ಪದ್ಯ ೪೩: ವಿಷ್ಣುವು ಯಾವ ರೂಪದಲ್ಲಿ ಹಿರಣ್ಯಕಶಿಪುವಿನ ಮುಂದೆ ಬಂದನು?

ಕಾದುದೀತನ ನಾಮವಾ ಪ್ರ
ಹ್ಲಾದನಾಸರು ಬೇಸರನು ಬಳಿ
ಕೀ ದಯಾಂಬುಧಿ ದನುಜಪತಿ ದಿಟ್ಟಿಸಿದ ಕಂಬದಲಿ
ಆದುದಾವಿರ್ಭಾವ ಸಿಡಿಲಿನ
ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ (ಸಭಾ ಪರ್ವ, ೧೦ ಸಂಧಿ, ೪೩ ಪದ್ಯ)

ತಾತ್ಪರ್ಯ:
ಪ್ರಹ್ಲಾದನಿಗೆ ತಂದೆಯಿಂದಾದ ಹಿಂಸೆ ಬೇಸರಗಳನ್ನು ಶ್ರೀಹರಿಯ ನಾಮಸ್ಮರಣೆಯು ಕಳೆದವು. ಬಳಿಕ ಹಿರಣ್ಯಕಶಿಪುವು ಈ ಕಂಬದಲಿ ನಿನ್ನ ಶ್ರೀಹರಿಯನ್ನು ತೋರಿಸು ಎನ್ನುತ್ತಾ ದೃಷ್ಟಿಸಿದ ಕಂಬದಲ್ಲಿ ರೌದ್ರನಾದ ಶ್ರೀನರಸಿಂಹನ ಆವಿರ್ಭಾವವಾಯಿತು. ಆ ನರಸಿಂಹಸ್ವಾಮಿಯ ಕಣ್ನುಗಳು ಸಿಡಿಲಿನ ಸಹೋದರರಂತಿದ್ದವು, ಅವನ ಹಣೆಯ ಬೆಂಕಿಯು ಬೀದಿಯನ್ನೇ ಉರಿಸಿದವು.

ಅರ್ಥ:
ಕಾದು: ಹೋರಾದು; ನಾಮ: ಹೆಸರು; ಅಸುರ: ರಾಕ್ಷಸ; ಬೇಸರ: ಬೇಜಾರು, ದುಃಖ; ಬಳಿಕ: ನಂತರ; ದಯ: ಕರುಣೆ; ಅಂಬುಧಿ: ಸಾಗರ; ದನುಜ: ರಾಕ್ಷಸ; ಪತಿ: ಒಡೆಯ; ದಿಟ್ಟಿಸು: ನೋಡು; ಕಂಬ: ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಆವಿರ್ಭಾವ: ಪ್ರಕಟವಾಗುವುದು; ಸಿಡಿಲು: ಚಿಮ್ಮು; ಸಹೋದರ: ತಮ್ಮ/ಅಣ್ಣ; ಕಣ್ಣು: ನಯನ; ಭಾಳ: ಹಣೆ; ಬೀದಿ: ರಸ್ತೆ; ಕಿಚ್ಚು: ಬೆಂಕಿ; ರೌದ್ರ: ಭಯಂಕರ; ರೂಪ: ಆಕಾರ;

ಪದವಿಂಗಡಣೆ:
ಕಾದುದ್+ಈತನ +ನಾಮವ್+ಆ+ ಪ್ರ
ಹ್ಲಾದನ್+ಅಸರು +ಬೇಸರನು +ಬಳಿಕ್
ಈ+ ದಯಾಂಬುಧಿ +ದನುಜಪತಿ +ದಿಟ್ಟಿಸಿದ +ಕಂಬದಲಿ
ಆದುದ್+ಆವಿರ್ಭಾವ +ಸಿಡಿಲಿನ
ಸೋದರದ+ ಕಣ್ಣುಗಳ +ಭಾಳದ
ಬೀದಿ+ಕಿಚ್ಚಿನ +ರೌದ್ರದಲಿ +ನರಸಿಂಹ+ ರೂಪಾಗಿ

ಅಚ್ಚರಿ:
(೧) ದ ಕಾರದ ತ್ರಿವಳಿ ಪದ – ದಯಾಂಬುಧಿ ದನುಜಪತಿ ದಿಟ್ಟಿಸಿದ
(೨) ನರಸಿಂಹನ ವರ್ಣನೆ: ಆದುದಾವಿರ್ಭಾವ ಸಿಡಿಲಿನ ಸೋದರದ ಕಣ್ಣುಗಳ ಭಾಳದ
ಬೀದಿಗಿಚ್ಚಿನ ರೌದ್ರದಲಿ ನರಸಿಂಹ ರೂಪಾಗಿ