ಪದ್ಯ ೯: ವೈಶಂಪಾಯನರು ಭಾರತ ಗ್ರಂಥವನ್ನು ಹೇಗೆ ಪೂಜಿಸಿದರು?

ವಿತತ ಪುಸ್ತಕವನು ಸುಗಂಧಾ
ಕ್ಷತೆಯೊಳರ್ಚಿಸಿ ಸೋಮ ಸೂರ್ಯ
ಕ್ಷಿತಿ ಜಲಾನಲ ವಾಯು ಗಗನಾದಿಗಳಿಗಭಿನಮಿಸಿ
ಶ್ತಮಖಾದಿ ಸಮಸ್ತ ದೇವ
ಪ್ರತಿಗೆರಗಿ ಸರೋಜಭವ ಪಶು
ಪತಿಗಳಿಗೆ ಕೈ ಮುಗಿದು ವಿಮಲಜ್ಞಾನ ಮುದ್ರೆಯಲಿ (ಆದಿ ಪರ್ವ, ೨ ಸಂಧಿ, ೯ ಪದ್ಯ)

ತಾತ್ಪರ್ಯ:
ವೈಶಂಪಾಯನ ಮಹರ್ಷಿಯು ಮಹತಾದ ಭಾರತ ಗ್ರಂಥವನ್ನು ಉತ್ತಮ ಗಂಧಾಕ್ಷತೆಗಳಿಂದ ಪೂಜಿಸಿದನು. ಬಳಿಕ ಸೂರ್ಯಚಂದ್ರರು ಭೂಮಿ, ನೀರು, ಅಗ್ನಿ, ವಾಯು, ಆಕಾಶಗಳೆಂಬ ಪಂಚಮಹಾಭೂತಗಳಿಗೆ ನಮಸ್ಕರಿಸಿದನು. ಇಂದ್ರನೇ ಮೊದಲಾದ ಸಮಸ್ತದೇವತೆಗಳಿಗೂ, ಬ್ರಹ್ಮ, ಶಿವರಿಗೂ ನಮಸ್ಕರಿಸಿ ಜ್ಞಾನಮುದ್ರೆಯನು ಧರಿಸಿದನು.

ಅರ್ಥ:
ವಿತತ: ವಿಸ್ತಾರವಾದ; ಪುಸ್ತಕ: ಗ್ರಂಥ; ಗಂಧ: ಚಂದನ; ಅಕ್ಷತೆ: ಅರಿಸಿನ ಅಥವಾ ಕುಂಕುಮ ಲೇಪಿತ ಮಂತ್ರಿತ ಅಕ್ಕಿ; ಅರ್ಚಿಸು: ಪೂಜಿಸು; ಸೋಮ: ಚಂದ್ರ; ಸೂರ್ಯ: ರವಿ; ಕ್ಷಿತಿ: ಭೂಮಿ; ಜಲ: ನೀರು; ಅನಲ: ಅಗ್ನಿ; ವಾಯು: ಗಾಳಿ; ಗಗನ: ಆಗಸ; ಆದಿ: ಮೊದಲಾದ; ಅಭಿನಮಿಸು: ನಮಸ್ಕರಿಸು; ಶತ: ನೂರು; ಮಖ: ಯಾಗ, ಯಜ್ಞ; ಆದಿ: ಮೊದಲಾದ; ಸಮಸ್ತ: ಎಲ್ಲಾ; ದೇವ: ಭಗವಂತ; ಪ್ರತತಿ: ಗುಂಪು, ಸಮೂಹ; ಎರಗು: ನಮಸ್ಕರಿಸು; ಸರೋಜಭವ: ಬ್ರಹ್ಮ; ಸರೋಜ: ಕಮಲ; ಪಶುಪತಿ: ಶಿವ; ಕೈಮುಗಿ: ನಮಸ್ಕರಿಸು; ವಿಮಲ: ನಿರ್ಮಲ; ಜ್ಞಾನ: ತಿಳಿವಳಿಕೆ, ಅರಿವು; ಮುದ್ರೆ: ಚಿಹ್ನೆ;

