ಪದ್ಯ ೩: ಸಂಜಯನು ಕೌರವನ ಯುದ್ಧವನ್ನು ಹೇಗೆ ವರ್ಣಿಸಿದನು?

ಅರಿದುದಿಲ್ಲಾ ಕೌರವೇಂದ್ರನ
ನರಸಿ ಶಕುನಿಯ ದಳವ ಮುತ್ತಿದ
ರಿರಿದರವರ ತ್ರಿಗರ್ತರನು ಸೌಬಲ ಸುಶರ್ಮಕರ
ಮುರಿದ ಬವರವ ಬಲಿದು ಗಜ ನೂ
ರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು ರಾಯದಳದೊಳಗೆ (ಗದಾ ಪರ್ವ, ೪ ಸಂಧಿ, ೩ ಪದ್ಯ)

ತಾತ್ಪರ್ಯ:
ಸಂಜಯನು ತನ್ನ ಮಾತನ್ನು ಮುಂದುವರೆಸುತ್ತಾ, ನಿಮಗೆ ಇದು ತಿಳಿಯದೇ? ಪಾಂಡವರು ಕೌರವರನನ್ನು ಹುಡುಕುತ್ತಾ ಹೋಗಿ ಶಕುನಿಯ ಸೇನೆಯನ್ನು ಮುತ್ತಿದರು. ಸುಶರ್ಮ ಶಕುನಿಗಳನ್ನು ಕೊಂದರು. ಹೀಗೆ ಸೋತ ಮೇಲೆ ದೊರೆಯು ನೂರಾನೆಗಳೊಡನೆ ಪಾಂಡವರ ಸೇನೆಯನ್ನು ಸಂಹರಿಸುತ್ತಾ ನುಗ್ಗಿದನು.

ಅರ್ಥ:
ಅರಿ: ತಿಳಿ; ಅರಸು: ಹುಡುಕು; ದಳ: ಸೈನ್ಯ; ಮುತ್ತು: ಆವರಿಸು; ಇರಿ: ಚುಚ್ಚು; ಮುರಿ: ಸೀಳು; ಬವರ: ಕಾಳಗ, ಯುದ್ಧ; ಬಲಿ: ಗಟ್ಟಿಯಾಗು; ಗಜ: ಆನೆ; ನೂರು: ಶತ; ಹೊಕ್ಕು: ಸೇರು; ಅಹಿತ: ವೈರಿ; ಜರಿ: ಬಯ್ಯು; ಝಾಡಿಸು: ಒದರು; ಬೀದಿ: ವಿಸ್ತಾರ, ವ್ಯಾಪ್ತಿ; ರಾಯ: ರಾಜ; ದಳ: ಸೈನ್ಯ;

ಪದವಿಂಗಡಣೆ:
ಅರಿದುದಿಲ್ಲಾ +ಕೌರವೇಂದ್ರನನ್
ಅರಸಿ +ಶಕುನಿಯ+ ದಳವ +ಮುತ್ತಿದರ್
ಇರಿದರ್+ಅವರ +ತ್ರಿಗರ್ತರನು +ಸೌಬಲ +ಸುಶರ್ಮಕರ
ಮುರಿದ+ ಬವರವ +ಬಲಿದು +ಗಜ+ ನೂ
ರರಲಿ+ ಹೊಕ್ಕನು +ರಾಯನ್+ಅಹಿತರ
ಜರಿದು+ ಝಾಡಿಸಿ +ಬೀದಿವರಿದನು +ರಾಯದಳದೊಳಗೆ

ಅಚ್ಚರಿ:
(೧) ಕೌರವನ ಯುದ್ಧದ ವರ್ಣನೆ – ಮುರಿದ ಬವರವ ಬಲಿದು ಗಜ ನೂರರಲಿ ಹೊಕ್ಕನು ರಾಯನಹಿತರ
ಜರಿದು ಝಾಡಿಸಿ ಬೀದಿವರಿದನು
(೨) ಅರಿ, ಇರಿ, ಮುರಿ, ಜರಿ – ಪ್ರಾಸ ಪದಗಳು

ಪದ್ಯ ೨: ಪಾಳೆಯಲ್ಲಿ ಯಾವ ಸ್ಥಿತಿ ನಿರ್ಮಾಣಗೊಂಡಿತು?

