ಪದ್ಯ ೫: ಭೀಮ ದುರ್ಯೊಧನರ ಗದಾಯುದ್ಧವನ್ನು ಯಾರು ಹೇಗೆ ಹೊಗಳಿದರು?

ಬೆರಳ ತೂಗಿದನಡಿಗಡಿಗೆ ಹಲ
ಧರನುದಗ್ರ ಗದಾ ವಿಧಾನಕೆ
ಶಿರವನೊಲೆದನು ಶೌರಿ ಮಿಗೆ ಮೆಚ್ಚಿದನು ಯಮಸೂನು
ವರ ಗದಾಯುಧ ವಿವಿಧ ಸತ್ವಕೆ
ಪರಮಜೀವವಿದೆಂದನರ್ಜುನ
ನರರೆ ಮಝರೇ ರಾವು ಜಾಗೆಂದುದು ಭಟವ್ರಾತ (ಗದಾ ಪರ್ವ, ೭ ಸಂಧಿ, ೫ ಪದ್ಯ)

ತಾತ್ಪರ್ಯ:
ಬಲರಾಮನು ಅವರಿಬ್ಬರ ಗದಾಯುದ್ಧದ ವಿಧಾನವನ್ನು ನೋಡಿ, ಮೆಚ್ಚಿ, ಅವರಿಟ್ಟ ಒಂದೊಂದು ಹೆಜ್ಜೆಗೂ ಬೆರಳನ್ನು ತೂಗಿದನು. ಶ್ರೀಕೃಷ್ಣನು ಸಹ ಮೆಚ್ಚಿ ತಲೆಯಾಡಿಸಿದನು. ಯುಧಿಷ್ಠಿರನು ಅತಿಶಯವಾಗಿ ಮೆಚ್ಚಿದನು. ಅರ್ಜುನನು ಗದಾಯುದ್ಧದ ಹಲವು ವಿಧದ ರೀತಿಗಳಿಗೆ ಇದು ಭೂಷಣವೆಂದು ಹೊಗಳಿದನು. ಪರಿವಾರದ ಯೋಧರು ಅರರೇ, ಭಲೇ, ರಾವು, ಜಾಗು ಎಂದು ಕೊಂಡಾಡಿದರು.

ಅರ್ಥ:
ಬೆರಳು: ಅಂಗುಲಿ; ತೂಗು: ಅಲ್ಲಾಡಿಸು; ಅಡಿಗಡಿಗೆ: ಹೆಜ್ಜೆ ಹೆಜ್ಜೆ; ಹಲಧರ: ಬಲರಾಮ; ಉದಗ್ರ: ವೀರ, ಶೂರ; ಗದೆ: ಮುದ್ಗರ; ವಿಧಾನ: ರೀತಿ; ಶಿರ: ತಲೆ; ಒಲೆ: ತೂಗಾಡು; ಶೌರಿ: ಕೃಷ್ಣ; ಮಿಗೆ: ಮತ್ತು, ಅಧಿಕ; ಮೆಚ್ಚು: ಇಷ್ಟಪಡು; ಸೂನು: ಮಗ; ವರ: ಶ್ರೇಷ್ಠ; ವಿವಿಧ: ಹಲವಾರು; ಸತ್ವ: ಸಾರ; ಪರಮ: ಶ್ರೇಷ್ಠ; ಜೀವ: ಪ್ರಾಣ; ಅರರೆ: ಆಶ್ಚರ್ಯ ಸೂಚಕ ಪದ; ಮಝ: ಭಲೇ; ರಾವು: ದಿಗ್ಭ್ರಮೆ; ಜಾಗು:ಹೊಗಳಿಕೆ ಮಾತು; ಭಟ: ಸೈನಿಕ; ವ್ರಾತ: ಗುಂಪು;

ಪದವಿಂಗಡಣೆ:
ಬೆರಳ +ತೂಗಿದನ್+ಅಡಿಗಡಿಗೆ +ಹಲ
ಧರನ್+ಉದಗ್ರ+ ಗದಾ +ವಿಧಾನಕೆ
ಶಿರವನ್+ಒಲೆದನು +ಶೌರಿ +ಮಿಗೆ +ಮೆಚ್ಚಿದನು +ಯಮಸೂನು
ವರ +ಗದಾಯುಧ +ವಿವಿಧ +ಸತ್ವಕೆ
ಪರಮ+ಜೀವವಿದ್+ಎಂದನ್+ಅರ್ಜುನನ್
ಅರರೆ +ಮಝರೇ +ರಾವು +ಜಾಗೆಂದುದು +ಭಟ+ವ್ರಾತ

ಅಚ್ಚರಿ:
(೧) ಮೆಚ್ಚುಗೆಯ ಮಾತುಗಳು – ಅರರೆ, ಮಝರೇ, ರಾವು, ಜಾಗು
(೨) ತೂಗು, ಒಲೆದು – ಸಾಮ್ಯಾರ್ಥ ಪದ
(೩) ಒಂದೇ ಪದವಾಗಿ ರಚನೆ – ಪರಮಜೀವವಿದೆಂದನರ್ಜುನ

ಪದ್ಯ ೨೬: ಸಾತ್ಯಕಿಯನ್ನು ಯಾರು ತಡೆದರು?

