ಪದ್ಯ ೫೮: ಧೃತರಾಷ್ಟ್ರನು ದುರ್ಯೋಧನನನ್ನು ಏನು ಕೇಳಿದ?

ಏನ ನೆನೆದೈ ಮಗನೆ ಕುಂತೀ
ಸೂನುಗಳ ರಾಜ್ಯಾಪಹಾರದೊ
ಳೇನು ಬುದ್ಧಿ ವಿಳಾಸವಾವುದು ಕಾರ್ಯಗತಿ ನಿನಗೆ
ದಾನದಲಿ ಮೇಣ್ ಸಾಮ್ದಲಿ ಭೇ
ದಾನುಮತದಲಿ ದಂಡದಲಿ ನೀ
ವೇನ ನಿಶ್ಚೈಸಿದಿರಿ ಹೇಳಿನ್ನಂಜಬೇಡೆಂದ (ಸಭಾ ಪರ್ವ, ೧೩ ಸಂಧಿ, ೫೮ ಪದ್ಯ)

ತಾತ್ಪರ್ಯ:
ಎಲೈ ದುರ್ಯೋಧನ, ನೀನು ಪಾಂಡವರ ರಾಜ್ಯವನ್ನು ಅಪಹರಿಸಲು ಏನು ಮಾಡಬೇಕೆಂದು ನಿಶ್ಚೈಸಿರುವೆ, ಅದನ್ನು ಹೇಗೆ ಕಾರ್ಯರೂಪಕ್ಕೆ ತರುತ್ತೀಯ? ಸಾಮ, ದಾನ, ಭೇದ, ದಂಡ ಈ ನಾಲ್ಕರಲ್ಲಿ ಯಾವ ಮಾರ್ಗವನ್ನು ಆರಿಸಿಕೊಂಡಿರುವೆ ಅಂಜದೆ ಹೇಳು ಎಂದು ಕೇಳಿದನು.

ಅರ್ಥ:
ನೆನೆ:ವಿಚಾರಿಸು, ಆಲೋಚಿಸು; ಮಗ: ಕುಮಾರ; ಸೂನು: ಪುತ್ರ; ರಾಜ್ಯ: ರಾಷ್ಟ್ರ; ಅಪಹಾರ: ದೋಚುವ; ಬುದ್ಧಿ: ಮನಸ್ಸು, ಚಿತ್ತ; ವಿಳಾಸ: ಯೋಜನೆ, ವಿಚಾರ; ಕಾರ್ಯ: ಕೆಲಸ; ಗತಿ: ವೇಗ; ಕಾರ್ಯಗತಿ: ಕಾರ್ಯರೂಪ; ದಾನ, ಸಾಮ, ಭೇದ, ದಂಡ: ಚತುರೋಪಾಯಗಳು; ನಿಶ್ಚೈಸು: ತೀರ್ಮಾನಿಸು; ಅಂಜು: ಹೆದರು;

ಪದವಿಂಗಡಣೆ:
ಏನ +ನೆನೆದೈ+ ಮಗನೆ +ಕುಂತೀ
ಸೂನುಗಳ +ರಾಜ್ಯ+ಅಪಹಾರದೊಳ್
ಳೇನು +ಬುದ್ಧಿ +ವಿಳಾಸವಾವುದು +ಕಾರ್ಯಗತಿ +ನಿನಗೆ
ದಾನದಲಿ +ಮೇಣ್ +ಸಾಮದಲಿ +ಭೇ
ದ+ಆನು+ಮತದಲಿ +ದಂಡದಲಿ+ ನೀ
ವೇನ+ ನಿಶ್ಚೈಸಿದಿರಿ+ ಹೇಳ್+ಇನ್+ಅಂಜಬೇಡೆಂದ

ಅಚ್ಚರಿ:
(೧) ಚತುರೋಪಾಯಗಳು – ಸಾಮ, ದಾನ, ಭೇದ, ದಂಡ

ಪದ್ಯ ೫: ರಾಜನೀತಿಯಲ್ಲಿ ಯಾವುದು ಅತ್ಯಂತ ಕೊನೆಯ ಶ್ರೇಣಿಗೆ ಸೇರುತ್ತದೆ?

