ಪದ್ಯ ೩: ಕರ್ಣನು ಯಾವ ಕೀರ್ತಿಯನ್ನು ಕಳೆದುಕೊಳ್ಳುವುದಿಲ್ಲನೆಂದ?

ಆಡಿದರೆ ಚಿತ್ತದಲಿ ಖತಿಯನು
ಮಾಡಬೇಡೆಲೆ ತಾತ ತನಗೀ
ಗೂಡಿನಲಿ ಸುಖವಿಲ್ಲ ಕಾಮಾದಿಗಳಿಗಾಶ್ರಯದ
ಮಾಡಿ ದೃಢವನು ಶಿಬಿದಧೀಚಿಯ
ಕೂಡಿದೀ ಜೀಮೂತವಾಹನ
ರೂಢಿಗಿವರೊಳಗಿರ್ದ ಕೀರ್ತಿಯನಳಿವನಲ್ಲೆಂದ (ಅರಣ್ಯ ಪರ್ವ, ೨೩ ಸಂಧಿ, ೩ ಪದ್ಯ)

ತಾತ್ಪರ್ಯ:
ತಂದೆ, ನನ್ನ ಮಾತನ್ನು ಕೇಳಿ ನೀನು ಸಿಟ್ಟಾಗಬೇಡ. ಕಾಮಾದಿಗಳಿಗೆ ಆಶ್ರಯವಾದ ಈ ದೇಹವೆಂಬ ಗೂಡಿನಲ್ಲಿ ಸುಖವಿಲ್ಲ. ಶಿಬಿ, ದಧೀಚಿ, ಜೀಮೂತವಾಹನರು ಈ ಲೋಕದಲ್ಲಿ ದಾನಶೂರರೆಂದು ಪ್ರಸಿದ್ಧಿಯಾಗಿರುವರಷ್ಟೇ, ಅಂತಹ ಕೀರ್ತಿಯನ್ನು ನಾನು ಕಳೆದುಕೊಳ್ಳುವುದಿಲ್ಲ.

ಅರ್ಥ:
ಆಡು: ಮಾತಾಡು; ಚಿತ್ತ: ಮನಸ್ಸು; ಖತಿ: ಕೋಪ; ತಾತ: ತಮ್ದೆ; ಗೂಡು: ಮನೆ; ಸುಖ: ಸಂತಸ; ಕಾಮ: ಆಸೆ; ಆದಿ: ಮುಂತಾದ; ಆಶ್ರಯ: ನೆಲೆ; ದೃಢ: ಗಟ್ಟಿಯಾದ; ಕೀರ್ತಿ: ಯಶಸ್ಸು; ಅಳಿ: ನಾಶ;

ಪದವಿಂಗಡಣೆ:
ಆಡಿದರೆ +ಚಿತ್ತದಲಿ +ಖತಿಯನು
ಮಾಡಬೇಡ್+ಎಲೆ +ತಾತ+ ತನಗೀ
ಗೂಡಿನಲಿ+ ಸುಖವಿಲ್ಲ+ ಕಾಮಾದಿಗಳಿಗ್+ಆಶ್ರಯದ
ಮಾಡಿ +ದೃಢವನು +ಶಿಬಿ+ದಧೀಚಿಯ
ಕೂಡಿದ್+ಈ +ಜೀಮೂತವಾಹನ
ರೂಢಿಗ್+ಇವರೊಳಗಿರ್ದ +ಕೀರ್ತಿಯನ್+ಅಳಿವನಲ್ಲೆಂದ

ಅಚ್ಚರಿ:
(೧) ಕರ್ಣನು ನೆನೆದ ಆದರ್ಶ ವ್ಯಕ್ತಿಗಳು – ಶಿಬಿ, ದಧೀಚಿ, ಜೀಮೂತವಾಹನ

ಪದ್ಯ ೧೦: ಲೋಮಶ ಮುನಿಯು ಯಾವ ಕಥೆಯನ್ನು ಧರ್ಮಜನಿಗೆ ಹೇಳಿದರು?

