ಪದ್ಯ ೧೪: ನಾರಾಯಣಾಸ್ತ್ರವು ಹೇಗೆ ತೋರಿತು?

ದನುಜಹರ ಮಂತ್ರವನು ಮನದಲಿ
ನೆನೆದು ಕೈ ನೀಡಿದನು ತುದಿಯಂ
ಬಿನಲಿ ತುರುಗಿದ ಕಿಡಿಯ ಬಿರುಕೇಸರಿಯ ಧಾಳಿಗಳ
ತನಿವೊಗರ ಬಲುವೊಗೆಯ ಹೊರಳಿಯ
ಕನಕರಸ ರೇಖಾವಳಿಯ ಮೈ
ಮಿನುಗುಗಳ ಹೊಂಗರಿಯ ನಾರಾಯಣ ಮಹಾಶರಕೆ (ದ್ರೋಣ ಪರ್ವ, ೧೯ ಸಂಧಿ, ೧೪ ಪದ್ಯ)

ತಾತ್ಪರ್ಯ:
ನಾರಾಯಣಾಸ್ತ್ರ ಮಮ್ತ್ರವನ್ನು ಮನಸ್ಸಿನಲ್ಲಿ ಜಪಿಸಿ, ತುದಿಯಿಂದ ಕಿಡಿಯುಗುಳುವ, ಕೆಂಪನೆಯ ಜ್ವಾಲೆಗಳು ಹೊರಹೊಮ್ಮುವ, ದಟ್ಟವಾಗಿ ಹೊಗೆ ಹಬ್ಬುವ, ಕನಕರೇಖೆಗಳಿಂದ ಕೂಡಿದ ನಾರಾಯಣಾಸ್ತ್ರಕ್ಕೆ ಅಶ್ವತ್ಥಾಮನು ಕೈನೀಡಿದನು.

ಅರ್ಥ:
ದನುಜ: ದಾನವ; ಹರ: ನಾಶ; ಮಂತ್ರ: ದೇವತಾ ಸ್ತುತಿ; ಮನ: ಮನಸ್ಸು; ನೆನೆ: ಜ್ಞಾಪಿಸು; ಕೈ: ಹಸ್ತ; ನೀಡು: ಒಡ್ಡು; ತುದಿ: ಅಗ್ರ; ಅಂಬು: ಬಾಣ; ತುರುಗು: ಸಂದಣಿ, ದಟ್ಟಣೆ; ಕಿಡಿ: ಬೆಂಕಿ; ಬಿರು: ಗಟ್ಟಿ; ಕೇಸರಿ: ಕೆಂಪು ಬಣ್ಣ; ಧಾಳಿ: ಲಗ್ಗೆ, ಮುತ್ತಿಗೆ; ತನಿ: ಚೆನ್ನಾಗಿ ಬೆಳೆದುದು; ತನಿವೊಗರು: ಹೆಚ್ಚಾದ ಕಾಂತಿ; ಬಲು: ಬಹಳ; ಹೊಗೆ: ಧೂಮ; ಹೊರಳಿ: ಗುಂಪು; ಕನಕ: ಚಿನ್ನ; ರಸ: ಸಾರ; ರೇಖೆ: ಗೆರೆ, ಗೀಟು; ಆವಳಿ: ಗುಂಪು; ಮೈ: ದೇಹ; ಮಿನುಗು: ಪ್ರಕಾಶ; ಹೊಂಗರಿ: ಚಿನ್ನದ ಗರಿ; ಮಹಾ: ಶ್ರೇಷ್ಠ; ಶರ: ಬಾಣ;

ಪದವಿಂಗಡಣೆ:
ದನುಜಹರ +ಮಂತ್ರವನು +ಮನದಲಿ
ನೆನೆದು +ಕೈ +ನೀಡಿದನು+ ತುದಿ+
ಅಂಬಿನಲಿ +ತುರುಗಿದ +ಕಿಡಿಯ +ಬಿರು+ಕೇಸರಿಯ +ಧಾಳಿಗಳ
ತನಿವೊಗರ+ ಬಲು+ವೊಗೆಯ +ಹೊರಳಿಯ
ಕನಕರಸ +ರೇಖಾವಳಿಯ +ಮೈ
ಮಿನುಗುಗಳ +ಹೊಂಗರಿಯ+ ನಾರಾಯಣ +ಮಹಾಶರಕೆ

ಅಚ್ಚರಿ:
(೧) ನಾರಾಯಣ ಎಂದು ಹೇಳಲು ದನುಜಹರ ಪದದ ಬಳಕೆ
(೨) ವೊಗರ, ವೊಗೆಯ – ಪದಗಳ ಬಳಕೆ

ಪದ್ಯ ೧೦: ಅರ್ಜುನನು ಕಂಡ ಕನಸಿನ ಮರ್ಮವೇನು?