ಪದವಿಂಗಡಣೆ:
ವಿತತ +ಪುಸ್ತಕವನು +ಸುಗಂಧ
ಅಕ್ಷತೆಯೊಳ್+ಅರ್ಚಿಸಿ +ಸೋಮ +ಸೂರ್ಯ
ಕ್ಷಿತಿ+ ಜಲ+ಅನಲ +ವಾಯು +ಗಗನಾದಿಗಳಿಗ್+ಅಭಿನಮಿಸಿ
ಶತ+ಮಖಾದಿ +ಸಮಸ್ತ+ ದೇವ
ಪ್ರತಿಗ್+ಎರಗಿ +ಸರೋಜಭವ +ಪಶು
ಪತಿಗಳಿಗೆ +ಕೈ+ ಮುಗಿದು+ ವಿಮಲ+ಜ್ಞಾನ+ ಮುದ್ರೆಯಲಿ

ಅಚ್ಚರಿ:
(೧) ಕೈಮುಗಿ, ಎರಗ, ಅಭಿನಮಿಸು – ಸಾಮ್ಯಾರ್ಥ ಪದ

ಪದ್ಯ ೩೩: ಕೌರವನೇಕೆ ಉದ್ರೇಕಗೊಂಡನು?

ಜ್ಞಾನವಳಿದುದು ವೀರಪಣದಭಿ
ಮಾನ ಮಸೆದುದು ಮಂತ್ರನಿಷ್ಠೆಯ
ಮೌನ ಹಿಂಬೆಳೆಯಾಯ್ತು ಮೋಹಿದುದಾಹವವ್ಯಸನ
ದೀನಮನ ಹೊರಗಳೆದುದುದಕ
ಸ್ಥಾನಭಾವಕೆ ನಾಚಿದನು ತವ
ಸೂನು ತಳವೆಳಗಾದನಹಿತವಚೋವಿಘಾತದಲಿ (ಗದಾ ಪರ್ವ, ೫ ಸಂಧಿ, ೩೩ ಪದ್ಯ)

ತಾತ್ಪರ್ಯ:
ಎಲೈ ಧೃತರಾಷ್ಟ್ರ, ನಿನ್ನ ಮಗನ ತಿಳುವಳಿಕೆ ಮರೆಯಾಯಿತು, ವೀರಪ್ರತಿಜ್ಞೆ ಸ್ವಾಭಿಮಾನ ಹೆಚ್ಚಿತು. ಮಂತ್ರಜಪದಲ್ಲಿದ್ದ ಮೌನ ಹಿಂದಯಿತು. ಯುದ್ಧವ್ಯಸನ ಆವರಿಸಿತು. ದೈನ್ಯವು ಮಾಯವಾಯಿತು. ತಾನ ಅಡಗಿಕೊಂಡು ನೀರಿನ ಕೊಳದಲ್ಲಿರುವುದನ್ನು ನೆನೆದು ನಾಚಿಕೊಂಡನು. ಶತ್ರುಗಳ ಮಾತಿನ ಪೆಟ್ಟಿನಿಂದ ಉದ್ರೇಕಗೊಂಡನು.

ಅರ್ಥ:
ಜ್ಞಾನ: ಬುದ್ಧಿ, ತಿಳುವಳಿಕೆ; ಅಳಿ: ನಾಶ; ವೀರ: ಶೂರ; ಅಭಿಮಾನ: ಹೆಮ್ಮೆ, ಅಹಂಕಾರ; ಮಸೆ: ಹರಿತವಾದುದು; ಮಂತ್ರ: ವೇದದಲ್ಲಿರುವ ಛಂದೋ ಬದ್ಧವೂ ಪವಿತ್ರವೂ ಆದ ದೇವತಾಸ್ತುತಿ; ನಿಷ್ಠೆ: ದೃಢತೆ, ಸ್ಥಿರತೆ; ಮೌನ: ಸುಮ್ಮನಿರುವಿಕೆ, ನೀರವತೆ; ಹಿಂಬೆಳೆ: ಹಿಂದಾಗು, ಹಿಂದೆ ತಳ್ಳು; ಮೋಹ: ಆಸೆ; ಆಹವ: ಯುದ್ಧ; ವ್ಯಸನ: ಚಾಳಿ; ದೀನ: ದೈನ್ಯಸ್ಥಿತಿ; ಮನ: ಮನಸ್ಸು; ಹೊರಗೆ: ಆಚೆ; ಉದಕ: ನೀರು; ಸ್ಥಾನ: ನೆಲೆ; ಭಾವ: ಮನಸ್ಸು, ಚಿತ್ತ; ನಾಚು: ಲಜ್ಜೆ, ಸಿಗ್ಗು, ಅವಮಾನ; ಸೂನು: ಮಗ; ತಳವೆಲಗಾಗು: ತಲೆಕೆಳಗಾಗು; ಅಹಿತ: ವೈರಿ; ವಚೋ: ಮಾತು; ವಿಘಾತ: ಕೇಡು, ಹಾನಿ, ಏಟು;

