ಪದ್ಯ ೬೧: ಅರ್ಜುನನ ಬಾಣಗಳು ಕೌರವರ ಮೇಲೆ ಯಾವ ಪರಿಣಾಮ ಬೀರಿದವು?

ಘಾಯವಡೆದರು ಸುರಿವ ಸರಳಿಗೆ
ನಾಯಕರು ಮರಳಿದರು ಪೌರುಷ
ಮಾಯವಾಯಿತು ತನು ನಡುಗಿತಡಿಗಡಿಗೆ ಡೆಂಡಣಿಸಿ
ಕಾಯಗಟ್ಟಿತು ಭೀತಿ ಬಿರುದಿನ
ಬಾಯೆಣಿಕೆ ಬಯಲಾಯ್ತು ಜೀವದ
ಬೀಯಕಿವರಂಜಿದರು ನೆನೆದರು ಮನೆಯ ರಾಣಿಯರ (ಭೀಷ್ಮ ಪರ್ವ, ೮ ಸಂಧಿ, ೬೧ ಪದ್ಯ)

ತಾತ್ಪರ್ಯ:
ಕೌರವ ವೀರರು ಸುರಿಯುವ ಬಾಣಗಳಿಂದ ಗಾಯಗೊಂಡು ಹಿಂದಕ್ಕೆ ಹೋದರು. ಅವರ ಪೌರುಷ ಮಾಯವಾಯಿತು. ಅವರ ದೇಹಗಳು ನಡುಗಿದವು. ಹೆಜ್ಜೆ ಹೆಜ್ಜೆಗೂ ಅವರು ಆಚೆ ಈಚೆ ಬಾಗಿದರು. ಅವರ ಮೈ ಜಡವಾಯಿತು. ಭೀತಿ ಗಟ್ಟಿಯಾಯಿತು. ಅವರ ಕೀರ್ತಿದಾಹ ಬಯಲಾಯಿತು. ಪ್ರಾಣ ಹೋಗುವುದೆಂದು ಭೀತಿಗೊಂಡರು. ಮನೆಯಲ್ಲಿದ್ದ ತಮ್ಮ ರಾಣಿಯರನ್ನು ನೆನೆದರು.

ಅರ್ಥ:
ಘಾಯ: ಪೆಟ್ಟು; ಸುರಿ: ಮೇಲಿನಿಂದ ಬೀಳು, ವರ್ಷಿಸು; ಸರಳು: ಬಾಣ; ನಾಯಕ: ಒಡೆಯ; ಮರಳು: ಹಿಂದಿರುಗು; ಪೌರುಷ: ಪರಾಕ್ರಮ; ಮಾಯ: ಕಾಣದಾಗುವಿಕೆ; ತನು: ದೇಹ; ನಡುಗು: ಅಲುಗಾಡು; ಅಡಿಗಡಿಗೆ: ಹೆಜ್ಜೆ ಹೆಜ್ಜೆಗೂ; ಡೆಂಡಣಿಸು: ಕಂಪಿಸು; ಕಾಯ: ದೇಹ; ಕಟ್ಟು: ಬಂಧಿಸು; ಭೀತಿ: ಭಯ; ಬಿರುದು: ಗೌರವ ಸೂಚಕ ಪದ; ಬಾಯೆಣಿಕೆ: ದಾಹ; ಬಯಲು: ಶೂನ್ಯ, ವ್ಯರ್ಥ; ಜೀವ: ಪ್ರಾಣ; ಬೀಯ: ನಷ್ಟ; ಅಂಜು: ಹೆದರು; ನೆನೆ: ಜ್ಞಾಪಿಸಿಕೊಳ್ಳು; ಮನೆ: ಆಲಯ; ರಾಣಿ: ಅರಸಿ;

ಪದವಿಂಗಡಣೆ:
ಘಾಯವಡೆದರು +ಸುರಿವ +ಸರಳಿಗೆ
ನಾಯಕರು +ಮರಳಿದರು +ಪೌರುಷ
ಮಾಯವಾಯಿತು +ತನು +ನಡುಗಿತ್+ಅಡಿಗಡಿಗೆ +ಡೆಂಡಣಿಸಿ
ಕಾಯಗಟ್ಟಿತು +ಭೀತಿ +ಬಿರುದಿನ
ಬಾಯೆಣಿಕೆ +ಬಯಲಾಯ್ತು +ಜೀವದ
ಬೀಯಕ್+ಇವರ್+ಅಂಜಿದರು +ನೆನೆದರು +ಮನೆಯ +ರಾಣಿಯರ

ಅಚ್ಚರಿ:
(೧) ಬ ಕಾರದ ಸಾಲು ಪದಗಳು – ಭೀತಿ ಬಿರುದಿನ ಬಾಯೆಣಿಕೆ ಬಯಲಾಯ್ತು

ಪದ್ಯ ೯: ಉತ್ತರನು ಹೇಗೆ ಭಯಭೀತನಾದನು?

