ಪದ್ಯ ೧೪: ಘಟೋತ್ಕಚನನೆದುರು ಕುರುಸೈನ್ಯವೇಕೆ ನಿಲ್ಲಲಿಲ್ಲ?

ಇವನ ಧಾಳಿಯನಿವನ ಧೈರ್ಯವ
ನಿವನ ಹೂಣಿಗತನವನಿವನಾ
ಹವದ ಹೊರಿಗೆಯನಿವನ ಭಾರಿಯ ವೆಗ್ಗಳೆಯತನವ
ದಿವಿಜರಾನಲು ನೂಕದಿದು ನ
ಮ್ಮವರ ಪಾಡೇನೈ ಪಲಾಯನ
ತವನಿಧಿಯಲೇ ನಿಮ್ಮ ಬಲ ಧೃತರಾಷ್ಟ್ರ ಕೇಳೆಂದ (ದ್ರೋಣ ಪರ್ವ, ೧೬ ಸಂಧಿ, ೧೪ ಪದ್ಯ)

ತಾತ್ಪರ್ಯ:
ಧೃತರಾಷ್ಟ್ರ ಕೇಳು, ಘಟೋತ್ಕಚನ ದಾಳಿ, ಧೈರ್ಯ, ಯುದ್ಧದ ಚಾತುರ್ಯ, ಇವನ ಮೀರಿದ ಸತ್ವಗಳನ್ನು ದೇವತೆಗಳೂ ಎದುರಿಸಿ ನಿಲ್ಲಲಾರರು ಎಂದ ಮೇಲೆ ನಮ್ಮ ಕುರುಸೈನ್ಯದ ಪಾಡೇನು. ನಿಮ್ಮ ಸೈನ್ಯವು ಪಲಾಯನ ಮಾಡಿದರು.

ಅರ್ಥ:
ಧಾಳಿ: ಆಕ್ರಮಣ; ಧೈರ್ಯ: ದಿಟ್ಟತನ; ಹೂಣಿಗ: ಬಾಣವನ್ನು ಹೂಡುವವನು, ಬಿಲ್ಲುಗಾರ, ಸಾಹಸಿ; ಆಹವ: ಯುದ್ಧ; ಹೊರೆಗೆ: ಭಾರ, ಹೊರೆ; ಭಾರಿ: ಅತಿಶಯವಾದ; ವೆಗ್ಗಳಿಕೆ: ಶ್ರೇಷ್ಠತೆ; ದಿವಿಜ: ಅಮರರು; ನೂಕು: ತಳ್ಳು; ಪಾಡು: ಸ್ಥಿತಿ; ಪಲಾಯನ: ಓಡುವಿಕೆ, ಪರಾರಿ; ತವನಿಧಿ: ಕೊನೆಯಾಗದ ಭಂಡಾರ; ಬಲ: ಸೈನ್ಯ; ಕೇಳು: ಆಲಿಸು;

ಪದವಿಂಗಡಣೆ:
ಇವನ+ ಧಾಳಿಯನ್+ಇವನ +ಧೈರ್ಯವನ್
ಇವನ +ಹೂಣಿಗತನವನ್+ಇವನ್
ಆಹವದ +ಹೊರಿಗೆಯನ್+ಇವನ +ಭಾರಿಯ +ವೆಗ್ಗಳೆಯತನವ
ದಿವಿಜರಾನಲು +ನೂಕದಿದು+ ನ
ಮ್ಮವರ +ಪಾಡೇನೈ +ಪಲಾಯನ
ತವನಿಧಿಯಲೇ +ನಿಮ್ಮ +ಬಲ +ಧೃತರಾಷ್ಟ್ರ +ಕೇಳೆಂದ

ಅಚ್ಚರಿ:
(೧) ಪಲಾಯನವನ್ನು ವಿವರಿಸುವ ಪರಿ – ನಮ್ಮವರ ಪಾಡೇನೈ ಪಲಾಯನ ತವನಿಧಿಯಲೇ ನಿಮ್ಮ ಬಲ

ಪದ್ಯ ೧೩: ಭೀಮನು ದ್ರೋಣರ ರಥವನ್ನು ಹೇಗೆ ತಿರುಗಿಸಿದನು?

ಗಜರಿನಲಿ ಗಿರಿ ಬಿರಿಯೆ ದಿವಿಜ
ವ್ರಜ ಭಯಂಗೊಳೆ ಹೂಣೆ ಹೊಕ್ಕರಿ
ವಿಜಯನಿಟ್ಟಣಿಸಿದರೆ ಹಿಮ್ಮೆಟ್ಟಿದರೆ ಬಳಿಸಲಿಸಿ
ಸುಜನ ವಂದ್ಯನ ರಥವ ಹಿಡಿದನಿ
ಲಜನು ಮುಂಗೈಗೊಂಡು ಪಡೆ ಗಜ
ಬಜಿಸೆ ನಭಕೀಡಾಡಿದನು ಹಿಡಿ ಬುಗುರಿಯಂದದಲಿ (ದ್ರೋಣ ಪರ್ವ, ೧೩ ಸಂಧಿ, ೧೩ ಪದ್ಯ)

ತಾತ್ಪರ್ಯ:
ಬೆಟ್ಟಗಳು ಬಿರಿಯುವಂತೆ, ದೇವತೆಗಳು ಭಯಗೊಳ್ಳುವಂತೆ ಭೀಮನು ಗರ್ಜಿಸಿ ಮುನ್ನುಗ್ಗಲು, ವೈರಿಗಳ ಗೆಲುವನ್ನು ಅಟ್ಟಾಡಿಸಿಕೊಂಡು ಹೋದ ಪರಿಯಲ್ಲಿ, ದ್ರೋಣನು ಹಿಮ್ಮೆಟ್ಟಿದನು. ಭೀಮನು ಹಿಂದಕ್ಕೆ ನುಗ್ಗಿ ದ್ರೋಣನ ರಥವನ್ನು ಮುಂಗೈಯಿಂದ ಹಿಡಿದು ಮೇಲಕ್ಕೆತ್ತಿ ಹಿಡಿ ಬುಗುರಿಯಂತೆ ತಿರುಗಿಸಿ ಆಕಾಶಕ್ಕೆಸೆಯಲು ಕೌರವ ಸೈನ್ಯವು ಭಯದಿಮ್ದ ಕೂಗಿಕೊಂಡಿತು?