ಸಾಮವೆಂಬುದು ರಾಜನೀತಿಗೆ
ತಾ ಮನೋಹರ ರೂಪು ಬದುಕುವ
ಭೂಮಿಪಾಲರ ವಿನುತ ವಿಭವಕೆ ಬೀಜ ಮಂತ್ರವಿದು
ಸಾಮ ತಪ್ಪಿದ ಬಳಿಕ ನೀತಿ ವಿ
ರಾಮವಾಗದೆ ಬಿಡದು ದಂಡದ
ಸೀಮೆಯೆಂಬುದುಪಾಯದೊಳು ಸಾಮಾನ್ಯ ತರವೆಂದ (ಉದ್ಯೋಗ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ಒಡಂಬಡಿಕೆಯ ಕ್ರಮವು ರಾಜನೀತಿಯಲ್ಲಿ ಬಹು ಸುಂದರವಾದ ಉಪಾಯ. ವೈಭವದಿಂದ ಬದುಕಲಿಚ್ಛಿಸುವ ರಾಜರೆಲ್ಲರೂ ಇದು ಬೀಜ ಮಂತ್ರ. ಸಾಮವು ತಪ್ಪಿದರೆ ನೀತಿಯು ನೆಲೆಯಿಲ್ಲದಂತಾಗುತ್ತದೆ. ದಂಡವು ಉಪಾಯಗಳಲ್ಲಿ ಅತ್ಯಂತ ಕೊನೆಯ ಶ್ರೇಣಿಗೆ ಸೇರುತ್ತದೆ ಎಂದು ಕೃಷ್ಣನು ಹೇಳಿದನು.

ಅರ್ಥ:
ಸಾಮ: ಶಾಂತಗೊಳಿಸುವಿಕೆ, ಒಡಂಬಡಿಕೆ; ರಾಜನೀತಿ: ರಾಜಕಾರಣ; ಮನೋಹರ: ಸುಂದರವಾದ; ರೂಪು:ಆಕಾರ; ಬದುಕು: ಜೀವಿಸುವ; ಭೂಮಿಪಾಲ: ರಾಜ; ವಿನುತ: ಹೊಗಳಲ್ಪಟ್ಟ; ವಿಭವ: ಸಿರಿ, ಸಂಪತ್ತು; ಬೀಜ:ಮೂಲ ಕಾರಣ; ಮಂತ್ರ: ವಿಚಾರ; ತಪ್ಪು: ಸುಳ್ಳಾಗು; ಬಳಿಕ: ನಂತರ; ವಿರಾಮ: ಬಿಡುವು, ವಿಶ್ರಾಂತಿ; ಬಿಡದು: ಬಿಡು ಗಡೆ; ದಂಡ: ಕೋಲು; ಸೀಮೆ:ಎಲ್ಲೆ, ಗಡಿ; ಉಪಾಯ: ಯುಕ್ತಿ; ಸಾಮಾನ್ಯ: ಕೇವಲ; ತರ:ಕ್ರಮ;

ಪದವಿಂಗಡಣೆ:
ಸಾಮವೆಂಬುದು+ ರಾಜನೀತಿಗೆ
ತಾ +ಮನೋಹರ +ರೂಪು +ಬದುಕುವ
ಭೂಮಿಪಾಲರ+ ವಿನುತ +ವಿಭವಕೆ +ಬೀಜ +ಮಂತ್ರವಿದು
ಸಾಮ +ತಪ್ಪಿದ +ಬಳಿಕ +ನೀತಿ +ವಿ
ರಾಮವಾಗದೆ+ ಬಿಡದು +ದಂಡದ
ಸೀಮೆಯೆಂಬುದ್+ಉಪಾಯದೊಳು +ಸಾಮಾನ್ಯ +ತರವೆಂದ

ಅಚ್ಚರಿ:
(೧) ಚತುರೋಪಾಯದ ವಿವರ ನೀಡುವ ಪದ್ಯ – ಸಾಮ, ದಾನ, ಭೇದ, ದಂಡ
(೨) ಸಾಮದ ಗುಣಗಾನ – ಸಾಮವೆಂಬುದು ರಾಜನೀತಿಗೆ ತಾ ಮನೋಹರ ರೂಪು ಬದುಕುವ
ಭೂಮಿಪಾಲರ ವಿನುತ ವಿಭವಕೆ ಬೀಜ ಮಂತ್ರವಿದು

ಪದ್ಯ ೧೦೬: ದಾರಿದ್ರ್ಯವು ಹೇಗೆ ನಮ್ಮನ್ನು ಹಿಂಬಾಲಿಸುತ್ತದೆ?