ಕುದುರೆ ಹಾಯ್ದವು ಕಂಡ ಕಡೆಯಲಿ
ಮದಗಜಾವಳಿಯೋಡಿದವು ವರ
ಸುದತಿಯರು ಬಾಯ್ವಿಡುತ ಹರಿದರು ಬಿಟ್ಟಮಂಡೆಯಲಿ
ಕದಡಿದುದು ಜನಜಲಧಿ ಝಾಡಿಸಿ
ಬೆದರಿದವು ಕೇರಿಗಳು ರಾಯನ
ಹದನದೇನೇನೆನುತ ಹರಿದರು ಹರದರಗಲದಲಿ (ಅರಣ್ಯ ಪರ್ವ, ೨೧ ಸಂಧಿ, ೨ ಪದ್ಯ)

ತಾತ್ಪರ್ಯ:
ಆನೆ ಕುದುರೆಗಳೂ ದಿಕ್ಕುಗೆಟ್ಟು ಓಡಿದವು. ಸ್ತ್ರೀಯರು ತಲೆ ಕೆದರಿಕೊಂಡು ಕೂಗುತ್ತಾ ಓಡಿದರು. ಪಾಳೆಯದ ಕೇರಿಗಳಲ್ಲಿದ್ದ ಜನರು ಬೆದರಿ ಗದ್ದಲ ಮಾಡಿದರು. ಕೌರವನಿಗೆ ಏನಾಯಿತು, ರಾಜನು ಎಲ್ಲಿ ಹೋಗಿದ್ದಾನೆ, ಹೇಗಿದ್ದಾನೆ ಎಂದು ವ್ಯಾಪಾರಿಗಳು ಬೀದಿಯ ಉದ್ದಗಲದಲ್ಲಿ ಓಡಾಡಿದರು.

ಅರ್ಥ:
ಕುದುರೆ: ಅಶ್ವ; ಹಾಯ್ದು: ಮೇಲೆಬೀಳು; ಕಂಡಕಡೆ: ತೋರಿದ ದಿಕ್ಕಿಗೆ; ಮದ: ಮತ್ತು, ಅಮಲು; ಗಜಾವಳಿ: ಆನೆಗಳ ಗುಂಪು; ಓಡು: ಧಾವಿಸು; ಸುದತಿ: ಹೆಣ್ಣು; ಹರಿ: ಸೀಳು; ಮಂಡೆ: ತಲೆ; ಕದಡು: ಕಲಕಿದ ದ್ರವ; ಜಲಧಿ: ಸಾಗರ; ಝಾಡಿಸು: ಜೋರು; ಬೆದರು: ಹೆದರು, ಅಂಜಿಕೆ; ಕೇರಿ: ಬೀದಿ; ರಾಯ: ಒಡೆಯ; ಹದ: ಸ್ಥಿತಿ; ಹರಿ: ಪ್ರವಹಿಸು; ಹರದ: ವ್ಯಾಪಾರ; ಅಗಲ: ವಿಸ್ತಾರ;

ಪದವಿಂಗಡಣೆ:
ಕುದುರೆ +ಹಾಯ್ದವು +ಕಂಡ +ಕಡೆಯಲಿ
ಮದಗಜಾವಳಿ+ಓಡಿದವು +ವರ
ಸುದತಿಯರು +ಬಾಯ್ವಿಡುತ+ ಹರಿದರು+ ಬಿಟ್ಟ+ಮಂಡೆಯಲಿ
ಕದಡಿದುದು +ಜನಜಲಧಿ+ ಝಾಡಿಸಿ
ಬೆದರಿದವು +ಕೇರಿಗಳು +ರಾಯನ
ಹದನದೇನೇನ್+ಎನುತ +ಹರಿದರು +ಹರದರ್+ಅಗಲದಲಿ

