ಪದ್ಯ ೧೫: ದ್ರೋಣರು ರಥದಲ್ಲಿ ಹೇಗೆ ಕಂಡರು?

ನಿರಿಯುಡಿಗೆಯಲಿ ಮಲ್ಲಗಂಟಿನ
ಸೆರಗ ಮೋಹಿಸಿ ಬೆರಳ ದರ್ಭೆಯ
ಹರಿದು ಬಿಸುಟನು ಜೋಡು ಸೀಸಕ ಬಾಹುರಕ್ಷೆಗಳ
ಮುರುಹಿ ಬಿಗಿದನು ನಿಖಿಳಭೂಸುರ
ರುರುವ ಮಂತ್ರಾಕ್ಷತೆಯ ಕೊಳುತ
ಳ್ಳಿರಿವ ಜಯರವದೊಡನೆ ರಥವೇರಿದನು ಕಲಿದ್ರೋಣ (ದ್ರೋಣ ಪರ್ವ, ೯ ಸಂಧಿ, ೧೫ ಪದ್ಯ)

ತಾತ್ಪರ್ಯ:
ಮಲ್ಲಗಂಟಿನಿಂದ ವಸ್ತ್ರವನ್ನುಟ್ಟು, ಬೆರಳಿನಲ್ಲಿದ್ದ ದರ್ಭೆಯನ್ನು ಕಿತ್ತೆಸೆದನು. ಕವಚ, ಶಿರಸ್ತ್ರಾಣ, ಬಾಹುರಕ್ಷೆಗಳನ್ನು ಭದ್ರವಾಗಿ ಧರಿಸಿದನು. ಬ್ರಾಹ್ಮನರನ್ನರ್ಚಿಸಿ ಅವರ ಆಶೀರ್ಮಂತ್ರಾಕ್ಷತೆಗಳನ್ನು ಸ್ವೀಕರಿಸಿ, ಜಯ ಶಬ್ದವು ಎತ್ತೆತ್ತ ಮೊಳಗುತ್ತಿರಲು ರಥವನ್ನೇರಿದನು.

ಅರ್ಥ:
ನಿರಿ: ಸೀರೆಯ ಮಡಿಕೆ; ಉಡಿಗೆ: ಉಟ್ಟುಕೊಳ್ಳುವ ಬಟ್ಟೆ; ಮಲ್ಲ: ಕುಸ್ತಿಪಟು; ಗಂಟು: ಸೇರಿಸಿ ಕಟ್ಟಿದುದು; ಸೆರಗು:ಸೀರೆಯಲ್ಲಿ ಹೊದೆಯುವ ಭಾಗ; ಮೋಹಿಸು: ಅಪ್ಪಳಿಸುವಂತೆ ಮಾಡು; ಬೆರಳು: ಅಂಗುಲಿ; ದರ್ಭೆ: ಹುಲ್ಲು; ಹರಿ: ಕಡಿ, ಕತ್ತರಿಸು; ಬಿಸುಟು: ಹೊರಹಾಕು; ಜೋಡು: ಜೊತೆ, ಜೋಡಿ; ಸೀಸಕ: ಶಿರಸ್ತ್ರಾಣ; ಬಾಹು: ಭುಜ; ರಕ್ಷೆ: ಕವಚ; ಮುರುಹು: ತಿರುಗಿಸು; ಬಿಗಿ: ಭದ್ರವಾಗಿ; ನಿಖಿಳ: ಎಲ್ಲಾ; ಭೂಸುರ: ಬ್ರಾಹ್ಮನ; ಉರು: ವಿಶೇಷವಾದ; ಮಂತ್ರಾಕ್ಷತೆ: ಆಶೀರ್ವದಿಸಿದ ಅಕ್ಕಿ; ಕೊಳು: ತೆಗೆದುಕೋ; ಇರಿ: ಚುಚ್ಚು, ಕರೆ; ಜಯ: ಗೆಲುವು; ರವ: ಶಬ್ದ; ರಥ: ಬಂಡಿ; ಏರು: ಹತ್ತು; ಕಲಿ: ಶೂರ;

ಪದವಿಂಗಡಣೆ:
ನಿರಿ+ಉಡಿಗೆಯಲಿ +ಮಲ್ಲ+ಗಂಟಿನ
ಸೆರಗ+ ಮೋಹಿಸಿ +ಬೆರಳ+ ದರ್ಭೆಯ
ಹರಿದು +ಬಿಸುಟನು +ಜೋಡು +ಸೀಸಕ +ಬಾಹು+ರಕ್ಷೆಗಳ
ಮುರುಹಿ +ಬಿಗಿದನು +ನಿಖಿಳ+ಭೂಸುರರ್
ಉರುವ +ಮಂತ್ರಾಕ್ಷತೆಯ +ಕೊಳುತಳ್
ಇರಿವ +ಜಯರವದೊಡನೆ +ರಥವೇರಿದನು +ಕಲಿ+ದ್ರೋಣ

