ಪದ್ಯ ೩೪: ಕೃಷ್ಣನು ತೊಡೆ ಮುರಿದುದು ತಪ್ಪಲ್ಲವೆಂದು ಏಕೆ ಹೇಳಿದನು?

ಆ ಪತಿವ್ರತೆ ಬಯ್ದಳೀ ಕುರು
ಭೂಪ ತೊಡೆಗಳ ತೋರಿ ಜರೆಯಲು
ದ್ರೌಪದಿಯ ನುಡಿ ತಪ್ಪುವುದೆ ಋಷಿವಚನದನುಗತಿಗೆ
ಕೋಪ ಕುಡಿಯಿಡಲೀ ವೃಕೋದರ
ನಾಪನಿತನುಡಿದನು ಪ್ರತಿಜ್ಞಾ
ಸ್ಥಾಪನಕೆ ಬಳಿಕೇನ ಮಾಡುವುದೆಂದನಸುರಾರಿ (ಗದಾ ಪರ್ವ, ೮ ಸಂಧಿ, ೩೪ ಪದ್ಯ)

ತಾತ್ಪರ್ಯ:
ಶ್ರೀಕೃಷ್ಣನು ನುಡಿಯುತ್ತಾ, ತೊಡೆಯನ್ನು ತೋರಿಸಿ ಕೌರವನು ದ್ರೌಪದಿಯನ್ನು ಜರೆದಾಗ ಅವಳು ತೊಡೆ ಮುರಿದು ಸಾಯಿ ಎಂದು ಶಪಿಸಿದಳು. ಮೈತ್ರೇಯನ ನುಡಿಗೆ ಅನುಗುಣವಾಗಿ ದ್ರೌಪದಿಯೂ ಶಪಿಸಿದಳು. ನಿನ್ನ ತೊಡೆಗಲನ್ನು ಮುರಿಯುವೆನೆಂದು ಕೋಪದಿಂದ ಭೀಮನೂ ಭಾಷೆ ಮಾಡಿದನು. ಪ್ರತಿಜ್ಞೆಯಂತೆ ನಡೆದುಕೊಂಡರೆ ಅದರಲ್ಲೇನು ತಪ್ಪು ಎಂದು ಕೃಷ್ಣನು ಪ್ರಶ್ನಿಸಿದನು.

ಅರ್ಥ:
ಪತಿವ್ರತೆ: ಸಾಧ್ವಿ; ಬಯ್ದು: ಜರಿದು, ನಿಂದಿಸು; ಭೂಪ: ರಾಜ; ತೊಡೆ: ಜಂಘೆ; ತೋರು: ಪ್ರದರ್ಶಿಸು; ಜರೆ: ಬಯ್ಯು; ನುಡಿ: ಮಾತು; ತಪ್ಪು: ಸರಿಯಿಲ್ಲದ್ ಸ್ಥಿತಿ; ಋಷಿ: ಮುನಿ; ವಚನ: ಮಾತು ಅನುಗತಿ: ಸಾವು; ಕೋಪ: ಮುಳಿ; ಕುಡಿ: ಚಿಗುರು; ಪ್ರತಿಜ್ಣೆ: ಪ್ರಮಾಣ; ಸ್ಥಾಪನ: ಇಡು; ಬಳಿಕ: ನಂತರ; ಅಸುರಾರಿ: ಕೃಷ್ಣ;

ಪದವಿಂಗಡಣೆ:
ಆ +ಪತಿವ್ರತೆ+ ಬಯ್ದಳ್+ಈ+ ಕುರು
ಭೂಪ +ತೊಡೆಗಳ +ತೋರಿ +ಜರೆಯಲು
ದ್ರೌಪದಿಯ +ನುಡಿ +ತಪ್ಪುವುದೆ+ ಋಷಿ+ವಚನದ್+ಅನುಗತಿಗೆ
ಕೋಪ +ಕುಡಿಯಿಡಲ್+ಈ+ ವೃಕೋದರನ್
ಆಪನಿತ+ನುಡಿದನು +ಪ್ರತಿಜ್ಞಾ
ಸ್ಥಾಪನಕೆ +ಬಳಿಕೇನ +ಮಾಡುವುದೆಂದನ್+ಅಸುರಾರಿ

ಅಚ್ಚರಿ:
(೧) ಕೋಪ ಹೆಚ್ಚಾಯಿತು ಎಂದು ಹೇಳಲು – ಕೋಪ ಕುಡಿಯಿಡಲೀ ವೃಕೋದರನಾಪನಿತನುಡಿದನು

ಪದ್ಯ ೬೩: ಗುಜ್ಜರ ದೇಶದ ರಾವುತರು ಹೇಗೆ ಹೋರಾಡಿದರು?

ಜರೆದು ಸರಿಸದಲೇರಿದರೆ ಸಿಡಿ
ಲುರುಬಿದಂತಾಯಿತ್ತು ಘಾಯವ
ನರುಹಿದರೆ ದೂಹತ್ತಿ ರಾವ್ತರ ಮಸ್ತಕದೊಳಿಳಿದು
ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ ತ
ತ್ತರಿದರಿದು ಹೊಯ್ದಾಡಿದರು ಗುಜ್ಜರದ ರಾವುತರು (ಭೀಷ್ಮ ಪರ್ವ, ೪ ಸಂಧಿ, ೬೩ ಪದ್ಯ)

ತಾತ್ಪರ್ಯ:
ಗುಜ್ಜರ ದೇಶದ ರಾವುತರು ಎದುರಾಳಿಗಳನ್ನು ಜರೆದು ಹೊಡೆದ ಸದ್ದು ಸಿಡಿಲು ಬಡಿತದಂತೆ ಕೇಳಿತು. ದೂಹತ್ತಿಗಳ ಹೊಡೆತ ರಾವುತರ ತಲೆಗಳನ್ನು ಕಡಿದು ನೆಲಕ್ಕೆ ಅಪ್ಪಳಿಸಿತು. ಕುದುರೆಗಳನ್ನು ಅಟ್ಟಿದರೆ ಹೊಡೆತದಿಂದ ಕೂರ್ಮನು ಒರಲಿದನು. ಶತ್ರುಗಳನ್ನು ತರಿತರಿದು ಅವರು ಹೋರಾಡಿದರು.

