ಪದ್ಯ ೪೩: ಕೃಷ್ಣನು ಯಾರನ್ನು ಕರೆಯಲು ಧರ್ಮಜನಿಗೆ ಹೇಳಿದನು?

ಕರಸು ಧರ್ಮಜ ಕಲಿಘಟೋತ್ಕಚ
ನಿರುಳುಬವರಕೆ ನಿಲಲಿ ಸಾತ್ಯಕಿ
ನರ ವೃಕೋದರ ನಕುಲ ಸಹದೇವಾದಿಗಳಿಗರಿದು
ಇರುಳು ರಣದಾಯತವನವನೇ
ಹಿರಿದು ಬಲ್ಲನು ಗೆಲುವನೆನೆ ಮುರ
ಹರನ ನೇಮದಲನಿಲತನಯನತನಯನೈತಂದ (ದ್ರೋಣ ಪರ್ವ, ೧೫ ಸಂಧಿ, ೪೩ ಪದ್ಯ)

ತಾತ್ಪರ್ಯ:
ಶ್ರೀ ಕೃಷ್ಣನು ಧರ್ಮಜನಿಗೆ ಹೇಳಿದನು, ಎಲೈ ಧರ್ಮಜ ಶೂರನಾದ ಘಟೋತ್ಕಚನನ್ನು ಕರೆಸು, ಈ ರಾತ್ರಿಯ ಕಾಳಗಕ್ಕೆ ಅವನೇ ಸರಿ, ಸಾತ್ಯಕಿ, ಅರ್ಜುನ, ಭೀಮ, ನಕುಲ ಸಹದೇವರಿಗೆ ರಾತ್ರಿಯ ಕಾಳಗ ತಿಳಿಯದು, ರಾತ್ರಿಯ ಯುದ್ಧದ ರೀತಿಯನ್ನು ಘಟೋತ್ಕಚನೇ ಬಲ್ಲ. ಅವನು ಗೆಲ್ಲುತ್ತಾನೆ ಎಂದು ಕೃಷ್ಣನು ಹೇಳಲು, ಧರ್ಮಜನ ಅಪ್ಪಣೆಯಂತೆ ಘಟೋತ್ಕಚನು ಬಂದನು.

ಅರ್ಥ:
ಕರಸು: ಬರೆಮಾಡು; ಕಲಿ: ಶೂರ; ಇರುಳು: ರಾತ್ರಿ; ಬವರ: ಯುದ್ಧ; ನಿಲಲಿ: ನಿಲ್ಲು; ನರ: ಅರ್ಜುನ; ವೃಕೋದರ: ಭೀಮ; ಆದಿ: ಮುಂತಾದ; ಇರುಳು: ರಾತ್ರಿ; ರಣ: ಯುದ್ಧ; ಆಯತ: ವಿಶಾಲವಾದ; ಹಿರಿದು: ಹೆಚ್ಚಿನದು; ಬಲ್ಲ: ತಿಳಿ; ಗೆಲುವು: ಜಯ; ಮುರಹರ: ಕೃಷ್ಣ; ನೇಮ: ನಿಯಮ, ಆಜ್ಞೆ; ಅನಿಲ: ವಾಯು; ತನಯ: ಮಗ; ಐತಂದ: ಬಂದು ಸೇರು;

ಪದವಿಂಗಡಣೆ:
ಕರಸು +ಧರ್ಮಜ +ಕಲಿ+ಘಟೋತ್ಕಚನ್
ಇರುಳು+ಬವರಕೆ +ನಿಲಲಿ +ಸಾತ್ಯಕಿ
ನರ+ ವೃಕೋದರ +ನಕುಲ+ ಸಹದೇವಾದಿಗಳಿಗ್+ಅರಿದು
ಇರುಳು +ರಣದ್+ಆಯತವನ್+ಅವನೇ
ಹಿರಿದು +ಬಲ್ಲನು +ಗೆಲುವನ್+ಎನೆ +ಮುರ
ಹರನ +ನೇಮದಲ್+ಅನಿಲ+ತನಯನ+ತನಯನ್+ಐತಂದ

ಅಚ್ಚರಿ:
(೧) ಬವರ, ರಣ – ಸಮಾನಾರ್ಥಕ ಪದ
(೨) ಘಟೋತ್ಕಚನನ್ನು ಕರೆಯುವ ಪರಿ – ಅನಿಲತನಯನತನಯ

ಪದ್ಯ ೧೯: ಅಭಿಮನ್ಯುವಿನ ರಥವನ್ನು ಯಾರು ಅಡ್ಡಗಟ್ಟಿದರು?

