ಪದ್ಯ ೧: ಗಾಂಧಾರಿಯು ಕೃಷ್ಣನಿಗೆ ಯಾರನ್ನು ತೋರಿಸಲು ಕೇಳಿದಳು?

ಕೇಳು ಜನಮೇಜಯ ಧರಿತ್ರೀ
ಪಾಲ ಕೃಷ್ಣನ ಕರೆದು ನಯದಲಿ
ಲೋಲಲೋಚನೆ ನುಡಿದಳಂತಸ್ತಾಪ ಶಿಖಿ ಜಡಿಯೆ
ಏಳು ತಂದೆ ಮುಕುಂದ ಕದನ
ವ್ಯಾಳವಿಷನಿರ್ದಗ್ಧಧರಣೀ
ಪಾಲವರ್ಗವ ತೋರಿಸೆಂದಳು ತರಳೆ ಕೈಮುಗಿದು (ಗದಾ ಪರ್ವ, ೧೨ ಸಂಧಿ, ೧ ಪದ್ಯ)

ತಾತ್ಪರ್ಯ:
ರಾಜ ಜನಮೇಜಯ ಕೇಳು, ಗಾಂಧಾರಿಯು ಕೃಷ್ಣನನ್ನು ಕರೆದು ತನ್ನ ಮನಸ್ಸಿನ ದುಃಖವನ್ನು ಅವನೆದುರು ತೋಡಿಕೊಂಡಳು, ತಂದೆ ಕೃಷ್ಣಾ ಯುದ್ಧ ಸರ್ಪದ ವಿಷದ ಬೆಂಕಿಯಿಂದ ದಹಿಸಿದ ಮೃತರಾಜರನ್ನು ನನಗೆ ತೋರಿಸು ಎಂದು ಕೇಳಿದಳು.

ಅರ್ಥ:
ಧರಿತ್ರೀಪಾಲ: ರಾಜ; ಕರೆದು: ಬರೆಮಾಡು; ನಯ: ಪ್ರೀತಿ; ಲೋಲಲೋಚನೆ: ಅತ್ತಿತ್ತ ಅಲುಗಾಡುವ, ಪ್ರೀತಿ ಕಣ್ಣುಳ್ಳ; ನುಡಿ: ಮಾತಾಡು; ಅಂತಸ್ತಾಪ: ಮನಸ್ಸಿನ ದುಃಖ; ಶಿಖಿ: ಬೆಂಕಿ; ಜಡಿ: ಕೂಗು, ಧ್ವನಿಮಾಡು; ಏಳು: ಮೇಲೇಳು; ತಂದೆ: ಪಿತ; ಕದನ: ಯುದ್ಧ; ವ್ಯಾಳ: ಸರ್ಪ; ವಿಷ: ಗರಲ; ದಗ್ಧ: ದಹಿಸಿದುದು, ಸುಟ್ಟುದು; ಧರಣೀಪಾಲ: ರಾಜ; ವರ್ಗ: ಗುಂಪು; ತೋರಿಸು: ಕಾಣಿಸು; ತರಳೆ: ಹೆಣ್ಣು; ಕೈಮುಗಿದು: ನಮಸ್ಕೈರಿಸು;

ಪದವಿಂಗಡಣೆ:
ಕೇಳು +ಜನಮೇಜಯ +ಧರಿತ್ರೀ
ಪಾಲ +ಕೃಷ್ಣನ +ಕರೆದು +ನಯದಲಿ
ಲೋಲಲೋಚನೆ +ನುಡಿದಳ್+ಅಂತಸ್ತಾಪ+ಶಿಖಿ +ಜಡಿಯೆ
ಏಳು +ತಂದೆ +ಮುಕುಂದ +ಕದನ
ವ್ಯಾಳ+ವಿಷ+ನಿರ್ದಗ್ಧ+ಧರಣೀ
ಪಾಲ+ವರ್ಗವ +ತೋರಿಸೆಂದಳು +ತರಳೆ +ಕೈಮುಗಿದು

ಅಚ್ಚರಿ:
(೧) ಲೋಲಲೋಚನೆ, ತರಳೆ; ಧರಿತ್ರೀಪಾಲ, ಧರಣೀಪಾಲ – ಸಮಾನಾರ್ಥಕ ಪದ
(೨) ರೂಪಕದ ಪ್ರಯೋಗ – ಕದನ ವ್ಯಾಳವಿಷನಿರ್ದಗ್ಧಧರಣೀಪಾಲವರ್ಗವ ತೋರಿಸೆಂದಳು ತರಳೆ

ಪದ್ಯ ೧೮: ದ್ರೌಪದಿಯೇಕೆ ಗೋಳಿಟ್ಟಳು?

