ಪದ್ಯ ೨೨: ಕುಂತಿಯು ಮಾದ್ರಿಗೆ ಏನು ಹೇಳಿದಳು?

ಅರಸ ತನಗರುಹದೆ ಸುರಸ್ತ್ರೀ
ಯರಿಗೆ ಹರಿದೈ ನಿನ್ನ ವಧುಗಳ
ತುರುಬ ಕೊಯ್ಸುವೆನವರ ತೊತ್ತಿರ ಮಾಡುವೆನು ತನಗೆ
ಅರಸಿ ನೀನೀಮಕ್ಕಳನು ಸಂ
ವರಿಸಿ ಕೊಂಡಿಹುದೆಂದು ಮಾದ್ರಿಯ
ಕರವ ಹಿಡಿದರೆ ಕುಂತಿಗೆಂದಳು ಕಾಂತೆ ವಿನಯದಲಿ (ಆದಿ ಪರ್ವ, ೫ ಸಂಧಿ, ೨೨ ಪದ್ಯ)

ತಾತ್ಪರ್ಯ:
ರಾಜ, ನನಗೆ ಹೇಳದೇ ನೀನು ಅಪ್ಸರಸ್ತ್ರೀಯರ ಬಳಿಗೆ ಹೋದೆಯಲ್ಲವೇ? ನಾನು ನೀನಿರುವಲ್ಲಿಗೆ ಬಂದು ಅವರ ತುರುಬನ್ನು ಕೊಯ್ಸಿ ನನ್ನ ದಾಸಿಯರನ್ನಾಗಿ ಮಾಡಿಕೊಳ್ಳುತ್ತೇನೆ. ಮಾದ್ರಿ, ನೀನು ಈ ಮಕ್ಕಳನ್ನು ಸಾಕಿಕೊಂಡಿರು ಎಂದು ಮಾದ್ರಿಯ ಕೈಯನ್ನು ಹಿಡಿದಳು. ಮಾದ್ರಿಯು ವಿನಯದಿಂದ ಕುಂತಿಗೆ ಹೀಗೆಂದಳು.

ಅರ್ಥ:
ಅರಸ: ರಾಜ; ಅರುಹು: ಹೇಳು; ಸುರಸ್ತ್ರೀ: ಅಪ್ಸರೆ; ಹರಿದೈ: ಸೇರು; ವಧು: ಹೆಣ್ಣು, ಹೆಂಡತಿ; ತುರುಬು: ಕೂದಲಿನ ಗಂಟು, ಮುಡಿ; ಕೊಯ್ಸು: ಸೀಳು; ತೊತ್ತು: ದಾಸಿ; ಅರಸಿ: ರಾಣಿ; ಮಕ್ಕಳು: ಕುಮಾರ; ಸಂವರಿಸು: ಕಾಪಾಡು; ಕರ: ಹಸ್ತ; ಹಿಡಿ: ಗ್ರಹಿಸು; ಕಾಂತೆ: ಹೆಣ್ಣು; ವಿನಯ: ಒಳ್ಳೆಯತನ, ಸೌಜನ್ಯ;

ಪದವಿಂಗಡಣೆ:
ಅರಸ+ ತನಗ್+ಅರುಹದೆ +ಸುರಸ್ತ್ರೀ
ಯರಿಗೆ +ಹರಿದೈ +ನಿನ್ನ+ ವಧುಗಳ
ತುರುಬ +ಕೊಯ್ಸುವೆನ್+ಅವರ +ತೊತ್ತಿರ+ ಮಾಡುವೆನು +ತನಗೆ
ಅರಸಿ +ನೀನ್+ಈ+ಮಕ್ಕಳನು+ ಸಂ
ವರಿಸಿ +ಕೊಂಡಿಹುದೆಂದು+ ಮಾದ್ರಿಯ
ಕರವ+ ಹಿಡಿದರೆ +ಕುಂತಿಗೆಂದಳು +ಕಾಂತೆ +ವಿನಯದಲಿ

ಅಚ್ಚರಿ:
(೧) ಸತ್ತನು ಎಂದು ಹೇಳಲು – ಸುರಸ್ತ್ರೀಯರಿಗೆ ಹರಿದೈ

ಪದ್ಯ ೧೯: ಪಾಯದಳದವರು ಹೇಗೆ ಸಿದ್ಧರಾದರು?