ಎನುತ ಬಿಲುದುಡುಕಿದನು ಸೇನಾ
ವನಧಿಗಭಯವನಿತ್ತು ಮರಳುವ
ಜನಪರನು ಜರೆದೆಡಬಲದ ಮನ್ನೆಯರ ಮೂದಲಿಸಿ
ಮೊನೆಗಣೆಯ ತೂಗುತ್ತ ನರ ನಂ
ದನನ ರಥವನು ತರುಬಿ ನಿನ್ನಯ
ತನಯನಡ್ಡೈಸಿದನು ಕೌರವರಾಯ ಖಾತಿಯಲಿ (ದ್ರೋಣ ಪರ್ವ, ೫ ಸಂಧಿ, ೧೯ ಪದ್ಯ)

ತಾತ್ಪರ್ಯ:
ಹೀಗೆ ಹೇಳಿದ ಕೌರವನು ಕೋಪದಿಂದ ಬಿಲ್ಲನ್ನು ಹಿಡಿದು ಸೈನ್ಯ ಸಮುದ್ರಕ್ಕೆ ಅಭಯವನ್ನು ನೀಡಿ, ಓಡಿ ಬರುವ ರಾಜರನ್ನು ಜರೆದು, ಮನ್ನೆಯರನ್ನು ಮೂದಲಿಸಿ, ಚೂಪಾದ ಬಾಣವನ್ನು ತೂಗುತ್ತಾ ಅಭಿಮನ್ಯುವಿನ ರಥವನ್ನು ಎಲೈ ಧೃತರಾಷ್ಟ್ರ ನಿನ್ನ ಮಗನು ಅಡ್ಡಗಟ್ಟಿದನು.

ಅರ್ಥ:
ಬಿಲು: ಬಿಲ್ಲು, ಚಾಪ; ತುಡುಕು: ಹೋರಾಡು, ಸೆಣಸು; ವನಧಿ: ಸಮುದ್ರ; ಸೇನಾ: ಸೈನ್ಯ; ಅಭಯ: ಧೈರ್ಯ; ಮರಳು: ಹಿಂತಿರುಗು; ಜನಪ: ರಾಜ; ಜರೆ: ಬಯ್ದು; ಎಡಬಲ: ಅಕ್ಕಪಕ್ಕ; ಮನ್ನೆಯ: ಮೆಚ್ಚಿನ; ಮೂದಲಿಸು: ಹಂಗಿಸು; ಮೊನೆ: ಚೂಪು, ತುದಿ; ಕಣೆ:ಬಾಣ; ತೂಗು: ಅಲ್ಲಾಡಿಸು; ನರ: ಅರ್ಜುನ; ನಂದನ: ಮಗ; ರಥ: ತೇರು; ತರುಬು: ತಡೆ, ನಿಲ್ಲಿಸು; ತನಯ: ಮಗ; ಅಡ್ಡೈಸು: ಅಡ್ಡಗಟ್ಟು, ತಡೆ; ರಾಯ: ರಾಜ; ಖಾತಿ: ಕೋಪ;

ಪದವಿಂಗಡಣೆ:
ಎನುತ +ಬಿಲು+ತುಡುಕಿದನು +ಸೇನಾ
ವನಧಿಗ್+ಅಭಯವನಿತ್ತು +ಮರಳುವ
ಜನಪರನು +ಜರೆದ್+ಎಡಬಲದ +ಮನ್ನೆಯರ +ಮೂದಲಿಸಿ
ಮೊನೆ+ಕಣೆಯ +ತೂಗುತ್ತ +ನರ +ನಂ
ದನನ +ರಥವನು +ತರುಬಿ +ನಿನ್ನಯ
ತನಯನ್+ಅಡ್ಡೈಸಿದನು +ಕೌರವರಾಯ +ಖಾತಿಯಲಿ

ಅಚ್ಚರಿ:
(೧) ನಂದನ, ತನಯ – ಸಮಾನಾರ್ಥಕ ಪದ
(೨) ದುರ್ಯೋಧನನು ಸೈನ್ಯವನ್ನು ಜರೆದ ಪರಿ – ಮರಳುವ
ಜನಪರನು ಜರೆದೆಡಬಲದ ಮನ್ನೆಯರ ಮೂದಲಿಸಿ

ಪದ್ಯ ೧೬: ಕೌರವ ಸೈನ್ಯದ ಸ್ಥಿತಿ ಹೇಗಿತ್ತು?

