ಪದ್ಯ ೧೫: ಜಕ್ಕವಕ್ಕಿಗಳೇಕೆ ಮರುಗುತಿರ್ದವು?

ನಳಿನದಳದೊಳಗಡಗಿದವು ನೈ
ದಿಲುಗಳಲಿ ತನಿ ಮೊರೆವ ತುಂಬಿಯ
ಕಳರವಕೆ ಬೆಚ್ಚಿದವು ಹೊಕ್ಕವು ಬಿಗಿದು ತಿಳಿಗೊಳನ
ಝಳಕೆ ಸೈರಿಸದೆಳಲತೆಯ ನೆಳ
ಲೊಳಗೆ ನಿಂದವು ಬೇಗೆ ಬಲುಹಿಂ
ದಳುಕಿ ಮಮ್ಮಲು ಮರುಗುತಿರ್ದವು ಜಕ್ಕವಕ್ಕಿಗಳು (ದ್ರೋಣ ಪರ್ವ, ೧೭ ಸಂಧಿ, ೧೫ ಪದ್ಯ)

ತಾತ್ಪರ್ಯ:
ಚಕ್ರವಾಕ ಪಕ್ಷಿಗಳು ತಾವರೆಯಲ್ಲಿ ಅಡಗಿ, ನೈದಿಲೆಯಲ್ಲಿ ಝೇಂಕರಿಸುವ ದುಂಬಿಗಳ ಸದ್ದನ್ನು ಕೇಳಿ ಬೆಚ್ಚಿದವು. ಬೆಳದಿಂಗಳ ಝಳವನ್ನು ಸೈರಿಸಲಾರದೆ ಎಳೆ ಬಳ್ಳಿಗಳ ನೆರಳಿನಲ್ಲಿ ನಿಂತು ತಾಪವನ್ನು ತಡೆಯಲಾರದೆ ಮಮ್ಮಲ ಮರುಗಿದವು.

ಅರ್ಥ:
ನಳಿನ: ಕಮಲ; ದಳ: ಎಲೆ, ರೇಕು, ಎಸಳು; ಅಡಗು: ಬಚ್ಚಿಟ್ಟುಕೊಳ್ಳು; ನೈದಿಲೆ: ಕುಮುದ; ತನಿ: ಚೆನ್ನಾಗಿ ಬೆಳೆದುದು; ಮೊರೆ: ಧ್ವನಿ ಮಾಡು, ಝೇಂಕರಿಸು; ತುಂಬಿ: ದುಂಬಿ, ಭ್ರಮರ; ಕಳರವ: ಮಧುರ ಧ್ವನಿ; ಬೆಚ್ಚು: ಭಯ, ಹೆದರಿಕೆ; ಹೊಕ್ಕು: ಸೇರು; ಬಗಿ: ಸೀಳುವಿಕೆ; ಕೊಳ: ನೀರಿನ ಹೊಂಡ, ಸರಸಿ; ಝಳ: ಕಾಂತಿ; ಸೈರಿಸು: ತಾಳು, ಸಹಿಸು; ಎಳೆ: ಚಿಕ್ಕದಾದ; ಲತೆ: ಬಳ್ಳಿ; ನೆಳಲು: ನೆರಳು; ನಿಂದವು: ನಿಲ್ಲು; ಬೇಗೆ: ಬೆಂಕಿ, ಕಿಚ್ಚು; ಬಲು: ಬಹಳ, ಹೆಚ್ಚು; ಅಳುಕು: ಹೆದರು; ಮರುಗು: ತಳಮಳ, ಸಂಕಟ; ಜಕ್ಕವಕ್ಕಿ: ಚಾತಕ ಪಕ್ಷಿ;

ಪದವಿಂಗಡಣೆ:
ನಳಿನ+ದಳದೊಳಗ್+ಅಡಗಿದವು +ನೈ
ದಿಲುಗಳಲಿ +ತನಿ +ಮೊರೆವ +ತುಂಬಿಯ
ಕಳರವಕೆ+ ಬೆಚ್ಚಿದವು +ಹೊಕ್ಕವು +ಬಿಗಿದು +ತಿಳಿ+ಕೊಳನ
ಝಳಕೆ +ಸೈರಿಸದ್+ಎಳಲತೆಯ +ನೆಳ
ಲೊಳಗೆ +ನಿಂದವು +ಬೇಗೆ +ಬಲುಹಿಂದ್
ಅಳುಕಿ +ಮಮ್ಮಲು +ಮರುಗುತಿರ್ದವು +ಜಕ್ಕವಕ್ಕಿಗಳು

ಅಚ್ಚರಿ:
(೧)

ಪದ್ಯ ೫೪: ಕೌರವನು ರಾತ್ರಿ ಯಾರ ಮನೆಗೆ ಹೊರಟನು?

