ಪದ್ಯ ೮: ಭೀಮ ದುರ್ಯೋಧನರ ಯುದ್ಧದ ಗತಿ ಹೇಗಿತ್ತು?

ಶ್ವಾಸದಲಿ ಕಿಡಿಸಹಿತ ಕರ್ಬೊಗೆ
ಸೂಸಿದವು ಕಣ್ಣಾಲಿಗಳು ಕ
ಟ್ಟಾಸುರದಿ ಕೆಂಪೇರಿದವು ಬಿಗುಹೇರಿ ಹುಬ್ಬುಗಳು
ರೋಷ ಮಿಗಲೌಡೊತ್ತಿ ಬಹಳಾ
ಭ್ಯಾಸಿಗಳು ಡಾವರಿಸಿದರು ಡೊ
ಳ್ಳಾಸವೋ ರಿಪುಸೇನೆ ಕಾಣದು ಚಿತ್ರಪಯಗತಿಯ (ಗದಾ ಪರ್ವ, ೭ ಸಂಧಿ, ೮ ಪದ್ಯ)

ತಾತ್ಪರ್ಯ:
ಅವರ ಉಸಿರಿನಲ್ಲಿ ಕಪ್ಪುಹೊಗೆಯೊಡನೆ ಕಿಡಿಗಳು ಹೊರಬರುತ್ತಿದ್ದವು. ಹುಬ್ಬುಗಳು ಬಿಇದು ಕಣ್ಣುಗಳು ಕಡುಗೆಂಪೇರಿದ್ದವು. ರೋಷವೇರಿ ತುಟಿಕಚ್ಚಿ, ಮಹಾ ಚತುರರಾದ ಗದಾಯುದ್ಧದಲ್ಲಿ ಅತ್ಯಂತ ಶ್ರೇಷ್ಠರಾದ ಇಬ್ಬರ ಗದೆಗಳ ಹೊಡೆತವನ್ನು ಕಂಡರೂ, ಪಾದಗತಿ ಕಾಣಿಸುತ್ತಿರಲಿಲ್ಲ.

ಅರ್ಥ:
ಶ್ವಾಸ: ಉಸಿರು; ಕಿಡಿ: ಬೆಂಕಿ; ಸಹಿತ: ಜೊತೆ; ಕರ್ಬೊಗೆ: ಕಪ್ಪಾದ ಹೊಗೆ; ಸೂಸು: ಹೊರಹೊಮ್ಮು; ಕಣ್ಣಾಲಿ: ಕಣ್ಣಿನ ಅಂಉ; ಕಟ್ಟಾಸುರ: ಅತ್ಯಂತ ಭಯಂಕರ; ಏರು: ಹೆಚ್ಚಾಗು; ಬಿಗುಹೇರು: ಬಿಗಿಹೆಚ್ಚು; ಹುಬ್ಬು: ಕಣ್ಣಿನ ಮೇಲಿನ ರೋಮ; ರೋಷ: ಕೋಪ; ಮಿಗಲು: ಹೆಚ್ಚಾಗು; ಔಡೊತ್ತು: ಹಲ್ಲಿನಿಂದ ತುಟಿಕಚ್ಚು; ಬಹಳ: ತುಂಬ; ಅಭ್ಯಾಸಿ: ವಿದ್ಯಾರ್ಥಿ; ಡಾವರಿಸು: ತಿವಿ, ನೋಯಿಸು; ಡೊಳ್ಳಾಸ: ಮೋಸ, ಕಪಟ; ರಿಪುಸೇನೆ: ವೈರಿ ಸೈನ್ಯ; ಕಾಣು: ತೋರು; ಪಯಗತಿ: ಪಾದದ ವೇಗ;

ಪದವಿಂಗಡಣೆ:
ಶ್ವಾಸದಲಿ+ ಕಿಡಿಸಹಿತ +ಕರ್ಬೊಗೆ
ಸೂಸಿದವು +ಕಣ್ಣಾಲಿಗಳು +ಕ
ಟ್ಟಾಸುರದಿ+ ಕೆಂಪೇರಿದವು +ಬಿಗುಹೇರಿ +ಹುಬ್ಬುಗಳು
ರೋಷ +ಮಿಗಲ್+ಔಡೊತ್ತಿ+ ಬಹಳ
ಅಭ್ಯಾಸಿಗಳು +ಡಾವರಿಸಿದರು +ಡೊ
ಳ್ಳಾಸವೋ +ರಿಪುಸೇನೆ +ಕಾಣದು +ಚಿತ್ರ+ಪಯಗತಿಯ

ಅಚ್ಚರಿ:
(೧) ಕ ಕಾರದ ಸಾಲು ಪದಗಳು – ಕಿಡಿಸಹಿತ ಕರ್ಬೊಗೆಸೂಸಿದವು ಕಣ್ಣಾಲಿಗಳು ಕಟ್ಟಾಸುರದಿ ಕೆಂಪೇರಿದವು

ಪದ್ಯ ೨೬: ದ್ರೋಣನು ಪಾಂಡವರ ಸೈನ್ಯವನ್ನು ಹೇಗೆ ಧ್ವಂಸ ಮಾಡಿದನು?

