ಪದ್ಯ ೪೮: ಕೌರವನು ಯುದ್ಧಕ್ಕೆ ಯಾವ ಆಯ್ಕೆಯನ್ನು ನೀಡಿದನು?

ವರಿಸಿದೆನು ಭೀಮನನು ನೀವಾ
ದರಿಸುವಡೆ ಧರ್ಮವನು ದುರ್ಜನ
ಸರಣಿಯಲಿ ನೀವ್ ಬಹಡೆ ದಳಸಹಿತೈವರಿದಿರಹುದು
ತೆರಳುವವರಾವಲ್ಲ ನೀವ್ ಪತಿ
ಕರಿಸಿದುದೆ ನಮ್ಮಿಪ್ಪವೆನೆ ಮುರ
ಹರ ಯುಧಿಷ್ಠಿರನೃಪನನೆಕ್ಕಟಿಗರೆದು ಗರ್ಜಿಸಿದ (ಗದಾ ಪರ್ವ, ೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ನೀವು ಧರ್ಮವನ್ನವಲಂಬಿಸಿದರೆ ಭೀಮನೊಡನೆ ಯುದ್ಧವನ್ನು ಹಿಡಿದೆ. ದುರ್ಜನರಂತೆ ನಡೆಯುವುದಾದರೆ ಸೇನಾ ಸಮೇತರಾಗಿ ನೀವೈವರೂ ಬರಬಹುದು. ಯಾವುದಕ್ಕೂ ನಾನು ಹಿಂಜರಿಯುವುದಿಲ್ಲ. ನೀವೇನನ್ನು ಒಪ್ಪಿಕೊಳ್ಳುವಿರೋ ಅದೇ ನಮ್ಮಿಷ್ಟ, ಎಂದು ದುರ್ಯೋಧನನು ಹೇಳಿದನು. ಆಗ ಧರ್ಮಜನನ್ನು ಶ್ರೀಕೃಷ್ಣನು ಒಂದು ಕಡೆ ಕರೆದು ಹೀಗೆಂದನು.

ಅರ್ಥ:
ವರಿಸು: ಬರುವಂತೆ ಮಾಡು, ಆರಿಸು; ಆದರಿಸು: ಗೌರವಿಸು; ದುರ್ಜನ: ದುಷ್ಟ; ಸರಣಿ: ಸಾಲು; ಬಹಡೆ: ಬರುತ್ತೀರ; ದಳ: ಸೈನ್ಯ; ಸಹಿತ: ಜೊತೆ; ಇದಿರು: ಎದುರು; ತೆರಳು: ಗಮಿಸು; ಪತಿಕರಿಸು: ಅಂಗೀಕರಿಸು; ಇಷ್ಟ: ಆಸೆ; ನೃಪ: ರಾಜ; ಮುರಹರ: ಕೃಷ್ಣ; ಎಕ್ಕಟಿ: ಒಬ್ಬಂಟಿಗ, ಏಕಾಕಿ; ಕರೆ: ಬರೆಮಾಡು; ಗರ್ಜಿಸು: ಕೂಗು;

ಪದವಿಂಗಡಣೆ:
ವರಿಸಿದೆನು +ಭೀಮನನು +ನೀವ್
ಆದರಿಸುವಡೆ +ಧರ್ಮವನು +ದುರ್ಜನ
ಸರಣಿಯಲಿ +ನೀವ್ +ಬಹಡೆ +ದಳಸಹಿತ್+ಐವರ್+ಇದಿರಹುದು
ತೆರಳುವವರಾವಲ್ಲ+ ನೀವ್ +ಪತಿ
ಕರಿಸಿದುದೆ +ನಮ್ಮಿಪ್ಪವ್+ಎನೆ+ ಮುರ
ಹರ+ ಯುಧಿಷ್ಠಿರ+ನೃಪನನ್+ಎಕ್ಕಟಿ+ಕರೆದು +ಗರ್ಜಿಸಿದ

ಅಚ್ಚರಿ:
(೧) ನೀವ್ ಪದದ ಬಳಕೆ – ೩ ಬಾರಿ ಪ್ರಯೋಗ

ಪದ್ಯ ೬: ಕೌರವನು ಯಾರನ್ನು ತನ್ನ ಬಳಿ ನೇಮಿಸಿದನು?

ಆರು ಕುಹಕಿಗಳಾರು ದುರ್ಜನ
ರಾರು ಖುಲ್ಲರು ನೀತಿ ಬಾಹಿರ
ರಾರು ದುರ್ಬಲರವರು ನಿನ್ನರಮನೆಯ ಮಂತ್ರಿಗಳು
ಆರು ಹಿತವರು ನೀತಿ ಕೋವಿದ
ರಾರು ಸುಜನರು ಬಹು ಪರಾಕ್ರಮ
ರಾರವರ ಹೊರಬೀಸಿ ಕಾಬುದು ನಿನ್ನ ಮತವೆಂದ (ದ್ರೋಣ ಪರ್ವ, ೧ ಸಂಧಿ, ೬ ಪದ್ಯ)