ಗರುಡನೂರವರೆರೆವರೇ ನಾ
ಗರಿಗೆ ತನಿಯನು ನಮ್ಮ ಬಲದಲಿ
ಗುರುವಲಾ ಪಾಲಕನು ಕೈಕೊಂಬನೆ ಧನಂಜಯನ
ನರನ ನುಡಿಯನು ಹೊಳ್ಳುಗಳೆವರೆ
ಚರಣದಲಿ ಬೀಳುವೆವು ನಡೆಯೆಂ
ದಿರುಳು ದ್ರೋಣನ ಮನೆಗೆ ಬಂದನು ಕೌರವರ ರಾಯ (ದ್ರೋಣ ಪರ್ವ, ೮ ಸಂಧಿ, ೫೪ ಪದ್ಯ)

ತಾತ್ಪರ್ಯ:
ಗರುಡನ ಊರಿನವರು ನಾಗರಿಗೆ ತನಿಯೆರೆಯುವರೇ? ನಮ್ಮ ಸೈನ್ಯವನ್ನು ಪಾಲಿಸುವವನು ಗುರುವಾದ ದ್ರೋಣನು, ಅರ್ಜುನನ ಭಾಷೆಯನ್ನು ಸುಳ್ಳುಮಾಡಲು, ನಾವು ಅವನ ಪಾದಗಳಲ್ಲಿ ಶರಣಾಗತರಾಗೋಣ ಬಾ, ಹೀಗೆಂದು ಕೌರವನು ಆ ರಾತ್ರಿ ದ್ರೋಣನ ಮನೆಗೆ ಬಂದನು.

ಅರ್ಥ:
ಗರುಡ: ಪಕ್ಷಿಯ ಪ್ರಭೇದ; ಊರು: ಪಟ್ಟಣ; ನಾಗ: ಉರಗ; ತನಿ: ಸೊಗಸಾಗು, ಹಿತವಾಗು; ಪಾಲಕ: ರಕ್ಷಿಸುವ; ಗುರು: ಆಚಾರ್ಯ; ಕೈಕೊಂಬು: ಧರಿಸು, ಮಾಡು; ನರ: ಅರ್ಜುನ; ನುಡಿ: ಮಾತು; ಹೊಳ್ಳು: ಹುರುಳಿಲ್ಲದುದು, ಜೊಳ್ಳು; ಚರಣ: ಪಾದ; ಬೀಳು: ಎರಗು; ನಡೆ: ಚಲಿಸು; ಇರುಳು: ರಾತ್ರಿ; ಮನೆ: ಆಲಯ; ಬಂದು: ಆಗಮಿಸು; ರಾಯ: ರಾಜ;

ಪದವಿಂಗಡಣೆ:
ಗರುಡನ್+ಊರವರ್+ಎರೆವರೇ +ನಾ
ಗರಿಗೆ +ತನಿಯನು +ನಮ್ಮ +ಬಲದಲಿ
ಗುರುವಲಾ +ಪಾಲಕನು+ ಕೈಕೊಂಬನೆ+ ಧನಂಜಯನ
ನರನ +ನುಡಿಯನು +ಹೊಳ್ಳುಗಳೆವರೆ
ಚರಣದಲಿ +ಬೀಳುವೆವು +ನಡೆ+ಎಂದ್
ಇರುಳು +ದ್ರೋಣನ +ಮನೆಗೆ +ಬಂದನು +ಕೌರವರ+ ರಾಯ

ಅಚ್ಚರಿ:
(೧) ಉಪಮಾನದ ಪ್ರಯೋಗ – ಗರುಡನೂರವರೆರೆವರೇ ನಾಗರಿಗೆ ತನಿಯನು

ಪದ್ಯ ೨೧: ಮದ್ರದೇಶದ ಜನರ ಗುಣ ಎಂತಹುದು?

