ಪದ್ಯ ೨೨: ಅಶ್ವತ್ಥಾಮನು ಯಾವುದನ್ನು ಪೂರ್ಣಾಹುತಿಗೆ ಅರ್ಪಿಸಿದನು?

ಸೆರೆನರಂಗಳ ದರ್ಭೆ ಮಿದುಳಿನ
ಚರು ಕಪಾಲದ ಪಾತ್ರೆಯೆಲುವಿನ
ಬೆರಳ ಸಮಿಧೆ ವಿಶಾಳದನುಮಜ್ಜೆಗಳ ಪೃಷದಾಜ್ಯ
ಅರುಣಜಲದಾಜ್ಯಾಹುತಿಯ ವಿ
ಸ್ತರವ ವಿರಚಿಸಿ ನಿಗಮಮಂತ್ರೋ
ಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ (ಗದಾ ಪರ್ವ, ೯ ಸಂಧಿ, ೨೨ ಪದ್ಯ)

ತಾತ್ಪರ್ಯ:
ಅಶ್ವತ್ಥಾಮನು ಯಜ್ಞಕ್ಕೆ ತನ್ನ ನರಗಳನ್ನೇ ದರ್ಭೆಯನ್ನಾಗಿಸಿದ, ಮಿದುಳೇ ಚರು, ಕಪಾಲವೇ ಪಾತ್ರೆ, ಬೆರಳಿನ ಎಲಬುಗಳು ಸಮಿತ್ತು, ಮಜ್ಜೆಯ ಪೃಷದಾಜ್ಯ, ರಕ್ತದ ತುಪ್ಪಗಳಿಂದ ಆಹುತಿಗಳನ್ನು ಕೊಟ್ಟು, ಪೂರ್ಣಾಹಿತಿಗೆ ತನ್ನ ದೇಹವನ್ನೇ ಒಪ್ಪಿಸಿದನು.

ಅರ್ಥ:
ಸೆರೆ: ನರ, ಬಂಧನ; ನರ: ಅವಯವಗಳಿಂದ ಸಂವೇದನೆಗಳನ್ನೂ, ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ ತಂತು, ಸೆರೆ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಮಿದುಳು: ಮೆದುಳು, ಮಸ್ತಿಷ್ಕ; ಚರು: ನೈವೇದ್ಯ, ಹವಿಸ್ಸು; ಕಪಾಲ: ತಲೆಬುರುಡೆ; ಪಾತ್ರೆ: ಬಟ್ಟಲು; ಎಲುಬು: ಮೂಳೆ; ಬೆರಳು: ಅಂಗುಲಿ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ವಿಶಾಲ: ದೊಡ್ಡದು, ಹಿರಿದು; ಆಜ್ಯ: ತುಪ್ಪ; ಅರುಣಜಲ: ರಕ್ತ; ಜಲ: ನೀರು; ಅರುಣ: ಕೆಂಪು; ಆಹುತಿ: ಯಜ್ಞಾಯಾಗಾದಿಗಳಲ್ಲಿ ದೇವತೆಗಳಿಗಾಗಿ ಅಗ್ನಿಯಲ್ಲಿ ಅರ್ಪಿಸುವ ಹವಿಸ್ಸು; ವಿಸ್ತರ: ವಿಶಾಲ; ವಿರಚಿಸು: ನಿರ್ಮಿಸು; ನಿಗಮ: ವೇದ, ಶ್ರುತಿ; ಮಂತ್ರ:ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಉಚ್ಚರಣೆ: ಹೇಳು; ಪೂರ್ಣಾಹುತಿ: ಯಜ್ಞಾದಿಗಳಲ್ಲಿ ದರ್ವಿ ಯಾ ಸವುಟನ್ನು ಪೂರ್ತಿಯಾಗಿ ತುಂಬಿಕೊಂಡು ಕೊಡುವ ಆಹುತಿ; ಒಡಲು: ದೇಹ; ಒಪ್ಪಿಸು: ಸಮರ್ಪಿಸು; ಮಜ್ಜೆ: ಅಸ್ಥಿಸಾರ, ಮೂಳೆಯ ಒಳಗಿನ ಸಾರವತ್ತಾದ ಭಾಗ;