ಸಾರಿ ಬರಬರಲವನ ತನುಮಿಗೆ
ಭಾರಿಸಿತು ಮೈಮುರಿದು ರೋಮನ್ವಿ
ಕಾರ ಘನ ಕಾಹೇರಿತವಯವ ನಡುಗಿ ಡೆಂಡಣಿಸಿ
ಭೂರಿಭಯ ತಾಪದಲಿ ತಾಳಿಗೆ
ನೀರುದೆಗೆದುದು ತುಟಿಯೊಣಗಿ ಸುಕು
ಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ (ವಿರಾಟ ಪರ್ವ, ೭ ಸಂಧಿ, ೯ ಪದ್ಯ)

ತಾತ್ಪರ್ಯ:
ರಥವು ಮುಂದಕ್ಕೆ ಹೋಗುತ್ತಲೇ ಇತ್ತು, ಉತ್ತರನ ಮೈ ಜಡವಾಯಿತು, ಮೈ ಕುಗ್ಗಿತು, ಭಯದಿಂದ ಕೂದಲು ನೆಟ್ಟಗಾದವು, ಮೈ ಬಿಸಿಯಾಯಿತು, ಅವಯವಗಳು ನಡುಗಿದವು. ಭಯದ ಹೆಚ್ಚಳದಿಂದ ಅಂಗುಳು, ತುಟಿ ಒಣಗಿದವು. ಕಣ್ಣಿನ ರೆಪ್ಪೆ ಸೀದು ಹೋಯಿತು ಸುಕುಮಾರ ಉತ್ತರನು ಕೈಗಳಿಂದ ಮುಖವನ್ನು ಮುಚ್ಚಿಕೊಂಡನು.

ಅರ್ಥ:
ಸಾರಿ: ಬಾರಿ, ಸರತಿ; ಬರಲು: ಆಗಮಿಸಲು; ತನು: ದೇಹ; ಭಾರಿಸು: ಅಪ್ಪಳಿಸು; ಮೈ: ತನು, ದೇಹ; ರೋಮ: ಕೂದಲು; ವಿಕಾರ: ಬದಲಾವಣೆ; ಘನ: ಗಟ್ಟಿ, ಭಾರ; ಕಾಹೇರು: ಉದ್ವೇಗಗೊಳ್ಳು; ಅವಯವ: ದೇಹದ ಅಂಗ; ನಡುಗು: ಕಂಪಿಸು; ಡೆಂಡಣಿಸು: ಕಂಪಿಸು, ಕೊರಗು; ಭೂರಿ:ಹೆಚ್ಚು, ಅಧಿಕ; ಭಯ: ಹೆದರಿಕೆ; ತಾಪ: ಕಾವು; ತಾಳಿಗೆ: ಗಂಟಲು; ನೀರು: ಜಲ; ತುಟಿ: ಅಧರ; ಸುಕುಮಾರ: ಪುತ್ರ; ಎವೆ: ಕಣ್ಣಿನ ರೆಪ್ಪೆ; ಸೀಯು: ಕರಕಲಾಗು; ಕರ: ಹಸ್ತ; ಮುಚ್ಚು: ಮರೆಮಾಡು; ಮುಖ: ಆನನ;

ಪದವಿಂಗಡಣೆ:
ಸಾರಿ +ಬರಬರಲ್+ಅವನ +ತನುಮಿಗೆ
ಭಾರಿಸಿತು+ ಮೈಮುರಿದು+ ರೋಮ+ವಿ
ಕಾರ +ಘನ +ಕಾಹೇರಿತ್+ಅವಯವ +ನಡುಗಿ +ಡೆಂಡಣಿಸಿ
ಭೂರಿಭಯ +ತಾಪದಲಿ +ತಾಳಿಗೆ
ನೀರುದೆಗೆದುದು +ತುಟಿ+ಒಣಗಿ+ ಸುಕು
ಮಾರ +ಕಣ್ಣೆವೆ +ಸೀಯೆ +ಕರದಲಿ+ ಮುಚ್ಚಿದನು +ಮುಖವ

