ಪದ್ಯ ೩೨: ವ್ಯಾಸರು ಯಾವ ಆಶ್ರಮಕ್ಕೆ ಮರಳಿದರು?

ಎನಲು ಯೋಜನಗಂಧಿ ನಿಜ ನಂ
ದನನ ನುಡಿಯೇ ವೇದಸಿದ್ಧವಿ
ದೆನುತ ಸೊಸೆಯರು ಸಹಿತ ನಡೆದಳು ವರ ತಪೋವನಕೆ
ಮುನಿಪನತ್ತಲು ಬದರಿಕಾ ನಂ
ದನಕೆ ಮರಳಿದನಿತ್ತ ಗಂಗಾ
ತನುಜ ಸಲಹಿದನಖಿಳ ಪಾಂಡವ ಕೌರವ ವ್ರಜವ (ಆದಿ ಪರ್ವ, ೫ ಸಂಧಿ, ೩೨ ಪದ್ಯ)

ತಾತ್ಪರ್ಯ:
ಯೋಜನಗಮ್ಧಿಯು ವೇದವ್ಯಾಸರು ತನ್ನ ಮಗ ಹೇಳಿದ ಮಾತು ವೇದವಾಕ್ಯವೆಂದು ಒಪ್ಪಿ ತನ್ನ ಸೊಸೆಯಂದಿರ ಜೊತೆಗೆ ತಪೋವನಕ್ಕೆ ಹೊರಟು ಹೋದಳು. ವೇದವ್ಯಾಸರು ಬದರಿಕಾಶ್ರಮಕ್ಕೆ ಹಿಂದಿರುಗಿದರು. ಭೀಷ್ಮನು ಕೌರವ ಪಾಂಡವರನ್ನು ರಕ್ಷಿಸಿದನು.

ಅರ್ಥ:
ನಿಜ: ತನ್ನ, ದಿಟ; ನಂದನ: ಮಗ; ನುಡಿ: ಮಾತು; ಸಿದ್ಧ: ಸಾಧಿಸಿದ, ಅಣಿ; ಸೊಸೆ: ಮಗನ ಹೆಂಡತಿ; ಸಹಿತ: ಜೊತೆ; ನಡೆ: ಚಲಿಸು; ವರ: ಶ್ರೇಷ್ಠ; ತಪೋವನ: ಆಶ್ರಮ; ಮುನಿಪ: ಋಷಿ; ನಂದನ: ತೋಟ, ಉದ್ಯಾನ; ಮರಳು: ಹಿಂದಿರುಗು; ತನುಜ: ಮಗ; ಸಲಹು: ರಕ್ಶಿಸು; ಅಖಿಳ: ಎಲ್ಲಾ; ವ್ರಜ: ಗುಂಪು;

ಪದವಿಂಗಡಣೆ:
ಎನಲು+ ಯೋಜನಗಂಧಿ +ನಿಜ +ನಂ
ದನನ +ನುಡಿಯೇ +ವೇದಸಿದ್ಧವಿ
ದೆನುತ +ಸೊಸೆಯರು +ಸಹಿತ +ನಡೆದಳು +ವರ +ತಪೋವನಕೆ
ಮುನಿಪನ್+ಅತ್ತಲು +ಬದರಿಕಾ +ನಂ
ದನಕೆ +ಮರಳಿದನ್+ಇತ್ತ +ಗಂಗಾ
ತನುಜ+ ಸಲಹಿದನ್+ಅಖಿಳ +ಪಾಂಡವ +ಕೌರವ +ವ್ರಜವ

ಅಚ್ಚರಿ:
(೧) ನ ಕಾರದ ತ್ರಿವಳಿ ಪದ – ನಿಜ ನಂದನನ ನುಡಿಯೇ
(೨) ನಿಜನಂದನ, ಬದರಿಕಾ ನಂದನಕೆ- ನಂದನ ಪದದ ಬಳಕೆ

ಪದ್ಯ ೨೩: ಕಾಡು ಏಕೆ ಸುಗಂಧಮಯವಾಗಿತ್ತು?