ಹೊಕ್ಕ ಸಾಲರುಣಾಂಬುಮಯ ಕೈ
ಯಿಕ್ಕಿದತ್ತಲು ಖಂಡಮಯ ಮೊಗ
ವಿಕ್ಕಿದತ್ತಲು ಮೊರೆವ ಹೆಣಮಯವೇನನುಸುರುವೆನು
ಇಕ್ಕಡಿಯ ಬಸುರುಚ್ಚುಗಳ ನರ
ಸೊಕ್ಕು ಡೊಳ್ಳಾಸದ ಮಹಾಭಯ
ವೆಕ್ಕಸರದಲಿ ಕಾಣಲಾದುದು ವೈರಿಬಲದೊಳಗೆ (ದ್ರೋಣ ಪರ್ವ, ೧೭ ಸಂಧಿ, ೨೬ ಪದ್ಯ)

ತಾತ್ಪರ್ಯ:
ದ್ರೋಣನು ಹೊಕ್ಕ ದಾರಿಯೆಲ್ಲಾ ರಕ್ತಮಯವಾಯಿತು. ಕೈಯಿಟ್ಟಲ್ಲಿ ಮಾಂಸ ಖಂಡಮಯವಾಯಿತು. ಅವನು ನೋಡಿದ ದಿಕ್ಕಿನಲ್ಲಿ ಹೆಣಗಳು ಬಿದ್ದವು. ಎರಡು ಸಾಲುಗಳಲ್ಲೂ ಕಡಿದು ಬಿದ್ದ ಸೈನಿಕರು, ಸೊಕ್ಕಿದವರೆಲ್ಲಾ ಮಹಾ ಭಯಗ್ರಸ್ತರಾದರು.

ಅರ್ಥ:
ಹೊಕ್ಕು: ಸೇರು; ಸಾಲು: ಆವಳಿ; ಅರುಣ: ಕೆಂಪು; ಅಂಬು: ನೀರು; ಅರುಣಾಂಬು: ಕೆಂಪಾದ ನೀರು; ಮಯ: ತುಂಬು; ಕೈ: ಹಸ್ತ; ಖಂಡ: ತುಂಡು; ಮೊಗ: ಮುಖ; ಮೊರೆ: ಧ್ವನಿ ಮಾಡು; ಹೆಣ: ಜೀವವಿಲ್ಲದ ಶರೀರ; ಉಸುರು: ಹೇಳು, ಮಾತನಾಡು; ಇಕ್ಕಡಿ: ಎರಡೂ ಕಡೆಯಲ್ಲಿ; ಬಸುರು: ಹೊಟ್ಟೆ; ಉಚ್ಚು: ಹೊರಕ್ಕೆ ತೆಗೆ; ನರ: ಮನುಷ್ಯ; ಸೊಕ್ಕು: ಅಮಲು, ಮದ; ಡೊಳ್ಳು: ಬೊಜ್ಜು ಬೆಳೆದ ಹೊಟ್ಟೆ; ಮಹಾ: ಬಹಳ, ದೊಡ್ಡ; ಭಯ: ಅಂಜಿಕೆ; ಕಾಣು: ತೋರು; ವೈರಿ: ಶತ್ರು; ಬಲ: ಸೈನ್ಯ;

ಪದವಿಂಗಡಣೆ:
ಹೊಕ್ಕ +ಸಾಲ್+ಅರುಣಾಂಬುಮಯ+ ಕೈ
ಯಿಕ್ಕಿದತ್ತಲು +ಖಂಡಮಯ +ಮೊಗ
ವಿಕ್ಕಿದತ್ತಲು +ಮೊರೆವ +ಹೆಣಮಯವ್+ಏನನ್+ಉಸುರುವೆನು
ಇಕ್ಕಡಿಯ+ ಬಸುರ್+ಉಚ್ಚುಗಳ +ನರ
ಸೊಕ್ಕು +ಡೊಳ್ಳಾಸದ +ಮಹಾಭಯವ್
ಎಕ್ಕಸರದಲಿ +ಕಾಣಲಾದುದು +ವೈರಿಬಲದೊಳಗೆ

ಅಚ್ಚರಿ:
(೧) ಅರುಣಾಂಬುಮಯ, ಖಂಡಮಯ, ಹೆಣಮಯ – ಪದದ ಬಲಕೆ

ಪದ್ಯ ೯೦: ಅಪ್ಸರೆಯರು ಹೇಗೆ ಇಂದ್ರನೋಲವನ್ನು ಸೇರಿದರು?

ನೇವುರದ ನುಣ್ದನಿಯ ಕಾಂಚಿಯ
ಕೇವಣದ ಕಿಂಕಿಣಿಯ ರಭಸದ
ನೇವಣಗಳುಲುಹುಗಳ ಮೌಳಿಯ ಮುರಿದ ಮುಸುಕುಗಳ
ಭಾವದುಬ್ಬಿನ ಚೆಲ್ಲೆಗಂಗಳ
ಡಾವರದ ಡೊಳ್ಳಾಸಕಾತಿಯ
ರಾ ವಿಬುಧಪತಿಯೋಲಗವ ಹೊಕ್ಕರು ನವಾಯಿಯಲಿ (ಅರಣ್ಯ ಪರ್ವ, ೮ ಸಂಧಿ, ೯೦ ಪದ್ಯ)