ಅಚ್ಚರಿ:
(೧) ಉತ್ತರನ ಭೀತಿಯನ್ನು ವರ್ಣಿಸುವ ಪರಿ – ಭೂರಿಭಯ ತಾಪದಲಿ ತಾಳಿಗೆನೀರುದೆಗೆದುದು ತುಟಿಯೊಣಗಿ ಸುಕುಮಾರ ಕಣ್ಣೆವೆ ಸೀಯೆ ಕರದಲಿ ಮುಚ್ಚಿದನು ಮುಖವ

ಪದ್ಯ ೯೧: ಕೀಚಕನು ಮತ್ತೆ ಹೇಗೆ ಭೀಮನ ಮೇಲೆ ಎರಗಿದನು?

ಅರಿಯ ಮುಷ್ಟಿಯ ಗಾಯದಲಿ ತಲೆ
ಬಿರಿಯೆ ತನು ಡೆಂಡಣಿಸಿ ಕಂಗಳು
ತಿರುಗಿ ಜೋಲಿದು ಮೆಲ್ಲಮೆಲ್ಲನೆಯಸುವ ಪಸರಿಸುತ
ಕೆರಳಿ ಕರಿ ಕೇಸರಿಯ ಹೊಯ್ದರೆ
ತಿರುಗುವಂತಿರೆ ಭೀಮಸೇನನ
ಬರಿಯ ತಿವಿದನು ಬೀಳೆನುತ ಖಳರಾಯ ಹಲುಮೊರೆದ (ವಿರಾಟ ಪರ್ವ, ೩ ಸಂಧಿ, ೯೧ ಪದ್ಯ)

ತಾತ್ಪರ್ಯ:
ಶತ್ರುವಿನ ಮುಷ್ಟಿಯ ಪೆಟ್ಟಿಗೆ ಕೀಚಕನ ತಲೆ ಬಿರಿಯಿತು, ಅವನ ದೇಹ ತರತರನೆ ನಡುಗಿತು, ಕಣ್ಣುಗಳು ತಿರುಗಿ ಅಲ್ಲಾಡುತ್ತಿದ್ದವು, ಆದರೂ ಕಿಚಕನು ನಿಧಾನವಾಗಿ ಶಕ್ತಿಯನ್ನು ತಂದುಕೊಂಡು, ಆನೆಯು ಸಿಂಹವನ್ನು ಹೊಡೆಯಲೆತ್ನಿಸುವ ಪರಿ ಹಲ್ಲುಕಡಿದ್ಯ್ ಬೀಳು ಎಂದು ಕೂಗುತ್ತಾ ಭೀಮನನ್ನು ತಿವಿದನು.

ಅರ್ಥ:
ಅರಿ: ವೈರಿ; ಮುಷ್ಟಿ: ಮುಚ್ಚಿದ ಅಂಗೈ; ಗಾಯ: ಪೆಟ್ಟು; ತಲೆ: ಶಿರ; ಬಿರಿ: ಬಿರುಕು, ಸೀಳು; ತನು: ದೇಹ; ಡೆಂಡಣಿಸು: ಕಂಪಿಸು; ಕಂಗಳು: ನಯನ; ತಿರುಗು: ವೃತ್ತಾಕಾರವಾಗಿ ಚಲಿಸು, ಸುತ್ತು; ಜೋಲು: ಅಲ್ಲಾಡು; ಮೆಲ್ಲನೆ: ನಿಧಾನ; ಅಸು: ಪ್ರಾಣ; ಪಸರಿಸು: ಹರಡು; ಕೆರಳು: ಕೆದರು, ಹರಡು; ಕರಿ: ಆನೆ; ಕೇಸರಿ: ಸಿಂಹ; ಹೊಯ್ದು: ಹೊಡೆ; ತಿರುಗು: ದಿಕ್ಕನ್ನು ಬದಲಾಯಿಸು; ಬರಿ:ಪಕ್ಕ, ಬದಿ; ತಿವಿ: ಚುಚು; ಬೀಳು: ಕೆಳಕ್ಕೆ – ಕೆಡೆ; ಖಳ: ದುಷ್ಟ; ರಾಯ: ರಾಜ; ಹಲುಮೊರೆ: ಹಲ್ಲನ್ನು ಕಡಿದು;