ತುರುಬ ಬಲಿದೊಳಗೌಕಿ ಮೊನೆ ಮುಂ
ಜೆರಗನಳವಡೆ ಸೆಕ್ಕಿ ಸುತ್ತಿನೊ
ಳಿರುಕಿ ಬಿಗಿದ ಕಠಾರಿ ದಾರದ ಗೊಂಡೆಯವ ಕೆದರಿ
ಒರಗಿದೆಡಬಲದವರನೆಬ್ಬಿಸಿ
ಜರೆದು ವೀಳೆಯಗೊಂಡು ಕೈದುವ
ತಿರುಹುತಾಯತವಾಯ್ತು ಪಡೆಯೆರಡರಲಿ ಪಾಯದಳ (ದ್ರೋಣ ಪರ್ವ, ೧೭ ಸಂಧಿ, ೧೯ ಪದ್ಯ)

ತಾತ್ಪರ್ಯ:
ತಲೆಗೂದಲನ್ನು ಗಂಟುಕಟ್ಟಿ ಒಳಕ್ಕೆ ಸೇರಿಸಿ, ಸೆರಗಿನ ಮುಂಭಾಗವನ್ನು ಸರಿಯಾಗಿಸಿ, ಸಿಕ್ಕಿಸಿ, ಸೊಂಟಕ್ಕೆ ಬಿಗಿದಿದ್ದ ಕಠಾರಿಗಳ ದಾರದ ಕುಚ್ಚನ್ನು ಸರಿಮಾಡಿಕೊಂಡು, ಅಕ್ಕಪಕ್ಕದವರನ್ನು ಜರಿದು ಎಬ್ಬಿಸಿ, ಕರ್ಪೂರ ವೀಳೆಯವನ್ನು ಸ್ವೀಕರಿಸಿ ಆಯುಧಗಳನ್ನು ತಿರುಗಿಸುತ್ತಾ ಕಾಲಾಳುಗಳು ಸಿದ್ಧರಾದರು.

ಅರ್ಥ:
ತುರುಬು: ಕೂದಲಿನ ಗಂಟು, ಮುಡಿ; ಬಲಿ: ಗಟ್ಟಿಯಾಗು; ಔಕು: ಒತ್ತು; ಮೊನೆ: ತುದಿ, ಕೊನೆ; ಮುಂಜೆರಗು: ಸೆರಗಿನ ಮುಂಭಾಗ; ಸೆಕ್ಕು: ಒಳಸೇರುವಿಕೆ, ಕುಗ್ಗುವಿಕೆ; ಸುತ್ತು: ಬಳಸು; ಇರುಕು: ಅದುಮಿ ಭದ್ರವಾಗಿ ಹಿಸುಕಿ ಹಿಡಿ; ಬಿಗಿ: ಭದ್ರವಾಗಿರುವುದು; ಕಠಾರಿ: ಬಾಕು, ಚೂರಿ, ಕತ್ತಿ; ದಾರ: ನೂಲು; ಗೊಂಡೆ: ಕುಚ್ಚು; ಕೆದರು: ಹರಡು; ಒರಗು: ಮಲಗು, ಕೆಳಕ್ಕೆ ಬಾಗು; ಎಬ್ಬಿಸು: ಏಳಿಸು; ಜರಿ:ಬಯ್ಯು, ಹಳಿ; ವೀಳೆ: ತಾಂಬೂಲ; ಕೈದು: ಆಯುಧ; ತಿರುಹು: ತಿರುಗಿಸು; ಆಯತ: ಉಚಿತವಾದ; ಪಡೆ: ಸೈನ್ಯ, ಬಲ; ಪಾಯದಳ: ಸೈನಿಕ;

ಪದವಿಂಗಡಣೆ:
ತುರುಬ +ಬಲಿದೊಳಗ್+ಔಕಿ +ಮೊನೆ +ಮುಂ
ಜೆರಗನ್+ಅಳವಡೆ+ ಸೆಕ್ಕಿ+ ಸುತ್ತಿನೊಳ್
ಇರುಕಿ +ಬಿಗಿದ +ಕಠಾರಿ +ದಾರದ +ಗೊಂಡೆಯವ +ಕೆದರಿ
ಒರಗಿದ್+ಎಡಬಲದವರನ್+ಎಬ್ಬಿಸಿ
ಜರೆದು +ವೀಳೆಯಗೊಂಡು +ಕೈದುವ
ತಿರುಹುತ್+ಆಯತವಾಯ್ತು +ಪಡೆ+ಎರಡರಲಿ +ಪಾಯದಳ