ಅರ್ಥ:
ಗಜರು: ಆರ್ಭಟಿಸು; ಗಿರಿ: ಬೆಟ್ಟ; ಬಿರಿ: ಸೀಳು; ದಿವಿಜ: ದೇವತೆ; ವ್ರಜ: ಗುಂಪು; ಭಯ: ಅಂಜು; ಹೂಣು: ಪ್ರತಿಜ್ಞೆಮಾಡು; ಹೊಕ್ಕು: ಸೇರು; ಅರಿ: ವೈರಿ; ವಿಜಯ: ಗೆಲುವು; ಹಿಮ್ಮೆಟ್ಟು: ಹಿಂದೆ ಸರಿ; ಬಳಿ: ಹತ್ತಿರ; ಬಳಿಸಲಿಸು: ಹಿಂದಟ್ಟಿಕೊಂಡು ಹೋಗು; ಸುಜನ: ಒಳ್ಳೆಯ ಮನುಷ್ಯ; ವಂದ್ಯ: ಗೌರವಿಸು; ರಥ: ಬಂಡಿ; ಹಿಡಿ: ಗ್ರಹಿಸು; ಅನಿಲಜ: ಭೀಮ; ಮುಂಗೈ: ಮುಂದಿನ ಹಸ್ತ; ಪಡೆ: ಗುಂಪು; ಗಜಬಜ: ಗಲಾಟೆ, ಕೋಲಾಹಲ; ನಭ: ಆಗಸ; ಈಡಾಡು: ಚೆಲ್ಲು; ಹಿಡಿ: ಗ್ರಹಿಸು;

ಪದವಿಂಗಡಣೆ:
ಗಜರಿನಲಿ +ಗಿರಿ +ಬಿರಿಯೆ +ದಿವಿಜ
ವ್ರಜ +ಭಯಂಗೊಳೆ +ಹೂಣೆ +ಹೊಕ್ಕ್+ಅರಿ
ವಿಜಯನ್+ಇಟ್ಟಣಿಸಿದರೆ +ಹಿಮ್ಮೆಟ್ಟಿದರೆ +ಬಳಿಸಲಿಸಿ
ಸುಜನ +ವಂದ್ಯನ +ರಥವ +ಹಿಡಿದ್+ಅನಿ
ಲಜನು +ಮುಂಗೈಗೊಂಡು +ಪಡೆ +ಗಜ
ಬಜಿಸೆ +ನಭಕ್+ಈಡಾಡಿದನು +ಹಿಡಿ +ಬುಗುರಿಯಂದದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ನಭಕೀಡಾಡಿದನು ಹಿಡಿ ಬುಗುರಿಯಂದದಲಿ

ಪದ್ಯ ೩೯: ದುಶ್ಯಾಸನನು ಕೌರವನಿಗೆ ಏನು ಹೇಳಿದ?

ಎನಲು ದುಶ್ಯಾಸನನು ರಾಯನ
ಕನಲಿದನು ಖತಿಯೇಕೆ ಜೀಯಿಂ
ದೆನಗೆ ಬೆಸಸಾ ಸಾಕು ಭಂಡರ ಬೈದು ಫಲವೇನು
ದಿನಪ ದೀವಿಗೆಯಾಗಲುಳಿದೀ
ಬಿನುಗು ಬೆಳಗಿನ ಹಂಗು ಬೇಹುದೆ
ದನುಜ ದಿವಿಜರ ದಳಕೆ ತನ್ನನು ಬಿಟ್ಟು ನೋಡೆಂದ (ದ್ರೋಣ ಪರ್ವ, ೫ ಸಂಧಿ, ೩೯ ಪದ್ಯ)

ತಾತ್ಪರ್ಯ:
ಕೌರವನ ಮಾತನ್ನು ಕೇಳಿ ದುಶ್ಯಾಸನನು ಕೋಪಗೊಂಡನು. ಜೀಯಾ, ಈ ಭಂಡರನ್ನು ಬೈದು ಫಲವೇನು? ನನಗೆ ಅಪ್ಪಣೆಕೊಡು. ಸೂರ್ಯನ ಬೆಳಕು ಇರಲಾಗಿ ದೀಪದ ಹಂಗೇಕೆ? ದೇವಾಸುರರ ಸೈನ್ಯವೇ ಇದಿರಾಗಲಿ, ನನ್ನನ್ನು ಬಿಟ್ಟು ನೋಡು ಎಂದನು.