ಅರ್ಥ:
ಜರೆ: ಬಯ್ಯುವುದು; ಸರಿಸ: ವೇಗ, ರಭಸ; ಏರು: ಮೇಲೇಳು; ಸಿಡಿಲು: ಅಶನಿ; ಉರುಬು: ಅತಿಶಯವಾದ ವೇಗ; ಘಾಯ: ಪೆಟ್ಟು; ಅರುಹು:ತಿಳಿಸು, ಹೇಳು; ದೂಹತ್ತಿ: ಎರಡು ಕಡೆಯೂ ಚೂಪಾದ ಕತ್ತಿ; ರಾವುತ: ಕುದುರೆ ಸವಾರ, ಅಶ್ವಾರೋಹಿ; ಮಸ್ತಕ: ಶಿರ; ಇಳಿ: ಕೆಳಗೆ ಬಾಗು; ಕೊರೆ: ಕತ್ತರಿಸು; ಇಳೆ: ಭೂಮಿ; ಹಯ: ಕುದುರೆ; ನೂಕು: ತಳ್ಳು; ಒರಲು: ಅರಚು, ಕೂಗಿಕೊಳ್ಳು; ತಳ: ಸಮತಟ್ಟಾದ ಪ್ರದೇಶ; ಕಮಠ:ಕೂರ್ಮ; ತತ್ತರಿ: ಒಂದೇಸವನೆ ಹೊಡೆ; ಹೊಯ್ದಾಡು: ಹೋರಾಡು; ಗುಜ್ಜರ: ಒಂದು ಪ್ರಾಂತ್ಯದ ಹೆಸರು; ರಾವುತ: ಅಶ್ವಾರೋಹಿ;

ಪದವಿಂಗಡಣೆ:
ಜರೆದು +ಸರಿಸದಲ್+ಏರಿದರೆ+ ಸಿಡಿಲ್
ಉರುಬಿದಂತಾಯಿತ್ತು +ಘಾಯವನ್
ಅರುಹಿದರೆ+ ದೂಹತ್ತಿ+ ರಾವ್ತರ+ ಮಸ್ತಕದೊಳ್+ಇಳಿದು
ಕೊರೆದುದ್+ಇಳೆಯನು +ಹಯವ +ನೂಕಿದಡ್
ಒರಲಿದನು +ತಳ+ ಕಮಠನ್+ಎನೆ +ತ
ತ್ತರಿದರಿದು +ಹೊಯ್ದಾಡಿದರು +ಗುಜ್ಜರದ+ ರಾವುತರು

ಅಚ್ಚರಿ:
(೧) ಕುದುರೆಗಳು ಓಡುವ ವೇಗವನ್ನು ಹೇಳುವ ಪರಿ – ಕೊರೆದುದಿಳೆಯನು ಹಯವ ನೂಕಿದ
ಡೊರಲಿದನು ತಳ ಕಮಠನೆನೆ

ಪದ್ಯ ೨೮: ಕೃಷ್ಣನು ಯಾವ ಸಲಹೆಯನ್ನು ನೀಡಿದನು?

ನುಡಿದ ಕಾಲಾವಧಿಗೆ ಜರೆ ತೆರೆ
ಯಡಸಿದವು ಜಾಣಿನಲಿ ಸತ್ಯವ
ನಡೆಸಿದಿರಿ ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದರೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ (ಅರಣ್ಯ ಪರ್ವ, ೧೬ ಸಂಧಿ, ೨೮ ಪದ್ಯ)

ತಾತ್ಪರ್ಯ:
ನೀವು ಮಾತುಕೊಟ್ಟ ಅರಣ್ಯವಾಸದ ಅವಧಿಗೆ ಮುಪ್ಪು ಬಂದಿದೆ. ಕೆಲವೇ ದಿನಗಳು ಈಗ ಉಳಿದಿವೆ. ಇಷ್ಟು ದಿನ ಜಾಣತನದಿಂದ ಸತ್ಯಮಾರ್ಗದಲ್ಲಿ ನಡೆದಿದ್ದೀರಿ, ಕೊನೆಯಲ್ಲಿ ಹಿರಿಮೆಯನ್ನು ಕಳೆದುಕೊಳ್ಳಬೇಡಿ. ಕರ್ಣನೇ ಮೊದಲಾದ ಕುಹಕಿಗಳು ದುಡುಕಿ ಆ ಕೃತ್ಯವನ್ನು ಮಾಡಲು ಬಂದರೆ ನೀವು ದುಡುಕದೆ ನಿಧಾನಿಸೆ, ಧರ್ಮದ ದಡವನ್ನು ಸೇರಿದರೆ ವಿಜಯ ಮಾರ್ಗದಲ್ಲಿ ಕ್ಷಿಪ್ರವಾಗಿ ಮುಂದುವರೆಯುವಿರಿ ಎಂದು ಶ್ರೀಕೃಷ್ಣನು ಎಚ್ಚರಿಸಿ ಆಶೀರ್ವದಿಸಿದನು.

