ಪದ್ಯ ೪೦: ಸುಪ್ರತೀಕ ಗಜವು ಶತ್ರುಸೈನ್ಯದ ಮೇಲೆ ಹೇಗೆ ನೀರನ್ನು ಊದಿತು?

ಕರಿ ವಿನೋದದಿ ಕುಡಿದ ಜಲವನು
ಕರಣಿಯಲಿ ತೆಗೆತೆಗೆದು ರಿಪು ಮೋ
ಹರಕೆ ಚೆಲ್ಲಿತು ಕಲ್ಪಮೇಘದ ಬಸುರ ಬಗಿದಂತೆ
ಕರತುಷಾರದಲಿವರು ಮೋರೆಯ
ತಿರುಹೆ ನನೆದವು ಬಾಹುರಕೆ ಹ
ಕ್ಕರಿಕೆ ಹಲ್ಲಣ ಜೋಡು ಸೀಸಕ ಛತ್ರ ಚಮರಿಗಳು (ದ್ರೋಣ ಪರ್ವ, ೩ ಸಂಧಿ, ೪೦ ಪದ್ಯ)

ತಾತ್ಪರ್ಯ:
ತಾನು ಕುಡಿದ ನೀರನ್ನು ಸುಪ್ರತೀಕವು ಸೊಂಡಿಲಿನಿಂದ ಶತ್ರುಸೈನ್ಯದ ಮೇಲೆ ಊದಿತು. ಕಲ್ಪಮೇಘದ ಬಸಿರು ಒಡೆಯಿತೋ ಎಂಬಂತೆ ವೈರಿಗಳು ನೆನೆದರು. ಮುಖತಿರುಗಿಸಿದರು, ಅವರ ಬಾಹುರಕ್ಷೆ, ಕುದುರೆಗಳ ಹಕ್ಕರಿಕೆ, ಕವಚ, ಶಿರಸ್ತ್ರಾನ, ಛತ್ರ ಚಾಮರಗಳು ನೆನೆದವು.

ಅರ್ಥ:
ಕರಿ: ಆನೆ; ವಿನೋದ: ಆನಂದ; ಕುಡಿ: ಪಾನ; ಜಲ: ನೀರು; ಕರಣಿ: ಸೊಂಡಿಲು; ತೆಗೆ: ಹೊರತರು; ರಿಪು: ವೈರಿ; ಮೋಹರ: ಯುದ್ಧ; ಚೆಲ್ಲು: ಹರಡು; ಕಲ್ಪ: ಪ್ರಳಯ; ಮೇಘ: ಮೋಡ; ಬಸುರ: ಹೊಟ್ಟೆ; ಬಗಿ: ಸೀಳು, ಕತ್ತರಿಸು; ಕರ: ಕೈ, ಹಸ್ತ; ತುಷಾರ: ಹಿಮ, ಮಂಜು; ಮೋರೆ: ಮುಖ; ತಿರುಹು: ತಿರುಗಿಸು; ನನೆ: ತೋಯು, ಒದ್ದೆಯಾಗು; ಬಾಹು: ತೋಳು, ಭುಜ; ಬಾಹುರಕೆ: ತೋಳ ರಕ್ಷೆ; ಹಕ್ಕರಿಕೆ: ದಂಶನ, ಆನೆ ಕುದುರೆಗಳ ಪಕ್ಕವನ್ನು ರಕ್ಷಿಸುವ ಸಾಧನ; ಹಲ್ಲಣ: ಪಲ್ಲಣ, ಜೀನು, ತಡಿ; ಜೋಡು: ಜೊತೆ; ಸೀಸಕ: ಟೊಪ್ಪಿಗೆ, ಶಿರಸ್ತ್ರಾಣ; ಛತ್ರ: ಕೊಡೆ, ಚತ್ತರಿಗೆ; ಚಮರಿ: ಚಾಮರ;