ಅಚ್ಚರಿ:
(೧) ಒರಗಿದೆಡಬಲದವರನೆಬ್ಬಿಸಿ – ಒಂದೇ ಪದವಾಗಿ ರಚನೆ

ಪದ್ಯ ೪೪: ಅಭಿಮನ್ಯುವು ದುಶ್ಯಾಸನನಿಗೆ ಹೇಗೆ ಉತ್ತರಿಸಿದನು?

ಕೊಳಚಿ ನೀರೊಳಗಾಳುತೇಳುತ
ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು ಮೊದಲಲಿ ನಮ್ಮ ನೀ ಗೆಲಿದು
ಬಳಿಕ ಭೀಮಾರ್ಜುನರ ಬಯಸುವು
ದೆಲೆ ಮರುಳೆ ನಿನ್ನೊಡಲ ಸೀಳಿಯೆ
ತಿಳಿರಕುತದಲಿ ತಾಯ ತುರುಬನು ನಾದಿಸುವೆನೆಂದ (ದ್ರೋಣ ಪರ್ವ, ೫ ಸಂಧಿ, ೪೪ ಪದ್ಯ)

ತಾತ್ಪರ್ಯ:
ಅಭಿಮನ್ಯುವು ಉತ್ತರಿಸುತ್ತಾ, ಕೊಳಚೆ ನೀರಿನಲ್ಲಿ ಮುಳುಗುತ್ತಾ, ತೇಲುತ್ತಾ ಸಮುದ್ರವೇನು ಮಹಾ! ಕಾಲಿನಲ್ಲಿ ದಾಟುವ ಹೊಳೆ ಎಂದು ಮಾತನಾಡುವ ಭಂಡರ ಮೇಲೆ ಸಿಟ್ಟಾಗಿ ಏನು ಪ್ರಯೋಜನ. ಎಲವೋ ಹುಚ್ಚಾ, ಮೊದಲು ನಮ್ಮನ್ನು ಗೆದ್ದು ಆಮೇಲೆ ಭೀಮಾರ್ಜುನರ ಮಾತಾದು. ನಿನ್ನ ದೇಹವನ್ನು ಈಗಲೇ ಸೀಳಿ ನಿನ್ನ ತಿಳಿರಕ್ತದಿಂದ ನನ್ನ ತಾಯಿಯ ತುರುಬನ್ನು ತೋಯಿಸಿ ಕಟ್ಟುತ್ತೇನೆ ಎಂದು ಗುಡುಗಿದನು.

ಅರ್ಥ:
ಕೊಳಚೆ: ಗಲೀಜು; ನೀರು: ಜಲ; ಆಳುತೇಳು: ಮುಳುಗುತ್ತಾ, ತೇಲುತ್ತಾ; ಜಲಧಿ: ಸಾಗರ; ಕಾಲ್ವೊಳೆ: ಕಾಲಿನಲ್ಲಿ ದಾಟುವ ಹೊಳೆ; ಭಂಡ: ಮೂಢ; ಮುಳಿ: ಸಿಟ್ಟು, ಕೋಪ; ಮೊದಲು: ಆದಿ; ಗೆಲಿದು: ಜಯಿಸು; ಬಳಿಕ: ನಂತರ; ಬಯಸು: ಇಚ್ಛೆಪಡು; ಮರುಳ: ಮೂಢ; ಒಡಲು: ದೇಹ; ಸೀಳು: ಚೂರು, ತುಂಡು; ತಿಳಿ: ಶುದ್ಧವಾಗು, ಪ್ರಕಾಶಿಸು; ರಕುತ: ನೆತ್ತರು; ತಾಯಿ: ಮಾತೆ; ತುರುಬು: ಕೂದಲಿನ ಗಂಟು, ಮುಡಿ; ನಾದಿಸು: ಹದಮಾಡು, ಕಟ್ಟು;