ಅಚ್ಚರಿ:
(೧) ಬ್ರಾಹ್ಮಣ ವೇಷವನ್ನು ಕಳಚಿದ ಎಂದು ಹೇಳಲು – ಬೆರಳ ದರ್ಭೆಯ ಹರಿದು ಬಿಸುಟನು

ಪದ್ಯ ೬: ಭಗದತ್ತನು ಹೇಗೆ ಗಜವನ್ನೇರಿದನು?

ಸುತ್ತ ಮೆರೆದವು ಮೇಲೆ ಪಲ್ಲವ
ಸತ್ತಿಗೆಯ ಸಾಲುಗಳು ಬಿರುದಿನ
ಕತ್ತರಿಯ ಹೀಲಿಗಳ ಝಲ್ಲರಿ ಮುಸುಕಿದವು ಗಜವ
ಒತ್ತಿ ಕಿವಿಗಳನೊದೆದು ಶಿರದಲಿ
ತೆತ್ತಿಸಿದರಂಕುಶವನಾ ಭಗ
ದತ್ತ ದಂತಿಯನೇರಿದನು ಜಯರವದ ರಭಸದಲಿ (ದ್ರೋಣ ಪರ್ವ, ೩ ಸಂಧಿ, ೬ ಪದ್ಯ)

ತಾತ್ಪರ್ಯ:
ಆನೆಯ ಮೇಲೆ ಶ್ವೇತಛತ್ರ, ಬಿರುದಾವಳಿ, ಝಲ್ಲರಿಗಳು ಮುಸುಕಿದ್ದವು. ಕಿವಿಗಳನ್ನೊತ್ತಿ ತಲೆಯ ಮೇಲೆ ಅಂಕುಶವನ್ನು ಒತ್ತಿದರು ಜಯಕಾರಗಳು ಮೊಳಗುತ್ತಿರಲು ಭಗದತ್ತನು ಗಜವನ್ನೇರಿದನು.

ಅರ್ಥ:
ಸುತ್ತ: ಎಲ್ಲಾ ಕಡೆ; ಮೆರೆ: ಹೊಳೆ; ಪಲ್ಲವ: ವಿಕಸನ; ಸತ್ತಿಗೆ: ಕೊಡೆ, ಛತ್ರಿ; ಸಾಲು: ಆವಳಿ; ಬಿರುದು: ವೇಗ; ಕತ್ತರಿ: ಒಂದು ಬಗೆಯ ಬಾಣ; ಹೀಲಿ: ನವಿಲುಗರಿ; ಝಲ್ಲರಿ: ಕುಚ್ಚು, ಗೊಂಡೆ; ಮುಸುಕು: ಹೊದಿಕೆ; ಗಜ: ಆನೆ; ಒತ್ತು: ಆಕ್ರಮಿಸು, ಮುತ್ತು; ಕಿವಿ: ಕರ್ಣ; ಒದೆ: ತಳ್ಳು; ಶಿರ: ತಲೆ; ತೆತ್ತು: ತಿರಿಚು, ಸುತ್ತು; ಅಂಕುಶ: ಆನೆಯನ್ನು ಹದ್ದಿನಲ್ಲಿ ಇಡಲು ಉಪಯೋಗಿಸುವ ಒಂದು ಸಾಧನ; ದಂತಿ: ಆನೆ; ಏರು: ಮೇಲೆ ಹತ್ತು; ರವ: ಶಬ್ದ; ರಭಸ: ವೇಗ;

ಪದವಿಂಗಡಣೆ:
ಸುತ್ತ +ಮೆರೆದವು +ಮೇಲೆ +ಪಲ್ಲವ
ಸತ್ತಿಗೆಯ +ಸಾಲುಗಳು +ಬಿರುದಿನ
ಕತ್ತರಿಯ +ಹೀಲಿಗಳ +ಝಲ್ಲರಿ +ಮುಸುಕಿದವು +ಗಜವ
ಒತ್ತಿ +ಕಿವಿಗಳನ್+ಒದೆದು +ಶಿರದಲಿ
ತೆತ್ತಿಸಿದರ್+ಅಂಕುಶವನ್+ಆ+ ಭಗ
ದತ್ತ +ದಂತಿಯನ್+ಏರಿದನು +ಜಯರವದ +ರಭಸದಲಿ