ಪದವಿಂಗಡಣೆ:
ಸೆರೆ+ನರಂಗಳ+ ದರ್ಭೆ+ ಮಿದುಳಿನ
ಚರು +ಕಪಾಲದ +ಪಾತ್ರೆ+ಎಲುವಿನ
ಬೆರಳ +ಸಮಿಧೆ +ವಿಶಾಳದನುಮಜ್ಜೆಗಳ +ಪೃಷದಾಜ್ಯ
ಅರುಣಜಲದ್+ಆಜ್ಯ +ಆಹುತಿಯ +ವಿ
ಸ್ತರವ +ವಿರಚಿಸಿ +ನಿಗಮ+ಮಂತ್ರ
ಉಚ್ಚರಣೆಯಲಿ+ ಪೂರ್ಣಾಹುತಿಗ +ತನ್ನೊಡಲನ್+ಒಪ್ಪಿಸಿದ

ಅಚ್ಚರಿ:
(೧) ದೇಹವನ್ನೇ ಯಜ್ಞಕ್ಕೆ ಅನುವುಮಾಡಿದ ಪರಿ – ನಿಗಮಮಂತ್ರೋಚ್ಚರಣೆಯಲಿ ಪೂರ್ಣಾಹುತಿಗೆ ತನ್ನೊಡಲನೊಪ್ಪಿಸಿದ

ಪದ್ಯ ೨೦: ಯುದ್ಧವನ್ನು ಯಜ್ಞಕ್ಕೆ ಹೇಗೆ ಹೋಲಿಸಬಹುದು?

ಸೆರೆನರದ ದರ್ಭೆಗಳ ಮಿದುಳಿನ
ಚರುವಿನೆಲುವಿನ ಸಮಿಧೆಗಳ ಬಿಲು
ದಿರುರವದ ಚತುರಂಗರಭಸದ ಸಾಮವೇದಿಗಳ
ಅರುಣಜಲದಾಜ್ಯದ ಸ್ರುವಾದಿಯ
ಶಿರಕಪಾಲದ ವೈರಿಪಶುಬಂ
ಧುರದ ಸಂಗರಯಜ್ಞ ದೀಕ್ಷೆಯ ಮೆರದಿರಕಟೆಂದ (ಗದಾ ಪರ್ವ, ೧ ಸಂಧಿ, ೨೦ ಪದ್ಯ)

ತಾತ್ಪರ್ಯ:
ನರಗಳೇ ದರ್ಭೆಗಳು, ಮಿದುಳುಗಳೇ ಚರು, ಎಲುಬುಗಳೇ ಸಮಿತ್ತುಗಳು, ಧನುಷ್ಟಂಕಾರ ಚತುರಂಗ ಬಲದ ಸದ್ದುಗಳೇ ಸಾಮ ವೇದದ ಘೋಷ, ರಕ್ತವೇ ತುಪ್ಪ, ಶತ್ರುಗಳ ತಲೆ ಬುರುಡೆಗಳೇ ಸ್ರಕ್ ಸ್ರುವಗಳು, ವೈರಿಗಳೇ ಪಶುಗಳು, ಇಂತಹ ಯುದ್ಧಯಜ್ಞದ ದೀಕ್ಷೆಯನ್ನು ಅಯ್ಯೋ ಮರೆತಿರಲ್ಲಾ ಎಂದು ದುರ್ಯೋಧನನು ಹೇಳಿದನು.