ಕನಸನೀ ಹದನಾಗಿ ಕಂಡೆನು
ದನುಜಹರ ಬೆಸಸಿದರ ಫಲವನು
ನನಗೆನಲು ನಸುನಗುತ ನುಡಿದನು ದಾನವಧ್ವಂಸಿ
ನಿನಗೆ ಶೂಲಿಯ ಕರುಣವಾಯ್ತಿಂ
ದಿನಲಿ ಪಾಶುಪತಾಸ್ತ್ರ ನಿನ್ನದು
ದಿನದೊಳರಿ ಸೈಂಧವ ವಧವ್ಯಾಪಾರವಹುದೆಂದ (ದ್ರೋಣ ಪರ್ವ, ೯ ಸಂಧಿ, ೧೦ ಪದ್ಯ)

ತಾತ್ಪರ್ಯ:
ಅರ್ಜುನನು ಮಾತನಾಡುತ್ತಾ ತನ್ನ ಕನಸನ್ನು ಕೃಷ್ಣನಿಗೆ ವಿವರಿಸಿದನು. ಇದರ ಫಲವೇನೆಂದು ಕೃಷ್ಣನಲ್ಲಿ ಕೇಳಲು, ಶ್ರೀಕೃಷ್ಣನು ನಸುನಕ್ಕು, ನಿನಗೆ ಶಿವನ ಕರುಣೆ ದೊರಕಿತು. ಈ ದಿವಸ ಪಾಶುಪತಾಸ್ತ್ರವು ನಿನ್ನದು, ಇಂದು ಸೈಂಧವನ ವಧೆಯಾಗುತ್ತದೆ ಎಂದನು.

ಅರ್ಥ:
ಕನಸು: ಸ್ವಪ್ನ; ಹದ: ಸರಿಯಾದ ಸ್ಥಿತಿ; ಕಂಡು: ನೋಡು; ದನುಜ: ರಾಕ್ಷರ; ಹರ: ನಾಶ; ದನುಜಹರ: ಕೃಷ್ಣ; ಬೆಸ: ಕೆಲಸ, ಕಾರ್ಯ; ಫಲ: ಪ್ರಯೋಜನ; ನಸುನಗು: ಮಂದಸ್ಮಿತ; ನುಡಿ: ಮಾತು; ದಾನವ: ರಾಕ್ಷಸ; ಧ್ವಂಸಿ: ನಾಶ; ಶೂಲಿ: ಈಶ್ವರ; ಕರುಣ: ದಯೆ; ಅಸ್ತ್ರ: ಶಸ್ತ್ರ; ಅರಿ: ವೈರಿ; ವಧ: ಸಾಯಿಸು; ವ್ಯಾಪಾರ: ವ್ಯವಹಾರ;

ಪದವಿಂಗಡಣೆ:
ಕನಸನ್+ಈ+ ಹದನಾಗಿ +ಕಂಡೆನು
ದನುಜಹರ +ಬೆಸಸ್+ಇದರ +ಫಲವನು
ನನಗೆನಲು +ನಸುನಗುತ +ನುಡಿದನು +ದಾನವಧ್ವಂಸಿ
ನಿನಗೆ +ಶೂಲಿಯ +ಕರುಣವಾಯ್ತ್
ಇಂದಿನಲಿ +ಪಾಶುಪತಾಸ್ತ್ರ +ನಿನ್ನದು
ದಿನದೊಳ್+ಅರಿ +ಸೈಂಧವ +ವಧ+ವ್ಯಾಪಾರವಹುದೆಂದ

ಅಚ್ಚರಿ:
(೧) ದನುಜಹರ, ದಾನವಧ್ವಂಸಿ – ಕೃಷ್ಣನನ್ನು ಕರೆದ ಪರಿ
(೨) ನ ಕಾರದ ತ್ರಿವಳಿ ಪದ – ನನಗೆನಲು ನಸುನಗುತ ನುಡಿದನು

ಪದ್ಯ ೮೨: ಓಕುಳಿಯಾಟವನ್ನು ಯಾರು ಆಡಿದರು?