ಪದವಿಂಗಡಣೆ:
ಕರಿ +ವಿನೋದದಿ +ಕುಡಿದ +ಜಲವನು
ಕರಣಿಯಲಿ +ತೆಗೆತೆಗೆದು +ರಿಪು +ಮೋ
ಹರಕೆ +ಚೆಲ್ಲಿತು +ಕಲ್ಪ+ಮೇಘದ+ ಬಸುರ+ ಬಗಿದಂತೆ
ಕರ+ತುಷಾರದಲ್+ಇವರು +ಮೋರೆಯ
ತಿರುಹೆ+ ನನೆದವು +ಬಾಹುರಕೆ+ ಹ
ಕ್ಕರಿಕೆ +ಹಲ್ಲಣ +ಜೋಡು +ಸೀಸಕ +ಛತ್ರ +ಚಮರಿಗಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಕರಿ ವಿನೋದದಿ ಕುಡಿದ ಜಲವನು ಕರಣಿಯಲಿ ತೆಗೆತೆಗೆದು ರಿಪು ಮೋ
ಹರಕೆ ಚೆಲ್ಲಿತು ಕಲ್ಪಮೇಘದ ಬಸುರ ಬಗಿದಂತೆ

ಪದ್ಯ ೮೩: ಸುಗಂಧದ ಓಕುಳಿಯ ಪ್ರಭಾವ ಹೇಗಿತ್ತು?

ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆ
ವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ
ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ ಗಗನವ
ಪರಮಸೌರಭಕಲಸಿಕೊಂಡುದು ಸಕಲ ಸುರಕುಲವ (ವಿರಾಟ ಪರ್ವ, ೧೧ ಸಂಧಿ, ೮೩ ಪದ್ಯ)

ತಾತ್ಪರ್ಯ:
ಗಂಧ, ಕಸ್ತೂರಿ, ಪನ್ನೀರುಗಳ ಪ್ರವಾಹದಿಂದ ಭೂಮಿಯು ನೆನೆಯಿತು. ದಿಕ್ಕುಗಳು ಪರಿಮಳಭರಿತವಾದವು. ತುಂತುರಿನಿಂದ ಸಮುದ್ರವೂ ಕಂಪಾಯಿತು. ಸೂರ್ಯನೂ ಸುಗಂಧ ಭರಿತವಾದನೆಂದ ಮೇಲೆ ಗಾಳಿಯಲ್ಲಿ ಸುಗಂಧ ತುಂಬಿದುದು ಆಶ್ಚರ್ಯವೇನಲ್ಲ. ಓಕುಳಿಯ ಸುಗಂಧದಿಂದ ದೇವತೆಗಳೂ ತೃಪ್ತರಾದರು.

ಅರ್ಥ:
ಧರಣಿ: ಭೂಮಿ; ನೆನೆ: ಒದ್ದೆಯಾಗು; ಗಂಧ: ಚಂದನ; ರಸ: ಸಾರ; ಕತ್ತುರಿ: ಕಸ್ತೂರಿ; ಪನ್ನೀರು: ಸುಗಂಧಯುಕ್ತವಾದ ನೀರು; ಹೊನಲು: ಪ್ರವಾಹ; ಒಡೆ: ಸೀಳು, ಬಿರಿ; ಎರಚು: ಚಿಮುಕಿಸು, ಚೆಲ್ಲು; ದೆಸೆ: ದಿಕ್ಕು; ಕಂಪು: ಸುಗಂಧ; ಅಂಬುಧಿ: ಸಾಗರ; ನವ: ಹೊಸ; ತುಷಾರ: ಹಿಮ, ಮಂಜು; ತರಣಿ: ಸೂರ್ಯ, ನೇಸರು; ಪರಿಮಳ: ಸುಗಂಧ; ಪವನ: ವಾಯು; ಸುರಭಿ: ಸುಗಂಧ; ಅಚ್ಚರಿ: ಆಶ್ಚರ್ಯ; ಗಗನ: ಆಗಸ; ಪರಮ: ಶ್ರೇಷ್ಠ; ಸೌರಭ: ಸುವಾಸನೆ; ಕಲಸು: ಬೆರಸು; ಸಕಲ: ಎಲ್ಲಾ; ಸುರಕುಲ: ದೇವತೆಗಳ ವಂಶ;

ಪದವಿಂಗಡಣೆ:
ಧರಣಿ +ನೆನೆದುದು +ಗಂಧ+ರಸ+ ಕ
ತ್ತುರಿಯ +ಪನ್ನೀರುಗಳ +ಹೊನಲ್+ಒಡೆವ್
ಎರಸಿ+ ದೆಸೆ +ಕಂಪಿಟ್ಟುದ್+ಅಂಬುಧಿ +ನವ +ತುಷಾರದಲಿ
ತರಣಿ +ಪರಿಮಳಿಸಿದನು +ಪವನನ
ಸುರಭಿತನವ್+ಅಚ್ಚರಿಯೆ +ಗಗನವ
ಪರಮ+ಸೌರಭ+ಕಲಸಿಕೊಂಡುದು +ಸಕಲ+ ಸುರಕುಲವ