ಪದವಿಂಗಡಣೆ:
ಕೊಳಚಿ+ ನೀರೊಳಗ್+ಆಳುತ್+ಏಳುತ
ಜಲಧಿ +ಕಾಲ್ವೊಳೆಯೆಂಬ+ ಭಂಡರ
ಮುಳಿದು +ಮಾಡುವುದೇನು+ ಮೊದಲಲಿ +ನಮ್ಮ +ನೀ +ಗೆಲಿದು
ಬಳಿಕ +ಭೀಮಾರ್ಜುನರ +ಬಯಸುವುದ್
ಎಲೆ+ ಮರುಳೆ+ ನಿನ್ನೊಡಲ +ಸೀಳಿಯೆ
ತಿಳಿರಕುತದಲಿ +ತಾಯ +ತುರುಬನು +ನಾದಿಸುವೆನೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ಕೊಳಚಿ ನೀರೊಳಗಾಳುತೇಳುತ ಜಲಧಿ ಕಾಲ್ವೊಳೆಯೆಂಬ ಭಂಡರ
ಮುಳಿದು ಮಾಡುವುದೇನು

ಪದ್ಯ ೮೮: ಭೀಮನ ಕೀಚಕನ ಕಾದಾಟ ಹೇಗೆ ಪ್ರಾರಂಭವಾಯಿತು?

ಚಪಳೆ ಫಡ ಹೋಗೆನುತ ಹಾಯ್ದನು
ಕೃಪಣಮತಿ ಮುಂಗೈಯಲನಿಲಜ
ನಪರಭಾಗಕೆ ಹಾಯ್ದು ಹಿಡಿದನು ಕೀಚಕನ ತುರುಬ
ವಿಪುಳಬಲ ಕಳವಳಿಸಿದನು ಕಡು
ಕುಪಿತನಾದನು ಹೆಂಗುಸಲ್ಲಿವ
ನಪಸದನು ತೆಗೆ ಕರುಳನೆನುತೊಳಹೊಕ್ಕು ಹೆಣಗಿದನು (ವಿರಾಟ ಪರ್ವ, ೩ ಸಂಧಿ, ೮೮ ಪದ್ಯ)

ತಾತ್ಪರ್ಯ:
ಕಾಮದಿಂದ ದೀನನಾಗಿದ್ದ ಕೀಚಕನು ಎಲೇ ಚಪಲೆ ಇದೇನು, ಹೋಗು ಎಂದು ಮುಂಗೈಯಲ್ಲಿ ಭೀಮನನ್ನು ಸರಿಸಿದನು. ಭೀಮನು ಕಿಚಕನ ಹಿಂದೆ ನುಗ್ಗಿ ಅವನ ತುರುಬನ್ನು ಹಿಡಿದನು, ಆ ಹಿಡಿತದಿಂದ ಕಳವಳಿಸಿದ ಕೀಚಕನಿಗೆ ಪರಿಸ್ಥಿತಿಯ ಅರಿವಾಯಿತು, ಇದು ಹೆಂಗಸಲ್ಲ, ಯಾರೋ ಮೋಸಗಾರನಾದ ದ್ರೋಹಿ, ಎಂದು ತಿಳಿದು ಕೀಚಕನು ಇವನ ಕರುಳನ್ನು ಬಿಗಿ ಎಂದು ಒಳಹೊಕ್ಕು ಕಾದಿದನು.

ಅರ್ಥ:
ಚಪಳೆ: ಚಂಚಲೆ; ಫಡ: ತಿರಸ್ಕಾರದ ಮಾತು; ಹೋಗು: ತೆರಳು; ಹಾಯ್ದು: ಮೇಲೆ ಬೀಳು; ಕೃಪಣ: ದುಷ್ಟ; ಮತಿ: ಬುದ್ಧಿ; ಮುಂಗೈ: ಮುಂದಿನ ಹಸ್ತ; ಅನಿಲಜ: ವಾಯು ಪುತ್ರ; ಅಪರ: ಬೇರೆಯ; ಭಾಗ: ಅಂಶ, ಪಾಲು; ಹಿಡಿ: ಬಂಧಿಸು; ತುರುಬು: ಕೂದಲಿನ ಗಂಟು, ಮುಡಿ; ವಿಪುಳ: ಹೆಚ್ಚು, ಜಾಸ್ತಿ; ಬಲ: ಶಕ್ತಿ; ವಿಪುಳಬಲ: ಪರಾಕ್ರಮಿ; ಕಳವಳ: ತಳಮಳ, ಗೊಂದಲ; ಕುಪಿತ: ಕೋಪ; ಹೆಂಗುಸು: ಹೆಣ್ಣು; ಅಪಸದ: ನೀಚ; ತೆಗೆ: ಈಚೆಗೆ ತರು, ಹೊರತರು; ಕರುಳು: ಪಚನಾಂಗದ ಭಾಗ; ಹೊಕ್ಕು: ಸೇರು; ಹೆಣಗು: ಹೋರಾಡು, ಕಾಳಗ ಮಾಡು;