ದಾನವಿರಹಿತರಾಗಿ ಜನಿಸಿದ
ಮಾನವರು ದಾರಿದ್ರರದರಿಂ
ಹೀನ ಸುಕೃತಿಗಳಾಗಿಯದರಿಂ ಘೋರತರ ನರಕ
ಆ ನರಕದಿಂ ಮರಳಿ ಪಾತಕ
ಯೋನಿ ಮರಳಿ ದರಿದ್ರವದು ತಾ
ನೇನಮಾಡಿಯು ಬೆನ್ನ ಬಿಡದವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ಹಿಂದಿನ ಜನ್ಮದಲ್ಲಿ ದಾನಮಾಡದಿರುವವರು ದರಿದ್ರರಾಗಿ ಜನ್ಮತಾಳುತ್ತಾರೆ. ದರಿದ್ರರಾಗಿ ಹುಟ್ಟಿದುದರಿಂದ ಅವರಿಗೆ ಒಳ್ಳೆಯ ಕಾರ್ಯಗಳನ್ನು ಮಾಡಲು ಅವಕಾಶ ದೊರೆಯುವುದಿಲ್ಲ, ಪುನಃ ನರಕಕ್ಕೆ ಹೋಗುತ್ತಾರೆ ನರಕದಿಂದ ಮತ್ತೆ ಪಾಪಯೋನಿಯಲ್ಲಿ ಜನಿಸಿ ಮತ್ತೆ ದರಿದ್ರರಾಗುತ್ತಾರೆ. ಹೀಗೆ ದಾರಿದ್ರ್ಯವು ಏನು ಮಾಡಿದರೂ ಬೆನ್ನು ಬಿಡುವುದಿಲ್ಲ ಎಂದು ಸನತ್ಸುಜಾತರು ದಾನದ ಮಹಿಮೆಯನ್ನು ವಿವರಿಸಿದರು.

ಅರ್ಥ:
ದಾನ: ನೀಡು, ಚತುರೋಪಾಯದಲ್ಲೊಂದು; ವಿರಹಿ: ವಿಯೋಗಿ; ಜನಿಸು: ಹುಟ್ಟು; ಮಾನವ: ಮನುಷ್ಯ; ದಾರಿದ್ರ: ಬಡವ, ಧನಹೀನ; ಹೀನ: ಕೆಟ್ಟದು; ಸುಕೃತಿ: ಒಳ್ಳೆಯ ಕೆಲಸ; ಘೋರ: ಉಗ್ರ, ಭಯಂಕರ; ನರಕ: ಅಧೋಲೋಕ; ಮರಳು: ಹಿಂತಿರುಗು; ಪಾತಕ: ಪಾಪ; ಯೋನಿ: ಗರ್ಭಕೋಶ; ದರಿದ್ರ: ದೀನ, ಬಡವ; ಬೆನ್ನು: ಹಿಂಬಾಗ; ಬಿಡು: ತೊರೆ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ದಾನ+ವಿರಹಿತರಾಗಿ+ ಜನಿಸಿದ
ಮಾನವರು+ ದಾರಿದ್ರರ್+ಅದರಿಂ
ಹೀನ +ಸುಕೃತಿಗಳಾಗಿ+ಅದರಿಂ +ಘೋರತರ +ನರಕ
ಆ +ನರಕದಿಂ +ಮರಳಿ +ಪಾತಕ
ಯೋನಿ +ಮರಳಿ+ ದರಿದ್ರವದು+ ತಾನ್
ಏನ+ಮಾಡಿಯು +ಬೆನ್ನ +ಬಿಡದ್+ಅವನೀಶ +ಕೇಳೆಂದ

ಅಚ್ಚರಿ:
(೧) ದಾನ, ಹೀನ – ಪ್ರಾಸ ಪದ
(೨) ಅದರಿಂ, ಮರಳಿ – ೨ ಬಾರಿ ಪ್ರಯೋಗ

ಪದ್ಯ ೯೩: ದತ್ತಾಪಹಾರ ಮಾಡಿದರೇನಾಗುತ್ತದೆ?

ತನ್ನ ದಾನವನಪಹರಿಸಿ ಕೊಂ
ಡನ್ಯರಿತ್ತುದಕಡ್ಡ ಬೀಳುವ
ಕುನ್ನಿಜನರರವತ್ತು ಸಾವಿರ ವರುಷ ಪರಿಯಂತ
ಭಿನ್ನವಿಲ್ಲದೆ ವಿಷ್ಠೆಯೊಳು ಕ್ರಿಮಿ
ಜನ್ಮದಲ್ಲಿಹರಿದನರಿದು ನೀ
ನಿನ್ನು ಕೊಟ್ಟುದನುಳುಹಿಕೊಳ್ವುದು ಧರ್ಮವಲ್ಲೆಂದ (ಉದ್ಯೋಗ ಪರ್ವ, ೪ ಸಂಧಿ, ೯೩ ಪದ್ಯ)

