ಪದ್ಯ ೪೬: ಯುದ್ಧದ ತೀವ್ರತೆ ಹೇಗಿತ್ತು?

ಬವರಿಯಲಿ ಪೈಸರಿಸಿ ಪರಘಾ
ಯವನು ವಂಚಿಸಿ ಭಟರ ಕೊರೆದೆ
ತ್ತುವರು ಕೈಮಾಡಿದರೆ ತಿವಿವರು ಕೋಡಕೈಯವರು
ಕವಿಯಲೌಕುವರೌಕಿದರೆ ತ
ಗ್ಗುವರು ತಗ್ಗಿದರೊಡನೊಡನೆ ಜಾ
ರುವರು ಜುಣುಗುವರೈದೆ ತಿವಿದಾಡಿದರು ಸಬಳಿಗರು (ಭೀಷ್ಮ ಪರ್ವ, ೪ ಸಂಧಿ, ೪೬ ಪದ್ಯ)

ತಾತ್ಪರ್ಯ:
ಬವರಿಯಿಂದ ಸರಿಸು, ಎದುರಾಳಿಯ ಹೊಡೆತವನ್ನು ಕಪಿಮುಷ್ಟಿಯ ಯೋಧರು ತಪ್ಪಿಸಿಕೊಳ್ಳುವರು. ಎದುರಾಳಿಯನ್ನು ತಿವಿಯುವರು, ಅವನು ಕೈಮಾಡಿದರೆ ತಾವೂ ಕೈಮಾದುವರು, ಮೇಲೆ ಬಿದ್ದರೆ ಹಿಂದಕ್ಕೊತ್ತುವರು, ಔಕಿದರೆ ತಗ್ಗುವರು, ಅವನೂ ತಗ್ಗಿದರೆ ತಾವು ಸರಿದು ತಪ್ಪಿಸಿಕೊಳ್ಳುವರು. ಹೀಗೆ ಯುದ್ಧ ಘನಘೋರವಾಗಿ ನಡೆಯಿತು.

ಅರ್ಥ:
ಬವರಿ:ತಿರುಗುವುದು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಪರ: ವೈರಿ,ಎದುರಾಳಿ; ಘಾಯ: ಪೆಟ್ಟು; ವಂಚಿಸು: ಮೋಸ; ಭಟ: ಸೈನಿಕರು; ಕೊರೆ: ಇರಿ, ಚುಚ್ಚು; ಎತ್ತು: ಮೇಲೆ ತರು; ಕೈಮಾಡು: ಹೊಡೆ; ತಿವಿ: ಚುಚ್ಚು; ಕೋಡಕೈ: ಆಯುಧ; ಕವಿ: ಆವರಿಸು; ಔಕು: ತಳ್ಳು; ತಗ್ಗು: ಬಗ್ಗು, ಕುಸಿ; ಒಡನೊಡನೆ: ಒಮ್ಮೆಲೆ; ಜಾರು: ಬೀಳು; ಜುಣುಗು: ನುಣುಚಿಕೊಳ್ಳು; ಐದು: ಬಂದುಸೇರು; ತಿವಿ: ಚುಚ್ಚು; ಸಬಳಿಗ: ಈಟಿಯನ್ನು ಆಯುಧವಾಗುಳ್ಳವನು;

ಪದವಿಂಗಡಣೆ:
ಬವರಿಯಲಿ +ಪೈಸರಿಸಿ +ಪರಘಾ
ಯವನು +ವಂಚಿಸಿ +ಭಟರ +ಕೊರೆದ್
ಎತ್ತುವರು +ಕೈಮಾಡಿದರೆ+ ತಿವಿವರು+ ಕೋಡಕೈಯವರು
ಕವಿಯಲ್+ಔಕುವರ್+ಔಕಿದರೆ+ ತ
ಗ್ಗುವರು +ತಗ್ಗಿದರೊಡನೊಡನೆ+ ಜಾ
ರುವರು+ ಜುಣುಗುವರ್+ಐದೆ +ತಿವಿದಾಡಿದರು +ಸಬಳಿಗರು

ಅಚ್ಚರಿ:
(೧) ಔಕು, ತಿವಿ, ಕೊರೆ, ಕವಿ, ತಗ್ಗು, ಜಾರು, ಜುಣುಗು – ಹೋರಾಟವನ್ನು ವಿವರಿಸುವ ಪದಗಳು

ಪದ್ಯ ೨೦: ಊರ್ವಶಿಯು ಯಾವ ಭಾವಗಳಿಗೆ ಒಳಪಟ್ಟಳು?