ಪದವಿಂಗಡಣೆ:
ಚಪಳೆ +ಫಡ +ಹೋಗೆನುತ +ಹಾಯ್ದನು
ಕೃಪಣಮತಿ +ಮುಂಗೈಯಲ್+ಅನಿಲಜನ್
ಅಪರಭಾಗಕೆ+ ಹಾಯ್ದು +ಹಿಡಿದನು +ಕೀಚಕನ +ತುರುಬ
ವಿಪುಳಬಲ +ಕಳವಳಿಸಿದನು +ಕಡು
ಕುಪಿತನಾದನು +ಹೆಂಗುಸಲ್+ಇವನ್
ಅಪಸದನು +ತೆಗೆ +ಕರುಳನ್+ಎನುತ್+ಒಳಹೊಕ್ಕು +ಹೆಣಗಿದನು

ಅಚ್ಚರಿ:
(೧) ಕೀಚಕನು ಬಯ್ದ ಪರಿ – ಚಪಳೆ ಫಡ ಹೋಗೆನುತ ಹಾಯ್ದನು ಕೃಪಣಮತಿ

ಪದ್ಯ ೧೫: ಸೈರಂಧ್ರಿಯು ಏಕೆ ಬಿದ್ದಳು?

ಒಡನೆ ಬೆಂಬತ್ತಿದನು ತುರುಬನು
ಹಿಡಿದು ತೊತ್ತಿನ ಮಗಳೆ ಹಾಯ್ದರೆ
ಬಿಡುವೆನೇ ಫಡಯೆನುತ ಹೊಯ್ದನು ಕಾಲಲೊಡೆಮೆಟ್ಟಿ
ಕೆಡೆದು ರಕುತವ ಕಾರಿ ಹುಡಿಯಲಿ
ಮುಡಿ ಹೊರಳಿ ಬಿರುಗಾಳಿಯಲಿ ಸೈ
ಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು (ವಿರಾಟ ಪರ್ವ, ೩ ಸಂಧಿ, ೧೫ ಪದ್ಯ)

ತಾತ್ಪರ್ಯ:
ಸೈರಂಧ್ರಿಯು ಓಡುವುದನ್ನು ನೋಡಿ, ಕೀಚಕನು ಅವಳ ಹಿಂದೆಯೇ ಬೆನ್ನು ಹತ್ತಿ ಓಡಿದನು. ಅವಳ ತಲೆಗೂದಲನ್ನು ಹಿಡಿದು ಏ ದಾಸಿಯ ಮಗಳೇ, ಓಡಿ ಹೋದರೆ ಬಿಟ್ಟು ಬಿಡುವೆನೇ ಎಂದು ಕೋಪದಿಂದ ಕೂಗುತ್ತಾ ಕಾಲಿನಿಂದ ಅವಳನ್ನು ಒದೆದು ಅವಳನ್ನು ಮೆಟ್ಟಿ ಹೊಡೆದನು. ಆ ಹೊಡೆತಕ್ಕೆ ಕೆಳಕ್ಕೆ ಉರುಳಿದ ಸೈರಂಧ್ರಿಯು ರಕ್ತವನ್ನು ಕಾರಿ, ಕೇಶರಾಶಿಯ ಹುಡಿಮಣ್ಣಿನಲ್ಲಿ ಹೊರಳುತ್ತಿದ್ದಳು, ಬಿರುಗಾಳಿಗೆ ಮುರಿದು ಬಿದ್ದ ಬಾಳೆಯ ಮರದಂತೆ ದ್ರೌಪದಿಯು ನೆಲದಲ್ಲಿ ಹೊರಳಿದಳು.