ರಣದೊಳೊಡೆಯನ ಜರೆದು ಜಾರುವ
ಗುಣಸಮುದ್ರರು ಮಾದ್ರದೇಶದ
ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
ಗಣಿಕೆಯರ ಮಧ್ಯದಲಿ ಮದ್ಯದ
ತಣಿವಿನಲಿ ತನಿಸೊಕ್ಕಿ ಬತ್ತಲೆ
ಕುಣಿವ ಭಂಗಿಯ ಭಂಡರೆಲವೋ ಶಲ್ಯ ಕೇಳೆಂದ (ಕರ್ಣ ಪರ್ವ, ೯ ಸಂಧಿ, ೨೧ ಪದ್ಯ)

ತಾತ್ಪರ್ಯ:
ಕರ್ಣನು ಕೋಪದಿಂದ ಎಲವೋ ಶಲ್ಯ ನಿನ್ನ ಮಾದ್ರದೇಶದ ಜನರೆಂತಹವರು ಎಂದು ನಾನು ಹೇಳಬೇಕೆ, ನಿಮ್ಮ ದೇಶದವರು ಯುದ್ಧ ಸಮಯದಲ್ಲಿ ಒಡೆಯನನ್ನು ಜರಿದು ಜಾರಿಕೊಂಡು ಓಡಿ ಹೋಗುವವರು, ಅವರು ಮಾತನಾಡುವುದೇ ಒಂದು, ನಡತೆಯೇ ಮತ್ತೊಂದು, ಮದ್ಯವನ್ನು ಕಂಠಪೂರ್ತಿ ಕುಡಿದು ಅತಿಯಾಗಿ ಸೊಕ್ಕಿ ಗಣಿಕೆಯರ ನಡುವೆ ಬತ್ತಲೆಯಾಗಿ ಕುಣಿಯುವ ಭಂಡರು ನೀವು ಎಂದು ಕರ್ಣನು ಶಲ್ಯನನ್ನು ಜರಿದನು.

ಅರ್ಥ:
ರಣ: ಯುದ್ಧ; ಒಡೆಯ: ದೊರೆ; ಜರೆ: ಬಯ್ಯುವುದು, ತೆಗಳು; ಜಾರುವ: ನುಣುಚಿಕೊಳ್ಳು, ಹಾಳಾಗು; ಗುಣ: ಸ್ವಭಾವ; ಸಮುದ್ರ: ಸಾಗರ; ಭಣಿತೆ:ಸಂಭಾಷಣೆ; ಬೇರೆ: ಅನ್ಯ;ನಡೆವಳಿ: ನಡವಳಿಕೆ, ವರ್ತನೆ; ಗಣಿಕೆ: ಸೂಳೆ, ವೇಶ್ಯೆ; ಮಧ್ಯ: ನಡುವೆ; ತಣಿವು:ತೃಪ್ತಿ, ಸಮಾಧಾನ; ತನಿ: ಹೆಚ್ಚಾಗು, ಅತಿಶಯವಾಗು; ಸೊಕ್ಕು: ಅಮಲು, ಮದ; ಬತ್ತಲೆ: ನಗ್ನವಾಗಿ; ಕುಣಿ: ನರ್ತಿಸು; ಭಂಗಿ: ದೇಹದ ನಿಲುವು, ವಿನ್ಯಾಸ; ಭಂಡ:ನಾಚಿಕೆ ಇಲ್ಲದವನು; ಕೇಳು: ಆಲಿಸು;

ಪದವಿಂಗಡಣೆ:
ರಣದೊಳ್+ಒಡೆಯನ +ಜರೆದು +ಜಾರುವ
ಗುಣಸಮುದ್ರರು +ಮಾದ್ರದೇಶದ
ಭಣಿತೆ +ತಾನದು +ಬೇರೆ +ನಡೆವಳಿಯಂಗವದು +ಬೇರೆ
ಗಣಿಕೆಯರ +ಮಧ್ಯದಲಿ +ಮದ್ಯದ
ತಣಿವಿನಲಿ +ತನಿಸೊಕ್ಕಿ +ಬತ್ತಲೆ
ಕುಣಿವ +ಭಂಗಿಯ +ಭಂಡರ್+ಎಲವೋ +ಶಲ್ಯ +ಕೇಳೆಂದ

ಅಚ್ಚರಿ:
(೧) ಗುಣಸಮುದ್ರರು – ಜರೆದು ಜಾರುವ ಗುಣ ನಿಮ್ಮಲ್ಲಿ ಅಧಿಕವಾಗಿದೆ ಎಂದು ಹೇಳಲು ಬಳಸಿದ ಪದ
(೨) ನುಡಿದಂತೆ ನಡೆಯರು ಎಂದು ಹೇಳಲು – ಭಣಿತೆ ತಾನದು ಬೇರೆ ನಡೆವಳಿಯಂಗವದು ಬೇರೆ
(೩) ಜೋಡಿ ಪದಗಳು – ಮಧ್ಯದಲಿ ಮದ್ಯದ; ತಣಿವಿನಲಿ ತನಿಸೊಕ್ಕಿ; ಭಂಗಿಯ ಭಂಡರ್;