ಕನಕಮಣಿಗಳ ತೊಟ್ಟು ಜಾಜಿಯ
ನನೆಯ ಕಂಚುಳಿಕೆಯಲಿ ಮದನನ
ಮೊನೆಯ ಖಾಡಾಖಾಡಿಕಾತಿಯರೈದೆ ಹೊಯ್ಹೊಯ್ದು
ದನುಜಹರನರಸಿಯರು ಕುಂತೀ
ತನಯರರಸಿಯರೊಡನೆ ಮತ್ಸ್ಯನ
ವನಿತೆಯರು ಪಾಂಚಾಲಿನಿಯರೋಕುಳಿಯನಾಡಿದರು (ವಿರಾಟ ಪರ್ವ, ೧೧ ಸಂಧಿ, ೮೨ ಪದ್ಯ)

ತಾತ್ಪರ್ಯ:
ಚಿನ್ನ, ರತ್ನಗಳ ಆಭರಣಗಲನ್ನು ಇಟ್ಟು, ಜಾಜಿಯ ಮೊಗ್ಗಿನ ಬಣ್ಣದ ಕುಪ್ಪಸತೊಟ್ಟು, ಮನ್ಮಥನ ದಂಡಿನಂತೆ ಮನೋಹರ ರೂಪವುಳ್ಳ ಶ್ರೀಕೃಷ್ಣನ ಹೆಂಡತಿ, ಪಾಂಡವರ ಅರಸಿ, ಮತ್ಸ್ನ್ಯನ ಪಾಂಚಾಲನ ಪತ್ನಿಯರು ಓಕುಳಿಯಾಟವನ್ನಾಡಿದರು.

ಅರ್ಥ:
ಕನಕ: ಚಿನ್ನ; ಮಣಿ: ಬೆಲೆಬಾಳುವ ರತ್ನ; ತೊಟ್ಟು: ಧರಿಸು; ಜಾಜಿ: ಮಾಲತೀ ಪುಷ್ಪ; ನನೆ: ಮೊಗ್ಗು, ಮುಗುಳು; ಕಂಚುಳಿಕೆ: ಕುಪ್ಪಸ, ಅಂಗಿ; ಮದನ: ಮನ್ಮಥ; ಮೊನೆ: ಹರಿತವಾದುದು; ಖಾಡಾಖಾಡಿ: ಮಲ್ಲಯುದ್ಧ; ಕಾತಿ: ಗರತಿ, ಮುತ್ತೈದೆ; ಐದು: ಬಂದು ಸೇರು; ಹೊಯ್ದು: ಹೊಡೆದು; ದನುಜಹರ: ರಾಕ್ಷಸರನ್ನು ಸಂಹಾರ ಮಾಡಿದ (ಕೃಷ್ಣ); ಅರಸಿ: ರಾಣಿ; ತನಯ: ಮಕ್ಕಳು; ವನಿತೆ: ಹೆಣ್ಣು; ಓಕುಳಿ: ಬಣ್ಣದ ನೀರು; ಆಡು: ಕ್ರೀಡೆ;

ಪದವಿಂಗಡಣೆ:
ಕನಕ+ಮಣಿಗಳ+ ತೊಟ್ಟು +ಜಾಜಿಯ
ನನೆಯ +ಕಂಚುಳಿಕೆಯಲಿ +ಮದನನ
ಮೊನೆಯ +ಖಾಡಾಖಾಡಿ+ಕಾತಿಯರ್+ಐದೆ +ಹೊಯ್ಹೊಯ್ದು
ದನುಜಹರನ್+ಅರಸಿಯರು +ಕುಂತೀ
ತನಯರ್+ಅರಸಿಯರೊಡನೆ+ ಮತ್ಸ್ಯನ
ವನಿತೆಯರು +ಪಾಂಚಾಲಿನಿಯರ್+ಓಕುಳಿಯನ್+ಆಡಿದರು

ಅಚ್ಚರಿ:
(೧) ಓಕುಳಿಯನ್ನು ಆಡಿದ ಪರಿ – ಕನಕಮಣಿಗಳ ತೊಟ್ಟು ಜಾಜಿಯ ನನೆಯ ಕಂಚುಳಿಕೆಯಲಿ ಮದನನ ಮೊನೆಯ ಖಾಡಾಖಾಡಿಕಾತಿಯರೈದೆ ಹೊಯ್ಹೊಯ್ದು

ಪದ್ಯ ೩೩: ಪತ್ರವನ್ನು ಯಾರು ಓದಿದರು?

