ಪದ್ಯ ೧೫: ಚಂದ್ರವಂಶಕ್ಕೆ ಕೆಟ್ಟ ಹೆಸರೇಕೆ ಬರುತ್ತದೆ?

ಜಾತಿಮಾತ್ರದಮೇಲೆ ಬಂದ
ಖ್ಯಾತಿವಿಖ್ಯಾತಿಗಳು ನಮಗೆನೆ
ಜಾತರಾದೆವು ನಾವು ನಿರ್ಮಳ ಸೋಮವಂಶದಲಿ
ಭೀತಿಯಲಿ ನೀ ನೀರ ಹೊಕ್ಕಡೆ
ಮಾತು ತಾಗದೆ ತಮ್ಮನಕಟಾ
ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ (ಗದಾ ಪರ್ವ, ೫ ಸಂಧಿ, ೧೫ ಪದ್ಯ)

ತಾತ್ಪರ್ಯ:
ನಮ್ಮ ಹುಟ್ಟಿನಿಂದ ಬಂದ ಕೀರ್ತಿ ಪ್ರಸಿದ್ಧಿಗಳು ನಮಗೆ ಬೇಕಲ್ಲವೇ? ಹಾಗಾದರೆ ನಾವು ಹುಟ್ಟಿದ್ದು ನಿರ್ಮಲವಾದ ಚಂದ್ರವಂಶದಲ್ಲಿ. ನೀನು ಹೆದರಿ ಓಡಿ ನೀರಿನಲ್ಲಿ ಅಡಗಿಕೋಂಡರೆ ನಮಗೆ ಕೆಟ್ಟ ಹೆಸರು ಬರುವುದಿಲ್ಲವೇ? ನಾಡಾಡಿಗಳ ಕೈಗೆ ಬಾಯಿಗೆ ನೀನು ಗಾಸವಾಗಿ ಕೆಟ್ಟ ಹೆಸರು ಹೊತ್ತುಕೊಂಡಂತಾಗುವುದಿಲ್ಲವೇ ಎಂದು ಧರ್ಮಜನು ಕೌರವನಿಗೆ ಹೇಳಿದನು.

ಅರ್ಥ:
ಜಾತಿ: ಕುಲ; ಬಂದ: ಪಡೆದ; ಖ್ಯಾತಿ: ಪ್ರಸಿದ್ಧಿ; ವಿಖ್ಯಾತಿ: ಪ್ರಸಿದ್ಧಿ, ಕೀರ್ತಿ; ಜಾತ: ಹುಟ್ಟಿದುದು; ನಿರ್ಮಳ: ಶುದ್ಧ; ಸೋಮ: ಚಂದ್ರ; ವಂಶ: ಕುಲ; ಭೀತಿ: ಭಯ; ಹೊಕ್ಕು: ಸೇರು; ಮಾತು: ನುಡಿ; ತಾಗು: ಮುಟ್ಟು; ಅಕಟ: ಅಯ್ಯೋ; ಬೂತು: ಕುಚೋದ್ಯ, ಕುಚೇಷ್ಟೆ; ಬಂದೈ: ಬರೆಮಾಡು; ತಂದೆ: ಅಪ್ಪ; ರಾಯ: ರಾಜ;

ಪದವಿಂಗಡಣೆ:
ಜಾತಿಮಾತ್ರದಮೇಲೆ +ಬಂದ
ಖ್ಯಾತಿ+ವಿಖ್ಯಾತಿಗಳು +ನಮಗ್+ಎನೆ
ಜಾತರಾದೆವು +ನಾವು +ನಿರ್ಮಳ +ಸೋಮ+ವಂಶದಲಿ
ಭೀತಿಯಲಿ +ನೀ +ನೀರ +ಹೊಕ್ಕಡೆ
ಮಾತು +ತಾಗದೆ+ ತಮ್ಮನ್+ಅಕಟಾ
ಬೂತುಗಳ+ ಕೈಬಾಯ್ಗೆ +ಬಂದೈ +ತಂದೆ +ಕುರುರಾಯ

ಅಚ್ಚರಿ:
(೧) ಕೌರವನ ಸ್ಥಿತಿಯನ್ನು ವರ್ಣಿಸುವ ಪರಿ – ಬೂತುಗಳ ಕೈಬಾಯ್ಗೆ ಬಂದೈ ತಂದೆ ಕುರುರಾಯ

ಪದ್ಯ ೩೩: ದುರ್ಯೋಧನನು ತನಗೇನು ಬೇಕು ಎಂದು ಹೇಳಿದನು?