ಅರ್ಥ:
ಸೆರೆ: ಒಂದು ಕೈಯ ಬೊಗಸೆ; ನರ: ಮೆದುಳಿನಿಂದ ಅವಯವಗಳಿಗೆ ಸೂಚನೆಗಳನ್ನು ಒಯ್ಯುವ ತಂತು, ಸೆರೆ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಮಿದುಳು: ಮಸ್ತಿಷ್ಕ; ಚರು: ನೈವೇದ್ಯ, ಹವಿಸ್ಸು; ಎಲುಬು: ಮೂಳೆ; ಸಮಿಧೆ: ಸಮಿತೆ, ಯಜ್ಞಕ್ಕಾಗಿ ಬಳಸುವ ಉರುವಲು ಕಡ್ಡಿ; ಬಿಲು: ಬಿಲ್ಲು, ಚಾಪ; ರವ: ಶಬ್ದ; ಬಿಲುದಿರುರವ: ಧನುಷ್ಟಂಕಾರ; ಚತುರಂಗ: ಸೈನ್ಯದ ಆನೆ, ಕುದುರೆ, ರಥ ಮತ್ತು ಕಾಲಾಳು ಎಂಬ ನಾಲ್ಕು ಅಂಗ; ರಭಸ: ವೇಗ; ವೇದಿ: ಪಂಡಿತ, ವಿದ್ವಾಂಸ; ಅರುಣಜಲ: ರಕ್ತ; ಆಜ್ಯ: ತುಪ್ಪ, ಘೃತ; ಸ್ರುಕ್ ಸ್ರುವ: ಯಜ್ಞದಲ್ಲಿ ಬಳಸುವ ಸೌಟು; ಶಿರ: ತಲೆ; ಕಪಾಲ: ಕೆನ್ನೆ, ತಲೆಬುರುಡೆ; ವೈರಿ: ಶತ್ರು; ಪಶು: ಪ್ರಾಣಿ; ಬಂಧುರ: ಬಾಗಿರುವುದು; ಸಂಗರ: ಯುದ್ಧ, ಕಾಳಗ; ದೀಕ್ಷೆ: ವ್ರತ, ನಿಯಮ; ಮರೆ: ನೆನಪಿನಿಂದ ದೂರ ಮಾಡು; ಅಕಟ: ಅಯ್ಯೋ;

ಪದವಿಂಗಡಣೆ:
ಸೆರೆ+ನರದ+ ದರ್ಭೆಗಳ +ಮಿದುಳಿನ
ಚರುವಿನ್+ಎಲುವಿನ +ಸಮಿಧೆಗಳ+ ಬಿಲು
ದಿರು+ರವದ +ಚತುರಂಗ+ರಭಸದ +ಸಾಮ+ವೇದಿಗಳ
ಅರುಣಜಲದ+ಆಜ್ಯದ+ ಸ್ರುವಾದಿಯ
ಶಿರ+ಕಪಾಲದ+ ವೈರಿ+ಪಶುಬಂ
ಧುರದ +ಸಂಗರ+ಯಜ್ಞ +ದೀಕ್ಷೆಯ +ಮೆರದಿರ್+ಅಕಟೆಂದ

ಅಚ್ಚರಿ:
(೧) ಯುದ್ಧವನ್ನು ಯಜ್ಞಕ್ಕೆ ಹೋಲಿಸುವ ಪರಿ

ಪದ್ಯ ೧೫: ದ್ರೋಣರು ರಥದಲ್ಲಿ ಹೇಗೆ ಕಂಡರು?

ನಿರಿಯುಡಿಗೆಯಲಿ ಮಲ್ಲಗಂಟಿನ
ಸೆರಗ ಮೋಹಿಸಿ ಬೆರಳ ದರ್ಭೆಯ
ಹರಿದು ಬಿಸುಟನು ಜೋಡು ಸೀಸಕ ಬಾಹುರಕ್ಷೆಗಳ
ಮುರುಹಿ ಬಿಗಿದನು ನಿಖಿಳಭೂಸುರ
ರುರುವ ಮಂತ್ರಾಕ್ಷತೆಯ ಕೊಳುತ
ಳ್ಳಿರಿವ ಜಯರವದೊಡನೆ ರಥವೇರಿದನು ಕಲಿದ್ರೋಣ (ದ್ರೋಣ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಲ್ಲಗಂಟಿನಿಂದ ವಸ್ತ್ರವನ್ನುಟ್ಟು, ಬೆರಳಿನಲ್ಲಿದ್ದ ದರ್ಭೆಯನ್ನು ಕಿತ್ತೆಸೆದನು. ಕವಚ, ಶಿರಸ್ತ್ರಾಣ, ಬಾಹುರಕ್ಷೆಗಳನ್ನು ಭದ್ರವಾಗಿ ಧರಿಸಿದನು. ಬ್ರಾಹ್ಮನರನ್ನರ್ಚಿಸಿ ಅವರ ಆಶೀರ್ಮಂತ್ರಾಕ್ಷತೆಗಳನ್ನು ಸ್ವೀಕರಿಸಿ, ಜಯ ಶಬ್ದವು ಎತ್ತೆತ್ತ ಮೊಳಗುತ್ತಿರಲು ರಥವನ್ನೇರಿದನು.

