ಪದ್ಯ ೧೭: ಯಾರ ಮರಣದ ನಂತರ ಕರ್ಣನು ದುರ್ಯೋಧನನ ಕೈಹಿಡಿಯುತ್ತಾನೆ?

ಆ ವೃಕೋದರ ನರರೊಳಂತ
ರ್ಭಾವ ದುಶ್ಯಾಸನಗೆ ತನ್ನಯ
ಜೀವಸಖಗಾ ಭೀಮ ಪಾರ್ಥರ ಮರಣಸಿದ್ಧಿಯಲಿ
ಕೈವಿಡಿಯಲೇ ಕರ್ಣನಿಹನೆಂ
ದಾವು ನಿಶ್ಚಯಿಸಿದೆವು ಕರ್ಣನ
ಸಾವ ನಾಳಿನೊಳರಿವೆನೆಮ್ದನು ನಿನ್ನ ಮಗ ನಗುತ (ಶಲ್ಯ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಭೀಮಾರ್ಜುನರೊಳಗೇ ದುಶ್ಯಾಸನನಿದ್ದಾನೆ. ನನ್ನ ಪ್ರಾಣಸ್ನೇಹಿತ ಕರ್ಣನು ಭೀಮಾರ್ಜುನರ ಮರಣದಿಂದ ಸಿದ್ಧಿಸಿ ನನ್ನ ಕೈಹಿಡಿಯುತ್ತಾನೆಂದು ನಿಶ್ಚಯಿಸಿದ್ದೇನೆ. ಕರ್ಣನ ಮರಣದ ಸುದ್ದಿಯನ್ನು ನಾಳೆ ತಿಳಿದುಕೊಳ್ಳುತ್ತೇನೆ ಎಂದು ದುರ್ಯೋಧನನು ನಗುತ್ತಾ ಹೇಳಿದನು.

ಅರ್ಥ:
ವೃಕೋದರ: ಭೀಮ; ಉದರ: ಹೊಟ್ಟೆ; ನರ: ಅರ್ಜುನ; ಅಂತರ್ಭಾವ: ಒಳಭಾವನೆ; ಜೀವ: ಪ್ರಾಣ; ಸಖ: ಸ್ನೇಹಿತ; ಮರಣ: ಸಾವು; ಸಿದ್ಧಿ: ಸಾಧನೆ; ಕೈವಿಡಿ: ಕೈಹಿಡಿ; ನಿಶ್ಚಯ: ನಿರ್ಧಾರ; ಸಾವು: ಮರಣ; ನಾಳೆ: ಮರುದಿನ; ಅರಿ: ತಿಳಿ; ಮಗ: ಸುತ; ನಗು: ಹರ್ಷ, ಸಂತಸ;

ಪದವಿಂಗಡಣೆ:
ಆ +ವೃಕೋದರ +ನರರೊಳ್+ಅಂತ
ರ್ಭಾವ +ದುಶ್ಯಾಸನಗೆ+ ತನ್ನಯ
ಜೀವಸಖಗಾ +ಭೀಮ +ಪಾರ್ಥರ +ಮರಣ+ಸಿದ್ಧಿಯಲಿ
ಕೈವಿಡಿಯಲೇ +ಕರ್ಣನಿಹನೆಂದ್
ಆವು +ನಿಶ್ಚಯಿಸಿದೆವು+ ಕರ್ಣನ
ಸಾವ +ನಾಳಿನೊಳ್+ಅರಿವೆನ್+ಎಂದನು +ನಿನ್ನ +ಮಗ +ನಗುತ

ಅಚ್ಚರಿ:
(೧) ವೃಕೋದರ, ಭೀಮ – ಭೀಮನನ್ನು ಕರೆದ ಪರಿ

ಪದ್ಯ ೪೧: ಅಭಿಮನ್ಯುವು ದುಶ್ಯಾಸನನ ಸೈನ್ಯವನ್ನು ಹೇಗೆ ಸೋಲಿಸಿದನು?

ತಿರುಹು ತೇಜಿಯನಿತ್ತಲಿವದಿರ
ನೊರಸಿ ದುಶ್ಯಾಸನನ ಬೆನ್ನಲಿ
ಕರುಳ ತೆಗೆವೆನು ನೋಡು ಸಾರಥಿ ಬೆಚ್ಚಬೇಡೆನುತ
ಅರಗಿನರಸನ ಬಾಗಿಲಲಿ ದ
ಳ್ಳುರಿಗೆ ತಡವೇ ಹೊಕ್ಕು ನಿಮಿಷದೊ
ಳೊರಸಿದನು ಚತುರಂಗ ಬಲವನು ಕೌರವಾನುಜನ (ದ್ರೋಣ ಪರ್ವ, ೫ ಸಂಧಿ, ೪೧ ಪದ್ಯ)

ತಾತ್ಪರ್ಯ:
ದುಶ್ಯಾಸನನನ್ನು ನೋಡಿ ಅಭಿಮನ್ಯುವು ತನ್ನ ಸಾರಥಿಗೆ, “ಕುದುರೆಗಲನ್ನು ಇವನ ರಥದತ್ತ ತಿರುಗಿಸು, ದುಶ್ಯಾಸನನ ಬೆನ್ನಿನಲ್ಲಿ ಕರುಳನ್ನು ತೆಗೆಯುತ್ತೇನೆ, ಸಾರಥಿ ನೀನು ಹೆದರಬೇಡ ಎಂದು ಹೇಳಿದನು. ಅರಗಿನ ರಾಜನ ಹೆಬ್ಬಾಗಿಲನ್ನು ಹೋಗಲು ಉರಿಗೆ ಯಾವ ಅಡ್ಡಿ, ಒಂದು ನಿಮಿಷದಲ್ಲಿ ದುಶ್ಯಾಸನನ ಸುತ್ತಲಿದ್ದ ಚತುರಂಗ ಸೈನ್ಯವನ್ನು ನಿರ್ನಾಮ ಮಾಡಿದನು.

