ಪದ್ಯ ೧೫: ನಾರಾಯಣಾಸ್ತ್ರದ ಪ್ರಕಾಶವು ಹೇಗಿತ್ತು?

ಪ್ರಳಯ ಮೇಘವನೊಡೆವ ರವಿಮಂ
ಡಲ ಸಹಸ್ರದ ರಶ್ಮಿಯೋ ಜಗ
ದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ
ಮುಳಿದ ನರಕೇಸರಿಯ ದಾಡೆಯ
ಥಳಥಲತ್ಕಾರವೊ ಮಹಾಸ್ತ್ರದ
ಬೆಳಗೊ ಹೆಸರಿಡಲಾರು ಬಲ್ಲರು ಭೂಪ ಕೇಳೆಂದ (ದ್ರೋಣ ಪರ್ವ, ೧೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪ್ರಳಯ ಮೇಘವನ್ನು ಭೇದಿಸಬಲ್ಲ ಸಹಸ್ರ ಸೂರ್ಯರ ಕಿರಣಗಳೋ, ಪ್ರಳಯಕಾಲದಲ್ಲಿ ಶಿವನು ತೆಗೆಯುವ ಉರಿಗಣ್ಣಿನ ಪ್ರಕಾಶವೋ, ಕೋಪಗೊಂಡ ನರಸಿಂಹನ ಹಲ್ಲುಗಳ ಹೊಳಪೋ ಎಂಬಂತೆ ನಾರಾಯಣಾಸ್ತ್ರದ ಪ್ರಕಾಶ ಹಬ್ಬುತ್ತಿತ್ತು, ಅದನ್ನು ಹೇಗೆಂದು ಹೇಳೋಣ ಎಂದು ಸಂಜಯನು ವಿವರಿಸಿದನು.

ಅರ್ಥ:
ಪ್ರಳಯ: ಕಲ್ಪದ ಕೊನೆಯಲ್ಲಿ ಉಂಟಾಗುವ ಪ್ರಪಂಚದ ನಾಶ, ಅಳಿವು; ಮೇಘ: ಮೋಡ; ಒಡೆವ: ಸೀಳು; ರವಿ: ಸೂರ್ಯ; ಮಂಡಲ: ನಾಡಿನ ಒಂದು ಭಾಗ, ವರ್ತುಲಾಕಾರ; ಸಹಸ್ರ: ಸಾವಿರ; ರಶ್ಮಿ: ಕಾಂತಿ, ಪ್ರಕಾಶ; ಜಗ: ಪ್ರಪಂಚ; ಅಳಿವು: ನಾಶ; ಝೊಂಪಿಸು: ಬೆಚ್ಚಿಬೀಳು; ಹರ: ಶಂಕರ; ಉರಿಗಣ್ಣು: ಬೆಂಕಿಯ ಕಣ್ಣು; ದೀಧಿತಿ: ಹೊಳಪು; ಮುಳಿ: ಸಿಟ್ಟು, ಕೋಪ; ನರಕೇಸರಿ: ನರಸಿಂಹ; ದಾಡೆ: ದವಡೆ, ಒಸಡು; ಥಳ: ಪ್ರಕಾಶ, ಹೊಳಪು; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಬೆಳಗು: ಕಾಂತಿ, ಪ್ರಕಾಶ; ಹೆಸರು: ನಾಮ; ಬಲ್ಲರು: ತಿಳಿದವರು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪ್ರಳಯ +ಮೇಘವನ್+ಒಡೆವ +ರವಿ+ಮಂ
ಡಲ +ಸಹಸ್ರದ +ರಶ್ಮಿಯೋ +ಜಗದ್
ಅಳಿವಿನಲಿ +ಝೊಂಪಿಸುವ +ಹರನ್+ಉರಿಗಣ್ಣ+ ದೀಧಿತಿಯೊ
ಮುಳಿದ +ನರಕೇಸರಿಯ +ದಾಡೆಯ
ಥಳಥಳತ್ಕಾರವೊ+ ಮಹಾಸ್ತ್ರದ
ಬೆಳಗೊ +ಹೆಸರಿಡಲಾರು+ ಬಲ್ಲರು +ಭೂಪ +ಕೇಳೆಂದ

ಅಚ್ಚರಿ:
(೧) ರೂಪಕದ ಪ್ರಯೋಗ – ಪ್ರಳಯ ಮೇಘವನೊಡೆವ ರವಿಮಂಡಲ ಸಹಸ್ರದ ರಶ್ಮಿಯೋ ಜಗದಳಿವಿನಲಿ ಝೊಂಪಿಸುವ ಹರನುರಿಗಣ್ಣ ದೀಧಿತಿಯೊ

ಪದ್ಯ ೬೧: ದ್ರೋಣನ ಮನಸ್ಸು ಎತ್ತಕಡೆ ತಿರುಗಿತು?

