ಪದ್ಯ ೪೯: ಶಲ್ಯ ಅರ್ಜುನರ ಬಾಣದ ಕೈಚಳಕೆ ಹೇಗಿತ್ತು?

ಎಸುವನರ್ಜುನನರ್ಜುನಾಸ್ತ್ರವ
ಕುಸುರಿದರಿವನು ಶಲ್ಯ ಶಲ್ಯನ
ವಿಶಿಖವನು ಮುರಿವನು ಧನಂಜಯನಾ ಧನಂಜಯನ
ಮಸಕವನು ಮಾದ್ರೇಶನುರೆ ಝೋಂ
ಪಿಸುವನಾ ಮಾದ್ರೇಶನಂಬಿನ
ಹಸರವನು ಹರೆಗಡಿವನರ್ಜುನನಗಣಿತಾಸ್ತ್ರದಲಿ (ಶಲ್ಯ ಪರ್ವ, ೨ ಸಂಧಿ, ೪೯ ಪದ್ಯ)

ತಾತ್ಪರ್ಯ:
ಅರ್ಜುನನು ಬಾಣವನ್ನು ಬಿಟ್ಟರೆ ಶಲ್ಯನು ಅದನ್ನು ಕೊಚ್ಚಿಹಾಕಿದನು. ಶಲ್ಯನ ಶರಗಳನ್ನು ಅರ್ಜುನನು ತುಂಡುಮಾಡುವನು. ಅರ್ಜುನನ ಹುಮ್ಮಸ್ಸನ್ನು ಶಲ್ಯನು ಮಲಗಿಸಿಬಿಡುವನು. ಲೆಕ್ಕವಿಲ್ಲದಷ್ಟು ಬಾಣಗಳಿಂದ ಶಲ್ಯನ ಬಾಣಗಳ ವಿಸ್ತಾರವನ್ನು ಅರ್ಜುನನು ಕಡಿದುಹಾಕುವನು.

ಅರ್ಥ:
ಎಸು: ಬಾಣ ಪ್ರಯೋಗ ಮಾಡು; ಅಸ್ತ್ರ: ಶಸ್ತ್ರ; ಕುಸುರು: ತುಂಡು; ಅರಿ: ಸೀಳು; ವಿಶಿಖ: ಬಾಣ, ಅಂಬು; ಮುರಿ: ಸೀಳು; ಮಸಕ: ರಭಸ, ವೇಗ; ಉರೆ: ಹೆಚ್ಚು, ಅಧಿಕ; ಝೋಂಪಿಸು: ಭಯಗೊಳ್ಳು; ಅಂಬು: ಬಾಣ; ಮಾದ್ರೇಶ: ಶಲ್ಯ; ಹಸರ: ಹರಡುವಿಕೆ, ವ್ಯಾಪ್ತಿ; ಹರೆ: ಚದುರಿಸು; ಅಗಣಿತ: ಲೆಕ್ಕವಿಲ್ಲದ

ಪದವಿಂಗಡಣೆ:
ಎಸುವನ್+ಅರ್ಜುನನ್+ಅರ್ಜುನ+ಅಸ್ತ್ರವ
ಕುಸುರಿದ್+ಅರಿವನು+ ಶಲ್ಯ+ ಶಲ್ಯನ
ವಿಶಿಖವನು +ಮುರಿವನು+ ಧನಂಜಯನಾ +ಧನಂಜಯನ
ಮಸಕವನು+ ಮಾದ್ರೇಶನ್+ಉರೆ +ಝೋಂ
ಪಿಸುವನ್+ಆ +ಮಾದ್ರೇಶನ್+ಅಂಬಿನ
ಹಸರವನು +ಹರೆ +ಕಡಿವನ್+ಅರ್ಜುನನ್+ಅಗಣಿತ+ಅಸ್ತ್ರದಲಿ

ಅಚ್ಚರಿ:
(೧) ಅರ್ಜುನ, ಶಲ್ಯ, ಧನಂಜಯ – ಪದದ ಬಳಕೆ ೧-೩ ಸಾಲಿನ ಜೋಡಿ ಪದಗಳು
(೨) ವಿಶಿಖ, ಅಂಬು – ಸಮಾನಾರ್ಥಕ ಪದ

ಪದ್ಯ ೧: ದೈವದ ಲೀಲೆ ಹೇಗಿರುತ್ತದೆ?