ತಾತ್ಪರ್ಯ:
ಯಾರು ದುರ್ಜನರೋ, ಯಾರು ನೀಚರೋ, ನೀತಿಬಿಟ್ಟವರಾರೋ, ಯಾರು ದುರ್ಬಲರೋ, ಅವರೇ ನಿನ್ನ ಅರಮನೆಯ ಮಂತ್ರಿಗಳು, ಹಿತವರು, ನೀತಿಯನ್ನು ಚೆನ್ನಾಗಿ ಬಲ್ಲವರು, ಸುಜನರು, ಮಹಾಪರಾಕ್ರಮಿಗಳು ಯಾರಿರುವರೋ ಅವರನ್ನು ಹೊರಗಿಡಬೇಕು ಎನ್ನುವುದೇ ನಿನ್ನ ನಿರ್ಧಾರ ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಕುಹಕ: ಮೋಸ, ವಂಚನೆ; ದುರ್ಜನ: ದುಷ್ಟ; ಖುಲ್ಲ: ದುಷ್ಟ, ನೀಚ; ಬಾಹಿರ: ಹೊರಗಿನವ; ದುರ್ಬಲ: ಬಲಹೀನವಾದ, ಶಕ್ತಿಹೀನ; ಅರಮನೆ: ರಾಜರ ಆಲಯ; ಮಂತ್ರಿ: ಸಚಿವ; ಹಿತ: ಒಳ್ಳೆಯದು, ಪ್ರಿಯಕರವಾದ; ನೀತಿ: ನಿಯಮ; ಕೋವಿದ: ಪಂಡಿತ; ಸುಜನ: ಒಳ್ಳೆಯ ಜನ,ಸಜ್ಜನ; ಪರಾಕ್ರಮ: ಕಲಿತನ, ಶೌರ್ಯ; ಕಾಬುದು: ಕಾಣಬೇಕು; ಮತ: ಅಭಿಪ್ರಾಯ, ಆಶಯ;

ಪದವಿಂಗಡಣೆ:
ಆರು +ಕುಹಕಿಗಳ್+ಆರು +ದುರ್ಜನರ್
ಆರು +ಖುಲ್ಲರು +ನೀತಿ +ಬಾಹಿರರ್
ಆರು +ದುರ್ಬಲರ್+ಅವರು +ನಿನ್ನ್+ಅರಮನೆಯ +ಮಂತ್ರಿಗಳು
ಆರು +ಹಿತವರು +ನೀತಿ +ಕೋವಿದರ್
ಆರು +ಸುಜನರು +ಬಹು +ಪರಾಕ್ರಮರ್
ಆರ್+ಅವರ+ ಹೊರಬೀಸಿ +ಕಾಬುದು +ನಿನ್ನ +ಮತವೆಂದ

ಅಚ್ಚರಿ:
(೧) ಆರು ಪದದ ಬಳಕೆ – ೧-೬ ಸಾಲಿನ ಮೊದಲ ಪದ
(೨) ದುಷ್ಟರನ್ನು ಹೇಳಲು ಬಳಸಿದ ಪದ – ಕುಹಕಿ, ದುರ್ಜನ, ಖುಲ್ಲ

ಪದ್ಯ ೩: ದುರ್ಯೋಧನನು ಯಾವ ಪ್ರಶ್ನೆಯನ್ನು ಕೇಳಿದನು?

ಸಂದಣಿಸಿ ಕುರುಭೂಮಿಯಲಿ ತಾ
ಮಂದಿ ಬಿಟ್ಟುದು ನಾಡಗಾವಳಿ
ಬಂದುದಲ್ಲಿಗೆ ಕಳುಹಿದರು ದೂತರನು ದುರ್ಜನರು
ನಂದಗೋಪನ ಮಗನ ಕೊಂಡೆಯ
ದಿಂದ ಕಲಿಯೇರಿದರು ಕೃಪಣರ
ಕೊಂದೊಡಹುದಪಕೀರ್ತಿಯದಕಿನ್ನೇನು ಹದನೆಂದ (ಭೀಷ್ಮ ಪರ್ವ, ೧ ಸಂಧಿ, ೩ ಪದ್ಯ)

ತಾತ್ಪರ್ಯ:
ಕುರುಕ್ಷೇತ್ರದಲ್ಲಿ ಆ ಮಂದಿಯ ಗುಂಪು ಬೀಡುಬಿಟ್ಟು ಗದ್ದಲ ಮಾಡುತ್ತಿದೆ, ದುರ್ಜನರು ನಮ್ಮಲ್ಲಿಗೆ ದೂತರನ್ನು ಅಟ್ಟಿದರು. ನಂದಗೋಪನ ಮಗನ (ಕೃಷ್ಣ) ಚಾಡಿ ಮಾತನ್ನು ಕೇಳಿ ವೀರತನವನ್ನು ತೋರುತ್ತಿದ್ದಾರೆ, ದುರಶೆಯ ಇವರನ್ನು ಕೊಂದರೆ ಅಪಕೀರ್ತಿ ಬರುವುದು ನಮಗೇ ಏನು ಮಾಡುವುದು ಎಂದು ದುರ್ಯೋಧನನು ಕೇಳಿದನು.

