ಪದ್ಯ ೧೭: ದುರ್ಯೋಧನನ ತನ್ನ ಸೈನ್ಯವನ್ನು ಹೇಗೆ ಮೂದಲಿಸಿದನು?

ರಾಯ ಕೇಳೈ ಬಲದ ಬಾಹೆಯ
ನಾಯಕರು ಜಾರಿದರು ವಾಮದ
ಜೇಯ ಸುಭಟರು ಸಿಡಿದು ತರಹರಿಸಿದರು ದೂರದಲಿ
ರಾಯ ಕಂಡನು ಬಳಿಕ ಬಲದ ಪ
ಲಾಯನದ ಪರಿವಿಡಿಯನಸುವಿನ
ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ (ಗದಾ ಪರ್ವ, ೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ಕೇಳು, ಬಲಪಕ್ಕದ ಸೇನಾನಾಯಕರು ಓಡಿದರು. ತಾವು ಅಜೇಯರೆಂದು ಕೊಚ್ಚಿಕೊಳ್ಳುವ ಸುಭಟರು ದೂರಕ್ಕೋಡಿ ಸುಧಾರಿಸಿಕೊಂಡರು ದುರ್ಯೋಧನನು ತನ್ನ ಸೈನ್ಯದ ಪಲಾಯನವನ್ನು ನೋಡಿ, ಇವರು ಪ್ರಾಣದ ಹಾನಿಗೆ ಅಂಜಿದರು ಎಂದು ರಾಜರನ್ನು ಮೂದಲಿಸಿದನು.

ಅರ್ಥ:
ರಾಯ: ರಾಜ; ಕೇಳು: ಆಲಿಸು; ಬಲ: ಸೈನ್ಯ; ಬಾಹೆ: ಹೊರಗೆ; ನಾಯಕ: ಒಡೆಯ; ಜಾರು: ಬೀಳು; ವಾಮ: ಎಡಭಾಗ; ಅಜೇಯ: ಗೆಲ್ಲಲಾಗದುದು; ಸುಭಟ: ಪರಾಕ್ರಮಿ; ಸಿಡಿ: ಸೀಳು; ತರಹರಿಸು: ತಡಮಾಡು; ಕಳವಳಿಸು; ದೂರ: ಆಚೆ; ಕಂಡು: ನೋಡು; ಬಳಿಕ: ನಂತರ; ಪಲಾಯನ: ಓಡು; ಪರಿವಿಡಿ: ವ್ಯವಸ್ಥಿತವಾದ ಕ್ರಮ, ಅನುಕ್ರಮ; ಅಸು: ಪ್ರಾಣ; ಬೀಯ: ವ್ಯಯ, ನಷ್ಟ; ಅಂಜು: ಹೆದರು; ಮೂದಲಿಸು: ಹಂಗಿಸು; ನೃಪ: ರಾಜ;

ಪದವಿಂಗಡಣೆ:
ರಾಯ+ ಕೇಳೈ +ಬಲದ +ಬಾಹೆಯ
ನಾಯಕರು +ಜಾರಿದರು +ವಾಮದ್
ಅಜೇಯ +ಸುಭಟರು +ಸಿಡಿದು +ತರಹರಿಸಿದರು +ದೂರದಲಿ
ರಾಯ +ಕಂಡನು +ಬಳಿಕ +ಬಲದ +ಪ
ಲಾಯನದ +ಪರಿವಿಡಿಯನ್+ಅಸುವಿನ
ಬೀಯಕ್+ಇವರ್+ಅಂಜಿದರ್+ಎನುತ +ಮೂದಲಿಸಿದನು +ನೃಪರ

ಅಚ್ಚರಿ:
(೧) ಹಂಗಿಸುವ ಪರಿ – ಅಸುವಿನ ಬೀಯಕಿವರಂಜಿದರೆನುತ ಮೂದಲಿಸಿದನು ನೃಪರ

ಪದ್ಯ ೪೩: ಶಲ್ಯನ ಮೇಲೆ ಯಾರು ನುಗ್ಗಿದರು?