ಅರ್ಥ:
ನುಡಿ: ಮಾತಾಡು; ಕಾಲ: ಸಮಯ; ಅವಧಿ: ಗಡು, ಸಮಯದ ಪರಿಮಿತಿ; ಜರೆ: ಮುಪ್ಪು; ತೆರೆ: ತೆಗೆ, ಬಿಚ್ಚು; ಅಡಸು: ಬಿಗಿಯಾಗಿ ಒತ್ತು; ಜಾಣಿನಲಿ: ಬುದ್ಧಿವಂತಿಕೆ; ಸತ್ಯ: ದಿಟ;ನಡೆಸು: ಮುನ್ನಡೆ, ಚಲಿಸು; ಕಡೆ: ಕೊನೆ; ಉನ್ನತಿ: ಏಳಿಗೆ; ಕೆಡಿಸು: ಹಾಳುಮಾಡು; ಕಡು: ವಿಶೇಷ, ಅಧಿಕ; ಮನ: ಮನಸ್ಸು; ಆದಿ: ಮುಂತಾದ; ಕೈ: ಹಸ್ತ; ದುಡುಕು: ಆತುರ, ಅವಸರ; ಧರ್ಮ: ಧಾರಣೆ ಮಾಡಿದುದು; ತಡಿ:ದಡ, ತೀರ; ಜಾರು: ಬೀಳು; ಜಯ: ಗೆಲುವು; ಅಧ್ವ: ದಾರಿ, ಮಾರ್ಗ; ಜಂಘಾಲ: ಶೀಘ್ರ ಓಟದ, ಚಿಗರೆ; ಅರಹು: ತಿಳಿ;

ಪದವಿಂಗಡಣೆ:
ನುಡಿದ +ಕಾಲ+ಅವಧಿಗೆ +ಜರೆ +ತೆರೆ
ಯಡಸಿದವು +ಜಾಣಿನಲಿ +ಸತ್ಯವ
ನಡೆಸಿದಿರಿ +ಕಡೆಸಾರಿಗೆಯಲುನ್ನತಿಯ ಕೆಡಿಸದಿರಿ
ಕಡುಮನದ ಕರ್ಣಾದಿಗಳು ಕೈ
ದುಡುಕಿದರೆ ಕೈಗಾಯ್ದು ಧರ್ಮದ
ತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ

ಅಚ್ಚರಿ:
(೧) ಅರಣ್ಯವಾಸ ಅಂತ್ಯದಲ್ಲಿದೆ ಎಂದು ಹೇಳಲು – ನುಡಿದ ಕಾಲಾವಧಿಗೆ ಜರೆ ತೆರೆ
ಯಡಸಿದವು
(೨) ಕೃಷ್ಣನ ಸಲಹೆ – ಧರ್ಮದತಡಿಗೆ ಜಾರಿ ಜಯಾಧ್ವದಲಿ ಜಂಘಾಲರಹಿರೆಂದ

ಪದ್ಯ ೮೯: ಭೀಮನು ಸಹದೇವನಿಗೆ ಏನನ್ನು ತರಲು ಹೇಳಿದನು?

ನೊಂದನೀಮಾತಿನಲಿ ಮಾರುತ
ನಂದನನು ಸಹದೇವನನು ಕರೆ
ದೆಂದನಗ್ನಿಯ ತಾ ಯುಧಿಷ್ಠಿರ ನೃಪನ ತೋಳುಗಳ
ಮಂದಿ ನೋಡಲು ಸುಡುವೆನೇಳೇ
ಳೆಂದು ಜರೆದರೆ ಹಿಡಿದು ಮಾದ್ರೀ
ನಂದನನ ನಿಲಿಸಿದನು ಫಲುಗುಣ ನುಡಿದನನಿಲಜನ (ಸಭಾ ಪರ್ವ, ೧೫ ಸಂಧಿ, ೮೯ ಪದ್ಯ)

ತಾತ್ಪರ್ಯ:
ದುರ್ಯೋಧನನ ಮಾತನ್ನು ಕೇಳಿ ಭೀಮನಿಗೆ ತುಂಬ ದುಃಖವಾಯಿತು, ತನ್ನ ತಮ್ಮ ಸಹದೇವನನ್ನು ಕರೆದು, ಹೋಗಿ ಬೆಂಕಿಯನ್ನು ತೆಗೆದುಕೊಂಡು ಬಾ, ನಮ್ಮನ್ನು ಈ ಸ್ಥಿತಿಗೆ ತಂದ ಅಣ್ಣನ ತೋಳುಗಳನ್ನು ಸುಡುತ್ತೇನೆ, ಏಳು ಏಳು ಎಂದು ಹೇಳಲು, ಅರ್ಜುನನು ಮಧ್ಯ ಪ್ರವೇಶಿಸಿ ಸಹದೇವನನ್ನು ನಿಲ್ಲಿಸಿ ಭೀಮನಿಗೆ ಹೀಗೆ ಹೇಳಿದನು

ಅರ್ಥ:
ನೊಂದು: ಬೇಜಾರು ಪಟ್ಟು, ದುಃಖಿಸು; ಮಾತು: ವಾಣಿ, ನುಡಿ; ಮಾರುತನಂದನ: ವಾಯು ಪುತ್ರ; ಕರೆ: ಬರೆಮಾಡು; ಅಗ್ನಿ: ಬೆಂಕಿ; ನೃಪ: ರಾಜ; ತೋಳು: ಬಾಹು; ಮಂದಿ: ಜನ; ನೋಡಲು: ವೀಕ್ಷಿಸಲು; ಸುಡು: ದಹಿಸು; ಜರೆ: ಬಯ್ಯು; ಹಿಡಿ: ಕಾವು, ಬಂಧನ; ನಂದನ: ಮಗ; ನಿಲಿಸು: ತಡೆ; ನುಡಿ: ಮಾತಾಡು; ಅನಿಲಜ: ವಾಯುಪುತ್ರ; ಅನಿಲ: ವಾಯು;

ಪದವಿಂಗಡಣೆ:
ನೊಂದನ್+ಈ+ಮಾತಿನಲಿ +ಮಾರುತ
ನಂದನನು +ಸಹದೇವನನು +ಕರೆದ್
ಎಂದನ್+ಅಗ್ನಿಯ +ತಾ +ಯುಧಿಷ್ಠಿರ +ನೃಪನ +ತೋಳುಗಳ
ಮಂದಿ +ನೋಡಲು +ಸುಡುವೆನ್+ಏಳ್
ಏಳೆಂದು +ಜರೆದರೆ+ ಹಿಡಿದು +ಮಾದ್ರೀ
ನಂದನನ+ ನಿಲಿಸಿದನು +ಫಲುಗುಣ +ನುಡಿದನ್+ಅನಿಲಜನ