ನಿಯತ ಮತಿ ಚಿತ್ತವಿಸು ಜನಮೇ
ಜಯ ಮಹೀಪತಿ ದೇವತಾ ಭ
ಕ್ತಿಯಲದೇನಾಶ್ಚರ್ಯವೋ ಶಿವ ಶಿವ ಮಹಾದೇವ
ಜಯ ಜಯೆಂದುದು ನಿಖಿಳಜನಝಾ
ಡಿಯಲಿ ಝೋಂಪಿಸಿ ಸೆಳ್ವ ಸೀರೆಗೆ
ಲಯವ ಕಾಣೆನು ಕರುಣವೆಂತುಟೊ ದೇವಕೀಸುತನ (ಸಭಾ ಪರ್ವ, ೧೬ ಸಂಧಿ, ೧ ಪದ್ಯ)

ತಾತ್ಪರ್ಯ:
ಜನಮೇಜಯ ಗಮನವಿಟ್ಟು ಕೇಳು, ಭಗವಂತನ ಭಕ್ತಿಯಿಂದ ಏನೇನು ಆಶ್ಚರ್ಯಗಳಾಗುವವೋ ಶಿವ ಶಿವಾ ಮಹಾದೇವ ಯಾರು ಬಲ್ಲರು? ದುಶ್ಯಾಸನನು ಸೀರೆಯನ್ನು ಸೆಳೆದರೆ ಅದು ಮುಗಿಯದೆ ಮತ್ತೊಂದು ಸೀರೆ ಅದರಿಂದ ಬರುತ್ತಿತ್ತು, ಅದು ಮುಗಿದರೆ ಮತ್ತೊಂದು ಹೀಗಾಗುವುದು ನಿಲ್ಲಲೇ ಇಲ್ಲ, ಇದನ್ನು ನೋಡಿದ ಎಲ್ಲಾ ಸಭಿಕರು ಜಯ ಜಯ ಎಂದು ಘೋಷಿಸಿದರು.

ಅರ್ಥ:
ನಿಯತ: ನಿಶ್ಚಿತವಾದುದು; ಮತಿ: ಬುದ್ಧಿ; ಚಿತ್ತವಿಸು: ಗಮನವಿಟ್ಟು ಕೇಳು; ಮಹೀಪತಿ: ರಾಜ; ದೇವ: ಭಗವಂತ; ಭಕ್ತಿ: ಗುರುಹಿರಿಯರಲ್ಲಿ ತೋರುವ ನಿಷ್ಠೆ; ಆಶ್ಚರ್ಯ: ಅದ್ಭುತ, ವಿಸ್ಮಯ; ಜಯ: ಉಘೇ; ನಿಖಿಳ: ಎಲ್ಲಾ; ಜನ: ನರರು, ಸಮೂಹ; ಝಾಡಿ: ಕಾಂತಿ; ಝೋಂಪಿಸು: ಬೆಚ್ಚಿಬೀಳು; ಸೆಳೆ: ಎಳೆತ; ಸೀರೆ: ಬಟ್ಟೆ, ವಸ್ತ್ರ; ಲಯ: ಅಂತ್ಯ; ಕಾಣು: ತೋರು; ಕರುಣ: ದಯೆ; ಸುತ: ಪುತ್ರ;

ಪದವಿಂಗಡಣೆ:
ನಿಯತ +ಮತಿ +ಚಿತ್ತವಿಸು +ಜನಮೇ
ಜಯ +ಮಹೀಪತಿ+ ದೇವತಾ +ಭ
ಕ್ತಿಯಲ್+ಅದೇನ್+ಆಶ್ಚರ್ಯವೋ+ ಶಿವ+ ಶಿವ+ ಮಹಾದೇವ
ಜಯ +ಜಯೆಂದುದು +ನಿಖಿಳ+ಜನ+ಝಾ
ಡಿಯಲಿ +ಝೋಂಪಿಸಿ +ಸೆಳೆವ+ ಸೀರೆಗೆ
ಲಯವ +ಕಾಣೆನು +ಕರುಣವ್+ಎಂತುಟೊ+ ದೇವಕೀಸುತನ