ಪದವಿಂಗಡಣೆ:
ಜ್ಞಾನವ್+ಅಳಿದುದು +ವೀರಪಣದ್+ಅಭಿ
ಮಾನ +ಮಸೆದುದು +ಮಂತ್ರನಿಷ್ಠೆಯ
ಮೌನ +ಹಿಂಬೆಳೆಯಾಯ್ತು +ಮೋಹಿದುದ್+ಆಹವ+ವ್ಯಸನ
ದೀನಮನ+ ಹೊರಗಳೆದುದ್+ಉದಕ
ಸ್ಥಾನಭಾವಕೆ +ನಾಚಿದನು +ತವ
ಸೂನು +ತಳವೆಳಗಾದನ್+ಅಹಿತ+ವಚೋ+ವಿಘಾತದಲಿ

ಅಚ್ಚರಿ:
(೧) ಒಂದೇ ಪದದ ರಚನೆ – ತಳವೆಳಗಾದನಹಿತವಚೋವಿಘಾತದಲಿ
(೨) ಜ್ಞಾನ, ಮಾನ, ಮೌನ, ದೀನ, ಸ್ಥಾನ – ಪ್ರಾಸ ಪದಗಳು

ಪದ್ಯ ೭೦: ದ್ರೋಣನು ಯಾವುದನ್ನು ಅರಿತನು?

ತನ್ನೊಳಿತರವನಿತರದೊಳು ನೆರೆ
ತನ್ನನೀಕ್ಷಿಸಿ ತಾನು ತನ್ನಿಂ
ದನ್ಯವೆರಡರೊಳೈಕ್ಯವೆಂಬುಪಚರಿತ ಭಾವವನು
ತನ್ನೊಳಗೆ ಹುಸಿಯೆಂದು ನಿತ್ಯನ
ನನ್ಯನಮಳಜ್ಞಾನರೂಪವೆ
ತನ್ನ ನಿಜವೆಂದರಿದು ತಾನಾಗಿರ್ದನಾ ದ್ರೋಣ (ದ್ರೋಣ ಪರ್ವ, ೧೮ ಸಂಧಿ, ೭೦ ಪದ್ಯ)

ತಾತ್ಪರ್ಯ:
ತನ್ನಲ್ಲಿ ಉಳಿದೆಲ್ಲವನ್ನೂ, ಉಳಿದೆಲ್ಲಕ್ಕೂ ಆತ್ಮನಾದ ತನ್ನ ಜೀವಾತ್ಮವನ್ನು ನೋಡಿ ತಾನು, ತನ್ನಿಂದ ಬೇರಾದುದೊಂದಾದ ಪರಮಾತ್ಮ, ಇವರೆಡಕ್ಕೂ (ಜೀವಾತ್ಮ, ಪರಮಾತ್ಮ) ಐಕ್ಯವೆಂಬ ಉಪಚಾರದ ಭಾವವನ್ನು ಅಲ್ಲಗಳೆದನು. ನಿತ್ಯನೂ ತನ್ನನ್ನು ಬಿಟ್ಟು ಅನ್ಯವೆಂಬುದಿಲ್ಲ, ಜ್ಞಾನವೇ ತಾನು ಎಂದು ಅರಿತು ಅನುಭವಿಸಿ ತಾನೇ ಆಗಿದ್ದನು.