ಅರ್ಥ:
ತಿರುಹು: ತಿರುಗಿಸು, ಹಿಂದಿರುಗು; ತೇಜಿ: ಕುದುರೆ; ಇವದಿರ: ಇಷ್ಟು ಜನ; ಒರಸು: ನಾಶಮಾಡು; ಬೆನ್ನು: ಹಿಂಬದಿ; ಕರುಳು: ಪಾನಾಂಗ; ತೆಗೆ: ಹೊರತರು; ನೋಡು: ವೀಕ್ಷಿಸು; ಸಾರಥಿ: ಸೂತ; ಬೆಚ್ಚು: ಹೆದರು; ಅರಗು: ಮೇಣ, ಲಾಕ್ಷ; ಅರಸ: ರಾಜ; ಬಾಗಿಲು: ಕದ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ತಡ: ನಿಧಾನ; ಹೊಕ್ಕು: ಸೇರು; ನಿಮಿಷ: ಕ್ಷಣ ಮಾತ್ರ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ಬಲ: ಸೈನ್ಯ; ಅನುಜ: ತಮ್ಮ;

ಪದವಿಂಗಡಣೆ:
ತಿರುಹು +ತೇಜಿಯನ್+ಇತ್ತಲ್+ಇವದಿರನ್
ಒರಸಿ +ದುಶ್ಯಾಸನನ +ಬೆನ್ನಲಿ
ಕರುಳ +ತೆಗೆವೆನು +ನೋಡು +ಸಾರಥಿ+ ಬೆಚ್ಚಬೇಡೆನುತ
ಅರಗಿನ್+ಅರಸನ +ಬಾಗಿಲಲಿ +ದ
ಳ್ಳುರಿಗೆ +ತಡವೇ +ಹೊಕ್ಕು +ನಿಮಿಷದೊಳ್
ಒರಸಿದನು +ಚತುರಂಗ +ಬಲವನು+ ಕೌರವ+ಅನುಜನ

ಅಚ್ಚರಿ:
(೧) ಉಪಮಾನದ ಪ್ರಯೋಗ – ಅರಗಿನರಸನ ಬಾಗಿಲಲಿ ದಳ್ಳುರಿಗೆ ತಡವೇ

ಪದ್ಯ ೧೮: ಪದ್ಮವ್ಯೂಹದ ರಕ್ಷಣೆಯನ್ನು ಯಾರು ಹೊತ್ತರು?

ಅರನೆಲೆಯ ಸುಯಿಧಾನ ಬಾಹ್ಲಿಕ
ತರಣಿಸುತ ಗುರುಸೂನು ಕೃತವ
ರ್ಮರಿಗೆ ಕೃಪ ದುಶ್ಯಾಸನಾದ್ಯರಿಗಿದಿರಿನಾರೈಕೆ
ಎರಡು ಕೆಲದಲಿ ಶಲ್ಯ ಶಕುನಿಗ
ಳಿರವು ಸೇನೆಯ ಸುತ್ತುವಳಯದ
ಭವರ ಕೈಕೊಂಡೊಡ್ಡ ಮೆರೆದನು ಗರುಡಿಯಾಚಾರ್ಯ (ದ್ರೋಣ ಪರ್ವ, ೪ ಸಂಧಿ, ೧೮ ಪದ್ಯ
)

ತಾತ್ಪರ್ಯ:
ದೊರೆಯ ರಕ್ಷಣೆಗೆ ಬಾಹ್ಲಿಕ, ಕರ್ಣ, ಅಶ್ವತ್ಥಾಮ, ಕೃತವರ್ಮರನ್ನು ನಿಲ್ಲಿಸಿದರು. ಮುಂಭಾಗದಲ್ಲಿ ಕೃಪ, ದುಶ್ಯಾಸನರು, ಅಕ್ಕಪಕ್ಕದಲ್ಲಿ ಶಲ್ಯ ಶಕುನಿಗಳು ರಕ್ಷಣೆ ನೀಡಿದರು. ಇಡೀ ವ್ಯೂಹದ ರಕ್ಷಣೆಯ ಭಾರವನ್ನು ಸೇನಾಧಿಪತಿಯಾದ ದ್ರೋಣನು ವಹಿಸಿಕೊಂಡನು.