ಬಳಿಕ ಲೋಮಶ ಸಹಿತ ನೃಪಕುಲ
ತಿಲಕ ಬಂದನಗಸ್ತ್ಯನಾಶ್ರಮ
ದೊಳಗೆ ಬಿಟ್ಟನು ಪಾಳೆಯವನಾ ಮುನಿಯಚರಿತವನು
ತಿಳುಹಿದನು ಲೋಮಶನು ವೃತ್ರನ
ಕಲಹಕೆಂದು ದಧೀಚಿ ಮುನಿಪತಿ
ಯೆಲುವನಮರರು ಬೇಡಿದುದನರುಹಿದನು ಜನಪತಿಗೆ (ಅರಣ್ಯ ಪರ್ವ, ೧೦ ಸಂಧಿ, ೧೦ ಪದ್ಯ)

ತಾತ್ಪರ್ಯ:
ನಂತರ ಲೋಮಶ ಮುನಿಯ ಜೊತೆ ಧರ್ಮರಾಯನು ಅಗಸ್ತ್ಯರ ಆಶ್ರಮಕ್ಕೆ ಬಂದು ಅಲ್ಲಿ ಬೀಡು ಬಿಟ್ಟನು. ಲೋಮಶನು ಅಗಸ್ತ್ಯನ ಚರಿತ್ರೆಯನ್ನು ಹೇಳಿದ ಬಳಿಕ ದಧೀಚಿಯ ಎಲುಬನ್ನು ದೇವತೆಗಳು ಬೇಡಿದ ಕಥೆಯನ್ನು ಹೇಳಿದನು.

ಅರ್ಥ:
ಬಳಿಕ: ನಂತರ; ಸಹಿತ: ಜೊತೆ; ನೃಪ: ರಾಜ; ಕುಲ: ವಂಶ; ತಿಲಕ: ಶ್ರೇಷ್ಠ; ನೃಪಕುಲತಿಲಕ: ಶ್ರೇಷ್ಠನಾದ ರಾಜ; ಆಶ್ರಮ: ಕುಟೀರ; ಪಾಳೆಯ: ಬೀಡು, ಶಿಬಿರ; ಮುನಿ: ಋಷಿ; ಚರಿತ: ವಿಚಾರ, ಕಥೆ; ತಿಳುಹು: ತಿಳಿಸು; ಕಲಹ: ಜಗಳ; ಮುನಿಪತಿ: ಋಷಿ; ಯೆಲುಬು: ಮೂಳೆ; ಅಮರ: ದೇವತೆ; ಬೇಡು: ಕೇಳು; ಅಉಹು: ತಿಳಿಸು; ಜನಪತಿ: ರಾಜ;

ಪದವಿಂಗಡಣೆ:
ಬಳಿಕ +ಲೋಮಶ +ಸಹಿತ +ನೃಪಕುಲ
ತಿಲಕ +ಬಂದನ್+ಅಗಸ್ತ್ಯನ್+ಆಶ್ರಮ
ದೊಳಗೆ +ಬಿಟ್ಟನು +ಪಾಳೆಯವನಾ+ ಮುನಿಯ+ಚರಿತವನು
ತಿಳುಹಿದನು +ಲೋಮಶನು +ವೃತ್ರನ
ಕಲಹಕೆಂದು +ದಧೀಚಿ +ಮುನಿಪತಿ
ಯೆಲುವನ್+ಅಮರರು +ಬೇಡಿದುದನ್+ಅರುಹಿದನು +ಜನಪತಿಗೆ

ಅಚ್ಚರಿ:
(೧) ಯುಧಿಷ್ಠಿರನನ್ನು ನೃಪಕುಲತಿಲಕ ಎಂದು ಕರೆದಿರುವುದು

ಪದ್ಯ ೧೦೭: ದರ್ಭೆಯು ಹೇಗೆ ಹೊರಹೊಮ್ಮಿತು?

ಪಾಕಶಾಸನನೈದೆ ವೃತ್ರನ
ಢಾಕುಗೆಡಿಸಿ ದಧೀಚಿಯಸ್ಥಿಯ
ಲೌಕಿ ಹೊಯ್ಯಲು ದಾನವನತನು ನೀರೊಳಡೆಗೆಡೆಯೆ
ತೂಕಗುಂದಿ ಜಲಾಧಿದೇವತೆ
ಯಾ ಕಪರ್ದಿಯ ಕರುಣದೊಳು ದ
ರ್ಭಾಕೃತಿಯ ಕೈಕೊಂಡುದವನೀಶ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೧೦೭ ಪದ್ಯ)