ಜರಿದುದಬ್ಜವ್ಯೂಹ ನೂಕಿದ
ಕರಿ ತುರಗ ಕಾಲಾಳು ತೇರಿನ
ಮರಳುದಲೆ ತಾನಿಲ್ಲ ನೆರೆ ನುಗ್ಗಾಯ್ತು ಕುರುಸೇನೆ
ದೊರೆಗಳಹ ದ್ರೋಣಾದಿಗಳು ಕೈ
ಮರೆದು ಕಳೆದರು ಪಾರ್ಥತನಯನ
ಸರಿಯೊರೆಗೆ ಭಟನಾವನೆಂದನು ಕೌರವರ ರಾಯ (ದ್ರೋಣ ಪರ್ವ, ೫ ಸಂಧಿ, ೧೬ ಪದ್ಯ
)

ತಾತ್ಪರ್ಯ:
ದುರ್ಯೋಧನನು ಕೌರವ ಸೈನ್ಯವನ್ನು ನೋಡಿ, ಪದ್ಮವ್ಯೂಹವು ಆಕಾರ ಕೆಟ್ಟು ಪಲಾಯನ ಮಾಡಿತು. ಆನೆ ಕುದುರೆ ರಥ ಕಾಲಾಳುಗಳು ಯುದ್ಧಮಾಡಿ ಬದುಕಿ ಬರಲಿಲ್ಲ. ಕೌರವ ಸೈನ್ಯವು ಪುದಿಪುಡಿಯಾಯಿತು. ನಾಯಕರಾದ ದ್ರೋಣನೇ ಮೊದಲಾದವರು ತಮ್ಮ ಕೈಯ ಚಾತುರ್ಯವನ್ನೇ ಮರೆತರು. ಅಭಿಮನ್ಯುವಿಗೆ ಸರಿಸಮಾನ ವೀರನಾರು ಎಂದು ಉದ್ಗರಿಸಿದರು.

ಅರ್ಥ:
ಜರಿ: ಓಡಿಹೋಗು, ಪಲಾಯನ ಮಾಡು; ಅಬ್ಜ: ತಾವರೆ; ವ್ಯೂಹ: ಗುಂಪು; ನೂಕು: ತಳ್ಳು; ಕರಿ: ಆನೆ; ತುರಗ: ಅಶ್ವ; ಕಾಲಾಳು: ಸೈನಿಕ; ತೇರು: ಬಂಡಿ, ರಥ; ಮರಳು: ಹಿಂದಿರುಗು; ನೆರೆ: ಪಕ್ಕ, ಪಾರ್ಶ್ವ, ಮಗ್ಗುಲು; ನುಗ್ಗು: ತಳ್ಳು; ದೊರೆ: ರಾಜ; ಆದಿ: ಮುಂತಾದ; ಮರೆ: ನೆನಪಿನಿಂದ ದೂರ ಮಾಡು; ಕಳೆ: ವ್ಯಯಿಸು; ತನಯ: ಮಗ; ಒರೆ: ಗುಣ, ಉಜ್ಜು, ತಿಕ್ಕು; ಭಟ: ಸೈನಿಕ; ರಾಯ: ರಾಜ;

ಪದವಿಂಗಡಣೆ:
ಜರಿದುದ್+ಅಬ್ಜವ್ಯೂಹ +ನೂಕಿದ
ಕರಿ +ತುರಗ +ಕಾಲಾಳು +ತೇರಿನ
ಮರಳುದಲೆ+ ತಾನಿಲ್ಲ +ನೆರೆ +ನುಗ್ಗಾಯ್ತು +ಕುರುಸೇನೆ
ದೊರೆಗಳಹ+ ದ್ರೋಣಾದಿಗಳು +ಕೈ
ಮರೆದು +ಕಳೆದರು+ ಪಾರ್ಥ+ತನಯನ
ಸರಿಯೊರೆಗೆ +ಭಟನಾವನ್+ಎಂದನು +ಕೌರವರ+ ರಾಯ

ಅಚ್ಚರಿ:
(೧) ಸೋತರು ಎಂದು ಹೇಳುವ ಪರಿ – ದೊರೆಗಳಹ ದ್ರೋಣಾದಿಗಳು ಕೈಮರೆದು ಕಳೆದರು

ಪದ್ಯ ೧೬: ಉಪಪಾಂಡವರು ಯಾರನ್ನು ಕೊಂದರು?