ಅರ್ಥ:
ಅರ: ಅರ್ಧ; ನೆಲೆ: ಭೂಮಿ; ಸುಯಿಧಾನ: ರಕ್ಷಣೆ; ತರಣಿ: ಸೂರ್ಯ; ಸುತ: ಮಗ; ಸೂನು: ಮಗ; ಆದಿ: ಮುಂತಾದ; ಆರೈಕ: ಪೋಷಿಸು; ಕೆಲ: ಪಕ್ಕ; ಇರವು: ವಾಸ, ನೆಲೆ; ಸುತ್ತುವಳಯ: ಎಲ್ಲಾ ಕಡೆ; ಭರ: ಹೊರೆ, ಭಾರ; ಕೈಕೊಂಡು: ಧರಿಸು; ಮೆರೆ: ಒಪ್ಪು, ಶೋಭಿಸು; ಗರುಡಿ: ವ್ಯಾಯಾಮ ಶಾಲೆ; ಆಚಾರ್ಯ: ಗುರು; ಒಡ್ಡು: ಸೈನ್ಯ, ಪಡೆ;

ಪದವಿಂಗಡಣೆ:
ಅರನೆಲೆಯ +ಸುಯಿಧಾನ +ಬಾಹ್ಲಿಕ
ತರಣಿಸುತ +ಗುರುಸೂನು +ಕೃತವ
ರ್ಮರಿಗೆ +ಕೃಪ +ದುಶ್ಯಾಸನಾದ್ಯರಿಗ್+ಇದಿರಿನ್+ಆರೈಕೆ
ಎರಡು+ ಕೆಲದಲಿ +ಶಲ್ಯ +ಶಕುನಿಗಳ್
ಇರವು +ಸೇನೆಯ +ಸುತ್ತುವಳಯದ
ಭವರ +ಕೈಕೊಂಡ್+ಒಡ್ಡ+ ಮೆರೆದನು +ಗರುಡಿ+ಆಚಾರ್ಯ

ಅಚ್ಚರಿ:
(೧) ಸುತ, ಸೂನು; ಸೇನೆ, ಒಡ್ಡು – ಸಮಾನಾರ್ಥಕ ಪದ

ಪದ್ಯ ೫೨: ದುರ್ಯೋಧನನನ್ನು ನೋಡಲು ಯಾರು ಬಂದರು?

ಉಲಿವ ಭಟ್ಟರ ನಿಲಿಸಿದನು ಸಮ
ನೆಲನ ಹೊಗಳುವ ವಾಹಕರ ಕಳ
ಕಳವ ನಭಕೊತ್ತಿದನು ಕಹಳಾರವಕೆ ಕೋಪಿಸುತ
ತಲೆಮುಸುಕಿನಲಿ ತಾರಿದೊಡಲಿನ
ತಳಿತ ದುಗುಡದ ಮೋರೆಯಲಿ ಕುರು
ಕುಲಭಯಂಕರ ನೈದಿದನು ದುಶ್ಯಾಸನನು ನೃಪನ (ಅರಣ್ಯ ಪರ್ವ, ೨೨ ಸಂಧಿ, ೫೨ ಪದ್ಯ)

ತಾತ್ಪರ್ಯ:
ತನ್ನೊಡನೆ ಬಂದು ಬಿರುದನ್ನು ಘೋಷಿಸುವ ಭಟ್ಟರಿಗೆ ಸುಮ್ಮನಿರಲು ಅಪ್ಪಣೆಕೊಟ್ಟು ಮಾರ್ಗವನ್ನು ಸರಿಯಾಗಿ ನಡೆಯುವ ಪಲ್ಲಕ್ಕಿ ಹೊತ್ತವರ ಸದ್ದನ್ನು ತಿರಸ್ಕರಿಸಿ ಸುಮ್ಮನಿರಲು ಆಜ್ಞೆಮಾಡಿ, ಕಹಳೆಯ ಸದ್ದನ್ನು ಕೇಳಿ ಕೋಪಿಸುತ್ತಾ, ತಲೆಗೆ ಮುಸುಕು ಹಾಕಿಕೊಂಡು, ಒಣಗಿದ ನಾಲಿಗೆಯನ್ನುಳ್ಳ ಕುರುಕುಲ ಭಯಂಕರ ದುಶ್ಯಾಸನನು ದುಃಖವು ಕೌರವನ ಬಳಿಗೆ ಬಂದನು.

ಅರ್ಥ:
ಉಲಿ: ಕೂಗು; ಭಟ್ಟ: ಸೈನಿಕ; ನಿಲಿಸು: ತಡೆ; ಸಮನೆಲ:ಮಟ್ಟಸವಾದ ಪ್ರದೇಶ, ಚಪ್ಪಟೆಯಾದ ಭೂಮಿ; ಹೊಗಳು: ಪ್ರಶಂಶಿಸು; ವಾಹಕ: ಒಯ್ಯುವ ಸಾಧನ, ಭಾರವನ್ನು ಹೊರುವವ; ಕಳಕಳ: ವ್ಯಥೆ, ಉದ್ವಿಗ್ನತೆ; ನಭ: ಆಗಸ; ಒತ್ತು: ಸೇರು, ನೂಕು; ಕಹಳೆ: ಕಾಳೆ, ತುತ್ತೂರಿ; ಆರವ: ಶಬ್ದ, ಧ್ವನಿ; ಕೋಪ: ಮುನಿಸು, ಕ್ರೋಧ; ತಲೆ: ಶಿರ; ಮುಸುಕು: ಹೊದಿಕೆ; ತಾರು: ಸೊರಗು, ಬಡಕಲಾಗು; ಒಡಲು: ದೇಹ; ತಳಿತ: ಚಿಗುರಿದ; ದುಗುಡ: ದುಃಖ; ಮೋರೆ: ಮುಖ; ಕುಲ: ವಂಶ; ಭಯಂಕರ: ಸಾಹಸಿ, ಗಟ್ಟಿಗ; ಐದು: ಬಂದು ಸೇರು; ನೃಪ: ರಾಜ;