ತಿರುಗಿದುದು ಮುನಿನಿಕರವತ್ತಲು
ಮರಳಿತೀತನ ಬುದ್ಧಿಯಿತ್ತಲು
ತೆರೆಯ ಹಿಡಿದುದು ಮರವೆ ಸಮ್ಯಜ್ಞಾನದೀಧಿತಿಗೆ
ಅರಸನನು ಬೆಸಗೊಂಬ ತನುಜನ
ಮರಣ ಹುಸಿಯೋ ದಿಟವೊ ಭೀಮನ
ಸೊರಹ ನಂಬೆನೆನುತ್ತ ರಾಯನನರಸುತೈತಂದ (ದ್ರೋಣ ಪರ್ವ, ೧೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಮುನಿಗಳು ಹೊರಟು ಹೋದರು. ದ್ರೋಣನ ಬುದ್ಧಿ ಆತ್ಮಜ್ಞಾನದ ಕಡೆಗೆ ತಿರುಗಿತು. ನಿಜವಾದ ಅರಿವಿನ ಬೆಳಕಿಗೆ ಮರವೆಯು ತೆರೆಯನ್ನು ಹಾಕಿತು. ಭೀಮನ ಮಾತು ನಿಜವೋ ಸುಳ್ಳೋ ತಿಳಿಯದು. ಅವನ ಮಾತನ್ನು ನಾನು ನಂಬುವುದಿಲ್ಲ, ಅಶ್ವತ್ಥಾಮನ ಮರಣ ದಿಟವೋ ಸುಳ್ಳೋ ಎಂದು ಧರ್ಮರಾಯನನ್ನು ಕೇಳುತ್ತೇನೆ ಎಂದುಕೊಂಡು ಅವನನ್ನು ಹುಡುಕುತ್ತಾ ಹೊರಟನು.

ಅರ್ಥ:
ತಿರುಗು: ಸಂಚರಿಸು; ಮುನಿ: ಋಷಿ; ನಿಕರ: ಗುಂಫು; ಮರಳು: ಹಿಂದಿರುಗು; ಬುದ್ಧಿ: ಜ್ಞಾನ; ತೆರೆ: ಬಿಚ್ಚುವಿಕೆ; ಹಿಡಿ: ಗ್ರಹಿಸು; ಮರವು: ಜ್ಞಾಪಕವಿಲ್ಲದ ಸ್ಥಿತಿ; ದೀಧಿತಿ: ಹೊಳಪು; ಅರಸ: ರಾಜ; ಬೆಸ: ಕೆಲಸ, ಕಾರ್ಯ; ತನುಜ: ಮಗ; ಮರಣ: ಸಾವು; ಹುಸಿ: ಸುಳ್ಳು; ದಿಟ: ನಿಜ; ಸೊರಹು: ಅತಿಯಾಗಿ ಮಾತನಾಡುವಿಕೆ, ಗಳಹುವಿಕೆ; ನಂಬು: ವಿಶ್ವಾಸ; ರಾಯ: ರಾಜ; ಅರಸು: ಹುಡುಕು; ಐತಂದು: ಬಂದು ಸೇರು;

ಪದವಿಂಗಡಣೆ:
ತಿರುಗಿದುದು +ಮುನಿ+ನಿಕರವ್+ಅತ್ತಲು
ಮರಳಿತ್+ಈತನ +ಬುದ್ಧಿ+ಇತ್ತಲು
ತೆರೆಯ +ಹಿಡಿದುದು +ಮರವೆ +ಸಮ್ಯಜ್ಞಾನ+ದೀಧಿತಿಗೆ
ಅರಸನನು +ಬೆಸಗೊಂಬ +ತನುಜನ
ಮರಣ +ಹುಸಿಯೋ +ದಿಟವೊ+ ಭೀಮನ
ಸೊರಹ+ ನಂಬೆನ್+ಎನುತ್ತ +ರಾಯನನ್+ಅರಸುತ್+ಐತಂದ