ತಾತ್ಪರ್ಯ:
ನಾವು ದಾನಕೊಟ್ಟದ್ದನ್ನು ಹಿಂಪಡೆಯುವುದು, ಬೇರೆಯವರು ನೀಡುವ ದಾನವನ್ನು ತಡೆಯುವುದು ಇವೆರಡನ್ನು ಮಾಡುವ ನಾಯಿಸಮಾನನಾದ ಮನುಷ್ಯನು ೬೦ ಸಾವಿರ ವರ್ಷಗಳ ಪರಿಯಂತ ಅವಿಚ್ಛಿನ್ನವಾಗಿ ಕ್ರಿಮಿಯಾಗಿರುತ್ತಾರೆ. ಇದನ್ನರಿತು ನೀನು ದತ್ತಾಪಹಾರ ಮಾಡಬೇಡ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ತನ್ನ: ಅವನ; ದಾನ: ಕೊಡುಗೆ; ಅಪಹರಿಸು: ತೆಗೆದುಕೊ; ಅನ್ಯರು: ಬೇರೆಯವರು; ಅಡ್ಡ: ಅಡಚಣೆ; ಕುನ್ನಿ: ನಾಯಿ; ಜನ: ಮನುಷ್ಯ; ಸಾವಿರ: ಸಹಸ್ರ; ವರುಷ: ಸಂವತ್ಸರ; ಪರಿ: ನಡೆ, ಸಾಗು; ಭಿನ್ನ: ತುಂಡು, ಭೇದ; ವಿಷ್ಥೆ: ಆಮೇಧ್ಯ; ಕ್ರಿಮಿ: ಕೀಟ; ಜನ್ಮ: ಜನನ; ಅರಿ: ತಿಳಿ; ಕೊಟ್ಟು: ನೀಡಿದ; ಅಳುಹು: ಬಯಸು, ಅಪೇಕ್ಷಿಸು; ಧರ್ಮ: ಧಾರಣೆ ಮಾಡಿದುದು, ನಿಯಮ, ಆಚಾರ; ಉಳುಹು: ಕಾಪಾಡು, ಸಂರಕ್ಷಿಸು;

ಪದವಿಂಗಡಣೆ:
ತನ್ನ ದಾನವನ್+ಅಪಹರಿಸಿ +ಕೊಂಡ್
ಅನ್ಯರ್+ಇತ್ತುದಕ್+ಅಡ್ಡ+ ಬೀಳುವ
ಕುನ್ನಿ+ಜನರ್+ಅರವತ್ತು +ಸಾವಿರ +ವರುಷ +ಪರಿಯಂತ
ಭಿನ್ನವಿಲ್ಲದೆ +ವಿಷ್ಠೆಯೊಳು +ಕ್ರಿಮಿ
ಜನ್ಮದಲ್ಲಿಹರ್+ಇದನ್+ಅರಿದು +ನೀ
ನಿನ್ನು +ಕೊಟ್ಟುದನ್+ಉಳುಹಿಕೊಳ್ವುದು +ಧರ್ಮವಲ್ಲೆಂದ

ಅಚ್ಚರಿ:
(೧) ಈ ಸಂಸ್ಕೃತ ಶ್ಲೋಕವನ್ನು ಉಚ್ಚರಿಸುವ ಪದ್ಯ
ಸ್ವದತ್ತತ್ ದ್ವಿಗುಣಂ ಪುಣ್ಯಂ ಪರದತ್ತನುಪಲನಂ
ಪರದತ್ತಪಹರನೇಣ ಸ್ವದತ್ತಂ ನಿಷ್ಫಲಂ ಭವೇತ್
ಸ್ವದತ್ತಂ ಪರದತ್ತಂ ವ ಯೋ ಹರೇತ ವಸುಂಧರಂ
ಷಷ್ಠಿವರ್ಷಸಹಸ್ರಾಣಿ ವಿಷ್ಟಂ ಜಾಯತೇ ಕ್ರಿಮಿಃ
(೨) ಕುಮಾರವ್ಯಾಸ ಬಯ್ಯುವ ರೀತಿ – ಕುನ್ನಿಜನರು

ಪದ್ಯ ೯೦: ಯಾವ ಕಾರ್ಯಗಳು ಫಲವನ್ನು ಕೊಡುವುದಿಲ್ಲ?