ತರಹರಿಸಿದುದು ಪಾಯದಳ ತಲೆ
ವರಿಗೆಯಲಿ ಮೊಗದಡ್ಡವರಿಗೆಯ
ಲರರೆ ರಾವುತೆನುತ್ತ ನೂಕಿತು ಬಿಟ್ಟ ಸೂಠಿಯಲಿ
ತುರಗದಳ ಮೊಗರಂಬದಲಿ ಮೊಗ
ವರಿಗೆಗಲಲಾರೋಹಕರು ಚ
ಪ್ಪರಿಸಿ ಚಾಚಿದರಾನೆಗಲನಾ ಶಲ್ಯನಿದಿರಿನಲಿ (ಶಲ್ಯ ಪರ್ವ, ೨ ಸಂಧಿ, ೪೩ ಪದ್ಯ)

ತಾತ್ಪರ್ಯ:
ತಲೆಗೆ ಗುರಾಣಿಯನ್ನು ಹಿಡಿದ ಕಾಲುದಳದವರೂ, ಮುಖಕ್ಕೆ ಅಡ್ಡಹಿಡಿದ ರಾವುತರೂ, ಪರಸ್ಪರ ಪ್ರೋತ್ಸಾಹಿಸುತ್ತಾ, ಅತಿವೇಗದಿಂದ ಮುಂದುವರೆದರು. ಮೊಗರಂಬ (ಮುಖದ ಅಲಂಕಾರ) ಹೊತ್ತ ಕುದುರೆಗಲು, ಆನೆಗಳು, ತಮ್ಮ ಸವಾರರು ಅಪ್ಪರಿಸಲು ಶಲ್ಯನ ಮೇಲೆ ನುಗ್ಗಿದವು.

ಅರ್ಥ:
ತರಹರಿಸು:ತಡಮಾಡು; ಕಳವಳಿಸು; ಪಾಯದಳ: ಸೈನಿಕ; ತಲೆವರಿಗೆ: ಗುರಾಣಿ; ಮೊಗ: ಮುಖ; ಅಡ್ಡ: ನಡುವೆ; ರಾವುತ: ಕುದುರೆ ಸವಾರ, ಅಶ್ವಾರೋಹಿ; ನೂಕು: ತಳ್ಳು; ಸೂಠಿ: ವೇಗ; ತುರಗದಳ: ಕುದುರೆಯ ಸೈನ್ಯ; ಅಂಬು: ಬಾಣ; ಆರೋಹ: ಸವಾರ, ಹತ್ತುವವ; ಚಪ್ಪರಿಸು: ಸವಿ, ರುಚಿನೋಡು; ಚಾಚು: ಹರಡು; ಆನೆ: ಕರಿ; ಇದಿರು: ಎದುರು;

ಪದವಿಂಗಡಣೆ:
ತರಹರಿಸಿದುದು +ಪಾಯದಳ +ತಲೆ
ವರಿಗೆಯಲಿ +ಮೊಗದ್+ಅಡ್ಡವರಿಗೆಯಲ್
ಅರರೆ +ರಾವುತ್+ಎನುತ್ತ+ ನೂಕಿತು +ಬಿಟ್ಟ +ಸೂಠಿಯಲಿ
ತುರಗದಳ +ಮೊಗರ್+ಅಂಬದಲಿ +ಮೊಗ
ವರಿಗೆಗಲಲ್+ಆರೋಹಕರು +ಚ
ಪ್ಪರಿಸಿ +ಚಾಚಿದರ್+ಆನೆಗಳನ್+ಆ +ಶಲ್ಯನ್+ಇದಿರಿನಲಿ

ಅಚ್ಚರಿ:
(೧) ತಲೆವರಿಗೆ, ಮೊಗವರಿಗೆ – ಪದಗಳ ಬಳಕೆ

ಪದ್ಯ ೨೭: ಕೃಷ್ಣನ ರಥವ ವೇಗ ಹೇಗಿತ್ತು?

ಜರಿದುದೀ ಬಲರಾಸಿ ಗಾಳಿಯ
ಹೊರಳಿಗೊಡ್ಡಿದ ಹೊಟ್ಟು ಹಾರುವು
ದರಿದೆ ಗಿರಿಗಳು ನೆಲನ ಬಿಟ್ಟುದನೇನ ಹೇಳುವೆನು
ಗುರುತನುಜ ಕೃಪ ಕರ್ಣ ಮಾದ್ರೇ
ಶ್ವರ ಸುಯೋಧನ ಚಿತ್ರಸೇನರು
ಮುರಿದು ತರಹರಿಸಿದರು ಸೂಚೀವ್ಯೂಹದಗ್ರದಲಿ (ದ್ರೋಣ ಪರ್ವ, ೧೪ ಸಂಧಿ, ೨೭ ಪದ್ಯ)

