ಪದ್ಯ ೧೦: ಮಕ್ಕಳಿಗೆ ಯಾವ ಹೆಸರನ್ನಿಡಲಾಯಿತು?

ಜಾತಕರ್ಮಾದಿಯನು ಪಾರ್ಥಿವ
ಜಾತಿವಿಧಿವಿಹಿತದಲಿ ಗಂಗಾ
ಜಾತ ಮಾಡಿಸಿ ತುಷ್ಟಿ ಪದಿಸಿದ ನಿಖಿಳ ಯಾಚಕರ
ಈತನೇ ಧೃತರಾಷ್ಟ್ರನೆರಡನೆ
ಯಾತ ಪಾಂಡು ವಿಲಾಸಿನೀಸಂ
ಭೂತನೀತನು ವಿದುರನೆಂದಾಯ್ತವರಿಗಭಿದಾನ (ಆದಿ ಪರ್ವ, ೩ ಸಂಧಿ, ೧೦ ಪದ್ಯ)

ತಾತ್ಪರ್ಯ:
ಭೀಷ್ಮನು ಕ್ಷತ್ರಿಯಜಾತಿಗೆ ಅನುಗುಣವಾಗುವ ವಿಧಿಯಂತೆ ಜಾತಕರ್ಮವನ್ನು ನಡೆಸಿದನು. ಯಾಚಕರನ್ನು ತೃಪ್ತಿಪಡಿಸಿದನು. ಅಂಬಿಕೆಯ ಮಗನಿಗೆ ಧೃತರಾಷ್ಟ್ರನೆಂದೂ, ಅಂಬಾಲಿಕೆಯ ಮಗನಿಗೆ ಪಾಂಡುವೆಂದೂ, ವಿಲಾಸಿನಿಯ ಮಗನಿಗೆ ವಿದುರನೆಂದೂ ಹೆಸರನ್ನಿಟ್ಟರು.

ಅರ್ಥ:
ಜಾತಕರ್ಮ: ಹುಟ್ಟಿದ ಮಗುವಿಗೆ ಮಾಡುವ ಒಂದು ಸಂಸ್ಕಾರ; ಆದಿ: ಮೊದಲಾದ; ಪಾರ್ಥಿವ: ಭೌತಿಕವಾದುದು; ಪಾರ್ಥಿವಜಾತಿ: ಕ್ಷತ್ರಿಯ; ವಿಧಿ: ನಿಯಮ; ವಿಹಿತ: ಯೋಗ್ಯವಾದುದು; ಜಾತ: ಹುಟ್ಟಿದ; ಗಂಗಾಜಾತ: ಭೀಷ್ಮ; ತುಷ್ಟಿ: ಸಂತಸ; ನಿಖಿಳ: ಎಲ್ಲಾ; ಯಾಚಕ: ಬೇಡು; ವಿಲಾಸಿನಿ: ಸಖಿ; ಅಭಿದಾನ: ಹೆಸರು;

ಪದವಿಂಗಡಣೆ:
ಜಾತಕರ್ಮಾದಿಯನು +ಪಾರ್ಥಿವ
ಜಾತಿ+ವಿಧಿ+ವಿಹಿತದಲಿ +ಗಂಗಾ
ಜಾತ +ಮಾಡಿಸಿ +ತುಷ್ಟಿ +ಪಡಿಸಿದ +ನಿಖಿಳ +ಯಾಚಕರ
ಈತನೇ +ಧೃತರಾಷ್ಟ್ರನ್+ಎರಡನೆ
ಯಾತ+ ಪಾಂಡು +ವಿಲಾಸಿನೀ+ಸಂ
ಭೂತನ್+ಈತನು +ವಿದುರನೆಂದಾಯ್ತ್+ಅವರಿಗ್+ಅಭಿದಾನ

ಅಚ್ಚರಿ:
(೧) ಭೀಷ್ಮನನ್ನು ಗಂಗಾಜಾತ; ಕ್ಷತ್ರಿಯರನ್ನು ಪಾರ್ಥಿವಜಾತಿ ಎಂದು ಕರೆದಿರುವುದು

ಪದ್ಯ ೩೫: ಧರ್ಮಜನ ರಕ್ಷಣೆಗೆ ಯಾವ ಸೈನ್ಯವು ಬಂದಿತು?