ಅಚ್ಚರಿ:
(೧) ಮಾರುತನಂದನ, ಅನಿಲಜ – ಭೀಮನನ್ನು ಕರೆದ ಬಗೆ
(೨) ಸಹದೇವನ, ಮಾದ್ರೀನಂದನ – ಸಹದೇವನನ್ನು ಕರೆದ ಬಗೆ

ಪದ್ಯ ೭೩: ದುರ್ಯೋಧನನು ವಿದುರನನ್ನು ಹೇಗೆ ಜರೆದನು?

ಖೂಳನೆಂಬೆನೆ ಸಕಲ ಕಲೆಗಳ
ಬಾಳುಮನೆ ಗಡ ನಿನ್ನ ಬುದ್ಧಿ ವಿ
ಶಾಲಮತಿ ನೀನೆಂಬೆನೇ ಜಗದಜ್ಞರಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ (ಸಭಾ ಪರ್ವ, ೧೪ ಸಂಧಿ, ೭೩ ಪದ್ಯ)

ತಾತ್ಪರ್ಯ:
ದುರ್ಯೋಧನನು ವಿದುರ ಮಾತಿಗೆ ಉತ್ತರಿಸುತ್ತಾ, ವಿದುರಾ ನೀನು ದುಷ್ಟನೇ ಸರಿ, ನಿನ್ನ ಬುದ್ಧಿಗೆ ಸಮಸ್ತ ವಿದ್ಯೆ ಕಲೆಗಳು ತಿಳಿದಿವೆ, ನೀನು ವಿಶಾಲಮತಿಯೆಂದು ಕರೆಯೋಣವೆಂದರೆ ಈ ಜಗತ್ತಿನ ಎಲ್ಲಾ ದಡ್ಡರಿಗೂ ನೀನೇ ಅಧಿದೇವತೆ. ಇದು ಹಿತವೋ ಅಹಿತವೋ ಎಂದು ಯಾರಾದರೂ ಕೇಳಿದರೆ ಉತ್ತರ ಹೇಳುವುದು ಪಾಂಡಿತ್ಯ, ಆದರೆ ನಿನ್ನನ್ನು ಇಲ್ಲಿ ಯಾರಾದರೂ ಕೇಳಿರುವವರೇ ಎಂದು ವಿದುರನನ್ನು ಜರೆದನು.

ಅರ್ಥ:
ಖೂಳ: ದುಷ್ಟ; ಸಕಲ: ಎಲ್ಲಾ; ಕಲೆ: ವಿದ್ಯೆ; ಬಾಳುಮನೆ: ತೌರುಮನೆ, ವಾಸಸ್ಥಾನ; ಗಡ: ಅಲ್ಲವೆ; ಬುದ್ಧಿ: ತಿಳಿವು, ಅರಿವು; ವಿಶಾಲ: ವಿಸ್ತಾರ; ಮತಿ: ಬುದ್ಧಿ; ಅಜ್ಞರು: ಅಜ್ಞಾನಿ, ದಡ್ಡ; ಅಧಿದೈವ: ಮುಖ್ಯವಾದ ದೇವರು; ಕೇಳು: ವಿಚಾರಿಸು; ಮೇಣ್: ಅಥವ, ಇಲ್ಲವೇ; ಹಿತ: ಒಳಿತು; ಹೇಳು: ತಿಳಿಸು; ಪಾಂಡಿತ್ಯ: ವಿದ್ವತ್ತು; ರಾಯ: ಒಡೆಯ;

ಪದವಿಂಗಡಣೆ:
ಖೂಳನೆಂಬೆನೆ +ಸಕಲ +ಕಲೆಗಳ
ಬಾಳುಮನೆ +ಗಡ +ನಿನ್ನ +ಬುದ್ಧಿ +ವಿ
ಶಾಲಮತಿ +ನೀನೆಂಬೆನೇ +ಜಗದ್+ಅಜ್ಞರ್+ಅಧಿದೈವ
ಕೇಳಿದೊಡೆ ಮೇಣಹಿತ ಹಿತವನು
ಹೇಳುವುದು ಪಾಂಡಿತ್ಯ ನಿನ್ನನು
ಕೇಳಿದವರಾರೆಂದು ಜರೆದನು ಕೌರವರ ರಾಯ

ಅಚ್ಚರಿ:
(೧) ಖೂಳನೆಂಬೆನೆ, ನೀನೆಂಬೆನೆ – ಪ್ರಾಸ ಪದ
(೨) ವಿದುರನನ್ನು ಬಯ್ಯುವ ಪರಿ – ಜಗದಜ್ಞರಧಿದೈವ
(೩) ಪಂಡಿತರ ಬಗ್ಗೆ ಹೇಳುವ ಪರಿ – ಕೇಳಿದೊಡೆ ಮೇಣಹಿತ ಹಿತವನು ಹೇಳುವುದು ಪಾಂಡಿತ್ಯ

ಪದ್ಯ ೪೪: ಕೃಷ್ಣನು ಅರ್ಜುನನನ್ನು ಏಕೆ ಬಯ್ದನು?