ಪದವಿಂಗಡಣೆ:
ಉಲಿವ+ ಭಟ್ಟರ +ನಿಲಿಸಿದನು +ಸಮ
ನೆಲನ +ಹೊಗಳುವ +ವಾಹಕರ +ಕಳ
ಕಳವ +ನಭಕೊತ್ತಿದನು +ಕಹಳ+ಆರವಕೆ +ಕೋಪಿಸುತ
ತಲೆ+ಮುಸುಕಿನಲಿ +ತಾರಿದ್+ಒಡಲಿನ
ತಳಿತ +ದುಗುಡದ +ಮೋರೆಯಲಿ +ಕುರು
ಕುಲ+ಭಯಂಕರನ್+ಐದಿದನು +ದುಶ್ಯಾಸನನು+ ನೃಪನ

ಅಚ್ಚರಿ:
(೧) ದುಶ್ಯಾಸನ ಮುಖಛಾಯೆ – ತಲೆಮುಸುಕಿನಲಿ ತಾರಿದೊಡಲಿನ ತಳಿತ ದುಗುಡದ ಮೋರೆಯಲಿ ಕುರುಕುಲಭಯಂಕರ ನೈದಿದನು

ಪದ್ಯ ೩೪: ದುರ್ಯೋಧನನು ತಂದೆಗೆ ಏನು ಹೇಳಿದ?

ಸವೆದು ಹೋಯ್ತಾಯುಷ್ಯ ತನಗಿ
ನ್ನವನಿಯಾಗದು ಮರೆ ಯುಧಿಷ್ಠಿರ
ಪವನಜರು ನಿನಗನ್ಯರೇ ಕರೆಸುವುದು ರಾಜ್ಯದಲಿ
ಅವರುಗಳ ನಿಲಿಸುವುದು ನೆಲದ
ರ್ಧವನು ದುಶ್ಯಾಸನಗೆ ಕೊಡುವುದು
ನಿಮಗೆ ಚಿತ್ತಕೆ ಬಹರೆ ಎಂದನು ತಂದೆಗವನೀಶ (ಅರಣ್ಯ ಪರ್ವ, ೨೨ ಸಂಧಿ, ೩೪ ಪದ್ಯ)

ತಾತ್ಪರ್ಯ:
ನನ್ನ ಆಯುಷ್ಯ ಮುಗಿಯಿತು. ನನಗಿನ್ನು ರಾಜ್ಯದಕ್ಕುವುದಿಲ್ಲ. ನನ್ನನ್ನು ಮರೆತುಬಿಡಿ, ಯುಧಿಷ್ಠಿರ ಭೀಮರು ನಿನಗೆ ಅನ್ಯರಲ್ಲ, ಅವರನ್ನು ಕರೆಸಿ ಅರ್ಧರಾಜ್ಯದಲ್ಲಿ ನಿಲ್ಲಿಸು. ಉಳಿದರ್ಧವನ್ನು ನಿನ್ನ ಮನಸ್ಸಿಗೆ ಬಂದರೆ ದುಶ್ಯಾಸನನಿಗೆ ನೀಡು ಎಂದನು.

ಅರ್ಥ:
ಸವೆ: ಸಜ್ಜು ಮಾಡು; ಹೋಯ್ತು: ಕಳೆದುಹೋಗು; ಆಯುಷ್ಯ: ಸಮಯ; ಅವನಿ: ಭೂಮಿ; ಮರೆ: ನೆನಪಿನಿಂದ ದೂರ ಮಾಡು; ಅನ್ಯ: ಬೇರೆ; ಕರೆಸು: ಬರೆಮಾಡು; ರಾಜ್ಯ: ರಾಷ್ಟ್ರ; ನಿಲಿಸು: ತಡೆ; ನೆಲ: ಭೂಮಿ; ಅರ್ಧ: ವಸ್ತುವಿನ ಎರಡು ಸಮಪಾಲುಗಳಲ್ಲಿ ಒಂದು; ಕೊಡು: ನೀಡು; ಅವನೀಶ: ರಾಜ;

ಪದವಿಂಗಡಣೆ:
ಸವೆದು +ಹೋಯ್ತ್+ಆಯುಷ್ಯ +ತನಗಿನ್
ಅವನಿ+ಆಗದು+ ಮರೆ +ಯುಧಿಷ್ಠಿರ
ಪವನಜರು +ನಿನಗ್+ಅನ್ಯರೇ +ಕರೆಸುವುದು +ರಾಜ್ಯದಲಿ
ಅವರುಗಳ+ ನಿಲಿಸುವುದು +ನೆಲದ್
ಅರ್ಧವನು +ದುಶ್ಯಾಸನಗೆ+ ಕೊಡುವುದು
ನಿಮಗೆ+ ಚಿತ್ತಕೆ +ಬಹರೆ+ ಎಂದನು ತಂದೆಗ್+ಅವನೀಶ

ಅಚ್ಚರಿ:
(೧) ದುರ್ಯೋಧನನು ಅಪ್ಪನ ಕರುಣೆಯನ್ನು ಗಳಿಸುವ ರೀತಿ – ನೆಲದರ್ಧವನು ದುಶ್ಯಾಸನಗೆ ಕೊಡುವುದು ನಿಮಗೆ ಚಿತ್ತಕೆ ಬಹರೆ

ಪದ್ಯ ೩೨: ಕರ್ಣನ ಸಹಾಯಕ್ಕೆ ಯಾರು ಬಂದರು?