ಅರ್ಥ:
ಇತರ: ಬೇರೆಯವ; ನೆರೆ: ಪಕ್ಕ, ಪಾರ್ಶ್ವ, ಸೇರು; ಈಕ್ಷಿಸು: ನೋಡು; ಅನ್ಯ: ಬೇರೆಯವ; ಐಕ್ಯ: ಸೇರು; ಉಪಚರಿತ: ಉಪಚಾರ ಮಾಡಲ್ಪಟ್ಟ; ಭಾವ: ಭಾವನೆ; ಹುಸಿ: ಸುಳ್ಳು; ನಿತ್ಯ: ಯಾವಾಗಲು; ಅಮಳ: ನಿರ್ಮಲ; ಜ್ಞಾನ: ಅರಿವು; ರೂಪ: ಆಕಾರ; ನಿಜ: ದಿಟ; ಅರಿ: ತಿಳಿ;

ಪದವಿಂಗಡಣೆ:
ತನ್ನೊಳ್+ಇತರವನ್+ಇತರದೊಳು +ನೆರೆ
ತನ್ನನ್+ಈಕ್ಷಿಸಿ +ತಾನು +ತನ್ನಿಂದ್
ಅನ್ಯವ್+ಎರಡರೊಳ್+ಐಕ್ಯವೆಂಬ್+ಉಪಚರಿತ +ಭಾವವನು
ತನ್ನೊಳಗೆ +ಹುಸಿಯೆಂದು +ನಿತ್ಯನನ್
ಅನ್ಯನ್+ಅಮಳ+ಜ್ಞಾನ+ರೂಪವೆ
ತನ್ನ +ನಿಜವೆಂದ್+ಅರಿದು +ತಾನಾಗಿರ್ದನಾ +ದ್ರೋಣ

ಅಚ್ಚರಿ:
(೧) ತನ್ನ, ತನ್ನೊಳು, ತನ್ನಿಂದ, ತಾನು, ತಾನಾಗಿರ್ದ – ಪದಗಳ ಬಳಕೆ

ಪದ್ಯ ೨೮: ಧರ್ಮಜನ ಮನಸ್ಸಿನ ಮಾತುಗಳಾವುದು?

ಸತ್ಯವೇ ತಾಯ್ ಮತ್ತೆ ಜ್ಞಾನವು
ನಿತ್ಯನಹ ಪಿತ ಧರ್ಮವನುಜನು
ಮಿತ್ರನೇ ಕಡು ದಯೆಯು ಶಾಂತಿಯೆ ಸತಿ ಕ್ಷಮೆಯೆಪುತ್ರ
ಅತ್ಯಧಿಕರಹರಾರುಮಂದಿಯು
ನಿತ್ಯ ನಿಜಬಾಂಧವರು ತನಗೆನೆ
ಸತ್ಯ ಮೂರುತಿಯೇರಿಸಿದನಾ ಫಲವನೊಮ್ಮೊಳನ (ಅರಣ್ಯ ಪರ್ವ, ೪ ಸಂಧಿ, ೨೮ ಪದ್ಯ)

ತಾತ್ಪರ್ಯ:
ಧರ್ಮಜನು ತನ್ನ ಮಾತನ್ನು ಮುಂದುವರೆಸುತ್ತಾ, ಸತ್ಯವೇ ತಾಯಿ, ಜ್ಞಾನವೇ ತಂದೆ, ಧರ್ಮವೇ ನಮ್ಮ ಒಡಹುಟ್ಟಿದವರು, ದಯೆಯೇ ಸ್ನೇಹಿತ, ಶಾಂತಿಯೇ ಪತ್ನಿ, ಕ್ಷಮೆಯೇ ಪುತ್ರ, ಈ ಆರು ಗುಣಗಳೇ ನಮಗೆ ನಿಜವಾದ ಸಂಬಂಧಿಕರು ಎಂದು ಹೇಳಲು ಶ್ರೀಕೃಷ್ಣನು ನೇರಳೇಯ ಹಣ್ಣನ್ನು ಒಂದು ಮೊಳ ಮೇಲಕ್ಕೇರಿಸಿದನು.

