ಪದ್ಯ ೩೯: ದುರ್ಜಯನು ಭೀಮನನ್ನು ಹೇಗೆ ಎದುರಿಸಿದನು?

ಬಿಲುದುಡುಕಿ ರಿಪುಭಟನೊಡನೆ ಮುಂ
ಕೊಳಿಸಿದನು ದುರ್ಜಯನು ಹಿಮ್ಮೆ
ಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ
ಒಲುಮೆಯೊಡಹುಟ್ಟಿದರ ಬಯಕೆಯ
ಸಲಿಸುವರೆ ನಾವಲ್ಲದೆ ಕುರು
ಕುಲ ಲಲಾಮರು ತಪ್ಪಿ ನುಡಿಯರೆನುತ್ತ ಮಂಡಿಸಿದ (ದ್ರೋಣ ಪರ್ವ, ೧೩ ಸಂಧಿ, ೩೯ ಪದ್ಯ)

ತಾತ್ಪರ್ಯ:
ದುರ್ಜಯನು ಬಿಲ್ಲನ್ನು ಹಿಡಿದು ಭೀಮನನ್ನು ಇದಿರಿಸಿದನು. ಭೀಮಾ ಹಿಮ್ಮೆಟ್ಟು ನಿಂತರೆ ನಿನ್ನ ದೇಹವನ್ನು ತುಂಡು ಮಾಡುತ್ತೇನೆ. ಭೀಮನು ಪ್ರೀತಿಯ ತಮ್ಮಂದಿರ ಬಯಕೆಯನ್ನು ಸಲ್ಲಿಸುವವರೇ ನಾವು, ಕುರುಕುಲ ತಿಲಿಕರು ತಪ್ಪಿ ನುಡಿಯುವವರಲ್ಲ ಎನ್ನುತ್ತ ಮಂಡಿಹಚ್ಚಿ ಕುಳಿತನು.

ಅರ್ಥ:
ಬಿಲು: ಬಿಲ್ಲು, ಧನು; ತುಡುಕು: ಹೋರಾಡು, ಸೆಣಸು; ರಿಪು: ವೈರಿ; ಭಟ: ಸೈನಿಕ; ಮುಂಕೊಳಿಸು: ಇದಿರು; ಹಿಮ್ಮೆಟ್ಟು: ಹಿಂದೆ ಸರಿ; ಪವನಜ: ಭೀಮ; ನಿಂದು: ನಿಲ್ಲು; ಅಡರು: ಆಸರೆ; ಒಡಲು: ದೇಹ; ಒಲುಮೆ: ಪ್ರೀತಿ; ಒಡಹುಟ್ಟಿ: ಜೊತೆಯಲ್ಲಿ ಜನಿಸಿದ, ಸಹೋದರ; ಬಯಕೆ: ಆಸೆ; ಸಲಿಸು: ಪೂರೈಸು, ಒಪ್ಪಿಸು; ಕುಲ: ವಂಶ; ಲಲಾಮ: ಶ್ರೇಷ್ಠ, ತಿಲಕ; ತಪ್ಪು: ಸರಿಯಿಲ್ಲದು; ನುಡಿ: ಮಾತು; ಮಂಡಿಸು: ಕೂಡು;

ಪದವಿಂಗಡಣೆ:
ಬಿಲು+ತುಡುಕಿ +ರಿಪುಭಟನೊಡನೆ +ಮುಂ
ಕೊಳಿಸಿದನು +ದುರ್ಜಯನು +ಹಿಮ್ಮೆಟ್ಟ್
ಎಲವೊ +ಪವನಜ +ನಿಂದಡ್+ಅರಿವೆನು +ನಿನ್ನೊಡಲನೆನುತ
ಒಲುಮೆ+ಒಡಹುಟ್ಟಿದರ+ ಬಯಕೆಯ
ಸಲಿಸುವರೆ +ನಾವಲ್ಲದೆ +ಕುರು
ಕುಲ +ಲಲಾಮರು +ತಪ್ಪಿ+ ನುಡಿಯರ್+ಎನುತ್ತ +ಮಂಡಿಸಿದ

ಅಚ್ಚರಿ:
(೧) ಭೀಮನೆದುರು ಗರ್ಜಿಸಿದ ಪರಿ – ಹಿಮ್ಮೆಟ್ಟೆಲವೊ ಪವನಜ ನಿಂದಡರಿವೆನು ನಿನ್ನೊಡಲನೆನುತ

ಪದ್ಯ ೩೮: ದುರ್ಯೋಧನನು ದುರ್ಜಯನಿಗೆ ಏನು ಹೇಳಿದ?

