ಪದ್ಯ ೮: ಸಂಜಯನು ಯಾರ ನಡಿಗೆಯನ್ನು ನೋಡಿದನು – ೧?

ಅರಸ ಕೇಳೈ ಸಂಜಯನು ಬರ
ಬರಲು ಕಂಡನು ದೂರದಲಿ ನಿರಿ
ಗರುಳ ಕಾಲ್ದೊಡಕುಗಳ ಖಂಡದ ಜಿಗಿಯ ಚಾರುಗಳ
ಕರಿಗಳೊಟ್ಟಿಲನೇರಿಳಿದು ಪೈ
ಸರಿಸಿ ಮಿದುಳಿನ ಚೋರು ಜೊಂಡಿನ
ತೊರಳೆಯಲಿ ದಡದಡಿಸಿ ಜಾರುತ ಬೀಳುತೇಳುವನ (ಗದಾ ಪರ್ವ, ೩ ಸಂಧಿ, ೮ ಪದ್ಯ)

ತಾತ್ಪರ್ಯ:
ಜನಮೇಜಯ ರಾಜ ಕೇಳು, ಸಂಜಯನು ಬರ ಬರುತ್ತಾ ದೂರದಲ್ಲಿ ಕರುಳುಗಳು ಕಾಲಿಗೆ ತೊಡಕುತ್ತಾ ಇರಲು, ಮಾಂಸಖಂಡಗಳ ಅಂಟಿನಲ್ಲಿ ಜಾರುತ್ತಾ, ಆನೆಗಳ ರಾಶಿಗಳನ್ನು ಹತ್ತಿಳಿದು ಕೆಳಕ್ಕೆ ಬೀಳುತ್ತಾ ಮಿದುಳಿನ ಜೊಂಡು ಗುಲ್ಮಗಳನ್ನು ತುಳಿದು ವೇಗವಾಗಿ ಜಾರುತ್ತಾ, ಬೀಳುತ್ತಾ, ಏರುತ್ತಾ ಇದ್ದವನೊಬ್ಬನನ್ನು ನೋಡಿದನು.

ಅರ್ಥ:
ಅರಸ: ರಾಜ; ಕೇಳು: ಆಲಿಸು; ಬರಲು: ಆಗಮಿಸು; ಕಂಡು: ನೋಡು; ದೂರ: ಬಹಳ ಅಂತರ; ನಿರಿ: ನೆರಿಗೆಯಂತಿರುವ ಕರುಳು; ಕಾಲು: ಪಾದ; ತೊಡಕು: ಸಿಕ್ಕಿಕೊಳ್ಳು; ಖಂಡ: ಚೂರು; ಜಿಗಿ: ಅಂಟು; ಜಾರು: ಬೀಳು; ಕರಿ: ಆನೆ; ಒಟ್ಟು: ಗುಂಪು; ಏರು: ಮೇಲೆ ಹತ್ತು; ಇಳಿ: ಕೆಳಕ್ಕೆ ಬಂದು; ಪೈಸರಿಸು: ಹಿಮ್ಮೆಟ್ಟು, ಹಿಂಜರಿ; ಮಿದುಳು: ಮಸ್ತಿಷ್ಕ; ಜೋರು: ಹೆಚ್ಚಳ; ಜೊಂಡು: ತಲೆಯ ಹೊಟ್ಟು; ತೊರಳೆ: ಗುಲ್ಮ, ಪ್ಲೀಹ; ದಡದಡಿಸು: ವೇಗವಾಗಿ ನಡೆ; ಜಾರು: ಬೀಳು;

ಪದವಿಂಗಡಣೆ:
ಅರಸ +ಕೇಳೈ +ಸಂಜಯನು +ಬರ
ಬರಲು +ಕಂಡನು +ದೂರದಲಿ+ ನಿರಿ
ಗರುಳ +ಕಾಲ್ದೊಡಕುಗಳ+ ಖಂಡದ+ ಜಿಗಿಯ+ ಚಾರುಗಳ
ಕರಿಗಳ್+ಒಟ್ಟಿಲನ್+ಏರಿಳಿದು +ಪೈ
ಸರಿಸಿ +ಮಿದುಳಿನ +ಚೋರು +ಜೊಂಡಿನ
ತೊರಳೆಯಲಿ +ದಡದಡಿಸಿ+ ಜಾರುತ +ಬೀಳುತೇಳುವನ

ಅಚ್ಚರಿ:
(೧) ಚೋರು ಜೊಂಡಿನ, ಜಿಗಿಯ ಚಾರುಗಳ – ಪದಗಳ ಬಳಕೆ
(೨) ಬರಬರಲು, ದಡದಡಿಸಿ – ಪದಗಳ ಬಳಕೆ

ಪದ್ಯ ೫೨: ಯುದ್ಧದಲ್ಲಿ ಸೈನಿಕರ ಸ್ಥಿತಿ ಹೇಗಿತ್ತು?