ಅರ್ಥ:
ಸತ್ಯ: ನಿಜ, ದಿಟ; ತಾಯಿ: ಮಾತೆ; ಜ್ಞಾನ: ತಿಳುವಳಿಕೆ, ಅರಿವು; ಪಿತ: ತಂದೆ; ಧರ್ಮ: ಧಾರಣೆ ಮಾಡಿದುದು, ನಿಯಮ; ಅನುಜ: ಸಹೋದರ; ಮಿತ್ರ: ಸ್ನೇಹಿತ; ಕಡು: ವಿಶೇಷ, ಅಧಿಕ; ದಯೆ: ಕೃಪೆ, ಕರುಣೆ; ಶಾಂತಿ: ನೆಮ್ಮದಿ; ಸತಿ: ಹೆಂಡತಿ; ಕ್ಷಮೆ: ಸೈರಣೆ, ತಾಳ್ಮೆ; ಪುತ್ರ: ಮಗ; ಅತ್ಯಧಿಕ: ಹೆಚ್ಚು; ಮಂದಿ: ಜನ; ಬಾಂಧವ: ನಂಟ, ಸಂಬಂಧಿಕ; ತನಗೆ: ಎನಗೆ; ಮೊಳ: ಮೊಳಕೈಯಿಂದ ಹಸ್ತದ ತುದಿಯವರೆಗಿನ ಅಳತೆ, ಎರಡು ಗೇಣು; ಫಲ: ಹಣ್ಣು; ಏರು: ಹತ್ತು, ಆರೋಹಿಸು;

ಪದವಿಂಗಡಣೆ:
ಸತ್ಯವೇ +ತಾಯ್ +ಮತ್ತೆ +ಜ್ಞಾನವು
ನಿತ್ಯನಹ+ ಪಿತ+ ಧರ್ಮವ್+ಅನುಜನು
ಮಿತ್ರನೇ +ಕಡು +ದಯೆಯು +ಶಾಂತಿಯೆ +ಸತಿ+ ಕ್ಷಮೆಯೆ+ಪುತ್ರ
ಅತ್ಯಧಿಕರಹರ್+ಆರು+ಮಂದಿಯು
ನಿತ್ಯ +ನಿಜಬಾಂಧವರು +ತನಗೆನೆ
ಸತ್ಯ+ ಮೂರುತಿ+ಏರಿಸಿದನಾ +ಫಲವನ್+ಒಮ್ಮೊಳನ

ಅಚ್ಚರಿ:
(೧) ಆರು ಗುಣಗಳು – ಸತ್ಯ, ಜ್ಞಾನ, ಧರ್ಮ, ದಯೆ, ಶಾಂತಿ, ಕ್ಷಮೆ
(೨) ಶ್ರೀಕೃಷ್ಣನನ್ನು ಸತ್ಯಮೂರುತಿ ಎಂದು ಕರೆದಿರುವುದು

ಪದ್ಯ ೫೭: ಪ್ರಾತಿಕಾಮಿಕನಿಗೆ ದ್ರೌಪದಿ ಯಾವ ಪ್ರಶ್ನೆಯನ್ನು ಕೇಳಲು ಹೇಳಿದಳು?

ಮುನ್ನ ತನ್ನನು ಸೋತ ಬಳಿಕಿನೊ
ಳೆನ್ನ ಸೋತರೆ ಸಲುವುದೇ ಸಂ
ಪನ್ನ ವಿಮಲ ಜ್ಞಾನರರಿದೀ ಪ್ರಶ್ನೆಗುತ್ತರವ
ಎನ್ನ ಮೆಚ್ಚಿಸಿ ಕೊಡಲು ತಾ ಬಹೆ
ನೆನ್ನು ಹೋಗೆನಲವನು ಭಯದಲಿ
ತನ್ನೊಳಗೆ ನಡುಗುತ್ತ ಬಂದನು ಕೌರವನ ಸಭೆಗೆ (ಸಭಾ ಪರ್ವ, ೧೫ ಸಂಧಿ, ೫೭ ಪದ್ಯ)

ತಾತ್ಪರ್ಯ:
ದ್ರೌಪದಿಯು ತನ್ನನ್ನ ಸೋತಿರುವ ಪ್ರಕ್ರಿಯೆ ಸರಿಯಾದುದೇ ಎಂದು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಯೋಚಿಸುವ ಸಾಮರ್ಥ್ಯ ಹೊಂದಿದ್ದಳು. ರಾಜನು ಮೊದಲು ತನ್ನನ್ನು ಸೋತು ನಂತರ ನನ್ನನ್ನು ಸೋತನಲ್ಲವೇ, ಇದು ಒಪ್ಪಿಗೆಯಾಗುವ ಮಾತೆ, ಉತ್ತಮ ಜ್ಞಾನ ಸಂಪನ್ನರು ಈ ಪ್ರಶ್ನೆಗೆ ನಾನು ಮೆಚ್ಚುವಂತೆ ಉತ್ತರಿಸಲಿ, ನಾನು ಸಭೆಗೆ ಬರುತ್ತೇನೆ, ನೀನು ಹೊರಡು ಎಂದು ಅಪ್ಪಣೆ ನೀಡಲು, ಪ್ರಾತಿಕಾಮಿಕನು ಭಯದಿಂದ ನಡುಗುತ್ತಾ ಕೌರವನ ಸಭೆಗೆ ಬಂದನು.