ಭೀಮಸೇನನ ದಳಪತಿಯ ಸಂ
ಗ್ರಾಮ ಮಸೆದುದು ಮತ್ತೆ ಕೈಕೊಳ
ಲೀ ಮಹಾರಥರೆನುತ ಕೈಬೀಸಿದನು ಕುರುರಾಯ
ಸೋಮದತ್ತನ ಸೂನು ಕೃಪನು
ದ್ಧಾಮ ಶಕುನಿ ಸುಯೋಧನಾನುಜ
ನಾ ಮಹಾಹವಕೊದಗಿದರು ಕೃತವರ್ಮ ಗುರುಸುತರು (ಕರ್ಣ ಪರ್ವ, ೧೩ ಸಂಧಿ, ೩೨ ಪದ್ಯ)

ತಾತ್ಪರ್ಯ:
ಕರ್ಣ ಮತ್ತು ಭೀಮರ ಯುದ್ಧವು ಪ್ರಾರಂಭವಾಯಿತು, ಇದನ್ನು ಗಮನಿಸಿದ ದುರ್ಯೋಧನನು ಕರ್ಣನಿಗೆ ಸಹಾಯವಾಗಲೆಂದು ಪರಾಕ್ರಮಿಗಳಾದ ಸೋಮದತ್ತನ ಮಕ್ಕಳು (ಭೂರಿ, ಭೂರಿಶ್ರವ, ಶಲ ಎನ್ನುವವರು ಸೋಮದತ್ತನ ಮಕ್ಕಳು), ಕೃಪಾಚಾರ್ಯರು, ಶಕುನಿ, ಕೃತವರ್ಮ, ಅಶ್ವತ್ಥಾಮ, ದುಶ್ಯಾಸನರನ್ನು ಸನ್ನೆ ಮಾಡಿ ಕಳುಹಿಸಿದನು.

ಅರ್ಥ:
ದಳಪತಿ: ಸೇನಾಧಿಪತಿ; ಸಂಗ್ರಾಮ: ಯುದ್ಧ; ಮಸೆ: ಹರಿತವಾದುದು; ಮತ್ತೆ: ಪುನಃ; ಕೈಕೊಳಲು: ಒದಗಲು; ಮಹಾರಥ: ಪರಾಕ್ರಮಿ; ಕೈಬೀಸು: ಸನ್ನೆ ಮಾಡು; ರಾಯ: ರಾಜ; ಸೂನು: ಪುತ್ರ; ಉದ್ದಾಮ: ಶ್ರೇಷ್ಠ; ಅನುಜ: ತಮ್ಮ; ಆಹವ: ಯುದ್ಧ; ಒದಗು: ಲಭ್ಯ, ದೊರೆತುದು; ಸುತ: ಮಗ;

ಪದವಿಂಗಡಣೆ:
ಭೀಮಸೇನನ +ದಳಪತಿಯ+ ಸಂ
ಗ್ರಾಮ +ಮಸೆದುದು +ಮತ್ತೆ +ಕೈಕೊಳಲ್
ಈ +ಮಹಾರಥರೆನುತ +ಕೈಬೀಸಿದನು +ಕುರುರಾಯ
ಸೋಮದತ್ತನ +ಸೂನು +ಕೃಪನ್
ಉದ್ಧಾಮ+ ಶಕುನಿ +ಸುಯೋಧನ+ಅನುಜನ್
ಆ+ ಮಹ+ಆಹವಕ್+ಒದಗಿದರು +ಕೃತವರ್ಮ +ಗುರುಸುತರು

ಅಚ್ಚರಿ:
(೧) ಸಹಾಯಕ್ಕೆ ಬಂದ ಪರಾಕ್ರಮಿಗಳು – ಭೂರಿ, ಭೂರಿಶ್ರವ, ಶಲ, ಕೃಪ, ಶಕುನಿ, ದುಶ್ಯಾಸನ, ಕೃತವರ್ಮ, ಅಶ್ವತ್ಥಾಮ

ಪದ್ಯ ೨೨: ರಣರಂಗಕ್ಕೆ ಯಾರು ಮುನ್ನಡೆದರು?

ಅತಿರಭಸದಿಂದಾಯ್ತು ಸೇನಾ
ಪತಿಯ ಪಯಣವಲಾ ಎನುತ ಗುರು
ಸುತ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ವಿತತಸನ್ನಾಹದಲಿ ಕುರುಭೂ
ಪತಿಸಹಿತ ಹೊರವಂಟು ಭಾಸ್ಕರ
ಸುತನ ಸನ್ನೆಯ ಮೇಲೆ ನಡೆದರು ಮುಂದೆ ಸಂದಣಿಸಿ (ಕರ್ಣ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಸೇನಾಧಿಪತಿಯಾದ ಕರ್ಣನು ದಾನವನ್ನು ನೀಡಿದ ನಂತರ ಜೋರಾಗಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದನು ಇದನ್ನು ನೋಡಿದ ಉಳಿದ ಮಹಾರಥರಾದ ಅಶ್ವತ್ಥಾಮ, ಶಕುನಿ, ಕೃತವರ್ಮ, ಕೃಪ, ದುಶ್ಯಾಸನ ಮುಂತಾದವರು ತಮ್ಮ ಸೈನ್ಯವನ್ನು ಯುದ್ದಕ್ಕೆ ಸನ್ನದ್ಧವಾಗಿರಿಸಿದರು, ದುರ್ಯೋಧನನ ಜೊತೆ ಕರ್ಣನು ಹೊರಬಂದು ಅವನ ಸನ್ನೆಯಂತೆ ರಣರಂಗಕ್ಕೆ ಹೊರಟರು.