ತಾರಕೆಗಳುಳಿದಂಬರದ ವಿ
ಸ್ತಾರವೋ ಗತಹಂಸಕುಲ ಕಾ
ಸಾರವೋ ನಿಸ್ಸಾರವೋ ನಿರ್ಮಳ ತಪೋವನವೋ
ನಾರಿಯದ ದಳ ನೂಕಿದರೆ ತನು
ಸೌರಭದ ದಳ ತೆಗೆಯದಾ ಕಾಂ
ತಾರದೊಳಗೇನೆಂಬೆನಾ ಸೌಗಂಧ ಬಂಧುರವ (ಅರಣ್ಯ ಪರ್ವ, ೧೯ ಸಂಧಿ, ೨೩ ಪದ್ಯ)

ತಾತ್ಪರ್ಯ:
ಆ ತರುಣಿಯರು ಕಾಡನ್ನು ತೊರೆದು ದುರ್ಯೋಧನನ ಜಲಕ್ರೀಡೆಗೆ ತೆರಳಲು, ತಾರೆಗಳು ಹೋದ ಆಗಸವೋ, ಹಂಸಗಳಿಲ್ಲದ ಸರೋವರವೋ ಎಂಬಂತೆ ತಪೋವನತು ನಿಸ್ಸಾರವಾಯಿತು. ಆ ಗಣಿಕೆಯರ ಗುಂಪು ಕಾಡನ್ನು ಬಿಟ್ಟುಹೋದರೂ ಅವರ ದೇಹಗಳ ಸುಗಂಧವು ಆ ಕಾಡಿನಲ್ಲಿ ಉಳಿಯಿತು.

ಅರ್ಥ:
ತಾರಕೆ: ನಕ್ಷತ್ರ; ಉಳಿದ: ಮಿಕ್ಕ; ಅಂಬರ: ಆಗಸ; ವಿಸ್ತಾರ: ಹರಹು, ಗತ: ತೆರಳು; ಹಂಸ: ಮರಾಲ; ಕಾಸಾರ: ಸರೋವರ; ನಿಸ್ಸಾರ: ಸಾರವಿಲ್ಲದುದು, ನೀರಸವಾದುದು; ನಿರ್ಮಳ: ಸ್ವಚ್ಛ; ತಪೋವನ: ತಪಸ್ಸು ಮಾಡುವ ಕಾಡು; ನಾರಿ: ಹೆಣ್ಣು; ದಳ: ಗುಂಪು; ನೂಕು: ತಳ್ಳು; ತನು: ದೇಹ; ಸೌರಭ: ಸುಗಂಧ; ತೆಗೆ: ಈಚೆಗೆ ತರು; ಕಾಂತಾರ: ಅಡವಿ, ಅರಣ್ಯ; ಸೌಗಂಧ: ಪರಿಮಳ; ಬಂಧುರ: ಸುಂದರವಾದ;

ಪದವಿಂಗಡಣೆ:
ತಾರಕೆಗಳ್+ಉಳಿದ್+ಅಂಬರದ+ ವಿ
ಸ್ತಾರವೋ +ಗತ+ಹಂಸಕುಲ +ಕಾ
ಸಾರವೋ +ನಿಸ್ಸಾರವೋ +ನಿರ್ಮಳ +ತಪೋವನವೋ
ನಾರಿಯದ +ದಳ +ನೂಕಿದರೆ +ತನು
ಸೌರಭದ+ ದಳ +ತೆಗೆಯದಾ +ಕಾಂ
ತಾರದೊಳಗ್+ಏನೆಂಬೆನ್+ಆ+ ಸೌಗಂಧ +ಬಂಧುರವ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಾರಕೆಗಳುಳಿದಂಬರದ ವಿಸ್ತಾರವೋ ಗತಹಂಸಕುಲ ಕಾ
ಸಾರವೋ ನಿಸ್ಸಾರವೋ ನಿರ್ಮಳ ತಪೋವನವೋ

ಪದ್ಯ ೨೫: ಭೀಷ್ಮರು ಯಾವ ಅಭಿಪ್ರಾಯವನ್ನು ಹೇಳಿದರು?