ಅಚ್ಚರಿ:
(೧) ರಾಯ, ಅರಸು – ಪದಗಳ ಬಳಕೆ
(೨) ಅತ್ತಲು, ಇತ್ತಲು – ಪ್ರಾಸ ಪದಗಳು

ಪದ್ಯ ೪೮: ಘಟೋತ್ಕಚನು ಯುದ್ಧಕ್ಕೆ ಹೇಗೆ ಸಿದ್ಧನಾದನು?

ಸಾಲು ಮಿಗೆ ಮೋಹರದೊಳಗೆ ಬೊಂ
ಬಾಳ ದೀವಿಗೆ ಬೆಳಗಿದವು ಶರ
ಜಾಳ ದೀಧಿತಿ ತೊಳಗಿದವು ರಕ್ಕಸರ ಕೈಗಳಲಿ
ಬಾಲ ಹೊಳಹನು ಜರೆದು ದಾಡೆಯ
ಢಾಳ ಮಿಗೆ ಗಜಗಲಿಸಿ ದಾನವ
ಕಾಳೆಗಕ್ಕನುವಾಗಿ ನಿಂದನು ಬಿಗಿದ ಬಿಲುದೆಗೆದು (ದ್ರೋಣ ಪರ್ವ, ೧೫ ಸಂಧಿ, ೪೮ ಪದ್ಯ)

ತಾತ್ಪರ್ಯ:
ದೈತ್ಯ ಯೋಧರ ಸಾಲುಗಳಲ್ಲಿ ಪ್ರಖರವಾದ ದೀಪಗಳು ಉರಿಯುತ್ತಿದ್ದವು. ದೈತ್ಯರ ಕೈಗಲ ಆಯುಧಗಳು ಹೊಳೆಯುತ್ತಿದ್ದವು. ಕತ್ತಿಗಳ ಬೆಳಕನ್ನು ಮೀರಿಸಿ ಅವರ ದಾಡೆಗಳು ಹೊಳೆದವು. ಘಟೋತ್ಕಚನು ಕಾಳಗಕ್ಕೆ ಸಿದ್ಧನಾಗಿ ಹೆದೆಯೇರಿದ ಬಿಲ್ಲನ್ನು ತೆಗೆದು ನಿಂತನು.

ಅರ್ಥ:
ಸಾಲು: ಆವಳಿ; ಮಿಗೆ: ಮತ್ತು, ಅಧಿಕವಾಗಿ; ಮೋಹರ: ಯುದ್ಧ; ಬೊಂಬಾಳ: ಕಣ್ಣು ಕೋರೈಸುವ ಪ್ರಭೆಯುಳ್ಳ ದೀಪ; ದೀವಿಗೆ: ದೀಪ; ಬೆಳಗು: ಪ್ರಕಾಶ; ಶರಜಾಳ: ಬಾಣಗಳ ಗುಂಪು; ದೀಧಿತಿ: ಹೊಳಪು, ಕಾಂತಿ; ತೊಳಗು: ಕಾಂತಿ, ಪ್ರಕಾಶ; ರಕ್ಕಸ: ರಾಕ್ಷಸ; ಕೈ: ಹಸ್ತ; ಬಾಳ: ಹಣೆ, ನೊಸಲು; ಹೊಳಹು: ಪ್ರಕಾಶ; ಜರುಹು: ಜರುಗಿಸು; ದಾಡೆ: ದವಡೆ; ಢಾಳ: ಕಾಂತಿ, ಪ್ರಕಾಶ; ಗಜಗಲಿಸು: ಹೊಳೆ, ಪ್ರಕಾಶಿಸು; ದಾನವ: ರಾಕ್ಷಸ; ಕಾಳೆಗ: ಯುದ್ಧ; ಅನುವು: ಅನುಕೂಲ; ನಿಂದು: ನಿಲ್ಲು; ಬಿಗಿ: ಬಂಧಿಸು; ಬಿಲು: ಬಿಲ್ಲು, ಚಾಪ; ತೆಗೆ: ಹೊರತರು;