ತಾತ್ಪರ್ಯ:
ಕಾಲಂದುಗೆಯ ಮೆಲುದನಿ, ರತ್ನಖಚಿತವಾದ ಡಾಬಿಗೆ ಕಟ್ಟಿದ ಕಿರುಗೆಜ್ಜೆಗಳ ಸದ್ದು, ಚಿನ್ನದ ಹಾರಗಳ ಸದ್ದು, ಮುಖಕ್ಕೆ ಹಾಕಿದ ಸರಿದ ಮುಸುಕುಗಳು, ಭಾವಪೂರಿತವಾಗಿ ಅರಳಿದ ಕಣ್ಣುಅಳು ಇವುಗಳಿಂದ ನೋಟಕರ ಮನಸ್ಸಿನಲ್ಲಿ ತೀವ್ರವಾದ ಏರುಪೇರು ಮಾಡಬಲ್ಲ ಅಪ್ಸರೆಯರು ಸೊಗಸನ್ನು ಬೀರುತ್ತಾ ಇಂದ್ರನೋಲಗನ್ನು ಸೇರಿದರು.

ಅರ್ಥ:
ನೇವುರ: ಅಂದುಗೆ, ನೂಪುರ; ನುಣುಪು: ನಯ; ದನಿ: ಶಬ್ದ; ಕಾಂಚಿ: ಡಾಬು; ಕೇವಣ: ಕೂಡಿಸುವುದು; ಕಿಂಕಿಣಿ: ಕಿರುಗೆಜ್ಜೆ; ರಭಸ: ವೇಗ; ನೇವಣ: ಚಿನ್ನದ ಹಾರ; ಉಲುಹು: ಶಬ್ದ; ಮೌಳಿ: ಶಿರ; ಮುರಿ: ಸೀಳು; ಮುಸುಕು: ಹೊದಿಕೆ; ಭಾವ: ಮನಸ್ಸು; ಉಬ್ಬು: ಹಿಗ್ಗು; ಚೆಲ್ಲೆ: ಚಂಚಲವಾದ; ಕಂಗಳು: ಕಣ್ಣುಗಳು; ಡಾವರ: ಕಾವು, ಗಲಿಬಿಲಿ; ಡೊಳ್ಳಾಸ: ಬೆಡಗು, ಒಯ್ಯಾರ; ಕಾತಿ: ಗರತಿ, ಮುತ್ತೈದೆ; ವಿಬುಧ: ಸುರ, ದೇವತೆ; ಪತಿ: ಒಡೆಯ; ವಿಬುಧಪತಿ: ಇಂದ್ರ; ಓಲಗ: ದರ್ಬಾರು; ಹೊಕ್ಕು: ಸೇರು; ನವಾಯಿ: ಠೀವಿ;

ಪದವಿಂಗಡಣೆ:
ನೇವುರದ +ನುಣ್ದನಿಯ +ಕಾಂಚಿಯ
ಕೇವಣದ+ ಕಿಂಕಿಣಿಯ +ರಭಸದ
ನೇವಣಗಳ್+ಉಲುಹುಗಳ +ಮೌಳಿಯ +ಮುರಿದ +ಮುಸುಕುಗಳ
ಭಾವದುಬ್ಬಿನ +ಚೆಲ್ಲೆಗಂಗಳ
ಡಾವರದ+ ಡೊಳ್ಳಾಸ+ಕಾತಿಯರ್
ಆ+ ವಿಬುಧಪತಿ+ಓಲಗವ+ ಹೊಕ್ಕರು +ನವಾಯಿಯಲಿ

ಅಚ್ಚರಿ:
(೧) ಕ, ಮ ಕಾರದ ತ್ರಿವಳಿ ಪದ – ಕಾಂಚಿಯ ಕೇವಣದ ಕಿಂಕಿಣಿಯ; ಮೌಳಿಯ ಮುರಿದ ಮುಸುಕುಗಳ
(೨) ಇಂದ್ರನನ್ನು ಕರೆದ ಪರಿ – ವಿಬುಧಪತಿ

ಪದ್ಯ ೧೪: ಶಕುನಿ ನಕುಲನನ್ನು ಗೆದ್ದನೆ?

ವಾಸಿಗನುಜನನೊಡ್ಡಿದರೆ ನಮ
ಗೀಸರಲಿ ಭಯವೇನು ನೋಡುವೆ
ವೈಸಲೇ ನೃಪ ಹಾಯ್ಕು ಹಾಸಂಗಿಗಳ ಹಾಯ್ಕೆನುತ
ಆ ಶಕುನಿ ಪೂರ್ವಾರ್ಜಿತದ ಡೊ
ಳ್ಳಾಸದಲಿ ಡಾವರಿಸಿ ಧರ್ಮ ವಿ
ನಾಶಿ ನಕುಲನ ಗೆಲಿದು ಬೊಬ್ಬಿರಿದವನಿಪಗೆ ನುಡಿದ (ಸಭಾ ಪರ್ವ, ೧೫ ಸಂಧಿ, ೧೪ ಪದ್ಯ)

ತಾತ್ಪರ್ಯ:
ಶಕುನಿಯು ತನ್ನ ಮಾತನ್ನು ಮುಂದುವರೆಸುತ್ತಾ, ಹಠದಿಂದ ತಮ್ಮನನ್ನು ಒಡ್ಡಿದರೆ ನಮಗೇನು ಭಯವಿಲ್ಲ, ಒಂದು ಕೈಯಿ ನೋಡೋಣ, ದಾಳವನ್ನು ಹಾಕು ಎಂದನು. ಪೂರ್ವಜನ್ಮದಲ್ಲಿ ಗಳಿಸಿದ ಮೋಸದಿಂದ ಧರ್ಮವಿನಾಶಮಾಡುವ ರಭಸದಿಂದ ನಕುಲನನ್ನು ಗೆದ್ದು ಆರ್ಭಟಿಸುತ್ತಾ ಹೀಗೆ ಹೇಳಿದನು.

