ಪದ್ಯ ೫೭: ಬ್ರಾಹ್ಮಣರ ಮೂಲಭೂತ ಕರ್ತವ್ಯವಾವುದು?

ಶ್ರುತಿಪಠಣವೋ ತರ್ಪಣವೊ ಮೇ
ಣತಿಥಿ ಪೂಜೆಯೊ ಭೂತಯಜ್ಞವೊ
ಹುತವಹಾರಾಧನೆಯೊ ರಣವೀಯೈಯ್ದರೊಳಗೇನು
ಶ್ರುತಿ ತದರ್ಥಸ್ಮೃತಿಗಳಲಿ ಪಂ
ಡಿತರು ನಡೆವುದ ಮಾದು ಮೂರ್ಖರ
ಗತಿಯನನುಕರಿಸಿದರೆ ಬಳಿಕ ವಿಶೇಷವೇನೆಂದ (ದ್ರೋಣ ಪರ್ವ, ೧೮ ಸಂಧಿ, ೫೭ ಪದ್ಯ)

ತಾತ್ಪರ್ಯ:
ಭಾರಧ್ವಾಜರು ತಮ್ಮ ಮಾತನ್ನು ಮುಂದುವರೆಸುತ್ತಾ, ವೇದಾಧ್ಯಯ, ತರ್ಪಣ, ಅತಿಥಿ ಪೂಜೆ, ಭೂತಯಜ್ಞ, ಅಗ್ನಿಯ ಆರಾಧನೆ ಇವು ಬ್ರಾಹ್ಮಣರ ಮೂಲಭೂತ ಕರ್ತವ್ಯಗಳು. ಯುದ್ಧವೆಂಬುದು ಈ ಐದರಲ್ಲಿ ಯಾವುದು? ಶೃತಿ ವಿಹಿತ ಕರ್ಮ, ಅದನ್ನು ಅನುಸಂಧಾನ ಮಾಡುವ ಸ್ಮೃತಿ ವಿಧಿ ಇವುಗಳನ್ನು ಬಿಟ್ಟು, ಮೂರ್ಖರಂತೆ ವರ್ತಿಸಿದರೆ ಏನು ಮಾಡಲು ಸಾಧ್ಯ ಎಂದು ಕೇಳಿದನು.

ಅರ್ಥ:
ಶ್ರುತಿ: ವೇದ; ಪಠಣ: ಓದು; ತರ್ಪಣ: ತೃಪ್ತಿಪಡಿಸುವಿಕೆ; ಮೇಣ್: ಅಥವ; ಅತಿಥಿ: ಆಮಂತ್ರಣವಿಲ್ಲದೆ ಬರುವವ; ಪೂಜೆ: ಆರಾಧನೆ; ಭೂತ: ಜಗತ್ತಿನ ಪ್ರಾಣಿವರ್ಗ; ಯಜ್ಞ: ಯಾಗ; ಹುತವಹ: ಅಗ್ನಿ; ಆರಾಧನೆ: ಪೂಜೆ; ರಣ: ಯುದ್ಧ; ಶೃತಿ: ವೇದ; ಅರ್ಥ: ಅಭಿಪ್ರಾಯ; ಸ್ಮೃತಿ: ಧರ್ಮಶಾಸ್ತ್ರ; ಪಂಡಿತ: ವಿದ್ವಾಂಸ; ನಡೆ: ಚಲಿಸು; ಮೂರ್ಖ: ದಡ್ಡ; ಗತಿ: ಸ್ಥಿತಿ; ಅನುಕರಿಸು: ಹಿಂಬಾಲಿಸು; ಬಳಿಕ: ನಂತರ; ವಿಶೇಷ: ಅತಿಶಯತೆ, ವೈಶಿಷ್ಟ್ಯ; ಮಾದು: ನಿಂತುಹೋಗು;

ಪದವಿಂಗಡಣೆ:
ಶ್ರುತಿ+ಪಠಣವೋ+ ತರ್ಪಣವೊ+ ಮೇಣ್
ಅತಿಥಿ +ಪೂಜೆಯೊ +ಭೂತಯಜ್ಞವೊ
ಹುತವಹ+ಆರಾಧನೆಯೊ +ರಣವ್+ಈ+ಐದರೊಳಗೇನು
ಶ್ರುತಿ +ತದರ್ಥ+ಸ್ಮೃತಿಗಳಲಿ+ ಪಂ
ಡಿತರು +ನಡೆವುದ+ ಮಾದು+ ಮೂರ್ಖರ
ಗತಿಯನ್+ಅನುಕರಿಸಿದರೆ +ಬಳಿಕ+ ವಿಶೇಷವೇನೆಂದ

ಅಚ್ಚರಿ:
(೧) ಶ್ರುತಿ – ೧, ೪ ಸಾಲಿನ ಮೊದಲ ಪದ
(೨) ಪಂಡಿತ, ಮೂರ್ಖ – ವಿರುದ್ಧಾರ್ಥ ಪದ

ಪದ್ಯ ೧೫: ಪರಶುರಾಮರು ಎಷ್ಟು ಬಾರಿ ಕ್ಷತ್ರಿಯರನ್ನು ಸಂಹಾರ ಮಾಡಿದರು?