ತಾತ್ಪರ್ಯ:
ದರ್ಭೆಯು ಹೇಗೆ ಜಗಕ್ಕೆ ಬಂತೆಂದು ಈ ಪದ್ಯದಲ್ಲಿ ವಿವರಿಸಿದೆ. ಇಂದ್ರನು ವೃತ್ರನ ಮೇಳೆ ಲಗ್ಗೆ ಹಾಕಿ ದಧೀಚಿಯ ಮೂಳೆಗಳಿಂದ ಮಾಡಿದ ವಜ್ರಾಯುಧದಿಂದ ಅವನ ಮೇಲೆ ಪ್ರಯೋಗ ಮಾಡಲು, ಆ ರಾಕ್ಷಸನು ನೀರೊಳಗೆ ಬಿದ್ದನು. ಆಗ ಜಲದ ಅಧಿದೇವತೆಯು ಶಿವನಲ್ಲಿ ಮೊರೆಹೋಗಲು, ಶಿವನು ಅವರ ಮೇಲೆ ಕರುಣೆತೋರಿ ದರ್ಭೆಯನ್ನಾಗಿ ಪರಿವರ್ತಿಸಿದನು ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಪಾಕಶಾಸನ: ಇಂದ್ರ; ಐದೆ: ವಿಶೇಷವಾಗಿ; ಢಾಕು: ಲಗ್ಗೆ; ಅಸ್ಥಿ: ಮೂಳೆ; ಲೌಕಿಕ: ಲೋಕಕ್ಕೆ ಸಂಬಂಧಿಸಿದುದು; ಹೊಯ್ಯು: ಹೊಡೆ, ಬಡಿ; ದಾನವ: ರಾಕ್ಷಸ; ತನು: ಶರೀರ; ನೀರು: ಜಲ; ಅಡೆಗೆಡೆ: ಅಡ್ಡ ಬೀಳು; ತೂಕ: ಭಾರ;ಜಲ: ನೀರು; ಅಧಿದೇವತೆ: ಮುಖ್ಯವಾದ ದೇವ; ಕಪರ್ದಿ: ಜಟಾಜೂಟವುಳ್ಳವ-ಶಿವ; ಕರುಣ: ದಯೆ; ದರ್ಭೆ: ಮೊನಚಾದ ತುದಿ ಯುಳ್ಳ ಒಂದು ಬಗೆಯ ಹುಲ್ಲು, ಕುಶ; ಆಕೃತಿ: ರೂಪ; ಅವನೀಶ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪಾಕಶಾಸನನ್+ಐದೆ +ವೃತ್ರನ
ಢಾಕು+ಗೆಡಿಸಿ +ದಧೀಚಿಯ+ಅಸ್ಥಿಯ
ಲೌಕಿ +ಹೊಯ್ಯಲು +ದಾನವನ+ತನು +ನೀರೊಳ್+ಅಡೆಗೆಡೆಯೆ
ತೂಕಗುಂದಿ+ ಜಲಾಧಿದೇವತೆ
ಯಾ +ಕಪರ್ದಿಯ+ ಕರುಣದೊಳು +ದ
ರ್ಭಾಕೃತಿಯ+ ಕೈಕೊಂಡುದ್+ಅವನೀಶ +ಕೇಳೆಂದ

ಅಚ್ಚರಿ:
(೧) ಪಾಕಶಾಸನ, ವೃತ್ರ, ದಧೀಚಿ, ಕರ್ಪದಿ – ಹೆಸರುಗಳ ಪರಿಚಯ

ಪದ್ಯ ೭೯: ಯಾವುದನ್ನು ಒಳಗೂಡಿಸಿಕೊಂಡರೆ ಅದು ಉತ್ತಮ ಜೀವನ?

ಬಲಿಯ ರಾಜ್ಯ ವಿಭೀಷಣನ ಸಿರಿ
ಜಲನಿಧಿಯ ಗಾಂಭೀರ್ಯ ಬಾಣನ
ಬಲಹು ಹನುಮಾನುವಿನ ಭುಜಬಲ ವೀರರಾಘವನ
ಛಲ ದಧೀಚಿಯ ದಾನ ಪಾರ್ಥನ
ಕೆಳೆ ಯುಧಿಷ್ಠಿರ ನೃಪನ ಸೈರಣೆ
ಗಳವಡುವ ಬದುಕುಳ್ಳಡದು ವಿಖ್ಯಾತಿ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೭೯ ಪದ್ಯ)