ಅರ್ಥ:
ವಾಸಿ: ಪ್ರತಿಜ್ಞೆ, ಶಪಥ; ಅನುಜ: ತಮ್ಮ; ಒಡ್ಡ: ಜೂಜಿನಲ್ಲಿ ಪಣಕ್ಕೆ ಇಡುವ ದ್ರವ್ಯ; ಸರ: ರೀತಿ; ಭಯ: ಅಂಜಿಕೆ; ಐಸಲೇ: ಅಲ್ಲವೇ; ನೃಪ: ರಾಜ; ಹಾಯ್ಕು: ಇಡು, ಇರಿಸು, ಧರಿಸು; ಹಾಸಂಗಿ: ಜೂಜಿನ ದಾಳ; ಪೂರ್ವಾರ್ಜಿತ: ಹಿಂದೆಯೇ ಗಳಿಸಿದ; ಡೊಳ್ಳಾಸ: ಮೋಸ, ಕಪಟ; ಡಾವರಿಸು: ಸುತ್ತು, ತಿರುಗಾಡು; ಧರ್ಮ: ಧಾರಣ ಮಾಡಿದುದು, ನಿಯಮ; ವಿನಾಶ: ಹಾಳು, ಸರ್ವನಾಶ; ಗೆಲಿ: ಗೆಲ್ಲು, ಜಯ; ಬೊಬ್ಬಿರಿ: ಗರ್ಜಿಸು, ಆರ್ಭಟ; ನುಡಿ: ಮಾತಾಡು; ಅವನಿಪ: ರಾಜ;

ಪದವಿಂಗಡಣೆ:
ವಾಸಿಗ್+ಅನುಜನನ್+ಒಡ್ಡಿದರೆ+ ನಮಗ್
ಈಸರಲಿ +ಭಯವೇನು +ನೋಡುವೆವ್
ಐಸಲೇ +ನೃಪ +ಹಾಯ್ಕು +ಹಾಸಂಗಿಗಳ +ಹಾಯ್ಕೆನುತ
ಆ +ಶಕುನಿ +ಪೂರ್ವಾರ್ಜಿತದ +ಡೊ
ಳ್ಳಾಸದಲಿ +ಡಾವರಿಸಿ+ ಧರ್ಮ +ವಿ
ನಾಶಿ +ನಕುಲನ +ಗೆಲಿದು +ಬೊಬ್ಬಿರಿದ್+ಅವನಿಪಗೆ+ ನುಡಿದ

ಅಚ್ಚರಿ:
(೧) ಶಕುನಿಯ ವರ್ಣನೆ – ಪೂರ್ವಾರ್ಜಿತದ ಡೊಳ್ಳಾಸದಲಿ ಡಾವರಿಸಿ ಧರ್ಮ ವಿನಾಶಿ
(೨) ಹ ಕಾರದ ತ್ರಿವಳಿ ಪದ – ಹಾಯ್ಕು ಹಾಸಂಗಿಗಳ ಹಾಯ್ಕೆನುತ

ಪದ್ಯ ೬೧: ಶಕುನಿಯ ಕೈಚಳಕ ಹೇಗಿತ್ತು?

ಆವ ಕೌಳಿಕ ಮಂತ್ರ ತಂತ್ರದ
ಡಾವರದ ಡೊಳ್ಳಾಸವಿಕ್ಕಿದ
ದೀವಸದ ಬೇಳುವೆಯನೇನೆಂಬೆನು ಮಹೀಪತಿಯ
ಆವ ವಸ್ತುವನರಸನೊಡ್ಡುವ
ನಾವ ವಹಿಲದಲಾತ ಸೋಲಿಸಿ
ಕೈವಳಿಸಿದನೊ ಬಲ್ಲನಾವವನೆಂದನಾ ಮುನಿಪ (ಸಭಾ ಪರ್ವ, ೧೪ ಸಂಧಿ, ೬೧ ಪದ್ಯ)

ತಾತ್ಪರ್ಯ:
ವೈಶಂಪಾಯನರು ಜನಮೇಜಯನಿಗೆ ಭಾರತದ ಕಥೆಯನ್ನು ಹೇಳುತ್ತಾ, ಯಾವ ಠಕ್ಕುಮಂತ್ರವು ಸಿದ್ಧಪಡಿಸಿದ ಮೋಸಕ್ಕೆ ಧರ್ಮಜನ ಬುದ್ಧಿ ವಶವಾಗಿ ಹೋಯಿತೋ, ಏನು ಹೇಳಲಿ. ಯಾವ ವಸ್ತುವನ್ನು ಅವನು ಒಡ್ಡಿದರೂ ಶಕುನಿಯು ಅತಿ ಶೀಘ್ರವಾಗಿ ಸೋಲಿಸಿ ಅದನ್ನು ಕೈವಶ ಮಾಡಿಕೊಳ್ಳುತ್ತಿದ್ದನು.