ಪುಸಿಯೆ ಭೀಮನ ಮಾತು ಹೂಸುಕ
ದೆಸುಗೆ ತಾನೇಕಿನ್ನು ರಿಪು ನಿ
ಪ್ಪಸರದಲಿ ಕಲಿಯೇರಿದರೆ ಕೈಕೊಳ್ಳನೀಶ್ವರನ
ಹುಸಿಕಣೆಯಲೇನಹುದು ತೆಗೆ ಹರ
ವಿಶಿಖವನು ತೊಡು ಬೇಗಮಾಡೆಂ
ದಸುರರಿಪುವರ್ಜುನನ ಜರೆದನು ಭೂಪ ಕೇಳೆಂದ (ಕರ್ಣ ಪರ್ವ, ೨೩ ಸಂಧಿ, ೪೪ ಪದ್ಯ)

ತಾತ್ಪರ್ಯ:
ಭೀಮನ ಮಾತನ್ನು ಆಲಿಸಿದ ಕೃಷ್ಣನು, ಅರ್ಜುನ ಭೀಮನು ಹೇಳಿರುವುದು ಸುಳ್ಳೇ? ಪ್ರಯೋಜನವಿಲ್ಲದ ಬಾಣಗಳನ್ನು ಏಕೆ ಉಪಯೋಗಿಸುತ್ತಿರುವೆ? ಶತ್ರುವು ನಿಷ್ಠುರನಾದರೆ ಶಿವನನ್ನು ಲೆಕ್ಕಿಸುವುದಿಲ್ಲ. ಹುಸಿಬಾಣಗಳಿಂದೇನು ಪ್ರಯೋಜನ, ಶಿವನ ಪಾಶುಪತಾಸ್ತ್ರವನ್ನು ಬೇಗ ಪ್ರಯೋಗಿಸು ಎಂದು ಕೃಷ್ಣನು ಅರ್ಜುನನನ್ನು ಬಯ್ದನೆಂದು ಸಂಜಯನು ಯುದ್ಧ ವೃತ್ತಾಂತವನ್ನು ಧೃತರಾಷ್ಟ್ರನಿಗೆ ಹೇಳಿದನು.

ಅರ್ಥ:
ಪುಸಿ: ಸುಳ್ಳು; ಮಾತು: ವಾಣಿ; ಹೂಸಕ: ಸುಳ್ಳು, ಹುಸಿ; ಎಸುಗೆ: ಬಾಣದ ಹೊಡೆತ; ರಿಪು: ವೈರಿ; ನಿಪ್ಪಸರ: ಅತಿಶಯ, ಹೆಚ್ಚಳ; ಕಲಿ: ವೀರ, ಕಾಳಗ; ಏರು: ಹೆಚ್ಚಾಗು; ಕೈಕೊಳ್ಳು: ಲೆಕ್ಕಿಸು; ಈಶ್ವರ: ಶಿವ, ಶಂಕರ; ಕಣೆ: ಬಾಣ; ತೆಗೆ: ಹೊರಹಾಕು; ಹರ:ಶಿವ; ವಿಶಿಖ: ಬಾಣ; ತೊಡು: ಧರಿಸು; ಬೇಗ: ವೇಗ, ತ್ವರೆ; ಅಸುರರಿಪು: ರಾಕ್ಷಸರ ವೈರಿ (ಕೃಷ್ಣ); ಜರೆ: ಬಯ್ಯು; ಭೂಪ: ರಾಜ; ಕೇಳು: ಆಲಿಸು;

ಪದವಿಂಗಡಣೆ:
ಪುಸಿಯೆ +ಭೀಮನ+ ಮಾತು +ಹೂಸುಕದ್
ಎಸುಗೆ +ತಾನೇಕಿನ್ನು+ ರಿಪು +ನಿ
ಪ್ಪಸರದಲಿ +ಕಲಿ+ಏರಿದರೆ +ಕೈಕೊಳ್ಳನ್+ಈಶ್ವರನ
ಹುಸಿ+ಕಣೆಯಲ್+ಏನಹುದು +ತೆಗೆ +ಹರ
ವಿಶಿಖವನು+ ತೊಡು +ಬೇಗ+ಮಾಡೆಂದ್
ಅಸುರರಿಪುವ್+ಅರ್ಜುನನ +ಜರೆದನು +ಭೂಪ +ಕೇಳೆಂದ

ಅಚ್ಚರಿ:
(೧) ಪುಸಿ, ಹುಸಿ, ಹೂಸಕ – ಸಮನಾರ್ಥಕ ಪದ
(೨) ಶತ್ರುವನ್ನು ಏಕೆ ಬೆಳೆಯಲು ಬಿಡಬಾರದು – ರಿಪು ನಿಪ್ಪಸರದಲಿ ಕಲಿಯೇರಿದರೆ ಕೈಕೊಳ್ಳನೀಶ್ವರನ

ಪದ್ಯ ೫೨: ಅರ್ಜುನನ ಪರಾಕ್ರಮವನ್ನು ಕೃಷ್ಣನು ಹೇಗೆ ವರ್ಣಿಸಿದನು?

ನರನ ಗಾಂಡೀವಪ್ರತಾಪ
ಸ್ಫುರಿತ ನಾರಾಚ ಪ್ರಚಂಡೋ
ತ್ಕರ ದವಾನಲನಿಂದವೀ ಕೌರವ ಕುಲಾರಣ್ಯ
ಉರಿದು ನಂದದೆ ಮಾಣದಧಿಕರೊ
ಳಿರದೆ ತೊಡಕುವುದಾಗದೆಂಬುದ
ನರಿಯೆಯಾ ನೀನೆಂದು ಜರೆದನು ಕೌರವಾಧಿಪನ (ಉದ್ಯೋಗ ಪರ್ವ, ೯ ಸಂಧಿ, ೫೨ ಪದ್ಯ)

ತಾತ್ಪರ್ಯ:
ಕೃಷ್ಣನು ಅರ್ಜುನನ ಪರಾಕ್ರಮವನ್ನು ಹೇಳುತ್ತಾ, ಅರ್ಜುನನ ಗಾಂಡಿವ ಧನುಸ್ಸಿನಿಂದ ಹೊರಟ ಬಾಣಗಳಿಂದ ಹೊತ್ತಿ ಆವರಿಸುವ ಪ್ರಚಂಡವಾದ ಕಾಡುಕಿಚ್ಚಿನಿಂದ ಕೌರವ ಕುಲವೆಂಬ ಅರಣ್ಯವು ಉರಿದು ಕರಿದಾಗದೆ ಬಿಡುವುದಿಲ್ಲ. ತಮಗಿಂದ ಅಧಿಕ ಪ್ರತಾಪಿಗಳೊಡನೆ ಯುದ್ಧ ಮಾಡಬಾರದೆಂಬ ತತ್ವವು ನಿನಗೆ ಗೊತ್ತಿಲ್ಲವೇ ಎಂದು ಕೃಷ್ಣನು ದುರ್ಯೋಧನನನ್ನು ನಿಂದಿಸಿದನು.