ಅಚ್ಚರಿ:
(೧) ಆಶ್ಚರ್ಯವನ್ನು ಸೂಚಿಸುವ ಬಗೆ – ಶಿವ ಶಿವ ಮಹಾದೇವ
(೨) ಝಾಡಿ, ಝೋಂಪಿಸು – ಪದಗಳ ಬಳಕೆ

ಪದ್ಯ ೫: ಧರ್ಮಜನ ಸ್ಥಿತಿ ಹೇಗಿತ್ತು?

ಝೋಂಪಿಸುವ ಸಿರಿಮೊಗದ ನೋಟದ
ಸೊಂಪಡಗಿದಾಲಿಗಳ ಧೈರ್ಯದ
ಗುಂಪಳಿದ ನಿಜ ರಾಜತೇಜದ ವಿಪುಳ ವೇದನೆಯ
ಬಿಂಪಗಿವ ಬೇಸರಿನ ತುರುಗಿದ
ತಂಪಿನಗ್ಗಳಿಕೆಯ ವಿಘಾತಿಯ
ಝೋಂಪಿನಲಿ ಹುದುಗಿದ ಮಹೀಶನ ಕಂಡನಾ ಪಾರ್ಥ (ಕರ್ಣ ಪರ್ವ, ೧೬ ಸಂಧಿ, ೫ ಪದ್ಯ)

ತಾತ್ಪರ್ಯ:
ಧರ್ಮಜನ ಸಂಪದ್ಯುಕ್ತವಾದ ರಾಜಕಳೆಯ ಮುಖವು ಇಳಿದುಬಿದ್ದಿತ್ತು. ಕಣ್ಣಾಲಿಗಳು ಕಳೆಗುಂದಿ ನೋಟವು ದೈನ್ಯಭರಿತವಾಗಿತ್ತು. ಮುಖದಲ್ಲಿದ್ದ ರಾಜತೇಜಸ್ಸು, ಧೈರ್ಯಗಳು ಕಾಣದಾಗಿತ್ತು, ಅಸಹನೀಯವಾದ ವೇದನೆ ಬೇಸರಗಳು ತುಂಬಿ, ಸಮಾಧಾನವು ಮಾಯವಾಗಿದ್ದ, ಪೆಟ್ಟಿನ ವೇದನೆಯಲ್ಲಿ ಮ್ಳುಗಿಹೋಗಿದ್ದ ಧರ್ಮಜನನ್ನು ಅರ್ಜುನನು ನೋಡಿದನು.

ಅರ್ಥ:
ಝೋಂಪಿಸು: ಭಯಗೊಳ್ಳು, ಬೆಚ್ಚಿಬೀಳು; ಸಿರಿಮೊಗ: ಚಿನ್ನದಂತ ಮುಖ; ನೋಟ: ಅವಲೋಕನ, ಕಣ್ಣು; ಸೊಂಪು: ಸೊಗಸು, ಚೆಲುವು; ಅಡಗು: ಅವಿತುಕೊಳ್ಳು, ಮರೆಯಾಗು; ಆಲಿ: ಕಣ್ಣು; ಧೈರ್ಯ: ಎದೆಗಾರಿಕೆ, ಕೆಚ್ಚು; ಗುಂಪಳಿ: ಗುಂಪನ್ನು ನಾಶಮಾಡು; ನಿಜ: ಸತ್ಯ, ನೈಜ; ರಾಜತೇಜ: ರಾಜನ ಕಳೆ, ಪ್ರಭೆ; ವಿಪುಳ: ಬಹಳ; ವೇದನೆ: ನೋವು; ಬಿಂಪು: ಕಳೆಗುಂದಿದ; ಬೇಸರ: ಬೇಜಾರು; ತುರುಗು:ಹೆಚ್ಚಾಗು, ಅಧಿಕವಾಗು, ಎದುರಾಗು; ತಂಪು: ತಣಿವು; ಅಗ್ಗಳಿಕೆ: ಶ್ರೇಷ್ಠತೆ; ವಿಘಾತಿ: ಹೊಡೆತ, ವಿರೋಧ; ಹುದುಗು: ಅಡಗು; ಮಹೀಶ: ರಾಜ; ಮಹೀ: ಭೂಮಿ; ಕಂಡು: ನೋಡು;