ಅರ್ಥ:
ಸಂದಣಿ: ಗುಂಪು; ಭೂಮಿ: ಅವನಿ; ಮಂದಿ: ಜನರ ಗುಂಪು; ನಾಡಗಾವಳಿ: ನಾಡ ಜನರ ಗುಂಪು; ಬಂದು: ಆಗಮಿಸು; ಕಳುಹಿಸು: ತೆರಳು; ದೂತ: ಸೇವಕ; ದುರ್ಜನ: ಕೆಟ್ಟಜನ; ಮಗ: ಸುತ; ಕೊಂಡೆ:ಚಾಡಿಯ ಮಾತು; ಕಲಿ: ಶೂರ; ಕೃಪಣ: ದೈನ್ಯದಿಂದ ಕೂಡಿದುದು; ಕೊಂದು: ಕೊಲ್ಲು; ಅಪಕೀರ್ತಿ: ಅಪಯಶಸ್ಸು; ಹದ: ಸ್ಥಿತಿ;

ಪದವಿಂಗಡಣೆ:
ಸಂದಣಿಸಿ +ಕುರುಭೂಮಿಯಲಿ +ತಾ
ಮಂದಿ +ಬಿಟ್ಟುದು +ನಾಡಗಾವಳಿ
ಬಂದುದಲ್ಲಿಗೆ +ಕಳುಹಿದರು +ದೂತರನು +ದುರ್ಜನರು
ನಂದಗೋಪನ+ ಮಗನ +ಕೊಂಡೆಯ
ದಿಂದ +ಕಲಿಯೇರಿದರು +ಕೃಪಣರ
ಕೊಂದೊಡಹುದ್+ಅಪಕೀರ್ತಿ+ಅದಕಿನ್ನೇನು +ಹದನೆಂದ

ಅಚ್ಚರಿ:
(೧) ಪಾಂಡವರನ್ನು ತೆಗೆಳುವ ಪರಿ – ದುರ್ಜನರು ನಂದಗೋಪನ ಮಗನ ಕೊಂಡೆಯದಿಂದ ಕಲಿಯೇರಿದರು; ಕೃಪಣರ ಕೊಂದೊಡಹುದಪಕೀರ್ತಿ

ಪದ್ಯ ೧೦೮: ಸೈರಂಧ್ರಿಯು ಸುದೇಷ್ಣೆಗೇನು ಹೇಳಿದಳು?

ಎಮ್ಮದೇನಪರಾಧ ದೇವಿಯೆ
ನಿಮ್ಮ ತಮ್ಮನು ತಪ್ಪಿನಡೆದೊಡೆ
ಯೆಮ್ಮರಮಣರು ಸೈರಿಸದೆ ಸೀಳಿದರು ದುರ್ಜನರ
ನಿಮ್ಮ ನಾವೋಲೈಸಿ ಮರಳಿದು
ನಿಮ್ಮ ಕೆಡಿಸುವರಲ್ಲ ದೂರ್ತರು
ತಮ್ಮ ಕತದಲಿ ತಾವೆ ಕೆಟ್ಟರು ನೀತಿ ಬಾಹಿರರು (ವಿರಾಟ ಪರ್ವ, ೩ ಸಂಧಿ, ೧೦೮ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ದೇವಿ, ಇದರಲ್ಲಿ ನನ್ನದೇನು ತಪ್ಪಿದೆ, ನಿಮ್ಮ ತಮ್ಮನು ತಪ್ಪಿನಡೆದಿದ್ದರಿಂದ ನನ್ನ ಪತಿಗಳು ದುರ್ಜನರನ್ನು ಸೀಳಿದರು. ನಿಮ್ಮ ಸೇವೆಯಲ್ಲಿದ್ದು ನಿಮ್ಮನ್ನು ಕೆಡಿಸುವವರು ನಾವಲ್ಲ. ದೂರ್ತರಾದವರು ತಮ್ಮ ದುಷ್ಕೃತ್ಯದಿಂದ ತಾವು ಕೆಟ್ಟರು, ನೀತಿ ಬಾಹಿರರಿಗೆ ಆಗುವುದು ಹೀಗೆ ಎಂದು ಸೈರಂಧ್ರಿಯು ಹೇಳಿದಳು.

ಅರ್ಥ:
ಅಪರಾಧ: ತಪ್ಪು; ತಮ್ಮ: ಸಹೋದರ; ತಪ್ಪು: ಸರಿಯಲ್ಲದ; ನಡೆ: ನಡಗೆ; ರಮಣ: ಪ್ರಿಯತಮ; ಸೈರಿಸು: ತಾಳು, ಸಹಿಸು; ಸೀಳು: ಹರಿ; ದುರ್ಜನ: ದುಷ್ಟ; ಓಲೈಸು: ಉಪಚರಿಸು; ಮರಳಿ: ಮತ್ತೆ, ಹಿಂದಿರುತು; ಕೆಡಿಸು: ಹಾಳುಮಾದು; ಧೂರ್ತ: ದುಷ್ಟ; ಕತ: ಕಾರಣ, ನಿಮಿತ್ತ; ಕೆಡು: ಹಾಳಾಗು; ನೀತಿ: ಒಳ್ಳೆಯ ನಡತೆ; ಬಾಹಿರ: ಹೊರಗಿನವ;

ಪದವಿಂಗಡಣೆ:
ಎಮ್ಮದೇನ್+ಅಪರಾಧ +ದೇವಿಯೆ
ನಿಮ್ಮ +ತಮ್ಮನು +ತಪ್ಪಿ+ನಡೆದೊಡೆ
ಎಮ್ಮ+ರಮಣರು +ಸೈರಿಸದೆ+ ಸೀಳಿದರು +ದುರ್ಜನರ
ನಿಮ್ಮ +ನಾವ್+ಓಲೈಸಿ+ ಮರಳಿದು
ನಿಮ್ಮ +ಕೆಡಿಸುವರಲ್ಲ+ ದೂರ್ತರು
ತಮ್ಮ +ಕತದಲಿ +ತಾವೆ +ಕೆಟ್ಟರು +ನೀತಿ +ಬಾಹಿರರು

ಅಚ್ಚರಿ:
(೧) ನಿಮ್ಮ, ತಮ್ಮ, ಎಮ್ಮ – ಪ್ರಾಸ ಪದಗಳು
(೨) ತ, ಕ ಪದಗಳ ಜೋಡಣೆ – ತಮ್ಮ ಕತದಲಿ ತಾವೆ ಕೆಟ್ಟರು

ಪದ್ಯ ೪೧: ಭೀಮನು ದ್ರೌಪದಿಯನ್ನು ಏನು ಕೇಳಿದ?