ಅರ್ಥ:
ನರ: ಅರ್ಜುನ; ಪ್ರತಾಪ: ಪರಾಕ್ರಮ; ಸ್ಫುರಿತ: ಹೊಳೆವ, ಪ್ರಕಾಶಿಸುವ; ನಾರಾಚ: ಬಾಣ; ಪ್ರಚಂಡ:ಭಯಂಕರವಾದುದು; ಉತ್ಕರ:ಸಮೂಹ; ದವ: ಕಾಡು, ಅರಣ್ಯ; ಅನಲ: ಬೆಂಕಿ; ಕುಲ: ವಂಶ; ಅರಣ್ಯ: ಕಾಡು; ಉರಿ: ಸುಡು; ನಂದು: ಆರಿಹೋಗು; ಮಾಣ್: ಬಿಡು; ಅಧಿಕ: ಹೆಚ್ಚು; ತೊಡಕು: ತೊಂದರೆ; ಅರಿ: ತಿಳಿ; ಜರೆ: ನಿಂದಿಸು; ಅಧಿಪ: ಒಡೆಯ;

ಪದವಿಂಗಡಣೆ:
ನರನ +ಗಾಂಡೀವ+ಪ್ರತಾಪ
ಸ್ಫುರಿತ +ನಾರಾಚ +ಪ್ರಚಂಡ
ಉತ್ಕರ +ದವಾನಲನಿಂದವ್+ಈ+ ಕೌರವ+ ಕುಲಾರಣ್ಯ
ಉರಿದು +ನಂದದೆ +ಮಾಣದ್+ಅಧಿಕರೊಳ್
ಇರದೆ+ ತೊಡಕುವುದಾಗದ್+ಎಂಬುದನ್
ಅರಿಯೆಯಾ +ನೀನೆಂದು +ಜರೆದನು+ ಕೌರವಾಧಿಪನ

ಅಚ್ಚರಿ:
(೧) ದವ, ಅರಣ್ಯ – ಸಮನಾರ್ಥಕ ಪದ
(೨) ಪ್ರತಾಪ, ಪ್ರಚಂಡ – ಪ್ರ ಪದಗಳ ಬಳಕೆ

ಪದ್ಯ ೫೩: ಅಧಮ ರಾಜರ ವಿನಾಶಕ್ಕೆ ಯಾವೆಂಟು ಕಾರಣಗಳು?

ಬುಧರೊಳಗೆ ಹಗೆಗೊಳುವ ಬುಧರನು
ನಿಧನವೈದಿಪ ಬುಧರನೇಳಿಪ
ಬುಧರ ಜರೆದೊಡೆ ನಲಿವ ಬುಧರನು ಹೊಗಳುವರ ಹಳಿವ
ಬುಧರನಧಮರ ಮಾಳ್ಪ ಬುಧರಂ
ವಿಧಿಗೊಳಿಪ ಬುಧರೆನಲು ಕನಲುವ
ನಧಮ ಭೂಪರಿಗೆಂಟು ಗುಣವು ವಿನಾಶಕರವೆಂದ (ಉದ್ಯೋಗ ಪರ್ವ, ೩ ಸಂಧಿ, ೫೩ ಪದ್ಯ)

ತಾತ್ಪರ್ಯ:
ಅಧಮ ರಾಜನ ವಿನಾಶಕ್ಕೆ ಈ ಎಂಟು ಗುಣಗಳನ್ನು ವಿದುರ ಇಲ್ಲಿ ಹೇಳುತ್ತಾರೆ. ಈ ಪದ್ಯದಲ್ಲಿ ವಿದ್ವಾಂಸರನ್ನು ರಾಜ್ಯದಲ್ಲಿ ಹೇಗೆ ನಡೆಸಿಕೊಳ್ಳಬೇಕೆಂದು ನಾವು ಅರ್ಥೈಸಬಹುದು. ಪಂಡಿತರನ್ನು ದ್ವೇಷಿಸುವುದು, ವಿದ್ವಾಂಸರನ್ನು ಕೊನೆಗೊಳಿಸುವುದು, ಬುಧರನ್ನು ಅಪಹಾಸ್ಯ ಮಾದುವುದು, ಜ್ಞಾನಿಗಳನ್ನು ಬೈದಾಗ ಸಂತೋಷಪಡುವುದು, ಅವರನ್ನು ಹೊಗಳುವವರನ್ನು ನಿಂದಿಸುವುದು, ಜ್ಞಾನಿಗಳನ್ನು ಅಧಮರೆಂದು ಪರಿಗಣಿಸುವುದು, ಅವರ ಮೇಲೆ ನಿಯಂತ್ರಣ ಸಾಧಿಸಲು ಆಜ್ಞೆಯನ್ನು ಮಾಡುವುದು, ತಿಳಿದವರೆಂದರೆ ಕೋಪಗೊಳ್ಳುವುದು, ಈ ಎಂಟು ಗುಣಗಳು ರಾಜನಲ್ಲಿ ವ್ಯಕ್ತವಾದರೆ ಆವನು ವಿನಾಶದ ಹಾದಿಯಲ್ಲಿದ್ದಾನೆ ಎಂದು ತಿಳಿಯಬಹುದು.