ಪರಶುರಾಮನ ಕಾರ್ತವೀರ್ಯನ
ಧುರದೊಳಿಪ್ಪತ್ತೊಂದು ಸೂಳಿನೊ
ಳರಿದರಾಯರ ಕಂಠನಾಳದ ನೆತ್ತರಿನ ನದಿಯ
ಪರಮ ಪಿತೃತರ್ಪಣವನಾತನ
ಪರಶುವಿನ ನೆಣವಸೆಯ ತೊಳಹದ
ವರನದಿಯ ವಿಸ್ತರಣವನು ಕೇಳಿದನು ಯಮಸೂನು (ಅರಣ್ಯ ಪರ್ವ, ೧೦ ಸಂಧಿ, ೧೫ ಪದ್ಯ)

ತಾತ್ಪರ್ಯ:
ಪರಶುರಾಮರು ಮಾಡಿದ ಕಾರ್ತಿವೀರ್ಯನ ಸಂಹಾರ, ಇಪ್ಪತ್ತೊಂದು ಬಾರಿ ಕ್ಷತ್ರಿಯರನ್ನು ಸಂಹರಿಸಿದ್ದು, ಅವರ ಕಂಠನಾಳದಿಂದ ಹರಿದ ರಕ್ತ ತರ್ಪಣವನ್ನು ಪಿತೃಗಳಿಗೆ ಕೊಟ್ಟಿದ್ದು, ಆ ರಕ್ತ ನದಿಯ ವಿವರಗಳೆಲ್ಲವನ್ನೂ ಯುಧಿಷ್ಠಿರನು ಕೇಳಿದನು.

ಅರ್ಥ:
ಧುರ: ಯುದ್ಧ, ಕಾಳಗ; ಸೂಳು: ಆವೃತ್ತಿ, ಬಾರಿ; ಅರಿ: ಕತ್ತರಿಸು; ರಾಯ: ರಾಜ; ಕಂಠ: ಕೊರಳು; ನೆತ್ತರು: ರಕ್ತ; ನದಿ: ಕೂಲವತಿ; ಪರಮ: ಶ್ರೇಷ್ಠ; ಪಿತೃ: ಪೂರ್ವಜ; ತರ್ಪಣ: ತೃಪ್ತಿಪಡಿಸುವಿಕೆ, ತಣಿವು; ಪರಶು: ಕೊಡಲಿ, ಕುಠಾರ; ನೆಣವಸೆ: ಹಸಿಯಾದ ಕೊಬ್ಬು; ನೆಣ: ಕೊಬ್ಬು; ತೊಳಸು: ಕಾದಾಟ; ವರನದಿ: ಶ್ರೇಷ್ಠವಾದ ಸರೋವರ; ವಿಸ್ತರಣ: ವ್ಯಾಪ್ತಿ; ಸೂನು: ಮಗ;

ಪದವಿಂಗಡಣೆ:
ಪರಶುರಾಮನ +ಕಾರ್ತವೀರ್ಯನ
ಧುರದೊಳ್+ಇಪ್ಪತ್ತೊಂದು +ಸೂಳಿನೊಳ್
ಅರಿದ+ರಾಯರ +ಕಂಠನಾಳದ +ನೆತ್ತರಿನ +ನದಿಯ
ಪರಮ +ಪಿತೃ+ತರ್ಪಣವನ್+ಆತನ
ಪರಶುವಿನ +ನೆಣವಸೆಯ +ತೊಳಹದ
ವರನದಿಯ +ವಿಸ್ತರಣವನು +ಕೇಳಿದನು +ಯಮಸೂನು

ಅಚ್ಚರಿ:
(೧) ಸಾಯಿಸಿದನು ಎಂದು ಹೇಳುವ ಪರಿ – ಸೂಳಿನೊಳರಿದರಾಯರ ಕಂಠನಾಳದ ನೆತ್ತರಿನ ನದಿಯ