ಪದವಿಂಗಡಣೆ:
ಝೋಂಪಿಸುವ +ಸಿರಿಮೊಗದ +ನೋಟದ
ಸೊಂಪಡಗಿದ್+ಆಲಿಗಳ+ ಧೈರ್ಯದ
ಗುಂಪಳಿದ+ ನಿಜ +ರಾಜತೇಜದ +ವಿಪುಳ +ವೇದನೆಯ
ಬಿಂಪಗಿವ +ಬೇಸರಿನ+ ತುರುಗಿದ
ತಂಪಿನ್+ಅಗ್ಗಳಿಕೆಯ +ವಿಘಾತಿಯ
ಝೋಂಪಿನಲಿ +ಹುದುಗಿದ +ಮಹೀಶನ+ ಕಂಡನಾ +ಪಾರ್ಥ

ಅಚ್ಚರಿ:
(೧) ಝೋಂಪಿಸು – ೧, ೬ ಸಾಲಿನ ಮೊದಲ ಪದ

ಪದ್ಯ ೧೩: ಕರ್ಣನು ಏಕೆ ಮೌನವಾದನು?

ಬಿಗಿದ ಬಾಣದ ದಡ್ಡಿಯನು ತಳ
ಮಗುಚಿದನು ನೂರಂಬಿನಲಿ ಹೇ
ಳಿಗೆಯ ಮಚ್ಚಳ ತೆಗೆದಹಾವಿನವೋಲು ಝೋಂಪಿಸುತ
ಹೊಗರನುಗುಳುವ ಹೊಸ ಮಸೆಯ ಕೋ
ಲುಗಳ ಕವಿಸಿದನಾತನಂಬಿನ
ಝಗೆಯ ಝಳದಲಿ ಮುಳುಗಿ ಮೋನದೊಳಿರ್ದನಾ ಕರ್ಣ (ಕರ್ಣ ಪರ್ವ, ೪ ಸಂಧಿ, ೧೩ ಪದ್ಯ)

ತಾತ್ಪರ್ಯ:
ಕರ್ಣನು ಬಿಟ್ಟ ಬಾಣಗಳಿಂದ ಆವೃತನಾದ ನಕುಲನು ನೂರು ಬಾಣಗಳಿಂದ ಕಡಿದು, ಕೊಡದ ಮುಚ್ಚಳವನ್ನು ತೆಗೆದಾಗ ಒಳಗಿರುವ ಹಾವಿನಂತೆ ಝೋಂಪಿಸುತ್ತಾ ಹೊಸದಾಗಿ ಸಾಣೆ ಹಿಡಿದ ಬಾಣಗಳಿಂದ ಕರ್ಣನನ್ನು ಘಾತಿಸಲು, ಆ ಬಾಣಗಳ ಕಾಂತಿಯಲ್ಲಿ ಮುಳುಗಿ ಕರ್ಣನು ಸ್ವಲ್ಪ ಹೊತ್ತು ಮೌನವಾಗಿದ್ದನು.