ಅರ್ಥ:
ಬುಧ: ಪಂಡಿತ, ವಿದ್ವಾಂಸ; ಹಗೆ: ದ್ವೇಷ, ವೈರತ್ವ; ನಿಧನ: ಕೊನೆಗೊಳ್ಳು, ಸಾವು; ಐದು: ಹೊಂದು; ಏಳು:ಜೀವವನ್ನು ಪಡೆ; ಜರಿ: ನಿಂದಿಸು; ನಲಿ: ಸಂತೋಷ ಪಡು; ಹೊಗಳು: ಗೌರವಿಸು; ಹಳಿ: ನಿಂದಿಸು, ದೂಷಿಸು; ಅಧಮ: ಕೀಳು; ಮಾಳ್ಪ: ಮಾಡು; ವಿಧಿ:ಆಜ್ಞೆ, ಆದೇಶ; ಎನಲು: ಹೇಳುತ್ತಲೆ; ಕನಲು:ಸಿಟ್ಟಿಗೇಳು; ಅಧಮ: ಕೀಳುದರ್ಜೆಯ; ಭೂಪ: ರಾಜ; ಗುಣ: ನಡತೆ, ಸ್ವಭಾವ; ವಿನಾಶ: ಅಂತ್ಯ;

ಪದವಿಂಗಡಣೆ:
ಬುಧರೊಳಗೆ+ ಹಗೆಗೊಳುವ +ಬುಧರನು
ನಿಧನವೈದಿಪ+ ಬುಧರನ್+ಏಳಿಪ
ಬುಧರ+ ಜರೆದೊಡೆ +ನಲಿವ +ಬುಧರನು+ ಹೊಗಳುವರ+ ಹಳಿವ
ಬುಧರನ್+ಅಧಮರ+ ಮಾಳ್ಪ +ಬುಧರಂ
ವಿಧಿಗೊಳಿಪ+ ಬುಧರೆನಲು +ಕನಲುವನ್
ಅಧಮ +ಭೂಪರಿಗೆಂಟು +ಗುಣವು +ವಿನಾಶಕರವೆಂದ

ಅಚ್ಚರಿ:
(೧) ಬುಧ – ೮ ಬಾರಿ ಪ್ರಯೋಗ
(೨) ೮ ಗುಣಗಳನ್ನು ವಿವರಿಸುವ ಪದ್ಯ, ಹಗೆ, ನಿಧನ, ಏಳು, ಜರೆ, ಹಳಿ, ಅಧಮ, ವಿಧಿ, ಕನಲು

ಪದ್ಯ ೪೮: ಜರೆಯು ಕೊಟ್ಟ ಮಗುವಿನ ಹೆಸರೇನು?

ಅರಸ ಕೋ ನಿನ್ನವನನೀ ಮುನಿ
ವರಕುಮಾರನನೆನ್ನ ಹೆಸರಲಿ
ಕರೆವುದೀತನ ಸೀಳ ಬೆಚ್ಚವಳಾನು ಬೆದರದಿರು
ಜರೆಯೆನಿಪುದಭಿದಾನವೆನ್ನದು
ವರಜರಾಸಂಧಕನಿವನು ಸುರ
ನರರೊಳಗೆ ಬಲುಗೈಯ ನಹನೆಂದಿತ್ತಳರ್ಭಕನ (ಸಭಾ ಪರ್ವ, ೨ ಸಂಧಿ, ೪೮ ಪದ್ಯ)

ತಾತ್ಪರ್ಯ:
ರಾಜನನ್ನು ನೋಡಿದ ಜರೆಯು, “ರಾಜ ತೆಗೆದುಕೋ, ಇವನು ಮುನಿಯ ವರದಿಂದ ಹುಟ್ಟಿದ ನಿನ್ನ ಮಗ. ಹೆದರದಿರು, ಇವನ ಸೀಳು ದೇಹವನ್ನು ಸಂಧಿಸಿದವಳ ನಾನು, ಆದ್ದರಿಂದ ಇವನನನ್ನು ನನ್ನ ಹೆಸರಿನಲ್ಲಿ ಕರೆವುದು. ನನ್ನ ಹೆಸರು ಜರೆ, ಇವನು ಜರಾಸಂಧ ನೆಂದು ಕರೆಸಿಕೊಳ್ಳಲಿ. ಇವನು ದೇವತೆಗಳಲ್ಲೂ ಮನುಷ್ಯರಲ್ಲೂ ಪರಮ ವೀರನಾಗುವನು”, ಎಂದು ಹೇಳಿ ಮಗುವನ್ನು ಬೃಹದ್ರಥನಿಗೆ ಕೊಟ್ಟಳು.

ಅರ್ಥ:
ಅರಸ: ರಾಜ; ಕೋ: ತೆಗೆದುಕೋ; ಮುನಿ: ಋಷಿ; ವರ: ಶ್ರೇಷ್ಠ; ಕುಮಾರ: ಮಗ; ಎನ್ನ: ನನ್ನ; ಹೆಸರು: ನಾಮ; ಸೀಳ: ತುಂಡಾದ; ಬೆಚ್ಚು: ಸೇರಿಸು, ಹೆದರು; ಬೆದರು: ಹೆದರು; ಅಭಿಧಾನ: ಹೆಸರು; ಸುರ: ದೇವತೆ; ನರ: ಮನುಷ್ಯ; ಬಲುಗೈ: ವೀರ; ಅರ್ಭಕ: ಎಳೆಯ ಕೂಸು; ಇತ್ತಳು: ಕೊಟ್ಟಳು, ನೀಡಿದಳು;

