ಪದ್ಯ ೨೫: ರಣವಾದ್ಯಗಳ ಶಬ್ದವು ಹೇಗಿದ್ದವು?

ಬೆರಳ ತುಟಿಗಳ ಬೊಬ್ಬೆ ಮಿಗಲ
ಬ್ಬರಿಸಿದವು ನಿಸ್ಸಾಳತತಿ ಜ
ರ್ಝರ ಮೃದಂಗದ ಪಣಹ ಪಟಹದ ಗೌರುಗಹಳೆಗಳ
ಉರು ರಭಸವಳ್ಳಿರಿಯೆ ರಥಚೀ
ತ್ಕರಣೆ ರಥಹಯ ಹೇಷಿತದ ನಿ
ಷ್ಠುರ ನಿನಾದದಲೌಕಿ ಹೊಕ್ಕನು ಶಲ್ಯನಾಹವವ (ಶಲ್ಯ ಪರ್ವ, ೩ ಸಂಧಿ, ೨೫ ಪದ್ಯ)

ತಾತ್ಪರ್ಯ:
ನಿಷ್ಠುರ ಗರ್ಜನೆಗಳು ಹಬ್ಬಿದವು. ಭೇರಿ, ಮೃದಂಗ, ತಮ್ಮಟೆ, ನಗಾರಿ, ರಣಕಹಳೆಯ ರಭಸವು ಕಿವಿಗಳನ್ನು ಕಿವುಡು ಮಾಡಿದವು. ರಥದ ಚೀತ್ಕಾರ, ಕುದುರೆಗಳ ಹೇಷಾರವದ ನಿಷ್ಠುರ ನಾದ ಮೊಳಗಲು ಶಲ್ಯನು ಯುದ್ಧಕ್ಕೆ ಮುಂದಾದನು.

ಅರ್ಥ:
ಬೆರಳು: ಅಂಗುಲಿ; ತುಟಿ: ಅಧರ; ಬೊಬ್ಬೆ: ಆರ್ಭಟ; ಮಿಗಲು: ಹೆಚ್ಚಾಗಲು; ಅಬ್ಬರ: ಜೋರಾದ ಶಬ್ದ; ನಿಸ್ಸಾಳ: ಒಂದು ಬಗೆಯ ಚರ್ಮವಾದ್ಯ; ತತಿ: ಗುಂಪು; ಜರ್ಝರ: ಭಗ್ನ; ಪಣಹ: ನಗಾರಿ; ಪಟಹ: ತಮಟೆ; ಗೌರು: ಕರ್ಕಶ ಧ್ವನಿ; ಕಹಳೆ: ಉದ್ದವಾಗಿ ಬಾಗಿರುವ ತುತ್ತೂರಿ, ಕಾಳೆ; ಉರು: ವಿಶೇಷವಾದ; ರಭಸ: ವೇಗ; ಇರಿ: ಚುಚ್ಚು; ರಥ: ಬಂಡಿ; ಚೀತ್ಕರ: ಜೋರಾದ ಶಬ್ದ; ರಥ: ಬಂಡಿ; ಹಯ: ಕುದುರೆ; ಹೇಷಿತ: ಕುದುರೆಯ ಕೂಗು; ನಿಷ್ಠುರ: ಕಠಿಣವಾದುದು; ನಿನಾದ: ಶಬ್ದ; ಔಕು: ಒತ್ತು, ಹಿಚುಕು; ಹೊಕ್ಕು: ಸೇರು; ಆಹವ: ಯುದ್ಧ;

ಪದವಿಂಗಡಣೆ:
ಬೆರಳ +ತುಟಿಗಳ +ಬೊಬ್ಬೆ +ಮಿಗಲ್
ಅಬ್ಬರಿಸಿದವು +ನಿಸ್ಸಾಳ+ತತಿ+ ಜ
ರ್ಝರ +ಮೃದಂಗದ+ ಪಣಹ+ ಪಟಹದ+ ಗೌರು+ಕಹಳೆಗಳ
ಉರು +ರಭಸವಳ್ಳ್+ಇರಿಯೆ +ರಥ+ಚೀ
ತ್ಕರಣೆ+ ರಥಹಯ +ಹೇಷಿತದ +ನಿ
ಷ್ಠುರ +ನಿನಾದದಲ್+ಔಕಿ +ಹೊಕ್ಕನು +ಶಲ್ಯನ್+ಆಹವವ

ಅಚ್ಚರಿ:
(೧) ರಣವಾದ್ಯಗಳು – ನಿಸ್ಸಾಳ, ಮೃದಂಗ, ಪಣಹ, ಪಟಹ, ಕಹಳೆ
(೨) ಶಬ್ದವನ್ನು ವಿವರಿಸುವ ಪದ – ಬೊಬ್ಬೆ, ಅಬ್ಬರಿಸು, ಜರ್ಝರ, ಇರಿ, ಚೀತ್ಕರ, ಹೇಷಿತ, ನಿನಾದ