ಪದ್ಯ ೫: ಭೀಮನ ಮಾತೃವಾತ್ಸಲ್ಯದ ನಿದರ್ಶನವೇನು?

ತಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ
ಝಳಕೆ ಕಂದಿದ ಮೈಯ ಬಾಡಿದ
ಲಲಿತವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ (ಆದಿ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ತನ್ನ ತಾಯಿ,ಸೋದರರನ್ನು ಹೊತ್ತು ಬಹಳ ಯೋಜನಗಳನ್ನು ಸಾಗಿದ ನಂತರ, ಎಲ್ಲರೂ ಬಳಲಿದ್ದರು. ಆಗ ಕಾಡಿನ ಮರದ ನೆರಳಲ್ಲಿ ಚಿಗುರಿದ ಮರದ ರಂಬೆಗಳನ್ನು ತಂದು ಹಾಸಿ, ಅದರಮೇಲೆ ಎಲ್ಲರು ಕುಳಿತು ವಿಶ್ರಮಿಸುತ್ತಾ, ಬಳಲಿದ ದೇಹದ ಆಯಾಸಕ್ಕೆ ಅವರೆಲ್ಲರೂ ನಿದ್ರೆಯ ಝೋಂಪಿನಲ್ಲಿ ಮಲಗಿದರು. ಅವರೆಲ್ಲರ ದೇಹವು ಬಿಸಿಲಿನ ತಾಪಕ್ಕೆ ಕಂದಿತ್ತು, ಮುಖವು ಬಾಡಿತ್ತು, ತಲೆಕೂದಲು ಕೆದರಿತ್ತು, ಸ್ಥಿತಿಯನ್ನು ಕಂಡು, ತನ್ನವರ ಸ್ಥಿತಿ ಹೀಗಿರುವುದನ್ನು ಕಂಡು ಭೀಮನು ದುಃಖಿಸಿದನು.

ಅರ್ಥ:
ತಳಿರು: ಚಿಗುರು; ತರಿ: ಕಡಿ, ಕತ್ತರಿಸು; ತರು: ಮರ; ನೆಳಲು: ನೆರಳು; ವಿಶ್ರಮ: ವಿಶ್ರಾಂತಿ, ವಿರಾಮ, ಶ್ರಮಪರಿಹಾರ; ತನು: ದೇಹ; ಬಳಲಿಕೆ: ಆಯಾಸ; ಭಾರಣೆ: ಭಾರ, ಹೊರೆ; ಕಡು: ತುಂಬ; ಜೋಡಿ: ಜೊತೆ; ಝೋಂಪು: ತೂಕಡಿಕೆ; ಝಳ: ಶಾಖ, ಉಷ್ಣತೆ; ಕಂದು: ಕಳೆಗುಂದು, ಬಣ್ಣಗೆಡು; ಮೈಯ: ದೇಹ; ಬಾಡು: ಸೊರಗು; ಲಲಿತ: ಚೆಲುವು, ಸೌಂದರ್ಯ; ವದನ: ಮುಖ; ಮಾಸು: ಮಲಿನವಾಗು, ಕಾಂತಿಗುಂದು; ಕೆದರು: ಚೆಲ್ಲಾಪಿಲ್ಲಿ, ಹರಡು; ತಲೆ: ಶಿರ; ಅಳಲು: ಅಳು, ಕೊರಗು;

ಪದವಿಂಗಡನೆ:
ತಳಿರ +ತರಿ+ದೊಟ್ಟಿದನು+ ತರುವಿನ
ನೆಳಲ್+ಒಳಗೆ+ ವಿಶ್ರಮಿಸಿದರು+ ತನು
ಬಳಲಿಕೆಯ+ ಭಾರಣೆಯ+ ಕಡು+ ಜೋಡಿಸಿದ+ ಝೋಂಪಿನಲಿ
ಝಳಕೆ+ ಕಂದಿದ+ ಮೈಯ +ಬಾಡಿದ
ಲಲಿತ+ವದನದ+ ಮಾಸಿ +ಕೆದರಿದ
ತಲೆ+ಯೊಳ್+ಇರೆ+ ತನ್ನ್+ಐವರನು+ ಕಂಡ್+ಅಳಲಿದನು+ ಭೀಮ

ಅಚ್ಚರಿ:
(೧) ಬಳಲಿದವರ ಲಕ್ಷಣ: ಝಳಕೆ ಕಂದಿದ ಮೈ, ಬಾಡಿದ ಲಲಿತ ವದನ, ಮಾಸಿ ಕೆದರಿದ ತಲೆ
(೨) “ತ” ಕಾರದ ಪದಗಳು: ತಳಿರ, ತರಿ, ತರು, ತನು, ತಲೆ, ತನ್ನ
(೩) ಮೈಯ್, ತನು – ಸಮಾನಾರ್ಥಕ ಪದ
(೪) “ಕ” ಕಾರದ ಪದಗಳು: ಕಡು, ಕಂದು, ಕಂಡ, ಕೆದರು