ಪದ್ಯ ೧೯: ಹಸ್ತಿನಾಪುರಿಗೆ ಹೆಸರು ಹೇಗೆ ಬಂದಿತು?

ಭರತನಾ ದುಷ್ಯಂತನಿಂದವ
ತರಿಸಿದನು ತತ್ಪೂರ್ವ ನೃಪರಿಂ
ಹಿರಿದು ಸಂದನು ಬಳಿಕ ಭಾರತ ವಂಶವಾಯ್ತಲ್ಲಿ
ಭರತಸೂನು ಸುಹೋತ್ರನಾತನ
ವರ ಕುಮಾರಕ ಹಸ್ತಿ ಹಸ್ತಿನ
ಪುರಿಗೆ ಹೆಸರಾಯ್ತಾತನಿಂದವೆ ನೃಪತಿ ಕೇಳೆಂದ (ಆದಿ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ದುಷ್ಯಂತನ ಮಗನು ಭರತ, ಅವನು ತನ್ನ ಪೂರ್ವಜರಿಗಿಂತ ಹಿರಿದಾಗಿ ಬಾಳಿದನು. ಅವನ ವಮ್ಶಕ್ಕೆ ಭಾರತವಂಶವೆಂದು ಹೆಸರಾಯ್ತು. ಭರತನ ಮಗನು ಸುಹೋತ್ರ, ಅವನ ಮಗನು ಹಸ್ತಿ, ಚಂದ್ರವಂಶದ ಅರಸರ ರಾಜಧಾನಿಯಾಗಿ ಹಸ್ತಿಯಿಂದ ಹಸ್ತಿನಾಪುರಿ ಎಂಬ ಹೆಸರು ಬಂದಿತು.

ಅರ್ಥ:
ಅವತರಿಸು: ಹುಟ್ಟು; ಪೂರ್ವ: ಹಿಂದಿನ; ನೃಪ: ರಾಜ; ಹಿರಿದು: ದೊಡ್ಡ; ಸಂದ: ಕಳೆದ, ಹಿಂದಿನ; ಬಳಿಕ: ನಂತರ; ವಂಶ: ಕುಲ; ಸೂನು: ಮಗ; ವರ: ಶ್ರೇಷ್ಠ; ಕುಮಾರ: ಮಗ; ಹೆಸರು: ನಾಮ; ಕೇಳು: ಆಲಿಸು;

ಪದವಿಂಗಡಣೆ:
ಭರತನ್+ಆ+ ದುಷ್ಯಂತನಿಂದ್+ಅವ
ತರಿಸಿದನು +ತತ್ಪೂರ್ವ+ ನೃಪರಿಂ
ಹಿರಿದು +ಸಂದನು +ಬಳಿಕ +ಭಾರತ +ವಂಶವಾಯ್ತಲ್ಲಿ
ಭರತಸೂನು +ಸುಹೋತ್ರನ್+ಆತನ
ವರ+ ಕುಮಾರಕ +ಹಸ್ತಿ+ ಹಸ್ತಿನ
ಪುರಿಗೆ+ ಹೆಸರಾಯ್ತ್+ಆತನಿಂದವೆ +ನೃಪತಿ+ ಕೇಳೆಂದ

ಅಚ್ಚರಿ:
(೧) ಸೂನು, ಕುಮಾರ – ಸಮಾನಾರ್ಥಕ ಪದ
(೨) ಹ ಕಾರದ ತ್ರಿವಳಿ ಪದ – ಹಸ್ತಿ ಹಸ್ತಿನಪುರಿಗೆ ಹೆಸರಾಯ್ತಾತನಿಂದವೆ

ಪದ್ಯ ೬೯: ದುರ್ಯೋಧನನನ್ನು ವಿದುರನು ಹೇಗೆ ಬೈದನು?

ವರ ಪುರೂರವ ನಹುಷನವನೀ
ಶ್ವರ ತಿಲಕ ದುಷ್ಯಂತ ಕುರು ಸಂ
ವರಣನಮಲ ಯಯಾತಿಯಾದಿ ಪರಂಪರಾಗತದ
ಭರತ ಕುಲವಿದರೊಳಗೆ ವಂಶೋ
ದ್ಧರರಿಳೆಯ ಬೆಳಗಿದರು ನೀನವ
ತರಿಸಿ ತಂದೈ ತೊಡಕನೆಂದನು ಖಾತಿಯಲಿ ವಿದುರ (ಸಭಾ ಪರ್ವ, ೧೪ ಸಂಧಿ, ೬೯ ಪದ್ಯ)

ತಾತ್ಪರ್ಯ:
ಶ್ರೇಷ್ಠ ರಾಜರುಗಳಾದ ಪುರೂರವ, ನಹುಷ, ದುಷ್ಯಂತ, ಕುರು, ಸಂವರಣ, ಯಯಾತಿ, ಮೊದಲಾದವರ ಪರಂಪರೆಯಿಂದ ಬಂದ ಈ ಭರತ ವಂಶದಲ್ಲಿ ವಂಶೋದ್ಧಾರಕರು ಹುಟ್ಟಿದರು, ನೀನು ಹುಟ್ಟಿ ಈ ವಂಶಕ್ಕೆ ಕೆಡುಕನ್ನು ತಂದೆ ಎಂದು ವಿದುರನು ಹೇಳಿದನು.

ಅರ್ಥ:
ವರ: ಶ್ರೇಷ್ಠ; ಅವನೀಶ್ವರ: ರಾಜ; ತಿಲಕ: ಶ್ರೇಷ್ಠ; ಅಮಲ: ನಿರ್ಮಲ; ಆದಿ: ಮುಂತಾದ; ಪರಂಪರೆ: ಕುಲ, ವಂಶ, ಪೀಳಿಗೆ; ಕುಲ: ವಂಶ; ಉದ್ಧಾರ: ಏಳಿಗೆ; ಇಳೆ: ಭೂಮಿ; ಬೆಳಗು: ಪ್ರಜ್ವಲಿಸು; ಅವತರಿಸು: ಹುಟ್ಟು; ತೊಡಕು: ಕೆಡುಕು, ತೊಂದರೆ; ಖಾತಿ: ಕೋಪ;

ಪದವಿಂಗಡಣೆ:
ವರ +ಪುರೂರವ+ ನಹುಷನ್+ಅವನೀ
ಶ್ವರ +ತಿಲಕ +ದುಷ್ಯಂತ +ಕುರು +ಸಂ
ವರಣನ್+ಅಮಲ +ಯಯಾತಿಯಾದಿ+ ಪರಂಪರಾಗತದ
ಭರತ+ ಕುಲವ್+ಇದರೊಳಗೆ +ವಂಶೋ
ದ್ಧರರ್+ಇಳೆಯ +ಬೆಳಗಿದರು +ನೀನ್+ಅವ
ತರಿಸಿ+ ತಂದೈ +ತೊಡಕನ್+ಎಂದನು +ಖಾತಿಯಲಿ +ವಿದುರ

ಅಚ್ಚರಿ:
(೧) ಭರತ ಕುಲದ ಶ್ರೇಷ್ಠರು – ಪುರೂರವ, ನಹುಷ, ದುಷ್ಯಂತ, ಯಯಾತಿ, ಕುರುಸಂವರಣ
(೨) ದುರ್ಯೋಧನನನ್ನು ಬಯ್ಯುವ ಪರಿ – ನೀನವತರಿಸಿ ತಂದೈ ತೊಡಕ