ಸೈರಿಸರು ಬಾಣಸದ ಭವನದ
ನಾರಿಯರು ದುರ್ಜನರು ಖುಲ್ಲ ಕು
ಠಾರರಿವರರಮನೆಯ ನಾಯ್ಗಳು ನಾವು ದೇಶಿಗರು
ಭಾರವಿದು ಕೆಲರರಿಯದಂತಿರೆ
ನಾರಿ ನೀ ಹೇಳೆನುತ ದುಗುಡವಿ
ದಾರ ದೆಸೆಯಿಂದಾಯಿತೆನಲಿಂತೆಂದಳಿಂದುಮುಖಿ (ವಿರಾಟ ಪರ್ವ, ೩ ಸಂಧಿ, ೪೧ ಪದ್ಯ)

ತಾತ್ಪರ್ಯ:
ಭೀಮನು, ದ್ರೌಪದಿ ಅಡುಗೆ ಮೆನಯ್ ಚಾಕರಿಯಲ್ಲಿರುವ ಹೆಂಗಸರು ಬಹಳ ಕೀಳು ಮನಸ್ಸಿನವರು, ಇವರು ಅರಮನೆಯ ಸಾಕು ನಾಯಿಗಳು, ನಾವು ಪರದೇಶದವರು, ಅವರಿಗೆ ತಿಳಿದರೆ ಸಹಿಸುವುದು ಕಷ್ಟ, ಬೇಗ ಹೇಳು ನಿನಗೆ ಈ ದುಃಖವು ಯಾರಿಂದಾಯಿತು ಎಂದು ಕೇಳಲು, ದ್ರೌಪದಿ ಹೀಗೆ ನುಡಿದಳು.

ಅರ್ಥ:
ಸರಿಸು: ತಾಳ್ಮೆ, ಸಮಾಧಾನ; ಬಾಣಸ: ಅಡುಗೆ; ಭವನ: ಆಲಯ; ನಾರಿ: ಹೆಣ್ಣು; ದುರ್ಜನ: ಕೆಟ್ಟವರು; ಖುಲ್ಲ: ದುಷ್ಟ; ಕುಠಾರ: ಒರಟು ವ್ಯಕ್ತಿ, ಕ್ರೂರಿ; ಅರಮನೆ: ರಾಜರ ಭವನ; ನಾಯಿ: ಶ್ವಾನ; ದೇಶಿಗ: ಪರದೇಶ; ಭಾರ: ಹೊರೆ; ಕೆಲರು: ಕೆಲವರು; ಅರಿ: ತಿಳಿ; ನಾರಿ: ಹೆಣ್ಣು; ಹೇಳು: ತಿಳಿಸು; ದುಗುಡ: ದುಃಖ; ದೆಸೆ: ಕಾರಣ; ಇಂದುಮುಖಿ: ಚಂದ್ರನಂತ ಮುಖವುಳ್ಳವಳು;

ಪದವಿಂಗಡಣೆ:
ಸೈರಿಸರು +ಬಾಣಸದ +ಭವನದ
ನಾರಿಯರು +ದುರ್ಜನರು+ ಖುಲ್ಲ+ ಕು
ಠಾರರ್+ಇವರ್+ಅರಮನೆಯ +ನಾಯ್ಗಳು +ನಾವು +ದೇಶಿಗರು
ಭಾರವಿದು +ಕೆಲರ್+ಅರಿಯದಂತಿರೆ
ನಾರಿ +ನೀ +ಹೇಳೆನುತ+ ದುಗುಡವಿದ್
ಆರ+ ದೆಸೆಯಿಂದ್+ಆಯಿತ್+ಎನಲ್+ಇಂತೆಂದಳ್+ಇಂದುಮುಖಿ

ಅಚ್ಚರಿ:
(೧) ಅಡುಗೆ ಮನೆಯವರನ್ನು ಬಯ್ಯುವ ಪರಿ – ಬಾಣಸದ ಭವನದ ನಾರಿಯರು ದುರ್ಜನರು ಖುಲ್ಲ ಕು
ಠಾರರಿವರರಮನೆಯ ನಾಯ್ಗಳು

ಪದ್ಯ ೬೨: ಕುಂತಿ ಹೇಗೆ ಮರುಗಿದಳು?