ಖಾತಿ ಕಂದದು ಮನದ ಧೈರ್ಯದ
ಧಾತು ಕುಂದದು ಲಜ್ಜೆಯಭಿಮತ
ಜಾತಿಗೆಡದು ವಿರೋಧ ಬಿಡದು ಯುಧಿಷ್ಠಿರಾದ್ಯರಲಿ
ಏತಕಿದು ನಿನ್ನೀ ಪ್ರಳಾಪ ವಿ
ಧೂತರಿಪು ಕುರುರಾಯನೆಂಬೀ
ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ (ಗದಾ ಪರ್ವ, ೩ ಸಂಧಿ, ೩೩ ಪದ್ಯ)

ತಾತ್ಪರ್ಯ:
ಸಂಜಯ, ನನ್ನ ಕೋಪ ಮಾಸಿಲ್ಲ, ಮನಸ್ಸಿನ ಧೈರ್ಯದ ಶಕ್ತಿ ಸಾಮರ್ಥ್ಯಗಳು ಮಾಸಿಲ್ಲ. ನಾಚಿಕೆಪಡುವ ಇಲ್ಲವೇ ಇಲ್ಲ. ಯುಧಿಷ್ಠಿರಾದಿ ಪಾಂಡವರಲ್ಲಿ ವಿರೋಧ ಹೋಗಿಲ್ಲ. ನೀನೇಕೆ ಸುಮ್ಮನೆ ಅಳುತ್ತಿರುವೆ? ಕೌರವನು ಶತ್ರುಗಳನ್ನು ಅಲುಗಾಡಿಸಿ ಕೊಲ್ಲಬಲ್ಲನು ಎಂಬ ಕೀರ್ತಿ ನನಗೆ ಬೇಕು. ಬೇರೆಯ ರಾಜ್ಯವನ್ನು ನಾನೊಲ್ಲೆ ಎಂದನು.

ಅರ್ಥ:
ಖಾತಿ: ಕೋಪ, ಕ್ರೋಧ; ಕಂದು: ಮಸಕಾಗು; ಮನ: ಮನಸ್ಸು; ಧೈರ್ಯ: ಎದೆಗಾರಿಕೆ, ಕೆಚ್ಚು; ಧಾತು: ತೇಜಸ್ಸು; ಲಜ್ಜೆ: ನಾಚಿಕೆ, ಸಿಗ್ಗು; ಅಭಿಮತ: ಅಭಿಪ್ರಾಯ; ಜಾತಿ: ಕುಲ; ಕೆಡು: ಇಲ್ಲವಾಗು, ಸೋಲು; ವಿರೋಧ: ತಡೆ, ಅಡ್ಡಿ, ವೈರತ್ವ; ಬಿಡು: ತೊರೆ, ತ್ಯಜಿಸು; ಆದಿ: ಮುಂತಾದ; ಪ್ರಳಾಪ: ಪ್ರಲಾಪ, ದುಃಖ; ವಿಧೂತ: ಅಲುಗಾಡುವ, ಅಲ್ಲಾಡುವ; ರಿಪು: ವೈರಿ; ಖ್ಯಾತಿ: ಪ್ರಸಿದ್ಧಿ, ಹೆಸರುವಾಸಿ; ಬೇರೆ: ಅನ್ಯ;

ಪದವಿಂಗಡಣೆ:
ಖಾತಿ +ಕಂದದು +ಮನದ +ಧೈರ್ಯದ
ಧಾತು +ಕುಂದದು +ಲಜ್ಜೆ+ಅಭಿಮತ
ಜಾತಿಗೆಡದು+ ವಿರೋಧ +ಬಿಡದು +ಯುಧಿಷ್ಠಿರಾದ್ಯರಲಿ
ಏತಕಿದು +ನಿನ್ನೀ +ಪ್ರಳಾಪ +ವಿ
ಧೂತರಿಪು +ಕುರುರಾಯನ್+ಎಂಬೀ
ಖ್ಯಾತಿಯಲ್ಲದೆ +ಬೇರೆ +ರಾಜ್ಯವನ್ನೊಲ್ಲೆ +ನಾನೆಂದ

ಅಚ್ಚರಿ:
(೧) ದುರ್ಯೋಧನನ ವೀರನುಡಿ – ಕುರುರಾಯನೆಂಬೀ ಖ್ಯಾತಿಯಲ್ಲದೆ ಬೇರೆ ರಾಜ್ಯವನ್ನೊಲ್ಲೆ ನಾನೆಂದ

ಪದ್ಯ ೧೧: ದ್ರೋಣನು ಸಮಸಪ್ತಕರನ್ನು ಹೇಗೆ ಹೊಗಳಿದನು?