ಪದವಿಂಗಡಣೆ:
ಸಾಲು+ ಮಿಗೆ +ಮೋಹರದೊಳಗೆ +ಬೊಂ
ಬಾಳ +ದೀವಿಗೆ +ಬೆಳಗಿದವು +ಶರ
ಜಾಳ +ದೀಧಿತಿ +ತೊಳಗಿದವು +ರಕ್ಕಸರ +ಕೈಗಳಲಿ
ಬಾಳ +ಹೊಳಹನು +ಜರೆದು +ದಾಡೆಯ
ಢಾಳ +ಮಿಗೆ +ಗಜಗಲಿಸಿ +ದಾನವ
ಕಾಳೆಗಕ್+ಅನುವಾಗಿ+ ನಿಂದನು +ಬಿಗಿದ +ಬಿಲು+ತೆಗೆದು

ಅಚ್ಚರಿ:
(೧) ಬಾಳ, ಜಾಳ, ಢಾಳ – ಪ್ರಾಸ ಪದಗಳು
(೨) ಬೊಂಬಾಳ, ದೀವಿಗೆ, ಹೊಳಹು, ಢಾಳ, ಬೆಳಗು, ದೀಧಿತಿ – ಸಾಮ್ಯಾರ್ಥ ಪದಗಳು

ಪದ್ಯ ೯: ತಾವರೆಗಳೇಕೆ ಆಗಸದಲ್ಲಿ ಹೊಳೆದವು?

ಮುಸುಕಿದನು ರವಿ ಧೂಳಿಯಲಿ ಹೊಳೆ
ವಸಿ ಮುಸುಂಡಿ ತ್ರಿಶೂಲ ಕೊಂತ
ಪ್ರಸರ ಕಾಂತಿಗಳಿಳುಹಿದವು ಖದ್ಯೋತದೀಧಿತಿಯ
ಬಿಸಜಸಖನಡಗಿದರೆ ನಭದಲಿ
ಮಸಗಿದವು ತಾರೆಗಳೆನಲು ಶೋ
ಭಿಸಿದವವನೀಪಾಲಮೌಳಿಸುರತ್ನ ರಾಜಿಗಳು (ದ್ರೋಣ ಪರ್ವ, ೧೨ ಸಂಧಿ, ೯ ಪದ್ಯ)

ತಾತ್ಪರ್ಯ:
ಸೂರ್ಯನು ಧೂಳಿನಿಂದ ಮುಚ್ಚಿದನು. ಕತ್ತಿ, ಮುಸುಂಡಿ, ತ್ರಿಶೂಲ, ಕುಂತಗಳ ಕಾಂತಿ ಬಿಸಿಲಿನ ಕಾಂತಿಯನ್ನು ಮೀರಿಸಿತು. ಸೂರ್ಯನು ಮುಳುಗಿದಂತಾದುದರಿಂದ ತಾವರೆಗಳು ಆಕಾಶದಲ್ಲೇ ಅರಳಿದವೆಂಬಂತೆ, ರಾಜರ ಕಿರೀಟಗಳ ಉತ್ತಮ ರತ್ನಗಳು ಹೊಳೆದವು.

ಅರ್ಥ:
ಮುಸುಕು: ಹೊದಿಕೆ; ರವಿ: ಸೂರ್ಯ; ಧೂಳು: ಮಣ್ಣಿನ ಪುಡಿ; ಹೊಳೆ: ಪ್ರಕಾಶ; ಅಸಿ: ಕತ್ತಿ; ಮುಸುಂಡಿ: ಅಂಜುಬುರುಕ; ತ್ರಿಶೂಲ: ಮೂರುಮೊನೆಯ ಆಯುಧ; ಕೊಂತ: ದಿಂಡು; ಕುಂತ: ಈಟಿ, ಭರ್ಜಿ; ಪ್ರಸರ: ಗುಂಪು, ಸಮೂಹ, ವಿಸ್ತಾರ; ಕಾಂತಿ: ಪ್ರಕಾಶ; ಇಳುಹು: ಇಳಿಸು; ಖದ್ಯೋತ: ಸೂರ್ಯ; ದೀಧಿತಿ: ಹೊಳಪು, ಕಾಂತಿ; ಬಿಸಜ: ಕಮಲ; ಸಖ: ಸ್ನೇಹಿತ; ಬಿಸಜಸಖ: ಸೂರ್ಯ; ಅಡಗು: ಮರೆಯಾಗು; ನಭ: ಆಗಸ; ಮಸಗು: ಹರಡು; ತಾರೆ: ನಕ್ಷತ್ರ; ಶೋಭಿಸು: ಪ್ರಕಾಶ; ಅವನೀಪಾಲ: ರಾಜ; ಮೌಳಿ: ಶಿರ; ರತ್ನ: ಬೆಲೆಬಾಳುವ ಮಣಿ; ರಾಜಿ: ಗುಂಪು, ಸಮೂಹ;