ಅರ್ಥ:
ಮುನ್ನ: ಮೊದಲು; ಸೋತು: ಪರಾಭವ; ಬಳಿಕ: ನಂತರ; ಸಲುವುದು: ಸರಿಯೇ, ಒಪ್ಪಿಗೆಯೇ; ಸಂಪನ್ನ: ಸಜ್ಜನ, ಸತ್ಪುರುಷ; ವಿಮಲ: ನಿರ್ಮಲ; ಜ್ಞಾನ: ತಿಳಿದವ; ಪ್ರಶ್ನೆ: ಸಂಶಯ, ಸಂದೇಹ; ಉತ್ತರ: ಪರಿಹಾರ; ಮೆಚ್ಚು: ಇಷ್ಟವಾಗು; ಕೊಡು: ನೀಡು; ಬಹೆ: ಬರುವೆ; ಹೋಗು: ತೆರಳು; ಭಯ: ಅಂಜಿಕೆ; ನಡುಗು: ಅದುರು, ನಡುಕ; ಬಂದನು: ಆಗಮಿಸು; ಸಭೆ: ಓಲಗ;

ಪದವಿಂಗಡಣೆ:
ಮುನ್ನ +ತನ್ನನು +ಸೋತ +ಬಳಿಕಿನೊಳ್
ಎನ್ನ +ಸೋತರೆ+ ಸಲುವುದೇ+ ಸಂ
ಪನ್ನ +ವಿಮಲ+ ಜ್ಞಾನರರಿದೀ+ ಪ್ರಶ್ನೆಗ್+ಉತ್ತರವ
ಎನ್ನ+ ಮೆಚ್ಚಿಸಿ+ ಕೊಡಲು +ತಾ +ಬಹೆನ್
ಎನ್ನು+ ಹೋಗ್+ಎನಲ್+ಅವನು+ ಭಯದಲಿ
ತನ್ನೊಳಗೆ +ನಡುಗುತ್ತ+ ಬಂದನು +ಕೌರವನ +ಸಭೆಗೆ

ಅಚ್ಚರಿ:
(೧) ಪ್ರಾತಿಕಾಮಿಕನ ಭಾವದ ಚಿತ್ರಣ – ಭಯದಲಿ ತನ್ನೊಳಗೆ ನಡುಗುತ್ತ ಬಂದನು ಕೌರವನ ಸಭೆಗೆ
(೨) ದ್ರೌಪದಿಯ ಪ್ರಶ್ನೆ – ಮುನ್ನ ತನ್ನನು ಸೋತ ಬಳಿಕಿನೊಳೆನ್ನ ಸೋತರೆ ಸಲುವುದೇ

ಪದ್ಯ ೨೯: ಯಾರು ಮನ್ನಣೆಗೆ ಅರ್ಹರು?

ತಾನಿದಿರು ಹಗೆ ಕೆಳೆ ವಿವೇಕ
ಜ್ಞಾನವಜ್ಞಾನಂಗಳಿಹಪರ
ಹಾನಿ ವೃದ್ಧಿಯ ಮಾರ್ಗದಲಿ ತಾನೇಕ ಚಿತ್ತದಲಿ
ದಾನ ಧರ್ಮ ಪರೋಪಕಾರ ವಿ
ಧಾನ ದೀಕ್ಷಾಕರ್ಮನಿಷ್ಠರು
ಮಾನನೀಯರಲೇ ಮಹೀಪತಿ ಕೇಳು ನೀನೆಂದ (ಉದ್ಯೋಗ ಪರ್ವ, ೪ ಸಂಧಿ, ೨೯ ಪದ್ಯ)