ಅರ್ಥ:
ಕೌಳಿಕ: ಕಟುಕ, ಮೋಸ, ವಂಚನೆ; ಮಂತ್ರ: ವಿಚಾರ, ಆಲೋಚನೆ; ಡಾವರ: ಕೊಳ್ಳೆ, ಸೂರೆ; ಡೊಳ್ಳಾಸ: ಮೋಸ, ಕಪಟ; ದೀವಸ: ಅಲೋಚನೆ, ಧೈರ್ಯ, ಕೆಚ್ಚು; ಬೇಳು:ಮರುಳು, ದಡ್ಡತನ; ಮಹೀಪತಿ: ರಾಜ; ಮಹೀ: ಭೂಮಿ; ವಸ್ತು: ಸಾಮಗ್ರಿ; ಅರಸ: ರಾಜ; ಒಡ್ಡು: ಜೂಜಿನಲ್ಲಿ ಒಡ್ಡುವ ಹಣ; ವಹೆಲ: ಬೇಗ, ತ್ವರೆ; ಸೋಲು: ಪರಾಭವ; ಕೈವಳಿಸು: ಕೈವಶ; ಬಲ್ಲ: ತಿಳಿ; ಮುನಿ: ಋಷಿ;

ಪದವಿಂಗಡಣೆ:
ಆವ +ಕೌಳಿಕ +ಮಂತ್ರ +ತಂತ್ರದ
ಡಾವರದ +ಡೊಳ್ಳಾಸವಿಕ್ಕಿದ
ದೀವಸದ+ ಬೇಳುವೆಯನ್+ಏನೆಂಬೆನು +ಮಹೀಪತಿಯ
ಆವ+ ವಸ್ತುವನ್+ಅರಸನ್+ಒಡ್ಡುವನ್
ಆವ+ ವಹಿಲದಲಾತ +ಸೋಲಿಸಿ
ಕೈವಳಿಸಿದನೊ +ಬಲ್ಲನಾವವನ್+ಎಂದನಾ +ಮುನಿಪ

ಅಚ್ಚರಿ:
(೧) ಡಾವರ, ಡೊಳ್ಳಾಸ – ಪದ ಪ್ರಯೋಗ
(೨) ಮಹೀಪತಿ, ಅರಸ – ಸಮನಾರ್ಥಕ ಪದ

ಪದ್ಯ ೧೭: ಕೃಷ್ಣನು ಹೇಗೆ ಕೊಲ್ಲುವವನೆಂದು ಶಿಶುಪಾಲನು ಹಂಗಿಸಿದನು?

ಅಸಗನನು ಕೆಡೆತಿವಿದು ಕಂಸನ
ವಸನವೆಲ್ಲವ ಸೆಳೆದಗಡ ಮಾ
ಣಿಸಿದನೈ ದಿಟಘಟ್ಟಿವಾಳ್ತಿಯ ಮೈಯಮೂಹೊರಡ
ಮಸಗಿ ಬೀಸುವ ಕಂಸನಾನೆಯ
ನಸುಬಡಿದ ಗಡ ಮಲ್ಲರನು ಮ
ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ (ಸಭಾ ಪರ್ವ, ೧೧ ಸಂಧಿ, ೧೭ ಪದ್ಯ)

ತಾತ್ಪರ್ಯ:
ಅಗಸನು ಬಟ್ಟೆಗಳನ್ನು ಒಗೆಯುವ ರೀತಿ, ಈತನು ಕಂಸನ ಬಟ್ಟೆಗಳನ್ನೆಲ್ಲಾ ಸೆಳೆದುಕೊಂಡನೋ? ಮೂರುಡೊಂಕಿದ್ದ ತ್ರಿಕುಬ್ಜೆಯ ಗೂನನ್ನು ಸರಿಪಡಿಸಿದನೋ? ಕಂಸನ ಆನೆಯನ್ನು ಕೊಂದನೇ? ಮೋಸದಿಂದ ತಿವಿದು ಕೊಲ್ಲುವವನಲ್ಲವೇ ಈತ ಎಂದು ಕೃಷ್ಣನನ್ನು ಹಂಗಿಸಿದನು.

ಅರ್ಥ:
ಅಸಗ: ಅಗಸ, ರಜಕ; ಕೆಡೆ: ಬೀಳು; ತಿವಿ: ಚುಚ್ಚು; ವಸನ: ಬಟ್ಟೆ; ಸೆಳೆ: ಜಗ್ಗು, ಎಳೆ; ಗಡ: ಅಲ್ಲವೇ; ಮಾಣಿಸು: ನಿಲ್ಲುವಂತೆ ಮಾಡು; ದಿಟ: ಸತ್ಯ, ನೈಜ; ಘಟ್ಟಿ: ಹೆಪ್ಪುಗಟ್ಟಿದುದು, ಘನರೂಪವಾದುದು; ಮೈಯ: ತನು, ದೇಹ; ಮೂಹೊರಡು: ಮೂರುಡೊಂಕು; ಮಸಗು: ಹರಡು, ಕೆರಳು; ಬೀಸು: ಹೊಡೆ; ಆನೆ: ಕರಿ; ಅಸು: ಪ್ರಾಣ: ಬಡಿ: ಹೊಡೆ; ಮಲ್ಲ: ಕುಸ್ತಿಪಟು, ಜಟ್ಟಿ; ಮರ್ದಿಸು: ಕೊಲ್ಲು; ಡೊಳ್ಳಾಸ: ಮೋಸ, ಕಪಟ; ಡಾವರಿಗ: ಶೌರ್ಯ, ಶೂರ;

