ ಕಳಸದ ತಾಳ ವೃಂತಕದ
ಮುಗುದೆಯರು ಮನಮಥನ ಮೊನೆಯಾ
ಳುಗಳು ಮುಸುಕಿತು ಮಾನಿನಿಯ ದಂ
ಡಿಗೆಯ ಮೈಕಾಂತಿಗಳ ದೂವಾಳಿಗಳ ಲಹರಿಯಲಿ (ಅರಣ್ಯ ಪರ್ವ, ೯ ಸಂಧಿ, ೭ ಪದ್ಯ)

ತಾತ್ಪರ್ಯ:
ತಾಂಬೂಲದ ಚೀಲವನ್ನು ಹೆಗಲಿಗೆ ಹಾಕಿಕೊಂಡವರು, ಕನ್ನಡಿ ಕಲಶವನ್ನು ಹಿಡಿದವರು, ಚಾಮರವನ್ನು ಹಾಕುವವರು, ಬಂಗಾರದ ಲೇಪವುಳ್ಲ ಪಾದರಕ್ಷೆಯನ್ನು ತೊಟ್ಟವರು, ನೀಳವಾದ ಚೂಚುಕವುಳ್ಳ ಕಲಶಕುಚೆಯರು, ಊರ್ವಶಿಯ ಸುತ್ತಲೂ ಬರುತ್ತಿದ್ದರು. ಮನ್ಮಥನ ಸೈನ್ಯವೇ ಬಂತೋ ಎಂಬಂತೆ ಕಾಣುತ್ತಿತ್ತು, ಅವರೆಲ್ಲರೂ ಊರ್ವಶಿಯ ಪಲ್ಲಕ್ಕಿಯ ಸುತ್ತಲೂ ದೇಹಕಾಂತಿಯ ತೆರೆಗಳನ್ನು ಹರಿಸುತ್ತಿದ್ದರು.

ಅರ್ಥ:
ಹೆಗಲು: ಭುಜ; ಹಡಪ: ಅಡಕೆ ಎಲೆಯ ಚೀಲ; ಹಿಡಿ: ಗ್ರಹಿಸು; ಮುಕುರ: ಕನ್ನಡಿ; ಆಳಿ: ಸಾಲು; ಚಿಮ್ಮು: ಹೊರಬರುವ; ಸೀಗುರಿ: ಚಾಮರ; ಹಾವುಗೆ: ಪಾದುಕೆ; ಹೇಮ: ಚಿನ್ನ; ನಿಬಂಧ: ನಿಮಿತ್ತ; ಕಳಸ: ಕುಂಭ; ತಾಳವೃಂತ: ಬೀಸಣಿಕೆ; ಮುಗುದೆ: ಸುಂದರ ಯುವತಿ; ಮನಮಥ: ಕಾಮ; ಮೊನೆ: ಚೂಪು; ಆಳು: ಸೇವಕ; ಮುಸುಕು: ಆವರಿಸು; ಮಾನಿನಿ: ಹೆಣ್ಣು; ದಂಡಿಗೆ: ಬೆತ್ತ, ಬಡಿಗೆ; ದಂಡಿ: ಹೆಚ್ಚಳ; ಮೈಕಾಂತಿ: ತನುವಿನ ಕಾಂತಿ, ಪ್ರಕಾಶ; ದೂವಾಳಿ: ವೇಗವಾಗಿ ಓಡುವುದು; ಲಹರಿ: ಅಲೆ, ರಭಸ;

ಪದವಿಂಗಡಣೆ:
ಹೆಗಲ +ಹಡಪದ +ಹಿಡಿದ +ಮುಕುರಾ
ಳಿಗಳ +ಚಿಮ್ಮುವ +ಸೀಗುರಿಯ +ಹಾ
ವುಗೆಯ +ಹೇಮ+ನಿಬಂಧ+ ಕಳಸದ +ತಾಳ +ವೃಂತಕದ
ಮುಗುದೆಯರು +ಮನಮಥನ+ ಮೊನೆ
ಆಳುಗಳು +ಮುಸುಕಿತು +ಮಾನಿನಿಯ +ದಂ
ಡಿಗೆಯ +ಮೈಕಾಂತಿಗಳ +ದೂವಾಳಿಗಳ +ಲಹರಿಯಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹೆಗಲ ಹಡಪದ ಹಿಡಿದ
(೨) ಮ ಕಾರದ ಸಾಲು ಪದ – ಮುಗುದೆಯರು ಮನಮಥನ ಮೊನೆಯಾಳುಗಳು ಮುಸುಕಿತು ಮಾನಿನಿಯ

ಪದ್ಯ ೩೫: ಅರ್ಜುನನು ಯಾವ ಬಾಣದಿಂದ ಕೌರವ ಸೇನೆಯನ್ನು ನಿಲ್ಲಿಸಿದನು?