ಅರ್ಥ:
ರಾಯ: ರಾಜ; ಕನಲು: ಸಿಟ್ಟಿಗೇಳು, ಕೆರಳು; ಖತಿ: ಕೋಪ; ಜೀಯ: ಒಡೆಯ; ಬೆಸಸು: ಕಾರ್ಯ; ಸಾಕು: ನಿಲ್ಲಿಸು; ಭಂಡ: ನಾಚಿಕೆ, ಲಜ್ಜೆ; ಬೈದು: ಜರಿ; ಫಲ: ಪ್ರಯೋಜನ; ದಿನಪ: ಸೂರ್ಯ; ದೀವೆಗೆ: ದೀಪ; ಉಳಿದ: ಮಿಕ್ಕ; ಬಿನುಗು: ಅಲ್ಪವಾದ, ಕ್ಷುದ್ರವಾದ; ಬೆಳಗು: ಕಾಂತಿ; ಹಂಗು: ದಾಕ್ಷಿಣ್ಯ, ಆಭಾರ; ದನುಜ: ರಾಕ್ಷಸ; ದಿವಿಜ: ಅಮರರು; ದಳ: ಸೈನ್ಯ; ಬಿಟ್ಟು: ಬಿಡು, ತೊರೆ; ನೋಡು: ವೀಕ್ಷಿಸು;

ಪದವಿಂಗಡಣೆ:
ಎನಲು+ ದುಶ್ಯಾಸನನು +ರಾಯನ
ಕನಲಿದನು +ಖತಿಯೇಕೆ+ ಜೀಯಿಂ
ದೆನಗೆ +ಬೆಸಸಾ +ಸಾಕು +ಭಂಡರ +ಬೈದು +ಫಲವೇನು
ದಿನಪ+ ದೀವಿಗೆಯಾಗಲ್+ಉಳಿದೀ
ಬಿನುಗು +ಬೆಳಗಿನ+ ಹಂಗು +ಬೇಹುದೆ
ದನುಜ+ ದಿವಿಜರ+ ದಳಕೆ +ತನ್ನನು +ಬಿಟ್ಟು +ನೋಡೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ದಿನಪ ದೀವಿಗೆಯಾಗಲುಳಿದೀ ಬಿನುಗು ಬೆಳಗಿನ ಹಂಗು ಬೇಹುದೆ

ಪದ್ಯ ೭೧: ನರಕಾಸುರನ ಜನನವು ಹೇಗಾಯಿತು?

ಉದಧಿಶಯನನ ಮೂರ್ತಿ ಕಲ್ಪಾಂ
ತದಲಿ ಕರಗಿದ ಧರೆಯನುದ್ಧರಿ
ಸಿದೆನು ಯಜ್ಞವರಾಹ ರೂಪಿನಲಂದು ಕರುಣದಲಿ
ಪದವ ಭಜಿಸಿಯೆ ಭೂಮಿ ತಾ ಬೇ
ಡಿದಳು ಪುತ್ರನನಾಕೆಯಲಿ ಜನಿ
ಸಿದನು ನರಕಾಸುರನವಧ್ಯನು ಸಕಲ ದಿವಿಜರಿಗೆ (ದ್ರೋಣ ಪರ್ವ, ೩ ಸಂಧಿ, ೭೧ ಪದ್ಯ)

ತಾತ್ಪರ್ಯ:
ಕ್ಷೀರ ಸಾಗರ ಶಯನದ ಮೂರ್ತಿಯಾದ ನಾನು ಕಲ್ಪಾಂತದಲ್ಲಿ ಸಮುದ್ರದಲ್ಲಿ ಮುಳುಗಿದ ಭೂಮಿಯನ್ನು ಮೇಲೆತ್ತಲೆಂದು, ಕರುಣೆಯಿಂದ ಯಜ್ಞವರಾಹರೂಪಿನಿಂದ ಅವತರಿಸಿ, ಭೂಮಿಯನ್ನು ಮೇಲಕ್ಕೆತ್ತಿದೆ. ಆಗ ಭೂದೇವಿಯು ತನಗೊಬ್ಬ ಮಗನು ಬೇಕೆಂದು ಬೇಡಿದಳು. ಅವಳಲ್ಲಿ ದೇವತೆಗಳಿಂದ ಸಂಹರಿಸಲಾಗದ ನರಕಾಸುರನು ಜನಿಸಿದನು.

ಅರ್ಥ:
ಉದಧಿ: ಸಾಗರ; ಶಯನ: ನಿದ್ದೆ, ಮಲಗಿರುವ; ಮೂರ್ತಿ: ರೂಪ; ಕಲ್ಪಾಂತ: ಯುಗದ ಅಂತ್ಯದಲ್ಲಿ; ಕರಗು: ಕಡಿಮೆಯಾಗು; ಧರೆ: ಭೂಮಿ; ಉದ್ಧರಿಸು: ಮೇಲಕ್ಕೆ ಎತ್ತುವುದು; ಯಜ್ಞ: ಕ್ರತು; ವರಾಹ: ಹಂದಿ; ರೂಪ: ಆಕಾರ; ಕರುಣ: ದಯೆ; ಪದ: ಚರಣ; ಭಜಿಸು: ಆರಾಧಿಸು; ಭೂಮಿ: ಇಳೆ; ಬೇಡು: ಕೇಳು; ಪುತ್ರ: ಮಗ; ಜನಿಸು: ಹುಟ್ಟು; ಅಸುರ: ರಾಕ್ಷಸ; ಸಕಲ: ಎಲ್ಲಾ; ದಿವಿಜ: ದೇವತೆ; ಅವಧ್ಯ: ನಾಶವಾಗದ;

ಪದವಿಂಗಡಣೆ:
ಉದಧಿ+ಶಯನನ+ ಮೂರ್ತಿ +ಕಲ್ಪಾಂ
ತದಲಿ+ ಕರಗಿದ+ ಧರೆಯನ್+ಉದ್ಧರಿ
ಸಿದೆನು +ಯಜ್ಞ+ವರಾಹ +ರೂಪಿನಲ್+ಅಂದು +ಕರುಣದಲಿ
ಪದವ +ಭಜಿಸಿಯೆ +ಭೂಮಿ +ತಾ +ಬೇ
ಡಿದಳು +ಪುತ್ರನನ್+ಆಕೆಯಲಿ +ಜನಿ
ಸಿದನು +ನರಕಾಸುರನ್+ಅವಧ್ಯನು+ ಸಕಲ+ ದಿವಿಜರಿಗೆ