ಎಲೆಲೆ ಹಿಡಿಹಿಡಿ ಸಾತ್ಯಕಿಯನೊಳ
ಗೊಳಗೆ ತೋಟಿಯೆ ಜಾಗು ಕೌರವ
ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ
ನಿಲಿಸೆನುತ ನೃಪನೊರಲೆ ಕವಿದೆಡೆ
ಗಲಿಸಿ ಹಿಡಿದನು ಭೀಮನೀತನ
ಬಲುಭುಜವನೌಕಿದನು ಕೊಂಡನು ಕಯ್ಯ ಖಂಡೆಯವ (ದ್ರೋಣ ಪರ್ವ, ೧೯ ಸಂಧಿ, ೨೬ ಪದ್ಯ)

ತಾತ್ಪರ್ಯ:
ಈ ಕಲಹವನ್ನು ಕೇಳಿದ ಧರ್ಮಜನು, ಸಾತ್ಯಕಿಯನ್ನು ಈಚೆಗೆಳೆ, ನಮ್ಮ ಸೈನ್ಯದಲ್ಲಿ ಕೌರಾ ಸೈನ್ಯದಲ್ಲಿ ಆಗುವಂತೆ ಸ್ವೇಚ್ಛಾಚಾರ ಆರಂಭವಾಯಿತೇ? ನಿಲ್ಲಿಸು, ಎಂದು ಕೂಗಿದನು. ಭೀಮನು ಸಾತ್ಯಕಿಯ ಬಲಭುಜವನ್ನು ಅವುಚಿ ಕೈಯಲ್ಲಿದ್ದ ಕತ್ತಿಯನ್ನು ತೆಗೆದುಕೊಂಡನು.

ಅರ್ಥ:
ಹಿಡಿ: ಬಂಧಿಸು; ತೋಟಿ: ಕಲಹ, ಜಗಳ; ಜಾಗು: ಬಾಗು, ಒಲೆದಾಡು, ಎಚ್ಚರ; ಬಲ: ಸೈನ್ಯ; ಬೂತಾಟ: ಸ್ವೇಚ್ಛಾಚಾರ; ಥಟ್ಟು: ಗುಂಪು; ನಿಲಿಸು: ನಿಲ್ಲು, ತಡೆ; ನೃಪ: ರಾಜ; ಒರಲು: ಕೂಗು; ಕವಿ: ಆವರಿಸು; ಗಲಿಸು: ಅವುಚು, ಗಟ್ಟಿಯಾಗಿ; ಹಿಡಿ: ಬಂಧಿಸು, ಗ್ರಹಿಸು; ಔಕು: ನೂಕು, ತಳ್ಳು; ಕೊಂಡು: ಪಡೆದು; ಕಯ್ಯ: ಹಸ್ತ; ಖಂಡೆ: ಕತ್ತಿ, ಖಡ್ಗ;

ಪದವಿಂಗಡಣೆ:
ಎಲೆಲೆ +ಹಿಡಿಹಿಡಿ +ಸಾತ್ಯಕಿಯನ್+ಒಳ
ಗೊಳಗೆ +ತೋಟಿಯೆ +ಜಾಗು +ಕೌರವ
ಬಲದವರ +ಬೂತಾಟವಾಯಿತೆ +ನಮ್ಮ +ಥಟ್ಟಿನಲಿ
ನಿಲಿಸ್+ಎನುತ +ನೃಪನ್+ಒರಲೆ +ಕವಿದೆಡೆ
ಗಲಿಸಿ +ಹಿಡಿದನು +ಭೀಮನ್+ಈತನ
ಬಲುಭುಜವನ್+ಔಕಿದನು +ಕೊಂಡನು +ಕಯ್ಯ +ಖಂಡೆಯವ

ಅಚ್ಚರಿ:
(೧) ಹೋಲಿಸುವ ಪರಿ – ಕೌರವ ಬಲದವರ ಬೂತಾಟವಾಯಿತೆ ನಮ್ಮ ಥಟ್ಟಿನಲಿ

ಪದ್ಯ ೬೫: ಅತಿರಥರು ಹೇಗೆ ಬೊಬ್ಬಿರಿದರು?

ಜಾಗು ದೈತ್ಯರ ರಭಸದಲಿ ಲೇ
ಸಾಗಿ ಕಾದಿದಿರೀಸು ನಮ್ಮಲಿ
ತಾಗಿ ನಿಂದವರಾರು ಕೆಚ್ಚುಳ್ಳವರು ಕಲಿತನದ
ಆಗಲಿನ್ನಾವುದು ನಮಗೆ ಕೈ
ಲಾಗು ನಿಮ್ಮಸುಗಳು ಶರೀರವ
ನೀಗಿ ಕಳೆಯಲಿ ಎಂದು ಬೊಬ್ಬಿರಿದೆಚ್ಚನತಿರಥರ (ದ್ರೋಣ ಪರ್ವ, ೧೫ ಸಂಧಿ, ೬೫ ಪದ್ಯ)

ತಾತ್ಪರ್ಯ:
ಭಲೇ ದೈತ್ಯ ರಭಸದಿಂದ ಚೆನ್ನಾಗಿ ಕಾದಾಡುತ್ತಿರುವಿರಿ, ನಮ್ಮೊಡನೆ ಇಷ್ಟಾದರೂ ಕಾದಿದವರಾರೂ ಇಲ್ಲ. ನಮಗೆ ಇದು ಬಹಳ ಗಿಟ್ಟುತ್ತದೆ. ನಿಮ್ಮ ದೇಹಗಳನ್ನು ಪ್ರಾಣಗಳು ಬಿಟ್ಟು ಹೋಗಲಿ ಎಂದು ಅಬ್ಬರಿಸಿ ಅತಿರಥರ ಮೇಲೆ ಬಾಣಗಳನ್ನು ಬಿಟ್ಟನು.