ಕಾದುದಕದಾಸ್ನಾನವೆಂಬುದ
ವೈದಿಕಾಂಗದ ಮಂತ್ರಸಾಧನ
ವೇದಹೀನರಿಗಿತ್ತ ದಾನವು ಶ್ರಾದ್ಧಕಾಲದೊಳು
ಎಯ್ದದಿಹ ದಕ್ಷಿಣೆಗಳೆಂಬಿವು
ಬೂದಿಯೊಳು ಬೇಳಿದ ಹವಿಸ್ಸಿನ
ಹಾದಿಯಲ್ಲದೆ ಫಲವನೀಯವು ರಾಯ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕಾಯಿಸಿದ ನೀರಿನ ಸ್ನಾನ, ವೈದಿಕವಲ್ಲದ ಮಂತ್ರದ ಸಾಧನೆ, ವೇದಾಧ್ಯಯನವಿಲ್ಲದವರಿಗಿತ್ತ ದಾನ, ಶ್ರಾದ್ಧದಲ್ಲಿ ದಕ್ಷಿಣೆ ಕೊಡದಿರುವುದು, ಇವು ಬೂದಿಯಲ್ಲಿ ಹೋಮ ಮಾಡಿದ ಹಾಗೆ, ಯಾವ ಫಲವೂ ಸಿಗುವುದಿಲ್ಲವೆಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಕಾದು: ಬಿಸಿ, ಕುದಿ; ಉದಕ: ನೀರು; ಸ್ನಾನ: ಅಭ್ಯಂಜನ; ವೈದಿಕ: ವೇದಗಳನ್ನು ಬಲ್ಲವನು; ಅಂಗ: ಭಾಗ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಸಾಧನ: ಸಿದ್ಧಿಯನ್ನು ಪಡೆಯುವ ಯತ್ನ, ಸಾಧಿಸುವಿಕೆ; ವೇದ: ಶೃತಿ, ಜ್ಞಾನ; ಹೀನ: ತಿಳಿಯದ; ದಾನ: ಕೊಡುಗೆ; ಶ್ರಾದ್ಧ: ಪಿತೃಗಳಿಗೆ ಶಾಸ್ತ್ರೋಕ್ತವಾಗಿ ಮಾಡುವ ಕರ್ಮ; ಕಾಲ: ಸಮಯ; ಐದೆ: ವಿಶೇಷವಾಗಿ; ದಕ್ಷಿಣೆ: ಸಂಭಾವನೆ; ಬೂದಿ: ಭಸ್ಮ, ವಿಭೂತಿ; ಬೇಳು: ಹೋಮವನ್ನು ಮಾಡು, ಹವಿಸ್ಸನ್ನು ಅರ್ಪಿಸು; ಹವಿಸ್ಸು: ಹವಿ, ಚರು; ಹಾದಿ: ದಾರಿ; ಫಲ: ಪ್ರಯೋಜನ, ಪರಿಣಾಮ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಕಾದ್+ಉದಕದಾ+ಸ್ನಾನ+ವೆಂಬುದ್+
ಅವೈದಿಕಾಂಗದ +ಮಂತ್ರಸಾಧನ
ವೇದಹೀನರಿಗಿತ್ತ+ ದಾನವು+ ಶ್ರಾದ್ಧ+ಕಾಲದೊಳು
ಎಯ್ದದಿಹ+ ದಕ್ಷಿಣೆಗಳೆಂಬ್+ಇವು
ಬೂದಿಯೊಳು +ಬೇಳಿದ+ ಹವಿಸ್ಸಿನ
ಹಾದಿಯಲ್ಲದೆ +ಫಲವನೀಯವು +ರಾಯ +ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೂದಿಯೊಳು ಬೇಳಿದ ಹವಿಸ್ಸಿನ ಹಾದಿ
(೨) ಸ್ನಾನ, ದಾನ – ಪ್ರಾಸ ಪದಗಳ ಪ್ರಯೋಗ

ಪದ್ಯ ೬೪: ಯಾರು ಬ್ರಾಹ್ಮಣರಲ್ಲಿ ಸಮರ್ಥರು?

ಮಾಡುತಿಹ ಯಜ್ಞವನು ಪರರಿಗೆ
ಮಾಡಿಸುವ ವೇದಾಧ್ಯಯನವನು
ಮಾಡುತಿಹ ತದ್ವಿಷಯದಲಿ ಯೋಗ್ಯರನು ಮಾಡಿಸುವ
ಮಾಡುತಿಹ ದಾನವನು ಲೋಗರು
ನೀಡುತಿರಲೊಳಕೊಂಬ ಗುಣವನು
ಕೂಡಿಕೊಂಡಿಹನೇ ಸಮರ್ಥನು ವಿಪ್ರರೊಳಗೆಂದ (ಉದ್ಯೋಗ ಪರ್ವ, ೪ ಸಂಧಿ, ೬೪ ಪದ್ಯ)