ಅರ್ಥ:
ನಿರಿ: ಸೀರೆಯ ಮಡಿಕೆ; ಉಡಿಗೆ: ಉಟ್ಟುಕೊಳ್ಳುವ ಬಟ್ಟೆ; ಮಲ್ಲ: ಕುಸ್ತಿಪಟು; ಗಂಟು: ಸೇರಿಸಿ ಕಟ್ಟಿದುದು; ಸೆರಗು:ಸೀರೆಯಲ್ಲಿ ಹೊದೆಯುವ ಭಾಗ; ಮೋಹಿಸು: ಅಪ್ಪಳಿಸುವಂತೆ ಮಾಡು; ಬೆರಳು: ಅಂಗುಲಿ; ದರ್ಭೆ: ಹುಲ್ಲು; ಹರಿ: ಕಡಿ, ಕತ್ತರಿಸು; ಬಿಸುಟು: ಹೊರಹಾಕು; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಮುರುಹು: ತಿರುಗಿಸು; ಬಿಗಿ: ಭದ್ರವಾಗಿ; ನಿಖಿಳ: ಎಲ್ಲಾ; ಭೂಸುರ: ಬ್ರಾಹ್ಮನ; ಉರು: ವಿಶೇಷವಾದ; ಮಂತ್ರಾಕ್ಷತೆ: ಆಶೀರ್ವದಿಸಿದ ಅಕ್ಕಿ; ಕೊಳು: ತೆಗೆದುಕೋ; ಇರಿ: ಚುಚ್ಚು, ಕರೆ; ಜಯ: ಗೆಲುವು; ರವ: ಶಬ್ದ; ರಥ: ಬಂಡಿ; ಏರು: ಹತ್ತು; ಕಲಿ: ಶೂರ;

ಪದವಿಂಗಡಣೆ:
ನಿರಿ+ಉಡಿಗೆಯಲಿ +ಮಲ್ಲ+ಗಂಟಿನ
ಸೆರಗ+ ಮೋಹಿಸಿ +ಬೆರಳ+ ದರ್ಭೆಯ
ಹರಿದು +ಬಿಸುಟನು +ಜೋಡು +ಸೀಸಕ +ಬಾಹು+ರಕ್ಷೆಗಳ
ಮುರುಹಿ +ಬಿಗಿದನು +ನಿಖಿಳ+ಭೂಸುರರ್
ಉರುವ +ಮಂತ್ರಾಕ್ಷತೆಯ +ಕೊಳುತಳ್
ಇರಿವ +ಜಯರವದೊಡನೆ +ರಥವೇರಿದನು +ಕಲಿ+ದ್ರೋಣ

ಅಚ್ಚರಿ:
(೧) ಬ್ರಾಹ್ಮಣ ವೇಷವನ್ನು ಕಳಚಿದ ಎಂದು ಹೇಳಲು – ಬೆರಳ ದರ್ಭೆಯ ಹರಿದು ಬಿಸುಟನು

ಪದ್ಯ ೧೨: ಕರ್ಣನು ಕೃಪಾಚಾರ್ಯರನ್ನು ಹೇಗೆ ಹಂಗಿಸಿದನು?