ಅವಗಡೆಯನಾ ಭೀಮ ನೀವೆಂ
ಬವರು ನಿಸ್ಸೀಮರು ಚತುರ್ಬಲ
ನಿವಹ ನಿಲ್ಲದು ತುಡುಕುವುದು ತುಳಿವುದು ತಪೋವನವ
ವಿವಿಧ ಋಷಿಗಳನೇಡಿಸುವರೀ
ಯುವತಿಯರು ಕೈಕಾಲು ಮೆಟ್ಟಿನ
ಬವರ ಗಂಟಕ್ಕುವುದು ಲೇಸಲ್ಲೆಂದನಾ ಭೀಷ್ಮ (ಅರಣ್ಯ ಪರ್ವ, ೧೮ ಸಂಧಿ, ೨೫ ಪದ್ಯ)

ತಾತ್ಪರ್ಯ:
ಭೀಷ್ಮರು ತಮ್ಮ ಅಭಿಪ್ರಾಯವನ್ನು ಹೇಳುತ್ತಾ, ಭೀಮನು ಮಹಾ ಸಾಹಸಿ, ನೀವೋ ಎಲ್ಲೆ ಕಟ್ಟಿನಲ್ಲಿ ಇರುವವರಲ್ಲ. ಚತುರಂಗ ಸೈನ್ಯವು ತಪೋವನಗಳನ್ನು ತುಳಿದು ಹಾಕುತ್ತದೆ. ನಿಮ್ಮ ಪರಿವಾರದ ಹೆಂಗಳೆಯರು ಋಷಿಗಳನ್ನು ಅಪಹಾಸ್ಯ ಮಾಡುತ್ತಾರೆ. ಕೈ ಕೈ ಜೋಡಿಸಿ ಯುದ್ಧವು ಸಂಭವಿಸುತ್ತದೆ, ಅದು ಒಳಿತಲ್ಲ ಎಂದು ಭೀಷ್ಮರು ಹೇಳಿದರು.

ಅರ್ಥ:
ಅವಗಡ: ಅಸಡ್ಡೆ; ನಿಸ್ಸೀಮ: ಪರಾಕ್ರಮಿ; ನಿವಹ: ಗುಂಪು; ನಿಲ್ಲು: ತಡೆ; ತುಡುಕು: ಸೆಣಸು; ತುಳಿ: ಮೆಟ್ಟು; ತಪೋವನ: ತಪ್ಪಸ್ಸಿಗಾಗಿ ಮೀಸಲಿಟ್ಟ ಅರಣ್ಯ; ವಿವಿಧ: ಹಲವಾರು; ಋಷಿ: ಮುನಿ; ಏಡಿಸು: ಅವಹೇಳನ ಮಾಡು; ಯುವತಿ: ಹೆಣ್ಣು; ಮೆಟ್ಟು: ತುಳಿತ; ಬವರ: ಕಾಳಗ, ಯುದ್ಧ; ಗಂಟಿಕ್ಕು: ಕಟ್ಟು, ಸಮಸ್ಯೆ; ಲೇಸು: ಒಳಿತು;

ಪದವಿಂಗಡಣೆ:
ಅವಗಡೆಯನ್+ಆ+ ಭೀಮ+ ನೀವೆಂಬ್
ಅವರು +ನಿಸ್ಸೀಮರು +ಚತುರ್ಬಲ
ನಿವಹ+ ನಿಲ್ಲದು+ ತುಡುಕುವುದು+ ತುಳಿವುದು +ತಪೋವನವ
ವಿವಿಧ +ಋಷಿಗಳನ್+ಏಡಿಸುವರ್+ಈ
ಯುವತಿಯರು +ಕೈಕಾಲು +ಮೆಟ್ಟಿನ
ಬವರ+ ಗಂಟಕ್ಕುವುದು +ಲೇಸಲ್ಲೆಂದನಾ +ಭೀಷ್ಮ

ಅಚ್ಚರಿ:
(೧) ತ ಕಾರದ ತ್ರಿವಳಿ ಪದ – ತುಡುಕುವುದು ತುಳಿವುದು ತಪೋವನವ

ಪದ್ಯ ೧೨: ಧರ್ಮಜನು ಯಾವ ಆಶ್ರಮವನ್ನು ತಲುಪಿದನು?