ಅಚ್ಚರಿ:
(೧) ಅನಂತಶಯನ – ಉದಧಿಶಯನನ ಮೂರ್ತಿ ಎಂದು ಕರೆದ ಪರಿ
(೨) ನರಕಾಸುರನ ಜನನ – ಪದವ ಭಜಿಸಿಯೆ ಭೂಮಿ ತಾ ಬೇಡಿದಳು ಪುತ್ರನನಾಕೆಯಲಿ ಜನಿಸಿದನು ನರಕಾಸುರ

ಪದ್ಯ ೨೨: ಪಾಂಡವರು ಸುಪ್ರತೀಕ ಗಜದ ಮೇಲೆ ಹೇಗೆ ಆಕ್ರಮಣ ಮಾಡಿದರು?

ಗಿರಿಯ ತರಿವರೆ ಶಕ್ರನಲ್ಲದೆ
ನೆರೆದ ದಿವಿಜ ಸಮೂಹ ಮಾಡುವ
ಭರವಸಿಕೆ ತಾನೇನು ಹೊದ್ದಿದರಿವರು ದಿಗ್ಗಜವ
ಸರಳ ಬಲುವಳೆಗಾಲವಹಿತ
ದ್ವಿರದಗಿರಿಯಲಿ ಕಾಣಲಾದುದು
ಕೆರಳಿ ಕರಿ ಕೈಕೊಂಡುದರೆಯಟ್ಟಿತು ಮಹಾರಥರ (ದ್ರೋಣ ಪರ್ವ, ೩ ಸಂಧಿ, ೨೨ ಪದ್ಯ
)

ತಾತ್ಪರ್ಯ:
ಪರ್ವತಗಲನ್ನು ಮುರಿಯಲು ಇಂದ್ರನಲ್ಲದೆ ಉಳಿದ ದೇವತೆಗಳ ಸಮೂಹ ಏನನ್ನು ಮಾಡಲು ಸಾಧ್ಯ, ಪಾಂಡವ ವೀರರು ಬೆಟ್ಟದಂತಿದ್ದ ಆನೆಯ ಮೇಲೆ ಬಾಣಗಳ ಮಳೆಯನ್ನು ವರ್ಷಿಸಲು, ಸುಪ್ರತೀಕ ಗಜವು ಕೆರಳಿ ಮಹಾರಥರನ್ನು ಅಟ್ಟಿಸಿಕೊಂಡು ಹೋಯಿತು.

ಅರ್ಥ:
ಗಿರಿ: ಬೆಟ್ಟ; ತರಿ: ಕಡಿ, ಕತ್ತರಿಸು; ಶಕ್ರ: ಇಂದ್ರ; ನೆರೆ: ಗುಂಪು; ದಿವಿಜ: ದೇವತೆ; ಸಮೂಹ: ಗುಂಪು; ಭರವಸೆ: ನಂಬಿಕೆ; ಹೊದ್ದು: ಸೇರು; ದಿಗ್ಗಜ: ಉದ್ದಾಮ ವ್ಯಕ್ತಿ, ಅತಿಶ್ರೇಷ್ಠ; ಸರಳ: ಬಾಣ; ಬಲುವಳೆ: ಜೋರಾದ ವರ್ಷ, ಮಳೆ; ಅಹಿತ: ಶತ್ರು; ದ್ವಿರದ: ಆನೆ, ಎರಡು ಹಲ್ಲುಳ್ಳ; ಗಿರಿ: ಬೆಟ್ಟ; ಕಾಣು: ತೋರು; ಕೆರಳು: ಕೋಪಗೊಳ್ಳು; ಕರಿ: ಆನೆ; ಕೈಕೊಂಡು: ಧರಿಸು; ಅರೆಯಟ್ಟು: ಅಟ್ಟಿಸು; ಮಹಾರಥ: ಪರಾಕ್ರಮಿ;

ಪದವಿಂಗಡಣೆ:
ಗಿರಿಯ +ತರಿವರೆ +ಶಕ್ರನಲ್ಲದೆ
ನೆರೆದ +ದಿವಿಜ +ಸಮೂಹ +ಮಾಡುವ
ಭರವಸಿಕೆ +ತಾನೇನು +ಹೊದ್ದಿದರ್+ಇವರು+ ದಿಗ್ಗಜವ
ಸರಳ +ಬಲುವಳೆಗಾಲವ್+ಅಹಿತ
ದ್ವಿರದ+ಗಿರಿಯಲಿ +ಕಾಣಲಾದುದು
ಕೆರಳಿ+ ಕರಿ+ ಕೈಕೊಂಡುದ್+ಅರೆಯಟ್ಟಿತು +ಮಹಾರಥರ

ಅಚ್ಚರಿ:
(೧) ರೂಪಕದ ಪ್ರಯೋಗ – ಗಿರಿಯ ತರಿವರೆ ಶಕ್ರನಲ್ಲದೆ ನೆರೆದ ದಿವಿಜ ಸಮೂಹ ಮಾಡುವ ಭರವಸಿಕೆ ತಾನೇನು
(೨) ದ್ವಿರದ, ಕರಿ – ಸಮಾನಾರ್ಥಕ ಪದ

ಪದ್ಯ ೨೭: ಶ್ರೀಕೃಷ್ಣನು ಪ್ರತಿಜ್ಞೆಯನ್ನು ಮುರಿಯಲೇಕೆ ಚಿಂತಿಸಿದ?