ಶಿವಶಿವಾ ಪಾಪಿಗಳು ಪತಿಯಾ
ದವರ ತಾಗಲಿ ಸುಯ್ಲಕಟ ನಾ
ಲುವರ ನಡುವಣ ಹಾವು ಸಾಯದು ನಿರಪರಾಧಿಯನು
ಅವಗಡಿಸಿದನು ಖಳನು ಧರ್ಮದ
ವಿವರ ಸುದ್ದಿಯನಾಡದೀ ಜನ
ನಿವಹ ಘೋರಾರಣ್ಯವಾಯ್ತೆಂದೊರಲಿದಳು ತರಳೆ (ವಿರಾಟ ಪರ್ವ, ೩ ಸಂಧಿ, ೧೮ ಪದ್ಯ)

ತಾತ್ಪರ್ಯ:
ಶಿವ ಶಿವಾ ನಾನು ಬಿಟ್ಟ ನಿಟ್ಟುಸಿರು ಪಾಪಿಗಳಾದ ನನ್ನ ಪತಿಗಳಿಗೆ ಮುಟ್ಟಲಿ, ನಾಲ್ಕು ಜನ ನಡುವಿನ ಹಾವು ಸಾಯುವುದಿಲ್ಲ, ನಿರಪರಾಧಿಯಾದ ನನ್ನನ್ನು ಈ ದುಷ್ಟನು ಬದಿದನು. ಅದನ್ನು ತಡೆಯುವ ಒಂದೂ ಮಾತಾಡದ ಈ ಜನರ ಗುಂಪಿನ ತಾಣ ಭಯಂಕರವಾದ ಕಾಡು, ಧರ್ಮವನ್ನರಿಯದ ಜಂಗುಳಿಯಿದು ಎಂದು ದ್ರೌಪದಿಯು ಗೋಳಿಟ್ಟಳು.

ಅರ್ಥ:
ಪಾಪಿ: ದುಷ್ಟ; ಪತಿ: ಗಂಡ; ತಾಗು: ಮುಟ್ಟು; ಸುಯ್ಲು: ನಿಟ್ಟುಸಿರು; ಅಕಟ: ಅಯ್ಯೋ; ಹಾವು: ಉರಗ; ಸಾವು: ಮರಣ; ನಿರಪರಾಧಿ: ಅಪರಾಧ ಮಾಡದಿರುವ; ಅವಗಡ: ಅಸಡ್ಡೆ; ಖಳ: ದುಷ್ಟ; ಧರ್ಮ: ಧಾರಣೆ ಮಾಡಿದುದು; ವಿವರ: ವಿಚಾರ; ಸುದ್ದಿ: ವಾರ್ತೆ, ಸಮಾಆರ; ನಿವಹ: ಗುಂಪು; ಘೋರ: ಉಗ್ರ, ಭಯಂಕರ; ಅರಣ್ಯ: ಕಾಡು; ಒರಳು: ಗೋಳಿಡು; ತರಳೆ: ಹೆಣ್ಣು;

ಪದವಿಂಗಡಣೆ:
ಶಿವಶಿವಾ +ಪಾಪಿಗಳು +ಪತಿಯಾ
ದವರ +ತಾಗಲಿ +ಸುಯ್ಲ್+ಅಕಟ+ ನಾ
ಲುವರ +ನಡುವಣ+ ಹಾವು +ಸಾಯದು +ನಿರಪರಾಧಿಯನು
ಅವಗಡಿಸಿದನು +ಖಳನು +ಧರ್ಮದ
ವಿವರ+ ಸುದ್ದಿಯನ್+ಆಡದ್+ಈ+ ಜನ
ನಿವಹ+ ಘೋರ+ಅರಣ್ಯವಾಯ್ತೆಂದ್+ಒರಲಿದಳು+ ತರಳೆ

ಅಚ್ಚರಿ:
(೧) ವಿಚಾರವನ್ನು ಹೇಳುವ ಪರಿ – ನಾಲುವರ ನಡುವಣ ಹಾವು ಸಾಯದು

ಪದ್ಯ ೧೮: ಕೀಚಕನು ದ್ರೌಪದಿಗೆ ಏನು ಹೇಳಿದನು?