ನುಡಿಗೆ ಬೆರಗಾದಳು ಮನೋಜನ
ಸಡಗರಕೆ ತಗ್ಗಿದಳು ಪಾರ್ಥನ
ನಡವಳಿಗೆ ಮೆಚ್ಚಿದಳು ಬೆಚ್ಚಿದಳಂಗಜಾಸ್ತ್ರದಲಿ
ಕಡುಗಿದಳು ಖಾತಿಯಲಿ ಲಜ್ಜೆಯ
ಬಿಡೆಯದಲಿ ಭಯಗೊಂಡಳಂಗನೆ
ಮಿಡುಕಿದಳು ವಿವಿಧಾನುಭಾವದ ರಸದ ಭಂಗಿಯಲಿ (ಅರಣ್ಯ ಪರ್ವ, ೯ ಸಂಧಿ, ೨೦ ಪದ್ಯ)

ತಾತ್ಪರ್ಯ:
ಅರ್ಜುನನ ಮಾತನ್ನು ಕೇಳಿ ಊರ್ವಶಿಯು ಬೆರಗಾದಳು, ಮನ್ಮಥನ ತಾಪದಿಂದ ತಗ್ಗಿದಳು, ಅರ್ಜುನನ ನಡವಳಿಕೆಗೆ ಮೆಚ್ಚಿದಳು, ಆದರೆ ಕಾಮಶರದ ಕಾಟಕ್ಕೆ ಬೆಚ್ಚಿದಳು, ಸಿಟ್ಟಿನಿಂದ ಸಿಡಿಮಿಡಿಗೊಂಡು ಕೆರಳಿದಳು, ಲಜ್ಜೆ ದಾಕ್ಷಿಣ್ಯದಿಂದ ಭಯಪಟ್ಟಳು, ಹೀಗೆ ಹಲವು ಭಾವಗಳ ತಾಕಲಾಟಕ್ಕೆ ಊರ್ವಶಿಯು ಒಳಗಾದಳು.

ಅರ್ಥ:
ನುಡಿ: ಮಾತು; ಬೆರಗು: ಆಶ್ಚರ್ಯ; ಮನೋಜ: ಕಾಮ, ಮನ್ಮಥ; ಸಡಗರ: ಉತ್ಸಾಹ, ಸಂಭ್ರಮ; ತಗ್ಗು: ಕುಗ್ಗು, ಕುಸಿ; ನಡವಳಿಗೆ: ನಡತೆ, ವರ್ತನೆ; ಮೆಚ್ಚು: ಒಲುಮೆ, ಪ್ರೀತಿ; ಬೆಚ್ಚು: ಭಯ, ಹೆದರಿಕೆ; ಅಂಗಜ: ಮನ್ಮಥ, ಕಾಮ; ಅಸ್ತ್ರ: ಆಯುಧ; ಕಡುಗು: ಶಕ್ತಿಗುಂದು; ಖಾತಿ: ಕೋಪ, ಕ್ರೋಧ; ಲಜ್ಜೆ: ನಾಚಿಕೆ; ಬಿಡೆಯ: ದಾಕ್ಷಿಣ್ಯ; ಭಯ: ಹೆದರಿಕೆ; ಅಂಗನೆ: ಹೆಂಗಸು; ಮಿಡುಕು: ಅಲುಗಾಟ, ಚಲನೆ; ವಿವಿಧ: ಹಲವಾರು; ಅನುಭಾವ: ಅತೀಂದ್ರಿಯವಾದ ಅನುಭವ, ಸಾಕ್ಷಾತ್ಕಾರ; ರಸ: ಸಾರ; ಭಂಗಿ: ಬೆಡಗು, ಒಯ್ಯಾರ;

ಪದವಿಂಗಡಣೆ:
ನುಡಿಗೆ +ಬೆರಗಾದಳು +ಮನೋಜನ
ಸಡಗರಕೆ +ತಗ್ಗಿದಳು +ಪಾರ್ಥನ
ನಡವಳಿಗೆ +ಮೆಚ್ಚಿದಳು +ಬೆಚ್ಚಿದಳ್+ಅಂಗಜ+ಅಸ್ತ್ರದಲಿ
ಕಡುಗಿದಳು+ ಖಾತಿಯಲಿ +ಲಜ್ಜೆಯ
ಬಿಡೆಯದಲಿ +ಭಯಗೊಂಡಳ್+ಅಂಗನೆ
ಮಿಡುಕಿದಳು +ವಿವಿಧ+ಅನುಭಾವದ +ರಸದ +ಭಂಗಿಯಲಿ

ಅಚ್ಚರಿ:
(೧) ಬೆರಗು, ಮೆಚ್ಚು, ಬೆಚ್ಚು, ಭಯ, ಮಿಡುಕು, ತಗ್ಗು – ಭಾವಗಳನ್ನು ವಿವರಿಸುವ ಪದ

ಪದ್ಯ ೧೯: ಹೆಂಗಸರು ಶಲ್ಯನನ್ನು ಕುತೂಹಲದಿಂದೇಕೆ ಕಂಡರು?