ಪದವಿಂಗಡಣೆ:
ಅರಿಯ +ಮುಷ್ಟಿಯ +ಗಾಯದಲಿ +ತಲೆ
ಬಿರಿಯೆ +ತನು +ಡೆಂಡಣಿಸಿ+ ಕಂಗಳು
ತಿರುಗಿ +ಜೋಲಿದು +ಮೆಲ್ಲಮೆಲ್ಲನೆ+ಅಸುವ +ಪಸರಿಸುತ
ಕೆರಳಿ+ ಕರಿ+ ಕೇಸರಿಯ +ಹೊಯ್ದರೆ
ತಿರುಗುವಂತಿರೆ+ ಭೀಮಸೇನನ
ಬರಿಯ +ತಿವಿದನು +ಬೀಳೆನುತ+ ಖಳರಾಯ +ಹಲುಮೊರೆದ

ಅಚ್ಚರಿ:
(೧) ಅರಿ, ಖಳರಾಯ – ಕೀಚಕನನ್ನು ಕರೆದ ಪರಿ
(೨) ಉಪಮಾನದ ಪ್ರಯೋಗ – ಕೆರಳಿ ಕರಿ ಕೇಸರಿಯ ಹೊಯ್ದರೆ ತಿರುಗುವಂತಿರೆ

ಪದ್ಯ ೧೪: ಸೈರಂಧ್ರಿಯು ಎಲ್ಲಿಗೆ ಧಾವಿಸಿದಳು?

ಕರವನೊಡೆ ಮುರುಚಿದಳು ಬಟ್ಟಲ
ಧರೆಯೊಳೀಡಾಡಿದಳು ಸತಿ ಮೊಗ
ದಿರುಹಿ ಬಾಗಿಲ ದಾಂಟಿ ಭಯದಲಿ ನಡುಗಿ ಡೆಂಡಣಿಸಿ
ತರಳೆ ಹಾಯ್ದುಳು ಮೊಲೆಯ ಜಘನದ
ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು ಸಭೆಗೆ (ವಿರಾಟ ಪರ್ವ, ೩ ಸಂಧಿ, ೧೪ ಪದ್ಯ)

ತಾತ್ಪರ್ಯ:
ಕೀಚಕನು ಹಿಡಿದ ಕೈಯನ್ನು ಹಿಂದಕ್ಕೆ ಸೆಳೆದು ಆತನ ಹಿಡಿತದಿಂದ ತಪ್ಪಿಸಿಕೊಂಡು, ಮಧುವಿನ ಪಾತ್ರೆಯನ್ನು ಅಲ್ಲೇ ಬಿಸಾಡಿ ಹಿಂದಕ್ಕೆ ತಿರುಗಿ ದ್ರೌಪದಿಯು ಅವನ ಮನೆಯ ಬಾಗಿಲನ್ನು ದಾಟಿ ಭಯದಿಮ್ದ ನದುಗಿ ಕಂಪಿಸುತ್ತಾ ಓಡಿ ಹೋದಳು. ಆಕೆಯ ಎದೆ, ನಿತಂಬಗಳ ಭಾರದಿಂದ ಅವಳ ತೆಳುವಾದ ನಡು ಮುರಿದು ಹೋಗದೇ ಎನ್ನಿಸುವಂತೆ ಅತಿವೇಗದಿಮ್ದ ವಿರಾಟನ ಸಭೆಗೆ ಬಂದಳು.