ಅಚ್ಚರಿ:
(೧) ಹ ಕಾರದ ತ್ರಿವಳಿ ಪದ – ಹದನದೇನೇನೆನುತ ಹರಿದರು ಹರದರಗಲದಲಿ
(೨) ತಲೆಗೆದರಿಕೊಂಡು ಎಂದು ಹೇಳಲು – ವರ ಸುದತಿಯರು ಬಾಯ್ವಿಡುತ ಹರಿದರು ಬಿಟ್ಟಮಂಡೆಯಲಿ

ಪದ್ಯ ೬೭: ದುಶ್ಯಾಸನನು ದ್ರೌಪದಿಯನ್ನು ಹೇಗೆ ಎಳೆದನು?

ಕೆದರಿದವು ಸೂಸಕದ ಮುತ್ತುಗ
ಳುದುರಿದವು ಸೀಮಂತ ಮಣಿಗಳ
ಹೊದರು ಮುರಿದವು ಕರ್ಣಪೂರದ ರತ್ನದೋಲೆಗಳು
ಸುದತಿಯರು ಗೋಳಿಡುತ ಬರೆ ಮೆ
ಟ್ಟಿದನು ತಿವಿದನು ಕಾಲಲಡಬಿ
ದ್ದುದು ಸಖೀಜನವೆಳೆದು ಝಾಡಿಸಿ ಜರೆದು ಝೋಂಪಿಸಿದ (ಸಭಾ ಪರ್ವ, ೧೫ ಸಂಧಿ, ೬೭ ಪದ್ಯ)

ತಾತ್ಪರ್ಯ:
ದ್ರೌಪದಿಯು ಧರಿಸಿದ್ದ ಕುಚ್ಚಿನ ಮುತ್ತುಗಳು ಉದುರಿದವು. ಬೈತಲೆ ಮಣಿಗಳು ಉದುರಿ ಬಿದ್ದವು. ಕಿವಿಯ ರತ್ನದ ಓಲೆಗಳು ಮುರಿದವು. ದ್ರೌಪದಿಯ ಸಖಿಯರು ಗೋಳಾಡುತ್ತಾ ಬಂದು ಅವನ ಕಾಲಿಗೆ ಬೀಳಲು, ದುಶ್ಯಾಸನು ಅವರನ್ನು ಕಾಲಿನಿಂದ ಝಾಡಿಸಿ ಒದೆದು ಬಯ್ಯುತ್ತ ಅತ್ತಿತ್ತ ನೂಕಿ ಅವರನ್ನು ಮೆಟ್ಟಿ ದ್ರೌಪದಿಯನ್ನು ತಲೆಯ ಕೂದಲಿನಿಂದ ಎಳೆಯುತ್ತಿದ್ದನು.

ಅರ್ಥ:
ಕೆದರು: ಹರಡು, ಚದರು; ಸೂಸಕ: ಬೈತಲೆ ಬೊಟ್ಟು; ಮುತ್ತು: ಮೌಕ್ತಿಕ; ಉದುರು: ಕೆಳಗೆ ಬೀಳು, ಬಿಡಿಬಿಡಿಯಾಗು; ಸೀಮಂತ:ಬೈತಲೆ; ಮಣಿ: ರತ್ನ; ಹೊದರು: ಬಿರುಕು, ಸಮೂಹ; ಕರ್ಣ: ಕಿವಿ; ರತ್ನ: ಮಾಣಿಕ್ಯ; ಓಲೆ: ಕರ್ಣಾಭರಣ; ಸುದತಿ: ಹೆಣ್ಣು, ಸ್ತ್ರೀ; ಗೋಳಿಡು: ಅಳಲು; ಬರೆ: ಆಗಮಿಸು; ಮೆಟ್ಟು: ತುಳಿ; ತಿವಿ: ಚುಚ್ಚು; ಕಾಲು: ಪಾದ; ಅಡಬಿದ್ದು: ನಮಸ್ಕರಿಸು; ಸಖಿ: ದಾಸಿ; ಎಳೆ: ಸೆಳೆದು; ಝಾಡಿಸು: ಜೋರಾಗಿ ಒದೆ; ಜರೆ: ಬಯ್ಯು; ಝೋಂಪಿಸು: ಬೆಚ್ಚಿಬೀಳು;