ಕೆಂಡವಾಗಲಿ ಲೋಕ ದಿವಿಜರ
ಹೆಂಡಿರೋಲೆಯು ಕಳೆದು ಹೋಗಲಿ
ದಿಂಡುಗೆಡೆಯಲಿ ಮೇರು ಮೇದಿನಿ ನಿಲಲಿ ವಿತಳದಲಿ
ಗಂಡುಗೆಡಿಸಿದರಿಲ್ಲ ದಾನವ
ದಿಂಡೆಯರು ಹಲರೆಮ್ಮೊಡನೆ ಮಾ
ರ್ಕೊಂಡವರು ಮಾಮಾಪ್ರತಿಜ್ಞೆಯ ತೊಡಕು ಬೇಡೆಂದ (ಭೀಷ್ಮ ಪರ್ವ, ೬ ಸಂಧಿ, ೨೭ ಪದ್ಯ)

ತಾತ್ಪರ್ಯ:
ಈ ಲೋಕ ಸುಟ್ಟುಹೋಗಲಿ, ದೇವತಾ ಸ್ತ್ರೀಯರ ಓಲೆ ಭಾಗ್ಯ ಕೊನೆಗೊಳ್ಳಲಿ, ಮೇರುಪರ್ವತವು ಕೆಡೆದು ಉರುಳಲಿ, ಭೂಮಿಯು ವಿತಳಕ್ಕೆ ಕುಸಿದುಬಿಡಲಿ, ಸೃಷ್ಟಿಯ ಆದಿಯಿಂದ ಅಸಂಖ್ಯಾತ ರಾಕ್ಶಸರೊಡನೆ ಭಯಂಕರ ಯುದ್ಧಗಳನ್ನು ಮಾಡಿದ್ದೇನೆ, ಅವರಾರೂ ಭೀಷ್ಮನಂತೆ ನನ್ನ ಪರಾಕ್ರಮವನ್ನು ಅಪಮಾನಿಸಲಿಲ್ಲ. ಮತ್ತೇನು! ಆಯುಧವನ್ನು ಹಿಡಿದು ಕಾದುವುದಿಲ್ಲ ಎಂದು ನಾನು ಮಾಡಿದ ಪ್ರತಿಜ್ಞೆ ನಿಜ, ಆದರೆ ಇನ್ನು ಆ ಪ್ರತಿಜ್ಞೆಯ ಅಡ್ಡಿ ಬೇಡ ಎಂದು ಶ್ರೀಕೃಷ್ಣನು ಯೋಚಿಸಿದನು.

ಅರ್ಥ:
ಕೆಂಡ: ಉರಿಯುತ್ತಿರುವ ಇದ್ದಿಲು, ಇಂಗಳ; ಲೋಕ: ಜಗತ್ತು; ದಿವಿಜ: ಸುರರು; ಹೆಂಡಿರು: ಪತ್ನಿ; ಓಲೆ: ಕರ್ಣಾಭರಣ; ಕಳೆ: ತೊರೆ; ದಿಂಡು: ಬಲ, ಶಕ್ತಿ; ಕೆಡೆ: ಬೀಳು, ಕುಸಿ; ಮೇರು: ಪರ್ವತದ ಹೆಸರು; ಮೇದಿನಿ: ಭೂಮಿ; ನಿಲು: ನೆಲೆಗೊಳ್ಳು; ವಿತಳ: ಪಾತಾಳ; ಗಂಡುಗೆಡಿಸು: ಶಕ್ತಿಗುಂದಿಸು; ದಾನವ: ರಾಕ್ಷಸ; ದಿಂಡೆ: ದುಷ್ಟೆ; ಹಲರು: ಬಹಳ, ಹಲವರು; ಮಾರ್ಕೊಳ್: ಇದಿರಿಸಿದವ, ಪ್ರತಿಭಟಿಸಿದವ; ಪ್ರತಿಜ್ಞೆ: ಭಾಷೆ, ಮಾತು; ತೊಡಕು: ಗೋಜು, ತೊಂದರೆ; ಬೇಡ: ಸಲ್ಲದು;

ಪದವಿಂಗಡಣೆ:
ಕೆಂಡವಾಗಲಿ +ಲೋಕ +ದಿವಿಜರ
ಹೆಂಡಿರ್+ಓಲೆಯು +ಕಳೆದು +ಹೋಗಲಿ
ದಿಂಡುಗೆಡೆಯಲಿ+ ಮೇರು +ಮೇದಿನಿ +ನಿಲಲಿ +ವಿತಳದಲಿ
ಗಂಡುಗೆಡಿಸಿದರಿಲ್ಲ+ ದಾನವ
ದಿಂಡೆಯರು +ಹಲರ್+ಎಮ್ಮೊಡನೆ +ಮಾ
ರ್ಕೊಂಡವರು+ ಮಾ+ಮಾ+ಪ್ರತಿಜ್ಞೆಯ +ತೊಡಕು+ ಬೇಡೆಂದ

ಅಚ್ಚರಿ:
(೧) ದಿವಿಜರು ನಶಿಸಲಿ ಎಂದು ಹೇಳುವ ಪರಿ – ದಿವಿಜರ ಹೆಂಡಿರೋಲೆಯು ಕಳೆದು ಹೋಗಲಿ

ಪದ್ಯ ೧೩: ವಿರಾಟನು ಕಂಕನನ್ನು ತನ್ನ ಮಗನ ಬಗ್ಗೆ ಏನು ಹೇಳಿದನು?