ತಾತ್ಪರ್ಯ:
ಕೃಷ್ಣನು ರಥವನ್ನು ಬಿಟ್ಟ ರಭಸಕ್ಕೆ ಕೌರವ ಸೈನ್ಯವು ಜಾರಿಹೋಯಿತು. ಗಾಳಿ ಬಿರುಸಾಗಿ ಬೀಸಿದಾಗ ಹೊಟ್ತು ಹಾರಿಹೋಗುವುದೇನು ಕಷ್ಟವೇ? ಆ ವೇಗಕ್ಕೆ ಬೆಟ್ಟಗಳು ಭೂಮಿಯನ್ನು ಬಿಟ್ಟು ಮೇಲಕ್ಕೆ ಹಾರಿದವು. ಏನೆಂದು ವರ್ಣಿಸಲಿ ಆ ಚಿತ್ರವನು. ಸೂಚೀವ್ಯೂಹದ ಮುಂಭಾಗದಲ್ಲಿದ್ದ ಅಶ್ವತ್ಥಾಮ, ಕೃಪ, ಕರ್ಣ, ಶಲ್ಯ, ದುರ್ಯೋಧನ ಚಿತ್ರಸೇನರು ಹಿಂದಕ್ಕೆ ಸರಿದು ಕಳವಳಗೊಂಡರು.

ಅರ್ಥ:
ಜರಿ: ಜಾರು, ಓಡಿಹೋಗು, ಪಲಾಯನ ಮಾಡು; ಬಲರಾಸಿ: ಸೈನ್ಯ; ಗಾಳಿ: ವಾಯು; ಹೊರಳು: ತಿರುಗು, ಚಲಿಸು; ಒಡ್ಡು: ರಾಶಿ, ಸಮೂಹ; ಹೊಟ್ಟು: ಸಾರವಿಲ್ಲದ್ದು; ಹಾರು: ಲಂಘಿಸು; ಗಿರಿ: ಬೆಟ್ಟ; ನೆಲ: ಭೂಮಿ; ಬಿಟ್ಟು: ತೊರೆ; ಹೇಳು: ತಿಳಿಸು; ಗುರು: ಆಚಾರ್ಯ; ತನುಜ: ಮಗ; ಮುರಿ: ಸೀಳು; ತರಹರಿಸು: ಕಳವಳಿಸು, ಸೈರಿಸು; ವ್ಯೂಹ: ಗುಂಪು; ಅಗ್ರ: ಮುಂದೆ;

ಪದವಿಂಗಡಣೆ:
ಜರಿದುದ್+ಈ+ ಬಲರಾಸಿ +ಗಾಳಿಯ
ಹೊರಳಿಗ್+ಒಡ್ಡಿದ +ಹೊಟ್ಟು +ಹಾರುವು
ದರಿದೆ +ಗಿರಿಗಳು +ನೆಲನ +ಬಿಟ್ಟುದನ್+ಏನ +ಹೇಳುವೆನು
ಗುರುತನುಜ +ಕೃಪ +ಕರ್ಣ +ಮಾದ್ರೇ
ಶ್ವರ +ಸುಯೋಧನ +ಚಿತ್ರಸೇನರು
ಮುರಿದು +ತರಹರಿಸಿದರು+ ಸೂಚೀವ್ಯೂಹದ್+ಅಗ್ರದಲಿ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗಾಳಿಯ ಹೊರಳಿಗೊಡ್ಡಿದ ಹೊಟ್ಟು ಹಾರುವು ದರಿದೆ
(೨) ವೇಗವನ್ನು ವರ್ಣಿಸುವ ಪರಿ – ಗಿರಿಗಳು ನೆಲನ ಬಿಟ್ಟುದ್

ಪದ್ಯ ೫೩: ಅಭಿಮನ್ಯುವಿನ ದೇಹವು ಯಾವುದರ ತಾಣವಾಯಿತು?