ಏರುವಡೆದರು ಹೊಕ್ಕವರು ಕೈ
ದೋರಿ ಕಳಕಳಕಾರರಸುಗಳ
ಕಾರಿದರು ಕೈಮಾಡಿಕೊಂಡರು ಸುರರ ಕೋಟೆಗಳ
ತಾರು ಥಟ್ಟಿನೊಳಟ್ಟಿ ಮೈಮಸೆ
ಸೂರೆಕಾರರು ಮಿದುಳ ಜೊಂಡಿನ
ಜೋರುಗಳ ಬೀರಿದವು ಬೇತಾಳರಿಗೆ ಭಟನಿಕರ (ದ್ರೋಣ ಪರ್ವ, ೧ ಸಂಧಿ, ೫೨ ಪದ್ಯ)

ತಾತ್ಪರ್ಯ:
ಯುದ್ಧಕ್ಕೆ ಹೊಕ್ಕವರು ಅಬ್ಬರದಿಂದ ಕಾದಾಡುತ್ತಾ ಸ್ವರ್ಗ ಲೋಕಕ್ಕೆ ಹೋದರು. ಭಟರು ಕರುಣೆಯಿಲ್ಲದೆ ಹೊಕ್ಕಿರಿದು ಗಾಯಗೊಂಡು ಶತ್ರುಗಳ ತಲೆಗಳನ್ನೊಡೆದು ಮಿದುಳ ಜೋಂಡುಗಳನ್ನು ಬೇತಾಳಗಳಿಗೆ ಕೊಟ್ಟರು.

ಅರ್ಥ:
ಏರು: ಹತ್ತು; ಅಡೆ: ಹೊಂದು, ಒದಗು; ಹೊಕ್ಕು: ಸೇರು; ಕೈ:ಹಸ್ತ; ದೋರು: ತೋರಿಸು; ಕಳಕಳ: ವ್ಯಥೆ; ಅಸು: ಪ್ರಾಣ; ಸುರರು: ದೇವತೆ; ಕೋಟೆ: ಊರಿನ ರಕ್ಷಣೆಗಾಗಿ ಕಟ್ಟಿದ ಗೋಡೆ; ತಾರು: ಒಣಗು, ಸೊರಗು; ಥಟ್ಟು: ಗುಂಪು, ಸೈನ್ಯ; ಅಟ್ಟು: ಬೆನ್ನಟ್ಟುವಿಕೆ, ಓಡಿಸು; ಮೈ: ತನು; ಮಸೆ: ಹರಿತಗೊಳಿಸು; ಸೂರೆ: ಕೊಳ್ಳೆ, ಲೂಟಿ; ಮಿದುಳು:ಮಸ್ತಿಷ್ಕ; ಜೊಂಡು: ತಲೆಯ ಹೊಟ್ಟು; ಜೋರು: ವೇಗ; ಬೀರು: ಒಗೆ, ಎಸೆ, ತೂರು; ಬೇತಾಳ: ಭೂತ; ಭಟ: ಸೈನಿಕ; ನಿಕರ: ಗುಂಪು;

ಪದವಿಂಗಡಣೆ:
ಏರುವಡೆದರು +ಹೊಕ್ಕವರು+ ಕೈ
ದೋರಿ +ಕಳಕಳಕಾರರ್+ಅಸುಗಳ
ಕಾರಿದರು+ ಕೈಮಾಡಿಕೊಂಡರು+ ಸುರರ+ ಕೋಟೆಗಳ
ತಾರು+ ಥಟ್ಟಿನೊಳ್+ಅಟ್ಟಿ +ಮೈಮಸೆ
ಸೂರೆಕಾರರು+ ಮಿದುಳ +ಜೊಂಡಿನ
ಜೋರುಗಳ +ಬೀರಿದವು +ಬೇತಾಳರಿಗೆ+ ಭಟ+ನಿಕರ

ಅಚ್ಚರಿ:
(೧) ಸತ್ತರು ಎಂದು ಹೇಳುವ ಪರಿ – ಕಳಕಳಕಾರರಸುಗಳಕಾರಿದರು ಕೈಮಾಡಿಕೊಂಡರು ಸುರರ ಕೋಟೆಗಳ

ಪದ್ಯ ೭೦: ಸೇವಣ ರಾಜರು ಹೇಗೆ ಆಕ್ರಮಣ ಮಾಡಿದರು?