ತೇರ ಚಾಚಲಿ ಬೇಗ ಬಲುಗೈ
ಸಾರಥಿಯ ಬರಹೇಳು ಹಿಂದಣ
ಸಾರಥಿಯ ದೆಸೆಯಿಂದ ಬಂದುದು ಕರ್ಣ ಸೋಲುವನೆ
ವೀರನಾವೆಡೆ ಶೌರ್ಯ ಪಾರಾ
ವಾರನಾವೆಡೆಯೆನುತ ಕೌರವ
ಧಾರುಣೀಪತಿ ಬೆಸಸಿದನು ತನ್ನನುಜ ದುರ್ಜಯಗೆ (ದ್ರೋಣ ಪರ್ವ, ೧೩ ಸಂಧಿ, ೩೮ ಪದ್ಯ)

ತಾತ್ಪರ್ಯ:
ಇದನ್ನು ನೋಡಿದ ದುರ್ಯೋಧನನ ತಮ್ಮನಾದ ದುರ್ಜಯನನ್ನು ಕರೆದು, ಬೇಗ ತೇರನ್ನು ತಂದು ಕರ್ಣನಿಗೆ ಕೊಡ ಹೇಳು. ಕುಶಲನೂ, ಕೈಚಳಕವಿರುವವನೂ ಆದ ಸಾರಥಿಯನ್ನು ಬರಹೇಳು. ಕರ್ಣ ಸೋಲುವವನಲ್ಲ, ಹಿಮ್ದಿದ್ದ ಸಾರಥಿಯೆಂದ ಅವನಿಗೆ ಈ ಗತಿಯಾಯಿತು. ವೀರನಾದ ಕರ್ಣನಲ್ಲಿ ಶೌರ್ಯ ಸಮುದ್ರನಾದ ಕರ್ಣನೆಲ್ಲಿ ಎಂದು ಆಜ್ಞೆ ಮಾಡಿದನು.

ಅರ್ಥ:
ತೇರು: ಬಂಡಿ; ಚಾಚು: ಹರಡು; ಸಾರಥಿ: ಸೂತ; ಬರಹೇಳು: ಆಗಮಿಸು; ಹಿಂದಣ: ಹಿಂಬದಿ; ದೆಸೆ: ದಿಕ್ಕು; ಬಂದು: ಆಗಮಿಸು; ಸೋಲು: ಪರಾಭವ; ವೀರ: ಶೂರ; ಶೌರ್ಯ: ಪರಾಕ್ರಮ; ಪಾರಾವಾರ: ಸಮುದ್ರ, ಕಡಲು; ಧಾರುಣೀಪತಿ: ರಾಜ; ಬೆಸಸು: ಕಾರ್ಯ; ಅನುಜ: ತಮ್ಮ;

ಪದವಿಂಗಡಣೆ:
ತೇರ +ಚಾಚಲಿ +ಬೇಗ +ಬಲುಗೈ
ಸಾರಥಿಯ +ಬರಹೇಳು +ಹಿಂದಣ
ಸಾರಥಿಯ +ದೆಸೆಯಿಂದ +ಬಂದುದು +ಕರ್ಣ +ಸೋಲುವನೆ
ವೀರನಾವೆಡೆ+ ಶೌರ್ಯ +ಪಾರಾ
ವಾರನ್+ಆವೆಡೆ+ಎನುತ +ಕೌರವ
ಧಾರುಣೀಪತಿ +ಬೆಸಸಿದನು +ತನ್ನನುಜ +ದುರ್ಜಯಗೆ

ಅಚ್ಚರಿ:
(೧) ಕರ್ಣನ ಶೌರ್ಯವನ್ನು ವರ್ಣಿಸುವ ಪರಿ – ವೀರನಾವೆಡೆ ಶೌರ್ಯ ಪಾರಾವಾರನಾವೆಡೆಯೆನುತ

ಪದ್ಯ ೨೨: ಯಾವ ಮಹಾರಥರು ಯುದ್ಧಕ್ಕೆ ಬಂದರು?