ಮುಂದೆ ಹರಿದರು ಪಾಂಡುತನಯರ
ನಂದನರು ತಾವೈವರೀತನ
ಹಿಂದುಳುಹಿ ಹಿಂಡಿದರು ಹೇರಾಳದ ಚತುರ್ಬಲವ
ಕೊಂದರಗ್ಗದ ಚಿತ್ರಸೇನನ
ಬಂದ ಹರಿಬದ ಚಿತ್ರನನು ಗುರು
ನಂದನನು ಬಳಿಕವರ ಬೆದರಿಸಿ ನೂಕಿದನು ರಥವ (ಕರ್ಣ ಪರ್ವ, ೩ ಸಂಧಿ, ೧೬ ಪದ್ಯ)

ತಾತ್ಪರ್ಯ:
ಭೀಮನು ಸಾತ್ಯಕಿಯ ಸಹಾಯಕ್ಕೆ ಬರುವುದನ್ನು ಕಂಡು ಉಪಪಾಂಡವರು (ಪಾಂಡವರ ಪುತ್ರರು) ಮುನ್ನುಗ್ಗಿ ಸಾತ್ಯಕಿಯನ್ನು ಹಿಂದಿಕ್ಕೆ ಹಾಕಿ ಚತುರಂಗಬಲವನ್ನು ಹೊಡೆದು ಹಾಕಿದರು. ಚಿತ್ರಸೇನ, ಚಿತ್ರರನ್ನು ಕೊಂದರು. ಆಗ ಅಶ್ವತ್ಥಾಮನು ರಥದ ಮೇಲೆ ಮುಂದೆ ಬಂದು ಅವರ ದಾಳಿಯನ್ನು ತಡೆದನು.

ಅರ್ಥ:
ಮುಂದೆ: ಅಗ್ರ, ಎದುರು; ಹರಿದು: ಜೋರಾಗಿ ತೆರಳು; ತನಯ: ಮಕ್ಕಳು; ನಂದನ: ಮಕ್ಕಳು; ಹಿಂದುಳಿ: ಹಿಂದಕ್ಕೆ ಹಾಕು; ಹಿಂಡು: ಗುಂಪು, ಸಮೂಹ, ಹಿಸುಕು; ಹೇರಾಳ: ವಿಶೇಷ; ಬಲ: ಸೈನ್ಯ; ಕೊಂದು: ಕೊಲ್ಲು, ಸಾಯಿಸು; ಅಗ್ಗ: ಶ್ರೇಷ್ಠ; ಹರಿಬ: ಕಾಳಗ, ಯುದ್ಧ; ಬಳಿಕ: ನಂತರ; ಬೆದರಿಸು: ಹೆದರಿಸು; ನೂಕು: ತಳ್ಳು; ರಥ: ಬಂಡಿ; ಗುರುನಂದನ: ಗುರುವಿನ ಮಗ (ಅಶ್ವತ್ಥಾಮ)

ಪದವಿಂಗಡಣೆ:
ಮುಂದೆ +ಹರಿದರು +ಪಾಂಡು+ತನಯರ
ನಂದನರು+ ತಾವ್+ಐವರ್+ಈತನ
ಹಿಂದುಳುಹಿ +ಹಿಂಡಿದರು +ಹೇರಾಳದ +ಚತುರ್ಬಲವ
ಕೊಂದರಗ್ಗದ +ಚಿತ್ರಸೇನನ
ಬಂದ +ಹರಿಬದ +ಚಿತ್ರನನು +ಗುರು
ನಂದನನು +ಬಳಿಕವರ+ ಬೆದರಿಸಿ+ ನೂಕಿದನು +ರಥವ

ಅಚ್ಚರಿ:
(೧) ಉಪಪಾಂಡವರು ಎಂದು ಹೇಳಲು – ಪಾಂಡುತನಯರ ನಂದನರು
(೨) ತನಯ, ನಂದನ – ಸಮನಾರ್ಥಕ ಪದ
(೩) ‘ಹ’ ಕಾರದ ತ್ರಿವಳಿ ಪದ – ಹಿಂದುಳುಹಿ ಹಿಂಡಿದರು ಹೇರಾಳದ
(೪) ನಂದನ – ೨, ೬ ಸಾಲಿನ ಮೊದಲ ಪದ