ತಾತ್ಪರ್ಯ:
ಯಾವ ಬ್ರಾಹ್ಮಣನು ಯಜ್ಞವನು ಮಾಡುವನೋ, ತನ್ನ ಶಿಷ್ಯರಿಗೆ ಮಾಡುವ ವೇದಾಧ್ಯಯನದಿಂದ ಯೋಗ್ಯರಾದ ಶಿಷ್ಯರನ್ನು ತಯಾರಿಸಿ ಕಾಪಾಡುವನೋ, ದಾನ ನಿರತನೋ, ಇತರರು ಕೊಟ್ಟ ದಾನವನ್ನು ಸ್ವೀಕರಿಸಬಲ್ಲನೋ ಅಂತಹವನು ಬ್ರಾಹ್ಮಣರಲ್ಲಿ ಸಮರ್ಥನಾದವನು ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಮಾಡು: ನಿರ್ವಹಿಸು, ರಚಿಸು, ತಯಾರಿಸು; ಯಜ್ಞ: ಅರ್ಧ್ವ; ಪರರು: ಇತರರು; ವೇದ: ಶೃತಿ; ಅಧ್ಯಯನ: ಓದು, ಕಲಿ; ವಿಷಯ: ವಿಚಾರ, ಸಂಗತಿ; ಯೋಗ್ಯ: ಸಮರ್ಥ; ದಾನ: ಪರರಿಗೆ ಕೊಡುವ ವಸ್ತು; ಲೋಗರು: ಜನರು; ನೀಡು: ಕೊಡು; ಒಳಕೊಂಬ: ತೆಗೆದುಕೊಳ್ಳು; ಗುಣ: ನಡತೆ, ಸ್ವಭಾವ; ಕೂಡಿಕೊಂಡಿಹ: ಹೊಂದಿಸಿಕೊಂಡಿರುವ; ಸಮರ್ಥ: ಯೋಗ್ಯವಾದ, ತಕ್ಕ; ವಿಪ್ರ: ಬ್ರಾಹ್ಮಣ;

ಪದವಿಂಗಡಣೆ:
ಮಾಡುತಿಹ +ಯಜ್ಞವನು +ಪರರಿಗೆ
ಮಾಡಿಸುವ +ವೇದ+ಅಧ್ಯಯನವನು
ಮಾಡುತಿಹ +ತದ್ವಿಷಯದಲಿ +ಯೋಗ್ಯರನು +ಮಾಡಿಸುವ
ಮಾಡುತಿಹ+ ದಾನವನು +ಲೋಗರು
ನೀಡುತಿರಲ್+ಒಳಕೊಂಬ +ಗುಣವನು
ಕೂಡಿಕೊಂಡಿಹನೇ +ಸಮರ್ಥನು +ವಿಪ್ರರೊಳಗೆಂದ

ಅಚ್ಚರಿ:
(೧) ಮಾಡುತಿಹ – ೧, ೩, ೪ ಸಾಲಿನ ಮೊದಲ ಪದ
(೨) ಯೋಗ್ಯ, ಸಮರ್ಥ – ಸಮಾನಾರ್ಥಕ ಪದ

ಪದ್ಯ ೨೫: ದಾನದ ಮಹತ್ವವೇನು?

ದಾನವೊಂದಾ ಪಾಲನೆಯ ಸಂ
ಧಾನವೊಂದೇ ಉಭಯವಿದರೊಳು
ದಾನದಿಂದಹುದಿಹಪರಂಗಳ ಸೌಖ್ಯ ಸಂಪದವು
ದಾನವೇ ಸಂಸಾರ ಸಾಧನ
ದಾನದಿಂ ಪಾಲನೆಯ ಫಲವಿ
ನ್ನೇನ ಹೇಳುವೆ ಕಡೆಯೊಳಚ್ಯುತನಪದವೆ ಫಲವೆಂದ (ಉದ್ಯೋಗ ಪರ್ವ, ೪ ಸಂಧಿ, ೨೫ ಪದ್ಯ)

ತಾತ್ಪರ್ಯ:
ದಾನದ ಮಹತ್ವವನ್ನು ತಿಳಿಸುವ ಪದ್ಯ. ದಾನ ಮತ್ತು ಸಂಧಾನ (ರಕ್ಷಣೆ) ಇವೆರಡರಲ್ಲಿ ದಾನದಿಂದ ಈ ಲೋಕ ಮತ್ತು ಪರಲೋಕಗಳಲ್ಲಿ ಸೌಖ್ಯ ಸಂಪತ್ತುಗಳುಂಟಾಗುತ್ತದೆ. ದಾನದಿಂದ ಸಂಸಾರವು ಅಭ್ಯುದಯವನ್ನು ಹೊಂದುತ್ತದೆ ಮತ್ತು ಕಡೆಯಲ್ಲಿ ಧರ್ಮರಕ್ಷಣೆಯಿಂದ ವಿಷ್ಣುವಿನ ಪಾದಾರವಿಂದದಲ್ಲಿ ಸ್ಥಾನದೊರಕುತ್ತದೆ ಎಂದು ಸನತ್ಸುಜಾತರು ಹೇಳಿದರು.