ಅರಸ ಕೇಳಾ ದಾನವನ ತನು
ಬಿರಿದು ಬಿದ್ದುದು ಬಾತ ಹೆಣನು
ಬ್ಬರದ ಹೊಲಸಿದಗವಲು ಕವಿದುದು ಕೂಡೆ ವನದೊಳಗೆ
ಧರಣಿಪತಿ ತದ್ಬದರಿಕಾಶ್ರಮ
ವರ ತಪೋವನದಿಂದ ತೆಂಕಲು
ತಿರುಗಿ ಬಂದನು ಸಾರಿದನು ವೃಷಪರ್ವನಾಶ್ರಮವ (ಅರಣ್ಯ ಪರ್ವ, ೧೨ ಸಂಧಿ, ೧೨ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಜಟಾಸುರನ ದೇಹವು ಬಿರಿದು ಬಿದ್ದು ಬಾತುಕೊಂಡಿತು. ಆ ದೇಹದ ಹೊಲಸಿನ ದುರ್ನಾತವು ವನದಲ್ಲೆಲ್ಲಾ ವ್ಯಾಪಿಸಿತು. ಧರ್ಮಜನು ಬದರಿಕ್ರಾಶ್ರಮದಿಂದ ದಕ್ಷಿಣಕ್ಕೆ ತಿರುಗಿ ವೃಷಪರ್ವನ ಆಶ್ರಮಕ್ಕೆ ಬಂದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ದಾನವ: ರಾಕ್ಷಸ; ತನು: ದೇಹ; ಬಿರಿದು: ಸೀಳು; ಬಿದ್ದು: ಕೆಳಗೆ ಕಳಚು; ಬಾತು: ಊತ; ಹೆಣ: ಶವ; ಉಬ್ಬರ: ಅತಿಶಯ; ಹೊಲಸು: ಕೊಳೆ, ಕೊಳಕು; ಗವಲು: ವಾಸನೆ; ಕವಿ: ಆವರಿಸು; ಕೂಡು: ಜೊತೆ; ವನ: ಕಾಡು; ಧರಣಿಪತಿ: ರಾಜ; ವರ: ಶ್ರೇಷ್ಠ; ತಪೋವನ: ತಪಸ್ಸು ಮಾಡುವ ಜಾಗ; ತೆಂಕಲು: ದಕ್ಷಿಣ; ತಿರುಗು: ಹೊರಳು, ಸಂಚರಿಸು; ಬಂದು: ಆಗಮಿಸು; ಸಾರು: ಸಮೀಪಿಸು; ಆಶ್ರಮ: ಕುಟೀರ;

ಪದವಿಂಗಡಣೆ:
ಅರಸ +ಕೇಳ್+ಆ+ ದಾನವನ+ ತನು
ಬಿರಿದು +ಬಿದ್ದುದು +ಬಾತ +ಹೆಣನ್
ಉಬ್ಬರದ +ಹೊಲಸಿದ+ ಗವಲು +ಕವಿದುದು +ಕೂಡೆ+ ವನದೊಳಗೆ
ಧರಣಿಪತಿ+ ತದ್+ಬದರಿಕಾಶ್ರಮ
ವರ +ತಪೋವನದಿಂದ +ತೆಂಕಲು
ತಿರುಗಿ+ ಬಂದನು +ಸಾರಿದನು +ವೃಷಪರ್ವನ್+ಆಶ್ರಮವ

ಅಚ್ಚರಿ:
(೧) ಅರಸ, ಧರಣಿಪತಿ – ಸಮನಾರ್ಥಕ ಪದ

ಪದ್ಯ ೪: ಇಂದ್ರಕೀಲ ಪರ್ವತಕ್ಕೆ ಅರ್ಜುನನನ್ನು ನೋಡಲು ಯಾರು ಬಂದರು?

ವಿಕಟ ರಾಕ್ಷಸ ಯಕ್ಷ ಜನ ಗು
ಹ್ಯಕರು ಕಿನ್ನರಗಣಸಹಿತ ಪು
ಷ್ಪಕದಲೈತಂದನು ಧನೇಶ್ವರನಾ ತಪೋವನಕೆ
ಸಕಲ ಪಿತೃಗಣಸಹಿತ ದೂತ
ಪ್ರಕರ ಧರ್ಮಾಧ್ಯಕ್ಷರೊಡನಂ
ತಕನು ಬೆರಸಿದನಿಂದ್ರಕೀಳ ಮಹಾವನಾಂತರವ (ಅರಣ್ಯ ಪರ್ವ, ೮ ಸಂಧಿ, ೪ ಪದ್ಯ)