ಪೂತುರೇ ಪಾಂಚಾಲ ಬಲ ಬಂ
ದತುಕೊಂಡುದೆ ಧರ್ಮಪುತ್ರನ
ಘಾತಿಯನು ಘಟ್ಟಿಸಿದರೇ ತುಷ್ಟಿಸಿದನೇ ನೃಪತಿ
ಈತಗಳ ಕೊಳ್ಳೆನುತ ಶರಸಂ
ಘಾತವನು ಕವಿಸಿದನು ಮಾದ್ರೀ
ಜಾತರಡಹಾಯಿದರು ಶಲ್ಯನ ರಥದ ಸಮ್ಮುಖಕೆ (ಶಲ್ಯ ಪರ್ವ, ೨ ಸಂಧಿ, ೩೫ ಪದ್ಯ)

ತಾತ್ಪರ್ಯ:
ಭಲೇ! ಪಾಂಚಾಲ ಸೈನ್ಯವು ಸಹಾಯಕ್ಕೆ ಬಂದೀತೇ? ಧರ್ಮಜನಿಗೆ ಆಗುವ ಅಪಾಯವನ್ನು ತಪ್ಪಿಸಿದಿರೇ? ಅರಸನಿಗೆ ವಿಶ್ರಾಮ್ತಿ ಸಿಕ್ಕೀತೇ? ಇವರನ್ನು ಬಿಡಬಾರದು ಎನ್ನುತ್ತಾ ಶಲ್ಯನು ಪಾಂಚಾಲ ಬಲವನ್ನು ಬಾಣಗಳಿಂದ ಘಾತಿಸಿದನು. ಆಗ ನಕುಲ ಸಹದೇವರು ಶಲ್ಯನ ಮುಂದೆ ರಥಗಳಲ್ಲಿ ಬಂದರು.

ಅರ್ಥ:
ಪೂತು: ಭಲೇ; ಬಲ: ಸೈನ್ಯ; ಬಂದು: ಆಗಮಿಸು; ಆತು: ಸರಿಯಾಗಿ ಹಿಡಿದು; ಪುತ್ರ: ಸುತ; ಘಾತ: ಹೊಡೆತ, ಪೆಟ್ಟು; ಘಟ್ಟಿಸು: ಹೊಡೆ, ಅಪ್ಪಳಿಸು; ತುಷ್ಟಿ: ತೃಪ್ತಿ, ಆನಂದ; ನೃಪ: ರಾಜ; ಶರ: ಬಾಣ; ಸಂಘಾತ: ಗುಂಪು, ಸಮೂಹ; ಕವಿ: ಆವರಿಸು; ಮಾದ್ರೀಜಾತ: ಮಾದ್ರಿಯಲ್ಲಿ ಜನಿಸಿದ (ನಕುಲ, ಸಹದೇವ); ಅಡಹಾಯಿ: ಅಡ್ಡ ಬಂದು; ರಥ: ಬಂಡಿ; ಸಮ್ಮುಖ: ಎದುರು;

ಪದವಿಂಗಡಣೆ:
ಪೂತುರೇ +ಪಾಂಚಾಲ +ಬಲ +ಬಂದ್
ಆತುಕೊಂಡುದೆ +ಧರ್ಮ+ಪುತ್ರನ
ಘಾತಿಯನು +ಘಟ್ಟಿಸಿದರೇ +ತುಷ್ಟಿಸಿದನೇ +ನೃಪತಿ
ಈತಗಳ+ ಕೊಳ್ಳೆನುತ +ಶರ+ಸಂ
ಘಾತವನು +ಕವಿಸಿದನು +ಮಾದ್ರೀ
ಜಾತರ್+ಅಡಹಾಯಿದರು +ಶಲ್ಯನ +ರಥದ +ಸಮ್ಮುಖಕೆ

ಅಚ್ಚರಿ:
(೧) ಘಾತಿಯನು ಘಟ್ಟಿಸಿದರೇ – ಘ ಕಾರದ ಜೋಡಿ ಪದ

ಪದ್ಯ ೬: ದೂರ್ವಾಸನು ದುರ್ಯೋಧನನಿಗೆ ಏನು ಹೇಳಿದ?