ವನದೊಳತ್ಯಾಯಾಸ ನೀವೆಂ
ತನುಭವಿಸುವಿರಿ ಪಾಪಿ ದುರ್ಯೋ
ಧನನ ದುರ್ಜನ ಸಂಗ ನಿಮಗಿದು ಸಿಂಗಿಯಾದುದಲೆ
ವನಿತೆ ನಿಮ್ಮೊಡನೆಂತು ತೊಳಲುವ
ಳನವರತ ಗಿರಿ ಗುಹೆಯ ಘಟ್ಟವ
ನೆನುತ ನುಡಿದಳು ಕುಟಿಲ ಗರ್ಭದ ಗುಣದ ಬೆಳವಿಗೆಯ (ಸಭಾ ಪರ್ವ, ೧೭ ಸಂಧಿ, ೬೨ ಪದ್ಯ)

ತಾತ್ಪರ್ಯ:
ಕುಂತಿಯು ತನ್ನ ಮಕ್ಕಳ ಸ್ಥಿತಿಯನ್ನು ಕಂಡು, ಪಾಪಿಯಾದ ದುರ್ಯೋಧನನ ಸಂಗವು ನಿಮಗೆ ವಿಷಪ್ರಾಯವಾಯಿತು, ನನುಗುನ್ನಿಯಂತೆ ಮೈಯುರಿಗೆ ಕಾರಣವಯಿತು. ನೀವು ಕಾಡಿನಲಿ ಹೆಚ್ಚಿನ ಆಯಾಸವನ್ನು ಹೇಗೆ ಅನುಭವಿಸುವಿರಿ? ದ್ರೌಪದಿಯು ಗುಡ್ಡ, ಗುಹೆ, ಘಟ್ಟಗಳಲ್ಲಿ ನಿಮ್ಮೊಡನೆ ಯಾವಾಗಲೂ ಹೇಗೆ ಅಲೆದಾಡುವಳು? ದುರ್ಜನರ ಕಪಟ ನಡತೆ, ಸಂಗದೋಷವು ನಿಮ್ಮ ಈ ಕಷ್ಟಕ್ಕೆ ಕಾರಣವಾಯಿತಲಾ ಎಂದು ಮರುಗಿದಳು.

ಅರ್ಥ:
ವನ: ಕಾಡು; ಅತಿ: ಬಹಳ; ಆಯಾಸ: ಬಳಲಿಕೆ, ಶ್ರಮ; ಅನುಭವಿಸು: ಕಷ್ಟಪಡು; ಪಾಪಿ: ದುಷ್ಟ; ದುರ್ಜನ: ಕೆಟ್ಟ ಜನ; ಸಂಗ: ಜೊತೆ; ಸಿಂಗಿ: ಒಂದು ಬಗೆಯ ಘೋರ ವಿಷ; ವನಿತೆ: ಹೆಣ್ಣು; ತೊಳಲು: ಬವಣೆ, ಸಂಕಟ; ಅನವರತ: ಯಾವಾಗಲು; ಗಿರಿ: ಬೆಟ್ಟ; ಗುಹೆ: ಗವಿ; ಘಟ್ಟ: ಬೆಟ್ಟಗಳ ಸಾಲು, ಪರ್ವತ ಪಂಕ್ತಿ; ನುಡಿ: ಮಾತಾಡು; ಕುಟಿಲ: ಮೋಸ; ಗರ್ಭ: ಬಸಿರು, ಕೂಸು; ಗುಣ: ನಡತೆ; ಬೆಳವಿಗೆ: ವೃದ್ಧಿ, ಬೆಳೆಯುವಿಕೆ;

ಪದವಿಂಗಡಣೆ:
ವನದೊಳ್+ಅತಿ+ಆಯಾಸ +ನೀವೆಂತ್
ಅನುಭವಿಸುವಿರಿ+ ಪಾಪಿ+ ದುರ್ಯೋ
ಧನನ +ದುರ್ಜನ +ಸಂಗ +ನಿಮಗಿದು+ ಸಿಂಗಿಯಾದುದಲೆ
ವನಿತೆ+ ನಿಮ್ಮೊಡನೆಂತು +ತೊಳಲುವಳ್
ಅನವರತ +ಗಿರಿ +ಗುಹೆಯ +ಘಟ್ಟವನ್
ಎನುತ +ನುಡಿದಳು+ ಕುಟಿಲ+ ಗರ್ಭದ +ಗುಣದ +ಬೆಳವಿಗೆಯ

ಅಚ್ಚರಿ:
(೧) ದುರ್ಯೋಧನನನ್ನು ಬಯ್ಯುವ ಪರಿ – ಪಾಪಿ ದುರ್ಯೋಧನನ ದುರ್ಜನ ಸಂಗ ನಿಮಗಿದು ಸಿಂಗಿಯಾದುದಲೆ; ಕುಟಿಲ ಗರ್ಭದ ಗುಣದ ಬೆಳವಿಗೆಯ

ಪದ್ಯ ೫೨: ದುರ್ಯೋಧನನು ಪಣಕ್ಕೆ ಏನನ್ನು ಇಟ್ಟನು?

ಕನಕಮಯ ರಥವೆರಡು ಸಾವಿರ
ಮೊನೆಗೆ ಹೂಡಿದವೆಂಟು ಸಾವಿರ
ವಿನುತ ವಾಜಿಗಳೊಡ್ಡವೆಂದನು ಧರ್ಮನಂದನನು
ಜನಪತಿಗೆ ತಾನೈಸಲೇ ಹಾ
ಯ್ಕೆನುತ ಸಾರಿಯ ಕೆದರಿದನು ದು
ರ್ಜನರಿಗೊಲಿದುದು ದೈವಗತಿ ಬೊಬ್ಬಿರಿದನಾ ಶಕುನಿ (ಸಭಾ ಪರ್ವ, ೧೪ ಸಂಧಿ, ೫೨ ಪದ್ಯ)

ತಾತ್ಪರ್ಯ:
ಬಂಗಾರದಿಂದ ಮಾಡಿದ ಎರಡು ಸಾವಿರ ರಥಗಳು, ಅವಕ್ಕೆ ಕಟ್ಟಿದ ಎಂಟು ಸಾವಿರ ಕುದುರೆಗಳು ನನ್ನ ಪಣ ಎಂದು ಧರ್ಮನಂದನನು ಒಡ್ಡಿದನು. ಇದೆಲ್ಲಾ ಕೌರವರಾಯನಿಗೆ ತಾನೆ ಎಂದು ಹೇಳುತ್ತಾ ಶಕುನಿಯು ಕಾಯಿಗಳನ್ನು ನಡೆಸಿದನು. ದೈವವು ದುಷ್ಟರಿಗೊಲಿಯಿತು ಎಂದು ಶಕುನಿಯು ಬೊಬ್ಬಿರಿದನು.