ಹಣೆಗೆ ಮಟ್ಟಿಯ ಬಡಿದು ದರ್ಭೆಯ
ಹಣಿದು ಬೆರಳಲಿ ಸಿಕ್ಕಿ ಧೋತ್ರದ
ದಣಿಬವನು ನಿರಿವಿಡಿದು ಮಹಳದ ಮನೆಯ ಚೌಕದಲಿ
ಮಣೆಗೆ ಮಂಡಿಸಿ ಕುಳ್ಳಿತುಂಬೌ
ತಣದ ವಿದ್ಯವ ಬಲ್ಲಿರಲ್ಲದೆ
ರಣ ವಿಚಾರದ ವಿದ್ಯೆ ನಿಮಗೇಕೆಂದನಾ ಕರ್ಣ (ವಿರಾಟ ಪರ್ವ, ೮ ಸಂಧಿ, ೧೨ ಪದ್ಯ)

ತಾತ್ಪರ್ಯ:
ಹಣೆಗೆ ವಿಭೂತಿಯನ್ನು ಬಡಿದುಕೊಂಡು, ಕೈಯಲ್ಲಿ ಪವಿತ್ರವನ್ನಿಟ್ತುಕೊಂಡು, ಧೋತ್ರವನ್ನು ಚೆನ್ನಾಗಿ ನಿರಿಗೆ ಮಾಡಿ ಉಟ್ಟು, ದೊಡ್ಡ ಭವನದಲ್ಲಿ, ಶ್ರಾದ್ಧ ಮಾಡಿದ ಮನೆಗಳಲ್ಲಿ ಮಣೆಯ ಮೇಲೆ ಕುಳಿತುಕೊಂಡು ಊಟ ಮಾಡುವ ವಿದ್ಯೆ ನಿಮಗೆ ಚೆನ್ನಾಗಿ ಗೊತ್ತು. ಯುದ್ಧದಂತಹ ಕರ್ಕಶ ವಿದ್ಯೆಯ ಸುದ್ದಿ ನಿಮಗೇಕೆ ಎಂದು ಕರ್ಣನು ಕೃಪಾಚಾರ್ಯರನ್ನು ಹಂಗಿಸಿದನು.

ಅರ್ಥ:
ಹಣೆ: ಲಲಾಟ; ಮಟ್ಟಿ: ಮಣ್ಣು, ಮೃತ್ತಿಕೆ; ಬಡಿ: ತಟ್ಟು,ಲೇಪಿಸು, ಸವರು; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಹಣಿ: ತುಷ್ಟಿಹೊಂದು, ಹೊಡೆ; ಬೆರಳು: ಅಂಗುಲಿ; ಸೆಕ್ಕು: ಒಳಸೇರಿಸು, ತುರುಕು; ಧೋತ್ರ: ಪಂಚೆ; ದಣಿಬ: ಸೀರೆ; ನಿರಿ: ಸೀರೆಯ ಮಡಿಕೆ; ಮಹಳ: ಸರ್ವ ಪಿತೃ ಅಮಾವಾಸ್ಯೆಯ ಶ್ರಾದ್ಧ; ಮನೆ: ಆಲಯ; ಚೌಕ: ಚತುಷ್ಕಾಕಾರವಾದುದು; ಮಣೆ: ಪೀಠ, ಆಸನ; ಮಂಡಿಸು: ಕುಳಿತುಕೊಳ್ಳು; ಕುಳ್ಳಿತು: ಆಸೀನನಾಗು; ಔತಣ: ವಿಶೇಷವಾದ ಊಟ; ವಿದ್ಯ: ಜ್ಞಾನ; ಬಲ್ಲಿರಿ: ತಿಳಿದಿರುವಿರಿ; ರಣ: ಯುದ್ಧ; ವಿಚಾರ: ವಿಷಯ;