ಅರ್ಥ:
ಬಿಗಿ: ಗಟ್ಟಿ, ಬಂಧಿಸು; ಬಾಣ: ಅಂಬು, ಸರಳು; ದಡ್ಡಿ: ಪಂಜರ; ತಳ: ಕೆಳಗು, ಪಾತಾಳ; ಮಗುಚು: ಹಿಂದಿರುಗಿಸು,ಆವರಿಸು; ಅಂಬು: ಬಾಣ; ನೂರು: ಶತ, ಬಹಳ; ಹೇಳಿಗೆ: ಬುಟ್ಟಿ; ಮುಚ್ಚಳ: ಪೆಟ್ಟಿಗೆ ಮುಚ್ಚುವ ಸಾಧನ; ತೆಗೆ: ಹೊರತರು; ಹಾವು: ಸರ್ಪ, ಉರಗ; ಝೋಂಪಿಸು: ಭಯಗೊಳ್ಳು, ಬೆಚ್ಚಿಬೀಳು; ಹೊಗರು: ಕಾಂತಿ; ಉಗುಳು: ಹೊರಹಾಕು; ಹೊಸ: ನವೀನ; ಮಸೆ: ಹರಿತವಾದುದು; ಕೋಲು: ಬಾಣ; ಕವಿ: ಮುಚ್ಚು; ಅಂಬು: ಬಾಣ; ಝಗೆ:ಕಾಂತಿ, ಪ್ರಕಾಶ; ಝಳ: ತಾಪ; ಮುಳುಗು: ಮರೆಯಾಗು; ಮೋನ:ಮೌನ;

ಪದವಿಂಗಡಣೆ:
ಬಿಗಿದ +ಬಾಣದ +ದಡ್ಡಿಯನು +ತಳ
ಮಗುಚಿದನು +ನೂರ್+ಅಂಬಿನಲಿ +ಹೇ
ಳಿಗೆಯ +ಮಚ್ಚಳ +ತೆಗೆದ+ ಹಾವಿನವೋಲು +ಝೋಂಪಿಸುತ
ಹೊಗರನ್+ಉಗುಳುವ +ಹೊಸ +ಮಸೆಯ +ಕೋ
ಲುಗಳ+ ಕವಿಸಿದನ್+ಆತನ್+ಅಂಬಿನ
ಝಗೆಯ+ ಝಳದಲಿ+ ಮುಳುಗಿ +ಮೋನದೊಳ್+ಇರ್ದನಾ +ಕರ್ಣ

ಅಚ್ಚರಿ:
(೧) ಅಂಬು, ಕೋಲು – ಸಮನಾರ್ಥಕ ಪದ
(೨) ಉಪಮಾನದ ಪ್ರಯೋಗ – ಹೇಳಿಗೆಯ ಮಚ್ಚಳ ತೆಗೆದಹಾವಿನವೋಲು ಝೋಂಪಿಸುತ
(೩) ಝ ಕಾರದ ಪದಗಳ ಬಳಕೆ – ಝಗೆಯ, ಝಳದಲಿ, ಝೋಂಪಿಸು

ಪದ್ಯ ೧೫: ವಿವಾಹ ಮಂಟಪವು ತಂಪಾಗಿಡಲು ಮಾಡಿದ ಏರ್ಪಾಟೇನು?

ಝಳಿವ ಝೋಂಪಿಸಿ ಬೀಸಿದವು ತಂ
ಬೆಲರ ಬೀಸಣಿಗೆಗಳು ಪರಿಮಳ
ಕಲಿತ ಮಕರಂದದ ತುಷಾರದ ತುಹಿನ ರೇಣುಗಳ
ಸುಳಿವ ಸುತ್ತಣ ಸಾಲಭಂಜಿಕೆ
ಗಳಲಿ ಸೂತ್ರಿಸಿ ರಚಿಸಿದರು ಮಂ
ಗಳದ ರಿಂಗಣ ಝಾಡಿಸಿತು ವೈವಾಹ ಮಂಟಪವ (ಆದಿ ಪರ್ವ, ೧೨ ಸಂಧಿ, ೧೫ ಪದ್ಯ)

