ಪದ್ಯ ೧೭: ಬೇಡನು ಭೀಮನಿಗೆ ಏನು ಹೇಳಿದನು?

ಮೇಹುಗಾಡಿನೊಳವರ ಮೈಮಿಗೆ
ಸೋಹಿದರೆ ಸುವ್ವಲೆಯ ಸುಬ್ಬಲೆ
ಯಾಹವದಲೇ ತೋಳ ತೆಕ್ಕೆಯ ತೋಟ ತೇಗುವರೆ
ತೋಹಿನಲಿ ತೊದಳಾಗಿ ಗೋರಿಯ
ಗಾಹಿನಲಿ ಗುರಿ ಗಡಬಡಿಸೆ ಹುಲು
ಸಾಹಸಕ್ಕಂಜುವೆವು ನೀನೇಳೆಂದನಾ ಶಬರ (ಅರಣ್ಯ ಪರ್ವ, ೧೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ಮೇಯುವ ಕಾಡಿನಲ್ಲಿ ಅವುಗಳನ್ನು ಸೋಹಿಕೊಂಡು ಬಂದರೆ ಅವುಗಳು ಗುಂಪುಗುಂಪಾಗಿ ತೆಕ್ಕೆಗೆ ಸಿಗುತ್ತವೆ. ಅವನ್ನು ಹೊಡೆಯಲು ಹೋದರೆ ಅವು ಮರಗಳ ಗುಂಪಿನಲ್ಲಿ ಸೇರಿಕೊಂಡು ಮಾಯವಾಗುತ್ತವೆ. ಹಾಡು ಹೇಳಿ ಆಕರ್ಷಿಸಲು ಹೋದರೆ ಆಗುವುದಿಲ್ಲ, ನಾವಿಟ್ಟಗುರಿ ಹೆಚ್ಚು ಕಡಿಮೆಯಾಗುತ್ತದೆ. ಅವುಗಳ ಕಾಟ ಹೆಚ್ಚಾದರೂ ಸಾಹಸದಿಂದ ಯಾವ ಪ್ರಯೊಜನವೂ ಆಗದು. ಆದುದರಿಂದ ಬೇಟೆಗೆ ನೀನೇ ಬಾ ಎಂದು ಬೇಡನು ಭೀಮನಿಗೆ ಹೇಳಿದನು.

ಅರ್ಥ:
ಮೇಹು: ಮೇಯುವ; ಕಾಡು: ಕಾನನ, ಅರಣ್ಯ; ಸೋಹು: ಅಡಗಿರುವ ಪ್ರಾಣಿಗಳನ್ನು ಪೊದೆ ಗಳಿಂದ ಎಬ್ಬಿಸಿ ಆಡುವ ಒಂದು ಬಗೆಯ ಬೇಟೆ; ಸುವ್ವಲೆ, ಸುಬ್ಬಲೆ: ಒಂದು ಬಗೆಯಾದ ಬಲೆ; ತೋಳ: ವೃಕ; ತೆಕ್ಕೆ: ಗುಂಪು; ತೋಟಿ: ಕಲಹ, ಜಗಳ; ತೇಗು: ತಿಂದು ಮುಗಿಸು, ಏಗು; ತೋಹು: ಮರಗಳ ಗುಂಪು, ಸಮೂಹ, ತೋಪು; ತೊದಳು: ಉಗ್ಗು; ಗೋರಿ: ಬೇಟೆಯಲ್ಲಿ ಜಿಂಕೆಗಳನ್ನು ಮರುಳುಗೊಳಿ ಸಲು ಬೇಟೆಗಾರರು ಹಾಡುವ ಹಾಡು; ಗಾಹು: ಮೋಸ, ವಂಚನೆ; ಗುರಿ: ಈಡು, ಲಕ್ಷ್ಯ; ಗಡಬಡಿ: ಆತುರ; ಹುಲು: ಕ್ಷುದ್ರ, ಅಲ್ಪ; ಸಾಹಸ: ಪರಾಕ್ರಮ; ಅಂಜು: ಹೆದರು; ಶಬರ: ಬೇಡ;

ಪದವಿಂಗಡಣೆ:
ಮೇಹುಗಾಡಿನೊಳ್+ಅವರ +ಮೈಮಿಗೆ
ಸೋಹಿದರೆ+ ಸುವ್ವಲೆಯ+ ಸುಬ್ಬಲೆ
ಆಹವದಲೇ+ ತೋಳ+ ತೆಕ್ಕೆಯ +ತೋಟ +ತೇಗುವರೆ
ತೋಹಿನಲಿ+ ತೊದಳಾಗಿ +ಗೋರಿಯ
ಗಾಹಿನಲಿ+ ಗುರಿ+ ಗಡಬಡಿಸೆ+ ಹುಲು
ಸಾಹಸಕ್+ಅಂಜುವೆವು +ನೀನ್+ಏಳೆಂದನಾ+ ಶಬರ

ಅಚ್ಚರಿ:
(೧) ತ ಕಾರದ ಸಾಲು ಪದಗಳು – ತೋಳ ತೆಕ್ಕೆಯ ತೋಟ ತೇಗುವರೆ ತೋಹಿನಲಿ ತೊದಳಾಗಿ
(೨) ಗ ಕಾರದ ಸಾಲು ಪದ – ಗೋರಿಯ ಗಾಹಿನಲಿ ಗುರಿ ಗಡಬಡಿಸೆ
(೩) ಸ ಕಾರದ ತ್ರಿವಳಿ ಪದ – ಸೋಹಿದರೆ ಸುವ್ವಲೆಯ ಸುಬ್ಬಲೆಯಾಹವದಲೇ

ಪದ್ಯ ೨೩: ಧರ್ಮಜನು ಭೀಮನ ನಂತರ ಯಾರನ್ನು ಪಣಕ್ಕೆ ಒಡ್ಡಿದನು?