ಪದವಿಂಗಡಣೆ:
ಅಸಗನನು +ಕೆಡೆತಿವಿದು+ ಕಂಸನ
ವಸನವೆಲ್ಲವ +ಸೆಳೆದ+ಗಡ+ ಮಾ
ಣಿಸಿದನೈ +ದಿಟಘಟ್ಟಿವಾಳ್ತಿಯ +ಮೈಯ+ಮೂಹೊರಡ
ಮಸಗಿ+ ಬೀಸುವ +ಕಂಸನ+ಆನೆಯನ್
ಅಸುಬಡಿದ +ಗಡ +ಮಲ್ಲರನು +ಮ
ರ್ದಿಸಿದನೇ +ಡೊಳ್ಳಾಸದಲಿ +ಡಾವರಿಗನಹನೆಂದ

ಅಚ್ಚರಿ:
(೧) ಸಾಯಿಸು ಎಂದು ಹೇಳಲು – ಅಸುಬಡಿದ ಪದದ ಬಳಕೆ
(೨) ಜೋಡಿ ಪದಗಳು – ಮಲ್ಲರನು ಮರ್ದಿಸಿದನೇ; ಡೊಳ್ಳಾಸದಲಿ ಡಾವರಿಗನಹನೆಂದ

ಪದ್ಯ ೨೬: ಅರ್ಜುನನು ಕರ್ಣನಾರೆಂದು ಕೃಷ್ಣನಲ್ಲಿ ಕೇಳಿದನು – ೩?

ಅಸುರದ ವ್ಯಾಮೋಹವಿದು ಡೊ
ಳ್ಳಾಸವೋ ಕೌರವರ ಥಟ್ಟಿನ
ವೈಸಿಕವೊ ನಿಮ್ಮಡಿಯ ಮಾಯಾಮಯದ ಮಾಲೆಗಳೊ
ವಾಸಿ ಬೀತುದು ಛಲಗಿಲದ ಕಾ
ಳಾಸ ಸೋತುದು ಕರ್ಣನಲಿ ಹಿರಿ
ದಾಸೆಯಾಯಿತು ಕೃಷ್ಣ ಕರುಣಿಸು ಕರ್ಣನಾರೆಂದ (ಕರ್ಣ ಪರ್ವ, ೨೬ ಸಂಧಿ, ೨೬ ಪದ್ಯ)

ತಾತ್ಪರ್ಯ:
ಅಸುರೀ ಪ್ರೀತಿ, ಮೋಹಗಳು ಇವು ಹೇಗೆ ಬಂದವು? ಕೌರವ ಸೈನ್ಯದವರು ಮಾಡಿದ ವಂಚನೆಯೋ, ಕೌರವರೇನಾದರು ಮಾಟ ಮಾಡಿದರೋ, ಅಥವ ಇದು ನಿಮ್ಮ ಚರಣದ ಮಾಯೆಯೋ, ಕರ್ಣನ ಮೇಲಿದ್ದ ನನ್ನ ಛಲವು ಹೊರಟುಹೋಯಿತು. ಕರ್ಣನಲ್ಲಿ ಪ್ರೀತಿ ಮೂಡಿದೆ, ಕೃಷ್ಣ ಕರ್ಣನು ಯಾರೆಂದು ದಯವಿಟ್ಟು ತಿಳಿಸೆಂದು ಅರ್ಜುನನು ಬೇಡಿದನು.

ಅರ್ಥ:
ಅಸುರ: ರಾಕ್ಷಸ, ದಾನವ; ವ್ಯಾಮೋಹ: ಪ್ರೀತಿ; ಡೊಳ್ಳಾಸ: ಮೋಸ, ಕಪಟ; ಥಟ್ಟು: ಗುಂಪು; ವೈಸಿಕ:ಠಕ್ಕು, ಮೋಸ; ನಿಮ್ಮಡಿ: ನಿಮ್ಮ ಚರಣದ; ಮಾಯ:ಗಾರುಡಿ, ಇಂದ್ರಜಾಲ; ಮಾಲೆ: ಹಾರ; ವಾಸಿ: ಛಲ, ಹಠ; ಬೀತು: ಕಡಿಮೆಯಾಯಿತು, ಹೊರಟುಹೋಯಿತು; ಛಲ: ದೃಢ ನಿಶ್ಚಯ; ಕಾಳಾಸ: ಬೆಸುಗೆ, ಗಾಢತ್ವ; ಸೋತು: ಪರವಶವಾಗು, ಮೋಹಗೊಳ್ಳು; ಹಿರಿ: ದೊಡ್ಡ; ಆಸೆ: ಇಚ್ಛೆ; ಕರುಣಿಸು: ದಯಪಾಲಿಸು;