ಪದವಿಂಗಡಣೆ:
ಕೆದರಿದವು +ಸೂಸಕದ +ಮುತ್ತುಗಳ್
ಉದುರಿದವು +ಸೀಮಂತ +ಮಣಿಗಳ
ಹೊದರು +ಮುರಿದವು +ಕರ್ಣಪೂರದ+ ರತ್ನದ್+ಓಲೆಗಳು
ಸುದತಿಯರು +ಗೋಳಿಡುತ +ಬರೆ +ಮೆ
ಟ್ಟಿದನು +ತಿವಿದನು +ಕಾಲಲ್+ಅಡಬಿ
ದ್ದುದು +ಸಖೀಜನವ್+ಎಳೆದು +ಝಾಡಿಸಿ +ಜರೆದು +ಝೋಂಪಿಸಿದ

ಅಚ್ಚರಿ:
(೧) ಕೆದರು, ಉದುರು, ಹೊದರು, ಮುರಿ, ತಿವಿ, ಮೆಟ್ಟು, ಝಾಡಿಸು, ಝೋಂಪಿಸು – ದುಶ್ಯಾಸನನ ಕ್ರೌರ್ಯವನ್ನು ವಿವಿರಿಸುವ ಪದಗಳು

ಪದ್ಯ ೬೩: ಧರ್ಮಜನು ಪಣಕ್ಕೆ ಇಡಲು ಯಾವುದರ ಬಗ್ಗೆ ಚಿಂತಿಸಿದನು?

ಆಡಿದನು ನೃಪನಾಕ್ಷಣಕೆ ಹೋ
ಗಾಡಿದನು ಖೇಚರರ ಖಾಡಾ
ಖಾಡಿಯಲಿ ಝಾಡಿಸಿದ ಹಯವನು ಹತ್ತು ಸಾವಿರವ
ಹೂಡಿದನು ಸಾರಿಗಳ ಮರಳಿ
ನ್ನಾಡುವರೆ ಪಣವಾವುದೈ ಮಾ
ತಾಡಿಯೆನೆ ಮನದಲಿ ಮಹೀಪತಿ ಧನವ ಚಿಂತಿಸಿದ (ಸಭಾ ಪರ್ವ, ೧೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಯುಧಿಷ್ಠಿರನು ಆಡಿದನು, ಗಂಧರ್ವರ ಜೊತೆ ಯುದ್ಧಮಾಡಿ ಗಳಿಸಿದ ಹತ್ತು ಸಾವಿರ ಕುದುರೆಗಳನ್ನು ಸೋತನು. ಶಕುನಿಯು ಮತ್ತೆ ಕಾಯಿಗಳನ್ನು ಹೂಡಿ, ಆಡುವುದಕ್ಕೆ ಇನ್ನಾವ ಪಣವನ್ನಿಡುವೆ ಎನ್ನಲು ಧರ್ಮಜನು ತನ್ನಲ್ಲಿದ್ದ ಧನದ ಬಗ್ಗೆ ಚಿಂತಿಸಿದನು.

ಅರ್ಥ:
ಆಡು: ಕ್ರಿಡೆಯಲ್ಲಿ ಪಾಲ್ಗೊಳ್ಳು; ನೃಪ: ರಾಜ; ಹೋಗು: ತೆರಳು; ಖೇಚರ: ಗಂಧರ್ವ; ಖಾಡಾಖಾಡಿ: ಮಲ್ಲಯುದ್ಧ; ಝಾಡಿ: ಕಾಂತಿ; ಹಯ: ಕುದುರೆ; ಹೂಡು: ಇಡು; ಸಾರಿ: ಪಗಡೆಯಾಟದಲ್ಲಿ ಉಪಯೋಗಿಸುವ ಕಾಯಿ; ಮರಳಿ: ಮತ್ತೆ; ಪಣ: ಜೂಜಿಗೆ ಒಡ್ಡಿದ ವಸ್ತು, ಬಾಜಿ; ಮಾತಾಡು: ತಿಳಿಸು; ಮನ: ಮನಸ್ಸು; ಮಹೀಪತಿ: ರಾಜ; ಧನ: ವಿತ್ತ, ಐಶ್ವರ್ಯ; ಚಿಂತಿಸು: ಯೋಚಿಸು;