ಅರ್ಥ:
ಅತಿ: ಬಹಳ; ರಭಸ: ಜೋರು; ಸೇನಾಪತಿ: ಸೇನೆಯ ನಾಯಕ; ಪಯಣ: ಪ್ರಯಾಣ, ಪ್ರಸ್ಥಾನ; ಗುರು: ಆಚಾರ್ಯ; ಸುತ: ಮಗ; ಗುರುಸುತ: ಅಶ್ವತ್ಥಾಮ; ಆದಿ: ಮುಂತಾದ; ವಿತತ: ಹರಡಿಕೊಂಡಿರುವ, ಶ್ರೇಷ್ಠವಾದ; ಸನ್ನಾಹ: ಯುದ್ಧಕ್ಕೆ ಸನ್ನದ್ಧವಾದ ಸೇನೆ; ಭೂಪತಿ: ರಾಜ; ಸಹಿತ: ಜೊತೆ; ಹೊರವಂಟು: ಹೊರಗಡೆ ಬಂದು; ಬಾಸ್ಕರ: ಸೂರ್ಯ; ಸುತ: ಮಗ; ಸನ್ನೆ: ಸಂಜ್ಞೆ, ಸುಳಿವು; ನಡೆ: ಮುಂದೆ ಹೋಗು; ಸಂದಣಿ:ಗುಂಪು, ಸಮೂಹ;

ಪದವಿಂಗಡಣೆ:
ಅತಿ+ರಭಸದಿಂದಾಯ್ತು +ಸೇನಾ
ಪತಿಯ +ಪಯಣವಲಾ +ಎನುತ +ಗುರು
ಸುತ +ಶಕುನಿ +ಕೃತವರ್ಮ +ಕೃಪ +ದುಶ್ಯಾಸನಾದಿಗಳು
ವಿತತ+ಸನ್ನಾಹದಲಿ +ಕುರುಭೂ
ಪತಿ+ಸಹಿತ +ಹೊರವಂಟು +ಭಾಸ್ಕರ
ಸುತನ +ಸನ್ನೆಯ +ಮೇಲೆ +ನಡೆದರು +ಮುಂದೆ +ಸಂದಣಿಸಿ

ಅಚ್ಚರಿ:
(೧) ಗುರುಸುತ, ಭಾಸ್ಕರಸುತ – ಅಶ್ವತ್ಥಾಮ ಮತ್ತು ಕರ್ಣನನ್ನು ಕರೆದ ಬಗೆ
(೨) ಅತಿ, ಭೂಪತಿ, ಸೇನಾಪತಿ – ಪ್ರಾಸ ಪದಗಳು

ಪದ್ಯ ೫: ಸಾತ್ಯಕಿಯ ಸಹಾಯಕ್ಕೆ ಯಾರು ಬಂದರು?

ಹಳಚಿದವು ರಥವೆರಡು ಬಲುಗೈ
ಗಳಿಗೆ ಬಲಿದುದು ಬವರ ಕೌರವ
ಬಲದ ಭಟರಲಿ ಹತ್ತು ಸಾವಿರ ರಥಿಕರನುವಾಯ್ತು
ಒಳಹೊಗಿಸಿ ಸಾತ್ಯಕಿಯ ಸಿಕ್ಕಿಸಿ
ಗೆಲುವ ತವಕವ ಕಂಡು ಕೆಣಕಿದ
ರಳವಿಯಲಿ ಸಹದೇವ ನಕುಳರು ಕೌರವಾನುಜನ (ಕರ್ಣ ಪರ್ವ, ೪ ಸಂಧಿ, ೫ ಪದ್ಯ)

ತಾತ್ಪರ್ಯ:
ಎರಡು ರಥಗಳು ಒಂದಕ್ಕೊಂದು ಬಡಿದು ಯುದ್ಧವು ತೀಕ್ಷ್ಣವಾಯಿತು. ಕೌರವನ ಸೇನೆಯ ಹತ್ತು ಸಾವಿರ ರಥಿಕರು ದುಶ್ಯಾಸನನಿಗೆ ಬೆಂಬಲವಾಗಿ ಬರಲು ಸಿದ್ಧರಾದರು. ಸಾತ್ಯಕಿಯನ್ನು ಒಳಕ್ಕೆ ಕರೆದುಕೊಂಡು, ಸುತ್ತುವರಿದು ಸಿಕ್ಕಿಸಿಕೊಳ್ಳುವ ಸಿದ್ಧತೆಯನ್ನು ಕಂಡು ನಕುಲ ಸಹದೇವರು ದುಶ್ಯಾಸನನ್ನು ಕೆಣಕಿದರು.