ಅಚ್ಚರಿ:
(೧) ಉತ್ಪ್ರೇಕ್ಷೆ – ಪರಿಮಳದಿಂದ ಸೂರ್ಯನು ಕಂಪಿಸಿದನು – ತರಣಿ ಪರಿಮಳಿಸಿದನು ಪವನನ
ಸುರಭಿತನವಚ್ಚರಿಯೆ
(೨) ಸಾಗರವೂ ಸುಗಂಧಮಯವಾಯಿತು ಎಂದು ಹೇಳುವ ಪರಿ – ಧರಣಿ ನೆನೆದುದು ಗಂಧರಸ ಕ
ತ್ತುರಿಯ ಪನ್ನೀರುಗಳ ಹೊನಲೊಡೆವೆರಸಿ ದೆಸೆ ಕಂಪಿಟ್ಟುದಂಬುಧಿ ನವ ತುಷಾರದಲಿ

ಪದ್ಯ ೪೪: ಮಾರುತನು ಯಾರನ್ನು ಆಲಂಗಿಸಿದನು?

ಒಗುಮಿಗೆಯ ಪರಿಮಳದ ಕಂಪಿನ
ತಗಡ ತೆಕ್ಕೆಯ ಬೀದಿವರಿಗಳ
ಮುಗುಳ ಮೊಗ್ಗೆಯ ತೆಗೆವ ತುಂಬಿಯ ಲಳಿಯ ಲಗ್ಗೆಗಳ
ಹೊಗರ ಹೊರಳಿಯ ಕಿರುದೆರೆಯ ನೂ
ಕುಗಳ ತಳಿತ ತುಷಾರ ಭಾರದ
ಸೊಗಸ ಸೇರಿಸಿ ಮಂದಮಾರುತನಪ್ಪಿದನು ಮಗನ (ಅರಣ್ಯ ಪರ್ವ, ೧೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ದಟ್ಟವಾಗಿ ಬೆಳದ ಪರಿಮಳ ಭರಿತ ಹೂವುಗಳನ್ನು ದಾಟಿ, ಪುಷ್ಪದ ಮೊಗ್ಗುಗಳನ್ನರಳಿಸಿ, ಮಕರಂದವನ್ನು ಹೀರುವ ದುಮ್ಬಿಗಳ ರಭಸವನ್ನು ಆವರಿಸಿ, ಕಿರುದೆರೆಗಳ ಚಲನೆಯ ಇಬ್ಬನಿಯನ್ನು ಒಳಗೊಂಡು ನಿಧಾನವಾಗಿ ಬೀಸುವ ಗಾಳಿಯು ತನ್ನ ಮಗನಾದ ಭೀಮನನ್ನು ಆಲಂಗಿಸಿತು.

ಅರ್ಥ:
ಒಗುಮಿಗೆ: ಆಧಿಕ್ಯ, ಹೆಚ್ಚಳ; ಪರಿಮಳ: ಸುಗಂಧ; ಕಂಪು: ಸುಗಂಧ; ತಗಡ: ದಟ್ಟಣೆ, ಸಾಂದ್ರತೆ; ತೆಕ್ಕೆ: ಅಪ್ಪುಗೆ, ಆಲಿಂಗನ, ಗುಂಪು; ಬೀದಿವರಿ: ಸಂಚಾರ, ಚಲನೆ; ಮುಗುಳು: ಮೊಗ್ಗು; ಮೊಗ್ಗು: ಪೂರ್ತಿಯಾಗಿ ಅರಳದೆ ಇರುವ ಹೂವು; ತೆಗೆ:ಹೊರತರು; ತುಂಬಿ: ಭ್ರಮರ; ಲಳಿ: ರಭಸ, ಆವೇಶ; ಲಗ್ಗೆ: ಮುತ್ತಿಗೆ, ಆಕ್ರಮಣ; ಹೊಗರು: ಕಾಂತಿ, ಪ್ರಕಾಶ, ಹೆಚ್ಚಳ; ಹೊರಳಿ:ಗುಂಪು, ಸಮೂಹ; ಕಿರುದೆರೆ: ಚಿಕ್ಕ ಅಲೆ; ನೂಕು: ತಳ್ಳು; ತಳಿತ: ಚಿಗುರಿದ; ತುಷಾರ: ಹಿಮ, ಮಂಜು, ಇಬ್ಬನೆ; ಭಾರ: ಹೊರೆ; ಸೊಗಸು: ಚೆಂದ; ಸೇರಿಸು: ಜೋಡಿಸು; ಮಂದ: ನಿಧಾನ; ಮಾರುತ: ವಾಯು; ಅಪ್ಪು: ಆಲಂಗಿಸು; ಮಗ: ಸುತ;