ಪದವಿಂಗಡಣೆ:
ಅಸುರದ +ವ್ಯಾಮೋಹವ್+ಇದು+ ಡೊ
ಳ್ಳಾಸವೋ +ಕೌರವರ+ ಥಟ್ಟಿನ
ವೈಸಿಕವೊ +ನಿಮ್ಮಡಿಯ +ಮಾಯಾಮಯದ +ಮಾಲೆಗಳೊ
ವಾಸಿ +ಬೀತುದು +ಛಲಗಿಲದ+ ಕಾ
ಳಾಸ +ಸೋತುದು +ಕರ್ಣನಲಿ +ಹಿರಿ
ದಾಸೆಯಾಯಿತು +ಕೃಷ್ಣ +ಕರುಣಿಸು +ಕರ್ಣನಾರೆಂದ

ಅಚ್ಚರಿ:
(೧) ಬೀತುದು, ಸೋತುದು; ಡೊಳ್ಳಾಸ, ಕಾಳಾಸ – ಪ್ರಾಸ ಪದಗಳು
(೨) ವಾಸಿ, ಛಲ – ಸಮನಾರ್ಥಕ ಪದಗಳು

ಪದ್ಯ ೧: ಕೌರವನ ಸ್ಥಿತಿ ಹೇಗಾಯಿತು?

ಅವಧರಿಸು ಧೃತರಾಷ್ಟ್ರನೃಪ ನಿ
ನ್ನವಗೆ ತಿಳಿದುದು ಸೊಕ್ಕು ಚಿತ್ತದ
ಬವಣಿ ಬೀತುದು ಮನದ ಜೊಂಪಿಳಿದುದು ಛಡಾಳಿಸಿದ
ಡವರಿಸಿದ ಡೊಳ್ಳಾಸ ರಣಬೇ
ಳುವೆಯ ಬಿಗುಹಡಗಿದವೊಲನಿಬರು
ತವತವಗೆ ನಾಚಿದರು ಕೋಳಾಹಳಕೆ ಪವನಜನ (ಕರ್ಣ ಪರ್ವ, ೨೦ ಸಂಧಿ, ೧ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ ರಾಜನೇ ಕೇಳು, ನಿನ್ನ ಮಗನ ಸೊಕ್ಕು ದುಶ್ಯಾಸನ ವಧೆಯಿಂದ ಇಳಿದುಹೋಯಿತು. ದುಃಖಾತಿರೇಕವು ಕಡಿಮೆಯಾಯಿತು. ಮನಸ್ಸಿಗೆ ಬಂದ ಮರೆವು ಇಳಿದುಹೋಯಿತು. ಭೀಮನ ಕೋಲಾಹಲವನ್ನು ಕಂಡು ತಮ್ಮನ್ನು ಆವರಿಸಿದ ಭೀತಿ, ಯುದ್ಧದ ಆಸಕ್ತಿಯು ಅದರ ನಾಶಗಳನ್ನು ಆಲೋಚಿಸಿ ತಮ್ಮ ತಮ್ಮಲ್ಲೇ ನಾಚಿಕೆಹೊಂದಿದರು.

ಅರ್ಥ:
ಅವಧರಿಸು: ಗಮನವಿಟ್ಟು ಕೇಳು; ನೃಪ: ರಾಜ; ತಿಳಿ: ಎಚ್ಚರವಾಗು, ಅರಿತುಕೊಳ್ಳು; ಸೊಕ್ಕು: ಗರ್ವ, ಅಹಂಕಾರ; ಚಿತ್ತ: ಮನಸ್ಸು; ಬವಣೆ: ಕಷ್ಟ, ತೊಂದರೆ; ಬೀತುದು: ಇಳಿ, ಕಡಿಮೆಯಾಗು; ಮನ: ಮನಸ್ಸು; ಜೊಂಪು: ಮರೆವು; ಇಳಿ: ಕಡಿಮೆಯಾಗು; ಛಡಾಳಿಸು: ಹೆಚ್ಚಾಗು, ಅಧಿಕವಾಗು; ಡಾವರ: ಉರಿ, ಕ್ಷೋಭೆ; ಡೊಳ್ಳಾಸ: ಮೋಸ, ಕಪಟ; ಬೇಳುವೆ: ಮೈಮರೆವು, ಮೂರ್ಖತನ; ರಣ: ಯುದ್ಧ; ಬಿಗುಹು: ಬಿಗಿ;ಅಡಗು: ಅವಿತುಕೊಳ್ಳು, ಮರೆಯಾಗು; ಅನಿಬರು: ಅಷ್ಟುಜನ; ತವತವಗೆ: ತಮ್ಮತಮ್ಮಲ್ಲಿ; ನಾಚು: ಅವಮಾನ ಹೊಂದು; ಕೋಳಾಹಳ: ಗದ್ದಲ; ಪವನಜ: ಭೀಮ;

ಪದವಿಂಗಡಣೆ:
ಅವಧರಿಸು+ ಧೃತರಾಷ್ಟ್ರ+ನೃಪ +ನಿ
ನ್ನವಗೆ+ ತಿಳಿದುದು +ಸೊಕ್ಕು +ಚಿತ್ತದ
ಬವಣಿ+ ಬೀತುದು +ಮನದ +ಜೊಂಪಿಳಿದುದು +ಛಡಾಳಿಸಿದ
ಡವರಿಸಿದ+ ಡೊಳ್ಳಾಸ +ರಣಬೇ
ಳುವೆಯ +ಬಿಗುಹ್+ ಅಡಗಿದವೊಲ್+ಅನಿಬರು
ತವತವಗೆ+ ನಾಚಿದರು +ಕೋಳಾಹಳಕೆ +ಪವನಜನ