ಅರ್ಥ:
ಜಾಗು: ಬಾಗು; ದೈತ್ಯ: ರಾಕ್ಷಸ; ರಭಸ: ವೇಗ; ಲೇಸು: ಒಳಿತು; ಕಾದು: ಹೋರಾಡು; ನಿಂದು: ನಿಲ್ಲು; ಕೆಚ್ಚು: ಧೈರ್ಯ, ಸಾಹಸ; ಕಲಿ: ಶೂರ; ಅಸು: ಪ್ರಾಣ; ಶರೀರ: ಒಡಲು; ಕಳೆ: ತೊರೆ, ಹೋಗಲಾಡಿಸು; ಬೊಬ್ಬಿರಿ: ಗರ್ಜಿಸು; ಎಚ್ಚು: ಬಾಣ ಪ್ರಯೋಗ ಮಾಡು; ಅತಿರಥ: ಪರಾಕ್ರಮಿ;

ಪದವಿಂಗಡಣೆ:
ಜಾಗು +ದೈತ್ಯರ +ರಭಸದಲಿ+ ಲೇ
ಸಾಗಿ+ ಕಾದಿದಿರ್+ಈಸು +ನಮ್ಮಲಿ
ತಾಗಿ +ನಿಂದವರಾರು +ಕೆಚ್ಚುಳ್ಳವರು+ ಕಲಿತನದ
ಆಗಲಿನ್ನಾವುದು +ನಮಗೆ+ ಕೈ
ಲಾಗು +ನಿಮ್ಮಸುಗಳು+ ಶರೀರವನ್
ಈಗಿ +ಕಳೆಯಲಿ +ಎಂದು +ಬೊಬ್ಬಿರಿದ್+ಎಚ್ಚನ್+ಅತಿರಥರ

ಅಚ್ಚರಿ:
(೧) ಸಾಯಿರಿ ಎಂದು ಹೇಳುವ ಪರಿ – ನಿಮ್ಮಸುಗಳು ಶರೀರವನೀಗಿ ಕಳೆಯಲಿ

ಪದ್ಯ ೧೧: ದ್ರೋಣನು ಏನೆಂದು ಪ್ರತಿಜ್ಞೆ ಮಾಡಿದನು?

ಸಭೆ ಬೆದರೆ ಕಲ್ಪಾಂತ ಶರಧಿಯ
ರಭಸವಲ್ಲಿಯೆ ಕೇಳಲಾದುದು
ಸುಭಟರಹುದೋ ಜಾಗು ಜಾಗೆನುತೊಲೆದನಾ ದ್ರೋಣ
ಅಭವನಡಹಾಯ್ದಿರಲಿ ಪಾಂಡವ
ವಿಭುವ ಹಿಡಿವೆನು ಪಾರ್ಥನೊಬ್ಬನ
ಪ್ರಭೆಗೆ ಹೆದರುವೆನುಳಿದ ವೀರರ ಬಗೆವನಲ್ಲೆಂದ (ದ್ರೋಣ ಪರ್ವ, ೨ ಸಂಧಿ, ೧೧ ಪದ್ಯ)

ತಾತ್ಪರ್ಯ:
ಕಲ್ಪಾಂತ ಸಾಗರದ ಕೂಗು ಸಭೆಯಲ್ಲಿ ಕೇಳಿ ಬಂತು. ದ್ರೋಣನು ನೀವು ಮಹಾವೀರರೇ ಇರಬಹುದು, ಭಲೇ, ಎನ್ನುತ್ತಾ ತಲೆದೂಗಿ, ಶಿವನೇ ಅಡ್ಡಬಮ್ದರೂ ಯುಧಿಷ್ಥಿರನನ್ನು ಹಿಡಿಯುತ್ತೇನೆ, ಅರ್ಜುನನೊಬ್ಬನ ಪರಾಕ್ರಮಕ್ಕೆ ಹೆದರುತ್ತೇನೆ ಉಳಿದವರು ಲೆಕ್ಕಕಿಲ್ಲ ಎಂದು ಪ್ರತಿಜ್ಞೆ ಮಾಡಿದನು.

ಅರ್ಥ:
ಸಭೆ: ದರ್ಬಾರು, ಓಲಗ; ಬೆದರು: ಹೆದರು; ಕಲ್ಪಾಂತ: ಯುಗದ ಅಂತ್ಯ; ಶರಧಿ: ಸಾಗರ; ರಭಸ: ವೇಗ; ಕೇಳು: ಆಲಿಸು; ಸುಭಟ: ಪರಾಕ್ರಮಿ; ಜಾಗು: ಎಚ್ಚರ; ತಡಮಾಡು, ಹೊಗಳಿಕೆಯ ಮಾತು; ಅಭವ: ಶಿವ; ಅಡಹಾಯ್ದು: ಅಡ್ದಬಾ; ವಿಭು: ಸರ್ವವ್ಯಾಪಿಯಾದುದು, ಒಡೆಯ; ಹಿಡಿ: ಗ್ರಹಿಸು; ಪ್ರಭೆ: ಪ್ರಕಾಶ; ಹೆದರು: ಭಯ; ಉಳಿದ: ಮಿಕ್ಕ; ವೀರ: ಶೂರ; ಬಗೆ: ಎಣಿಸು;

ಪದವಿಂಗಡಣೆ:
ಸಭೆ +ಬೆದರೆ +ಕಲ್ಪಾಂತ +ಶರಧಿಯ
ರಭಸವ್+ಅಲ್ಲಿಯೆ +ಕೇಳಲಾದುದು
ಸುಭಟರಹುದೋ +ಜಾಗು +ಜಾಗೆನುತೊಲೆದನಾ +ದ್ರೋಣ
ಅಭವನ್+ಅಡಹಾಯ್ದಿರಲಿ +ಪಾಂಡವ
ವಿಭುವ +ಹಿಡಿವೆನು +ಪಾರ್ಥನೊಬ್ಬನ
ಪ್ರಭೆಗೆ +ಹೆದರುವೆನ್+ಉಳಿದ +ವೀರರ +ಬಗೆವನಲ್ಲೆಂದ

ಅಚ್ಚರಿ:
(೧) ದ್ರೋಣನ ಪ್ರತಿಜ್ಞೆ – ಅಭವನಡಹಾಯ್ದಿರಲಿ ಪಾಂಡವ ವಿಭುವ ಹಿಡಿವೆನು

ಪದ್ಯ ೩೬: ಆಸ್ಥಾನದವರು ಕರ್ಣನನ್ನೇಕೆ ಹೊಗಳಿದರು?