ಉರುಬಿ ಹೊಯಿದರು ಕೈದಣಿಯೆ ಹೊ
ಕ್ಕರಗಿದರು ನಿಪ್ಪಸರದಲಿ ಮು
ಕ್ಕುರಿಕಿದರು ತಲೆಮಿದುಳ ಜೊಂಡಿನ ಜುರಿತ ಜೋಡುಗಳ
ತರಿದು ಬಿಸುಟರು ಖಗನಿಕರಕಾ
ರ್ದಿರಿದು ಕಾಲನ ಬನಕೆ ರಕುತದ
ಕೆರೆಯ ತೂಬೆತ್ತಿದರು ಸೇವಣ ರಾಯ ರಾವುತರು (ಭೀಷ್ಮ ಪರ್ವ, ೪ ಸಂಧಿ, ೭೦ ಪದ್ಯ)

ತಾತ್ಪರ್ಯ:
ಸೇವಣ ರಾವುತರು ರಭಸದಿಂದ ಮುನ್ನುಗ್ಗಿ ಹೊಯ್ದರು. ಅತಿಶಯವಾಗಿ ಸುತ್ತೆತ್ತಲೂ ನುಗ್ಗಿ ಶತ್ರುಗಳ ಮಿದುಳುಗಳ ಜೊಂಡು ಹೊರಬರುವಂತೆ ರಕ್ತ ಹರಿಯುವಂತೆ ಹೊಡೆದರು. ಎದೆಗುಂದದೆ ಶತ್ರುಗಳನ್ನು ಎದುರಿಸಿ ಇರಿದು ಅವರನ್ನು ಕಡಿದು ರಣ ಹದ್ದುಗಳಿಗೆ ಕೊಟ್ಟರು. ಯಮನ ಅರಣ್ಯವನ್ನು ಬೆಳೆಸಲು ರಕ್ತದ ಕೆರೆಯ ತೂಬನ್ನೆತ್ತಿದರು.

ಅರ್ಥ:
ಉರುಬು: ಅತಿಶಯವಾದ ವೇಗ; ಹೊಯಿ: ಹೊಡೆ; ಕೈ: ಹಸ್ತ; ದಣಿ: ಆಯಾಸ; ಹೊಕ್ಕು: ಸೇರು; ಎರಗು: ಬಾಗು; ನಿಪ್ಪಸರ: ವೇಗ, ಶೀಘ್ರತೆ; ಮುಕ್ಕು: ನಾಶಮಾಡು; ತಲೆ: ಶಿರ; ಮಿದುಳು: ತಲೆಯ ಭಾಗ; ಜೋಂಡು: ತಲೆಯ ಹೊಟ್ಟು; ಜುರಿತ: ರಕ್ತಸ್ರಾವ; ಜೋಡು: ಕವಚ, ಪಾದರಕ್ಷೆ; ತರಿ: ಕಡಿ, ಕತ್ತರಿಸು; ಬಿಸುಟು: ಹೊರಹಾಕು; ಖಗ: ಪಕ್ಷಿ; ನಿಕರ: ಗುಂಪು; ಇರಿ: ಚುಚ್ಚು; ಕಾಲ: ಯಮ; ಬನ: ಅಡವಿ; ರಕುತ: ನೆತ್ತರು; ಕೆರೆ: ಸರೋವರ; ತೂಬು: ನೀರು ಗಂಡಿ; ರಾಯ: ರಾಜ; ರಾವುತ: ಅಶ್ವಾರೋಹಿ; ಉರುಕು: ಕಂಪಿಸು;

ಪದವಿಂಗಡಣೆ:
ಉರುಬಿ +ಹೊಯಿದರು +ಕೈದಣಿಯೆ +ಹೊಕ್ಕ್
ಎರಗಿದರು +ನಿಪ್ಪಸರದಲಿ +ಮುಕ್ಕ್
ಉರಿಕಿದರು+ ತಲೆ+ಮಿದುಳ +ಜೊಂಡಿನ+ ಜುರಿತ+ ಜೋಡುಗಳ
ತರಿದು+ ಬಿಸುಟರು+ ಖಗ+ನಿಕರಕಾರ್
ಇರಿದು +ಕಾಲನ +ಬನಕೆ +ರಕುತದ
ಕೆರೆಯ +ತೂಬೆತ್ತಿದರು +ಸೇವಣ +ರಾಯ +ರಾವುತರು

ಅಚ್ಚರಿ:
(೧) ಜ ಕಾರದ ತ್ರಿವಳಿ ಪದ – ಜೊಂಡಿನ ಜುರಿತ ಜೋಡುಗಳ