ಗುರುತನುಜ ವೃಷಸೇನ ಮಾದ್ರೇ
ಶ್ವರ ಜಯದ್ರಥ ಶಕುನಿ ದುಸ್ಸಹ
ಗುರು ಸುಶರ್ಮ ವಿಕರ್ಣ ಭೂರಿಶ್ರವ ಸುಲೋಚನರು
ಧರಣಿಪತಿ ಭಗದತ್ತ ಯಮನೇ
ಶ್ವರ ಕಳಿಂಗ ಸುಕೇತು ದುರ್ಜಯ
ದುರುಳ ದುಶ್ಯಾಸನನಲಂಬುಸರೈದಿದರು ರಣವ (ಭೀಷ್ಮ ಪರ್ವ, ೮ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅಶ್ವತ್ಥಾಮ, ವೃಷಸೇನ, ಶಲ್ಯ, ಜಯದ್ರಥ, ಶಕುನಿ, ದುಸ್ಸಹ, ದ್ರೋಣ, ಸುಶರ್ಮ, ವಿಕರ್ಣ, ಭೂರಿಶ್ರವ, ಸುಲೋಚನ, ಭಗದತ್ತ, ಯವನರಾಜ, ಕಳಿಂಗ, ಸುಕೇತು, ದುರ್ಜಯ, ದುಷ್ಟ ದುಶ್ಯಾಸನ, ಅಲಂಬುಸಾದಿಗಳು ಯುದ್ಧಕ್ಕೆ ಬಂದರು.

ಅರ್ಥ:
ಗುರು: ಆಚಾರ್ಯ; ತನುಜ: ಮಗ; ಧರಣಿಪತಿ: ರಾಜ; ದುರುಳ: ದುಷ್ಟ; ಐದು: ಬಂದು ಸೇರು; ರಣ: ರಣರಂಗ;

ಪದವಿಂಗಡಣೆ:
ಗುರು+ತನುಜ+ ವೃಷಸೇನ +ಮಾದ್ರೇ
ಶ್ವರ +ಜಯದ್ರಥ +ಶಕುನಿ +ದುಸ್ಸಹ
ಗುರು +ಸುಶರ್ಮ +ವಿಕರ್ಣ +ಭೂರಿಶ್ರವ+ ಸುಲೋಚನರು
ಧರಣಿಪತಿ +ಭಗದತ್ತ +ಯಮನೇ
ಶ್ವರ +ಕಳಿಂಗ+ ಸುಕೇತು +ದುರ್ಜಯ
ದುರುಳ +ದುಶ್ಯಾಸನನ್+ಅಲಂಬುಸರ್+ಐದಿದರು +ರಣವ

ಅಚ್ಚರಿ:
(೧) ಗುರುತನುಜ, ಗುರು – ಗುರು ಪದದ ಬಳಕೆ
(೨) ದ ಕಾರದ ತ್ರಿವಳಿ ಪದದ ಗುಂಪು – ದುರ್ಜಯ ದುರುಳ ದುಶ್ಯಾಸನ

ಪದ್ಯ ೪೧: ಅಶ್ವತ್ಥಾಮನು ಅರ್ಜುನನಿಗೆ ಹೇಗೆ ಉತ್ತರಿಸಿದ?