ಜಾಗು ಜಾಗುರೆ ಕರ್ಣ ಪರರ ಗು
ಣಾಗಮನ ಪತಿಕರಿಸಿ ನುಡಿವವ
ನೀಗಳಿನ ಯುಗದಾತನೇ ಮಝ ಪೂತು ಭಾಪೆನುತ
ತೂಗುವೆರಳಿನ ಮಕುಟದೊಲಹಿನೊ
ಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ ಮಸಗಿತಾಸ್ಥಾನ (ದ್ರೋಣ ಪರ್ವ, ೧ ಸಂಧಿ, ೩೬ ಪದ್ಯ)

ತಾತ್ಪರ್ಯ:
ಕರ್ಣನ ಮಾತುಗಳನ್ನು ಕೇಳಿ ಆಸ್ಥಾನದಲ್ಲಿದ್ದವರೆಲ್ಲರೂ, ಬೆರಳನ್ನೂ ಕಿರೀಟವನ್ನೂ ತೂಗಿ, ಭಲೇ ಕರ್ಣ ಪರರ ಗುಣವನ್ನು ಹೊಗಳುವ ನೀನು ಈ ದ್ವಾಪರಯುದದವನಲ್ಲ ಎಂದು ಹೊಗಳಿದರು. ಆಸ್ಥಾನವು ಅವರ ಕಿರೀಟದ ರತ್ನಗಳ ಬೆಳಕು, ಮಾತಿನ ಲಹರಿಗಳಿಂದ ಸಾಗರದಂತೆ ಕಾಣಿಸಿತು.

ಅರ್ಥ:
ಜಾಗು: ಭಲೇ; ಪರರ: ಅನ್ಯರ; ಗುಣಾಗಮ: ಗುಣವನ್ನು ಹೊಗಳುವವ; ಗುಣ: ನಡತೆ; ಪತಿಕರಿಸು: ಅನುಗ್ರಹಿಸು; ಈಗಳಿನ: ಇಂದಿನ; ಯುಗ: ಸಮಯದ ಬಹು ದೀರ್ಘವಾದ ಕಾಲ; ಮಝ: ಭಲೇ; ಪೂತು: ಕೋಂಡಾಟದ ಮಾಗು; ಭಾಪು: ಭಲೇ; ತೂಗು: ಅಲ್ಲಾಡಿಸು; ಬೆರಳು: ಅಂಗುಲಿ; ಮಕುಟ: ಕಿರೀಟ; ಅಹಿ: ಹಾವು; ಗರುವ: ಹಿರಿಯ; ಭಟ: ಸೈನಿಕ; ಉಲಿ: ಕೂಗು; ಲಹರಿ: ಅಲೆ; ಸಾಗರ: ಸಮುದ್ರ; ಸೌರಂಭ: ಸಡಗರ; ಮಸಗು: ಹರಡು; ಆಸ್ಥಾನ: ದರ್ಬಾರು;

ಪದವಿಂಗಡಣೆ:
ಜಾಗು +ಜಾಗುರೆ +ಕರ್ಣ +ಪರರ +ಗು
ಣಾಗಮನ +ಪತಿಕರಿಸಿ +ನುಡಿವವನ್
ಈ+ಗಳಿನ +ಯುಗದಾತನೇ +ಮಝ +ಪೂತು +ಭಾಪೆನುತ
ತೂಗು+ಬೆರಳಿನ +ಮಕುಟದೊಲಹಿನೊಳ್
ಆ +ಗರುವ +ಭಟರುಲಿಯೆ +ಲಹರಿಯ
ಸಾಗರದ +ಸೌರಂಭದಂತಿರೆ +ಮಸಗಿತ್+ಆಸ್ಥಾನ

ಅಚ್ಚರಿ:
(೧) ರೂಪಕದ ಪ್ರಯೋಗ – ತೂಗುವೆರಳಿನ ಮಕುಟದೊಲಹಿನೊಳಾ ಗರುವ ಭಟರುಲಿಯೆ ಲಹರಿಯ
ಸಾಗರದ ಸೌರಂಭದಂತಿರೆ

ಪದ್ಯ ೧: ಅರ್ಜುನನು ಶಿಖಂಡಿಯನ್ನು ಹೇಗೆ ಹುರಿದುಂಬಿಸಿದನು?