ಪದವಿಂಗಡಣೆ:
ಹಣೆಗೆ +ಮಟ್ಟಿಯ +ಬಡಿದು +ದರ್ಭೆಯ
ಹಣಿದು +ಬೆರಳಲಿ +ಸಿಕ್ಕಿ +ಧೋತ್ರದ
ದಣಿಬವನು +ನಿರಿವಿಡಿದು +ಮಹಳದ +ಮನೆಯ +ಚೌಕದಲಿ
ಮಣೆಗೆ +ಮಂಡಿಸಿ +ಕುಳ್ಳಿ+ತುಂಬ
ಔತಣದ+ ವಿದ್ಯವ +ಬಲ್ಲಿರಲ್ಲದೆ
ರಣ+ ವಿಚಾರದ +ವಿದ್ಯೆ +ನಿಮಗೇಕೆಂದನಾ +ಕರ್ಣ

ಅಚ್ಚರಿ:
(೧) ಹಣೆ, ಮಣೆ; ಹಣಿ, ದಣಿ; ರಣ, ಔತಣ – ಪ್ರಾಸ ಪದಗಳು

ಪದ್ಯ ೯: ಕ್ಷತ್ರಿಯರು, ಬ್ರಾಹ್ಮಣರು ರಾಜ್ಯವನ್ನು ಹೇಗೆ ಪಡೆಯಬೇಕು?

ಕಾದಿಸಾವುದು ಮೇಣು ರಿಪುಭಟ
ನಾದವನ ನೆತ್ತಿಯಲಿ ಸಬಳವ
ಕೋದುಕೊಳ್ವುದು ನೆಲನನಿದು ಬಾಹುಜರ ಮಕ್ಕಳಿಗೆ
ಮೇದಿನಿಯ ಬೇಡುವೊಡೆ ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ
ಕೋದು ಸ್ವಸ್ತಿಯ ಹಾಕುವುದು ಹಾರವರ ಮತವೆಂದ (ಉದ್ಯೋಗ ಪರ್ವ, ೧ ಸಂಧಿ, ೯ ಪದ್ಯ)

ತಾತ್ಪರ್ಯ:
ಸಾತ್ಯಕಿಯು ತನ್ನ ಮಾತುಗಳನ್ನು ಮುಂದುವರೆಸುತ್ತಾ, ಕ್ಷತ್ರಿಯರಾದವರು ಕ್ಷತ್ರಿಯರನ್ನು ಯುದ್ಧದಲ್ಲಿ ಸಾಯಿಸಬೇಕು, ಇಲ್ಲವೆ ಶತ್ರುಸೈನ್ಯದ ತಲೆಯನ್ನು ಭರ್ಜಿಗೆ ಸಿಕ್ಕಿಸಿ ಭೂಮಿಯನ್ನು ಪಡೆಯಬೇಕು. ಬ್ರಾಹ್ಮಣರಾದವಉ ವಿಭೂತಿಯನ್ನು ನೀರಿನಲ್ಲಿ ತೇದು ಹಚ್ಚಿಕೊಂಡು, ಅನಾಮಿಕದಲ್ಲಿ ಪವಿತ್ರವನ್ನು ಹಾಕಿಕೊಂಡು, ನಮಸ್ಕರಿಸಿದ ರಾಜನಿಗೆ ಶುಭಹಾರೈಸಿ ರಾಜ್ಯವನ್ನು ಬೇಡಿ ಪಡೆದುಕೊಳ್ಳಬೇಕು.

ಅರ್ಥ:
ಕಾದಿಸು: ಜಗಳ, ಕದನ; ಮೇಣ್: ಮತ್ತು; ರಿಪು: ವೈರಿ; ಭಟ: ಸೈನಿಕ; ನೆತ್ತಿ: ಶಿರ; ಸಬಳ:ಭರ್ಜಿ, ಈಟಿ; ಕೋದು: ಸಿಕ್ಕಿಸು; ನೆಲ: ಭೂಮಿ; ಬಾಹುಜನ: ಕ್ಷತ್ರಿಯರು; ಮಕ್ಕಳು: ಕುಮಾರರು; ಮೇದಿನಿ: ಭೂಮಿ; ಬೇಡು: ಕೇಳು; ಮಟ್ಟಿ: ಮೃತ್ತಿಕೆ ೨ ಹಣೆಯಲ್ಲಿ ಧರಿಸುವ ಗೋಪೀಚಂದನ ಮೃತ್ತಿಕೆ ಇತ್ಯಾದಿ; ತೇದು: ತಿಕ್ಕಿ; ಹಣೆ: ಲಲಾಟ; ಬಡಿ: ಇಟ್ಟು; ದರ್ಭೆ: ಹುಲ್ಲು; ಕೋದು: ಹಾಕು; ಸ್ವಸ್ತಿ: ಒಳ್ಳೆಯ ಮಾತು; ಹಾಕು: ಹೇಳು; ಹಾರವ: ಬ್ರಾಹ್ಮಣ ಮತ: ರೀತಿ;