ಖಳನ ಮನದಿಂಗಿತವನಾಗಳೆ
ತಿಳಿದು ಕಾಮಿನಿ ಬೆದರಿದಳು ಕಳ
ವಳಿಗ ಸೋತನು ಕೆಟ್ಟೆನೆಂದಳು ತನ್ನ ಮನದೊಳಗೆ
ತೊಲಗಿ ಹಿಂದಡಿಯಿಡಲು ಕೀಚಕ
ನಳುಕದೈತಂದಬುಜವದನೆಯ
ಬಳಿಗೆ ಬಂದನು ನುಡಿಸಲಾಗದೆ ತರಳೆ ನೀನೆಂದ (ವಿರಾಟ ಪರ್ವ, ೨ ಸಂಧಿ, ೧೮ ಪದ್ಯ)

ತಾತ್ಪರ್ಯ:
ಕೀಚಕನ ಮನಸ್ಸಿನ ಇಂಗಿತವನ್ನು ದ್ರೌಪದಿ ತಿಳಿದಳು. ಇವನು ಕಾಮದ ಕಳವಳಕ್ಕೆ ಗುರಿಯಾಗಿದ್ದಾನೆ, ನಾನು ಕೆಟ್ಟೆ ಎಂದು ಯೋಚಿಸಿ, ಹಿಂದಕ್ಕೆ ಹೆಜ್ಜೆಯಿಟ್ಟಳು, ಅವನು ಹೆದರದೆ ಅವಳ ಬಳಿಗೆ ಬಂದು, ತರಳೆ ನನ್ನನ್ನು ಮಾತನಾಡಿಸಬಾರದೇ ಎಂದು ಕೇಳಿದನು.

ಅರ್ಥ:
ಖಳ: ದುಷ್ಟ; ಮನ: ಮನಸ್ಸು; ಇಂಗಿತ: ಆಶಯ, ಅಭಿಪ್ರಾಯ; ತಿಳಿ: ಅರಿ; ಕಾಮಿನಿ: ಹೆಣ್ಣು; ಬೆದರು: ಹೆದರು; ಕಳವಳ: ಗೊಂದಲ; ಸೋತು: ಪರಾಭವ; ಕೆಟ್ಟೆ: ನಾಶ, ಕೆಡು; ಮನ: ಮನಸ್ಸು; ತೊಲಗು: ದೂರ ಸರಿ; ಹಿಂದಡಿ: ಹಿಮ್ಮೆಟ್ಟು; ಅಳುಕು: ಹೆದರು; ಐತಂದು: ಬಂದು ಸೇರು; ಅಬುಜವದನೆ: ಕಮಲದಂತಹ ಮುಖ; ಬಳಿ: ಹತ್ತಿರ; ನುಡಿಸು: ಮಾತನಾಡು; ತರಳೆ: ಹೆಣ್ಣು;

ಪದವಿಂಗಡಣೆ:
ಖಳನ+ ಮನದ್+ಇಂಗಿತವನ್+ಆಗಳೆ
ತಿಳಿದು +ಕಾಮಿನಿ +ಬೆದರಿದಳು+ ಕಳ
ವಳಿಗ +ಸೋತನು +ಕೆಟ್ಟೆನೆಂದಳು +ತನ್ನ +ಮನದೊಳಗೆ
ತೊಲಗಿ +ಹಿಂದಡಿಯಿಡಲು+ ಕೀಚಕನ್
ಅಳುಕದ್+ಐತಂದ್+ಅಬುಜವದನೆಯ
ಬಳಿಗೆ +ಬಂದನು +ನುಡಿಸಲಾಗದೆ+ ತರಳೆ +ನೀನೆಂದ

ಅಚ್ಚರಿ:
(೧) ಕಾಮಿನಿ, ಅಬುಜವದನೆ, ತರಳೆ – ದ್ರೌಪದಿಯನ್ನು ಕರೆದ ಪರಿ

ಪದ್ಯ ೧೧೦: ದ್ರೌಪದಿಯ ದಯನೀಯ ಸ್ಥಿತಿ ಹೇಗಿತ್ತು?