ಅರ್ಥ:
ಕರ: ಕೈ; ಒಡೆ: ಕೂಡಲೆ; ಮುರುಚು: ಹಿಂತಿರುಗಿಸು; ಬಟ್ಟಲು: ಪಾತ್ರೆ; ಧರೆ: ಭೂಮಿ; ಈಡಾಡು: ಕಿತ್ತು, ಒಗೆ, ಚೆಲ್ಲು; ಸತಿ: ಹೆಂಡತಿ; ಮೊಗ: ಮುಖ; ತಿರುಹಿ: ಹಿಂದೆಮಾದಿ ಬಾಗಿಲು: ಕದ; ದಾಂಟು: ದಾಟಿ; ಭಯ: ಅಂಜಿಕೆ; ನಡುಗು: ಕಂಪನ; ಡೆಂಡಣ: ಕಂಪಿಸು;ತರಳೆ: ಹೆಣ್ಣು; ಹಾಯ್ದು: ಮೇಲೆಬೀಳು, ಚಾಚು; ಮೊಲೆ: ಸ್ತನ; ಜಘನ:ನಿತಂಬ; ಭರ: ಹೊರೆ, ಭಾರ; ಬಡ: ತೆಳ್ಳಾಗಿರುವು; ನಡು: ಮಧ್ಯಭಾಗ; ಮುರಿ: ಸೀಳು; ವರ: ಶ್ರೇಷ್ಠ; ಸಭೆ: ದರ್ಬಾರು; ರಭಸ: ವೇಗ; ಓಡು: ಧಾವಿಸು; ಸಭಾಗ್ಯತೆ: ಒಳ್ಳೆಯ ಅದೃಷ್ಟ;

ಪದವಿಂಗಡಣೆ:
ಕರವನ್+ಒಡೆ +ಮುರುಚಿದಳು +ಬಟ್ಟಲ
ಧರೆಯೊಳ್+ಈಡಾಡಿದಳು +ಸತಿ +ಮೊಗ
ದಿರುಹಿ+ ಬಾಗಿಲ+ ದಾಂಟಿ +ಭಯದಲಿ +ನಡುಗಿ+ ಡೆಂಡಣಿಸಿ
ತರಳೆ+ ಹಾಯ್ದುಳು +ಮೊಲೆಯ +ಜಘನದ
ಭರದಿ+ ಬಡನಡು +ಮುರಿಯದಿಹುದೇ
ವರ +ಸಭಾಗ್ಯತೆಗ್+ಎನಲು +ರಭಸದೊಳ್+ಓಡಿದಳು +ಸಭೆಗೆ

ಅಚ್ಚರಿ:
(೧) ಓಟದ ವರ್ಣನೆ – ತರಳೆ ಹಾಯ್ದುಳು ಮೊಲೆಯ ಜಘನದ ಭರದಿ ಬಡನಡು ಮುರಿಯದಿಹುದೇ
ವರ ಸಭಾಗ್ಯತೆಗೆನಲು ರಭಸದೊಳೋಡಿದಳು

ಪದ್ಯ ೩೯: ಭೀಮನು ಹನುಮನ ರೂಪವನ್ನು ನೋಡಿ ಹೇಗೆ ಪ್ರತಿಕ್ರಯಿಸಿದನು?

ನೋಡಿದನು ನಡುಗಿದನು ಕಂಗಳ
ಕೋಡಿಯಲಿ ನೀರೊರೆಯೆ ಹರುಷದ
ಝಾಡಿಯಲಿ ಜೊಮ್ಮೆದ್ದು ಮನ ಡೆಂಡಣಿಸಿ ಭೀತಿಯಲಿ
ಬಾಡುಮೋರೆಯನೆತ್ತಿ ಕೈಗಳ
ನೀಡಿ ಕಂಗಳ ಮುಚ್ಚಿ ಮರಳಿದು
ನೋಡಿ ಶಿವ ಶಿವಯೆನುತ ಬೆಚ್ಚಿದನಂದು ಕಲಿಭೀಮ (ಅರಣ್ಯ ಪರ್ವ, ೧೧ ಸಂಧಿ, ೩೯ ಪದ್ಯ)

ತಾತ್ಪರ್ಯ:
ಭೀಮನು ಹನುಮನ ಆ ದಿವ್ಯರೂಪವನ್ನು ನೋಡಿ ನಡುಗಿದನು. ಅವನ ಕಣ್ಣುಗಳಿಂದ ನೀರು ಹರಿಯಲಾರಂಭಿಸಿತು. ಸಂತೋಷದಿಂದ ಭೀಮನು ಉಬ್ಬಿದನು. ಭಯದಿಂದ ನಡುಗಿದನು. ಅವನು ತನ್ನ ಬಾಡಿದ ಮುಖವನ್ನೆತ್ತಿ ಆ ದಿವ್ಯ ರೂಪವನ್ನು ನೋಡಿ ಕೈಗಳನ್ನು ನೀಡಿ ಕಣ್ಣು ಮುಚ್ಚಿಕೊಂಡನು, ಮತ್ತೆ ತನ್ನ ಕಣ್ಣುಗಳನ್ನು ತೆರೆದು ಹನುವಮ ದೈತ್ಯಾಕಾರದ ರೂಪವನ್ನು ನೋಡಿ ಬೆಚ್ಚುಬಿದ್ದು ಶಿವ ಶಿವಾ ಎಂದನು.