ತಾತ್ಪರ್ಯ:
ವಿಕಾರ ರೂಪದ ರಾಕ್ಷಸರು, ಯಕ್ಷರು, ಗುಹ್ಯಕರು, ಕಿನ್ನರರು, ಗಣಗಳೊಡನೆ ಕುಬೇರನು ಪುಷ್ಪಕ ವಿಮಾನದಲ್ಲಿ ಇಂದ್ರಕೀಲ ವನಕ್ಕೆ ಬಂದನು. ಯಮನು ಪಿತೃಗಣ ಧರ್ಮಾಧ್ಯಕ್ಷರ ಪರಿವಾರದೊಡನೆ ಇಂದ್ರಕೀಲ ಪರ್ವತಕ್ಕೆ ಅರ್ಜುನನನ್ನು ಕಾಣಲು ಬಂದನು.

ಅರ್ಥ:
ವಿಕಟ: ವಿಕಾರವಾದ, ಕುರೂಪಗೊಂಡ; ರಾಕ್ಷಸ: ದಾನವ; ಯಕ್ಷ: ದೇವತೆಗಳ ಒಂದು ವರ್ಗ; ಗುಹ್ಯಕ: ಯಕ್ಷ; ಕಿನ್ನರ: ಕಿಂಪುರುಷ, ಕುಬೇರನ ಪ್ರಜೆ; ಗಣ: ಗುಂಪು; ಸಹಿತ: ಜೊತೆ; ಪುಷ್ಪಕ: ವಿಮಾನದ ಹೆಸರು; ಧನೇಶ್ವರ: ಕುಬೇರ; ತಪೋವನ: ತಪಸ್ಸು ಮಾಡುವ ಕಾಡು; ಸಕಲ: ಎಲ್ಲಾ; ಪಿತೃ: ಪೂರ್ವಜ; ದೂತ: ರಾಯಭಾರಿ, ಸೇವಕ; ಪ್ರಕರ: ಗುಂಪು, ಸಮೂಹ; ಅಧ್ಯಕ್ಷ: ಒಡೆಯ; ಧರ್ಮ: ಧಾರಣೆ ಮಾಡಿದುದು; ಅಂತಕ: ಯಮ; ಬೆರಸು: ಸೇರು, ಕೂಡು; ಅಂತರ: ಸಮೀಪ; ವನ: ಕಾಡು; ಐತರು: ಬಂದು ಸೇರು;

ಪದವಿಂಗಡಣೆ:
ವಿಕಟ+ ರಾಕ್ಷಸ+ ಯಕ್ಷ +ಜನ +ಗು
ಹ್ಯಕರು +ಕಿನ್ನರ+ಗಣ+ಸಹಿತ+ ಪು
ಷ್ಪಕದಲ್+ಐತಂದನು +ಧನೇಶ್ವರನ್+ಆ+ ತಪೋವನಕೆ
ಸಕಲ+ ಪಿತೃ+ಗಣ+ಸಹಿತ +ದೂತ
ಪ್ರಕರ+ ಧರ್ಮಾಧ್ಯಕ್ಷರೊಡನ್+
ಅಂತಕನು +ಬೆರಸಿದನ್+ಇಂದ್ರಕೀಳ +ಮಹಾವನಾಂತರವ

ಅಚ್ಚರಿ:
(೧) ತಪೋವನ, ಮಹಾವನ – ಇಂದ್ರಕೀಲವನವನ್ನು ಕರೆದ ಪರಿ
(೨) ಧನೇಶ್ವರ, ಅಂತಕ – ಕುಬೇರ, ಯಮನನ್ನು ಕರೆದ ಪರಿ

ಪದ್ಯ ೨೬: ಪರಮೇಶ್ವರನು ಮುನಿಗಳಿಗೆ ಏನು ಹೇಳಿದನು?