ಕೇಳಿ ಸಮತಳಿಸಿತ್ತು ಮತ್ಸ್ಯ ನೃ
ಪಾಲನೆಂದನು ಕಂಕ ನೋಡೈ
ಕಾಳಗವನುತ್ತರನು ಗೆಲಿದನು ರಾಯಥಟ್ಟಿನಲಿ
ಶೂಲಪಾಣಿಗೆ ಸೆಡೆಯದಹಿತ ಭ
ಟಾಳಿ ಸೋತುದು ದಿವಿಜ ನರರೊಳು
ಹೋಲುವವರುಂಟೇ ಕುಮಾರನನೇನು ಹೇಳೆಂದ (ವಿರಾಟ ಪರ್ವ, ೧೦ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕಂಕ ಮತ್ತು ವಿರಾಟನ ಆಟದ ಸಾಂಗವಾಗಿ ನಡೆಯುತ್ತಿರುವಾಗ ವಿರಾಟನು ತನ್ನ ಮಗನ ಅಭ್ಯುದಯವನ್ನು ಮೆಚ್ಚಿ, ಎಲೈ ಕಂಕ ನೋಡು, ಕೌರವರ ಸೈನ್ಯದೊಡನೆ ಕಾಳಗವನ್ನು ಮಾಡಿ ಉತ್ತರನು ಗೆದ್ದು ಬಿಟ್ಟಿದ್ದಾನೆ. ಶಿವನಿಗೂ ಸೋಲದ ಶತ್ರು ಯೋಧರು ನನ್ನ ಮಗನಿಗೆ ಸೋತು ಬಿಟ್ಟರು, ಮನುಷ್ಯರಲ್ಲಾಗಲಿ, ದೇವತೆಗಳಲ್ಲಾಗಲಿ ಉತ್ತರನನ್ನು ಹೋಲುವ ವೀರರಿರುವರೇ? ಎಂದು ಕೇಳಿದನು.

ಅರ್ಥ:
ಕೇಳು: ಆಲಿಸು; ಸಮತಳ: ಸಮಾನರಾದ; ನೃಪಾಲ: ರಾಜ; ನೋಡು: ವೀಕ್ಷಿಸು, ಗಮನಕೊಡು; ಕಾಳಗ: ಯುದ್ಧ; ಗೆಲಿ: ಗೆಲ್ಲು, ಜಯಗಳಿಸು; ರಾಯ: ರಾಜ; ಥಟ್ಟು: ಸೈನ್ಯ; ಶೂಲಪಾಣಿ: ಶಿವ; ಸೆಡೆ: ಗರ್ವಿಸು, ಅದುರು; ಅಹಿತ: ವೈರ; ಭಟಾಳಿ: ಸೈನ್ಯ; ಸೋತು: ಪರಾಭವ; ದಿವಿಜ: ದೇವತೆ; ನರ: ಮನುಷ್ಯ; ಹೋಲು: ಸದೃಶವಾಗು; ಕುಮಾರ: ಮಗ;

ಪದವಿಂಗಡಣೆ:
ಕೇಳಿ +ಸಮತಳಿಸಿತ್ತು +ಮತ್ಸ್ಯ +ನೃ
ಪಾಲನ್+ಎಂದನು +ಕಂಕ+ ನೋಡೈ
ಕಾಳಗವನ್+ಉತ್ತರನು +ಗೆಲಿದನು +ರಾಯಥಟ್ಟಿನಲಿ
ಶೂಲಪಾಣಿಗೆ +ಸೆಡೆಯದ್+ಅಹಿತ +ಭ
ಟಾಳಿ +ಸೋತುದು +ದಿವಿಜ+ ನರರೊಳು
ಹೋಲುವವರುಂಟೇ +ಕುಮಾರನನ್+ ಏನು+ ಹೇಳೆಂದ

ಅಚ್ಚರಿ:
(೧) ವಿರಾಟನು ಮಗನನ್ನು ಹೋಲಿಸುವ ಪರಿ – ಶೂಲಪಾಣಿಗೆ ಸೆಡೆಯದಹಿತ ಭಟಾಳಿ ಸೋತುದು ದಿವಿಜ ನರರೊಳು ಹೋಲುವವರುಂಟೇ

ಪದ್ಯ ೪೬: ಸುದೇಷ್ಣೆಯು ಯಾವ ಸಲಹೆಯನ್ನು ನೀಡಿದಳು?

ಅವಳ ಗಂಡರು ಸುರರು ಸುರರಿಗೆ
ನವಗದಾವಂತರವು ಮುಳಿದೊಡೆ
ದಿವಿಜದಳಕಿದಿರಾರು ನಮ್ಮನದಾರು ಕಾವವರು
ಅವಳ ತೊಡಕೇ ಬೇಡ ಸತಿಯರ
ನಿವಹದಲಿ ನೀನಾರ ಬಯಸಿದ
ಡವಳ ನಾ ಮುಂದಿಟ್ಟು ಮದುವೆಯನೊಲಿದು ಮಾಡುವೆನು (ವಿರಾಟ ಪರ್ವ, ೨ ಸಂಧಿ, ೪೬ ಪದ್ಯ)

ತಾತ್ಪರ್ಯ:
ಎಲೈ ಕೀಚಕ, ಸೈರಂಧ್ರಿಯ ಗಂಡಂದಿರು ದೇವತಾಗಣದವರು. ದೇವತೆಗಳೆಲ್ಲಿ ನಾವೆಲ್ಲಿ, ದೇವತೆಗಳ ಸೈನ್ಯವು ಸಿಟ್ಟಾಗಿ ಬಂದರೆ ನಮ್ಮನ್ನು ಕಾಪಾಡುವವರಾರು? ಅವಳ ತಂಟೆಯೇ ಬೇಡ. ಈ ಸ್ತ್ರೀ ವೃಂದದಲ್ಲಿ ನೀನು ಯಾರನ್ನು ಬಯಸುವೆಯೋ ಅವಳೊಡನೆ ನಿನ್ನ ಮದುವೆಯನ್ನು ನೆರವೇರಿಸುತ್ತೇನೆ ಎಂದು ಸುದೇಷ್ಣೆಯು ಹೇಳಿದಳು.