ಕಂಡನರ್ಜುನನೌಕಿ ಕವಿವ ಶಿ
ಖಂಡಿಯನು ಮಝ ಪೂತು ಪಾಯಕು
ಗಂಡುಗಲಿಯಹೆ ಜಾಗು ತೊಟ್ಟೆನು ಭೀಷ್ಮನವಯವವ
ಕೊಂಡು ನಡೆ ನೀನಂಜದಿರು ಕೈ
ಕೊಂಡು ನಿಲುವೆನೆನುತ್ತ ಫಲುಗುಣ
ಮಂಡಿಸಿದನಾಲಿದನು ಸೆಳೆದನು ಬೋಳೆಯಂಬುಗಳ (ಭೀಷ್ಮ ಪರ್ವ, ೧೦ ಸಂಧಿ, ೧ ಪದ್ಯ)

ತಾತ್ಪರ್ಯ:
ಮುನ್ನುಗ್ಗಿ ಬರುವ ಶಿಖಂಡಿಯನ್ನು ಕಂಡು ಅರ್ಜುನನು, ಭಲೇ ನೀನು ಗಂಡುಗಲಿ, ಬಾಣವನ್ನು ತೊಟ್ಟು ಭೀಷ್ಮನನ್ನು ಘಾತಿಸು, ಆ ಗುರಿಯನ್ನು ಕೈಕೊಂಡು ಮುನ್ನುಗ್ಗು, ಹೆದರಬೇಡ, ನಿನ್ನ ಬೆಂಬಲಕ್ಕೆ ನಾನಿದ್ದೇನೆ ಎಂದು ಹೇಳಿ ಧನುಸ್ಸಿನಲ್ಲಿ ಬಾಣವನ್ನು ಹೂಡಿದನು.

ಅರ್ಥ:
ಔಕು: ಒತ್ತು, ಹಿಚುಕು; ಕವಿ: ಆವರಿಸು; ಶಿಖಂಡಿ: ನಪುಂಸಕ; ಮಝ: ಕೊಂಡಾಟದ ಒಂದು ಮಾತು; ಪೂತ: ಪವಿತ್ರವಾದುದು; ಪೂತು: ಭಲೆ; ಪಾಯಕ: ಕಾಲಾಳು; ಗಂಡುಗಲಿ: ಪರಾಕ್ರಮಿ; ಜಾಗು: ಹೊಗಳಿಕೆ ಮಾತು; ತೊಟ್ಟು: ಧರಿಸು; ಅವಯವ: ದೇಹ; ಕೊಂಡು: ತೆಗೆದು; ನಡೆ: ಚಲಿಸು; ಅಂಜು: ಹೆದರು; ಕೈಕೊಂಡು: ಧರಿಸು; ನಿಲುವು: ಸ್ಥಿತಿ, ಅವಸ್ಥೆ; ಮಂಡಿಸು: ಕುಳಿತುಕೊಳ್ಳು, ಕೂಡು; ಆಲಿ: ಸಾಲು,ಮಾರ್ಗ; ಸೆಳೆ: ಆಕರ್ಷಿಸು, ಹೊರತೆಗೆ; ಬೋಳೆ: ಒಂದು ಬಗೆಯ ಹರಿತವಾದ ಬಾಣ; ಅಂಬು: ಬಾಣ;

ಪದವಿಂಗಡಣೆ:
ಕಂಡನರ್ಜುನನ್+ಔಕಿ+ ಕವಿವ +ಶಿ
ಖಂಡಿಯನು +ಮಝ +ಪೂತು +ಪಾಯಕು
ಗಂಡುಗಲಿಯಹೆ +ಜಾಗು +ತೊಟ್ಟೆನು +ಭೀಷ್ಮನ್+ಅವಯವವ
ಕೊಂಡು +ನಡೆ +ನೀನ್+ಅಂಜದಿರು +ಕೈ
ಕೊಂಡು +ನಿಲುವೆನ್+ಎನುತ್ತ+ ಫಲುಗುಣ
ಮಂಡಿಸಿದನ್+ಆಲಿದನು +ಸೆಳೆದನು +ಬೋಳೆ+ಅಂಬುಗಳ

ಅಚ್ಚರಿ:
(೧) ಶಿಖಂಡಿಯನ್ನು ಹೊಗಳುವ ಪರಿ – ಗಂಡುಗಲಿಯಹೆ ಜಾಗು ತೊಟ್ಟೆನು ಭೀಷ್ಮನವಯವವ

ಪದ್ಯ ೬೧: ದೇವತೆಗಳು ಭೀಷ್ಮಾರ್ಜುನರನ್ನು ಹೇಗೆ ಹೊಗಳಿದರು?

ಪೂತುರೇ ಕಲಿಪಾರ್ಥ ಬಿಲುವಿ
ದ್ಯಾತಿಶಯನಿಧಿ ಜಾಗು ಗಂಗಾ
ಜಾತ ಹರ ಮುರವೈರಿಗಳ ಮಿಕ್ಕಿರಿ ಮಹಾದೇವ
ಈತಗಳು ಜನಿಸಿದೊಡೆ ಹಿಂದೆ ಮ
ಹೀತಳವ ಖಳನುಯ್ವನೇ ಮೇಣ್
ಸೀತೆ ಬನದೊಳು ನವೆವಳೇ ಎನುತಿರುದಮರಗಣ (ವಿರಾಟ ಪರ್ವ, ೯ ಸಂಧಿ, ೬೧ ಪದ್ಯ)

ತಾತ್ಪರ್ಯ:
ಭಲೇ ಅರ್ಜುನ, ನೀನು ಅತಿಶಯ ಧನುರ್ವಿದ್ಯಾನಿಧಿ! ಭಲೇ ಭೀಷ್ಮ ನೀವಿಬ್ಬರೂ ಹರಿಹರರನ್ನು ಬಿಲ್ವಿದ್ಯೆಯಲ್ಲಿ ಮೀರಿದಿರಿ, ಶಿವ ಶಿವಾ ನೀವಿಬ್ಬರೂ ಹಿಂದೆ ಜನಿಸಿದ್ದರೆ ಹಿರಣ್ಯಾಕ್ಷನು ಭೂಮಿಯನ್ನು ಕದ್ದೊಯ್ಯಲು ಸಾಧ್ಯವಾಗುತ್ತಿತ್ತೇ! ಸೀತೆಯು ಅಶೋಕವನದಲ್ಲಿ ದುಃಖದಿಂದಿರುತ್ತಿದ್ದಳೇ ಎಂದು ದೇವತೆಗಳು ಹೊಗಳಿದರು.