ಪತಿಗಳೆನ್ನನು ಮಾರಿ ಧರ್ಮ
ಸ್ಥಿತಿಯ ಕೊಂಡರು ಭೀಷ್ಮ ಮೊದಲಾ
ದತಿರಥರು ಪರಹಿತವ ಬಿಸುಟರು ವ್ಯರ್ಥಭೀತಿಯಲಿ
ಸುತನ ಸಿರಿ ಕಡು ಸೊಗಸಲಾ ಭೂ
ಪತಿಗೆ ಗಾಂಧಾರಿಗೆ ಅನಾಥೆಗೆ
ಗತಿಯ ಕಾಣೆನು ಶಿವ ಶಿವಾಯೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೧೦ ಪದ್ಯ)

ತಾತ್ಪರ್ಯ:
ನನ್ನ ಗಂಡಂದಿರು ನನ್ನನ್ನು ಮಾರಿ ಧರ್ಮವನ್ನು ಕೊಂಡುಕೊಂಡಿದ್ದಾರೆ. ಭೀಷ್ಮರೇ ಮೊದಲಾದ ಮಹಾ ಪರಾಕ್ರಮಿಗಳು ವೃಥಾ ಭಯದಿಂದ ಪರರಿಗೆ ಹಿತವನ್ನು ಮಾಡದೆ ಸುಮ್ಮನಿದ್ದಾರೆ. ತಮ್ಮ ಮಗನ ವೈಭವವು ಗಾಂಧಾರಿಗೆ ಧೃತರಾಷ್ಟ್ರರರಿಗೆ ಬಹಳ ಸೊಗಸುತ್ತಿದೆ. ಅನಾಥೆಯಾದ ನನಗೆ ಶಿವ ಶಿವಾ ಗತಿ ಯಾರು ಎಂದು ದ್ರೌಪದಿಯು ಕೊರಗಿದಳು.

ಅರ್ಥ:
ಪತಿ: ಗಂಡ; ಮಾರು: ವಿಕ್ರಯಿಸು; ಧರ್ಮ: ಧಾರಣೆ ಮಾಡಿದುದು, ನಿಯಮ; ಸ್ಥಿತಿ: ಅವಸ್ಥೆ; ಅತಿರಥ: ಪರಾಕ್ರಮಿ; ಪರ: ಬೇರೆ; ಹಿತ: ಒಳಿತು; ಬಿಸುಟು: ಹೊರಹಾಕು; ವ್ಯರ್ಥ: ನಿರುಪಯುಕ್ತತೆ; ಭೀತಿ: ಭಯ; ಸುತ: ಮಗ; ಸಿರಿ: ಐಶ್ವರ್ಯ; ಕಡು: ವಿಶೇಷ, ಅಧಿಕ; ಸೊಗಸು: ಅಂದ, ಚೆಲುವು; ಭೂಪತಿ: ರಾಜ; ಅನಾಥ: ತಬ್ಬಲಿ; ಗತಿ: ದಿಕ್ಕು; ಕಾಣು: ತೋರು; ಒರಲು: ಗೋಳಿಡು; ತರಳೆ: ಯುವತಿ;

ಪದವಿಂಗಡಣೆ:
ಪತಿಗಳ್+ಎನ್ನನು +ಮಾರಿ +ಧರ್ಮ
ಸ್ಥಿತಿಯ +ಕೊಂಡರು +ಭೀಷ್ಮ +ಮೊದಲಾದ್
ಅತಿರಥರು +ಪರಹಿತವ +ಬಿಸುಟರು +ವ್ಯರ್ಥ+ಭೀತಿಯಲಿ
ಸುತನ +ಸಿರಿ +ಕಡು +ಸೊಗಸಲಾ +ಭೂ
ಪತಿಗೆ +ಗಾಂಧಾರಿಗೆ +ಅನಾಥೆಗೆ
ಗತಿಯ+ ಕಾಣೆನು +ಶಿವ+ ಶಿವಾ+ಎಂದ್+ಒರಲಿದಳು +ತರಳೆ

ಅಚ್ಚರಿ:
(೧) ದ್ರೌಪದಿಯ ದಯನೀಯ ಸ್ಥಿತಿ – ಅನಾಥೆಗೆ ಗತಿಯ ಕಾಣೆನು ಶಿವ ಶಿವಾ
(೨) ಗಾಂಧಾರಿಗೆ ತನ್ನ ದುಃಖವನ್ನು ತೋರುವ ಪರಿ – ಸುತನ ಸಿರಿ ಕಡು ಸೊಗಸಲಾ ಭೂ
ಪತಿಗೆ ಗಾಂಧಾರಿಗೆ

ಪದ್ಯ ೧೦೬: ದ್ರೌಪದಿ ಯಾರ ಕಡೆ ತಿರುಗಿ ಸಹಾಯವನ್ನು ಬೇಡಿದಳು?