ಪದವಿಂಗಡಣೆ:
ಒಗುಮಿಗೆಯ+ ಪರಿಮಳದ+ ಕಂಪಿನ
ತಗಡ+ ತೆಕ್ಕೆಯ+ ಬೀದಿವರಿಗಳ
ಮುಗುಳ +ಮೊಗ್ಗೆಯ +ತೆಗೆವ+ ತುಂಬಿಯ +ಲಳಿಯ ಲಗ್ಗೆಗಳ
ಹೊಗರ+ ಹೊರಳಿಯ+ ಕಿರುದೆರೆಯ+ ನೂ
ಕುಗಳ +ತಳಿತ +ತುಷಾರ +ಭಾರದ
ಸೊಗಸ +ಸೇರಿಸಿ +ಮಂದ+ಮಾರುತನ್+ಅಪ್ಪಿದನು +ಮಗನ

ಅಚ್ಚರಿ:
(೧) ತಂಗಾಳಿಯು ಭೀಮನ ಮೇಲೆ ಬೀಸಿತು ಎಂದು ಹೇಳುವ ಸುಂದರ ಕಲ್ಪನೆ
(೨) ಜೋಡಿ ಅಕ್ಷರ ಪದಗಳ ಬಳಕೆ – ತಗಡ ತೆಕ್ಕೆಯ; ಮುಗುಳ ಮೊಗ್ಗೆಯ; ತೆಗೆವ ತುಂಬಿಯ; ಲಳಿಯ ಲಗ್ಗೆಗಳ; ಹೊಗರ ಹೊರಳಿಯ; ತಳಿತ ತುಷಾರ; ಸೊಗಸ ಸೇರಿಸಿ

ಪದ್ಯ ೩: ಸುಗಂಧವು ಹೇಗೆ ಮುನಿಜನರನ್ನು ಮೋಹಿಸಿತು?

ಸರಸ ಸೌಗಂಧಿಕದ ಪರಿಮಳ
ಭರದ ಭಾರವಣೆಯಲಿ ತಿಳಿಗೊಳ
ನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
ಮೊರೆದೊಗುವ ಮರಿದುಂಬಿಗಳ ಮೋ
ಹರದ ಮೋಡಾ ಮೋಡಿಯಲಿಡಾ
ವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ (ಅರಣ್ಯ ಪರ್ವ, ೧೧ ಸಂಧಿ, ೩ ಪದ್ಯ)

ತಾತ್ಪರ್ಯ:
ಚೆಲುವಾದ ಸೌಗಂಧಿಕ ಪುಷ್ಪದ ಪರಿಮಳವು, ಅದು ಬೆಳೆದ ಸರೋವರದ ತೆರೆಗಳಿಂದೆದ್ದ ನೀರಿನ ತುಂತುರಿನಿಂದಲೂ, ಸದ್ದು ಮಾಡುವ ದುಂಬಿಗಳ ಹಿಂಡುಗಳಿಂದಲೂ ಆಶ್ಚರ್ಯಕರವಾಗಿ ಸಕಲ ಮುನಿಗಳ ಇಂದ್ರಿಯಗಳನ್ನು ಮೋಹಿಸಿತು.