ಅರಿದೆ ನಾನಂಜದಿರಿ ಹುಯ್ಯಲ
ಬರಿದೆ ತಂದಿರಿ ನಿಮ್ಮ ಗೆಲವಿಂ
ಗೆರಗುವವನವನಲ್ಲ ಬೇರಿಹುದಾತನಂಗವಣೆ
ಅರುಹಲೇಕೆ ಭವತ್ತಪೋವನ
ನೆರೆ ನಿಮಗೆ ನಾನವನನೆಬ್ಬಿಸಿ
ತೆರಹ ಮಾಡಿಸಿ ಕೊಡುವೆನೆಂದನು ನಗುತ ಶಶಿಮೌಳಿ (ಅರಣ್ಯ ಪರ್ವ, ೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಶಿವನು ಮುನಿಗಳಿಗೆ, ಅವನಾರೆಂದು ತಿಳಿಯಿತು. ನೀವು ಹೆದರಬೇಡಿ, ನಿಮ್ಮ ತಪಸ್ಸನ್ನು ನಿರ್ವಿಘ್ನವಾಗಿ ಮಾಡಬಿಡುವವನು ಅವನಲ್ಲ. ಅವನ ರೀತಿಯೇ ಬೇರೆ. ಹೆಚ್ಚೇನು ಹೇಳಲಿ, ನಿಮ್ಮ ತಪೋವನದಲ್ಲಿಯೇ ನೀವು ತಪಸ್ಸು ಮಾಡಿರಿ, ನಾನು ಅವನನ್ನೆಬ್ಬಿಸಿ ತಪೋಭೂಮಿಯನ್ನು ನಿಮಗೆ ತೆರವು ಮಾಡಿಸಿಕೊಡುತ್ತೇನೆ ಎಂದು ಹೇಳಿದನು.

ಅರ್ಥ:
ಅರಿ: ತಿಳಿ; ಅಂಜು: ಹೆದರು; ಹುಯ್ಯಲು: ಪೆಟ್ಟು, ಹೊಡೆತ; ಬರಿ: ಸುಮ್ಮನೆ, ಕೇವಲ; ಗೆಲವು: ಜಯ; ಎರಗು: ಬೀಳು, ನಮಸ್ಕರಿಸು; ಬೇರೆ: ಅನ್ಯ; ಅಂಗವಣೆ: ರೀತಿ, ವಿಧಾನ; ಅರುಹ: ಅರ್ಹ; ಭವತ್: ನಿಮ್ಮ; ತಪೋವನ: ತಪಸ್ಸು ಮಾಡುವ ಸ್ಥಳ; ನೆರೆ: ಪಕ್ಕ; ಎಬ್ಬಿಸು: ಮೇಲೇಳಿಸು; ತೆರವು: ಖಾಲಿ,ಬರಿದಾದುದು; ಕೊಡು: ನೀಡು; ನಗು: ಸಂತಸ; ಶಶಿ: ಚಂದ್ರ; ಮೌಳಿ: ಶಿರ; ಶಶಿಮೌಳಿ: ಶಂಕರ;

ಪದವಿಂಗಡಣೆ:
ಅರಿದೆ +ನಾನ್+ಅಂಜದಿರಿ+ ಹುಯ್ಯಲ
ಬರಿದೆ +ತಂದಿರಿ+ ನಿಮ್ಮ +ಗೆಲವಿಂಗ್
ಎರಗುವವನವನಲ್ಲ+ ಬೇರಿಹುದ್+ಆತನ್+ಅಂಗವಣೆ
ಅರುಹಲೇಕೆ +ಭವತ್+ತಪೋವನ
ನೆರೆ +ನಿಮಗೆ +ನಾನ್+ಅವನನ್+ಎಬ್ಬಿಸಿ
ತೆರಹ +ಮಾಡಿಸಿ +ಕೊಡುವೆನ್+ಎಂದನು +ನಗುತ +ಶಶಿಮೌಳಿ

ಅಚ್ಚರಿ:
(೧) ಅರ್ಜುನನ ಸಾಮರ್ಥ್ಯವನ್ನು ಹೇಳುವ ಪರಿ – ನಿಮ್ಮ ಗೆಲವಿಂಗೆರಗುವವನವನಲ್ಲ ಬೇರಿಹುದಾತನಂಗವಣೆ

ಪದ್ಯ ೨೪: ಮುನಿಸ್ತೋಮವು ಶಂಕರನಲ್ಲಿ ಏನು ಬೇಡಿದರು?