ಪೂತು ಪಾಯಿಕು ತತ್ತ ಹೊತ್ತಿನೊ
ಳಾತು ಕೊಂಬವರಾರು ಪಾರ್ಥಿವ
ಜಾತಿಯಲಿ ರಣ ದಿಟ್ಟರುಂಟೇ ನಿಮ್ಮ ಹೋಲಿಸಲು
ಸೋತುದರಿಬಲ ಹೋಗೆನುತ ಮು
ಯ್ಯಾಂತು ಮನ್ನಿಸಿ ಹೊನ್ನ ಬಟ್ಟಲೊ
ಳಾತಗಳಿಗೊಲಿದಿತ್ತನೈ ಕರ್ಪುರದ ವೀಳೆಯವ (ದ್ರೋಣ ಪರ್ವ, ೪ ಸಂಧಿ, ೧೧ ಪದ್ಯ)

ತಾತ್ಪರ್ಯ:
ದ್ರೋಣನು, ಭಲೇ ಸರಿಯಾದ ಸಮಯದಲ್ಲಿ ನಿಮ್ಮಂತೆ ಸಹಾಯಕ್ಕೆ ನಿಲ್ಲುವವರು ಯಾರಿದ್ದಾರೆ. ನಿಮ್ಮಂತಹ ದಿಟ್ಟರು ಯಾರಿದ್ದಾರೆ. ಶತ್ರುಸೈನ್ಯ ಸೋತು ಹೋಯಿತು ಎಂದು ಅವರನ್ನು ಮನ್ನಿಸಿ ಬಂಗಾರದ ಬಟ್ಟಲಿನಲ್ಲಿ ಕರ್ಪೂರ ವೀಳೆಯವನ್ನು ಕೊಟ್ಟನು.

ಅರ್ಥ:
ಪೂತು: ಹೊಗಳುವ ನುಡಿ; ತತ್ತ: ಸರಿಯಾದ ಸಮಯ; ಹೊತ್ತು: ಉಂಟಾಗು, ಒದಗು; ಆತು: ಹೊಂದಿಕೊಂಡು, ಧರಿಸು; ಪಾರ್ಥಿವ: ಭೌತಿಕವಾದುದು; ಜಾತಿ: ಕುಲ; ರಣ: ಯುದ್ಧ; ದಿಟ್ಟ: ಧೀರ; ಹೋಲಿಸು: ತುಲನೆಮಾಡು; ಸೋತು: ಪರಾಭವ; ಅರಿ: ವೈರಿ; ಬಲ: ಸೈನ್ಯ; ಮುಯಾನು: ಭುಜವನ್ನು ಕೊಡು; ಮನ್ನಿಸು: ಗೌರವಿಸು; ಹೊನ್ನ: ಚಿನ್ನ; ಬಟ್ಟಲು: ಪಾತ್ರೆ; ವೀಳೆ: ತಾಂಬೂಲ; ಕರ್ಪುರ: ಸುಗಂಧದ ದ್ರವ್ಯ;

ಪದವಿಂಗಡಣೆ:
ಪೂತು +ಪಾಯಿಕು +ತತ್ತ +ಹೊತ್ತಿನೊಳ್
ಆತು +ಕೊಂಬವರಾರು +ಪಾರ್ಥಿವ
ಜಾತಿಯಲಿ +ರಣ+ ದಿಟ್ಟರುಂಟೇ +ನಿಮ್ಮ +ಹೋಲಿಸಲು
ಸೋತುದ್+ಅರಿಬಲ+ ಹೋಗೆನುತ +ಮು
ಯ್ಯಾಂತು +ಮನ್ನಿಸಿ +ಹೊನ್ನ +ಬಟ್ಟಲೊಳ್
ಆತಗಳಿಗ್+ಒಲಿದಿತ್ತನೈ+ ಕರ್ಪುರದ+ ವೀಳೆಯವ

ಪದ್ಯ ೨೦: ಕರ್ಣನೇಕೆ ಬೇಸರಪಟ್ಟನು?