ಅಚ್ಚರಿ:
(೧) ಆನೆಯನ್ನು ಅಲಂಕರಿಸುವ ಪರಿ – ಸುತ್ತ ಮೆರೆದವು ಮೇಲೆ ಪಲ್ಲವ ಸತ್ತಿಗೆಯ ಸಾಲುಗಳು ಬಿರುದಿನ
ಕತ್ತರಿಯ ಹೀಲಿಗಳ ಝಲ್ಲರಿ ಮುಸುಕಿದವು ಗಜವ

ಪದ್ಯ ೪೪: ದುರ್ಯೋಧನನು ಅರಮನೆಯಿಂದ ಹೇಗೆ ಹೊರಬಂದನು?

ವೀರ ಧೃತರಾಷ್ಟ್ರಂಗೆ ವರ ಗಾಂ
ಧಾರಿಗೆರಗಿದನವರ ಹರಕೆಯ
ಭೂರಿಗಳ ಕೈಕೊಂಡನವನೀಸುರರಿಗಭಿನಮಿಸಿ
ಚಾರುಚಮರದ ನಿಕರದವರೊ
ಯ್ಯಾರಿಸಲು ಜಯರವದ ರಭಸದು
ದಾರ ಮೆರೆಯಲು ಬೀಳುಕೊಂಡನು ರಾಜಮಂದಿರವ (ಭೀಷ್ಮ ಪರ್ವ, ೧ ಸಂಧಿ, ೪೪ ಪದ್ಯ)

ತಾತ್ಪರ್ಯ:
ದುರ್ಯೋಧನನು ಧೃತರಾಷ್ಟ್ರ ಗಾಂಧಾರಿಗೆ ನಮಸ್ಕರಿಸಿ, ದುರ್ಯೋಧನನು ಅವರ ಆಶೀರ್ವಾದವನ್ನು ಸ್ವೀಕರಿಸಿದನು. ಬ್ರಾಹ್ಮಣರಿಗೆ ನಮಸ್ಕರಿಸಿ ಛತ್ರ ಚಾಮರಧಾರಿಗಳ ಜೊತೆಗೆ ಅವನು ಪ್ರಯಾಣ ಮಾಡಲು, ಎಲ್ಲೆಡೆ ಜಯಕಾರಗಳು ಕೇಳಿ ಬಂದವು.

ಅರ್ಥ:
ವೀರ: ಶೂರ, ಪರಾಕ್ರಮಿ; ವರ: ಶ್ರೇಷ್ಠ; ಎರಗು: ನಮಸ್ಕರಿಸು; ಹರಕೆ: ಆಶೀರ್ವಾದ; ಭೂರಿ: ಹೆಚ್ಚು, ಅಧಿಕ; ಅವನೀಸುರ: ಬ್ರಾಹ್ಮಣ; ಅವನೀ: ಭೂಮಿ; ಸುರ: ದೇವತೆ; ಅಭಿನಮಿಸು: ನಮಸ್ಕರಿಸು; ಚಾರು: ಸುಂದರ; ಚಮರ: ಚಾಮರ; ನಿಕರ: ಗುಂಪು; ಒಯ್ಯಾರ: ಬೆಡಗು, ಬಿನ್ನಾಣ; ಜಯ: ಗೆಲುವು; ರವ: ಶಬ್ದ; ರಭಸ: ವೇಗ; ಉದಾರ: ಧಾರಾಳ ಸ್ವಭಾವದ; ಮೆರೆ: ಹೊಳೆ, ಪ್ರಕಾಶಿಸು; ಬೀಳುಕೊಡು: ತೆರಳು; ರಾಜಮಂದಿರ: ಅರಮನೆ;

ಪದವಿಂಗಡಣೆ:
ವೀರ +ಧೃತರಾಷ್ಟ್ರಂಗೆ +ವರ +ಗಾಂ
ಧಾರಿಗ್+ಎರಗಿದನ್+ಅವರ+ ಹರಕೆಯ
ಭೂರಿಗಳ+ ಕೈಕೊಂಡನ್+ಅವನೀಸುರರಿಗ್+ಅಭಿನಮಿಸಿ
ಚಾರು+ಚಮರದ+ ನಿಕರದವರ್
ಒಯ್ಯಾರಿಸಲು+ ಜಯರವದ+ ರಭಸದ್
ಉದಾರ +ಮೆರೆಯಲು +ಬೀಳುಕೊಂಡನು +ರಾಜಮಂದಿರವ

ಅಚ್ಚರಿ:
(೧) ಎರಗು, ಅಭಿನಮಿಸು – ಸಮನಾರ್ಥಕ ಪದ