ಬಳಿಕ ಸೇನಾಸ್ತಂಭ ಶರದಲಿ
ನಿಲಿಸಿದನು ಮಾರ್ಬಲವನಿತ್ತಲು
ಚಳೆಯದಲಿ ಹಿಮ್ಮೆಟ್ಟುತಿರೆ ಕಂಡನು ಧನಂಜಯನ
ಹೊಳಹು ದೂವಾಳಿಯಲಿ ಪಾರ್ಥನ
ಕೆಲಕೆ ಬಿಟ್ಟನು ರಥವ ನಿಲು ನಿ
ಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ (ಕರ್ಣ ಪರ್ವ, ೧೪ ಸಂಧಿ, ೩೫ ಪದ್ಯ)

ತಾತ್ಪರ್ಯ:
ಕೌರವ ಸೇನೆಯು ತನ್ನ ಬಳಿ ಬರುವುದನ್ನು ಕಂಡ ಅರ್ಜುನನು ಸಂಭಾಸ್ತ್ರವನ್ನು ಪ್ರಯೋಗಿಸಿ ಅವರನ್ನು ನಿಲ್ಲಿಸಿ ಮತ್ತೆ ಧರ್ಮಜನ ಪಾಳೆಯದತ್ತ ಹೋಗುತ್ತಿರಲು, ಕರ್ಣನು ತನ್ನ ರಥವನ್ನು ಅರ್ಜುನನ ಕೆಲಕ್ಕೆ ಬಿಟ್ಟು ನಿಲ್ಲು ನಿಲ್ಲು ಹೋಗಬೇಡ ಎಂದು ಅವನನ್ನು ಬೆನ್ನಟ್ಟಿದನು.

ಅರ್ಥ:
ಬಳಿಕ: ನಂತರ; ಸೇನಾ: ಸೈನ್ಯ; ಸ್ತಂಭ: ಬಾಣದ ಹೆಸರು; ಶರ: ಬಾಣ; ನಿಲಿಸು: ತಡೆ; ಮಾರ್ಬಲ: ಶತ್ರು ಸೈನ್ಯ; ಚಳೆ: ಚಿಮುಕಿಸುವುದು; ಹಿಮ್ಮೆಟ್ಟು: ಹಿಂದಕ್ಕೆ ಸರಿ; ಕಂಡು: ನೋಡು; ಹೊಳಹು: ಕುದುರೆಯ ಓಟದಲ್ಲಿ ಒಂದು ಬಗೆ; ದೂವಾಳಿ: ವೇಗವಾಗಿ ಓಡುವುದು; ಕೆಲ: ಪಕ್ಕ, ಮಗ್ಗುಲು; ಬಿಡು: ತೊರೆ, ತ್ಯಜಿಸು; ರಥ: ಬಂಡಿ; ನಿಲು: ತಡೆ; ಹೊಗು: ತೆರಳು; ಬೆಂಬತ್ತಿ: ಅಟ್ಟಿಸಿಕೊಂಡು ಹೋಗು; ಕಲಿ: ಶೂರ;

ಪದವಿಂಗಡಣೆ:
ಬಳಿಕ +ಸೇನಾಸ್ತಂಭ +ಶರದಲಿ
ನಿಲಿಸಿದನು +ಮಾರ್ಬಲವನ್+ಇತ್ತಲು
ಚಳೆಯದಲಿ+ ಹಿಮ್ಮೆಟ್ಟುತಿರೆ+ ಕಂಡನು +ಧನಂಜಯನ
ಹೊಳಹು +ದೂವಾಳಿಯಲಿ +ಪಾರ್ಥನ
ಕೆಲಕೆ +ಬಿಟ್ಟನು +ರಥವ +ನಿಲು +ನಿಲ್
ಎಲವೊ +ಹೋಗದಿರೆನುತ+ ಬೆಂಬತ್ತಿದನು +ಕಲಿಕರ್ಣ

ಅಚ್ಚರಿ:
(೧) ಕರ್ಣನು ಕರೆಯುವ ಬಗೆಯನ್ನು ಚಿತ್ರಿಸಿರುವುದು – ನಿಲು ನಿಲ್ಲೆಲವೊ ಹೋಗದಿರೆನುತ ಬೆಂಬತ್ತಿದನು ಕಲಿಕರ್ಣ