ತಾತ್ಪರ್ಯ:
ಜೀವಿತಾವದಿಯಲ್ಲಿ ನಾನು, ಇನ್ನೊಬ್ಬರು, ಶತ್ರು, ಮಿತ್ರ, ವಿವೇಕ, ಜ್ಞಾನ, ಅಜ್ಞಾನ, ಇಹ ಪರಲೋಕಗಳ ಹಾನಿ, ವೃದ್ಧಿ ಇವುಗಳಲ್ಲಿ ಒಂದೇ ಮನಸ್ಸಿನಿಂದ ದಾನ, ಧರ್ಮ, ಪರೋಪಕಾರ, ಸತ್ಕರ್ಮ, ದೀಕ್ಷೆ ನಿಷ್ಠೆಯಿಂದಿರುವವರು ಮನ್ನಣೆಗೆ ಪಾತ್ರರಾಗುತ್ತಾರೆ ಎಂದು ಸನತ್ಸುಜಾತರು ಧೃತರಾಷ್ಟ್ರನಿಗೆ ಹೇಳಿದರು.

ಅರ್ಥ:
ತಾನು: ನಾನು; ಇದಿರು: ಎದುರು; ಹಗೆ: ದ್ವೇಷ; ಕೆಳೆ:ಸ್ನೇಹ, ಗೆಳೆತನ, ಮೈತ್ರಿ; ವಿವೇಕ: ಯುಕ್ತಾಯುಕ್ತ ವಿಚಾರ; ಜ್ಞಾನ: ತಿಳಿವಳಿಕೆ, ಅರಿವು; ಅಜ್ಞಾನ: ಅರಿವಿಲ್ಲದಿರುವಿಕೆ, ಅವಿದ್ಯೆ; ಇಹಪರ: ಈ ಲೋಕ ಮತ್ತು ಪರಲೋಕ; ಹಾನಿ: ನಷ್ಟ; ವೃದ್ಧಿ: ಹೆಚ್ಚಳ, ಅಭ್ಯುದಯ; ಮಾರ್ಗ: ದಾರಿ; ಚಿತ್ತ:ಮನಸ್ಸು; ಏಕಚಿತ್ತ: ಒಂದರೆಡೆಗೆ ಮನಸ್ಸನ್ನು ಕೇಂದ್ರೀಕರಿಸುವುದು; ದಾನ: ನೀಡುವಿಕೆ; ಧರ್ಮ: ಸನ್ನಡತೆ; ಪರೋಪಕಾರ: ಇತರರಿಗೆ ಸಹಾಯ; ವಿಧಾನ: ರೀತಿ; ದೀಕ್ಷೆ: ವ್ರತ, ನಿಯಮ; ಕರ್ಮ: ಕಾರ್ಯ; ನಿಷ್ಠ: ಶ್ರದ್ಧೆಯುಳ್ಳವನು; ಮಾನನೀಯರು: ಗೌರವಾನ್ವಿತರು; ಮಹೀಪತಿ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ತಾನ್+ಇದಿರು +ಹಗೆ +ಕೆಳೆ+ ವಿವೇಕ
ಜ್ಞಾನವ್+ಅಜ್ಞಾನಂಗಳ್+ಇಹಪರ
ಹಾನಿ +ವೃದ್ಧಿಯ +ಮಾರ್ಗದಲಿ +ತಾನೇಕ +ಚಿತ್ತದಲಿ
ದಾನ +ಧರ್ಮ +ಪರೋಪಕಾರ+ ವಿ
ಧಾನ +ದೀಕ್ಷಾ+ಕರ್ಮ+ನಿಷ್ಠರು
ಮಾನನೀಯರಲೇ +ಮಹೀಪತಿ +ಕೇಳು +ನೀನೆಂದ

ಅಚ್ಚರಿ:
(೧) ತಾನು, ಇದಿರು; ಹಗೆ,ಕಳೆ; ಜ್ಞಾನ, ಅಜ್ಞಾನ; ಇಹ, ಪರ; ಹಾನಿ, ವೃದ್ಧಿ – ವಿರುದ್ಧ ಪದಗಳ ಬಳಕೆ
(೨) ದಾನ, ಧರ್ಮ, ಪರೋಪಕಾರ – ಮೂರರಲ್ಲಿ ನಿಷ್ಠೆ ಹೊಂದಿರುವವರು ಮಾನನೀಯರು