ಆ ಹಲಗೆ ಸೋತುದು ಯುಧಿಷ್ಠಿರ
ನೂಹೆ ಮುರಿದುದು ಮುಂದುಗೆಟ್ಟನು
ರಾಹು ಹಾಯ್ದ ಹಿಮಾಂಶುಮಂಡಲದುಳಿದ ಕಳೆಯಂತೆ
ತೋಹಿನಲಿ ತುಟ್ಟಿಸಿದ ಮೃಗದವೊ
ಲೂಹೆಯಳಿದುದು ಯಂತ್ರ ಸೂತ್ರದ
ಹೂಹೆಯಂತಿರೆ ಹಗೆಗೆ ತೆತ್ತನು ನೃಪತಿ ತನುಧನವ (ಸಭಾ ಪರ್ವ, ೧೫ ಸಂಧಿ, ೨೩ ಪದ್ಯ)

ತಾತ್ಪರ್ಯ:
ಧರ್ಮಜನು ಆ ಆಟವನ್ನು ಸೋತನು. ಅವನ ಲೆಕ್ಕಾಚಾರ ತಪ್ಪಿತು, ಮುಂದೆ ತೋರದಂತಾಯಿತು, ರಾಹುವಿನಿಂದ ಕಳೆಗುಂದಿದ ಚಂದ್ರಮಂಡಲದಂತೆ, ಸಂಕೇತ ಸ್ಥಾನದಲ್ಲಿ ಬೇಟೆಗಾರರಿಗೆ ಸಿಕ್ಕಿಬಿದ್ದ ಮೃಗದಂತೆ, ಯಂತ್ರದ ಸೂತ್ರಕ್ಕೆ ಸಿಕ್ಕ ಗೊಂಬೆಯಂತೆ, ನಿಸ್ತೇಜನಾದ ಧರ್ಮರಾಯನು ವಿರೋಧಿಗೆ ತನ್ನ ದೇಹವನ್ನೇ ಪಣವಾಗಿ ಒಡ್ಡಿದನು.

ಅರ್ಥ:
ಹಲಗೆ: ಪಗಡೆಯ ಹಾಸು; ಸೋತು: ಪರಾಭವ; ಉಹೆ: ಅಂದಾಜು; ಮುರಿ: ಸೀಳು; ಮುಂದುಗೆಡು: ಮುಂದೆ ತೋರು; ಹಾಯಿ: ಚಾಚು, ಮೇಲೆ ಬೀಳು; ಹಿಮಾಂಶು: ಚಂದ್ರ; ಮಂಡಲ: ವರ್ತುಲಾಕಾರ; ಉಳಿದ: ಮಿಕ್ಕ; ಕಳೆ:ಕಾಂತಿ, ತೇಜ; ತೋಹು: ಬೇಟೆಯಾಡಲು ವನ್ಯಮೃಗಗಳನ್ನು ಆಕರ್ಷಿಸುವ ಸ್ಥಳ; ತುಟ್ಟಿಸು: ಶಕ್ತಿಗುಂದು, ಬಲಹೀನವಾಗು; ಮೃಗ: ಪ್ರಾಣಿ; ಅಳಿ: ನಾಶ; ಯಂತ್ರ: ಉಪಕರಣ; ಸೂತ್ರ: ನಿಯಮ; ಹಗೆ: ವೈರ; ತೆತ್ತು: ನೀಡು; ತನು: ದೇಹ; ಧನ: ಐಶ್ವರ್ಯ;

ಪದವಿಂಗಡಣೆ:
ಆ +ಹಲಗೆ +ಸೋತುದು +ಯುಧಿಷ್ಠಿರನ್
ಊಹೆ +ಮುರಿದುದು +ಮುಂದುಗೆಟ್ಟನು
ರಾಹು+ ಹಾಯ್ದ +ಹಿಮಾಂಶು+ಮಂಡಲದ್+ಉಳಿದ +ಕಳೆಯಂತೆ
ತೋಹಿನಲಿ+ ತುಟ್ಟಿಸಿದ +ಮೃಗದವೊಲ್
ಊಹೆ+ಅಳಿದುದು +ಯಂತ್ರ +ಸೂತ್ರದ
ಹೂಹೆಯಂತಿರೆ+ ಹಗೆಗೆ+ ತೆತ್ತನು +ನೃಪತಿ +ತನು+ಧನವ

ಅಚ್ಚರಿ:
(೧) ಉಪಮಾನದ ಪ್ರಯೋಗ – ರಾಹು ಹಾಯ್ದ ಹಿಮಾಂಶುಮಂಡಲದುಳಿದ ಕಳೆಯಂತೆ; ತೋಹಿನಲಿ ತುಟ್ಟಿಸಿದ ಮೃಗದವೊಲೂಹೆಯಳಿದುದು ಯಂತ್ರ ಸೂತ್ರದ ಹೂಹೆಯಂತಿರೆ