ಅರ್ಥ:
ಸರಸ: ಚೆಲ್ಲಾಟ, ವಿನೋದ; ಸೌಗಂಧಿಕ: ಪರಿಮಳದಿಂದ ಕೂಡಿದುದು; ಪರಿಮಳ: ಸುಗಂಧ; ಭರ:ಭಾರ, ಹೆಚ್ಚಳ; ಭಾರವಣೆ: ಘನತೆ, ಗೌರವ; ಉರುಬು: ರಭಸ, ವೇಗ; ತಿಳಿ: ನಿರ್ಮಲ, ಶುದ್ಧ; ಎರೆ: ಸುರಿ; ತಿವಿಗುಳಿ: ತಿವಿತ, ಚುಚ್ಚು; ತುಂತುರು: ಸಣ್ಣ ಸಣ್ಣ ಹನಿ; ತುಷಾರ: ಹಿಮ, ಮಂಜು; ಮೊರೆ:ದುಂಬಿಯ ಧ್ವನಿ, ಝೇಂಕಾರ; ಮರಿ: ಚಿಕ್ಕ; ದುಂಬಿ: ಭ್ರಮರ; ಮೋಹರ: ದಂಡು, ಸೈನ್ಯ; ಮೋಡಾಮೋಡಿ: ಆಶ್ಚರ್ಯಕರ; ಆವರಿಸು: ಸುತ್ತು; ಇಂದ್ರಿಯ: ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳನ್ನು ಗ್ರಹಿಸಲು ಸಹಕಾರಿಯಾಗಿರುವ ಅವಯವ; ಸಕಲ: ಎಲ್ಲಾ; ಮುನಿಜನ: ಋಷಿಗಳ ಗುಂಪು; ಒಂದು: ಕೂಡು;

ಪದವಿಂಗಡಣೆ:
ಸರಸ +ಸೌಗಂಧಿಕದ +ಪರಿಮಳ
ಭರದ +ಭಾರವಣೆಯಲಿ +ತಿಳಿಗೊಳನ್
ಉರುಬುದ್+ಎರೆಗಳ +ತಿವಿಗುಳಿನ +ತುಂತುರು +ತುಷಾರದಲಿ
ಮೊರೆದೊಗುವ +ಮರಿದುಂಬಿಗಳ+ ಮೋ
ಹರದ +ಮೋಡಾಮೋಡಿಯಲಿಡ್+
ಆವರಿಸಿತೈದ್+ಇಂದ್ರಿಯದಲ್+ಒಂದಿರೆ+ ಸಕಲ+ ಮುನಿಜನವ

ಅಚ್ಚರಿ:
(೧) ತ ಕಾರದ ಸಾಲು ಪದ – ತಿಳಿಗೊಳನುರುಬುದೆರೆಗಳ ತಿವಿಗುಳಿನ ತುಂತುರು ತುಷಾರದಲಿ
(೨) ಮ ಕಾರದ ಸಾಲು ಪದ – ಮೊರೆದೊಗುವ ಮರಿದುಂಬಿಗಳ ಮೋಹರದ ಮೋಡಾ ಮೋಡಿಯಲಿಡಾವರಿಸಿತೈದಿಂದ್ರಿಯದಲೊಂದಿರೆ ಸಕಲ ಮುನಿಜನವ

ಪದ್ಯ ೧೧ : ಸರ್ಪಾಸ್ತ್ರದ ತಾಪ ಹೇಗಿತ್ತು?

ಉರಿಯ ಜೀರ್ಕೊಳವಿಗಳವೊಲು ಪೂ
ತ್ಕರಿಸಿದವು ಫಣಿ ವದನದಲಿ ದ
ಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
ಹೊರಳಿಗಿಡಿಗಳ ಕರ್ಬೊಗೆಯ ಕಾ
ಹುರದ ಸುಯ್ಲಿನ ಝಳವ ಗರಳಾ
ಕ್ಷರದ ಜಿಗಿಯಲಿ ಮಾತು ತೋರಿತು ಬೆಸಸು ಬೆಸಸೆನುತ (ಕರ್ಣ ಪರ್ವ, ೨೫ ಸಂಧಿ, ೧೧ ಪದ್ಯ)

ತಾತ್ಪರ್ಯ:
ಸರ್ಪಾಸ್ತ್ರದ ಹೆಡೆಯಿಂದ ಉರಿಯ ಜೀರ್ಕೊಳವೆಗಳು ಬಂದವು. ದಳ್ಳುರಿಯು ಸಿಮಿಸಿಮಿ ಸದ್ದು ಮಾಡಿತು. ಕಿಡಿಯ ತುಂತುರುಗಳು, ಕಿಡಿಗಳ ತೆಕ್ಕೆ ಉಸಿರಾಟದಿಂದ ಬಂದ ಝಳ, ಕಪ್ಪುಹೊಗೆಯ ಹೊರಳಿಗಳು ಹಬ್ಬುತ್ತಿರಲು ಸರ್ಪವು ನನಗೆ ಅಪ್ಪಣೆಯೇನು ಎಂದು ಬೇಡಿತು.