ಪದವಿಂಗಡಣೆ:
ಅರಸ +ಕೋ +ನಿನ್ನವನನ್+ಈ+ ಮುನಿ
ವರ+ಕುಮಾರನನ್+ಎನ್ನ+ ಹೆಸರಲಿ
ಕರೆವುದ್+ಈತನ +ಸೀಳ +ಬೆಚ್ಚವಳಾನು+ ಬೆದರದಿರು
ಜರೆಯೆನಿಪುದ್+ಅಭಿದಾನ+ವೆನ್ನದು
ವರ+ಜರಾಸಂಧಕನ್+ಇವನು +ಸುರ
ನರರೊಳಗೆ+ ಬಲುಗೈಯ +ನಹನೆಂದ್+ಇತ್ತಳ್+ಅರ್ಭಕನ

ಅಚ್ಚರಿ:
(೧) ವರ – ೨,೫ ಸಾಲಿನ ಮೊದಲ ಪದ
(೨) ಅಭಿದಾನ, ಹೆಸರು – ೨, ೪ ಸಾಲಿನ ಕೊನೆ ಪದ, ಸಮನಾರ್ಥಕ ಪದ
(೩) ೪ ಸಾಲಿನಲ್ಲಿ ಒಂದೇ ಪದವಿರುವುದು “ಜರೆಯೆನಿಪುದಭಿದಾನವೆನ್ನದು”

ಪದ್ಯ ೪೪: ಮಗುವಿನ ಎರಡುಭಾಗವನ್ನು ಯಾರು ನೋಡಿದರು?

ನಡುವಿರುಳು ಜರೆಯೆಂಬ ರಕ್ಕಸಿ
ಯಡಗನರಸುತ ಬಂದು ಕಂಡಳು
ಮಿಡುಕುವೀ ಸೀಳರೆಡವನು ಹೊರಹೊಳಲ ಬಾಹೆಯಲಿ
ತುಡುಕಿದಳು ಸೀಳ್ದೇಕೆ ತಿನ್ನದೆ
ಮಡುಗಿದರೊ ಕೌತುಕವದೇನೀ
ಯೆಡಬಲನಿದೆಂದಸುರೆ ದಿಟ್ಟಿಸಿ ನೋಡಿದಳು ಶಿಶುವ (ಸಭಾ ಪರ್ವ, ೨ ಸಂಧಿ, ೪೪ ಪದ್ಯ)

ತಾತ್ಪರ್ಯ:
ಊರ ಹೊರಗೆ ಆ ಮಗುವಿನ ಎರಡು ಭಾಗವನ್ನು ಬಿಸಾಡಿದನಂತರ, ನಡುರಾತ್ರಿಯಲ್ಲಿ ಜರೆ ಎಂಬ ರಾಕ್ಷಸಿ ತನ್ನ ಆಹಾರಕ್ಕಾತಿ ಬರಲು ಅಲ್ಲಿ ಬಿದ್ದಿದ್ದ ದೇಹದ ಎರಡು ತುಂಡುಗಳನ್ನು ನೋಡಿದಳು. ಅವೆರಡನ್ನು ತನ್ನ ಕೈಯಲ್ಲಿ ಹಿಡಿದುಕೊಂಡು, ಈ ಮಗುವನ್ನು ಸೀಳಿ, ತಿನ್ನದೆ ಏಕೆ ಹೀಗೆ ಬಿಟ್ಟರೋ, ಏನು ವಿಚಿತ್ರ, ಒಂದು ಎಡಭಾಗದ್ದು, ಮತ್ತೊಂದು ಬಲಭಾಗದ್ದು, ಎಂದು ಆಶ್ಚರ್ಯದಿಂದ ದಿಟ್ಟಿಸಿ ನೋಡಿದಳು.

ಅರ್ಥ:
ನಡುವಿರುಳು: ಮಧ್ಯರಾತ್ರಿ; ರಕ್ಕಸಿ: ರಾಕ್ಷಸಿ; ಅಡಗು: ಮಾಂಸ; ಅರಸುತ: ಹುಡುಕುತ್ತಾ; ಬಂದು: ಆಗಮಿಸಿ; ಕಂಡು:ನೋಡು; ಮಿಡುಕು:ಅಲುಗಾಟ, ಚಲನೆ; ಸೀಳು: ತುಂಡು; ಹೊಳಲು: ಪಟ್ಟಣ; ಬಾಹೆ: ಹೊರಗೆ; ತುಡುಕು:ಆತುರದಿಂದ ಹಿಡಿ; ಮಡುಗು: ಇಟ್ಟು; ಕೌತುಕ: ಆಶ್ಚರ್ಯ; ಅಸುರೆ: ರಾಕ್ಷಸಿ; ದಿಟ್ಟಿಸು: ಒಂದೇ ಸಮನೆ ನೋಡು; ಶಿಶು: ಮಗು;

ಪದವಿಂಗಡಣೆ:
ನಡುವಿರುಳು +ಜರೆಯೆಂಬ +ರಕ್ಕಸಿ
ಯಡಗನ್+ಅರಸುತ +ಬಂದು +ಕಂಡಳು
ಮಿಡುಕುವೀ +ಸೀಳ್+ಎರೆಡವನು+ ಹೊರಹೊಳಲ+ ಬಾಹೆಯಲಿ
ತುಡುಕಿದಳು+ ಸೀಳ್ದೇಕೆ +ತಿನ್ನದೆ
ಮಡುಗಿದರೊ +ಕೌತುಕವದೇನ್+ಈ
ಯೆಡ+ಬಲನಿದೆಂದ್+ಅಸುರೆ +ದಿಟ್ಟಿಸಿ+ ನೋಡಿದಳು +ಶಿಶುವ

ಅಚ್ಚರಿ:
(೧) ಮಿಡುಕು, ತುಡುಕು – ಪ್ರಾಸ ಪದ
(೨) ಅಸುರೆ, ರಕ್ಕಸಿ; ನೋಡಿದಳು, ಕಂಡಳು – ಸಮನಾರ್ಥಕ ಪದ
(೩) ಸೀಳ್ – ೩, ೪ ಸಾಲಿನ ೨ ಪದ