ಪದವಿಂಗಡಣೆ:
ಆಡಿದನು +ನೃಪನ್+ಆ+ಕ್ಷಣಕೆ +ಹೋಗ್
ಆಡಿದನು +ಖೇಚರರ+ ಖಾಡಾ
ಖಾಡಿಯಲಿ +ಝಾಡಿಸಿದ+ ಹಯವನು +ಹತ್ತು +ಸಾವಿರವ
ಹೂಡಿದನು+ ಸಾರಿಗಳ+ ಮರಳ್
ಇನ್ನಾಡುವರೆ +ಪಣವ್+ಆವುದೈ +ಮಾ
ತಾಡಿಯೆನೆ +ಮನದಲಿ +ಮಹೀಪತಿ +ಧನವ +ಚಿಂತಿಸಿದ

ಅಚ್ಚರಿ:
(೧) ಮ ಕಾರದ ತ್ರಿವಳಿ ಪದ – ಮಾತಾಡಿಯೆನೆ ಮನದಲಿ ಮಹೀಪತಿ
(೨) ಆಡಿದನು, ಹೂಡಿದನು – ಪ್ರಾಸ ಪದಗಳು

ಪದ್ಯ ೫: ಕೌರವ ಸೈನ್ಯದಲ್ಲಿ ಸಂತಸ ಪಸರಿಸಲು ಕಾರಣವೇನು?

ತಳಿತು ಮುತ್ತುವ ಮುಗಿಲ ಝಾಡಿಸಿ
ಝಳಪಿಸುವ ರವಿಯಂತೆ ಭುವನವ
ಬೆಳಗಲುದ್ರೇಕಿಸುವ ಭರ್ಗನ ಭಾಳಶಿಖಿಯಂತೆ
ಹೊಳೆಹೊಳೆವ ಕರ್ಣ ಪ್ರತಾಪಾ
ನಳನ ನಾಟ್ಯವ ಕಂಡು ಕೌರವ
ಬಲದೊಳೊಸಗೆಯ ಲಗ್ಗೆ ಮಸಗಿತು ಭೂಪ ಕೇಳೆಂದ (ಕರ್ಣ ಪರ್ವ, ೨೧ ಸಂಧಿ, ೫ ಪದ್ಯ)