ಅರ್ಥ:
ಗಂಡ: ಒಡೆಯ, ಭರ್ತ, ಪತಿ; ಸುರ: ದೇವತೆ; ಅಂತರ: ವ್ಯತ್ಯಾಸ; ಮುಳಿ: ಕೋಪ; ದಿವ್ಜ: ದೇವತೆ; ಅಳಕು: ಹೆದರು; ಇದಿರು: ಎದುರು; ಕಾವರು: ರಕ್ಷಿಸು; ತೊಡಕು: ತೊಂದರೆ, ಗೊಂದಲ; ಸತಿ: ಹೆಂಗಸು; ನಿವಹ: ಗುಂಪು; ಬಯಸು: ಇಚ್ಛಿಸು; ಮದುವೆ: ವಿವಾಹ; ಒಲಿ: ಪ್ರೀತಿ; ಮಾಡು: ನಿರ್ವಹಿಸು;

ಪದವಿಂಗಡಣೆ:
ಅವಳ +ಗಂಡರು +ಸುರರು +ಸುರರಿಗೆ
ನವಗ್+ಅದಾವ್+ಅಂತರವು +ಮುಳಿದೊಡೆ
ದಿವಿಜದ್+ಅಳಕ್+ಇದಿರಾರು +ನಮ್ಮನದಾರು+ ಕಾವವರು
ಅವಳ+ ತೊಡಕೇ+ ಬೇಡ +ಸತಿಯರ
ನಿವಹದಲಿ +ನೀನಾರ +ಬಯಸಿದಡ್
ಅವಳ +ನಾ +ಮುಂದಿಟ್ಟು +ಮದುವೆಯನ್+ಒಲಿದು+ ಮಾಡುವೆನು

ಅಚ್ಚರಿ:
(೧) ದೇವತೆಗಳ ಮೇಲಿನ ಭಯ – ಮುಳಿದೊಡೆ ದಿವಿಜದಳಕಿದಿರಾರು ನಮ್ಮನದಾರು ಕಾವವರು
(೨) ಸುರ, ದಿವಿಜ – ಸಮನಾರ್ಥಕ ಪದ

ಪದ್ಯ ೧೫: ಹನುಮಂತ ಭೀಮನಲ್ಲಿ ಯಾವ ಪ್ರಶ್ನೆಯನ್ನು ಕೇಳಿದ?

ಮುರಿಯದಂತಿರೆ ಲಘುವಿನಲಿ ಹೆ
ಮ್ಮರನನೊಯ್ಯನೆ ನೆಮ್ಮಿ ಕುಳ್ಳಿ
ರ್ದರಿದಿಶಾಪಟ ನುಡಿಸಿದನು ಪವಮಾನ ನಂದನನ
ಭರವಿದೆಲ್ಲಿಗೆ ಮರ್ತ್ಯನೋ ಖೇ
ಚರನೊ ದೈತ್ಯನೊದಿವಿಜನೋಕಿ
ನ್ನರನೊ ನೀನಾರೆಂದು ಭೀಮನು ನುಡಿಸಿದನು ಹನುಮ (ಅರಣ್ಯ ಪರ್ವ, ೧೧ ಸಂಧಿ, ೧೫ ಪದ್ಯ)

ತಾತ್ಪರ್ಯ:
ಆ ಮೇಲೆ ಹನುಮಂತನು ಮಗ್ಗುಲಾಗಿ ಒಂದು ದೊಡ್ಡ ಮರಕ್ಕೆ ಬೆನ್ನು ನೀಡಿ ಸ್ವಲ್ಪ ಆ ಮರವು ಬೀಳದಂತೆ, ಅವನ ದೇಹವು ತಗುಲಿರುವಂತೆ ಕುಳಿತುಕೊಂಡನು. ವೇಗವಾಗಿ ಬರುತ್ತಿದ್ದ ಭೀಮನನ್ನು ಕಂಡು ಎಲ್ಲಿಗೆ ಹೋಗುತ್ತಿರುವೆ, ನೀನು ಮನುಷ್ಯನೋ, ಖೇಚರನೋ, ರಾಕ್ಷಸನೋ, ದೇವನೋ, ಕಿಂಪುರುಷನೋ, ನೀನಾರೆಂದು ಹನುಮನು ಪ್ರಶ್ನಿಸಿದನು.

ಅರ್ಥ:
ಮುರಿ: ಸೀಳು; ಲಘು: ಹಗುರ; ಹೆಮ್ಮರ: ದೊಡ್ಡ ವೃಕ್ಷ; ಒಯ್ಯನೆ: ಮೆಲ್ಲಗೆ; ನೆಮ್ಮು: ಆಧಾರವನ್ನು ಪಡೆ; ಕುಳ್ಳಿರ್ದ: ಆಸೀನನಾದ; ಅರಿ: ವೈರಿ; ದಿಶಾಪಟ: ಎಲ್ಲಾ ದಿಕ್ಕುಗಳಿಗೆ ಓಡಿಸುವವ; ನುಡಿಸು: ಮಾತಾಡು; ಪವಮಾನ: ಗಾಳಿ, ವಾಯು; ನಂದನ: ಮಗ; ಭರ: ರಭಸ; ಮರ್ತ್ಯ: ಮನುಷ್ಯ; ಖೇಚರ: ಗಂಧರ್ವ; ದೈತ್ಯ: ರಾಕ್ಷಸ; ದಿವಿಜ: ಸುರ, ದೇವತೆ; ಕಿನ್ನರ: ಕಿಂಪುರುಷ; ನುಡಿಸು: ಮಾತಾಡು;