ಅಗ್ಗಳೆಯನಾ ಮಗಧ ಮಾತಿನ
ಲಗ್ಗಿಗನು ಶಿಶುಪಾಲ ಸೋಲದ
ಸುಗ್ಗಿಯಿಬ್ಬರಿಗಾಯ್ತು ಹಲಬರಿಗಾಯ್ತು ರಣಧೂಳಿ
ತಗ್ಗುವುದೊ ಧನು ಧನುವಿಘಾತಿಗೆ
ಮುಗ್ಗುವನೊ ಮಾದ್ರೇಶನಿವರೊಳ
ಗಗ್ಗಳೆಯನಹನೆಂದು ನೋಡಿದರಂದು ನಾರಿಯರು (ಆದಿ ಪರ್ವ, ೧೪ ಸಂಧಿ, ೧೯ ಪದ್ಯ)

ತಾತ್ಪರ್ಯ:
ಮಗಧ ದೇಶದ ರಾಜ ಜರಾಸಂಧನು ಬಹು ಪರಾಕ್ರಮಿ, ಶಿಶುಪಾಲನು ಮಾತಿನ ಮಲ್ಲ, ಇಂತಹ ಶೂರರಿಗೆ ಬಿಲ್ಲು ಒಲಿಯದೆ, ಸೋಲಿನ ಹಬ್ಬವನ್ನು ಉಣಿಸಿತು, ಇನ್ನು ಹಲವು ರಾಜರು ಮಣ್ಣುಮುಕ್ಕಿದರು, ಈ ಧನುವು ಬಾಗುವುದೋ ಅಥವ ಇದೇ ಶಲ್ಯನನ್ನು ಬಗ್ಗು ಬಡೆಯುವುದೋ ನೋಡಬೇಕು ಎಂದು ಕುತೂಹಲದಿಂದ ನಾರಿಯರು ನೋಡುತ್ತಿದ್ದರು.

ಅರ್ಥ:
ಅಗ್ಗಳೆ:ಶೂರ, ಪರಾಕ್ರಮಿ; ಮಗಧ: ಜರಾಸಂಧ; ಅಗ್ಗಿಗ: ಮುಂದಾಳು, ಅಗ್ರಗಣ್ಯ; ಸುಗ್ಗಿ: ಹಬ್ಬ; ಸೋಲು: ಪರಾಜಯ; ಹಲಬರು: ಅನೇಕರು; ರಣ: ಯುದ್ಧ; ಧೂಳಿ: ಮಣ್ಣಿನಪುಡಿ; ತಗ್ಗು: ಕೆಳಗೆ ಹೋಗು, ಬಾಗು; ಧನು: ಧನುಸ್ಸು; ವಿಘಾತಿ: ನಾಶಮಾಡುವವ; ಮುಗ್ಗು: ಮುನ್ನಡೆ; ಈಶ: ಪ್ರಭು, ಒಡೆಯ; ನೋಡು:ವೀಕ್ಷಿಸು; ನಾರಿ: ಹೆಂಗಸು;

ಪದವಿಂಗಡಣೆ:
ಅಗ್ಗಳೆಯನ್+ಆ+ ಮಗಧ+ ಮಾತಿನಲ್
ಅಗ್ಗಿಗನು +ಶಿಶುಪಾಲ +ಸೋಲದ
ಸುಗ್ಗಿಯಿಬ್ಬರಿಗಾಯ್ತು +ಹಲಬರಿಗಾಯ್ತು +ರಣಧೂಳಿ
ತಗ್ಗುವುದೊ +ಧನು +ಧನು+ವಿಘಾತಿಗೆ
ಮುಗ್ಗುವನೊ +ಮಾದ್ರೇಶನ್+ಇವರೊಳಗ್
ಅಗ್ಗಳೆಯ+ನಹನೆಂದು +ನೋಡಿದರಂದು +ನಾರಿಯರು

ಅಚ್ಚರಿ:
(೧) ಅಗ್ಗಿ, ಸುಗ್ಗಿ, ತಗ್ಗು, ಮುಗ್ಗು – ಪ್ರಾಸ ಪದಗಳು, ಹಾಗು ಸಾಲಿನ ಮೊದಲ ಪದಗಳು
(೨) ಸೋಲಿನ ತೀವ್ರತೆಯನ್ನು ವರ್ಣಿಸಲು – ಸೋಲದ ಸುಗ್ಗಿ (“ಸ” ಕಾರದ ಜೋಡಿ ಪದ ಕೂಡ)
(೩) ಧನು ಪದದ ಜೋಡಿ ಬಳಕೆ – ತಗ್ಗುವುದೊ ಧನು ಧನುವಿಘಾತಿ
(೪) ಗಾಯ್ತು ಪದದ ಜೋಡಿ ಬಳಕೆ – ಸುಗ್ಗಿಯಿಬ್ಬರಿಗಾಯ್ತು ಹಲಬರಿಗಾಯ್ತು