ಪದ್ಯ ೧೭: ನಾರಾಯಣಾಸ್ತ್ರದ ತಾಪ ಎಂತಹದು?

ಒಳಗೆ ಜಲಚರವೊದರೆ ಕುದಿದುದು
ಜಲಧಿ ಕಾದುದು ಧರಣಿ ಸೀದುದು
ಕುಲಗಿರಿಗಳುರೆ ಸಿಡಿದು ಸೀಕರಿವೋಯ್ತು ವನನಿಕರ
ನೆಲಕೆ ದಾಡೆಯ ಕೊಟ್ಟು ಕುಂಭ
ಸ್ಥಳವ ತೆಗೆದವು ದಿಗಿಭತತಿ ಹೆಡೆ
ನಳಿಯೆ ಮಣಿಗಳಲಾಂತನವನಿಯನುರಗಪತಿಯಂದು (ದ್ರೋಣ ಪರ್ವ, ೧೯ ಸಂಧಿ, ೧೭ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರದ ಕಾವಿಗೆ ಸಮುದ್ರವು ಕುದಿದು ಜಲಚರಗಳು ನೋವಿನಿಂದ ಒದರಿದವು. ಭೂಮಿ ಅರಣ್ಯಗಳು ಸೀದುಹೋದವು. ಕುಲಪರ್ವತಗಳು ಸಿಡಿದವು. ಅಷ್ಟ ದಿಗ್ಗಜಗಳು ತಾಪವನ್ನು ತಾಳಲಾರದೆ ನೆತ್ತಿಯನ್ನು ತಗ್ಗಿಸಿ ದಾಡೆಯಿಂದ ಭೂಮಿಯನ್ನು ಎತ್ತಿ ಹಿಡಿದವು. ಆದಿಶೇಷನು ಹೆಡೆಬಾಗಿ ಮಣಿಗಳಿಂದಲೇ ಭೂಮಿಯನ್ನು ಹೊತ್ತನು.

ಅರ್ಥ:
ಒಳಗೆ: ಆಂತರ್ಯ; ಜಲಚರ: ನೀರಿನಲ್ಲಿ ವಾಸಿಸುವ ಪ್ರಾಣಿ; ಕುದಿ: ಮರಳು; ಜಲಧಿ: ಸಾಗರ; ಕಾದು: ಬಿಸಿಯಾಗು; ಧರಣಿ: ಭೂಮಿ; ಸೀದು: ಕರಕಲಾಗು; ಕುಲಗಿರಿ: ದೊಡ್ಡ ಬೆಟ್ಟ; ಉರೆ: ಹೆಚ್ಚು; ಸಿಡಿ: ಸೀಳು; ಸೀಕರಿ: ಸೀಕಲು, ಕರಿಕು; ವನ: ಕಾಡು; ನಿಕರ: ಗುಂಪು; ನೆಲ: ಭೂಮಿ; ದಾಡೆ: ದವಡೆ, ಒಸಡು; ಕೊಟ್ಟು: ನೀದು; ಕುಂಭಸ್ಥಳ: ಆನೆಯ ನೆತ್ತಿ; ತೆಗೆ: ಹೊರತರು; ದಿಗಿಭ: ದಿಕ್ಕಿನ ಆನೆ, ದಿಗ್ಗಜ; ತತಿ: ಗುಂಪು; ಹೆಡೆ: ಹಾವಿನ ಬಿಚ್ಚಿದ ತಲೆ, ಫಣಿ; ನಳಿ: ಬಾಗು; ಮಣಿ: ಬೆಲೆಬಾಳುವ ರತ್ನ; ಅವನಿ: ಭೂಮಿ; ಉರಗಪತಿ: ಆದಿಶೇಷ;

ಪದವಿಂಗಡಣೆ:
ಒಳಗೆ +ಜಲಚರವೊದರೆ +ಕುದಿದುದು
ಜಲಧಿ +ಕಾದುದು +ಧರಣಿ+ ಸೀದುದು
ಕುಲಗಿರಿಗಳ್+ಉರೆ +ಸಿಡಿದು +ಸೀಕರಿವೋಯ್ತು +ವನ+ನಿಕರ
ನೆಲಕೆ +ದಾಡೆಯ +ಕೊಟ್ಟು +ಕುಂಭ
ಸ್ಥಳವ +ತೆಗೆದವು +ದಿಗಿಭತತಿ+ ಹೆಡೆ
ನಳಿಯೆ +ಮಣಿಗಳಲಾಂತನ್+ಅವನಿಯನ್+ಉರಗಪತಿ+ಅಂದು

ಅಚ್ಚರಿ:
(೧) ಕುದಿದುದು, ಕಾದುದು, ಸೀದುದು, ಸಿಡಿದು – ಪದಗಳ ಬಳಕೆ
(೨) ಒಂದೇ ಪದದ ಪ್ರಯೋಗ – ಮಣಿಗಳಲಾಂತನವನಿಯನುರಗಪತಿಯಂದು

ಪದ್ಯ ೩೯: ಪಾಶುಪತಾಸ್ತ್ರದ ಪ್ರಭಾವ ಹೇಗಿತ್ತು?

