ಪದ್ಯ ೪೪: ವೃದ್ಧಕ್ಷತ್ರನು ಹೇಗೆ ಮಡಿದನು?

ಏನಿದದ್ಭುತವೆನುತ ತಲೆಯನು
ತಾನೆ ಕೊಡಹಿದನಂಜಲಿಯನದ
ನೇನನೆಂಬೆನು ಕೃಷ್ಣರಾಯನ ಮಂತ್ರಶಕ್ತಿಯನು
ಆ ನರೇಂದ್ರನ ತಲೆ ಸಹಸ್ರವಿ
ಧಾನದಲಿ ಬಿರಿದುದು ಸುಯೋಧನ
ಸೇನೆ ಹರಿದುದು ಜರಿದುದರಿಭಟಧೈರ್ಯಗಿರಿನಿಕರ (ದ್ರೋಣ ಪರ್ವ, ೧೪ ಸಂಧಿ, ೪೪ ಪದ್ಯ)

ತಾತ್ಪರ್ಯ:
ಇದೇನಾಶ್ಚರ್ಯ ಎಂದುಕೊಂಡು ಆ ವೃದ್ಧಕ್ಷತ್ರನು ತಾನೇ ಬೊಗಸೆಯನ್ನು ಕೊಡವಿದನು. ಅದು ಕೆಳಕ್ಕೆ ಬಿದ್ದೊಡನೆ ಅವನ ತಲೆಯಲ್ಲಿ ಸಹಸ್ರ ಬಿರುಕುಗಳಾದವು. ವೃದ್ಧ ಕ್ಷತ್ರನೂ ಮಡಿದನು. ಕೃಷ್ಣನ ಉಪಾಯವು ಎಂಥದ್ದು! ಕೌರವ ಸೈನ್ಯ ಛಿದ್ರ ಛಿದ್ರವಾಯಿತು. ವೀರರು ಅಧೀನರಾದರು. ಪಡೆ ಹಿಮ್ಮೆಟ್ಟಿತ್ತು.

ಅರ್ಥ:
ಅದ್ಭುತ: ಆಶ್ಚರ್ಯ; ತಲೆ: ಶಿರ; ಕೊಡಹು: ತಳ್ಳು, ಬೀಳಿಸು; ಅಂಜಲಿ: ಕೈಬೊಗಸೆ; ರಾಯ: ರಾಜ; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ಶಕ್ತಿ: ಬಲ; ನರೇಂದ್ರ: ರಾಜ; ತಲೆ: ಶಿರ; ಸಹಸ್ರ: ಸಾವಿರ; ವಿಧಾನ: ಬಗೆ; ಬಿರಿ: ಸೀಳು; ಸೇನೆ: ಸೈನ್ಯ; ಹರಿ: ಚದುರು; ಜರಿ: ಅಳುಕು, ಹಿಂಜರಿ; ಅರಿ: ವೈರಿ; ಭಟ: ಸೈನ್ಯ; ಧೈರ್ಯ: ಎದೆಗಾರಿಕೆ, ಕೆಚ್ಚು; ಗಿರಿ: ಬೆಟ್ಟ; ನಿಕರ: ಗುಂಪು;

ಪದವಿಂಗಡಣೆ:
ಏನಿದ್+ಅದ್ಭುತವ್+ಎನುತ +ತಲೆಯನು
ತಾನೆ +ಕೊಡಹಿದನ್+ಅಂಜಲಿಯನ್+ಅದ
ನೇನನ್+ಎಂಬೆನು +ಕೃಷ್ಣರಾಯನ +ಮಂತ್ರ+ಶಕ್ತಿಯನು
ಆ +ನರೇಂದ್ರನ +ತಲೆ +ಸಹಸ್ರ+ವಿ
ಧಾನದಲಿ +ಬಿರಿದುದು +ಸುಯೋಧನ
ಸೇನೆ +ಹರಿದುದು +ಜರಿದುದ್+ಅರಿ+ಭಟ+ಧೈರ್ಯ+ಗಿರಿ+ನಿಕರ

ಅಚ್ಚರಿ:
(೧) ರೂಪಕದ ಪ್ರಯೋಗ – ಸೈನ್ಯದ ಧೈರ್ಯದ ಬೆಟ್ಟ ಅಲುಗಾಡಿತು ಎಂದು ಹೇಳುವ ಪರಿ – ಜರಿದುದರಿಭಟಧೈರ್ಯಗಿರಿನಿಕರ

ಪದ್ಯ ೫: ಭೀಮನ ಮಾತೃವಾತ್ಸಲ್ಯದ ನಿದರ್ಶನವೇನು?