ತಾತ್ಪರ್ಯ:
ವಿವಾಹ ಮಂಟಪದೊಳಗೆ ಎಲ್ಲಾ ರಾಜರಿಗು ಆಯಾಸ, ಶಕೆಯಾಗದ ಹಾಗೆ ನಿರ್ಮಿಸಿದ್ದರು. ಸಾಲು ವಿಗ್ರಹಗಳನ್ನು ಸೂತ್ರದಿಂದ ಜೋಡಿಸಿ, ಸುಗಂಧಯುಕ್ತವಾದ ತುಂತುರು ನೀರನ್ನು ಬೀಸಣಿಕೆಗಳು ಬೀಸುವಂತೆ ಮಾಡಿ ಮಂಟಪದಲ್ಲಿ ಶಖೆ ಇಲ್ಲದಂತೆ ಮಾಡಿದ್ದರು. ವಿವಾಹ ಮಂಟಪದಲ್ಲಿ ಸೂತ್ರದೊಡನೆ ಎಳೆದೊಡನೆ, ವಿಗ್ರಹಗಳು ಮಂಗಳ ನೃತ್ಯವನ್ನು ಮಾಡುತ್ತಿದ್ದವು.

ಅರ್ಥ:
ಝಳವ: ಶಾಖ, ಕಾಂತಿ; ಝೋಂಪಿಸು: ಮೈಮರೆ, ವ್ಯಾಪಿಸು, ಕಂಪಿಸು; ಬೀಸು: ಒಗೆ, ಆವರಿಸುವಂತೆ ಮಾಡು; ತಂಬೆಲರ: ತಂಪಾದ ಗಾಳಿ; ಬೀಸಣಿಗೆ: ಗಾಳಿ ಬೀಸಿಕೊಳ್ಳುವ ಒಂದು ಸಾಧನ; ಪರಿಮಳ: ಸುವಾಸನೆ; ಕಲಿತ: ಕೂಡಿದ, ಸೇರಿದ; ತುಷಾರ: ತುಂತುರು ಹನಿ; ತುಹಿನ: ತಂಪಾದ, ಹಿಮ; ರೇಣು: ಒಂದು ಅಳತೆಯ ಪ್ರಮಾಣ, ಪರಾಗ, ಧೂಳು; ಸುಳಿ: ಅಲೆದಾಡು; ಸುತ್ತಣ: ಎಲ್ಲಾ ಕಡೆ; ಸಾಲಭಂಜಿಕೆ: ವಿಗ್ರಹ, ಗೊಂಬೆ; ಸೂತ್ರಿಸು: ಪೋಣಿಸು, ಜೋಡಿಸು; ರಚಿಸು: ನಿರ್ಮಿಸು, ಕಟ್ಟು; ಮಂಗಳ: ಶ್ರೇಷ್ಠ, ಒಳ್ಳೆಯ; ರಿಂಗಣ: ಕುಣಿತ, ಚಲನೆ, ಚಟುವಟಿಕೆ; ಝಾಡಿಸು: ಚಿಮ್ಮು, ವ್ಯಾಪಿಸು;

ಪದವಿಂಗಡನೆ:
ಝಳಿವ +ಝೋಂಪಿಸಿ +ಬೀಸಿದವು+ ತಂ
ಬೆಲರ+ ಬೀಸಣಿಗೆಗಳು+ ಪರಿಮಳ
ಕಲಿತ +ಮಕರಂದದ +ತುಷಾರದ+ ತುಹಿನ +ರೇಣುಗಳ
ಸುಳಿವ +ಸುತ್ತಣ +ಸಾಲ+ಭಂಜಿಕೆ
ಗಳಲಿ+ ಸೂತ್ರಿಸಿ +ರಚಿಸಿದರು +ಮಂ
ಗಳದ+ ರಿಂಗಣ+ ಝಾಡಿಸಿತು+ ವೈವಾಹ +ಮಂಟಪವ

ಅಚ್ಚರಿ:
(೧) ಜೋಡಿ ಪದಗಳು – ೧,೨, ೪ ಸಾಲಿನ ಮೊದಲೆರಡು ಪದಗಳು – ಝಳಿವ ಝೋಂಪಿಸಿ, ಬೆಲರ ಬೀಸಣಿಗೆಗಳು; ಸುಳಿವ ಸುತ್ತಣ; ತುಷಾರದ ತುಹಿನ
(೨) ಝಕಾರದ ಪದಗಳ ಬಳಕೆ: ಝಳವ, ಝೋಂಪಿಸು, ಝಾಡಿಸು