ಪೂತು ದೈವವೆ ಭೀಮಸೇನನ
ಘಾತಿಯಲಿ ಸೊಪ್ಪಾದೆನೈ ಸುಡ
ಲೇತಕೀ ಧನುವೇತಕೀ ದಿವ್ಯಾಸ್ತ್ರನಿಕರಗಳು
ಜಾತಿ ನಾನೆಂದೆನ್ನನಗ್ಗಿಸಿ
ಭೂತಳಾಧಿಪ ಸಾಕಿದನು ತಾ
ನೇತರಿಂದುಪಕಾರಿ ಎಂದನು ಸುಯ್ದು ಕಲಿಕರ್ಣ (ಕರ್ಣ ಪರ್ವ, ೧೩ ಸಂಧಿ, ೨೦ ಪದ್ಯ)

ತಾತ್ಪರ್ಯ:
ಭೀಮನು ದುರ್ಯೋಧನನ ತಮ್ಮಂದಿರನ್ನು ಕೊಂದ ಸುದ್ದಿಯನ್ನು ಕೇಳಿ ಅವಮಾನದಿಂದ ಕುದಿಯುತ್ತಾ, ಭಲೇ ವಿಧಿಯೇ ಭೀಮನ ಹೊಡೆತದಿಂದ ನಾನು ಬಲಹೀನನಾದೆ, ಈ ಬಿಲ್ಲು, ಈ ದಿವ್ಯಾಸ್ತ್ರಗಳೀದ್ದರೂ ಏನು ಫಲ? ಇವನ್ನು ಸುಡಬೇಕು, ಉತ್ತಮ ಜಾತಿಯವನೆಂದು ನನ್ನನ್ನು ಮೇಲೆತ್ತಿ ಸಾಕಿದ ಕೌರವನಿಗೆ ನಾನು ಮಾಡಿದ ಉಪಕಾರವಾದರೂ ಏನು? ಎಂದು ಕರ್ಣನು ನಿಟ್ಟುಸಿರು ಬಿಟ್ಟನು.

ಅರ್ಥ:
ಪೂತು: ಭಲೇ, ಭೇಷ್; ದೈವ: ಭಗವಂತ; ಘಾತ: ಹೊಡೆತ, ಪೆಟ್ಟು; ಸೊಪ್ಪು: ಕುಗ್ಗಿದ ಸ್ಥಿತಿ; ಸುಡು: ದಹಿಸು; ಧನು: ಧನಸ್ಸು; ದಿವ್ಯಾಸ್ತ್ರ: ಶ್ರೇಷ್ಠವಾದ ಆಯುಧಗಳು; ನಿಕರ: ಗುಂಪು; ಜಾತಿ: ಕುಲ; ಅಗ್ಗ: ಶ್ರೇಷ್ಠ; ಭೂತಳಾಧಿಪ: ರಾಜ; ಸಾಕು: ಸಲಹು; ಉಪಕಾರ: ಸಹಾಯ; ಸುಯ್ದು: ನಿಟ್ಟುಸಿರು; ಕಲಿ: ಶೂರ;

ಪದವಿಂಗಡಣೆ:
ಪೂತು +ದೈವವೆ +ಭೀಮ+ಸೇನನ
ಘಾತಿಯಲಿ +ಸೊಪ್ಪಾದೆನೈ +ಸುಡಲ್
ಏತಕೀ+ ಧನುವ್+ಏತಕೀ +ದಿವ್ಯಾಸ್ತ್ರ+ನಿಕರಗಳು
ಜಾತಿ +ನಾನೆಂದ್+ಎನ್ನನ್+ಅಗ್ಗಿಸಿ
ಭೂತಳಾಧಿಪ+ ಸಾಕಿದನು+ ತಾನ್
ಏತರಿಂದ್+ಉಪಕಾರಿ +ಎಂದನು +ಸುಯ್ದು +ಕಲಿಕರ್ಣ

ಅಚ್ಚರಿ:
(೧) ಘಾತಿ, ಜಾತಿ – ಪ್ರಾಸ ಪದ
(೨) ಏತಕೀ – ೨ ಬಾರಿ ಬಳಕೆ
(೩) ಕೃತಜ್ಞತೆಯನ್ನು ತೋರುವ ಮಾತು – ಜಾತಿ ನಾನೆಂದೆನ್ನನಗ್ಗಿಸಿ ಭೂತಳಾಧಿಪ ಸಾಕಿದನು