ಅರ್ಥ:
ದಾನ: ಚತುರೋಪಾಯಗಳಲ್ಲಿ ಒಂದು, ಕೊಡುಗೆ, ಕಾಣಿಕೆ; ಪಾಲನೆ: ಕಾಪಾಡುವುದು, ರಕ್ಷಣೆ; ಸಂಧಾನ: ಸೇರಿಸುವುದು, ಹೊಂದಿಸುವುದು; ಉಭಯ: ಎರಡು; ಅಹುದು: ಸಮ್ಮತಿಸು, ಹೌದು; ಇಹಪರ: ಇಲ್ಲಿ ಮತ್ತು ಪರಲೋಕ; ಸೌಖ್ಯ: ಸಂತೋಷ, ಸುಖ, ನೆಮ್ಮದಿ; ಸಂಪದ:ಐಶ್ವರ್ಯ, ಸಂಪತ್ತು; ಸಂಸಾರ: ಪರಿವಾರ, ಕುಟುಂಬ, ಲೌಕಿಕ ಜೀವನ; ಸಾಧನ: ಗುರಿಮುಟ್ಟುವ ಪ್ರಯತ್ನ; ಪಾಲನೆ: ಕಾಪಾಡುವುದು, ರಕ್ಷಣೆ; ಫಲ: ಫಲಿತಾಂಶ, ಪ್ರಯೋಜನ; ಕಡೆ: ಅಂತ್ಯ; ಅಚ್ಯುತ: ವಿಷ್ಣು; ಪದ: ಚರಣ;

ಪದವಿಂಗಡಣೆ:
ದಾನವೊಂದಾ+ ಪಾಲನೆಯ +ಸಂ
ಧಾನವೊಂದೇ +ಉಭಯವ್+ಇದರೊಳು
ದಾನದಿಂದ್+ಅಹುದ್+ಇಹಪರಂಗಳ +ಸೌಖ್ಯ +ಸಂಪದವು
ದಾನವೇ +ಸಂಸಾರ +ಸಾಧನ
ದಾನದಿಂ+ ಪಾಲನೆಯ +ಫಲವ್
ಇನ್ನೇನ +ಹೇಳುವೆ +ಕಡೆಯೊಳ್+ಅಚ್ಯುತನ+ಪದವೆ +ಫಲವೆಂದ

ಅಚ್ಚರಿ:
(೧) ದಾನ, ಸಂಧಾನ – ಪ್ರಾಸ ಪದಗಳ ಬಳಕೆ
(೨) ದಾನ -೧, ೩, ೪, ೫ ಸಾಲಿನ ಮೊದಲ ಪದ
(೩) ದಾನವೇ ಸಂಸಾರ ಸಾಧನ – ಧ್ಯೇಯ ವಾಕ್ಯವನ್ನು ಹೇಳುವ ಪರಿ

ಪದ್ಯ ೭೬: ರಾಜರ ಕರ್ತವ್ಯಗಳಾವುವು?

ದಾನವಿಷ್ಟಾಪೂರ್ತ ವಿನಯಸ
ಮಾನ ದೇವಾರ್ಚನೆ ಮಹೀಸುರ
ಧೇನು ಸಂತರ್ಪಣ ಸದಾತಿಥಿ ಪೂಜೆ ಗುರುಭಕ್ತಿ
ಧ್ಯಾನ ದೀನಾನಾಥ ಬಂಧುವಿ
ತಾನ ಶರಣಾಗತ ಸುರಕ್ಷಾ
ಸ್ನಾನ ತೀರ್ಥಂಗಳನು ಮಾಡಲು ಬೇಹುದವನಿಪರು (ಉದ್ಯೋಗ ಪರ್ವ, ೩ ಸಂಧಿ, ೭೬ ಪದ್ಯ)