ಅರ್ಥ:
ಒಡನೆ: ಕೂಡಲೆ; ಬೆಂಬತ್ತು: ಹಿಂಬಾಲಿಸು; ತುರುಬು: ತಲೆಗೂದಲು; ಹಿಡಿ: ಗ್ರಹಿಸು; ತೊತ್ತು: ದಾಸಿ; ಮಗಳು: ಸುತೆ; ಹಾಯ್ದು: ಓಡು, ಚೆಲ್ಲು; ಬಿಡು: ತೊರೆ; ಫಡ: ಬಯ್ಯುವ ಒಂದು ಪದ; ಹೊಯ್ದು: ಹೊಡೆ; ಕಾಲು: ಪಾದ; ಮೆಟ್ಟು: ತುಳಿದು ನಿಲ್ಲು; ಕೆಡೆ: ಬೀಳು, ಕುಸಿ; ರಕುತ: ನೆತ್ತರು; ಕಾರು: ಕೆಸರು; ಹುಡಿ: ಮಣ್ಣು; ಹೊರಳು: ಉರುಳಾಡು, ಉರುಳು; ಬಿರುಗಾಳಿ: ಜೋರಾದ ಗಾಳಿ; ಸೈಗೆಡೆ: ಅಡ್ಡಬೀಳು; ಕದಳಿ: ಬಾಳೆ; ಕಂಬ: ಉದ್ದನೆಯ ಕೋಲು, ಮಾಡಿನ ಆಧಾರಕ್ಕೆ ನಿಲ್ಲಿಸುವ ಮರ ಕಲ್ಲು; ಕಾಂತೆ: ಹೆಣ್ಣು; ಹೊರಳು: ಉರುಳು;

ಪದವಿಂಗಡಣೆ:
ಒಡನೆ +ಬೆಂಬತ್ತಿದನು +ತುರುಬನು
ಹಿಡಿದು +ತೊತ್ತಿನ +ಮಗಳೆ +ಹಾಯ್ದರೆ
ಬಿಡುವೆನೇ +ಫಡ+ಎನುತ +ಹೊಯ್ದನು +ಕಾಲಲ್+ಒಡೆಮೆಟ್ಟಿ
ಕೆಡೆದು+ ರಕುತವ +ಕಾರಿ +ಹುಡಿಯಲಿ
ಮುಡಿ +ಹೊರಳಿ +ಬಿರುಗಾಳಿಯಲಿ+ ಸೈ
ಗೆಡೆದ +ಕದಳಿಯ+ ಕಂಬದಂತಿರೆ +ಕಾಂತೆ +ಹೊರಳಿದಳು

ಅಚ್ಚರಿ:
(೧) ಉಪಮಾನದ ಪ್ರಯೋಗ – ಬಿರುಗಾಳಿಯಲಿ ಸೈಗೆಡೆದ ಕದಳಿಯ ಕಂಬದಂತಿರೆ ಕಾಂತೆ ಹೊರಳಿದಳು

ಪದ್ಯ ೧೯: ದ್ರೌಪದಿ ಕೃಷ್ಣನಿಗೆ ತನ್ನ ಮುಡಿಯ ಬಗ್ಗೆ ಏನು ಹೇಳಿದಳು?

ತುರುಬ ಕಟ್ಟುವ ಹದನ ನಿಮ್ಮಡಿ
ಯರಿಯದೆಂಬೆನೆ ಸಕಲ ಸಚರಾ
ಚರದ ಚೇತನ ರೂಪ ದೇಹಿ ನಿಕಾಯ ಕೃತಸಾಕ್ಷಿ
ತರಿದು ದುಶ್ಯಾಸನನ ವಕ್ಷದೊ
ಳೊರೆವ ರಕುತದೊಳದ್ದಿ ಕಟ್ಟುವ
ದುರುಬನರಿಯಾ ಕೃಷ್ಣಯೆಂದಳು ಕಮಲಮುಖಿ ನಗುತ (ಅರಣ್ಯ ಪರ್ವ, ೨ ಸಂಧಿ, ೧೯ ಪದ್ಯ)