ಪದವಿಂಗಡಣೆ:
ಮುಸುಕಿದನು+ ರವಿ +ಧೂಳಿಯಲಿ +ಹೊಳೆವ್
ಅಸಿ +ಮುಸುಂಡಿ +ತ್ರಿಶೂಲ +ಕೊಂತ
ಪ್ರಸರ +ಕಾಂತಿಗಳ್+ಇಳುಹಿದವು +ಖದ್ಯೋತ +ದೀಧಿತಿಯ
ಬಿಸಜಸಖನ್+ಅಡಗಿದರೆ +ನಭದಲಿ
ಮಸಗಿದವು +ತಾರೆಗಳ್+ಎನಲು +ಶೋ
ಭಿಸಿದವ್+ಅವನೀಪಾಲಮೌಳಿ+ಸುರತ್ನ +ರಾಜಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿಸಜಸಖನಡಗಿದರೆ ನಭದಲಿ ಮಸಗಿದವು ತಾರೆಗಳೆನಲು ಶೋ
ಭಿಸಿದವವನೀಪಾಲಮೌಳಿಸುರತ್ನ ರಾಜಿಗಳು
(೨) ರವಿ, ಖದ್ಯೋತ, ಬಿಸಜಸಖ – ಸೂರ್ಯನನ್ನು ಕರೆದ ಪರಿ

ಪದ್ಯ ೧೧: ದ್ರೌಪದಿಯು ಕೃಷ್ಣನನ್ನು ಹೇಗೆ ಹೊಗಳಿದಳು – ೧?

ಶ್ರುತಿಗಳಿಗೆ ಮೈದೋರೆ ಸುಪತಿ
ವ್ರತೆಯರಿಗೆ ಗೋಚರಿಸೆಯತಿ ಸಂ
ತತಿಯ ನಿರ್ಮಳ ಸಾರ ಸಮ್ಯಜ್ಞಾನ ದೀಧಿತಿಗೆ
ಮತಿಗೊಡದ ಮಹಿಮಾಂಬುನಿಧಿಯೆನ
ಗತಿಶಯವನೇ ಮಾಡಿಲಜ್ಜಾ
ಸ್ಥಿತಿಯನುಳುಹಿದ ದೈವ ನೀ ಮೈದೋರಿದೈ ತನಗೆ (ಅರಣ್ಯ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಹೇ ಕೃಷ್ಣ, ನೀನು ವೇದಗಳಿಗೂ ಮಹಾ ಪತಿವ್ರತೆಯರಿಗೂ ಕಾಣಿಸಿಕೊಳ್ಳುವವನಲ್ಲ. ಯತಿಗಳ ಶುದ್ಧವಾದ ಜ್ಞಾನಕ್ಕೂ ನೀನು ಒಲಿಯುವವನಲ್ಲ. ಇಂತಹವನು ನನ್ನ ಮೊರೆಯನ್ನು ಕೇಳಿ ನನ್ನ ಮಾನವನ್ನು ಕಾಪಾಡಿ ನನ್ನ ಹೆಚ್ಚಳವನ್ನು ತೋರಿಸಿದೆ. ಹೇ ದೇವ ನನಗೆ ಇಂದು ಪ್ರತ್ಯಕ್ಷವಾಗಿ ಕಾಣಿಸಿಕೊಂಡಿರುವೆ.