ಎನಲು ನಸುನಗೆಯಿಂದ ಕುಂತಿಯ
ತನುಜರಟ್ಟಿದ ಪಾವುಡಂಗಳ
ನನಿತುವನು ತೆಗೆಸಿದನು ಕೆಲದಲಿ ಸಂಧಿವಿಗ್ರಹಿಯ
ದನುಜಹರನೀಕ್ಷಿಸಲು ಲಿಖಿತವ
ನನುನಯದೊಳಳವಡಿಸಿ ಬಿನ್ನಹ
ವೆನುತ ನೇಮವ ಕೊಂಡು ಕಳಕಳವಡೆಗೆ ವಾಚಿಸಿದ (ವಿರಾಟ ಪರ್ವ, ೧೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಶ್ರೀಕೃಷ್ನನು ನಸುನಗುತ್ತಾ ಉಡುಗೊರೆಗಳನ್ನು ತೆಗೆಸಿ, ಪಕ್ಕದಲ್ಲಿದ್ದ ಸಂಧಿವಿಗ್ರಹಿಯನ್ನು ನೋಡಲು, ಅವನು ಆ ಓಲೆಯನ್ನು ತೆಗೆದುಕೊಂಡು ಆ ಪತ್ರವನ್ನು ಹೊಂದಿಸಿಕೊಂಡು ಬಿನ್ನಹ ಎಂದು ಹೇಳಿ ಓದಲಾರಂಭಿಸಲು, ಆಸ್ಥಾನದಲ್ಲಿ ಸದ್ದಡಗಿತು.

ಅರ್ಥ:
ನಸುನಗೆ: ಮಂದಸ್ಮಿತ; ತನುಜ: ಮಕ್ಕಳು; ಪಾವುಡ: ಬಟ್ಟೆ, ವಸ್ತ್ರ; ಅನಿತು: ಅಷ್ಟು; ತೆಗೆಸು: ಹೊರತರು; ಕೆಲ: ಪಕ್ಕ, ಮಗ್ಗುಲು; ಸಂಧಿವಿಗ್ರಹಿ: ವಿದೇಶಾಂಗ ಸಚಿವ; ದನುಜಹರ: ರಾಕ್ಷಸರನ್ನು ಸಂಹರಿಸಿದ; ಈಕ್ಷಿಸು: ನೋಡು; ಲಿಖಿತ: ಬರೆದ; ಅನುನಯ: ಪ್ರೀತಿ; ಅಳವಡಿಸು: ಹೊಂದಿಸು; ಬಿನ್ನಹ: ಕೋರಿಕೆ; ನೇಮ: ನಿಯಮ; ಕಳಕಳ: ಉದ್ವಿಗ್ನತೆ; ವಾಚಿಸು: ಹೇಳು; ಅಡಗು: ನಿಲ್ಲು;

ಪದವಿಂಗಡಣೆ:
ಎನಲು +ನಸುನಗೆಯಿಂದ +ಕುಂತಿಯ
ತನುಜರ್+ಅಟ್ಟಿದ +ಪಾವುಡಂಗಳನ್
ಅನಿತುವನು+ ತೆಗೆಸಿದನು +ಕೆಲದಲಿ+ ಸಂಧಿವಿಗ್ರಹಿಯ
ದನುಜಹರನ್+ಈಕ್ಷಿಸಲು +ಲಿಖಿತವನ್
ಅನುನಯದೊಳ್+ಅಳವಡಿಸಿ+ ಬಿನ್ನಹ
ವೆನುತ+ ನೇಮವ+ ಕೊಂಡು +ಕಳಕಳವ್+ಅಡೆಗೆ +ವಾಚಿಸಿದ

ಅಚ್ಚರಿ:
(೧) ಕೃಷ್ಣನನ್ನು ದನುಜಹರ, ಪಾಂಡವರನ್ನು ಕುಂತಿಯ ತನುಜರ್ ಎಂದು ಕರೆದಿರುವುದು