ತಾತ್ಪರ್ಯ:
ಎಲೈ ಕೃಷ್ಣ, ನನ್ನ ಮುಡಿಯನ್ನು ಕಟ್ಟುವ ರೀತಿ ನಿನಗೆ ತಿಳಿಯದೇ? ಎಲ್ಲಾ ಚರಾಚರಗಳಲ್ಲಿ ನಡೆಯುವ ಸಮಸ್ತ ವ್ಯವಹಾರದಲ್ಲಿ ನೀನು ಸಾಕ್ಷಿಯಾದವನು. ದುಶ್ಯಾಸನನ ಎದೆಯನ್ನು ಬಗೆದು ಅವನ ರಕ್ತದಿಂದ ನನ್ನ ಕೂದಲನ್ನು ನೆನಸಿದ ನಂತರ ತುರುಬನ್ನು ಕಟ್ಟುವೆಣೆಂದು ನಾನು ಮಾಡಿದ ಪ್ರತಿಜ್ಞೆಯನ್ನು ನೀನು ತಿಳಿದಿರುವೆಯಲ್ಲ ಎಂದು ನಗುತ ಕೃಷ್ಣನನ್ನು ಕೇಳಿದಳು.

ಅರ್ಥ:
ತುರುಬು: ಕೂದಲಿನ ಗಂಟು, ಕಟ್ಟು: ಬಂಧಿಸು; ಹದ: ರೀತಿ; ನಿಮ್ಮಡಿ: ನಿಮಗೆ; ಅರಿ: ತಿಳಿ; ಸಕಲ: ಎಲ್ಲಾ; ಚರಾಚರ: ಜೀವವಿರುವ ಮತ್ತು ಇಲ್ಲದಿರುವ; ಚೇತನ: ಪ್ರಜ್ಞೆಯುಳ್ಳ, ಚೈತನ್ಯವುಳ್ಳದ್ದು; ರೂಪ: ಆಕಾರ; ದೇಹಿ: ಶರೀರವನ್ನುಳ್ಳದ್ದು; ನಿಕಾಯ: ದೇಹ, ಶರೀರ; ಕೃತ: ಮುಗಿಸಿದ; ಸಾಕ್ಷಿ: ರುಜುವಾತು; ತರಿ: ಕತ್ತರಿಸು; ವಕ್ಷ: ಎದೆ; ಒರೆ: ಉಜ್ಜು, ತಿಕ್ಕು; ಒರೆವ: ಹರಿದು ಬರುವ; ರಕುತ: ನೆತ್ತರು; ಅದ್ದು: ತೋಯು; ಕಮಲ: ತಾವರೆ; ಕಮಲಮುಖಿ: ತಾವರೆಯಂತಹ ಮುಖ; ನಗು: ಸಂತಸ;

ಪದವಿಂಗಡಣೆ:
ತುರುಬ +ಕಟ್ಟುವ +ಹದನ +ನಿಮ್ಮಡಿ
ಅರಿಯದ್+ಎಂಬೆನೆ+ ಸಕಲ +ಸಚರಾ
ಚರದ+ ಚೇತನ+ ರೂಪ +ದೇಹಿ +ನಿಕಾಯ +ಕೃತಸಾಕ್ಷಿ
ತರಿದು+ ದುಶ್ಯಾಸನನ +ವಕ್ಷದೊಳ್
ಒರೆವ +ರಕುತದೊಳ್+ಅದ್ದಿ +ಕಟ್ಟುವ
ತುರುಬನ್+ಅರಿಯಾ+ ಕೃಷ್ಣ+ಎಂದಳು +ಕಮಲಮುಖಿ +ನಗುತ

ಅಚ್ಚರಿ:
(೧) ತುರುಬ – ೧, ೬ ಸಾಲಿನ ಮೊದಲ ಪದ
(೨) ದ್ರೌಪದಿಯ ಪ್ರತಿಜ್ಞೆ – ತರಿದು ದುಶ್ಯಾಸನನ ವಕ್ಷದೊಳೊರೆವ ರಕುತದೊಳದ್ದಿ ಕಟ್ಟುವ
ದುರುಬನರಿಯಾ ಕೃಷ್ಣಯೆಂದಳು ಕಮಲಮುಖಿ ನಗುತ

ಪದ್ಯ ೧೩: ಕಾಮನ ಬಾಣವು ಪಾಂಡುವಿನ ರೋಮವನ್ನು ನಾಟಲು ಆತ ಏನು ಮಾಡಿದ?