ಅರ್ಥ:
ಶ್ರುತಿ: ವೇದ; ಮೈದೋರೆ: ಕಾಣಿಸದಿರು; ಪತಿವ್ರತೆ: ಗರತಿ; ಗೋಚರಿಸು: ತೋರು; ಸಂತತಿ: ವಂಶ; ನಿರ್ಮಳ: ಶುಭ್ರ; ಸಾರ: ರಸ; ಸಮ್ಯಜ್ಞಾನ: ಶುದ್ಧವಾದ ಜ್ಞಾನ; ದೀಧಿತಿ: ಹೊಳಪು, ಕಾಂತಿ; ಮತಿ: ಬುದ್ಧಿ; ಮಹಿಮ: ಶ್ರೇಷ್ಠ; ಕೊಡು: ನೀಡು; ಅಂಬುನಿಧಿ: ಸಾಗರ; ಅತಿಶಯವ: ಹೆಚ್ಚು; ಲಜ್ಜ: ನಾಚಿಕೆ; ಸ್ಥಿತಿ: ಅವಸ್ಥೆ; ಉಳುಹು: ಸಂರಕ್ಷಿಸು, ಕಾಪಾಡು; ದೈವ: ಭಗವಂತ; ಮೈದೋರು: ಕಾಣಿಸು;

ಪದವಿಂಗಡಣೆ:
ಶ್ರುತಿಗಳಿಗೆ +ಮೈದೋರೆ +ಸುಪತಿ
ವ್ರತೆಯರಿಗೆ +ಗೋಚರಿಸೆ+ಅತಿ +ಸಂ
ತತಿಯ +ನಿರ್ಮಳ +ಸಾರ +ಸಮ್ಯಜ್ಞಾನ +ದೀಧಿತಿಗೆ
ಮತಿ+ಕೊಡದ+ ಮಹಿಮಾಂಬುನಿಧಿ+ಎನಗ್
ಅತಿಶಯವನೇ +ಮಾಡಿ+ಲಜ್ಜಾ
ಸ್ಥಿತಿಯನ್+ಉಳುಹಿದ ದೈವ ನೀ ಮೈದೋರಿದೈ ತನಗೆ

ಅಚ್ಚರಿ:
(೧) ಮೈದೋರು, ಗೊಚರಿಸು – ಸಾಮ್ಯಾರ್ಥ ಪದ
(೨) ಕೃಷ್ಣನನ್ನು ಮಹಿಮಾಂಬುನಿಧಿ ಎಂದು ಕರೆದಿರುವುದು
(೩) ಶ್ರುತಿ, ಸಂತತಿ, ಮತಿ, ಸ್ಥಿತಿ – ಪ್ರಾಸ ಪದಗಳು

ಪದ್ಯ ೪೬: ದ್ರೌಪದಿಯನ್ನು ಯಾರು ಸುತ್ತುವರೆದಿದ್ದರು?

ಹೊಳೆವ ಕಂಗಳ ಕಾಂತಿಗಳ ಥಳ
ಥಳಿಪ ವದನ ಪ್ರಭೆಯ ರತ್ನಾ
ವಳಿಯ ಬಹುವಿಧ ರಶ್ಮಿಗಳ ಲಾವಣ್ಯಲಹರಿಗಳ
ಎಳನಗೆಯ ಸುಲಿಪಲ್ಲ ಮುಕ್ತಾ
ವಳಿಯ ನಖ ದೀಧಿತಿಯ ಬೆಳಗಿನ
ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ (ಸಭಾ ಪರ್ವ, ೧೫ ಸಂಧಿ, ೪೬ ಪದ್ಯ)

ತಾತ್ಪರ್ಯ:
ಪ್ರಕಾಶಮಾನವಾಗಿ ಹೊಳೆಯುವ ಕಣ್ಣುಗಳ ಕಾಂತಿ, ಮುಖದಲ್ಲಿ ಥಳಥಳಿಸುವ ಬೆಳಕಿನ ಹೊಳಪು, ಧರಿಸಿದ ಆಭರಣಗಳ ರತ್ನಗಳ ಕಿರಣಗಳು, ಸೊಬಗಿನ ಉಲ್ಲಾಸದ ಪ್ರವಾಹ, ಸುಂದರವಾದ ಹಲ್ಲುಗಳು, ಮಂದಸ್ಮಿತ, ಮುತ್ತಿನ ಹಾರ, ಉಗುರುಗಳ ಕಾಂತಿಗಳಿಂದ ಬೆಳಕಿನ ಬಳಗದಂತೆ ಶೋಭಿಸುವ ತರುಣಿಯರು ದ್ರೌಪದಿಯ ಸುತ್ತ ನೆರೆದಿದ್ದರು.