ಅರ್ಥ:
ಉರಿ: ಬೆಂಕಿಯ ಕಿಡಿ; ಜೀರ್ಕೊಳವಿ: ಪಿಚಕಾರಿ; ಪೂತ್ಕರಿಸು: ಹೊರಹಾಕು; ಫಣಿ: ಹಾವು; ವದನ: ಮುಖ; ದಳ್ಳುರಿ: ದೊಡ್ಡಉರಿ, ಭುಗಿಲಿಡುವ ಕಿಚ್ಚು; ಸಿಮಿಸಿಮಿ: ಉರಿಯ ಶಬ್ದದ ವರ್ಣನೆ; ತುಷಾರ: ಹಿಮ, ಇಬ್ಬನಿ; ತುಂತುರು: ಸಣ್ಣ ಸಣ್ಣ ಹನಿ; ಕಿಡಿ: ಬೆಂಕಿ; ಹೊರಳು: ತಿರುಗು, ಬಾಗು; ಕಿಡಿ: ಬೆಂಕಿ; ಕರ್ಬೊಗೆ: ಕಪ್ಪಾದ ಹೊಗೆ; ಕಾಹುರ: ಆವೇಶ, ಸೊಕ್ಕು, ಕೋಪ; ಸುಯ್ಲು: ನಿಟ್ಟುಸಿರು; ಝಳ: ಪ್ರಕಾಶ, ಕಾಂತಿ; ಗರಳ:ವಿಷ; ಜಿಗಿ: ಹಾರು; ಮಾತು: ವಾಣಿ; ತೋರು: ಗೋಚರಿಸು; ಬೆಸಸು: ಹೇಳು, ಆಜ್ಞಾಪಿಸು;

ಪದವಿಂಗಡಣೆ:
ಉರಿಯ+ ಜೀರ್ಕೊಳವಿಗಳವೊಲು +ಪೂ
ತ್ಕರಿಸಿದವು +ಫಣಿ +ವದನದಲಿ+ ದ
ಳ್ಳುರಿಯ +ಸಿಮಿಸಿಮಿಗಳ+ ತುಷಾರದ+ ಕಿಡಿಯ +ತುಂತುರಿನ
ಹೊರಳಿ+ಕಿಡಿಗಳ +ಕರ್ಬೊಗೆಯ +ಕಾ
ಹುರದ +ಸುಯ್ಲಿನ +ಝಳವ +ಗರಳಾ
ಕ್ಷರದ +ಜಿಗಿಯಲಿ +ಮಾತು +ತೋರಿತು +ಬೆಸಸು +ಬೆಸಸೆನುತ

ಅಚ್ಚರಿ:
(೧) ಉಪಮಾನದ ಪ್ರಯೋಗ – ಉರಿಯ ಜೀರ್ಕೊಳವಿಗಳವೊಲು ಪೂತ್ಕರಿಸಿದವು ಫಣಿ
(೨) ಸರ್ಪಾಸ್ತ್ರದ ವರ್ಣನೆ – ಫಣಿ ವದನದಲಿ ದಳ್ಳುರಿಯ ಸಿಮಿಸಿಮಿಗಳ ತುಷಾರದ ಕಿಡಿಯ ತುಂತುರಿನ
(೩) ಬೆಂಕಿಯನ್ನು ಶಬ್ದದಲ್ಲಿ ಹಿಡಿಯುವ ಪರಿ – ಸಿಮಿಸಿಮಿ
(೪) ದಳ್ಳುರಿಯನ್ನು ತಂಪಾದ ತುಂತುರು ಎಂದು ಹೇಳುವ ಕವಿಯ ಕಲ್ಪನೆ

ಪದ್ಯ ೧೫: ಭೀಮನ ಆಗಮನವು ಹೇಗಿತ್ತು?