ಪದವಿಂಗಡಣೆ:
ಕಾದಿಸ್+ಆವುದು +ಮೇಣು +ರಿಪು+ಭಟನ್
ಆದವನ +ನೆತ್ತಿಯಲಿ +ಸಬಳವ
ಕೋದು+ಕೊಳ್ವುದು +ನೆಲನನ್+ಇದು +ಬಾಹುಜರ+ ಮಕ್ಕಳಿಗೆ
ಮೇದಿನಿಯ +ಬೇಡುವೊಡೆ +ಮಟ್ಟಿಯ
ತೇದು +ಹಣೆಯಲಿ +ಬಡಿದು +ದರ್ಭೆಯ
ಕೋದು +ಸ್ವಸ್ತಿಯ +ಹಾಕುವುದು +ಹಾರವರ+ ಮತವೆಂದ

ಅಚ್ಚರಿ:
(೧) ಕೋದು – ೩, ೬ ಸಾಲಿನ ಮೊದಲ ಪದ
(೨) ಬ್ರಾಹ್ಮಣ ಭೂಮಿಯನ್ನು ಪಡೆವ ರೀತಿ: ಬೇಡುವುದು – ಮಟ್ಟಿಯ
ತೇದು ಹಣೆಯಲಿ ಬಡಿದು ದರ್ಭೆಯ ಕೋದು ಸ್ವಸ್ತಿಯ ಹಾಕುವುದು; ಬಡಿದು ಪದದ ಬಳಕೆ, ಜೋರಾಗಿ ಕಾಣಿಸುವಂತೆ ಧರಿಸುವುದು, ಬಡಿದು, ಕೋದು, ಹಾಕುವುದು – ಕ್ರಿಯಾ ಪದಗಳ ಬಳಕೆ
(೩) ಕ್ಷತ್ರಿಯ ಭೂಮಿಯನ್ನು ಪಡೆವ ರೀತಿ: ಯುದ್ಧ – ನೆತ್ತಿಯಲಿ ಸಬಳವ ಕೋದುಕೊಳ್ವುದು – ಶಿರಸನ್ನೇ ಸೀಳುವುದು

ಪದ್ಯ ೧೭: ದ್ರೌಪದಿಯ ಸೌಭಾಗ್ಯವನ್ನು ಅಲ್ಲಿ ನೆರೆದಿದ್ದ ರಾಜರು ಹೇಗೆ ಆಡಿಕೊಂಡರು?

ಧನು ತನಗೆ ನೆಗಹಲ್ಕೆ ಕೃಷ್ಣಾ
ಜಿನವೊ ಸಾಲಗ್ರಾಮದೇವರೊ
ವಿನುತ ತುಳಸಿಯೊ ಕುಶವೊ ದರ್ಭೆಯೊ ಸವಿಧೆಗಳ ಹೊರೆಯೊ
ನೆನೆದ ತಿಲವೋ ಮೇಣಿದೌಪಾ
ಸನದ ಕೊಳವಿಯೊ ಬಣಗು ವಿಪ್ರನ
ನೆನಹ ನೋಡಿರೆ ಘನವಲಾ ದ್ರೌಪದಿಯ ಸೌಭಾಗ್ಯ (ಆದಿ ಪರ್ವ, ೧೫ ಸಂಧಿ, ೧೭ ಪದ್ಯ)

