ಪದ್ಯ ೨೦: ಧೃತರಾಷ್ಟ್ರನು ಯಾರ ತಲೆಯನ್ನು ನೇವರಿಸಿದನು?

ಬಂದು ಸಂಜಯನಂಧನೃಪತಿಯ
ಮಂದಿರವ ಹೊಕ್ಕಖಿಳ ನಾರೀ
ವೃಂದವನು ಕಳುಹಿದನು ದಂಡಿಗೆಗಳಲಿ ಮನೆಮನೆಗೆ
ಬಂದರಾರೆನೆ ಸಂಜಯನು ಜೀ
ಯೆಂದಡುತ್ಸಾಹದಲಿ ಬಂದೈ
ತಂದೆ ಸಂಜಯ ಬಾಯೆನುತ ತಡವಿದನು ಬೋಳೈಸಿ (ಗದಾ ಪರ್ವ, ೪ ಸಂಧಿ, ೨೦ ಪದ್ಯ)

ತಾತ್ಪರ್ಯ:
ಸಂಜಯನು ಧೃತರಾಷ್ಟ್ರನರಮನೆಯನ್ನು ಹೊಕ್ಕು, ಸ್ತ್ರೀಯರನ್ನು ಪಲ್ಲಕ್ಕಿಗಳಲ್ಲಿ ಅವರವರ ಮನೆಗೆ ಕಳುಹಿಸಿದನು. ಧೃತರಾಷ್ಟ್ರನು ಬಂದವರಾರು ಎಂದು ಉತ್ಸಾಹದಿಂದ ಕೇಳಲು ಸಂಜಯನು ಒಡೆಯಾ ನಾನು ಎಂದು ಹೇಳಲು, ಧೃತರಾಷ್ಟ್ರನು ಉತ್ಸಾಹದಿಂದ ಅಪ್ಪಾ ಸಂಜಯ ಬಾ ಬಾ ಎಂದು ಆತನ ತಲೆಯನ್ನು ನೇವರಿಸಿದನು.

ಅರ್ಥ:
ಬಂದು: ಆಗಮಿಸು; ಅಂಧ: ಕುರುಡ; ನೃಪ: ರಾಜ; ಮಂದಿರ: ಆಲಯ; ಹೊಕ್ಕು: ಸೇರು; ಅಖಿಳ: ಎಲ್ಲಾ; ನಾರಿ: ಹೆಂಗಸು; ವೃಂದ: ಗುಂಪು; ಕಳುಹಿದ: ತೆರಳು, ಹೊರಗಡೆ ಅಟ್ಟು; ದಂಡಿಗೆ: ಪಲ್ಲಕ್ಕಿ; ಮನೆ: ಆಲಯ, ಗೃಹ; ಜೀಯ: ಒಡೆಯ; ಉತ್ಸಾಹ: ಸಂಭ್ರಮ; ತಡವು: ನೇವರಿಸು; ಬೋಳೈಸು: ಸಂತೈಸು, ಸಮಾಧಾನ ಮಾಡು;

ಪದವಿಂಗಡಣೆ:
ಬಂದು +ಸಂಜಯನ್+ಅಂಧ+ನೃಪತಿಯ
ಮಂದಿರವ+ ಹೊಕ್ಕ್+ಅಖಿಳ +ನಾರೀ
ವೃಂದವನು +ಕಳುಹಿದನು +ದಂಡಿಗೆಗಳಲಿ+ ಮನೆಮನೆಗೆ
ಬಂದರಾರ್+ಎನೆ +ಸಂಜಯನು +ಜೀಯ್
ಎಂದಡ್+ಉತ್ಸಾಹದಲಿ +ಬಂದೈ
ತಂದೆ +ಸಂಜಯ +ಬಾಯೆನುತ +ತಡವಿದನು +ಬೋಳೈಸಿ

ಅಚ್ಚರಿ:
(೧) ಧೃತರಾಷ್ಟ್ರನನ್ನು ಕರೆದ ಪರಿ – ಅಂಧ ನೃಪತಿ, ಜೀಯ
(೨) ಅಕ್ಕರೆಯನ್ನು ತೋರುವ ಪರಿ – ಬಾಯೆನುತ ತಡವಿದನು ಬೋಳೈಸಿ