ಷಡುರಸಾನ್ನದಲಾದರಣೆಯಿಂ
ದುಡುಗೆಯಿಂದವೆ ತುಷ್ಟಿಬಡಿಸಿದ
ಪೊಡವಿಪಾಲಕ ಮುನಿಗಳಷ್ಟಾಶೀತಿ ಸಾವಿರವ
ಕಡುಸುಖದ ಸಂನ್ಯಾಸಿ ವೇಷದ
ಮೃಡನು ಮುದದಲಿ ಕೌರವನ ಮೈ
ದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನೀನೆಂದ (ಅರಣ್ಯ ಪರ್ವ, ೧೭ ಸಂಧಿ, ೬ ಪದ್ಯ)

ತಾತ್ಪರ್ಯ:
ಷಡ್ರಸಗಳಿಂದ ಕೂಡಿದ ರುಚಿಯಾದ ಊಟವನ್ನು ಮಾಡಿ, ಉತ್ತಮ ಉಡುಗೆಗಳನ್ನು ದುರ್ಯೋಧನನು ನೀಡಿ, ಎಂಬತ್ತೆಂಟು ಸಾವಿರ ಮುನಿಗಳನ್ನು ದುರ್ಯೋಧನನು ತೃಪ್ತಿ ಪಡಿಸಿದನು. ಸಂನ್ಯಾಸಿಯ ವೇಷ ಧರಿಸಿದ ಆನಂದಘನ ಶಿವನು ಸಂತೋಷಿಸಿ, ಕೌರವನ ಮೈದಡವಿ ಮಗನೆ, ನಿನಗೆ ಏನು ಬೇಕೋ ಕೇಳು ಎಂದನು.

ಅರ್ಥ:
ಷಡುರಸ: ಉಪ್ಪು, ಕಾರ, ಸಿಹಿ, ಕಹಿ, ಹುಳಿ ಮತ್ತು ಒಗರು ಎಂಬ ಆರು ಬಗೆಯ ರುಚಿಗಳು; ಅನ್ನ: ಊಟ, ಭೋಜನ; ಆದರಣೆ: ಗೌರವ; ಉಡುಗೆ: ವಸ್ತ್ರ, ಬಟ್ಟೆ; ತುಷ್ಟಿ: ಸಂತಸ; ಪೊಡವಿ: ಪೃಥ್ವಿ, ಭೂಮಿ; ಪಾಲಕ: ಒಡೆಯ; ಪೊಡವಿಪಾಲಕ: ರಾಜ; ಮುನಿ: ಋಷಿ; ಸಾವಿರ: ಸಹಸ್ರ; ಕಡು:ತುಂಬ; ಸುಖ: ನೆಮ್ಮದಿ; ಸಂನ್ಯಾಸಿ: ಋಷಿ; ವೇಷ: ಉಡುಗೆ ತೊಡುಗೆ; ಮೃಡ: ಶಿವ; ಮುದ: ಸಂತಸ; ಮೈದಡವಿ: ಮೈಯನ್ನು ಸವರಿ; ಮೈ: ತನು; ಮೆಚ್ಚಿ: ಪ್ರಶಂಶಿಸಿ; ಮಗ: ಪುತ್ರ; ಬೇಡು: ಕೇಳು; ಒಲಿದು: ಒಪ್ಪು, ಬಯಸು;

ಪದವಿಂಗಡಣೆ:
ಷಡುರಸಾನ್ನದಲ್+ಆದರಣೆಯಿಂದ್
ಉಡುಗೆಯಿಂದವೆ+ ತುಷ್ಟಿ+ಬಡಿಸಿದ
ಪೊಡವಿಪಾಲಕ+ ಮುನಿಗಳ್+ಅಷ್ಟಾಶೀತಿ +ಸಾವಿರವ
ಕಡು+ಸುಖದ +ಸಂನ್ಯಾಸಿ +ವೇಷದ
ಮೃಡನು +ಮುದದಲಿ +ಕೌರವನ +ಮೈ
ದಡವಿ +ಮೆಚ್ಚಿದೆ +ಮಗನೆ +ಬೇಡ್+ಒಲಿದುದನು+ ನೀನೆಂದ

ಅಚ್ಚರಿ:
(೧) ದೂರ್ವಾಸನನ್ನು ವಿವರಿಸುವ ಪರಿ – ಕಡುಸುಖದ ಸಂನ್ಯಾಸಿ ವೇಷದ ಮೃಡನು ಮುದದಲಿ ಕೌರವನ ಮೈದಡವಿ ಮೆಚ್ಚಿದೆ ಮಗನೆ ಬೇಡೊಲಿದುದನು ನೀನೆಂದ

ಪದ್ಯ ೮: ಮಾನವ ಹೇಗೆ ಭಗವಂತನಾಗುತ್ತಾನೆ?