ತೆಗೆಯೆ ಜಗ ಕಂಪಿಸಿತು ತಾರೆಗ
ಳೊಗಡಿಸಿತು ನಭ ಜಲಧಿ ರತ್ನಾ
ಳಿಗಳನೋಕರಿಸಿತು ಕುಲಾದ್ರಿಗಳೊಲೆದವೆಡಬಲಕೆ
ದಿಗಿಭತತಿ ನಡುನಡುಗೆ ತಳ ವಾ
ಸುಗಿ ಫಣಾಳಿಯ ಸೆಳೆಯ ಬಲುಸರ
ಳುಗಿದು ದಳ್ಳುರಿದಿರುಳ ಕಾರಿತು ಬೆಸಸು ಬೆಸಸೆನುತ (ದ್ರೋಣ ಪರ್ವ, ೧೪ ಸಂಧಿ, ೩೯ ಪದ್ಯ)

ತಾತ್ಪರ್ಯ:
ಪಾಶುಪತಾಸ್ತ್ರವನ್ನು ಅರ್ಜುನನು ಹೊರತೆಗೆಯಲು ಜಗತ್ತು ನಡುಗಿತು. ಆಕಾಶದಿಂದ ನಕ್ಷತ್ರಗಳುರುಳಿದವು. ಸಮುದ್ರ ರತ್ನಗಳನ್ನು ಹೊರಚೆಲ್ಲಿತು. ಕುಲಪರ್ವತಗಳು ಎಡಬಲಕ್ಕೆ ಅಲುಗಾಡಿದವು. ದಿಗ್ಗಜಗಳು ನಡ ನಡುಗಿದವು. ವಾಸುಕಿಯು ತನ್ನ ಹೆಡೆಗಳನ್ನು ಕುಗ್ಗಿಸಿಕೊಂಡಿತು ಪಾಶುಪತಾಸ್ತ್ರವು ದಳ್ಳುರಿಯನ್ನೂ ಹೊಗೆಯನ್ನೂ ಕಾರಿ ಅಪ್ಪಣೆಯನ್ನು ನೀಡಿ ಎಂದು ಬೇಡಿತು.

ಅರ್ಥ:
ತೆಗೆ: ಹೊರತರು; ಜಗ: ಪ್ರಪಂಚ; ಕಂಪಿಸು: ನಡುಗು; ತಾರೆ: ನಕ್ಷತ್ರ; ಒಗಡಿಸು: ಧಿಕ್ಕರಿಸು, ಹೇಸು; ನಭ: ಆಗಸ; ಜಲಧಿ: ಸಾಗರ; ರತ್ನಾಳಿ: ಸಮುದ್ರ; ಓಕರಿಸು: ಅಸಹ್ಯಪಡು; ಕುಲಾದ್ರಿ: ಬೆಟ್ಟ; ದಿಗಿಭ: ದಿಗ್ಗಜ; ತತಿ: ಗುಂಪು; ನಡುಗೆ: ಮಧ್ಯ; ತಳ: ಸಮತಟ್ಟಾದ ಪ್ರದೇಶ; ವಾಸುಕಿ: ಅಷ್ಟ ಫಣಿಗಳಲ್ಲಿ ಒಂದು; ಫಣ: ಹಾವು; ಆಳಿ: ಗುಂಪು; ಸೆಳೆ: ಆಕರ್ಷಣೆ; ಬಲುಸರಳು: ಮಹಾಬಾಣ; ದಳ್ಳುರಿ: ಬೆಂಕಿ; ಕಾರು: ಹೊರಹಾಕು; ಬೆಸಸು: ಕಾರ್ಯ; ಉಗಿ: ಹೊರಹಾಕು;

ಪದವಿಂಗಡಣೆ:
ತೆಗೆಯೆ +ಜಗ +ಕಂಪಿಸಿತು +ತಾರೆಗಳ್
ಒಗಡಿಸಿತು +ನಭ +ಜಲಧಿ +ರತ್ನಾ
ಳಿಗಳನ್+ಓಕರಿಸಿತು +ಕುಲಾದ್ರಿಗಳ್+ಒಲೆದವ್+ಎಡಬಲಕೆ
ದಿಗ್+ಇಭ+ತತಿ +ನಡುನಡುಗೆ +ತಳ +ವಾ
ಸುಗಿ +ಫಣಾಳಿಯ +ಸೆಳೆಯ +ಬಲುಸರ
ಳುಗಿದು +ದಳ್ಳುರಿದ್+ಇರುಳ +ಕಾರಿತು +ಬೆಸಸು +ಬೆಸಸೆನುತ

ಅಚ್ಚರಿ:
(೧) ಪಾಶುಪತಾಸ್ತ್ರದ ಪ್ರಭಾವ – ಜಗ ಕಂಪಿಸಿತು ತಾರೆಗಳೊಗಡಿಸಿತು ನಭ ಜಲಧಿ ರತ್ನಾ
ಳಿಗಳನೋಕರಿಸಿತು ಕುಲಾದ್ರಿಗಳೊಲೆದವೆಡಬಲಕೆ