ತಾತ್ಪರ್ಯ:
ಉತ್ತಮರಾಗಲು ಯಾವ ಗುಣವನ್ನು ಅನುಸರಿಸಬೇಕೆಂದು ಇಲ್ಲಿ ಹೇಳಲಾಗಿದೆ. ಬಲಿ ಚಕ್ರವರ್ತಿಯ ರಾಜ್ಯ, ವಿಭೀಷಣನ ಐಶ್ವರ್ಯ, ಸಮುದ್ರದ ಗಾಂಭೀರ್ಯ, ಬಾಣನ ಶೌರ್ಯ, ಹನುಮಂತನ ಬಾಹುಬಲ, ರಾಮನ ಛಲ, ದಧೀಚಿಯ ದಾನದ ಗುಣ, ಪಾರ್ಥನ ಸ್ನೇಹದ ಗುಣ, ಯುಧಿಷ್ಠಿರನ ಸಹನೆ ಈ ಗುಣಗಳನ್ನು ಹೊಂದಿಸಿಕೊಳ್ಳುವವನೇ ಉತ್ತಮ ಖ್ಯಾತಿಯನ್ನು ಹೊಂದುತ್ತಾನೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ತಿಳಿಸಿದರು.

ಅರ್ಥ:
ಬಲಿ: ಚಕ್ರವರ್ತಿಯ ಹೆಸರು; ರಾಜ್ಯ: ರಾಷ್ಟ್ರ, ದೇಶ; ಸಿರಿ: ಸಂಪತ್ತು, ಐಶ್ವರ್ಯ; ಜಲನಿಧಿ: ಸಮುದ್ರ; ಗಾಂಭೀರ್ಯ: ಆಳ, ಘನತೆ; ಬಾಣ: ಬಲೀಂದ್ರನ ಮಗ; ಬಲುಹು: ಬಲ, ಶಕ್ತಿ; ಭುಜಬಲ: ತೋಳ್ಬಲ, ಶಕ್ತಿ; ವೀರ: ಕಲಿ, ಶೂರ; ರಾಘವ: ರಾಮ; ಛಲ: ದೃಢ ನಿಶ್ಚಯ; ದಾನ: ನೀಡು; ಕೆಳೆ: ಸ್ನೇಹ, ಗೆಳೆತನ; ನೃಪ: ರಾಜ; ಸೈರಣೆ: ತಾಳ್ಮೆ, ಸಹನೆ; ಅಳವಡು: ಹೊಂದು, ಸೇರು, ಕೂಡು; ಬದುಕು: ಜೀವಿಸು; ವಿಖ್ಯಾತಿ: ಪ್ರಸಿದ್ಧ; ಕೇಳು: ಆಲಿಸು;

ಪದವಿಂಗಡಣೆ:
ಬಲಿಯ +ರಾಜ್ಯ +ವಿಭೀಷಣನ +ಸಿರಿ
ಜಲನಿಧಿಯ +ಗಾಂಭೀರ್ಯ +ಬಾಣನ
ಬಲಹು +ಹನುಮಾನುವಿನ+ ಭುಜಬಲ+ ವೀರ+ರಾಘವನ
ಛಲ +ದಧೀಚಿಯ +ದಾನ +ಪಾರ್ಥನ
ಕೆಳೆ+ ಯುಧಿಷ್ಠಿರ +ನೃಪನ +ಸೈರಣೆಗ್
ಅಳವಡುವ +ಬದುಕುಳ್ಳಡ್+ಅದು +ವಿಖ್ಯಾತಿ +ಕೇಳೆಂದ

ಅಚ್ಚರಿ:
(೧) ಬಲಿ, ವಿಭೀಷಣ, ಜಲನಿಧಿ, ಬಾಣ, ಹನುಮಂತ, ರಾಮ, ದಧೀಚಿ, ಪಾರ್ಥ, ಯುಧಿಷ್ಠಿರ – ೯ ಗುಣಗಳನ್ನು ಉಪಮಾನದ ಮೂಲಕ ತಿಳಿಸುವ ಪದ್ಯ

ಪದ್ಯ ೧೯: ಕುಂತಿ ಯಾವ ಉದಾಹರಣೆ ನೀಡಿ ತನ್ನ ಮಗನನ್ನು ಕಳುಹಿಸಲು ಒಪ್ಪಿಸಿದಳು?