ಪದವಿಂಗಡಣೆ:
ಮುರಿಯದಂತಿರೆ +ಲಘುವಿನಲಿ +ಹೆ
ಮ್ಮರನನ್+ಒಯ್ಯನೆ +ನೆಮ್ಮಿ +ಕುಳ್ಳಿರ್ದ್
ಅರಿದಿಶಾಪಟ+ ನುಡಿಸಿದನು +ಪವಮಾನ +ನಂದನನ
ಭರವಿದ್+ಎಲ್ಲಿಗೆ +ಮರ್ತ್ಯನೋ +ಖೇ
ಚರನೊ+ ದೈತ್ಯನೊ+ದಿವಿಜನೋ+ಕಿ
ನ್ನರನೊ +ನೀನಾರೆಂದು +ಭೀಮನು +ನುಡಿಸಿದನು +ಹನುಮ

ಅಚ್ಚರಿ:
(೧) ಹನುಮನನ್ನು ಕರೆದ ಪರಿ – ಅರಿದಿಶಾಪಟ
(೨) ಹಲವು ಬಗೆಯ ಜನರ ಪರಿಚಯ – ಮರ್ತ್ಯ, ಖೇಚರ, ದೈತ್ಯ, ದಿವಿಜ, ಕಿನ್ನರ

ಪದ್ಯ ೧೨: ಲೋಕವೇಕ ಎರಡು ಭಾಗವಾಗಿ ನಿಂತಿತು?

ಲೋಕವಿವರಲಿ ಪಕ್ಷಪಾತವಿ
ದೇಕೆ ನೋಡೈ ನಿಮ್ಮ ಕರ್ಣನು
ಲೋಕವಿಖ್ಯಾತಪ್ರತಾಪನಲಾ ಮಹಾದೇವ
ಆ ಕೃತ ತ್ರೇತೆಯಲಿ ಕಾದಿದ
ನೇಕ ದಿವಿಜಕ್ಷತ್ರದನುಜಾ
ನೀಕವೀ ಪರಿ ಚಿತ್ರವಿಲ್ಲವನೀಶ ಕೇಳೆಂದ (ಕರ್ಣ ಪರ್ವ, ೨೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಇಡೀ ಲೋಕವೇ ಇವರಿಬ್ಬರ ಜೊತೆ ನಿಂತು ಎರಡು ಪಕ್ಷವಾಗಿ ವಿಂಗಡಿತವಾಯಿತು. ರಾಜಾ ಪಕ್ಷಪಾತವೇಕೆ ನಿಮ್ಮ ಕರ್ಣನು ಲೋಕದಲ್ಲಿ ಹೆಸರಾಂತ ಪ್ರತಾಪಿ ಶಿವ ಶಿವಾ, ಕೃತತ್ರೇತಾಯುಗಗಳಲ್ಲಿ ಯುದ್ಧ ಮಾಡಿದ ದೇವಮಾನವರು ಕ್ಷತ್ರಿಯರು ಈ ರೀತಿ ವಿಶಿಷ್ಟರಲ್ಲ ಎಂದು ಸಂಜಯನು ತಿಳಿಸಿದನು.

ಅರ್ಥ:
ಲೋಕ: ಜಗತ್ತು; ಪಕ್ಷಪಾತ: ಒಂದು ಪಕ್ಷವನ್ನು ವಹಿಸುವುದು, ಭೇದ; ನೋಡು: ವೀಕ್ಷಿಸು; ವಿಖ್ಯಾತ: ಪ್ರಸಿದ್ಧ; ಪ್ರತಾಪ: ಪರಾಕ್ರಮಿ; ಅನಲ: ಬೆಂಕಿ, ಅಗ್ನಿದೇವ; ಕೃತ: ನಾಲ್ಕುಯುಗಗಳಲ್ಲಿ ಮೊದಲನೆ ಯದು; ಕಾದು: ಹೋರಾಡು; ಅನೇಕ: ತುಂಬ; ದಿವಿಜ: ದೇವತೆ; ಪರಿ: ರೀತಿ; ಕ್ಷತ್ರ: ಕ್ಷತ್ರಿಯ; ದನುಜ: ರಾಕ್ಷಸ; ಆನೀಕ: ಸಮೂಹ; ಚಿತ್ರ: ಚಮತ್ಕಾರ, ಪ್ರಧಾನ; ಅವನೀಶ: ರಾಜ;

ಪದವಿಂಗಡಣೆ:
ಲೋಕವ್+ಇವರಲಿ+ ಪಕ್ಷಪಾತವ್+
ಇದೇಕೆ +ನೋಡೈ +ನಿಮ್ಮ +ಕರ್ಣನು
ಲೋಕವಿಖ್ಯಾತ+ಪ್ರತಾಪ+ಅನಲಾ +ಮಹಾದೇವ
ಆ +ಕೃತ+ ತ್ರೇತೆಯಲಿ+ ಕಾದಿದ್
ಅನೇಕ +ದಿವಿಜ+ಕ್ಷತ್ರ+ದನುಜ
ಆನೀಕವ್+ಈ+ಪರಿ +ಚಿತ್ರವಿಲ್+ಅವನೀಶ+ ಕೇಳೆಂದ

ಅಚ್ಚರಿ:
(೧) ಕರ್ಣನನ್ನು ಹೊಗಳಿದ ಬಗೆ – ಮ್ಮ ಕರ್ಣನು ಲೋಕವಿಖ್ಯಾತಪ್ರತಾಪನಲಾ ಮಹಾದೇವ