ಅರ್ಜುನನ ಶರವಿದ್ಯೆ ವಿವರಿಸೆ
ದುರ್ಜಯವಲಾ ಗರುವತನದೊಳು
ಗರ್ಜಿಸಿದೊಡೇನಹುದೆನುತೆ ಗುರುಸೂನು ಹರುಷದೊಳು
ನಿರ್ಜರರು ಮಝ ಪೂತುರೆನಲಾ
ವರ್ಜಿಸಿದ ತಿರುವಿನೊಳು ಸಂಗರ
ನಿರ್ಜಿತಾರಿಯನೆಸಲು ಕಣೆಗಳು ಕವಿದವಂಬರಕೆ (ವಿರಾಟ ಪರ್ವ, ೯ ಸಂಧಿ, ೪೧ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಉತ್ತರಿಸುತ್ತಾ, ಅರ್ಜುನನ ಧನುರ್ವಿದ್ಯೆಯನ್ನು ಅರಿಯಲು ಸಾಧ್ಯವೇ? ಸ್ವಾಭಿಮಾನದಿಂದ ಗರ್ಜಿಸಿದರೆ ಏನು ಪ್ರಯೋಜನ? ಎಂದು ಹೇಳಿ ಸಂತೋಷದಿಂದ ದೇವತೆಗಳೂ, ಹೊಗಳುವಂತೆ, ಬಿಲ್ಲಿನ ಹೆದೆಯನ್ನು ಹದಮಾಡಿ, ಶತ್ರುಗಳನ್ನು ಜಯಿಸಿದನಾದ ಅರ್ಜನನನ್ನು ಬಾಣಗ್ಲೀಮ್ದ ಹೊಡೆಯಲು, ಆಕಾಶವೆಲ್ಲಾ ಬಾಣಮಯವಾಯಿತು.

ಅರ್ಥ:
ಶರ: ಬಾಣ; ವಿವರ: ಹರಡು, ವಿಸ್ತಾರ; ದುರ್ಜಯ: ಜಯಿಸಲಶಕ್ಯನಾದವ; ಗರುವ: ಶ್ರೇಷ್ಠ; ಗರ್ಜಿಸು: ಕೂಗು, ಆರ್ಭಟಿಸು; ಗುರು: ಆಚಾರ್ಯ; ಸೂನು: ಮಗ; ಹರುಷ: ಸಂತೋಷ; ನಿರ್ಜರ: ದೇವತೆ; ಮಝ: ಭಲೇ; ಪೂತು: ಕೊಂಡಾಟದ ಮಾತು; ವರ್ಜಿಸು: ಬಿಡು, ತ್ಯಜಿಸು; ತಿರುವು: ಬಿಲ್ಲಿನ ಹಗ್ಗ, ಹೆದೆ; ಸಂಗರ: ಯುದ್ಧ; ನಿರ್ಜಿತ: ಸೋಲಿಲ್ಲದವನು; ಅರಿ: ವೈರಿ; ಕಣೆ: ಬಾಣ; ಕವಿ: ಆವರಿಸು; ಅಂಬರ: ಆಗಸ;

ಪದವಿಂಗಡಣೆ:
ಅರ್ಜುನನ+ ಶರವಿದ್ಯೆ +ವಿವರಿಸೆ
ದುರ್ಜಯವಲಾ +ಗರುವತನದೊಳು
ಗರ್ಜಿಸಿದೊಡ್+ಏನಹುದೆನುತೆ +ಗುರುಸೂನು +ಹರುಷದೊಳು
ನಿರ್ಜರರು +ಮಝ +ಪೂತುರೆನಲಾ
ವರ್ಜಿಸಿದ +ತಿರುವಿನೊಳು +ಸಂಗರ
ನಿರ್ಜಿತಾರಿಯನ್+ಎಸಲು +ಕಣೆಗಳು+ ಕವಿದವ್+ಅಂಬರಕೆ

ಅಚ್ಚರಿ:
(೧) ಗ ಕಾರದ ತ್ರಿವಳಿ ಪದ – ಗರುವತನದೊಳು ಗರ್ಜಿಸಿದೊಡೇನಹುದೆನುತೆ ಗುರುಸೂನು
(೨) ಅರ್ಜುನನನ್ನು ಹೊಗಳುವ ಪರಿ – ಸಂಗರನಿರ್ಜಿತಾರಿ