ಸೃಷ್ಟಿ ಸಂಹಾರದಲಿ ಭೂತದ
ಕಟ್ಟಲೆಗಳ ಗತಾಗತಿಗಳಲಿ
ಮುಟ್ಟಿಸಿದ ವಿದ್ಯೆಯಲವಿದ್ಯೆಯಲಪ್ರತಿಮನೆನಿಸಿ
ನಷ್ಟಿಯಲಿ ತುಷ್ಟಿಯಲಿ ಮನವನು
ಬಿಟ್ಟು ಹಿಡಿಯದೆ ಕಾಲ ಕರ್ಮವ
ಮೆಟ್ಟಿನಿಲೆ ಭಗವಂತನೆನಿಸುವೆ ರಾಯ ಕೇಳೆಂದ (ಉದ್ಯೋಗ ಪರ್ವ, ೪ ಸಂಧಿ, ೮ ಪದ್ಯ)

ತಾತ್ಪರ್ಯ:
ಪ್ರಕೃತಿಯ ಹುಟ್ಟು ಮತ್ತು ನಾಶಗಳಲ್ಲಿ, ಪಂಚಭೂತಗಳು ಬಂದು ಹೋಗುವುದರಲ್ಲಿ, ವಿದ್ಯೆ ಮತ್ತು ಅವಿದ್ಯೆಯಲ್ಲಿ ಒಂದೇ ಆಗಿದ್ದು ನಷ್ಟ ಲಾಭಗಳಲ್ಲಿ ಮನಸ್ಸನ್ನು ಕದಲಿಸದೆ ಕಾಲ ಕರ್ಮಗಳನ್ನು ಮೆಟ್ಟಿ ನಿಂತರೆ ಆಗ ನೀನು ಭಗವಂತನಾಗುವೆ ಎಂದು ಸನತ್ಸುಜಾತರು ತಿಳಿಸಿದರು.

ಅರ್ಥ:
ಸೃಷ್ಟಿ: ಪ್ರಕೃತಿ, ಜಗತ್ತು; ಸಂಹಾರ:ನಾಶ, ಕೊನೆ; ಭೂತ: ಚರಾಚರಾತ್ಮಕ ಜೀವರಾಶಿ; ಕಟ್ಟಳೆ: ಅನೂಚಾನವಾಗಿ ಅನುಸರಿಸಿಕೊಂಡು ಬಂದ ನಿಯಮ; ಗತಾಗತಿ: ಹೋಗುವುದು ಬರುವುದು; ಮುಟ್ಟು: ತಾಕು; ವಿದ್ಯೆ: ಜ್ಞಾನ; ಅವಿದ್ಯೆ: ಅಜ್ಞಾನ; ಅಪ್ರತಿಮ: ಎಣೆಯಿಲ್ಲದ, ಸಮಾನವಿಲ್ಲದ; ನಷ್ಟ: ಹಾನಿ, ಕೆಡುಕು; ತುಷ್ಟಿ: ಲಾಭ; ಮನ: ಮನಸ್ಸು; ಬಿಟ್ಟು: ಬಿಡುಗಡೆ; ಹಿಡಿ: ಬಂಧನ; ಕಾಲ: ಸಮಯ; ಕರ್ಮ: ಕೆಲಸ; ಮೆಟ್ಟು: ತುಳಿ; ನಿಲೆ: ನಿಂತರೆ; ಭಗವಂತ: ದೈವ; ರಾಯ: ಅರಸು;

ಪದವಿಂಗಡಣೆ:
ಸೃಷ್ಟಿ +ಸಂಹಾರದಲಿ +ಭೂತದ
ಕಟ್ಟಲೆಗಳ +ಗತಾಗತಿಗಳಲಿ
ಮುಟ್ಟಿಸಿದ +ವಿದ್ಯೆಯಲ್+ಅವಿದ್ಯೆಯಲ್+ಅಪ್ರತಿಮನೆನಿಸಿ
ನಷ್ಟಿಯಲಿ +ತುಷ್ಟಿಯಲಿ +ಮನವನು
ಬಿಟ್ಟು +ಹಿಡಿಯದೆ +ಕಾಲ +ಕರ್ಮವ
ಮೆಟ್ಟಿನಿಲೆ +ಭಗವಂತನ್+ಎನಿಸುವೆ +ರಾಯ +ಕೇಳೆಂದ

ಅಚ್ಚರಿ:
(೧) ಸೃಷ್ಟಿ, ನಷ್ಟಿ, ತುಷ್ಟಿ – ಷ್ಟಿ ಇಂದ ಕೊನೆಗೊಳ್ಳುವ ಪದ
(೨) ವಿದ್ಯೆ ಅವಿದ್ಯೆ, ನಷ್ಟಿ, ತುಷ್ಟಿ – ವಿರುದ್ಧ ಪದಗಳು

ಪದ್ಯ ೪೯: ಯಾವ ನೀತಿಯಿಂದ ಇಹಪರಗಳೆರಡನ್ನು ಗೆಲ್ಲಬಹುದು?