ಮುರಿದುದನಿಬರ ಮೋರೆ ಮಹಿಪನ
ಕೊರಲ ಕೊಂಕಿನಲಿದ್ದರಾ
ಸೋದರರು ಸಾರವನಲ್ಲಿ ಕಾಣದೆ ಭೀಷ್ಮ ಗುರು ಕೃಪರ
ಮರಳಿ ನೋಡಿದಳಕಟ ಗಂಗಾ
ವರ ಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ (ಸಭಾ ಪರ್ವ, ೧೫ ಸಂಧಿ, ೧೦೬ ಪದ್ಯ)

ತಾತ್ಪರ್ಯ:
ದೈನ್ಯದ ಸ್ಥಿತಿಯಲ್ಲಿ ಪಾಂಡವರ ಕಡೆ ದ್ರೌಪದಿ ನೋಡಲು, ಪಾಂಡವರು ಆಕೆಯ ಮುಖವನ್ನು ನೋಡಲಾಗದೆ, ಅವರ ಮುಖವನ್ನು ಬೇರೆ ಕಡೆಗೆ ತಿರುಗಿಸಿದರು. ಯುಧಿಷ್ಠಿರನ ಸನ್ನೆಯಂತೆ ಉಳಿದ ನಾಲ್ವರು ಸುಮ್ಮನಿದ್ದರು. ಅವಳು ಮತ್ತೆ ಹಿರಿಯರಾದ ಭೀಷ್ಮಾದಿಗಳ ಬಳಿ ಹೋಗಿ, ಭೀಷ್ಮ, ದ್ರೋಣ, ಕೃಪಾಚಾರ್ಯರೆ, ನನ್ನ ತಂದೆಗಳಿರಾ ನನ್ನ ಸೆರಗನ್ನು ಬಿಡಿಸಿರಿ ಎಂದು ಕಣ್ಣೀರಿಟ್ಟಳು.

ಅರ್ಥ:
ಮುರಿ: ತಿರುಗು; ಅನಿಬರು: ಅಷ್ಟು ಜನ; ಮೋರೆ: ಮುಖ; ಮಹಿಷ: ರಾಜ; ಕೊರಲು: ದನಿ; ಕೊಂಕು: ಹಿಂಜರಿ; ಸೋದರ: ತಮ್ಮ; ಸಾರ: ರಸ; ಕಾಣು: ನೋಡು; ಮರಳಿ: ಮತ್ತೆ; ನೋಡು: ವೀಕ್ಷಿಸು; ಅಕಟ: ಅಯ್ಯೋ; ವರ: ಶ್ರೇಷ್ಠ; ಕುಮಾರ: ಮಗ; ಸೆರಗು: ಸೀರೆಯಲ್ಲಿ ಹೊದೆಯುವ ಭಾಗ, ಮೇಲುದು; ಬಿಡಿಸು: ಕಳಚು, ಸಡಿಲಿಸು; ತಂದೆ: ಪಿತ, ತಾತ; ಒರಲು: ಗೋಳಿಡು; ತರಳೆ: ಬಾಲೆ, ಯುವತಿ;

ಪದವಿಂಗಡಣೆ:
ಮುರಿದುದ್+ಅನಿಬರ+ ಮೋರೆ+ ಮಹಿಪನ
ಕೊರಲ+ ಕೊಂಕಿನಲ್+ಇದ್ದರಾ
ಸೋದರರು+ ಸಾರವನಲ್ಲಿ+ ಕಾಣದೆ +ಭೀಷ್ಮ +ಗುರು +ಕೃಪರ
ಮರಳಿ +ನೋಡಿದಳ್+ಅಕಟ +ಗಂಗಾ
ವರ+ ಕುಮಾರ+ ದ್ರೋಣ +ಕೃಪರ್+ಈ
ಸೆರಗ+ ಬಿಡಿಸಿರೆ +ತಂದೆಗಳಿರ್+ಎಂದ್+ಒರಲಿದಳು +ತರಳೆ

ಅಚ್ಚರಿ:
(೧) ಭೀಷ್ಮರನ್ನು ಗಂಗಾವರ ಕುಮಾರ ಎಂದು ಕರೆದಿರುವುದು
(೨) ದೈನ್ಯದ ಸ್ಥಿತಿ – ಮರಳಿ ನೋಡಿದಳಕಟ ಗಂಗಾವರ ಕುಮಾರ ದ್ರೋಣ ಕೃಪರೀ
ಸೆರಗ ಬಿಡಿಸಿರೆ ತಂದೆಗಳಿರೆಂದೊರಲಿದಳು ತರಳೆ