ತಳಿರ ತರಿದೊಟ್ಟಿದನು ತರುವಿನ
ನೆಳಲೊಳಗೆ ವಿಶ್ರಮಿಸಿದರು ತನು
ಬಳಲಿಕೆಯ ಭಾರಣೆಯ ಕಡು ಜೋಡಿಸಿದ ಝೋಂಪಿನಲಿ
ಝಳಕೆ ಕಂದಿದ ಮೈಯ ಬಾಡಿದ
ಲಲಿತವದನದ ಮಾಸಿ ಕೆದರಿದ
ತಲೆಯೊಳಿರೆ ತನ್ನೈವರನು ಕಂಡಳಲಿದನು ಭೀಮ (ಆದಿ ಪರ್ವ, ೯ ಸಂಧಿ, ೫ ಪದ್ಯ)

ತಾತ್ಪರ್ಯ:
ತನ್ನ ತಾಯಿ,ಸೋದರರನ್ನು ಹೊತ್ತು ಬಹಳ ಯೋಜನಗಳನ್ನು ಸಾಗಿದ ನಂತರ, ಎಲ್ಲರೂ ಬಳಲಿದ್ದರು. ಆಗ ಕಾಡಿನ ಮರದ ನೆರಳಲ್ಲಿ ಚಿಗುರಿದ ಮರದ ರಂಬೆಗಳನ್ನು ತಂದು ಹಾಸಿ, ಅದರಮೇಲೆ ಎಲ್ಲರು ಕುಳಿತು ವಿಶ್ರಮಿಸುತ್ತಾ, ಬಳಲಿದ ದೇಹದ ಆಯಾಸಕ್ಕೆ ಅವರೆಲ್ಲರೂ ನಿದ್ರೆಯ ಝೋಂಪಿನಲ್ಲಿ ಮಲಗಿದರು. ಅವರೆಲ್ಲರ ದೇಹವು ಬಿಸಿಲಿನ ತಾಪಕ್ಕೆ ಕಂದಿತ್ತು, ಮುಖವು ಬಾಡಿತ್ತು, ತಲೆಕೂದಲು ಕೆದರಿತ್ತು, ಸ್ಥಿತಿಯನ್ನು ಕಂಡು, ತನ್ನವರ ಸ್ಥಿತಿ ಹೀಗಿರುವುದನ್ನು ಕಂಡು ಭೀಮನು ದುಃಖಿಸಿದನು.

ಅರ್ಥ:
ತಳಿರು: ಚಿಗುರು; ತರಿ: ಕಡಿ, ಕತ್ತರಿಸು; ತರು: ಮರ; ನೆಳಲು: ನೆರಳು; ವಿಶ್ರಮ: ವಿಶ್ರಾಂತಿ, ವಿರಾಮ, ಶ್ರಮಪರಿಹಾರ; ತನು: ದೇಹ; ಬಳಲಿಕೆ: ಆಯಾಸ; ಭಾರಣೆ: ಭಾರ, ಹೊರೆ; ಕಡು: ತುಂಬ; ಜೋಡಿ: ಜೊತೆ; ಝೋಂಪು: ತೂಕಡಿಕೆ; ಝಳ: ಶಾಖ, ಉಷ್ಣತೆ; ಕಂದು: ಕಳೆಗುಂದು, ಬಣ್ಣಗೆಡು; ಮೈಯ: ದೇಹ; ಬಾಡು: ಸೊರಗು; ಲಲಿತ: ಚೆಲುವು, ಸೌಂದರ್ಯ; ವದನ: ಮುಖ; ಮಾಸು: ಮಲಿನವಾಗು, ಕಾಂತಿಗುಂದು; ಕೆದರು: ಚೆಲ್ಲಾಪಿಲ್ಲಿ, ಹರಡು; ತಲೆ: ಶಿರ; ಅಳಲು: ಅಳು, ಕೊರಗು;

ಪದವಿಂಗಡನೆ:
ತಳಿರ +ತರಿ+ದೊಟ್ಟಿದನು+ ತರುವಿನ
ನೆಳಲ್+ಒಳಗೆ+ ವಿಶ್ರಮಿಸಿದರು+ ತನು
ಬಳಲಿಕೆಯ+ ಭಾರಣೆಯ+ ಕಡು+ ಜೋಡಿಸಿದ+ ಝೋಂಪಿನಲಿ
ಝಳಕೆ+ ಕಂದಿದ+ ಮೈಯ +ಬಾಡಿದ
ಲಲಿತ+ವದನದ+ ಮಾಸಿ +ಕೆದರಿದ
ತಲೆ+ಯೊಳ್+ಇರೆ+ ತನ್ನ್+ಐವರನು+ ಕಂಡ್+ಅಳಲಿದನು+ ಭೀಮ

ಅಚ್ಚರಿ:
(೧) ಬಳಲಿದವರ ಲಕ್ಷಣ: ಝಳಕೆ ಕಂದಿದ ಮೈ, ಬಾಡಿದ ಲಲಿತ ವದನ, ಮಾಸಿ ಕೆದರಿದ ತಲೆ
(೨) “ತ” ಕಾರದ ಪದಗಳು: ತಳಿರ, ತರಿ, ತರು, ತನು, ತಲೆ, ತನ್ನ
(೩) ಮೈಯ್, ತನು – ಸಮಾನಾರ್ಥಕ ಪದ
(೪) “ಕ” ಕಾರದ ಪದಗಳು: ಕಡು, ಕಂದು, ಕಂಡ, ಕೆದರು