ಮರೆದು ಹಿಂದೆಲ್ಲವನು ಕುಂತಿಯ
ನರಿಯಲೀಯದೆ ಮೆಲ್ಲಮೆಲ್ಲನೆ
ತುರುಗಿದೆಳಲತೆ ವನದೊಳಾಡುವ ವಧುವ ಸಾರಿದನು
ಸೆರಗ ಹಿಡಿದರೆ ಬೇಡ ಬೇಡೆಂ
ದೆರಗಿದಳು ಚರಣದಲಿ ತರುಣಿಯ
ತುರುಬ ಹಿಡಿದೆತ್ತಿದನು ಹೆಣಗಿದರೊಡನೆ ಝೋನ್ಲಿಪಿಸಿದ (ಆದಿ ಪರ್ವ,೫ ಸಂಧಿ,೧೩ ಪದ್ಯ)

ತಾತ್ಪರ್ಯ:
ಈ ಹಿಂದೆ ತಾನು ಮುನಿ ದಂಪತಿಗಳನ್ನ ಕೊಂದದ್ದು, ಅವರು ಶಾಪ ಕೊಟ್ಟದ್ದು, ಇವೆಲ್ಲವನ್ನೂ ಮರೆತು, ಕುಂತಿಗೆ ಗೊತ್ತಾಗದ ಹಾಗೆ, ಮೆಲ್ಲನೆ ಆ ಚೆಲುವೆ ಮಾದ್ರಿ ಇದ್ದ ಜಾಗಕ್ಕೆ ಬಂದು ಅವಳ ಸೆರಗನ್ನೆಳೆದನು. ಆಕೆಗೆ ಹಿಂದಿನ ವಿಷಯ ತಿಳಿದಿತ್ತು, ಪಾಂಡುವಿನ ಕಾಮನ ದೃಷ್ಟಿಯು ಅರಿತ ಅವಳು ಬೇಡ ಎಂದು ಅವನ ಪಾದದಲ್ಲಿ ಮೊರೆಯಿಟ್ಟಳು. ಪ್ರಜ್ಞೆ ಬತ್ತಿಹೋದ ಕಾರಣ ಪಾಂಡುವು ಅವಳು ಹೇಳುವುದನ್ನು ಲೆಕ್ಕಿಸದೆ ಅವಳ ತಲೆಯನ್ನು ಹಿಡಿದು ಎತ್ತಿದನು. ಅವಳ ವಿರೋಧದ ನಡುವೆಯೂ ಬಲಪ್ರಯೋಗ ಮಾಡಿದ.

ಅರ್ಥ:
ತರು: ಮರ, ವೃಕ್ಷ; ಅರಿ: ತಿಳ; ತುರು: ದನ ಗೋವು
ತುರುಗು: ಸಂದಣಿ, ದಟ್ಟಣೆ; ಸಾರಿ: ಸಂಚಾರ, ವಿಹಾರ
ಎರಗು: ಬೀಳು; ತುರುಬ: ತಲೆ
ಝೋಂಪಿಸು: ನಡುಗಿಸು, ಮೋಹಗೊಳ್ಳು
ವನ: ಕಾಡು, ಅರಣ್ಯ; ವಧು: ಹೆಣ್ಣು
ಚರಣ: ಪಾದ; ತರುಣಿ: ಹೆಣ್ಣು, ಹುಡುಗಿ
ಹೆಣಗು: ಹೋರಾಡು, ಒದ್ದಾಡು

ಅಚ್ಚರಿ:
(೧) ತಪ್ಪು ಮಾಡುವಾಗ ವಹಿಸುವ ಎಚ್ಚರದ ವರ್ಣನೆ: ಕುಂತಿಗೆ ಗೊತ್ತಾಗದ ಹಾಗೆ, (ಕುಂತಿಯ ನರಿಯಲೀಯದೆ), ಮೆತ್ತಗೆ ಹೋಗುವುದು (ಮೆಲ್ಲಮೆಲ್ಲನೆ)
(೨) ಜೋಡಿ ಪದಗಳು (೨ ಮತ್ತು ೪ ಸಾಲು): ಮೆಲ್ಲ ಮೆಲ್ಲನೆ, ಬೇಡ ಬೇಡೆಂದೆ
(೩) ಪಾಂಡುವಿನ ಕಾಮದ ವರ್ಣನೆ: ಮಾದ್ರಿ ಬೇಡಿಕೊಂಡರು ಕೇಳಲಿಲ್ಲ (೫, ೬ ಸಾಲಿನ ವರ್ಣನೆ)