ಏನನಿತ್ತು ದಧೀಚಿ ಲೋಗರ
ಹಾನಿಯನು ಕಾಯಿದನು ಶಿಬಿತಾ
ನೇನನಿತ್ತನು ಕೇಳಿದೈ ಜೀಮೂತವಾಹನನು
ಏನ ಮಾಡಿದನೆಂದು ನೀನಿದ
ನೇನುವನು ಕೇಳ್ದರಿಯಲಾ ಮ
ತ್ಸೂನುವನು ನಿನ್ನವಸರಕೆ ಕೊಳ್ಳೆಂದಳಾ ಕುಂತಿ (ಆದಿ ಪರ್ವ, ೧೦ ಸಂಧಿ, ೧೯ ಪದ್ಯ)

ತಾತ್ಪರ್ಯ:
ಬ್ರಾಹ್ಮಣನು ಕುಂತಿ ನೀವು ದೇವತೆಯೆ ಸರಿ ಎಂದು ವಿನಮ್ರದಿಂದ ಹೇಳಲು, ಕುಂತಿ ಆ ಬ್ರಾಹ್ಮಣನಿಗೆ ಅರ್ಥಮಾಡಿಸಲು ಕೆಲ ಉದಾಹರಣೆಗಳನ್ನು ನೀಡಿದಳು, ಏನನ್ನು ನೀಡಿ ದಧೀಚಿಯು ಲೋಕದ ಹಾನಿಯನ್ನು ತಪ್ಪಿಸಿದನು (ದಧೀಚಿಯು ತನ್ನ ಮೂಳೆಗಳನ್ನೇ ನೀಡಿ ದೇವತೆಗಳಿಗೆ ಆಯುಧಗಳನ್ನು ಒದಗಿಸಿದನು), ಶಿಬಿಯು ಏನನಿತ್ತನು? (ಶಿಬಿಯು ತನ್ನ ಮಾಂಸವನ್ನೇ ನೀಡಿ ಪಾರಿವಾಳವನ್ನು ರಕ್ಷಿಸಿದನು), ಜೀಮೂತವಾಹನನು ಏನನ್ನು ನೀಡಿದನು (ಜೀಮೂತವಾಹನನು ತನ್ನ ದೇಹವನ್ನೇ ನೀಡಿ ನಾಗಗಳನ್ನು ರಕ್ಷಿಸಿದನು). ಹೀಗೆ ಈ ಮಹಾಪುರುಷರು ತಮ್ಮ ದೇಹವನ್ನೆ ಲೋಕಕಲ್ಯಾಣಕ್ಕಾಗಿ ನೀಡಿರುವಾಗ, ನನ್ನ ಮಗ ನಿಮ್ಮ ಸಹಾಯಕ್ಕೆ ಬರುವುದು ಒಳಿತೆ, ಇದನ್ನು ನೀವು ಸ್ವೀಕರಿಸಿ ಎಂದು ಹೇಳಿದಳು.

ಅರ್ಥ:
ಏನು: ಪ್ರಶ್ನಾರ್ಥಕ ಪದ; ಲೋಗ: ಲೋಕ, ಜಗತ್ತು; ಹಾನಿ: ಕೆಡಕು; ಕಾಯಿ: ರಕ್ಷಿಸು; ಸೂನು: ಮಗ;ಅವಸರ: ಸನ್ನಿವೇಶ, ಸಮಯ; ಕೊಳ್ಳು: ತೆಗೆದುಕೊ

ಪದವಿಂಗಡನೆ:
ಏನನ್+ಇತ್ತು +ದಧೀಚಿ +ಲೋಗರ
ಹಾನಿಯನು +ಕಾಯಿದನು +ಶಿಬಿ+ತಾನ್
ಏನನ್+ಇತ್ತನು+ ಕೇಳಿದೈ +ಜೀಮೂತವಾಹನನು
ಏನ+ ಮಾಡಿದನೆಂದು +ನೀನ್+ಇದನ್
ನಏನುವನು +ಕೇಳ್ದರಿಯಲಾ+ ಮತ್
ಸೂನುವನು+ ನಿನ್ನ್+ಅವಸರಕೆ+ ಕೊಳ್ಳ್+ಎಂದಳಾ +ಕುಂತಿ

ಅಚ್ಚರಿ:
(೧) ಏನ್- ೧,೩,೪,೫ ಸಾಲಿನ ಮೊದಲ ಪದ
(೨) ದಧೀಚಿ, ಶಿಬಿ, ಜೀಮೂತವಾಹನ ಬಗ್ಗೆ – ಉಪಮಾನವಾಗಿ ವರ್ಣಿಸಿರುವುದು

ಪದ್ಯ ೨೬: ಶಾಲಿಹೋತ್ರರ ಆಶ್ರಮದಲ್ಲಿ ಯಾವ ವಿದ್ಯೆಗಳನ್ನು ಪಾಂಡವರು ಕಲಿತರು?