ಅರ್ಥ:
ಹಳಚು: ತಾಗು, ಬಡಿ; ರಥ: ಬಂಡಿ; ಬಲ: ನೆರವು, ಸಹಾಯ; ಬಲುಗೈ: ಜೊತೆಯಾಗಿ ನಿಲ್ಲು, ಕೈಜೋಡಿಸು; ಬಲಿದುದು: ಹೆಚ್ಚು; ಬವರ: ಕಾಳಗ, ಯುದ್ಧ; ಬಲ: ಸೈನ್ಯ; ಭಟರು: ಸೈನಿಕರು; ರಥಿಕ: ರಥದ ಮೇಲೆ ಯುದ್ಧ ಮಾಡುವವ; ಅನುವು: ಅನುಕೂಲ, ಆಸ್ಪದ; ಒಳಹೊಗಿಸು: ಒಳಕ್ಕೆ ಕರೆದೊಯ್ದು; ಸಿಕ್ಕಿಸು: ಬಂಧನಕ್ಕೊಳಗಾಗು, ಸೆರೆಯಾಗು; ಗೆಲುವು: ವಿಜಯ; ತವಕ: ಬಯಕೆ, ಆತುರ; ಕಂಡು: ನೋಡಿ; ಕೆಣಕು:ರೇಗಿಸು, ಪ್ರಚೋದಿಸು; ಅಳವಿ: ಶಕ್ತಿ, ಯುದ್ಧ; ಅನುಜ: ತಮ್ಮ;

ಪದವಿಂಗಡಣೆ:
ಹಳಚಿದವು +ರಥವೆರಡು+ ಬಲುಗೈ
ಗಳಿಗೆ +ಬಲಿದುದು +ಬವರ +ಕೌರವ
ಬಲದ+ ಭಟರಲಿ+ ಹತ್ತು +ಸಾವಿರ +ರಥಿಕರ್+ಅನುವಾಯ್ತು
ಒಳಹೊಗಿಸಿ +ಸಾತ್ಯಕಿಯ+ ಸಿಕ್ಕಿಸಿ
ಗೆಲುವ+ ತವಕವ+ ಕಂಡು +ಕೆಣಕಿದರ್
ಅಳವಿಯಲಿ +ಸಹದೇವ +ನಕುಳರು +ಕೌರವ್+ಅನುಜನ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಲುಗೈಗಳಿಗೆ ಬಲಿದುದು ಬವರ
(೨) ಸಾತ್ಯಕಿ, ನಕುಲ, ಸಹದೇವ, ದುಶ್ಯಾಸನ – ಈ ಪದ್ಯದಲ್ಲಿ ಬರುವ ಹೆಸರುಗಳು

ಪದ್ಯ ೪: ಸಾತ್ಯಕಿಯ ಎದುರು ಯಾರು ಯುದ್ಧ ಮಾಡಲು ನಿಂತರು?

ಬಾಯಿಬಡಿಕರು ನಾವು ನೀ ಗರು
ವಾಯಿಕಾರನು ಬಯ್ವ ಬಿರುದಿನ
ಬಾಯ ನೋಡಾಯೆನುತ ತೋಟಿಗೆ ತೆರಹುಗೊಡದೆಸಲು
ಸಾಯಕದ ಹೊದೆ ಹಲವು ಶಲ್ಯಗೆ
ಬೀಯವಾದವು ಬಳಿಕ ಕೌರವ
ರಾಯನನುಜನು ತರುಬಿ ನಿಂದನು ಸಾತ್ಯಕಿಯ ರಥವ (ಕರ್ಣ ಪರ್ವ, ೪ ಸಂಧಿ, ೪ ಪದ್ಯ)

ತಾತ್ಪರ್ಯ:
ಶಲ್ಯನು ಸಾತ್ಯಕಿಯನ್ನು ಎದುರಿಸುತ್ತಾ, ಎಲವೋ ಸಾತ್ಯಕಿ ನಾವು ಬಾಯಿಬಡಿಕರೋ, ನೀನು ವೀರ, ಬೈಯುವ ನಿನ್ನ ಬಾಯನ್ನೊಮ್ಮೆ ನೋಡು, ಎನ್ನುತ್ತಾ ಹಲವಾರು ಹೊರೆ ಬಾಣಗಳನ್ನು ಸಾತ್ಯಕಿಯ ಮೇಲೆ ಬಿಟ್ಟನು. ಆಗ ದುಶ್ಯಾಸನನು ಸಾತ್ಯಕಿಯ ರಥವನ್ನು ತಡೆದು ನಿಲ್ಲಿಸಿದನು.

ಅರ್ಥ:
ಬಾಯಿಬಡಿಕ: ಪೊಳ್ಳೆಮಾತು, ತಲೆಹರಟೆ; ಗರುವಾಯಿ: ದೊಡ್ಡತನ, ಗೌರವ;ಬಯ್ವ: ಬಯ್ಯುವ, ಜರಿ; ಬಿರುದು: ಗೌರವ ಸೂಚಕ ಹೆಸರು; ಬಾಯಿ: ಮುಖದ ಒಂದು ಅಂಗ; ನೋಡು: ವೀಕ್ಷಿಸು; ತೋಟಿ: ಯುದ್ಧ, ಜಗಳ; ತೆರಹು: ಬಿಚ್ಚು, ತೆರೆ, ಜಾಗ; ಸಾಯಕ: ಬಾಣ, ಶರ; ಹೊದೆ: ಬಾಣಗಳನ್ನಿಡುವ ಕೋಶ, ಬತ್ತಳಿಕೆ; ಹಲವು: ಬಹಳ; ಬೀಯ: ವ್ಯಯ, ನಷ್ಟ, ಖರ್ಚು; ಬಳಿಕ: ನಂತರ; ರಾಯ: ರಾಜ; ಅನುಜ: ತಮ್ಮ; ತರುಬು: ಅಡ್ಡಗಟ್ಟು, ಬೆನ್ನಟ್ಟು; ನಿಂದನು: ಎದುರು ನಿಲ್ಲು; ರಥ: ಬಂಡಿ;