ತಾತ್ಪರ್ಯ:
ಮರೆ ಮಾಡಲು ಬಂದ ಮೋಡಗಳನ್ನು ಸರಸಿ ಹೊಳೆಯುವ ಸೂರ್ಯನಂತೆ ಲೋಕವನ್ನು ಬೆಳಗುವ ಶಿವನ ಹಣೆಗಣ್ಣಿನ ಅಗ್ನಿಯಂತೆ ಹೊಳೆ ಹೊಳೆಯುವ ಕರ್ಣನ ಪ್ರತಾಪದ ಅಗ್ನಿಯ ನೃತ್ಯವನ್ನು ಕಂಡು ಕೌರವಸೈನ್ಯದಲ್ಲಿ ಸಂತಸವು ಪಸರಿಸಿತು ಎಂದು ಸಂಜಯನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ತಳಿತ: ಚಿಗುರಿದ; ಮುತ್ತು: ಆವರಿಸು; ಮುಗಿಲು: ಆಗಸ; ಝಾಡಿಸು: ಹೊಡೆ; ಝಳಪಿಸು: ಹೊಳೆವ; ರವಿ: ಭಾನು; ಭುವನ: ಭೂಮಿ; ಬೆಳಗು: ಹಗಲು, ಹೊಳೆ; ಉದ್ರೇಕ: ಉದ್ವೇಗ, ಆವೇಗ; ಭರ್ಗ: ಶಿವ, ಈಶ್ವರ; ಭಾಳ: ಹಣೆ; ಶಿಖಿ: ಬೆಂಕು; ಹೊಳೆ: ಕಾಂತಿ; ಪ್ರತಾಪ: ಪರಾಕ್ರಮ; ಆನಳ:ಬೆಂಕಿ; ನಾಟ್ಯ: ನೃತ್ಯ; ಕಂಡು: ನೋಡಿ; ಬಲ: ಸೈನ್ಯ; ಒಸಗೆ: ಕಾಣಿಕೆ, ಉಡುಗೊರೆ; ಲಗ್ಗೆ: ಮುತ್ತಿಗೆ, ಆಕ್ರಮಣ; ಮಸಗು: ಹರಡು, ಕೆರಳು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತಳಿತು +ಮುತ್ತುವ +ಮುಗಿಲ +ಝಾಡಿಸಿ
ಝಳಪಿಸುವ +ರವಿಯಂತೆ +ಭುವನವ
ಬೆಳಗಲ್+ಉದ್ರೇಕಿಸುವ +ಭರ್ಗನ +ಭಾಳ+ಶಿಖಿಯಂತೆ
ಹೊಳೆಹೊಳೆವ+ ಕರ್ಣ+ ಪ್ರತಾಪಾ
ನಳನ ನಾಟ್ಯವ ಕಂಡು ಕೌರವ
ಬಲದೊಳೊಸಗೆಯ ಲಗ್ಗೆ ಮಸಗಿತು ಭೂಪ ಕೇಳೆಂದ

ಅಚ್ಚರಿ:
(೧) ಉಪಮಾನದ ಪ್ರಯೋಗ – ತಳಿತು ಮುತ್ತುವ ಮುಗಿಲ ಝಾಡಿಸಿ ಝಳಪಿಸುವ ರವಿಯಂತೆ; ಭುವನವ ಬೆಳಗಲುದ್ರೇಕಿಸುವ ಭರ್ಗನ ಭಾಳಶಿಖಿಯಂತೆ
(೨) ಪ್ರತಾಪಾನಳ ನಾಟ್ಯ – ಪರಾಕ್ರಮದ ಅಗ್ನಿಯ ನಾಟ್ಯ – ಪದಪ್ರಯೋಗ
(೩) ಝಾಡಿಸಿ ಝಳಪಿಸುವ – ಝ ಕಾರದ ಜೋಡಿ ಪದಗಳು
(೪) ಭ ಕಾರದ ಸಾಲು ಪದಗಳು – ಭುವನವ ಬೆಳಗಲುದ್ರೇಕಿಸುವ ಭರ್ಗನ ಭಾಳಶಿಖಿಯಂತೆ

ಪದ್ಯ ೨೯: ಅಶ್ವತ್ಥಾಮನು ಅರ್ಜುನನಿಗೆ ಏನು ಹೇಳಿದನು?

ಜಾಳಿಸಿತು ರಥ ಜಡಿವ ಕೌರವ
ನಾಳ ಝೋಂಪಿಸಿ ಡೊಂಬು ಮಾಡುವ
ಜಾಳ ಝಾಡಿಸಿ ಬೈದು ಹೊಕ್ಕನು ಮತ್ತೆ ಗುರುಸೂನು
ಖೂಳ ಫಡಫಡ ಜಾರದಿರು ತೋ
ರಾಳ ತೂರಿದ ಡೊಂಬು ಬೇಡ ವಿ
ಡಾಳ ವಿದ್ಯೆಗಳೆಮ್ಮೊಡನೆಯೆನುತೆಚ್ಚನರ್ಜುನನ (ಕರ್ಣ ಪರ್ವ, ೧೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಅರ್ಜುನನ ರಥವು ಕೌರವರ ಸೈನ್ಯವನ್ನು ಲೆಕ್ಕಿಸದೆ ಮುಂದೆ ಸಾಗಿತು, ಇದನ್ನು ನೋಡಿದ ಅಶ್ವತ್ಥಾಮನು, ವೃಥಾ ಯುದ್ಧದ ನಾಟಕವಾಡುವ ತಮ್ಮ ಸೈನ್ಯವನ್ನು ಬೈದು ಅರ್ಜುನನ ಎದುರಿಗೆ ಬಂದು, ನೀಚ ಅರ್ಜುನ, ತಪ್ಪಿಸಿ ಜಾರಿಕೊಳ್ಳಬೇಡ. ಸೈನಿಕರನ್ನು ತೂರಿದ ಜಂಭ ನಿನಗೆ ಸಲ್ಲದು, ನಮ್ಮ ಹತ್ತಿರ ನಿನ್ನ ಮೋಸದ ನಾಟಕ ನಡೆಯದು ಎನ್ನುತ್ತಾ ಅರ್ಜುನನ ಮೇಲೆ ಬಾಣವನ್ನು ಬಿಟ್ಟನು.