ಉರಿಯ ಚೂಣಿಯಲುಸುರ ಹೊಗೆಯು
ಬ್ಬರಿಸುತದೆ ಕೆಂಪೇರಿದಕ್ಷಿಯ
ಲೆರಡು ಕೋಡಿಯಲೊಗುತಲದೆ ಕಿಡಿಗಳ ತುಷಾರಚಯ
ಸ್ಫುರದಹಂಕಾರಪ್ರತಾಪ
ಜ್ವರದಿ ಮೈ ಕಾಹೇರುತದೆ ನಿ
ಬ್ಬರದ ಬರವಿಂದೀತನದು ಕಲಿಕರ್ಣ ನೋಡೆಂದ (ಕರ್ಣ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ಭೀಮನು ಹೊರಹೊಮ್ಮುತ್ತಿರುವ ಉಸಿರಿನಲ್ಲಿ ಹೊಗೆಯು ಗೋಚರವಾಗುತ್ತಿದೆ. ಕೆಂಪೇರಿದ ಕಣ್ಣುಗಳ ಎರಡು ಕೊನೆಗಳಲ್ಲೂ ಕಿಡಿಗಳು ಕಾಣುತ್ತಿವೆ. ಪರಾಕ್ರಮದ ಅಹಂಕಾರ ಜ್ವರವೇರಿ ಮೈಬಿಸಿಯಾಗಿದೆ. ಇವನ ಬರುವಿಕೆಯಲ್ಲಿ ಕಠೋರತೆಯು ಎದ್ದುಕಾಣುತ್ತಿದೆ ಎಂದು ಶಲ್ಯನು ಕರ್ಣನಿಗೆ ಹೇಳಿದನು.

ಅರ್ಥ:
ಉರಿ: ಬೆಂಕಿ; ಚೂಣಿ:ಮುಂಭಾಗ; ಉಸುರು: ಶ್ವಾಸ; ಹೊಗೆ: ಧೂಮ; ಉಬ್ಬರ: ಅತಿಶಯ, ಹೆಚ್ಚಳ; ಕಂಪು: ರಕ್ತವರ್ಣ; ಅಕ್ಷಿ: ಕಣ್ಣು; ಕೋಡಿ: ಪ್ರವಾಹ; ಒಗು: ಹೊರಹೊಮ್ಮುವಿಕೆ ; ಕಿಡಿ: ಬೆಂಕಿಯ ಜ್ವಾಲೆ; ತುಷಾರ: ತಂಪಾದ, ಶೀತಲವಾದ, ಹಿಮ; ಚಯ: ಸಮೂಹ, ರಾಶಿ, ಗುಂಪು; ಸ್ಫುರಿತ: ಹೊಳೆದ; ಅಹಂಕಾರ: ದರ್ಪ, ಗರ್ವ; ಪ್ರತಾಪ: ಪರಾಕ್ರಮ; ಜ್ವರ: ಕಾವು; ಮೈ: ತನು; ಕಾವು: ತಾಪ, ಬಿಸಿ; ಏರು: ಹೆಚ್ಚಾಗು; ನಿಬ್ಬರ: ಅತಿಶಯ, ಹೆಚ್ಚಳ, ತುಂಬಿದ; ಬರವು: ಆಗಮನ; ಕಲಿ: ಶೂರ; ನೋಡು: ವೀಕ್ಷಿಸು;

ಪದವಿಂಗಡಣೆ:
ಉರಿಯ +ಚೂಣಿಯಲ್+ಉಸುರ +ಹೊಗೆ
ಉಬ್ಬರಿಸುತದೆ +ಕೆಂಪೇರಿದ್+ಅಕ್ಷಿಯಲ್
ಎರಡು +ಕೋಡಿಯಲ್+ಒಗುತಲ್+ಅದೆ+ ಕಿಡಿಗಳ+ ತುಷಾರಚಯ
ಸ್ಫುರದ್+ಅಹಂಕಾರ+ಪ್ರತಾಪ
ಜ್ವರದಿ+ ಮೈ +ಕಾಹೇರುತದೆ+ ನಿ
ಬ್ಬರದ +ಬರವಿಂದ್+ಈತನದು +ಕಲಿಕರ್ಣ+ ನೋಡೆಂದ

ಅಚ್ಚರಿ:
(೧) ಉಸಿರು, ಕಣ್ಣು, ತನುವಿನ ತಾಪ – ಕೋಪವನ್ನು ವರ್ಣಿಸಲು ಬಳಸಿದ ಸಾಧನಗಳು