ಮತ್ತೆ ನಮ್ಮನು ಪಿಸುಣರೆಂದೇ
ಚಿತ್ತವಿಸಲಾಗದು ತಪೋವನ
ಹೊತ್ತುತಿದೆ ವಿಪರೀತ ತಪಸಿಯ ತೀವ್ರ ತೇಜದಲಿ
ಇತ್ತಲೊಂದು ತಪೋವನವನೆಮ
ಗಿತ್ತು ಕರುಣಿಸು ಮೇಣ್ವಿಕಾರಿಯ
ನೆತ್ತಿಕಳೆ ಕಾರುಣ್ಯನಿಧಿಯೆಂದುದು ಮುನಿಸ್ತೋಮ (ಅರಣ್ಯ ಪರ್ವ, ೬ ಸಂಧಿ, ೨೪ ಪದ್ಯ)

ತಾತ್ಪರ್ಯ:
ಹೇ ಪರಮಾತ್ಮ, ಕಾರುಣ್ಯನಿಧಿಯೇ, ನಮ್ಮನ್ನು ಮತ್ತೆ ಚಾಡಿಕೋರರು ಎಂದು ಪರಿಗಣಿಸಬೇಡ, ನಮ್ಮ ತಪೋಭೂಮಿಯು ಆ ತಪಸ್ವಿಯ ತಪದಿಂದ ಹೊತ್ತಿ ಉರಿಯುತ್ತಿದೆ, ಆ ತಪಸ್ವಿಯ ತೀವ್ರ ತಪೋಜ್ವಾಲೆ ಭಯಂಕರವಾಗಿದೆ. ತಪಸ್ಸು ಮಾಡಲು ನಮಗಿದ್ದದ್ದು ಒಂದು ತಪೋಭೂಮಿ, ನಮಗೆ ತಪಸ್ಸು ಮಾಡಲು ಇನ್ನೊಂದು ತಪೋಭೂಮಿಯನ್ನು ನೀಡು, ಇಲ್ಲದಿದ್ದರೆ ಆ ವಿಕಾರಿ ತಪಸ್ವಿಯನ್ನು ಅಲ್ಲಿಂದೆಬ್ಬಿಸಿ ಕಳಿಸು ಎಂದು ಮುನಿಗಳ ಗುಂಪು ಶಂಕರನಲ್ಲಿ ಬಿನ್ನವಿಸಿತು.

ಅರ್ಥ:
ಪಿಸುಣ: ಚಾಡಿಕೋರ; ಚಿತ್ತವಿಸು: ಗಮನವಿಡು; ತಪೋವನ: ತಪಸ್ಸುಮಾಡುವ ಕಾಡು; ಹೊತ್ತು: ಬೆಂದು ಹೋಗು, ಉರಿ; ವಿಪರೀತ: ತುಂಬ; ತಪಸಿ: ತಪಸ್ಸು ಮಾಡುವ ವ್ಯಕ್ತಿ; ತೀವ್ರ: ಬಹಳ; ತೇಜ: ಕಾಂತಿ; ಗಿತ್ತು: ನೀಡಿ; ಕರುಣಿಸು: ದಯಮಾಡು; ಮೇಣ್: ಅಥವ; ವಿಕಾರಿ: ದುಷ್ಟ; ಎತ್ತಿಕಳೆ: ಎಬ್ಬಿಸು; ಕಾರುಣ್ಯ: ದಯೆ; ನಿಧಿ: ಐಶ್ವರ್ಯ; ಕಾರುಣ್ಯನಿಧಿ: ಕರುಣೆಯಸಾಗರ; ಸ್ತೋಮ: ಗುಂಪು;

ಪದವಿಂಗಡಣೆ:
ಮತ್ತೆ +ನಮ್ಮನು +ಪಿಸುಣರೆಂದೇ
ಚಿತ್ತವಿಸಲಾಗದು+ ತಪೋವನ
ಹೊತ್ತುತಿದೆ +ವಿಪರೀತ +ತಪಸಿಯ +ತೀವ್ರ +ತೇಜದಲಿ
ಇತ್ತಲೊಂದು+ ತಪೋವನವನ್+ಎಮಗ್
ಇತ್ತು +ಕರುಣಿಸು +ಮೇಣ್+ವಿಕಾರಿಯನ್
ಎತ್ತಿಕಳೆ+ ಕಾರುಣ್ಯನಿಧಿ+ಎಂದುದು +ಮುನಿ+ಸ್ತೋಮ

ಅಚ್ಚರಿ:
(೧) ಅರ್ಜುನನನ್ನು ವಿಕಾರಿ ಎಂದು ಕರೆದಿರುವುದು
(೨) ತ ಕಾರದ ತ್ರಿವಳಿ ಪದ – ತಪಸಿಯ ತೀವ್ರ ತೇಜದಲಿ