ನೀತಿವಿಡಿದರಸಂಗೆ ಬಹಳ
ಖ್ಯಾತವದು ಜನರಾಗ ರಾಗ
ವ್ರಾತದಿಂ ಧನ ಧನದಿ ಪರಿಕರ ಪರಿಕರದಿ ಜಯವು
ಆತ ಜಯದಿಂ ಧರ್ಮ ಧರ್ಮಸ
ಮೇತದಿಂ ಸುರತುಷ್ಟಿ ತುಷ್ಟಿಯ
ನೀತಿಯಿಂದಿಹಪರವ ಗೆಲುವೈ ರಾಯ ಕೇಳೆಂದ (ಸಭಾ ಪರ್ವ, ೧ ಸಂಧಿ, ೪೯ ಪದ್ಯ)

ತಾತ್ಪರ್ಯ:
ನಾರದರು ಯುಧಿಷ್ಠಿರನ ಜೊತೆ ಅವರ ಮಾತನ್ನು ಮುಂದುವರಿಸುತ್ತಾ, ರಾಜ, “ನೀತಿಯಿಂದ ನಡೆಯುವ ರಾಜನು ಜನರ ಪ್ರೀತಿಗೆ ಪಾತ್ರನಾಗುತ್ತಾನೆ, ಅದರಿಂದ ಅವನು ಧನವಂತನಾಗುತ್ತಾನೆ, ಧನದಿಂದ ಸಾಧನ ಸಂಪತ್ತುಗಳು ಲಭ್ಯವಾಗುತ್ತದೆ, ಅದರಿಂದ ಜಯವು ಲಭಿಸುತ್ತದೆ, ಆ ಜಯದಿಂದ ಧರ್ಮಸಾಧನೆ, ಧರ್ಮಸಾಧನೆಯಿಂದ ದೇವತೆಗಳು ಸಂತೃತ್ಪರಾಗುತ್ತಾರೆ,
ಇಂತಹ ನೀತಿಯಿಂದ ರಾಜನು ಇಹಪರಗಳೆರಡರಲ್ಲೂ ಗೆಲ್ಲುತ್ತಾನೆ.

ಅರ್ಥ:
ನೀತಿ: ಮಾರ್ಗ; ಅರಸ: ರಾಜ; ಬಹಳ: ತುಂಬ; ಖ್ಯಾತ: ಪ್ರಸಿದ್ಧ; ರಾಗ: ಹಿಗ್ಗು, ಸಂತೋಷ; ವ್ರಾತ: ದೇಹಶ್ರಮ; ಧನ: ಐಶ್ವರ್ಯ; ಪರಿಕರ:ಪರಿ ಜನ, ಸಾಧನ ಸಂಪತ್ತು; ಜಯ: ಗೆಲುವು; ಧರ್ಮ: ನಿಯಮ, ಆಚಾರ; ಸಮೇತ: ಜೊತೆ; ಸುರ: ದೇವತೆ; ತುಷ್ಟಿ: ತೃಪ್ತಿ; ಇಹಪರ: ಲೋಕ ಮತ್ತು ಪರಲೋಕ; ರಾಯ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ನೀತಿವಿಡಿದ್+ಅರಸಂಗೆ +ಬಹಳ
ಖ್ಯಾತವದು +ಜನರಾಗ +ರಾಗ
ವ್ರಾತದಿಂ +ಧನ +ಧನದಿ+ ಪರಿಕರ+ ಪರಿಕರದಿ+ ಜಯವು
ಆತ +ಜಯದಿಂ +ಧರ್ಮ +ಧರ್ಮ+ಸ
ಮೇತದಿಂ +ಸುರತುಷ್ಟಿ +ತುಷ್ಟಿಯ
ನೀತಿಯಿಂದ್+ಇಹಪರವ +ಗೆಲುವೈ +ರಾಯ +ಕೇಳೆಂದ

ಅಚ್ಚರಿ:
(೧) ನೀತಿ – ೧, ೬ ಸಾಲಿನ ಮೊದಲ ಪದ
(೨) ಜೋಡಿ ಪದಗಳು: ಜನರಾಗ ರಾಗ, ವ್ರಾತದಿಂ ಧನ ಧನದಿ, ಪರಿಕರ ಪರಿಕರದಿ, ಧರ್ಮ ಧರ್ಮಸ, ಸುರತುಷ್ಟಿ ತುಷ್ಟಿ;
(೩) ಅರಸ, ರಾಯ – ಸಮನಾರ್ಥಕ ಪದಗಳು