ಪದವಿಂಗಡಣೆ:
ಬಾಯಿಬಡಿಕರು+ ನಾವು +ನೀ +ಗರು
ವಾಯಿಕಾರನು +ಬಯ್ವ +ಬಿರುದಿನ
ಬಾಯ +ನೋಡಾ+ಯೆನುತ +ತೋಟಿಗೆ +ತೆರಹು+ಗೊಡದ್+ಎಸಲು
ಸಾಯಕದ +ಹೊದೆ +ಹಲವು +ಶಲ್ಯಗೆ
ಬೀಯವಾದವು+ ಬಳಿಕ+ ಕೌರವ
ರಾಯನ್+ಅನುಜನು +ತರುಬಿ +ನಿಂದನು +ಸಾತ್ಯಕಿಯ +ರಥವ

ಅಚ್ಚರಿ:
(೧) ಬ ಕಾರದ ತ್ರಿವಳಿ ಪದ – ಬಯ್ವ ಬಿರುದಿನ ಬಾಯ
(೨) ಬಾಯಿ, ಗರುವಾಯಿ – ಪ್ರಾಸ ಪದ
(೩) ಸಾತ್ಯಕಿ, ಶಲ್ಯ, ದುಶ್ಯಾಸನ – ಪದ್ಯದಲ್ಲಿ ಬಂದ ಹೆಸರುಗಳು

ಪದ್ಯ ೨೯: ಭೀಮ ಅಶ್ವತ್ಥಾಮರ ನಂತರ ಯಾರು ಯುದ್ಧವನ್ನು ಮುಂದುವರಿಸಿದರು?

ದೊರೆಗಳಿಬ್ಬರ ಸೋಲವನು ವಿ
ಸ್ತರಿಸಿ ಹೊಕ್ಕರು ಮತ್ತೆ ಮಾದ್ರೇ
ಶ್ವರ ಶಕುನಿ ಕೃತವರ್ಮ ಕೃಪ ದುಶ್ಯಾಸನಾದಿಗಳು
ಅರಿಬಲದಲಾ ದ್ರೌಪದೇಯರು
ಹರಿಯನುಜ ಮಾದ್ರೇಯ ಕೈಕೆಯ
ವರಯುಧಾಮನ್ಯೂತ್ತಮೌಂಜಸ ಪಾಂಡ್ಯ ಶೃಂಜಯರು (ಕರ್ಣ ಪರ್ವ, ೩ ಸಂಧಿ, ೨೯ ಪದ್ಯ)

ತಾತ್ಪರ್ಯ:
ಭೀಮ ಅಶ್ವತ್ಥಾಮರಿಬ್ಬರೂ ಮೂರ್ಛಿತರಾಗಲು ಶಲ್ಯ, ಶಕುನಿ, ಕೃತವರ್ಮ, ಕೃಪ, ದುಶ್ಯಾಸನಾದಿಗಳು ಕುರುಸೇನೆಯಿಂದಲೂ, ಉಪಪಾಂಡವರು, ನಕುಲ ಸಹದೇವರು, ಕೈಕೆಯ ಯುಧಾಮನ್ಯು, ಉತ್ತಮೌಜಸ, ಪಾಂಡ್ಯ, ಸೃಂಜಯರು ಪಾಂಡವ ಸೇನೆಯಿಂದಲೂ ಯುದ್ಧವನ್ನು ಮುಂದುವರಿಸಿದರು.

ಅರ್ಥ:
ದೊರೆ: ರಾಜ; ಸೋಲು: ಪರಾಜಯ; ವಿಸ್ತರಿಸಿ: ವಿವರವಾಗಿ ಹೇಳು; ಹೊಕ್ಕು: ಸೇರು; ಅರಿ: ವೈರಿ; ಬಲ: ಶಕ್ತಿ; ಅನುಜ: ತಮ್ಮ; ವರ: ಶ್ರೇಷ್ಠ;

ಪದವಿಂಗಡಣೆ:
ದೊರೆಗಳ್+ಇಬ್ಬರ +ಸೋಲವನು+ ವಿ
ಸ್ತರಿಸಿ+ ಹೊಕ್ಕರು +ಮತ್ತೆ +ಮಾದ್ರೇ
ಶ್ವರ +ಶಕುನಿ +ಕೃತವರ್ಮ +ಕೃಪ +ದುಶ್ಯಾಸನಾದಿಗಳು
ಅರಿ+ಬಲದಲಾ +ದ್ರೌಪದೇಯರು
ಹರಿಯನುಜ +ಮಾದ್ರೇಯ +ಕೈಕೆಯ
ವರ +ಯುಧಾಮನ್ಯ +ಉತ್ತಮೌಂಜಸ+ ಪಾಂಡ್ಯ+ ಶೃಂಜಯರು

ಅಚ್ಚರಿ:
(೧) ಕೌರವರು: ಮಾದ್ರೇಶ್ವರ ಶಕಿನಿ ಕೃತವರ್ಮ ಕೃಪ ದುಶ್ಯಾಸನಾ; ಪಾಂಡವರು: ದ್ರೌಪದೇಯರು
ಹರಿಯನುಜ, ಮಾದ್ರೇಯ, ಕೈಕೆಯ, ಯುಧಾಮನ್ಯ, ಉತ್ತಮೌಂಜಸ, ಪಾಂಡ್ಯ, ಶೃಂಜಯ