ಅಚ್ಚರಿ:
(೧) ಕೌರವನ ಸ್ಥಿತಿ: ತಿಳಿದುದು ಸೊಕ್ಕು, ಬವಣೆ ಬೀತುದು, ಮನದ ಜೊಂಪಿಳಿದುದು

ಪದ್ಯ ೧೭: ಅಶ್ವತ್ಥಾಮನು ಅರ್ಜುನನ ಮೇಲಿನ ಬಾಣ ಪ್ರಯೋಗ ಹೇಗಿತ್ತು?

ಖೂಳ ತೆಗೆ ಹೆರಸಾರು ಠಕ್ಕಿನ
ಠೌಳಿಯಾಟವೆ ಕದನ ಕುಟಿಲದ
ಬೇಳುವೆಯ ಡೊಳ್ಳಾಸ ಮದ್ದಿನ ಮಾಯೆ ನಮ್ಮೊಡನೆ
ಆಳುತನವುಳ್ಳೊಡೆ ಮಹಾಸ್ತ್ರದ
ಜಾಳಿಗೆಯನುಗಿಯೆನುತ ಪಾರ್ಥನ
ಕೋಲುಗಳ ನೆರೆ ತರಿದು ತೀವಿದನಂಬಿನಲಿ ನಭವ (ಕರ್ಣ ಪರ್ವ, ೧೪ ಸಂಧಿ, ೧೭ ಪದ್ಯ)

ತಾತ್ಪರ್ಯ:
ನೀಚ, ಆಚೆ ಸರಿ, ನಮ್ಮೊಡನೆ ಬಾಣಗಳ ಮೋಸದ ಮದ್ದನ್ನು ಅರಿಯುವೆಯಾ? ಈ ಬಾಣಗಳಿಂದೇನಾಗುವುದು, ಮಹಾಸ್ತ್ರಗಳಿದ್ದರೆ ಅದನ್ನು ಹೊರತೆಗೆ, ಎಂದು ಅಶ್ವತ್ಥಾಮನು ಅರ್ಜುನನ ಬಾಣಗಳನ್ನು ಕತ್ತರಿಸಿ ಬಾಣಗಳಿಂದ ಆಗಸವನ್ನು ಮುಚ್ಚಿದನು.

ಅರ್ಥ:
ಖೂಳ: ದುಷ್ಟ; ತೆಗೆ: ಈಚೆಗೆ ತರು, ಹೊರತರು; ಹೆರಸಾರು: ಹಿಂದಕ್ಕೆ ಸರಿ; ಠಕ್ಕು:ಮೋಸ; ಠೌಳಿ:ಮೋಸ, ವಂಚನೆ; ಕದನ: ಯುದ್ಧ; ಕುಟಿಲ: ಮೋಸ, ವಂಚನೆ; ಬೇಳು:ಸುಟ್ಟುಹಾಕು, ಮರುಳು; ಡೊಳ್ಳಾಸ: ಮೋಸ, ಕಪಟ; ಮದ್ದು: ಔಷಧ, ಉಪಾಯ; ಮಾಯೆ: ಮೋಸ, ಕಪಟ; ಆಳುತನ: ಸೈನಿಕ; ಮಹಾಸ್ತ್ರ: ಶ್ರೇಷ್ಠವಾದ ಆಯುಧ; ಜಾಳಿ: ಗುಂಪು; ಉಗಿ: ಹೊರಹಾಕು; ಕೋಲು: ಬಾಣ; ನೆರೆ: ಗುಂಪು; ತರಿ: ಸೀಳು; ತೀವು: ತುಂಬು; ಹೊರಸೂಸು; ಅಂಬು: ಬಾಣ; ನಭ: ಆಗಸ;

ಪದವಿಂಗಡಣೆ:
ಖೂಳ +ತೆಗೆ +ಹೆರಸಾರು +ಠಕ್ಕಿನ
ಠೌಳಿಯಾಟವೆ +ಕದನ +ಕುಟಿಲದ
ಬೇಳುವೆಯ +ಡೊಳ್ಳಾಸ +ಮದ್ದಿನ +ಮಾಯೆ +ನಮ್ಮೊಡನೆ
ಆಳುತನವುಳ್ಳೊಡೆ +ಮಹಾಸ್ತ್ರದ
ಜಾಳಿಗೆಯನ್+ಉಗಿಯೆನುತ +ಪಾರ್ಥನ
ಕೋಲುಗಳ +ನೆರೆ +ತರಿದು +ತೀವಿದನ್+ಅಂಬಿನಲಿ +ನಭವ

ಅಚ್ಚರಿ:
(೧) ಠಕ್ಕಿನ, ಠೌಳಿ, ಕುಟಿಲ, ಮಾಯೆ, ಡೊಳ್ಳಾಸ – ಮೋಸ ಎಂಬ ಅರ್ಥವನ್ನು ಸೂಚಿಸುವ ಪದ