ಶರಮಯವು ಸರ್ವಾಂಗವಿನ್ನೀ
ಸರಳು ನೆಡಲಿಂಬಿಲ್ಲ ಮೈಗಳೊ
ಳರಿಯನದನಭಿಮನ್ಯು ಕರ್ಣನ ಮೇಲುವಾಯಿದನು
ತರಹರಿಸಿ ಕೆಲಸಿಡಿದು ರಿಪುಭಟ
ನುರವನುದರವನೆಡಬಲನ ಕಿ
ಬ್ಬರಿಯನೆಚ್ಚನು ಕರ್ಣ ನೂರೈವತ್ತು ಬಾಣದಲಿ (ದ್ರೋಣ ಪರ್ವ, ೬ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಭಿಮನ್ಯುವಿನ ಮೈಯೆಲ್ಲಾ ಬಾಣಮಯವಾಯಿತು. ಮೇಲೆ ಬಿಟ್ಟ ಬಾಣಗಳಿಗೆ ನೆಡಲು ಜಾಗವೇ ಇರಲಿಲ್ಲ. ಅಭಿಮನ್ಯುವಿಗೆ ಇದು ತಿಳಿಯದೇ ಇರಲಿಲ್ಲ. ಅ ವನು ಕರ್ಣನ್ ಮೇಲೆ ಬಿದ್ದನು. ಕರ್ಣನು ಸುಧಾರಿಸಿಕೊಂಡು ಪಕ್ಕಕ್ಕೆ ನೆಗೆದು ಅಭಿಮನ್ಯುವಿನ ಎದೆ, ಹೊಟ್ಟೆ, ಎಡಬಲದ ಪಕ್ಕೆಗಳನ್ನು ನೂರೈವತ್ತು ಬಾಣಗಳಿಂದ ಹೊಡೆದನು.

ಅರ್ಥ:
ಶರ: ಸರಳು, ಬಾಣ; ಸರ್ವಾಂಗ: ಎಲ್ಲಾ ಅಂಗಗಳು; ನೆಡು: ಬಿತ್ತು; ಇಂಬು:ತಾಣ, ನೆಲೆ; ಮೈ: ತನು; ಅರಿ: ತಿಳಿ; ಮೇಲೆ: ಮುಂದಕ್ಕೆ; ಆಯಿದ: ಬೀಳು; ತರಹರಿಸು: ಕಳವಳಿಸು, ಸೈರಿಸು; ಸಿಡಿ: ಸ್ಫೋಟ; ರಿಪು: ವೈರಿ; ಭಟ: ಸೈನಿಕ; ಉರ: ಎದೆ; ಉದರ: ಹೊಟ್ಟೆ; ಎಡಬಲ: ಅಕ್ಕ ಪಕ್ಕ; ಕಿಬ್ಬರಿ: ಪಕ್ಕೆಯ ಕೆಳ ಭಾಗ; ಎಚ್ಚು: ಬಾಣ ಪ್ರಯೋಗ ಮಾಡು; ಬಾಣ: ಶರ;

ಪದವಿಂಗಡಣೆ:
ಶರಮಯವು +ಸರ್ವಾಂಗವ್+ಇನ್ನೀ
ಸರಳು +ನೆಡಲ್+ಇಂಬಿಲ್ಲ +ಮೈಗಳೊಳ್
ಅರಿಯನ್+ಅದನ್+ಅಭಿಮನ್ಯು +ಕರ್ಣನ +ಮೇಲುವಾಯಿದನು
ತರಹರಿಸಿ +ಕೆಲಸಿಡಿದು +ರಿಪುಭಟನ್
ಉರವನ್+ಉದರವನ್+ಎಡಬಲನ +ಕಿ
ಬ್ಬರಿಯನ್+ಎಚ್ಚನು +ಕರ್ಣ +ನೂರೈವತ್ತು +ಬಾಣದಲಿ

ಅಚ್ಚರಿ:
(೧) ದೇಹದ ಸ್ಥಿತಿ – ಶರಮಯವು ಸರ್ವಾಂಗವಿನ್ನೀ ಸರಳು ನೆಡಲಿಂಬಿಲ್ಲ
(೨) ಉರ, ಉದರ, ಕಿಬ್ಬರಿ – ಪದಗಳ ಬಳಕೆ
(೨) ಶರ, ಬಾಣ, ಸರಳು – ಸಮಾನಾರ್ಥಕ ಪದ, ಪದ್ಯದ ಮೊದಲ ಹಾಗು ಕೊನೆಯ ಪದ

ಪದ್ಯ ೭೩: ಅರ್ಜುನನು ಕೌರವನಿಗೆ ಹೇಗೆ ಉತ್ತರಿಸಿದನು?