ಅರ್ಥ:
ಪೂತು: ಭಲೇ; ಕಲಿ: ಶೂರ; ಬಿಲು: ಚಾಪ; ವಿದ್ಯ: ಜ್ಞಾನ; ಅತಿಶಯ: ಹೆಚ್ಚು; ನಿಧಿ: ಐಶ್ವರ್ಯ; ಜಾಗು: ಹೊಗಳಿಕೆ ಮಾತು; ಜಾತ: ಹುಟ್ಟು; ಹರ: ಶಿವ; ಮುರವೈರಿ: ಶಿವ; ಮಿಕ್ಕ: ಉಳಿದ; ಮಹಾದೇವ: ಶಿವ; ಜನಿಸು: ಹುಟ್ಟು; ಹಿಂದೆ: ಹಿಂಭಾಗ; ಮಹೀತಳ: ಭೂಮಿ; ಖಳ: ದುಷ್ಟ; ಮೇಣ್: ಮತ್ತು, ಅಥವ; ಬನ: ಕಾಡು; ನವೆ: ದುಃಖಿಸು, ಕೊರಗು; ಅಮರಗಣ: ದೇವತೆಗಳು;

ಪದವಿಂಗಡಣೆ:
ಪೂತುರೇ +ಕಲಿ+ಪಾರ್ಥ +ಬಿಲು+ವಿದ್ಯ
ಅತಿಶಯ+ನಿಧಿ+ ಜಾಗು +ಗಂಗಾ
ಜಾತ +ಹರ+ ಮುರವೈರಿಗಳ+ ಮಿಕ್ಕಿರಿ+ ಮಹಾದೇವ
ಈತಗಳು+ ಜನಿಸಿದೊಡೆ +ಹಿಂದೆ+ ಮ
ಹೀತಳವ +ಖಳನುಯ್ವನೇ +ಮೇಣ್
ಸೀತೆ +ಬನದೊಳು +ನವೆವಳೇ+ ಎನುತಿರುದ್+ಅಮರಗಣ

ಅಚ್ಚರಿ:
(೧) ಹಿರಣ್ಯಾಕ್ಷ ಮತ್ತು ರಾವಣರ ಬಗ್ಗೆ ಹೇಳುವ ಪರಿ – ಮಹೀತಳವ ಖಳನುಯ್ವನೇ ಮೇಣ್
ಸೀತೆ ಬನದೊಳು ನವೆವಳೇ

ಪದ್ಯ ೫೪: ಕರ್ಣನು ದ್ರೌಪದಿಯನ್ನು ಹೇಗೆ ಹೊಗಳಿದನು?

ಪೂತುರೇ ಪಾಂಚಾಲಿ ಭುವನ
ಖ್ಯಾತೆಯಾದೆಲೆ ಜಾಗು ನಿನ್ನಯ
ಬೈತಲೆಯ ಮಣಿ ಮಾರುವೋದುದ ಮತ್ತೆ ಬಿಡಿಸಿದೆಲೆ
ಬೀತ ಮರ ಫಲವಾಯ್ತಲಾ ನಿ
ನ್ನಾತಗಳ ಬಹುಖೇದ ಜಲಧಿಗೆ
ಸೇತುವಾದೆಲೆ ನೀನೆನುತ ತಲೆದೂಗಿದನು ಕರ್ಣ (ಸಭಾ ಪರ್ವ, ೧೬ ಸಂಧಿ, ೫೪ ಪದ್ಯ)

ತಾತ್ಪರ್ಯ:
ಕರ್ಣನು ದ್ರೌಪದಿಗೆ ತನ್ನ ಹೊಗಳಿಕೆಯನ್ನು ಮುಂದುವರೆಸುತ್ತಾ, ಭಲೇ ದ್ರೌಪದಿ, ಲೋಕ ವಿಖ್ಯಾತೆಯಾದೆ, ನಿನ್ನ ಬೈತಲೆಯ ಸೌಭಾಗ್ಯದ ಮಣಿ ಮಾರಾಟವಾಗಿ ಹೋಗಿದುದನ್ನು ಮತ್ತೆ ಪಡೆದೆ. ಒಣಗಿದ ಮರ ಮತ್ತೆ ಚಿಗುರಿ ಫಲಕೊಡುವಂತೆ ಮಾದಿದೆ ನಿನ್ನ ಪತಿಗಳ ದುಃಖಸಮುದ್ರಕ್ಕೆ ಕಟ್ಟೆಯಾದೆ ಎಂದು ಹೊಗಳಿ ತಲೆದೂಗಿದನು.