ಅರ್ಥ:
ಕನಕ: ಚಿನ್ನ, ಬಂಗಾರ; ರಥ: ಬಂಡಿ; ಸಾವಿರ: ಸಹಸ್ರ; ಮೊನೆ: ತುದಿ, ಕೊನೆ; ಹೂಡಿದ: ಜೋಡಿಸಿದ; ವಿನುತ: ಹೊಗಳಲ್ಪಟ್ಟ, ಸ್ತುತಿಗೊಂಡ; ವಾಜಿ: ಕುದುರೆ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ನಂದನ: ಮಗ; ಜನಪ: ರಾಜ; ಐಸಲೇ: ಅಲ್ಲವೇ; ಹಾಯ್ಕು: ಹಾಕು, ಹೊರಬೀಳು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಕೆದರು: ಹರಡು; ದುರ್ಜನ: ದುಷ್ಟ; ಒಲಿ: ಬಯಸು, ಅಪೇಕ್ಷಿಸು; ದೈವ: ಭಗವಂತ; ಗತಿ: ಅವಸ್ಥೆ, ದಿಕ್ಕು; ಬೊಬ್ಬಿರಿ: ಕೂಗು;

ಪದವಿಂಗಡಣೆ:
ಕನಕಮಯ +ರಥವ್+ಎರಡು +ಸಾವಿರ
ಮೊನೆಗೆ +ಹೂಡಿದವ್+ಎಂಟು +ಸಾವಿರ
ವಿನುತ+ ವಾಜಿಗಳ್+ಒಡ್ಡವ್+ಎಂದನು +ಧರ್ಮನಂದನನು
ಜನಪತಿಗೆ +ತಾನ್+ಐಸಲೇ +ಹಾ
ಯ್ಕೆನುತ +ಸಾರಿಯ +ಕೆದರಿದನು+ ದು
ರ್ಜನರಿಗ್+ಒಲಿದುದು +ದೈವಗತಿ +ಬೊಬ್ಬಿರಿದನಾ +ಶಕುನಿ

ಅಚ್ಚರಿ:
(೧) ಸಾವಿರ – ೧, ೨ ಸಾಲಿನ ಕೊನೆ ಪದ

ಪದ್ಯ ೩೬: ದುರ್ಯೋಧನನು ಯುಧಿಷ್ಠಿರನ ಮಾತಿಗೆ ಹೇಗೆ ಉತ್ತರಿಸಿದನು?

ನೀವು ಸಹೃದಯರಿಂದು ದುರ್ಜನ
ರಾವು ನೀವುನಿರಾಗಿಗಳು ರಾ
ಗಾವಲಂಬರು ನಾವಲೇ ನೀವರಿಯಿರೇ ನಿಜವ
ನೀವು ನಾವೆಂಬೀ ಪೃಥಗ್ಭಾ
ವಾವಲಂಬನವೇಕೆ ನಿಮ್ಮಲಿ
ನಾವು ನಮ್ಮಲಿ ನೀವೆಯೆಂದನು ನಗುತ ಕುರುರಾಯ (ಸಭಾ ಪರ್ವ, ೧೪ ಸಂಧಿ, ೩೬ ಪದ್ಯ)

ತಾತ್ಪರ್ಯ:
ದುರ್ಯೋಧನನು ಯುಧಿಷ್ಠಿರನ ಮಾತನ್ನು ಕೇಳಿ ನಗುತ್ತಾ, ನೀವು ಸಹೃದಯರು, ನಾವು ದುರ್ಜನರು, ನೀವು ರಾಗರಹಿತರು, ನಾವು ಆಸೆಯುಳ್ಳವರು, ನಿಮಗೆ ನಿಜವು ತಿಳಿದಿದೆ ನಾವು ನೀವು ಎಂಬ ಬೇರೆ ಬೇರೆ ಭಾವವೇಕೆ? ನಮ್ಮಲ್ಲಿ ನೀವು ನಿಮ್ಮಲ್ಲಿ ನಾವು ಎಂದು ದುರ್ಯೋಧನನು ಹೇಳಿದನು.