ಅರ್ಥ:
ನೋಡು: ವೀಕ್ಷಿಸು; ನಡುಗು: ಕಂಪನ, ನಡುಕ; ಕಂಗಳು: ಕಣ್ಣು; ಕೋಡಿ: ಪ್ರವಾಹ; ನೀರು: ಜಲ; ಉರೆ: ಅತಿಶಯವಾಗಿ; ಹರುಷ: ಸಂತಸ; ಝಾಡಿ: ಕಾಂತಿ; ಜೊಮ್ಮು: ಸಂತೋಷದಿಂದ ಮೈಮರೆಯುವಿಕೆ; ಮನ: ಮನಸ್ಸು; ಡೆಂಡಣಿಸು: ಕಂಪಿಸು; ಭೀತಿ: ಭಯ; ಬಾಡು: ಕಳೆಗುಂದು, ಮಂಕಾಗು; ಮೊರೆ: ಮುಖ; ಎತ್ತು: ಮೇಲಕ್ಕೆ ತರು; ಕೈ: ಹಸ್ತ; ಕಂಗಳು: ಕಣ್ಣು; ಮುಚ್ಚು: ಮರೆಮಾಡು; ಮರಳು: ಮತ್ತೆ; ನೋಡು: ವೀಕ್ಷಿಸು; ಬೆಚ್ಚು: ಭಯ, ಹೆದರಿಕೆ; ಕಲಿ: ಶೂರ;

ಪದವಿಂಗಡಣೆ:
ನೋಡಿದನು +ನಡುಗಿದನು +ಕಂಗಳ
ಕೋಡಿಯಲಿ +ನೀರೊರೆಯೆ +ಹರುಷದ
ಝಾಡಿಯಲಿ +ಜೊಮ್ಮೆದ್ದು +ಮನ +ಡೆಂಡಣಿಸಿ+ ಭೀತಿಯಲಿ
ಬಾಡುಮೋರೆಯನೆತ್ತಿ+ ಕೈಗಳ
ನೀಡಿ+ ಕಂಗಳ+ ಮುಚ್ಚಿ +ಮರಳಿದು
ನೋಡಿ+ ಶಿವ+ ಶಿವಯೆನುತ+ ಬೆಚ್ಚಿದನ್+ಅಂದು +ಕಲಿಭೀಮ

ಅಚ್ಚರಿ:
(೧) ಭೀಮನ ಭಾವವನ್ನು ಚಿತ್ರಿಸುವ ಪರಿ – ನೋಡಿದನು ನಡುಗಿದನು ಕಂಗಳ ಕೋಡಿಯಲಿ ನೀರೊರೆಯೆ ಹರುಷದ ಝಾಡಿಯಲಿ ಜೊಮ್ಮೆದ್ದು ಮನ ಡೆಂಡಣಿಸಿ ಭೀತಿಯಲಿ

ಪದ್ಯ ೩೩: ಕಿಮ್ಮೀರನ ಅಂತ್ಯ ಹೇಗಾಯಿತು?

ಡೆಂಡಣಿಸಿ ಸುರವೈರಿ ಧೊಪ್ಪನೆ
ದಿಂಡುಗೆಡೆದನು ನೀಲಶೈಲದ
ದಂಡಿಗಾರನ ದೇಹಗರ್ತದ ರಕ್ತ ನಿರ್ಝರದ
ದೊಂಡೆಗರುಳಿನ ಬಾಯ ಜೋಲಿನ
ಕುಂಡಲಿತ ಕರ ಜಂಘೆಗಳ ಬಿಡು
ಮಂಡೆಗೆದರಿದ ಖಳನ ಕಂಡುದು ಭೂಸುರವ್ರಾತ (ಅರಣ್ಯ ಪರ್ವ, ೧ ಸಂಧಿ, ೩೩ ಪದ್ಯ)