ತಾತ್ಪರ್ಯ:
ಈ ಬ್ರಾಹ್ಮಣನು ಏನೆಂದು ತಿಳಿದಿದ್ದಾನೆ?, ಈ ಬಿಲ್ಲೇನು ಕೃಷ್ಣಮೃಗದ ಚರ್ಮವೋ, ಸಾಲಿಗ್ರಾಮವೋ, ತುಳಸಿಯೋ, ದರ್ಭೆಯೋ, ಯಜ್ಞಕ್ಕೆ ಹಾಕುವ ಸಮಿಧುಗಳ ಕಟ್ಟೋ, ನೆನೆಸಿರುವ ಎಳ್ಳೋ, ಅಥವ ಉಪಾಸನದ ಕೋಳವೆಯೋ, ಈ ತಿಳಿಗೇಡಿ ಬ್ರಾಹ್ಮಣನ ಮನಸ್ಸು ನೋಡಿದರೆ ದ್ರೌಪದಿಯ ಸೌಭಾಗ್ಯ ಎಷ್ಟು ಹೆಚ್ಚೆಂದು ತಿಳಿಯುತ್ತದೆ, ಎಂದು ಮಾತಾಡಿಕೋಳ್ಳುತಿದ್ದರು.

ಅರ್ಥ:
ಧನು: ಬಿಲ್ಲು; ನೆಗಹಲ್ಕೆ:ತಿಳಿದುಕೊಂಡು; ಕೃಷ್ಣಾಜಿನ: ಕೃಷ್ಣಮೃಗದ ಚರ್ಮ; ಸಾಲಗ್ರಾಮ: ಕರಿಯ ಶಿಲೆ, ಗಂಡಕಿ ನದಿಯಲ್ಲಿ ಸಿಗುವ ಶಿಲೆ; ವಿನುತ: ಶ್ರೇಷ್ಠ; ಕುಶ: ಹುಲ್ಲು; ದರ್ಭೆ: ಹುಲ್ಲು; ಸಮಿದು: ಹೋಮಕ್ಕೆ ಬಳಸುವ ಸಣ್ಣ ಕಡ್ಡಿ; ಹೊರೆ: ಕಟ್ಟು; ಔಪಾಸನ: ಉಪಾಸನೆ; ಕೊಳವಿ: ಪೊಳ್ಳಾದ ಬಿದಿರಿನ ನಾಳ; ಬಣಗು: ತಿಳಿಗೇಡಿ, ಮಂದಮತಿ; ವಿಪ್ರ: ಬ್ರಾಹ್ಮಣ; ನೆನಹು: ಮನಸ್ಸು, ಆಲೋಚನೆ; ಘನ: ಗಟ್ಟಿ; ಸೌಭಾಗ್ಯ: ಪುಣ್ಯ, ಭಾಗ್ಯ; ತಿಲ: ಎಳ್ಳು

ಪದವಿಂಗಡಣೆ:
ಧನು +ತನಗೆ +ನೆಗಹಲ್ಕೆ+ ಕೃಷ್ಣಾ
ಜಿನವೊ +ಸಾಲಗ್ರಾಮ+ದೇವರೊ
ವಿನುತ +ತುಳಸಿಯೊ +ಕುಶವೊ +ದರ್ಭೆಯೊ +ಸವಿಧೆಗಳ+ ಹೊರೆಯೊ
ನೆನೆದ +ತಿಲವೋ +ಮೇಣಿದ್+ಔಪಾ
ಸನದ +ಕೊಳವಿಯೊ +ಬಣಗು+ ವಿಪ್ರನ
ನೆನಹ+ ನೋಡಿರೆ +ಘನವಲಾ+ ದ್ರೌಪದಿಯ +ಸೌಭಾಗ್ಯ

ಅಚ್ಚರಿ:
(೧) ನೆನೆದ, ನೆನಹ – ೩, ೫ ಸಾಲಿನ ಮೊದಲ ಪದಗಳು
(೨) ೮ ಬಗೆಯ ಹೋಲಿಕೆಗಳನ್ನು ನೀಡಿರುವುದು