ಅರ್ಥ:
ಹೊಳೆ: ಕಾಂತಿ, ಹೊಳಪು; ಕಂಗಳು: ನಯನ, ಅಂಬಕ; ಕಾಂತಿ: ಪ್ರಕಾಶ; ಥಳಥಳ: ಬೆಳಕು, ಕಾಂತಿಯನ್ನು ವರ್ಣಿಸುವ ಪದ; ವದನ: ಮುಖ; ಪ್ರಭೆ: ಕಾಂತಿ; ರತ್ನ: ಬೆಲೆಬಾಳುವ ಮಣಿ; ಆವಳಿ: ಸಾಲು; ಬಹುವಿಧ: ಬಹಳ, ಹಲವಾರು; ರಶ್ಮಿ: ಕಾಂತಿ; ಲಾವಣ್ಯ: ಚೆಲುವು; ಲಹರಿ: ಕಾಂತಿ, ಪ್ರಭೆ, ಅಲೆ; ಎಳನಗೆ: ಮಂದಸ್ಮಿತ; ಸುಲಿಪಲ್ಲ: ಶುಭ್ರವಾಗಿ ಹೊಳೆಯುವ ಹಲ್ಲು; ಮುಕ್ತಾವಳಿ: ಮುತ್ತಿನಹಾರ; ನಖ: ಉಗುರು; ದೀಧಿತಿ: ಹೊಳಪು, ಕಾಂತಿ; ಬೆಳಗು: ಬೆಳಕು; ಬಳಗ: ಸಂಬಂಧಿಕ, ಗುಂಪು; ಬಾಲಕಿ: ಹುಡುಗಿ; ಸತಿ: ಸ್ತ್ರೀ; ಬಳಸು: ಹತ್ತಿರ;

ಪದವಿಂಗಡಣೆ:
ಹೊಳೆವ +ಕಂಗಳ +ಕಾಂತಿಗಳ+ ಥಳ
ಥಳಿಪ +ವದನ +ಪ್ರಭೆಯ +ರತ್ನಾ
ವಳಿಯ +ಬಹುವಿಧ+ ರಶ್ಮಿಗಳ +ಲಾವಣ್ಯ+ಲಹರಿಗಳ
ಎಳನಗೆಯ +ಸುಲಿಪಲ್ಲ +ಮುಕ್ತಾ
ವಳಿಯ +ನಖ+ ದೀಧಿತಿಯ+ ಬೆಳಗಿನ
ಬಳಗವನೆ+ ಬಾಲಕಿಯರಿದ್ದರು +ಸತಿಯ +ಬಳಸಿನಲಿ

ಅಚ್ಚರಿ:
(೧) ಹೊಳೆ, ಕಾಂತಿ, ಪ್ರಭೆ, ರಶ್ಮಿ, ಲಹರಿ, ದೀಧಿತಿ – ಸಾಮ್ಯಾರ್ಥ ಪದಗಳು
(೨) ಉಪಮಾನದ ಪ್ರಯೋಗ – ಬೆಳಗಿನ ಬಳಗವನೆ ಬಾಲಕಿಯರಿದ್ದರು ಸತಿಯ ಬಳಸಿನಲಿ

ಪದ್ಯ ೨೬: ಸಭೆಯು ಹೇಗೆ ಪ್ರಕಾಶಮಾನವಾಗಿತ್ತು?