ಅರ್ಥ:
ಸಹೃದಯ: ಅಂತಃಕರುಣೆ, ಒಳ್ಳೆಯ ವ್ಯಕ್ತಿ; ದುರ್ಜನ: ಕೆಟ್ಟ ವ್ಯಕ್ತಿ; ನಿರಾಗಿ: ಆಸೆಯಿಲ್ಲದವ; ರಾಗ: ಆಸೆವುಳ್ಳವ; ಅರಿ: ತಿಳಿ; ನಿಜ: ದಿಟ; ಪೃಥಗ್ಭಾವಾವಲಂಬನ: ಬೇರೆ ಬೇರೆ ಎಂಬ ಅಭಿಪ್ರಾಯ ಹೊಂದಿರುವುದು; ಅವಲಂಬನ: ಆಸರೆ; ನಗು: ಸಂತಸ;

ಪದವಿಂಗಡಣೆ:
ನೀವು +ಸಹೃದಯರ್+ಇಂದು +ದುರ್ಜನರ್
ಆವು+ ನೀವು+ನಿರಾಗಿಗಳು +ರಾ
ಗಾವಲಂಬರು+ ನಾವಲೇ +ನೀವರಿಯಿರೇ +ನಿಜವ
ನೀವು +ನಾವೆಂಬ್+ಈ+ ಪೃಥಗ್ಭಾ
ವಾವಲಂಬನವೇಕೆ+ ನಿಮ್ಮಲಿ
ನಾವು+ ನಮ್ಮಲಿ +ನೀವೆ+ಎಂದನು +ನಗುತ +ಕುರುರಾಯ

ಅಚ್ಚರಿ:
(೧) ನ ಕಾರದ ಪದಗಳ ಸಾಲು – ನಾವಲೇ ನೀವರಿಯಿರೇ ನಿಜವ ನೀವು ನಾವೆಂಬೀ; ನಿಮ್ಮಲಿ
ನಾವು ನಮ್ಮಲಿ ನೀವೆಯೆಂದನು ನಗುತ

ಪದ್ಯ ೪೧: ಭೂಮಿಯಲ್ಲೇ ನರಕದ ಕಲ್ಪನೆ ಯಾವಾಗವಾಗುತ್ತದೆ?

ಪಾತಕನು ಪತಿತನು ಕೃತಘ್ನನು
ಘಾತುಕನು ದುರ್ಮತಿ ದುರಾತ್ಮನು
ಭೀತಕನು ದೂಷಕನು ದುರ್ಜನನ ಪ್ರಯೋಜಕನು
ನೀತಿಹೀನನು ಜಾತಿಧರ್ಮಸ
ಮೇತ ದೈವದ್ರೋಹಿಯೆನಲದು
ಭೂತಳದೊಳೇ ನರಕ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೪೧ ಪದ್ಯ)

ತಾತ್ಪರ್ಯ:
ನರಕದ ಪರಿಕಲ್ಪನೆಯನ್ನು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು. ಯಾರು ಭೂಮಿಯಲ್ಲಿ ನಿಂದಿಸುತ್ತಾ, ಇವನು ಪಾಪಿ, ಈತ ನೀಚ, ತನ್ನ ಕರ್ಮಗಳಿಂದ ಕೆಳಗೆಬಿದ್ದವ, ಈತ ತನಗೆ ಮಾಡಿದ ಉಪಕಾರವನ್ನು ಮರೆತವ, ಈತನು ಪರರನ್ನು ಮರ್ದಿಸುವವನು, ದುರ್ಬುದ್ಧಿಯುಳ್ಳವ, ಈತ ಕೆಟ್ಟ ಮನಸ್ಸುಳ್ಳವನು, ದುರಾತ್ಮ, ಈತ ಭೀತಿಯನ್ನು ಹುಟ್ಟಿಸುವವನು, ನಿಂದಕ, ದುಷ್ಟ, ಅಪ್ರಯೋಜಕ, ನೀತಿಗೆಟ್ಟವನು, ಜಾತಿ, ಧರ್ಮ ದೈವಗಳಿಗೆ ದ್ರೋಹ ಬಗೆಯುವವನು ಎಂದು ಜನರು ಯಾರನ್ನಾದರೂ ನಿಂದಿಸಿದರೆ ಅದು ಭೂಮಿಯಲ್ಲಿ ನರಕವನ್ನು ಸೃಷ್ಟಿಸಿದಂತೆ ಎಂದು ಮುನಿಗಳು ಉಪದೇಶಿಸಿದರು.

ಅರ್ಥ:
ಪಾತಕ: ಪಾಪಿ, ದೋಷ; ಪತಿತ:ನೀಚ, ದುಷ್ಟ; ಕೃತಘ್ನ:ಉಪಕಾರವನ್ನು ಮರೆಯುವವನು; ಘಾತುಕ: ನೀಚ, ಕೊಲೆಗೆಡುಕ; ದುರ್ಮತಿ: ಕೆಟ್ಟಬುದ್ಧಿಯುಳ್ಳವ; ದುರಾತ್ಮ: ಕೆಟ್ಟ ಮನಸ್ಸುಳ್ಳವನು, ದುಷ್ಟ; ಭೀತಕ: ಭಯ, ಹೆದರಿಕೆಯನ್ನು ಮೂಡಿಸುವವ; ದೂಷಕ: ನಿಂದಕ; ದುರ್ಜನ: ಕೆಟ್ಟ ಜನ, ದುಷ್ಟ; ಪ್ರಯೋಜಕ: ಉಪಯೋಗ; ನೀತಿ: ಒಳ್ಳೆಯ ನಡತೆ; ನೀತಿಹೀನನು: ಕೆಟ್ಟನಡತೆಯುಳ್ಳವನು; ಜಾತಿ: ಕುಲ; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಸಮೇತ: ಜೊತೆ; ದೈವ: ದೇವರು; ದ್ರೋಹಿ:ಕೇಡನ್ನು ಬಗೆಯುವವನು, ವಂಚಕ; ಭೂತಳ: ಭೂಮಿ; ನರಕ: ಅಧೋಲೋಕ; ಚಿತ್ತೈಸು: ಗಮನವಿಟ್ಟು ಕೇಳು; ಮುನಿ: ಋಷಿ;