ಅರ್ಥ:
ಜಾಳಿಸು:ಚಲಿಸು, ನಡೆ; ರಥ: ಬಂಡಿ; ಜಡಿ: ಬೆದರಿಕೆ, ಹೆದರಿಕೆ; ಆಳ: ಅಂತರಾಳ, ಮರ್ಮ; ಝೋಂಪಿಸು: ಭಯಗೊಳ್ಳು; ಡೊಂಬು: ಮೋಸಗಾರ, ವಂಚಕ; ಜಾಳ: ಬಲೆ, ಕಪಟ; ಝಾಡಿಸು: ಅಲುಗಾಡಿಸು, ಒದರು; ಬೈದು: ಜರಿದು; ಹೊಕ್ಕು: ಸೇರು; ಸೂನು: ಮಗ; ಖೂಳ: ದುಷ್ಟ; ಫಡ: ತಿರಸ್ಕಾರ ಹಾಗೂ ಕೋಪಗಳನ್ನು ಸೂಚಿಸುವ ಒಂದು ಮಾತು; ಜಾರು: ನುಣುಚಿಕೊಳ್ಳು, ಕಳಚಿಕೊಳ್ಳು; ತೋರು: ಕಾಣು; ಆಳ: ಸೈನಿಕ; ತೂರು: ಎಸೆ, ಬೀಸು; ಡೊಂಬ: ವಂಚಕ; ಬೇಡ: ಸಲ್ಲದು, ಕೂಡದು; ವಿಡಾಳ: ಮೋಸ; ವಿದ್ಯೆ: ಜ್ಞಾನ; ಎಚ್ಚು: ಬಾಣಬಿಡು;

ಪದವಿಂಗಡಣೆ:
ಜಾಳಿಸಿತು +ರಥ +ಜಡಿವ +ಕೌರವನ್
ಆಳ +ಝೋಂಪಿಸಿ +ಡೊಂಬು +ಮಾಡುವ
ಜಾಳ+ ಝಾಡಿಸಿ+ ಬೈದು +ಹೊಕ್ಕನು +ಮತ್ತೆ +ಗುರುಸೂನು
ಖೂಳ +ಫಡಫಡ+ ಜಾರದಿರು+ ತೋರ್
ಆಳ+ ತೂರಿದ +ಡೊಂಬು +ಬೇಡ+ ವಿ
ಡಾಳ+ ವಿದ್ಯೆಗಳ್+ಎಮ್ಮೊಡನ್+ಎನುತ್+ಎಚ್ಚನ್+ಅರ್ಜುನನ

ಅಚ್ಚರಿ:
(೧) ಅರ್ಜುನನನ್ನು ಬೈಯ್ಯುವ ಬಗೆ – ಖೂಳ, ಫಡ
(೨) ಅಶ್ವತ್ಥಾಮನು ಸೈನ್ಯವನ್ನು ಬಯ್ಯುವ ಬಗೆ – ಕೌರವನಾಳ ಝೋಂಪಿಸಿ ಡೊಂಬು ಮಾಡುವ
ಜಾಳ ಝಾಡಿಸಿ ಬೈದು