ತಾತ್ಪರ್ಯ:
ರಾಜನಾದವನ ಕರ್ತವ್ಯಗಳನ್ನು ವಿದುರರು ಇಲ್ಲಿ ತಿಳಿಸಿದ್ದಾರೆ. ರಾಜನಾದವನು ದಾನ, ಅಗ್ನಿಹೋತ್ರ, ಒಳ್ಳೆಯ ನಡತೆ, ಮುನ್ನಡೆಸುವಿಕೆಯ ಜಾಣ್ಮೆ, ದೇವತಾ ಪೂಜೆ, ಬ್ರಾಹ್ಮಣ ಮತ್ತು ಗೋವುಗಳನ್ನು ತೃಪ್ತಿ ಪಡಿಸಿ, ಅತಿಥಿಗಳನ್ನು ಸತ್ಕರಿಸಿ, ಗುರುಹಿರಿಯರಲ್ಲಿ ಭಕ್ತಿಭಾವ ಹೊಂದು, ಧ್ಯಾನವನ್ನು ಆಚರಿಸುತ್ತಾ, ದೀನರು, ಅನಾಥರು, ಬಂಧುಗಳು, ಶರಣಾಗತರನ್ನು ರಕ್ಷಿಸಿ, ಪವಿತ್ರ ಜಲಗಳಲ್ಲಿ ಅಭ್ಯಂಜನ ಮಾಡುವುದು ರಾಜನ ಕರ್ತವ್ಯಗಳು.

ಅರ್ಥ:
ದಾನ: ನೀಡುವಿಕೆ; ಇಷ್ಟ: ಅಪೇಕ್ಷೆ; ಪೂರ್ತ: ಪೂರೈಸುವ; ವಿನಯ: ನಮ್ರತೆ; ಸಮಾನ:ಎಣೆ, ಸಾಟಿ, ಯೋಗ್ಯ; ದೇವ: ಸುರರು, ಭಗವಂತ; ಅರ್ಚನೆ: ಪೂಜೆ, ಆರಾಧನೆ; ಮಹೀ: ಭೂಮಿ; ಮಹೀಸುರ: ಬ್ರಾಹ್ಮಣ; ಧೇನು: ಹಸು; ಸಂತರ್ಪಣ: ತೃಪ್ತಿ ಪಡಿಸುವಿಕೆ; ಸದಾ: ಯಾವಾಗಲು; ತಿಥಿ: ದಿನ; ಅತಿಥಿ: ಆಮಂತ್ರಣವಿಲ್ಲದೆ ಬರುವವ; ಪೂಜೆ: ಪ್ರಾರ್ಥನೆ, ಆರಾಧನೆ; ಗುರು: ಆಚಾರ್ಯ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಧ್ಯಾನ: ಚಿಂತನೆ, ಮನನ; ದೀನ: ಬಡವ, ದರಿದ್ರ; ಅನಾಥ: ತಬ್ಬಲಿ, ನಿರ್ಗತಿಕ; ಬಂಧು: ಬಂಧುಗಳು; ವಿತಾನ: ಆಧಿಕ್ಯ, ಹೆಚ್ಚಳ; ಶರಣಾಗತ: ಆಶ್ರಯವನ್ನು ಬೇಡುವವನು; ಸುರಕ್ಷಾ: ಕಾಪಾಡುವಿಕೆ; ಸ್ನಾನ: ಅಭ್ಯಂಜನ; ತೀರ್ಥ: ಪವಿತ್ರ ಜಲ; ಬೇಹುದು: ಬೇಕು; ಅವನಿಪ: ರಾಜ; ಅವನಿ: ಭೂಮಿ;

ಪದವಿಂಗಡಣೆ:
ದಾನವ್ + ಇಷ್ಟಾಪೂರ್ತ+ ವಿನಯ+ಸ
ಮಾನ +ದೇವಾರ್ಚನೆ +ಮಹೀಸುರ
ಧೇನು +ಸಂತರ್ಪಣ+ ಸದ್+ಅತಿಥಿ+ ಪೂಜೆ +ಗುರುಭಕ್ತಿ
ಧ್ಯಾನ+ ದೀನ+ಅನಾಥ +ಬಂಧು+ವಿ
ತಾನ +ಶರಣಾಗತ+ ಸುರಕ್ಷಾ
ಸ್ನಾನ+ ತೀರ್ಥಂಗಳನು +ಮಾಡಲು +ಬೇಹುದ್+ಅವನಿಪರು

ಅಚ್ಚರಿ:
(೧) ದಾನ, ವಿನಯ, ದೇವಾರ್ಚನೆ, ಸಂತರ್ಪಣ, ಗುರುಭಕ್ತಿ ಹೀಗೆ ೧೩ ಬಗೆಯ ಕರ್ತವ್ಯಗಳನ್ನು ಹೇಳಿರುವುದು
(೨) ಧ್ಯಾನ, ದಾನ, ಮಾನ, ಸ್ನಾನ – ಪ್ರಾಸ ಪದಗಳು