ಪದವಿಂಗಡಣೆ:
ಪಾತಕನು +ಪತಿತನು +ಕೃತಘ್ನನು
ಘಾತುಕನು +ದುರ್ಮತಿ +ದುರಾತ್ಮನು
ಭೀತಕನು +ದೂಷಕನು +ದುರ್ಜನನ್+ಅಪ್ರಯೋಜಕನು
ನೀತಿಹೀನನು +ಜಾತಿ+ಧರ್ಮ+ಸ
ಮೇತ +ದೈವ+ದ್ರೋಹಿಯೆನಲ್+ಅದು
ಭೂತಳದೊಳೇ +ನರಕ+ ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಪಾತಕ, ಪತಿತ – ‘ಪ’ಕಾರದ ಜೋಡಿ ಪದಗಳು
(೨) ‘ದು’ಕಾರದ ಪದಗಳ ಬಳಕೆ – ದುರ್ಮತಿ, ದುರಾತ್ಮ, ದೂಷಕ, ದುರ್ಜನ, ದ್ರೋಹಿ

ಪದ್ಯ ೨೦: ಮೂಢರು ಲೋಕಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ ಯಾವುದು?

ದುರ್ಜನರಿಗಂಜುವುದು ಲೋಕವು
ಸಜ್ಜನರ ಲೆಕ್ಕಿಸದು ತಾರ್ಕ್ಷ್ಯನ
ಹೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲಿದು
ಉಜ್ವಲಿತ ಭಕ್ತಿಯೊಳು ಬಹಳ ವಿ
ತರ್ಜೆಯೊಳು ಮೂಢಾತ್ಮರಿಕ್ಕಿದ
ಹೆಜ್ಜೆಯಿದು ಲೋಕಕ್ಕೆ ಚಿತ್ತೈಸೆಂದನಾ ಮುನಿಪ (ಉದ್ಯೋಗ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಜಗತ್ತು ದುರ್ಜನರಿಗೆ ಅಂಜುತ್ತದೆ, ಆದರೆ ಸಜ್ಜನರನ್ನು ಲೆಕ್ಕಿಸುವುದಿಲ್ಲ. ಗರುಡನ ಹೆಜ್ಜೆಯಲ್ಲಿರುವ ಹಾವನ್ನು ವಿತರಣೆಯಿಂದ ಅಪಾರ ಭಕ್ತಿಯಿಂದ ಪೂಜಿಸುತ್ತಾರೆ. ಇದು ಮೂಢರು ಲೋಕಕ್ಕೆ ಹಾಕಿಕೊಟ್ಟ ಮೇಲ್ಪಂಕ್ತಿ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ಹೇಳಿದರು.

ಅರ್ಥ:
ದುರ್ಜನ: ಕೆಟ್ಟ ಜನ;ಅಂಜು: ಹೆದರು; ಲೋಕ: ಜಗ; ಸಜ್ಜನ: ಒಳ್ಳೆಯ ಜನ; ಲೆಕ್ಕಿಸು: ಎಣಿಸು; ತಾರ್ಕ್ಷ್ಯ: ಗರುಡ; ಹೆಜ್ಜೆ: ಪಾದ; ಒಳಗೆ: ಆಂತರ್ಯ; ದಂದಶೂಕ: ಸರ್ಪ, ಹಾವು; ಅರ್ಚಿಸು: ಪೂಜಿಸು; ಉಜ್ವಲ: ಪ್ರಕಾಶಮಾನ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಬಹಳ: ತುಂಬಾ; ವಿತರ್ಜೆ: ಹೆದರಿಕೆ; ಮೂಢ: ಮೂರ್ಖ; ಲೋಕ: ಜಗತ್ತು; ಚಿತ್ತೈಸು: ಗಮನವಿಟ್ಟು ಕೇಳು; ಮುನಿ: ಋಷಿ;

ಪದವಿಂಗಡಣೆ:
ದುರ್ಜನರಿಗ್+ಅಂಜುವುದು +ಲೋಕವು
ಸಜ್ಜನರ +ಲೆಕ್ಕಿಸದು +ತಾರ್ಕ್ಷ್ಯನ
ಹೆಜ್ಜೆಯೊಳಗಿಹ+ ದಂದಶೂಕನನ್+ಅರ್ಚಿಸುವರೊಲ್+ಇದು
ಉಜ್ವಲಿತ +ಭಕ್ತಿಯೊಳು +ಬಹಳ +ವಿ
ತರ್ಜೆಯೊಳು +ಮೂಢಾತ್ಮರ್+ಇಕ್ಕಿದ
ಹೆಜ್ಜೆಯಿದು +ಲೋಕಕ್ಕೆ +ಚಿತ್ತೈಸೆಂದನಾ +ಮುನಿಪ

ಅಚ್ಚರಿ:
(೧) ಸಜ್ಜನ ದುರ್ಜನ – ವಿರುದ್ಧ ಪದಗಳು
(೨) ಹೆಜ್ಜೆ – ೩, ೬ ಸಾಲಿನ ಮೊದಲ ಪದ
(೩) ಉಪಮಾನದ ಪ್ರಯೋಗ – ತಾರ್ಕ್ಷ್ಯನ ಹೆಜ್ಜೆಯೊಳಗಿಹ ದಂದಶೂಕನನರ್ಚಿಸುವರೊಲ್