ತಾತ್ಪರ್ಯ:
ಭೀಮನ ಹೊಡೆತದ ಭಾರಕ್ಕೆ ಕಿಮ್ಮೀರನು ನಡುನಡುಗಿ ಧೊಪ್ಪನೆ ಉರುಳಿ ನೆಲಕ್ಕೆ ಬಿದ್ದನು. ನೀಲಾಚಲದ ಪ್ರತಿಸ್ಪರ್ಧಿಯಂತೆ ಕಾಣುತ್ತಿದ್ದ ಅವನ ದೇಹದೊಳಗಿನಿಂದ ರಕ್ತವು ಝರಿಯಾಗಿ ಹೊರಹೊಮ್ಮಿತು. ಅವನ ಕರುಳುಗಳು ಹೊರಬಂದು ಸಿಕ್ಕುಗಟ್ಟಿಬಿದ್ದವು. ಬಾಯ್ತೆರೆದು ನಾಲಿಗೆ ಹೊರಬಂದಿತು, ಅವನ ಕೈಕಾಲುಗಳು ಮಡಿಚಿ ಸುತ್ತು ಹಾಕಿದ್ದವು. ಅದನ್ನು ಪಾಂಡವ ಪರಿವಾರದವರು ಬ್ರಾಹ್ಮಣರು ನೋಡಿದರು.

ಅರ್ಥ:
ಡೆಂಡಣಿಸು: ಕಂಪಿಸು, ಕೊರಗು; ಸುರವೈರಿ: ರಾಕ್ಷಸ; ಸುರ: ದೇವತೆ; ವೈರಿ: ಶತ್ರು; ಧೊಪ್ಪನೆ: ಒಮ್ಮೆಲೆ; ದಿಂಡುಗೆಡು: ಉರುಳು; ಶೈಲ: ಬೆಟ್ಟ; ದಂಡಿಗಾರ: ಸೆಣಸುವವ; ದೇಹ: ತನು; ಗರ್ತ: ಕುಳಿ; ರಕ್ತ: ನೆತ್ತರು; ನಿರ್ಝರ:ಅಬ್ಬಿ, ಝರಿ; ದೊಂಡೆ: ಸಿಕ್ಕುಸಿಕ್ಕಾಗಿರುವುದು; ಕರುಳು: ಪಚನಾಂಗ; ಬಾಯಿ: ತಿನ್ನಲು ಬಳಸುವ ಮುಖದ ಅಂಗ; ಜೋಲು: ಇಳಿಬೀಳು; ಕುಂಡಲಿತ:ದುಂಡಾದ; ಕರ: ಕೈ; ಜಂಘೆ: ತೊಡೆಯ ಕೆಳಭಾಗ; ಬಿಡು: ಬಿಚ್ಚಿದ; ಮಂಡೆ: ತಲೆ; ಕೆದರು: ಹರಡು; ಖಳ: ದುಷ್ಟ; ಕಂಡು: ನೋಡು; ಭೂಸುರ: ಬ್ರಾಹ್ಮಣ; ವ್ರಾತ: ಗುಂಪು;

ಪದವಿಂಗಡಣೆ:
ಡೆಂಡಣಿಸಿ +ಸುರವೈರಿ+ ಧೊಪ್ಪನೆ
ದಿಂಡುಗೆಡೆದನು+ ನೀಲ+ಶೈಲದ
ದಂಡಿಗಾರನ +ದೇಹ+ಗರ್ತದ +ರಕ್ತ +ನಿರ್ಝರದ
ದೊಂಡೆ+ಕರುಳಿನ +ಬಾಯ +ಜೋಲಿನ
ಕುಂಡಲಿತ+ ಕರ+ ಜಂಘೆಗಳ+ ಬಿಡು
ಮಂಡೆ+ಕೆದರಿದ +ಖಳನ +ಕಂಡುದು +ಭೂಸುರವ್ರಾತ

ಅಚ್ಚರಿ:
(೧) ಉಪಮಾನದ ಪ್ರಯೋಗ – ನೀಲಶೈಲದ ದಂಡಿಗಾರನ
(೨) ಕಿಮ್ಮೀರನ ದೇಹದ ಸ್ಥಿತಿಯನ್ನು ಹೇಳುವ ಪರಿ – ದೊಂಡೆಗರುಳಿನ ಬಾಯ ಜೋಲಿನ
ಕುಂಡಲಿತ ಕರ ಜಂಘೆಗಳ ಬಿಡುಮಂಡೆಗೆದರಿದ ಖಳನ