ಗರುಡ ನೀನಹೆ ನಿನ್ನ ಪಕ್ಕವ
ಮುರಿದು ಹೆಡತಲೆಗಡರಿ ಬೆನ್ನಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ ನೀನರಿಯ
ತರಹರಿಸಿ ಕಲಿಯಾಗುಯೆಂದ
ಬ್ಬರಿಸಿ ಕೌರವನೆದೆಯನುಗುಳಿದ
ನೆರಡು ಬಾಣದೊಳರುಣ ಜಲದೊರತೆಗಳ ಕಾಣಿಸಿದ (ವಿರಾಟ ಪರ್ವ, ೯ ಸಂಧಿ, ೭೩ ಪದ್ಯ)

ತಾತ್ಪರ್ಯ:
ಅರ್ಜುನನು ಕೌರವನಿಗೆ ಉತ್ತರಿಸುತ್ತಾ, ನಿಜ ನೀನು ಗರುಡನೇ, ಆದರೆ ನಿನ್ನ ರೆಕ್ಕೆಗಳನ್ನು ಮುರಿದು ನಿನ್ನ ಹೆಡತಲೆಯ ಮೇಲೇರಿ ನಿನ್ನ ಬೆನ್ನೆಲುಬು ಮುರಿಯುವಂತೆ ಸವಾರಿ ಮಾಡುವ ವಿಷ್ಣು ನಾನು, ಇದು ನಿನಗೆ ತಿಳಿದಿಲ್ಲವೇ? ಸುಧಾರಿಸಿಕೋ, ಸ್ವಲ್ಪ ಶೌರ್ಯವನ್ನು ತಂದುಕೋ ಎಂದು ಗರ್ಜಿಸಿ ಎರಡು ಬಾಣಗಳನ್ನು ಬಿಡಲು ಕೌರವನ ಎದೆ ವಿರಿದು ರಕ್ತ ಸುರಿಯಿತು.

ಅರ್ಥ:
ಗರುಡ: ಹದ್ದಿನ ಜಾತಿಗೆ ಸೇರಿದ ಒಂದು ಪಕ್ಷಿ, ವಿಷ್ಣುವಿನ ವಾಹನ; ಪಕ್ಕ: ರೆಕ್ಕೆ, ಗರಿ; ಮುರಿ: ಸೀಳು; ಹೆಡತಲೆ: ಹಿಂದಲೆ; ಅಡರು: ಮೇಲಕ್ಕೆ ಹತ್ತು; ಬೆನ್ನು: ಹಿಂಭಾಗ; ಎಲು: ಎಲುಬು, ಮೂಳೆ; ಮುರಿ: ಸೀಳು; ದುವ್ವಾಳಿ: ತೀವ್ರಗತಿ, ಓಟ; ಮುರರಿಪು: ಮುರನೆಂಬ ರಾಕ್ಷಸನ ವೈರಿ (ವಿಷ್ಣು); ಅರಿ: ತಿಳಿ; ತರಹರಿಸು: ತಡಮಾಡು, ಕಳವಳ; ಕಲಿ: ಶೂರ; ಅಬ್ಬರ: ಗರ್ಜನೆ, ಆರ್ಭಟ; ಎದೆ: ವಕ್ಷಸ್ಥಳ; ಉಗುಳು: ಹೊರಹಾಕು; ಬಾಣ: ಅಂಬು, ಸರಳು; ಅರುಣ: ಕೆಂಪು; ಜಲ: ನೀರು; ಅರುಣಜಲ: ರಕ್ತ; ಒರತೆ: ಚಿಲುಮೆ; ಕಾಣಿಸು: ತೋರು;

ಪದವಿಂಗಡಣೆ:
ಗರುಡ +ನೀನಹೆ+ ನಿನ್ನ +ಪಕ್ಕವ
ಮುರಿದು +ಹೆಡತಲೆಗ್+ಅಡರಿ +ಬೆನ್ನಲು
ಮುರಿಯೆ +ದುವ್ವಾಳಿಸುವ +ಮುರರಿಪುವ್+ಎನ್ನ+ ನೀನರಿಯ
ತರಹರಿಸಿ+ ಕಲಿಯಾಗು+ಎಂದ್
ಅಬ್ಬರಿಸಿ +ಕೌರವನ್+ಎದೆಯನ್+ಉಗುಳಿದನ್
ಎರಡು +ಬಾಣದೊಳ್+ಅರುಣ +ಜಲದ್+ಒರತೆಗಳ+ ಕಾಣಿಸಿದ

ಅಚ್ಚರಿ:
(೧) ಅರ್ಜುನನು ತನ್ನ ಪೌರುಷವನ್ನು ಹೇಳುವ ಪರಿ – ನಿನ್ನ ಪಕ್ಕವ ಮುರಿದು ಹೆಡತಲೆಗಡರಿ ಬೆನ್ನಲು
ಮುರಿಯೆ ದುವ್ವಾಳಿಸುವ ಮುರರಿಪುವೆನ್ನ