ಕವಿದು ವರುಣಾಂಶುಗಳ ಲಹರಿಯ
ಲವಣಿ ಲಾವಣಿಗೆಯಲಿ ನೀಲ
ಚ್ಛವಿಯ ದೀಧಿತಿ ಝಳಪಿಸಿತು ದೆಸೆದೆಸೆಯ ಭಿತ್ತಿಗಳ
ತಿವಿದವೆಳಮುತ್ತುಗಳ ಚಂದ್ರಿಕೆ
ಜವಳಿಸಿದ ವೊಂದೊಂದನೌಕಿದ
ವವಿರಳಿತ ಮಣಿ ಕಿರಣ ವೇಣೀ ಬಂಧ ಬಂದುರದಿ (ಸಭಾ ಪರ್ವ, ೧೪ ಸಂಧಿ, ೨೬ ಪದ್ಯ)

ತಾತ್ಪರ್ಯ:
ಒಂದು ಭಾಗದಲ್ಲಿ ನಸುಗೆಂಪು ಬೆಳಕಿನ ಕಾಂತಿಯು ಹೊರಹೊಮ್ಮುತ್ತಿತ್ತು, ಮಗದೊಂದು ಕಡೆ ನೀಲಿ ಬಣ್ಣದ ಹವಳಗಳಿಂದ ಹೊರಹೊಮ್ಮುತ್ತಿದ್ದ ಕಾಂತಿ, ಇವೆರಡರ ಪ್ರಕಾಶದಿಂದ ಗೋಡೆಗಳು ಬೆಳಗುತ್ತಿದ್ದವು. ಮುತ್ತುಗಳ ಕಾಂತಿಯ ಬೆಳದಿಂಗಳು ಇನ್ನೊಂದು ಕಡೆ, ಇವು ಮೂರು ಜಡೆಯ ಕೂದಲುಗಳಂತೆ ಬೆರೆತು ಸಭೆ ಪ್ರಜ್ವಲಿಸುತ್ತಿತ್ತು.

ಅರ್ಥ:
ಕವಿ: ಆವರಿಸು; ಅರುಣ: ಕೆಂಪು ಬಣ್ಣ; ಅಂಶ: ಭಾಗ; ಲಹರಿ: ರಭಸ, ಆವೇಗ, ಕಾಂತಿ; ಲವಣಿ: ಕಾಂತಿ; ಲಾವಣಿಗೆ: ಆಕರ್ಷಣೆ; ಮುತ್ತಿಗೆ; ಚ್ಛವಿ: ಕಾಂತಿ; ದೀಧಿತಿ: ಹೊಳಪು, ಕಾಂತಿ, ಕಿರಣ; ಝಳಪಿಸು: ಹೊಳಪು; ದೆಸೆ: ದಿಕ್ಕು; ಭಿತ್ತಿ: ಮುರಿ, ಒಡೆ; ತಿವಿದು: ಚುಚ್ಚು; ಮುತ್ತು: ಬೆಲೆಬಾಳುವ ರತ್ನ; ಚಂದ್ರಿಕೆ: ಬೆಳದಿಂಗಳು; ಜವಳಿಸು: ಜೋಡಿಸು; ಔಕು: ತಳ್ಳು; ಅವಿರಳ: ದಟ್ಟವಾದ; ಮಣಿ: ರತ್ನ; ಕಿರಣ: ಕಾಂತಿ; ವೇಣಿ: ಕೂದಲು; ಬಂಧ: ಕಟ್ಟು; ಬಂಧುರ: ಚೆಲುವಾದುದು, ಸುಂದರವಾದುದು;

ಪದವಿಂಗಡಣೆ:
ಕವಿದುವ್+ಅರುಣಾಂಶುಗಳ+ ಲಹರಿಯ
ಲವಣಿ +ಲಾವಣಿಗೆಯಲಿ +ನೀಲ
ಚ್ಛವಿಯ+ ದೀಧಿತಿ+ ಝಳಪಿಸಿತು +ದೆಸೆದೆಸೆಯ +ಭಿತ್ತಿಗಳ
ತಿವಿದವ್+ಎಳ+ಮುತ್ತುಗಳ +ಚಂದ್ರಿಕೆ
ಜವಳಿಸಿದವ್ +ಒಂದೊಂದನ್+ಔಕಿದವ್
ಅವಿರಳಿತ +ಮಣಿ +ಕಿರಣ+ ವೇಣೀ +ಬಂಧ +ಬಂದುರದಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ವೊಂದೊಂದನೌಕಿದವವಿರಳಿತ ಮಣಿ ಕಿರಣ ವೇಣೀ ಬಂಧ ಬಂದುರದಿ
(೨) ಲ ಕಾರದ ತ್ರಿವಳಿ ಪದ – ಲಹರಿಯ ಲವಣಿ ಲಾವಣಿಗೆಯಲಿ