ಈ ಧರಿತ್ರಿಯಲಶ್ವಹೃದಯವ
ನೋದಿಸಿದ ಹದಿನಾರು ಮಾತ್ರೆಯ
ನಾ ದಯಾಂಬುಧಿ ಬಾದರಾಯಣ ತನಗೆ ಸೂಚಿಸಿದ
ಹಾದಿಯಲಿ ಪಾಂಡವರಿಗರುಹಿದ
ವೇದನಿಧಿಯಾ ಶಾಲಿಹೋತ್ರನು
ಆ ದಧೀಚಿಯಲರಿತ ಗೌತಮಪ್ರೋಕ್ತವಿದ್ಯೆಗಳ (ಆದಿ ಪರ್ವ,೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಶಾಲಿಹೋತ್ರನು ಹದಿನಾರು ಕಲೆ (ಮಾತ್ರೆ)ಗಳ ಅಶ್ವಹೃದಯವನ್ನು ತಿಳಿಸಿಕೊಟ್ಟನು. ವ್ಯಾಸರು ತನಗೆ ಕೊಟ್ಟ ಸೂಚನೆಗನುಸಾರವಾಗಿ, ಪಾಂಡವರಿಗೆ ಗೌತಮನು ದಧೀಚಿಗೆ ತಿಳಿಸಿಕೊಟ್ಟ ಮಧುವಿದ್ಯೆ (ಬ್ರಹ್ಮ ವಿದ್ಯೆ) ಪ್ರವರ್ಗ್ಯವಿದ್ಯೆ, ಧರ್ಮಶಾಸ್ತ್ರಗಳನ್ನು ಬೋಧಿಸಿದನು.

ಅರ್ಥ:
ಅಶಹೃದಯ: ಕುದುರೆಯನ್ನು ಕುರಿತ ಶಾಸ್ತ್ರಜ್ಞಾನ; ಧರಿತ್ರಿ: ಭೂಮಿ; ಮಾತ್ರೆ:ಅಂಶ; ದಯ: ಕರುಣೆ, ಕೃಪೆ; ಅಂಬುಧಿ: ಸಾಗರ; ಬಾದರಾಯಣ: ವ್ಯಾಸ; ಸೂಚಿಸು: ತೋರಿಸು; ಹಾದಿ: ಮಾರ್ಗ; ಅರುಹು: ತಿಳಿ; ವೇದ: ಜ್ಞಾನ; ನಿಧಿ: ಸಂಪತ್ತು; ಅರಿ: ತಿಳಿ; ಪ್ರೋಕ್ತ: ತಿಳಿಸಿದುದು, ಹೇಳಿದುದು; ವಿದ್ಯೆ: ಜ್ಞಾನ;

ಪದವಿಂಗಡನೆ:
ಈ +ಧರಿತ್ರಿಯಲ್+ಅಶ್ವಹೃದಯವನ್
ಓದಿಸಿದ+ ಹದಿನಾರು +ಮಾತ್ರೆಯನ್
ಆ +ದಯಾಂಬುಧಿ +ಬಾದರಾಯಣ+ ತನಗೆ +ಸೂಚಿಸಿದ
ಹಾದಿಯಲಿ+ ಪಾಂಡವರಿಗ್+ಅರುಹಿದ
ವೇದನಿಧಿ+ಆ+ ಶಾಲಿಹೋತ್ರನು
ಆ +ದಧೀಚಿಯಲ್+ಅರಿತ+ ಗೌತಮ+ಪ್ರೋಕ್ತ+ವಿದ್ಯೆಗಳ

ಅಚ್ದರಿ:
(೧) ಈ, ಆ, ಆ – ಸ್ವರಗಳಿಂದ ೧, ೩, ೬ ಸಾಲುಗಳ ಪ್ರಾರಂಭ
(೨) ವ್ಯಾಸ, ದಧೀಚಿ, ಗೌತಮ, ಶಾಲಿಹೋತ್ರ – ಮುನಿಗಳ ಹೆಸರುಗಳ ಪ್ರಯೋಗ