ಅರ್ಥ:
ಪೂತು: ಭಲೆ; ಭುವನ: ಭೂಮಿ; ಖ್ಯಾತ: ಪ್ರಸಿದ್ಧ; ಜಾಗು: ಹೊಗಳಿಕೆ ಮಾತು; ಬೈತಲೆ: ಬಯ್ತಲೆ, ಬಾಚಿದ ತಲೆಯನ್ನು ವಿಭಾಗಿಸುವ ಗೆರೆಯಂಥ ಭಾಗ; ಮಣಿ: ರತ್ನ; ಮಾರು: ವಿಕ್ರಯಿಸು; ಮತ್ತೆ: ಪುನಃ; ಬಿಡಿಸು: ಹೋಗಲಾಡಿಸು; ಬೀತ: ಕಳೆದ; ಮರ: ತರು; ಫಲ: ಹಣ್ಣು; ಬಹು: ಬಹಳ; ಖೇದ: ದುಃಖ; ಜಲಧಿ; ಸಾಗರ; ಸೇತು: ಸೇತುವೆ, ಸಂಕ; ತಲೆ: ಶಿರ; ತೂಗು: ಅಲ್ಲಾಡಿಸು;

ಪದವಿಂಗಡಣೆ:
ಪೂತುರೇ +ಪಾಂಚಾಲಿ +ಭುವನ
ಖ್ಯಾತೆಯಾದೆಲೆ+ ಜಾಗು +ನಿನ್ನಯ
ಬೈತಲೆಯ +ಮಣಿ +ಮಾರುವೋದುದ +ಮತ್ತೆ +ಬಿಡಿಸಿದೆಲೆ
ಬೀತ+ ಮರ+ ಫಲವಾಯ್ತಲಾ+ ನಿನ್
ಆತಗಳ +ಬಹುಖೇದ+ ಜಲಧಿಗೆ
ಸೇತುವಾದೆಲೆ+ ನೀನೆನುತ+ ತಲೆದೂಗಿದನು+ ಕರ್ಣ

ಅಚ್ಚರಿ:
(೧) ಉಪಮಾನದ ಪ್ರಯೋಗ – ಬೀತ ಮರ ಫಲವಾಯ್ತಲಾ
(೨) ಪೂತುರೆ, ಜಾಗು – ಹೊಗಳಿಕೆಯ ಮಾತು

ಪದ್ಯ ೨೧: ಅಶ್ವತ್ಥಾಮನು ಮತ್ತೆ ಹೇಗೆ ಭೀಮನ ಮೇಲೆ ಬಾಣಪ್ರಯೋಗ ಮಾಡಿದನು?

ಜಾಗು ಮಝುರೇ ಭೀಮ ಬಲುಗೈ
ಲಾಗು ಮರೆಯದಲಾ ಶರೌಘ
ತ್ಯಾಗದಸ್ತ್ರ ಪ್ರವರ ಬಂಧವ ಮತ್ತೆ ನೋಡೆನುತ
ಆ ಗಗನವಿದು ಧರಣಿಯಿದು ದಿ
ಗ್ಭಾಗವೆಲ್ಲಿಯದೆಂಬ ವಿವರವ
ನಾಗಳರಿಯೆನು ದ್ರೋಣನಂದನನೆಚ್ಚನನಿಲಜನ (ಕರ್ಣ ಪರ್ವ, ೩ ಸಂಧಿ, ೨೧ ಪದ್ಯ)

ತಾತ್ಪರ್ಯ:
ಭಲೇ ಭೀಮ ನೀನು ನಿನ್ನ ಕೈಚಳಕವನ್ನು ಮರೆತಿಲ್ಲವಲ್ಲಾ! ಬಾಣಗಳ ಪ್ರಯೋಗದ ರೀತಿಯನ್ನು ಈಗ ನೋಡು ಎಂದು ಹೇಳುತ್ತ ಬಂಧಿಸುವ ಮತ್ತು ತ್ಯಜಿಸುವ ಅಸ್ತ್ರಗಳನ್ನು ಬಿಡಲು ಭೂಮಿ, ಆಕಾಶ, ದಿಕ್ಕು ಎಲ್ಲಿವೆ ಎನ್ನುವುದು ತಿಳಿಯದಂತೆ ಬಾಣ ಪ್ರಯೋಗ ಮಾಡಿದನು.

ಅರ್ಥ:
ಜಾಗು: ಹೊಗಳಿಕೆ ಮಾತು, ಎಚ್ಚರ; ಮಝ: ಭಲೇ, ಕೊಂಡಾಟದ ನುಡಿ; ಬಲುಗೈ: ಪರಾಕ್ರಮ; ಮರೆಯದ: ನೆನಪಿನಿಂದ ದೂರ ಮಾಡು; ಶರೌಘ: ಬಾಣಗಳ ಸಮೂಹ; ಪ್ರವರ: ಶ್ರೇಷ್ಠ, ಮೊದಲಿಗ; ತ್ಯಾಗ: ತ್ಯಜಿಸುವಿಕೆ; ಅಸ್ತ್ರ: ಆಯುಧ; ಬಂಧ: ಕಟ್ಟು, ಬಂಧನ; ನೋಡು: ವೀಕ್ಷಿಸು; ಗಗನ: ಆಕಾಶ; ಧರಣಿ:ಭೂಮಿ; ದಿಗ್ಭಾಗ: ದಿಕ್ಕುಗಳು; ವಿವರ: ವಿಸ್ತಾರ, ಹರಹು; ಅರಿ: ತಿಳಿ; ನಂದನ: ಮಗ; ಎಚ್ಚು: ಬಾಣಪ್ರಯೋಗ; ಅನಿಲಜ: ವಾಯುಪುತ್ರ (ಭೀಮ);

ಪದವಿಂಗಡಣೆ:
ಜಾಗು +ಮಝುರೇ+ ಭೀಮ +ಬಲುಗೈ
ಲಾಗು+ ಮರೆಯದಲಾ+ ಶರೌಘ
ತ್ಯಾಗದಸ್ತ್ರ +ಪ್ರವರ +ಬಂಧವ +ಮತ್ತೆ +ನೋಡೆನುತ
ಆ+ ಗಗನವಿದು +ಧರಣಿಯಿದು +ದಿ
ಗ್ಭಾಗವೆಲ್ಲಿಯದೆಂಬ +ವಿವರವನ್
ಆಗಳ್+ಅರಿಯೆನು +ದ್ರೋಣ+ ನಂದನನ್+ಎಚ್ಚನ್+ಅನಿಲಜನ

ಅಚ್ಚರಿ:
(೧) ಜಾಗು, ಮಝುರೇ – ಪದಗಳ ಪ್ರಯೋಗ
(೨) ತ್ಯಾಗ, ಬಂಧ – ಅಸ್ತ್ರಗಳ ವಿವರ
(೩) ತಂದೆಯಿಂದ ಮಕ್ಕಳ ವಿವರ – ದ್ರೋಣನಂದನ, ಅನಿಲಜ

ಪದ್ಯ ೪: ಸಾತ್ಯಕಿಯ ಯುದ್ಧದ ಘೋರತೆ ಹೇಗಿತ್ತು?

ಅರೆರೆ ರಾವುತು ಜಾಗು ಸ್ವಾಮಿಯ
ಹರಿಬಕೋಸುಗ ಹಗೆಯ ಹೊಯ್ದಿರಿ
ಬಿರುದರಹುದೋ ಎನುತ ಮೀರುವ ಹಯವ ಮುರಿಯೆಸುತ
ಸರಳನೊಂದನೆ ತೊಡಚಿ ತುರಗದ
ಕೊರಳ ವಾಘೆಯ ಕರವ ರಾವ್ತರ
ಶಿರವನೆಚ್ಚನು ಕೊಂದನೀಪರಿ ಹತ್ತು ಸಾವಿರವ (ಕರ್ಣ ಪರ್ವ, ೩ ಸಂಧಿ, ೪ ಪದ್ಯ)

ತಾತ್ಪರ್ಯ:
ಅರರೆ ರಾವುತರೇ ಎಚ್ಚರ, ಸ್ವಾಮಿ ಕಾರ್ಯಕ್ಕಾಗಿ ಹಗೆಯನ್ನು ಹೊಯ್ಯಲು ನೀವು ಬಂದಿರೇ, ವೀರರಲ್ಲವೇ ನೀವು? ಎನ್ನುತ್ತಾ ಅವರ ಮೇಲೆ ನುಗ್ಗಿ ಬರುವ ರಾವುತರ ಮೇಲೆ ಸಾತ್ಯಕಿತ್ಯು ಬಾಣಗಳನ್ನು ಬಿಟ್ಟನು. ಅವನ ಒಂದೊಂದು ಬಾಣವು ಕುದುರೆಯ ಹಗ್ಗವನ್ನು ಹಿಡಿದ ಕೈ (ರಾವುತನ) ತಲೆಗಳನ್ನು ಕತ್ತರಿಸುತ್ತಿತ್ತು, ಹೀಗೆ ಹತ್ತು ಸಾವಿರ ರಾವುತರನ್ನು ಕೊಂದನು.

ಅರ್ಥ:
ಅರೆರೆ: ಆಶ್ಚರ್ಯ ಸೂಚಕ ಪದ; ರಾವುತ: ಕುದುರೆ ಸವಾರ; ಜಾಗು: ಎಚ್ಚರ; ತಡಮಾಡು; ಸ್ವಾಮಿ: ಒಡೆಯ; ಹರಿಬ: ಕೆಲಸ, ಕಾರ್ಯ; ಓಸುಗ: ಕಾರಣಕ್ಕಾಗಿ; ಹಗೆ: ವೈರತ್ವ; ಹೊಯ್ದಿರಿ: ಹೊತ್ತಿರಿ, ಹೊಡೆದಿರಿ; ಬಿರುದು: ಗೌರವಸೂಚಕ ಪದ; ಅಹುದು: ಹೌದು; ಎನುತ: ಹೇಳುತ್ತಾ; ಮೀರು: ಹೆಚ್ಚಾಗು; ಹಯ: ಕುದುರೆ; ಮುರಿ: ಸೀಳು; ಸರಳ: ಬಾಣ; ತೊಡಚು: ಕಟ್ಟು, ಬಂಧಿಸು; ತುರಗ: ಕುದುರೆ; ಕೊರಳ: ಕತ್ತು; ವಾಘೆ: ಲಗಾಮು; ಕರ: ಹಸ್ತ; ಶಿರ: ತಲೆ; ಎಚ್ಚು: ಕಡಿ; ಕೊಂದು: ಸಾಯಿಸು; ಪರಿ: ರೀತಿ; ಹತ್ತು: ದಶ; ಸಾವಿರ: ಸಹಸ್ರ;

ಪದವಿಂಗಡಣೆ:
ಅರೆರೆ +ರಾವುತು +ಜಾಗು +ಸ್ವಾಮಿಯ
ಹರಿಬಕೋಸುಗ +ಹಗೆಯ +ಹೊಯ್ದಿರಿ
ಬಿರುದರ್+ಅಹುದೋ +ಎನುತ +ಮೀರುವ +ಹಯವ +ಮುರಿಯೆಸುತ
ಸರಳನ್+ಒಂದನೆ +ತೊಡಚಿ +ತುರಗದ
ಕೊರಳ +ವಾಘೆಯ +ಕರವ+ ರಾವ್ತರ
ಶಿರವನ್+ಎಚ್ಚನು +ಕೊಂದನೀಪರಿ+ ಹತ್ತು +ಸಾವಿರವ

ಅಚ್ಚರಿ:
(೧) ತುರಗ, ಹಯ – ಸಮನಾರ್ಥಕ ಪದ
(೨) ಹ ಕಾರದ ತ್ರಿವಳಿ ಪದ – ಹರಿಬಕೋಸುಗ ಹಗೆಯ ಹೊಯ್ದಿರಿ